Tag: property dispute

  • ಸೊಸೆಯ ಎಡಗೈ, ಎದೆ ಭಾಗಕ್ಕೆ ಗುಂಡಿಟ್ಟು ಕೊಲೆಗೆ ಯತ್ನಿಸಿದ ಮಾವ

    ಸೊಸೆಯ ಎಡಗೈ, ಎದೆ ಭಾಗಕ್ಕೆ ಗುಂಡಿಟ್ಟು ಕೊಲೆಗೆ ಯತ್ನಿಸಿದ ಮಾವ

    ಮಡಿಕೇರಿ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಾವ ಸೊಸೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಬೆಟ್ಟದಕೊಪ್ಪ ಗ್ರಾಮದ ಐಯ್ಯಪ್ಪ ಎಂಬುವವರು ಮಗನಾದ ಹೂವಯ್ಯನ ಪತ್ನಿ ತೀರ್ಥ ಅವರೊಂದಿಗೆ ರಸ್ತೆಯಲ್ಲಿ ದನ ಕಟ್ಟುವ ವಿಚಾರದಲ್ಲಿ ವಾಗ್ವಾದಕ್ಕಿಳಿದಿದ್ದಾರೆ. ಮಾತಿನ ಚಕಮಕಿ ವಿಪರೀತಕ್ಕೆ ಹೋದ ಪರಿಣಾಮ ಐಯ್ಯಪ್ಪ, ತೀರ್ಥ ಅವರ ಎಡಗೈ ಮತ್ತು ಎದೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಗುಂಡೇಟಿನಿಂದ ಗಾಯಗೊಂಡ ತೀರ್ಥ ಅವರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಐಯ್ಯಪ್ಪ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದು, ಮಗ ಹೂವಯ್ಯ ಆತನ ಪತ್ನಿ ತೀರ್ಥ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಹೂವಯ್ಯ ನೀಡಿದ ದೂರಿನ ಮೇರೆಗೆ ಆರೋಪಿ ಐಯ್ಯಪ್ಪ ಹಾಗೂ ಆತನ ಪತ್ನಿ ಮತ್ತು ಇಬ್ಬರು ಪುತ್ರಿಯರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

  • ಆಸ್ತಿ ವಿವಾದ – ಜಮೀನಿನಲ್ಲೇ ಬರ್ಬರವಾಗಿ ಕೊಲೆಯಾದ ತಾಯಿ, ಮಗ

    ಆಸ್ತಿ ವಿವಾದ – ಜಮೀನಿನಲ್ಲೇ ಬರ್ಬರವಾಗಿ ಕೊಲೆಯಾದ ತಾಯಿ, ಮಗ

    ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಗನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ಜಂಗವಾಡ ಗ್ರಾಮದ ಬಳಿ ಹೊಲದಲ್ಲಿ ನಡೆದಿದೆ.

    ಘಟನೆಯಲ್ಲಿ 36 ವರ್ಷದ ದುರ್ಗಪ್ಪ ಭೀಮಪ್ಪ ಮಾದರ್, 56 ವರ್ಷದ ದೇವಕೆವ್ವ ಭೀಮಪ್ಪ ಮಾದರ್ ಕೊಲೆಯಾಗಿರುವ ದುರ್ದೈವಿಗಳಾಗಿದ್ದಾರೆ. ಶಿವಪ್ಪ ಮಾದರ, ಉಮೇಶ್ ಮಾದರ, ಕಾಮಪ್ಪ ಮಾದರ, ಹನುಮಂತ ಮಾದರ, ಪ್ರಕಾಶ್ ಮಾದರ, ರವಿ ಮಾದರ, ರಮೇಶ್ ಮಾದರ, ಬಸವರಾಜ ಮಾದರ, ಸೇರಿದಂತೆ ಒಂಬತ್ತು ಜನ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

    ಹೊಲದ ವಿಚಾರವಾಗಿ ಕೊಲೆ ಆರೋಪಿ ಉಮೇಶ್ ಮಾದರ್ ಹಾಗೂ ದುರ್ಗಪ್ಪ ಮಾದರ್ ಕುಟುಂಬದ ಮಧ್ಯೆ ಕಲಹ ಏರ್ಪಟ್ಟಿತ್ತು. ಈ ಕಲಹ ಕೋರ್ಟ್ ಮೆಟ್ಟಿಲೇರಿ, ಹೊಲ ದುರ್ಗಪ್ಪ ಮಾದರ್ ಅವರಿಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ಸಹ ನೀಡಿತ್ತು. ಇದರಿಂದ ಮನುಷ್ಯತ್ವ ಕಳೆದುಕೊಂಡ ಉಮೇಶ್ ಮಾದರ್ ಹಾಗೂ ಸಂಗಡಿಗರು ದುರ್ಗಪ್ಪ ಅವರ ಹೊಲಕ್ಕೆ ನುಗ್ಗಿ ಏಕಾಏಕಿ ಕೊಡಲಿ ಹಾಗೂ ಮಾರಕಾಸ್ತ್ರಗಳಿಂದ ದುರ್ಗಪ್ಪ ಹಾಗೂ ತಾಯಿ ದೇವಕ್ಕೆವ್ವ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆರೂರು ಪೊಲೀಸರು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೈಕ್ ಅಲ್ಲಿ ಬಂದು 14 ಜನ ದುಷ್ಕರ್ಮಿಗಳು ಸೇರಿ ಕೊಡಲಿಯಿಂದ ಕೊಚ್ಚಿ ಕೊಲೆಗೈದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ದೂರು ದಾಖಲಾಗಿದೆ. ತಪ್ಪಿಸಿಕೊಂಡ ಇನ್ನು 9 ಮಂದಿಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಇಬ್ಬರ ಆಸ್ತಿ ವಿವಾದ – ಖಾರದಪುಡಿ, ಮಚ್ಚು, ಲಾಂಗುಗಳಿಂದ ಹೊಡೆದಾಡಿಕೊಂಡ ಗ್ರಾಮಸ್ಥರು

    ಇಬ್ಬರ ಆಸ್ತಿ ವಿವಾದ – ಖಾರದಪುಡಿ, ಮಚ್ಚು, ಲಾಂಗುಗಳಿಂದ ಹೊಡೆದಾಡಿಕೊಂಡ ಗ್ರಾಮಸ್ಥರು

    – ಬಡಿದಾಟಕ್ಕೆ ಮಹಿಳೆಯರೂ ಸಾಥ್‌

    ರಾಯಚೂರು: ಇಬ್ಬರ ಜಮೀನು ವಿವಾದಕ್ಕೆ ಇಡೀ ಗ್ರಾಮವೇ ದೊಣ್ಣೆ, ಮಚ್ಚು ಮತ್ತು ಲಾಂಗು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ಗಡಿಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆದ್ದಕಡಬೂರು ಮಂಡಲದ ಹನುಮಾಪುರಂ ಗ್ರಾಮದಲ್ಲಿ ನಡೆದಿದೆ.

    ಮುಖಕ್ಕೆ ಖಾರದಪುಡಿ ಎರಚಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಎರಡು ಗುಂಪುಗಳ ಹೊಡೆದಾಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಂಥವರನ್ನೂ ಬೆಚ್ಚಿ ಬೀಳಿಸುವಂತಿವೆ. ಜಮೀನಿನಲ್ಲಿ ಸಿಕ್ಕಸಿಕ್ಕವರನ್ನು ಹೊಡೆದು ಉರುಳಿಸುವ ಮಟ್ಟಿಗೆ ಜಗಳವಾಡಿದ್ದಾರೆ. ಈಗ ಇಡೀ ಗ್ರಾಮವೇ ಬೂದಿ ಮುಚ್ಚಿದ ಕೆಂಡದಂತಾಗಿದೆ.

    ಗ್ರಾಮದ ಬೊಟ್ಟ ಪೆದ್ದಯ್ಯ ಹಾಗೂ ಬೋಯಿಸ ಯಲ್ಲಪ್ಪ ಎಂಬುವವರ ಜಮೀನು ವಿವಾದ ಹಿನ್ನೆಲೆ ಈಗಾಗಲೇ ಪ್ರಕರಣಗಳು ದಾಖಲಾಗಿದೆ. ಈಗ ಮತ್ತೆ ಜಮೀನು ಉಳುಮೆ ವಿಚಾರದಲ್ಲಿ ಜಗಳ ಶುರುವಾಗಿ ಇಡೀ ಗ್ರಾಮವೇ ಎರಡು ಗುಂಪಾಗಿ ಹೊಡೆದಾಡಿಕೊಂಡಿದೆ. ವಯಸ್ಸು, ಲಿಂಗ ಭೇದವಿಲ್ಲದೆ ಮಹಿಳೆಯರು ಸಹ ದೊಣ್ಣೆ ಮಾರಕಾಸ್ತ್ರಗಳನ್ನು ಹಿಡಿದು ಜಗಳ ಮಾಡಿದ್ದಾರೆ.

    ಜಗಳಕ್ಕೆ ಸಿದ್ಧವಾಗಿಯೇ ಖಾರದಪುಡಿಯನ್ನು ಹಿಡಿದು ಕಣ್ಣಿಗೆ ಎರಚಿ ಹೊಡೆದಾಡುವ ದೃಶ್ಯಗಳನ್ನು ಗ್ರಾಮಸ್ಥರೇ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಘಟನೆಯಲ್ಲಿ 15 ಜನರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 34 ಜನರ ವಿರುದ್ಧ ಪೆದ್ದಕಡಬೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

  • ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಶುರುವಾದ ಆಸ್ತಿ ವಿವಾದ – ಕೋರ್ಟ್ ಮೆಟ್ಟಿಲೇರಿದ ಪತ್ನಿ

    ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಶುರುವಾದ ಆಸ್ತಿ ವಿವಾದ – ಕೋರ್ಟ್ ಮೆಟ್ಟಿಲೇರಿದ ಪತ್ನಿ

    ಬೆಂಗಳೂರು: ಮುತ್ತಪ್ಪ ರೈ ಸಾವಿನ ನಂತರ ಅವರ ಕುಟುಂಬದಲ್ಲಿ ಆಸ್ತಿ ವಿವಾದ ಶುರುವಾಗಿದ್ದು, ರೈ ಎರಡನೇ ಪತ್ನಿ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಮುತ್ತಪ್ಪ ರೈ ಅವರು ಸಾಯುವ ಮುನ್ನವೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದು ಇಟ್ಟಿದ್ದರು. ಇದರಲ್ಲಿ ಅವರ ಆಸ್ತಿ ಯಾರಿಗೇ ಸೇರಬೇಕು ಮತ್ತು ಎಷ್ಟು ಸೇರಬೇಕು ಎಂದು ತಿಳಿಸಿದ್ದರು. ಹೀಗಿದ್ದರೂ ಅವರ ಸಾವಿನ ಬಳಿಕ ಅವರ ಎರಡನೇ ಪತ್ನಿ ಅನುರಾಧ ಪಾಲು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗಾಗಲೇ ಅನುರಾಧ ಅವರಿಗೂ ಆಸ್ತಿಯಲ್ಲಿ ಪಾಲು ನೀಡಲಾಗಿದೆ ಎಂದು ರೈ ವಿಲ್‍ನಲ್ಲಿ ತಿಳಿಸಿದ್ದರು. ಆದರೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಅನುರಾಧ ಮುತ್ತಪ್ಪ ರೈ ಅವರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮುತ್ತಪ್ಪ ರೈ ಪುತ್ರರಾದ ರಾಕಿ, ರಿಕ್ಕಿ ಸೇರಿ 17 ಪ್ರತಿವಾದಿಗಳಿಗೆ ಕೋರ್ಟ್ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 4ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಕೋರ್ಟ್ ಸಮಯವನ್ನು ನಿಗದಿ ಮಾಡಿದೆ.

    ಎರಡನೇ ಪತ್ನಿ ಅನುರಾಧಾಗೆ ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್‍ನಲ್ಲಿ ಉಲ್ಲೇಖವಾಗಿದೆ.

    ಆಸ್ತಿ ಎಷ್ಟಿದೆ?
    ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಸಕಲೇಶಪುರದಲ್ಲಿ 200 ಎಕರೆ ಜಮೀನಿದೆ.

    ಹಂಚಿಕೆ ಹೇಗೆ?
    ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ. ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ಚಿಕ್ಕ ಮಗ ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದರು.

    ಕೆಲಸಗಾರರಿಗೆ ಸೈಟ್:
    ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದರು. ತಂದೆಯ ಸೂಚನೆಯಂತೆ ರಿಕ್ಕಿ ಈಗಾಗಲೇ ತಲಾ ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದ್ದರು.

    ಸಂಘಟನೆ ಹೊಣೆ ಯಾರಿಗೆ?
    ಜಯ ಕರ್ನಾಟಕ ಸಂಘಟನೆ ಯಾವುದೇ ಕಾರಣಕ್ಕೂ ಒಡೆಯಬಾರದು ಎಂದು ಹೇಳಿರುವ ಮುತ್ತಪ್ಪ ರೈ ಈ ಸಂಘಟನೆಯ ಜವಾಬ್ದಾರಿಯನ್ನು ಚಿಕ್ಕಮಗ ರಿಕ್ಕಿ ರೈಗೆ ನೀಡಿದ್ದಾರೆ. ಜಗದೀಶ್ ಸಂಘಟನೆಯ ಅಧ್ಯಕ್ಷತೆಯನ್ನು ನೋಡಿಕೊಳ್ಳಬೇಕು. ಮುಂದೆ ಈ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಲ್ಲಿ ರೈ ಮನವಿ ಮಾಡಿರುವ ವಿಚಾರ ವಿಲ್ ನಲ್ಲಿ ಉಲ್ಲೇಖವಾಗಿದೆ.

  • ಪೊಲೀಸರ ತಪ್ಪಿನಿಂದ ಅಂಗವಿಕಲನ ಬರ್ಬರ ಕೊಲೆ?

    ಪೊಲೀಸರ ತಪ್ಪಿನಿಂದ ಅಂಗವಿಕಲನ ಬರ್ಬರ ಕೊಲೆ?

    – ಕಲ್ಲು, ರಾಡ್‍ನಿಂದ ಹೊಡೆದು ಕೊಂದ ಸಂಬಂಧಿಕರು

    ಧಾರವಾಡ: ಪೊಲೀಸರು ಮಾಡಿದ ಒಂದು ತಪ್ಪಿನಿಂದ ಧಾರವಾಡದಲ್ಲಿ ಓರ್ವ ಅಂಗವಿಕಲ ಇಂದು ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಹೌದು. ಧಾರವಾಡದ ಪತ್ರೇಶ್ವರ ನಗರದಲ್ಲಿ ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (37) ಕೊಲೆಯಾದ ಅಂಗವಿಕಲ. ಕಳೆದ ಹಲವು ವರ್ಷಗಳಿಂದ ಉಮೇಶ್ ಬಾಳಗಿ ಹಾಗೂ ಸಂಬಂಧಿಕರ ನಡುವೆ ಆಸ್ತಿ ವಿವಾದ ನಡೆದಿತ್ತು. ಈ ಮೊದಲು ಉಮೇಶ್‍ನ ಮೇಲೆ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಗ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಮೊದಲೇ ಕಾಲಿಲ್ಲದೇ ಉಮೇಶ್ ತನ್ನಿಷ್ಟಕ್ಕೆ ತಾನು ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ರಕ್ತ ಸಂಬಂಧಿಗಳು ಆಸ್ತಿ ಬರೆದು ಕೊಡಲು ಪಿಡಿಸುತ್ತಲೇ ಇದ್ದರು. ಈ ಹಿಂದೆ ಉಮೇಶ್ ಹಾಗೂ ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ಪೊಲೀಸ್ ಆಯುಕ್ತ ಕಚೇರಿಗೆ ಕೂಡ ದೂರು ಹೋಗಿತ್ತು. ನಂತರ ಉಪನಗರ ಪೊಲೀಸರು ಉಮೇಶ್ ಅವರ ದೂರನ್ನ ಸ್ವೀಕರಿಸಿ ಪ್ರಕರಣ ದಾಖಲಿಸಿದ್ದರು.

    ಆದರೆ ಆರೋಪಿಗಳನ್ನ ಬಂಧಿಸುವ ಬದಲು, ಅವರಿಂದಲೂ ಉಮೇಶ್ ವಿರುದ್ಧ ಪ್ರತಿ ದೂರನ್ನ ಪಡೆದಿದ್ದರು. ಆಗಲೇ ಆರೋಪಿಗಳನ್ನ ಬಂಧಿಸಿದ್ದರೆ ಈಗ ಉಮೇಶ್ ಅವರ ಕೊಲೆ ನಡೆಯುತ್ತಿರಲಿಲ್ಲ. ಇವತ್ತು ಉಮೇಶ್ ಮನೆ ಬಳಿ ರಸ್ತೆಯಲ್ಲಿ ಬರುವಾಗಲೇ ಅವರ ಮೇಲೆ ಕಲ್ಲು ಹಾಗೂ ಕಬ್ಬಿಣದ ರಾಡ್‍ನಿಂದ ಸಂಬಂಧಿಕರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಉಪನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೈದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಪೊಲೀಸರ ಒಂದು ಸಣ್ಣ ತಪ್ಪಿನಿಂದ ಅಮಾಯಕ ಅಂಗವಿಕಲನ ಕೊಲೆ ನಡೆದು ಹೋಯಿತು ಎಂಬ ಆರೋಪ ಕೇಳಿ ಬಂದಿದೆ. ಇತ್ತ ಉಮೇಶ್ ಅವರನ್ನು ಕಳೆದುಕೊಂಡ ಪತ್ನಿ ಹಾಗೂ ಮಗಳು ಮೃತದೇಹದ ಮುಂದೆ ಕಣ್ಣೀರಿಡುತ್ತಾ ನಿಂತಿದ್ದರು.

  • ಅಣ್ಣನನ್ನು ಕೊಂದು ಹುಣಸೆಮರಕ್ಕೆ ನೇತು ಹಾಕಿದ ತಮ್ಮ

    ಅಣ್ಣನನ್ನು ಕೊಂದು ಹುಣಸೆಮರಕ್ಕೆ ನೇತು ಹಾಕಿದ ತಮ್ಮ

    ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ತಮ್ಮನೊಬ್ಬ ತನ್ನ ಸ್ವಂತ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಮಾವನೂರಿನಲ್ಲಿ ನಡೆದಿದೆ.

    ಅಣ್ಣ ಮಂಜುನಾಥ ಸುಳ್ಳದ ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಕಲ್ಮೇಶ ಸುಳ್ಳದ ಎಂದು ಗುರುತಿಸಲಾಗಿದೆ. ಮೇ 9ರಂದು ಪಾನಮತ್ತನಾಗಿ ಮನೆಗೆ ಬಂದಿದ್ದ ಮಂಜುನಾಥ, ಆಸ್ತಿ ಮತ್ತು ಮನೆಯಲ್ಲಿ ತನಗೆ ಪಾಲು ಕೊಡುವಂತೆ ತಾಯಿ ಶಿವಲಿಂಗವ್ವ ಜೊತೆ ಜಗಳವಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ವಿಚಾರ ತಿಳಿದು ಕೆರಳಿದ ತಮ್ಮ ಕಲ್ಮೇಶ ಅಣ್ಣನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಜಮೀನಿಗೆ ಹೊತ್ತುಕೊಂಡು ಹೋಗಿ, ಹುಣಸೆಮರಕ್ಕೆ ನೇತು ಹಾಕಿ, ಅಣ್ಣ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದಾನೆ. ಆದರೆ ತಲೆಗೆ ಪೆಟ್ಟುಬಂದಿದ್ದ ಕಾರಣ ಇಂದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ವೃದ್ಧ ಅತ್ತೆ-ಮಾವನ ಕತ್ತು ಹಿಸುಕಿ, ಮುಖವನ್ನು ಚಾಕುವಿನಿಂದ ಕಟ್ ಮಾಡಿದ ಸೊಸೆ

    ವೃದ್ಧ ಅತ್ತೆ-ಮಾವನ ಕತ್ತು ಹಿಸುಕಿ, ಮುಖವನ್ನು ಚಾಕುವಿನಿಂದ ಕಟ್ ಮಾಡಿದ ಸೊಸೆ

    – ಮಗನೂ ಭಾಗಿಯಾಗಿರುವ ಶಂಕೆ

    ನವದೆಹಲಿ: ಲಾಕ್‍ಡೌನ್ ವೇಳೆ ಮನೆಯಲ್ಲಿ ಇದ್ದ ಅತ್ತೆ-ಮಾವನನ್ನು ಸೊಸೆಯೋರ್ವಳು ಕತ್ತು ಹಿಸುಕಿ ಮುಖವನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

    ಕೊಲೆಯಾದ ವೃದ್ಧ ಅತ್ತೆ-ಮಾವನನ್ನು ರಾಜ್ ಸಿಂಗ್ (61), ಓಂವತಿ (58) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಸೊಸೆಯನ್ನು ಕವಿತಾ ಎಂದು ಗುರುತಿಸಲಾಗಿದೆ. ಇದರಲ್ಲಿ ಕವಿತಾ ಗಂಡ ಸತೀಶ್ ಸಿಂಗ್ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ನಡೆದಾಗ ಕವಿತಾ, ಸತೀಶ್ ಮತ್ತು ಅವರ 6 ವರ್ಷ ಹಾಗೂ 8 ವರ್ಷದ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ನಮ್ಮ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕೊಲೆಯ ಬಗ್ಗೆ ಇಂದು ಬೆಳಗ್ಗೆ 11 ಗಂಟೆಗೆ ಕರೆ ಬಂತು. ಆಗ ತಕ್ಷಣ ನಾವು ಸ್ಥಳಕ್ಕೆ ಹೋದೆವು. ಈ ವೇಳೆ ಮನೆಯ ಬೆಡ್ ರೂಮ್ ಒಳಗೆ ವೃದ್ಧ ದಂಪತಿಯ ಮೃತದೇಹಗಳು ಪತ್ತೆಯಾದವು. ಜೊತೆಗೆ ಮೃತದೇಹಗಳ ಮುಖವನ್ನು ಚಾಕುವಿನಿಂದ ಕಟ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.

    ಪೊಲೀಸರ ಪ್ರಾಥಮಿಕ ತನಿಖೆಯ ನಂತರ ಆಸ್ತಿ ವಿವಾದದ ಕಾರಣದಿಂದ ಈ ಕೊಲೆಗಳು ನಡೆದಿದೆ ಎನ್ನಲಾಗಿದೆ. ಆದರೆ ಈ ಕೊಲೆಯಲ್ಲಿ ಮೃತ ದಂಪತಿಯ ಮಗನ ಪಾತ್ರ ಇದೆ ಎಂಬುದರ ಬಗ್ಗೆ ಸ್ಪಷ್ಟೀಕರಣ ಸಿಕ್ಕಿಲ್ಲ. ಆದರೆ ಕೊಲೆ ನಡೆದಾಗ ಆತನೂ ಮನೆಯಲ್ಲೇ ಇದ್ದ ಕಾರಣ ಅವರ ಮೇಲೆ ಅನುಮಾನ ಬಂದಿದೆ. ಕೊಲೆಯ ನಂತರ ಕುಟುಂಬ ನಾಪತ್ತೆಯಾಗಿದ್ದು, ಈವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • ಮತಗಟ್ಟೆಯ ಮುಂದೆಯೇ ಸೀಮೆ ಎಣ್ಣೆ ಸುರಿದುಕೊಂಡು ಆಕ್ರೋಶ ಹೊರಹಾಕಿದ ವೃದ್ಧೆ!

    ಮತಗಟ್ಟೆಯ ಮುಂದೆಯೇ ಸೀಮೆ ಎಣ್ಣೆ ಸುರಿದುಕೊಂಡು ಆಕ್ರೋಶ ಹೊರಹಾಕಿದ ವೃದ್ಧೆ!

    ಹಾವೇರಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ವೃದ್ಧೆಯ ಆಕ್ರೋಶ ವ್ಯಕ್ತಪಡಿಸಿ, ಮತದಾನ ಮಾಡಿ ಮತಗಟ್ಟೆಯ ಮುಂದೆ ಸೀಮೆ ಎಣ್ಣೆ ಸುರಿದುಕೊಂಡ ಘಟನೆ ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ನಡೆದಿದೆ.

    ಪಾರ್ವತೆಮ್ಮ 60 ವರ್ಷ ಸೀಮೆಎಣ್ಣೆ ಸುರಿದುಕೊಂಡ ವೃದ್ಧೆ. ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಪೊಲೀಸರು ವೃದ್ಧೆಯನ್ನ ಸಮಾಧಾನ ಪಡಿಸಿದ ಮನೆಯ ಸಮಸ್ಯೆ ಹಾಗೂ ಮನೆ ಕೊಡಿಸುವ ಭರವಸೆ ಕೊಟ್ಟು ಆಕೆಯನ್ನು ಕಳುಹಿಸಿದ್ದಾರೆ. ಸದ್ಯ ಪಾರ್ವತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಅಂದು ಅಣ್ಣ, ತಮ್ಮನ ಮೇಲೆ ಲಾಂಗ್ ಬೀಸಿದ್ದ-ಇಂದು ತಮ್ಮ, ಅಣ್ಣನ ಮೇಲೆ ಲಾಂಗ್ ಬೀಸಿದ

    ಅಂದು ಅಣ್ಣ, ತಮ್ಮನ ಮೇಲೆ ಲಾಂಗ್ ಬೀಸಿದ್ದ-ಇಂದು ತಮ್ಮ, ಅಣ್ಣನ ಮೇಲೆ ಲಾಂಗ್ ಬೀಸಿದ

    ಬೆಂಗಳೂರು: ಆಸ್ತಿ ವ್ಯಾಜ್ಯ ವಿಚಾರವಾಗಿ ರೌಡಿಶೀಟರ್ ಮೇಲೆ ಲಾಂಗು-ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದಂತಹ ಘಟನೆ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸುಭಾಷ್ ಗಾಯಗೊಂಡಿರುವ ರೌಡಿಶೀಟರ್ ಆಗಿದ್ದು, ಈತ ಈ ಹಿಂದೆ ಆಸ್ತಿ ವ್ಯಾಜ್ಯದ ಸಂಬಂಧ ತನ್ನ ಚಿಕ್ಕಪ್ಪನ ಮಗ ಅಪ್ಪು ಎಂಬಾತನಿಗೆ ಮಾರಣಾಂತಿಕವಾಗಿ ಹಲ್ಲೆಮಾಡಿದ್ದನು. ಈ ವೇಳೆ ಅಪ್ಪು ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿದ್ದನು.

    ಹಲ್ಲೆಯ ಬಳಿಕ ಜೈಲು ಸೇರಿದ್ದ ಸುಭಾಷ್, ಇತ್ತೀಚೆಗೆ ಜಾಮೀನಿನ ಮೂಲಕ ಬಿಡುಗಡೆಗೊಂಡು ಹೂವಿನ ವ್ಯಾಪಾರ ಆರಂಭಿಸಿದ್ದನು. ಆದರೆ ಅಪ್ಪು ತನ್ನ ಮೇಲೆ ಹಲ್ಲೆ ಮಾಡಿದ್ದ ಸುಭಾಷ್ ನನ್ನು ಕೊಲೆಮಾಡಲು ಸ್ಕೆಚ್ ಹಾಕಿದ್ದನು. ಅದರಂತೆ ಅಪ್ಪು ಹಾಗೂ ಆತನ ಗ್ಯಾಂಗ್ ಗರುಡಾ ಮಾಲ್ ಬಳಿಯಿರುವ ಫುಟ್ ಬಾಲ್ ಸ್ಟೇಡಿಯಂ ಬಳಿ ನಡೆದು ಹೋಗ್ತಿದ್ದ ಸುಭಾಷ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

    ಘಟನೆಯಿಂದ ಗಾಯಗೊಂಡಿರುವ ಸುಭಾಷ್ ನನ್ನು ನಗರದ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಸಂಬಂಧ ಪ್ರಕರಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿ ಅಪ್ಪು ಹಾಗೂ ಆತನ ಸಹಚರರಿಗಾಗಿ ಬಲೆಬೀಸಿದ್ದಾರೆ.

  • ಕನ್ನಡದ ನಟಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ 2ನೇ ಸಂಬಂಧ ಬಯಲು

    ಕನ್ನಡದ ನಟಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ 2ನೇ ಸಂಬಂಧ ಬಯಲು

    ಕೊಪ್ಪಳ: ರಾಜ್ಯದ ಪ್ರಭಾವಿ ಶಾಸಕರೊಬ್ಬರ 2ನೇ ಸಂಬಂಧ ಬಯಲಾಗಿದೆ. ಸ್ಯಾಂಡಲ್‍ವುಡ್ ನಟಿ ಜೊತೆಗೆ ಸಂಬಂಧ ಬೆಳೆಸಿದ ಶಾಸಕ ಆ ನಟಿಮಣಿಗೆ ಎರಡು ಮಕ್ಕಳನ್ನೂ ಕರುಣಿಸಿದ್ದಾರೆ.

    ಹೌದು. ಕೊಪ್ಪಳದ ಗಂಗಾವತಿ ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ ನಟಿ ಜೊತೆ ಸಂಸಾರ ನಡೆಸಿದ್ದು, ಅಣ್ಣ-ತಮ್ಮಂದಿರ ಆಸ್ತಿ ಜಗಳದಲ್ಲಿ ಶಾಸಕರ ರಾಸಲೀಲೆ ಬಯಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿ ಶಾಸಕರ ಜೊತೆ ಸಂಬಂಧ ಹೊಂದಿದ್ದು, ಆಸ್ತಿಯನ್ನು ಆಕೆಗೆ ಕೊಟ್ಟಾಗ ಈ ಸಂಗತಿ ಬಯಲಾಗಿದೆ.

    ಶಾಸಕ ಇಕ್ಬಾಲ್ ಅನ್ಸಾರಿಗೆ ಇಡೀ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಬಾರ್‍ಗಳು ಹಾಗೂ ವೈನ್ ಶಾಪ್‍ಗಳಿವೆ. ಅಪ್ಪ ಮಾಡಿದ್ದ ಆಸ್ತಿಯನ್ನ ಸಹೋದರರಿಗೆ ಹಂಚದೆ ಇಬ್ಬರು ಹೆಂಡತಿಯ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿದಾಗ 2ನೇ ಸಂಬಂಧ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಇಬ್ಬರು ಸಹೋದರರು ಸಿಟ್ಟಿಗೆದ್ದಿದ್ದಾರೆ.

    ಯಾರು ಆ ನಟಿ?: ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಪ್ರೀತಿಗೆ ಪಾತ್ರರಾಗಿದ್ದು ಗುಬ್ಬಿ ವೀರಣ್ಣ ಕುಟುಂಬದ ಹೆಣ್ಣು. ಆ ನಟಿ ಬೇರೆ ಯಾರು ಅಲ್ಲ. ಒಂದು ಕಾಲದ ಬ್ಯೂಟಿಕ್ವೀನ್, ಚೆಂದದ ನಟಿ ಪಂಚಮಿ. ಸಿನಿಮಾ, ಧಾರವಾಹಿಗಳಲ್ಲಿ ಮನೆಮಾತಾಗಿದ್ದ ನಟಿ ಪಂಚಮಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ ಎರಡನೇ ಸಂಬಂಧ ಹೊಂದಿದ್ದಾರೆ. ನಾಟಕ ಆಡಲು ಬಂದುವರು ಕಷ್ಟ ಅಂದಾಗ ನಟಿ ಪಂಚಮಿಯನ್ನ ಮದುವೆಯಾಗಿ ಸದ್ದಿಲ್ಲದೇ ಸಂಸಾರ ಮಾಡ್ತಿದ್ದು, ಬಳ್ಳಾರಿಯ ಹೊಸಪೇಟೆಯಲ್ಲಿ ನಟಿ ಪಂಚಮಿಗೆ ಇಕ್ಬಾಲ್ ಅನ್ಸಾರಿ ಮನೆ ಮಾಡಿಕೊಟ್ಟಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ಇಕ್ಬಾಲ್ ಅನ್ಸಾರಿಯವರ ಬಾರ್‍ಗಳಲ್ಲಿ ಡಬಲ್ ರೇಟ್ ತೆಗೆದುಕೊಳ್ತಾರೆ. ಎಂಆರ್‍ಪಿಗಿಂತ ಡಬಲ್ ವಸೂಲಿ ಮಾಡ್ತಾರೆ ಅಂತ ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಆ ಸಮಯದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ಪತ್ನಿ ತಬಸುಮಾ ಅವರ ಒಡೆತನದ ಬಾರ್‍ಗಳ ಪಟ್ಟಿ ಮಾಡ್ತಿದ್ದಾಗಲೇ ಪಂಚಮಿಗೂ ಬಾರ್ ಲೈಸೆನ್ಸ್ ವರ್ಗಾಯಿಸಿರೋದು ಬೆಳಕಿಗೆ ಬಂತು. ಇದರ ಜಾಡು ಹಿಡಿದಾಗ ಶಾಸಕ ಇಕ್ಬಾಲ್ ಅನ್ಸಾರಿ ಅವರ ಅಸಲಿ ಬಣ್ಣ ಬಯಲಾಗಿದೆ. 2016 ಅಂದ್ರೆ ಕಳೆದ ವರ್ಷ ಜೂನ್ 27ರಂದು ಶ್ರೀಮತಿ ಪಂಚಮಿ, ದಿವಂಗತ ತಂದೆ ಗುರುಸ್ವಾಮಿ ಅನ್ನೋರಿಗೆ ಬಾರ್ ಮಾಲಿಕತ್ವವನ್ನ ಕೊಟ್ಟಿರೋ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    2013ರ ಚುನಾವಣಾ ಪ್ರಚಾರದಲ್ಲೇ ಅನ್ಸಾರಿ ಬಣ್ಣ ಬಯಲಾಗಿ ಈಗ ಮೊದಲ ಪತ್ನಿ ಸಿಟ್ಟಿಗೆದ್ದಿದ್ದಾರೆ. ನಟಿ ಪಂಚಮಿ ಶಾಸಕ ಇಕ್ಬಾಲ್ ಅನ್ಸಾರಿ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ರು. ಗಂಡನ ಎರಡನೇ ಸಂಬಂಧದ ಬಗ್ಗೆ ಗೊತ್ತಾಗಿ ನಟಿಗೆ ಅನ್ಸಾರಿ ಪತ್ನಿ ತಬಸುಮಾ ಮನೆಯಲ್ಲೇ ಥಳಿಸಿದ್ರು ಎನ್ನಲಾಗಿದೆ. ಮೊದಲ ಹೆಂಡತಿ ಹಲ್ಲೆ ಬಳಿಕ 2ನೇ ಹೆಂಡತಿ ಪಂಚಮಿಗೆ ಇಕ್ಬಾಲ್ ಅನ್ಸಾರಿ ಬಾರ್ ಬರೆದುಕೊಟ್ಟಿದ್ದಾರೆ.

    https://www.youtube.com/watch?v=GVuQKk9L0VA&feature=youtu.be