Tag: Project Tiger

  • ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ

    ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ

    ಚಾಮರಾಜನಗರ: ಹುಲಿ ಯೋಜನೆಯ (Project Tiger) ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ‌ ಮೋದಿ (PM Narendra Modi) ಅವರು ಬಂಡೀಪುರ ಹುಲಿ‌ ಸಂರಕ್ಷಿತ ಪ್ರದೇಶದಲ್ಲಿ (Bandipur Tiger Reserve) ಸಫಾರಿ ನಡೆಸಿದ್ದಾರೆ.

    ಮೈಸೂರಿನಿಂದ ಬೆಳಗ್ಗೆ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಬಂದಿಳಿದ ಮೋದಿ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳಾದ ಮುರುಳಿ, ಸುಬ್ರಮಣ್ಯ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ‌ ಡಿ.ಎಸ್. ರಮೇಶ್ ಅವರಿಂದ ಸ್ವಾಗತ ಕೋರಿದರು. ಬೆಳಗ್ಗೆ 7:35ರ ವೇಳೆಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

    7:50ಕ್ಕೆ ತೆರೆದ ಜೀಪ್‌ನಲ್ಲಿ (ಮಹೀಂದ್ರಾ ಬೊಲೆರೊ ಕ್ಯಾಂಪರ್) ಸುಮಾರು 2 ಗಂಟೆ (22 ಕಿ.ಮೀ) ಸಫಾರಿ ಮಾಡಿದರು. ಈ ವೇಳೆ ಅರಣ್ಯದಲ್ಲಿ ಪ್ರಧಾನಿ ಸಂಚರಿಸಿ ಸೌಂದರ್ಯ ಸವಿದರು. ಇದನ್ನೂ ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

    ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ‌ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ‌ಇದ್ದರು. ಮೋದಿ ಅವರಿದ್ದ ವಾಹನದ ಜೊತೆಗೆ ಅಂಬುಲೆನ್ಸ್‌ ಸೇರಿದಂತೆ ಒಂಬತ್ತು ವಾಹನಗಳು ಸಾಗಿದ್ದವು.

     

    ಅರಣ್ಯದ ಕಚ್ಚಾ ರಸ್ತೆಯಲ್ಲೇ ಸಾಗಿ ಬೆಳಗ್ಗೆ 9:50ಕ್ಕೆ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗೆ ಮೋದಿ ತಲುಪಿದರು. ಅಲ್ಲಿಂದ ತಮ್ಮ ವಾಹನದಲ್ಲಿ ಹೆದ್ದಾರಿಯಲ್ಲೇ 5 ಕಿ.ಮೀ. ಸಾಗಿ ತಮಿಳುನಾಡಿನ ಮಧುಮಲೈ ಹುಲಿಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ತೆರಳಿದರು. ಇಲ್ಲಿ ಆನೆಗಳಿಗೆ ಕಬ್ಬನ್ನು ತಿನ್ನಿಸಿದರು. ಏಷ್ಯಾದ ಪ್ರಥಮ ಆನೆ ಕ್ಯಾಂಪ್ ತೆಪ್ಪಕಾಡಿನಲ್ಲಿ ಮೋದಿ‌ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿಯಾದ ಬಳಿಕ ನೀಲಗಿರಿಸ್ ಹೆಲಿಪ್ಯಾಡ್‌ನಿಂದ ಮೈಸೂರಿನತ್ತ ಹೊರಟರು.

  • ಬಂಡೀಪುರಕ್ಕೆ ಪ್ರಧಾನಿ ಮೋದಿ ಆಗಮನ

    ಬಂಡೀಪುರಕ್ಕೆ ಪ್ರಧಾನಿ ಮೋದಿ ಆಗಮನ

    ಮೈಸೂರು/ ಚಾಮರಾಜನಗರ: ಹುಲಿ ಯೋಜನೆ (Project Tiger) ಘೋಷಣೆಯಾಗಿ ಇಂದಿಗೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಹೆಲಿಕಾಪ್ಟರ್‌ ಮೂಲಕ ಬಂಡೀಪುರಕ್ಕೆ (Bandipur) ಆಗಮಿಸಿದ್ದಾರೆ.

    ಶನಿವಾರವೇ ಮೈಸೂರಿಗೆ ಆಗಮಿಸಿದ್ದ ಮೋದಿ ಇಂದು ಬಂಡೀಪುರದಲ್ಲಿ ಸಫಾರಿ ನಡೆಸಲಿದ್ದಾರೆ.  ಸಫಾರಿ ನಡೆಸಿದ ಬಳಿಕ ತಮಿಳುನಾಡಿನ ಮಧುಮಲೈ ಅರಣ್ಯಕ್ಕೂ ಭೇಟಿ ಕೊಡಲಿದ್ದಾರೆ. ಹೀಗಾಗಿ ಮಧುಮಲೈ ಅರಣ್ಯದಲ್ಲೂ ಭರ್ಜರಿ ಸಿದ್ದತೆ ನಡೆದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರ್ಯಾಂಡ್ ಬಗ್ಗೆ‌ ಹರಿದಾಡುತ್ತಿರುವ ಸುದ್ದಿ ಸುಳ್ಳು: KMF ಸ್ಪಷ್ಟನೆ

    22 ಕಿ.ಮೀ. ಸಫಾರಿ ನಡೆಸಿ ಗಡಿಭಾಗದ ಕೆಕ್ಕನಹಳ್ಳ ಚೆಕ್‍ಪೋಸ್ಟ್ ಮೂಲಕ ತಮಿಳುನಾಡಿನ ಮಧುಮಲೈ ಅರಣ್ಯಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಲಿದ್ದಾರೆ. ಬೆಳಗ್ಗೆ 9:35ಕ್ಕೆ ಆನೆ ಶಿಬಿರದಲ್ಲಿ `ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿಗೆ ಅಭಿನಂದಿಸಲಿದ್ದಾರೆ. ಬಳಿಕ ತೆಪ್ಪಕಾಡಿನಲ್ಲಿ ದೇಶದ 12 ಹುಲಿಸಂರಕ್ಷಿತ ಪ್ರದೇಶದ ಹುಲಿ ಯೋಜನೆ ನಿರ್ದೇಶಕರೊಡನೆ ಸಂವಾದ ನಡೆಸಲಿದ್ದಾರೆ.

    ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ವಾಪಸ್‌ ಆಗಲಿದ್ದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ 2022ರ ಹುಲಿ‌ ಸಮೀಕ್ಷೆ ವರದಿ ಹಾಗೂ 50ನೇ ವರ್ಷಾಚರಣೆಗೆ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 12:40ಕ್ಕೆ ದೆಹಲಿಗೆ ವಾಪಸ್‌ ಆಗಲಿದ್ದಾರೆ.