Tag: Project

  • ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಏಪ್ರಿಲ್ ಕೊನೆಯ ವಾರದೊಳಗೆ ಅನುಮೋದನೆ: ಬೊಮ್ಮಾಯಿ

    ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಏಪ್ರಿಲ್ ಕೊನೆಯ ವಾರದೊಳಗೆ ಅನುಮೋದನೆ: ಬೊಮ್ಮಾಯಿ

    ಬೆಂಗಳೂರು: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಆಯವ್ಯಯದಲ್ಲಿ 3000 ಕೋಟಿ ರೂ. ನ್ನು ಮೀಸಲಿಟ್ಟಿದ್ದು, ಅಭಿವೃದ್ಧಿಯ ಕ್ರಿಯಾಯೋಜನೆಗಳಿಗೆ ಏಪ್ರಿಲ್ ಕೊನೆಯ ವಾರದೊಳಗೆ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬಸವ ಕಲ್ಯಾಣ ಕ್ಷೇತ್ರ ಸಮಿತಿ, ಬಸವಕಲ್ಯಾಣ ವಿಕಾಸ ಅಕಾಡೆಮಿ ಕಲಬುರಗಿ ಇವರ ವತಿಯಿಂದ ಆಯೋಜಿಸಿದ್ದ ಬಸವ ಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿಸುವ ವಿವಿಧ ಯೋಜನೆಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವೈಚಾರಿಕ ಪರ್ವದ ಜೊತೆಗೆ ಅಭಿವೃದ್ಧಿ ಪರ್ವವನ್ನೂ ಸರ್ಕಾರ ತರಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಎಲ್ಲ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಿ, ಆಭಿವೃದ್ಧಿ ಕಾರ್ಯಕ್ರಮಗಳು ಹಳ್ಳಿಹಳ್ಳಿಗೆ, ಮನೆಮನೆಗೆ ತಲುಪುವಂತೆ ನೋಡಿಕೊಳ್ಳನಲಾಗುವುದು .ಈ ಭಾಗದಲ್ಲಿ14000 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 5000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. 371 ಜೆ ಅದರ ಆಶಯ, ನ್ಯಾಯಸಮ್ಮತವಾದ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.

    ಮೇ ಮೊದಲನೇ ವಾರದಲ್ಲಿ ಅನುಭವ ಮಂಟಪ ಪ್ರಾರಂಭ: ಅನುಭವ ಮಂಟಪ ಕಟ್ಟಡ ಮೇ ಮೊದಲನೆ ವಾರದಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದೆ. ವೈಚಾರಿಕಾ ಕ್ರಾಂತಿ ನಿರಂತರವಾಗಿ ನಡೆಯಲು ಸಹಕರಿಸಲಿದೆ. ಸಾಮಾಜಿಕ ಹಾಗೂ ವೈಚಾರಿಕ ಚಿಂತನೆಗೆ ಅನುಭವ ಮಂಟಪ ಪ್ರೇರಣಾ ಶಕ್ತಿ ನೀಡಲಿದೆ. ನಾಯಕರಾದ ಯಡಿಯೂರಪ್ಪನವರು 500 ಕೋಟಿ ರೂ. ಮೀಸಲಿರಿಸಿ ಅನುಭವ ಮಂಟಪ ನಿರ್ಮಾಣಕ್ಕೆ ನಾಂದಿ ಹಾಡಿದರು. ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಹಾಗೂ ಶಿವಶರಣರ ಸ್ಮಾರಕದ ಅಭಿವೃದ್ಧಿ ಹಾಗೂ ರಕ್ಷಣೆ ಸರ್ಕಾರ ಮಾಡಲಿದೆ ಎಂದು ತಿಳಿಸಿದರು

    ಕಲ್ಯಾಣ ಕರ್ನಾಟಕದ ಅಭಿವೃದ್ಧಿ : ಬಸವರಾಜ ಪಾಟೀಲ ಸೇಡಂ ಅವರ ಪ್ರಾಮಾಣಿಕತೆ, ಬದ್ಧತೆಯಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೌಶಲ್ಯಯುತ ಮಾನವ ಸಂಪನ್ಮೂಲ ವೃದ್ಧಿಗಾಗಿ ವಿಶೇಷ ಸಮಿತಿ ರಚಿಸಿ 200 ಕೋಟಿ. ರೂ.ಗಳನ್ನು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನೀಡಲಾಗಿದೆ. ಪ್ರತಿಯೊಂದು ಹಳ್ಳಿಯಲ್ಲಿ ತರಬೇತಿ, ಕೌಶಲ್ಯಾಭಿವೃದ್ಧಿ, ಉದ್ಯೋಗ, ಆರೋಗ್ಯ , ಶೀಕ್ಷಣ, ಸಂಘಟಿತ ವ್ಯಾಪಾರ ವಹಿವಾಟುಗಳಿಗೆ ಪ್ರೋತ್ಸಾಹ, ಹೀಗೆ ಸಮಗ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಂಕಣಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸರ್ಕಾರದ ಸಹಕಾರ ಇರಲಿದೆ ಎಂದು ತಿಳಿಸಿದರು.

    ಬಸವಣ್ಣನವರು ಇಂದಿಗೂ ಪ್ರಸ್ತುತ : 12ನೇ ಶತಮಾನ ಭಾರತ ದೇಶಕ್ಕೆ ಪ್ರಮುಖವಾದ ಪರಿವರ್ತನಾ ಶತಮಾನ. ಸಾಮಾನ್ಯ ಜನರಿಗೆ ಆದರ್ಶಗಳನ್ನು, ಬದುಕುವ ದಾರಿಯನ್ನು ತೊರಿಸಿಕೊಟ್ಟವರು ಬಸವೇಶ್ವರರು. ಕಲಬೇಡ, ಕೊಲಬೇಡ ಎನ್ನುವ ಮೂಲಕ ಮನುಷ್ಯನ ಚಾರಿತ್ರ್ಯ ಹೇಗಿರಬೇಕು, ಕಾಯಕವೇ ಕೈಲಾಸ ಎನ್ನುವ ಮೂಲಕ ದುಡಿಮೆಯಿಲ್ಲದ ಬದುಕು ಬದುಕಲ್ಲ, ಸಮಾಜದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದು ಇಂದಿಗೂ ಪ್ರಸ್ತುತವಾಗಿರುವ ವಿಚಾರಗಳಿಗೆ ಸ್ಪಷ್ಟತೆಯನ್ನು ಆಗಲೇ ನೀಡಿದ್ದರು. ಬಸವಣ್ಣನವರು ಇಂದಿಗೂ ಪ್ರಸ್ತುತ ಎಂದರು. ಇದನ್ನೂ ಓದಿ: ಪುಸ್ತಕದಿಂದ ತೆಗೆದರೂ ಭಾರತೀಯರ ಹೃದಯದಲ್ಲಿ ಟಿಪ್ಪು ಸದಾ ನೆಲೆಸಿರುತ್ತಾರೆ: ಹೆಚ್.ವಿಶ್ವನಾಥ್

  • ಸಂಚಾರಿ ವಿಜಯ್ ಇದ್ದಿದ್ರೆ ಯಾವ ಸಿನಿಮಾಗಳಲ್ಲಿ, ಯಾವ್ಯಾವ ಅವತಾರದಲ್ಲಿ ಕಾಣಿಸಿಕೊಳ್ತಿದ್ರು?

    ಸಂಚಾರಿ ವಿಜಯ್ ಇದ್ದಿದ್ರೆ ಯಾವ ಸಿನಿಮಾಗಳಲ್ಲಿ, ಯಾವ್ಯಾವ ಅವತಾರದಲ್ಲಿ ಕಾಣಿಸಿಕೊಳ್ತಿದ್ರು?

    ಬೆಂಗಳೂರು: ಸಂಚಾರಿ ವಿಜಯ್ ತಮ್ಮ ವಿಭಿನ್ನ ನಟನೆ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಅವರದು. ಅದೇ ರೀತಿ ತಮ್ಮ ಮುಂದಿನ ಸಿನಿಮಾಗಳಲ್ಲಿ ಸಹ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಸುಮಾರು 5 ಚಿತ್ರಗಳು ಅವರ ಕೈಯ್ಯಲ್ಲಿದ್ದವು, ಎಲ್ಲವೂ ಮೈ ಜುಮ್ ಎನ್ನಿಸುವ ಪಾತ್ರಗಳೇ ಎಂಬುದು ವಿಶೇಷ. ಇದಕ್ಕೆ ಉದಾಹರಣೆ ಎಂಬಂತೆ ಅವರ ಅಂತ್ಯಕ್ರಿಯೆ ದಿನದಂದು ಬಿಡುಗಡೆಯಾದ ತಲೆದಂಡ ಸಿನಿಮಾದ ಅದ್ಭುತ ಟ್ರೈಲರ್.

    ಹೌದು ಈ ಹಿಂದೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದ ಸಂಚಾರಿ ವಿಜಯ್, ಲಾಕ್‍ಡೌನ್ ಬಳಿಕ ಎರಡು ಸಿನಿಮಾಗಳ ಚಿತ್ರೀಕರಣ ಆರಂಭವಾಗಬೇಕಿದೆ. ಅಲ್ಲದೆ ಮೇಲೊಬ್ಬ ಮಾಯಾವಿ, ಪುಕ್ಸಟ್ಟೆ ಲೈಫು ಹಾಗೂ ತಲೆದಂಡ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಮೂರೂ ಸಿನಿಮಾಗಳು ಸಾಮಾಜಿಕ ಕಳಕಳಿ ಹೊಂದಿವೆ. ಒಂದು ಗ್ಲೋಬಲ್ ವಾರ್ಮಿಂಗ್ ಕುರಿತು, ಮತ್ತೊಂದು ಡಾರ್ಕ್ ಕಾಮಿಡಿ ಕುರಿತದ್ದಾಗಿದೆ. ಈ ಎಲ್ಲ ಸಿನಿಮಾಗಳನ್ನು ಕಳೆದ ವರ್ಷವೇ ಬಿಡುಗಡೆ ಮಾಡಲು ಉದ್ದೇಶಿಸಿದ್ದೆವು. ಅಲ್ಲದೆ ಇನ್ನೂ ಉತ್ತಮ ಸಿನಿಮಾಗಳನ್ನು ಮಾಡುವ ಕುರಿತು ಯೋಜನೆ ಇದೆ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಆಪ್ತಮಿತ್ರನ ಕಳೆದುಕೊಂಡ ದುಃಖ- ನೀನಾಸಂ ಸತೀಶ್ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್

    ಬಿ.ನವೀನ್ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ಇರುವೆ ಹೆಸರಿನ ವ್ಯಕ್ತಿಯ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಕರಾವಳಿ ಪ್ರದೇಶದಲ್ಲಿನ ಅಕ್ರಮ ಮರಳುಗಾರಿಕೆ ಕುರಿತು ಬೆಳಕು ಚೆಲ್ಲುವುದಾಗಿದೆ. ಹಿಂದೆಂದೂ ಕಾಣಿಸದ ರೀತಿಯ ಪಾತ್ರದಲ್ಲಿ ವಿಜಯ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

    ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡ ಸಿನಿಮಾದಲ್ಲಿ ವಿಜಯ್ ಬುದ್ಧಿಮಾಂದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈತ ಕಾಡಿನಲ್ಲೇ ವಾಸವಿದ್ದು, ಮರಗಳ ಹಾಗೂ ಪರಿಸರದ ಉಳಿವಿಗಾಗಿ ಹೋರಾಡುತ್ತಿರುತ್ತಾನೆ. ಅಲ್ಲದೆ ಟಿಂಬರ್ ಮಾಫಿಯಾ ವಿರುದ್ಧ ಸೆಟೆದು ನಿಂತಿರುತ್ತಾನೆ. ಈ ಪಾತ್ರದಲ್ಲಿ ಸಂಚಾರಿ ವಿಜಯ್ ನಟನೆ ಅದ್ಭುತವಾಗಿದೆ. ಇತ್ತೀಚೆಗೆ ಇದರ ಟ್ರೈಲರ್ ಸಹ ಬಿಡುಗಡೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

    ಅರವಿಂದ್ ಕುಪ್ಳಿಕರ್ ನಿರ್ದೇಶನದ ಪುಕ್ಸಟ್ಟೆ ಲೈಫು ಸಿನಿಮಾ ಸಹ ತೆರೆಗಪ್ಪಳಿಸಲು ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕೀ ಮಾರುವ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಕ್‍ಡೌನ್‍ಗೂ ಮೊದಲೇ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗಿದೆ.

    ಪಿರಂಗಿಪುರ ಸಿನಿಮಾ ಚಿತ್ರೀಕರಣ ಕೇವಲ ಶೇ.40ರಷ್ಟು ಮುಗಿದಿದ್ದು, ಇನ್ನೂ ಶೇ.60 ರಷ್ಟು ಶೂಟಿಂಗ್ ಬಾಕಿ ಇದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಆ್ಯಂಗ್ರಿ ಓಲ್ಡ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪಿರಂಗಿಪುರ ಎಂಬ ಕಾಲ್ಪನಿಕ ಪಟ್ಟಣವನ್ನು ಕಟ್ಟುವಲ್ಲಿ ಈ ವೃದ್ಧ ಶ್ರಮಿಸುತ್ತಿರುತ್ತಾನೆ. ಸುಮಾರು 2,000 ವರ್ಷಗಳ ಹಿಂದಿನ ವಾತಾವರಣಕ್ಕೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಅಲ್ಲದೆ ಹೆಚ್ಚು ಪ್ರಾಸ್ಥೆಟಿಕ್ ಮೇಕ್‍ಅಪ್ ಬಳಸಲಾಗಿದೆ. ಬಜೆಟ್ ಕಾರಣದಿಂದಾಗಿ 2018ರಿಂದ ಸಿನಿಮಾ ನಿರ್ಮಾಣವನ್ನು ಮುಂದೂಡಿದ್ದೆವು ಎಂದು ನಿರ್ದೇಶಕ ಜನಾರ್ಧನ್.ಪಿ ಮಾಹಿತಿ ನೀಡಿದ್ದಾರೆ.

    ಈ ಎಲ್ಲ ಚಿತ್ರಗಳ ಹೊರತಾಗಿ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಅವರ ಜೊತೆ ನಟಿಸಲು ಸಂಚಾರಿ ವಿಜಯ್ ಅವಸ್ತಾಂತರ ಸಿನಿಮಾಗೆ ಸಹಿ ಹಾಕಿದ್ದರು, ಫೋಟೋ ಶೂಟ್ ಸಹ ನಡೆದಿತ್ತು. ಲಾಕ್‍ಡೌನ್ ಬಳಿಕ ಇನ್ನೇನು ಚಿತ್ರೀಕರಣ ಪ್ರಾರಂಭಿಸಬೇಕಿತ್ತು. ಆದರೆ ವಿಧಿಯಾಟಕ್ಕೆ ಸಂಚಾರಿ ವಿಜಯ್ ಬಲಿಯಾದರು. ಈ ಚಿತ್ರದಲ್ಲಿ ವಿಜಯ್ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಸಿ, ಎರಡು ಪದವಿ ಪಡೆದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸುತ್ತಿದ್ದರು ಎಂದು ನಿರ್ದೇಶಕ ಜಿ.ದೀಪಕ್ ಕುಮಾರ್ ಮಾಹಿತಿ ನೀಡಿದ್ದಾರೆ.

  • ಕನಸಾಗಿ ಉಳಿಯಲಿದ್ಯಾ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ

    ಕನಸಾಗಿ ಉಳಿಯಲಿದ್ಯಾ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ

    ಶ್ರೀನಿವಾಸ ರಾವ್
    ಬೆಂಗಳೂರು : ಸರ್ಕಾರ ಘೋಷಣೆ ಮಾಡೋ ಅದೆಷ್ಟೋ ಯೋಜನೆಗಳು ಘೋಷಣೆಯಾಗಿ ಕಣ್ಣಿಗೆ ಕಾಣದ ಹಾಗೇ ಮಾಯವಾಗಿ ಬಿಡುತ್ತವೆ. ಕೆಲ ಯೋಜನೆಗಳಂತೂ ಕಾರ್ಯರೂಪಕ್ಕೆ ಬರೋದೆ ಇಲ್ಲ. ಇನ್ನು ಕೆಲವು ಯೋಜನೆಗಳು ಕಾರ್ಯರೂಪಕ್ಕೆ ಬಂದ್ರು ಸರಿಯಾದ ಸಮಯಕ್ಕೆ ಕಾಮಗಾರಿಗಳು ಪೂರ್ಣಗೊಳ್ಳದೆ ಫಲಾನುಭವಿಗಳ ಕೈ ಸೇರೋಕೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಸರ್ಕಾರಗಳ ಇಚ್ಛಾಶಕ್ತಿ, ಮಂತ್ರಿಗಳ ಅಸಡ್ಡೆ, ಸರ್ಕಾರ ಆರ್ಥಿಕ ಸ್ಥಿತಿಗಳು ಯೋಜನೆಗಳನ್ನ ಪೂರೈಸಲು ಅವಕಾಶ ಕೊಡೋದಿಲ್ಲ. ಈಗ ಈ ಸಾಲಿಗೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ “ಮುಖ್ಯಮಂತ್ರಿ ಒಂದು ಲಕ್ಷ ಮನೆ” ಯೋಜನೆ ಸೇರಿಕೊಂಡಿದೆ. ಯೋಜನೆ ಘೋಷಣೆ ಮಾಡಿ 3 ವರ್ಷ ಕಳೆದು ಇದೂವರೆಗೂ ಒಂದೇ ಒಂದು ಮನೆ ಸರ್ಕಾರದಿಂದ ಕಟ್ಟಲು ಆಗದೆ ಆಮೆಗತಿಯಲ್ಲಿ ಯೋಜನೆ ಸಾಗುತ್ತಿದೆ.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2018 ರಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯನ್ನು ಘೋಷಣೆ ಮಾಡಿದ್ರು. ಬೆಂಗಳೂರಿನಲ್ಲಿ ಸೂರು ಇಲ್ಲದ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಸೂರು ನೀಡುವ ಮಹತ್ವಾಕಾಂಕ್ಷೆಯ ಯೋಜನೆ ಇದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯೋಜನೆ ಘೋಷಣೆ ಮಾಡಿದ್ರು ಅಷ್ಟೆ. ಯಾವುದೇ ಪ್ರಾರಂಭಿಕ ಕಾರ್ಯಗಳನ್ನ ಅನುಷ್ಠಾನ ಮಾಡಲಿಲ್ಲ. ನಂತರ ಸಿದ್ದರಾಮಯ್ಯ ಸರ್ಕಾರ ಪತನವಾಯ್ತು. ಬಳಿಕ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಖುದ್ದು ಕುಮಾರಸ್ವಾಮಿ ಅವ್ರು ಒಂದು ಲಕ್ಷ ಮನೆ ಯೋಜನೆಗೆ ಯಲಹಂಕ ಬಳಿಯ ಕುದುರೆಗೆರೆ ಗ್ರಾಮದಲ್ಲಿ ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ರು. ಕುಮಾರಸ್ವಾಮಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದು ಬಿಟ್ಟು ಉಳಿದ ಕೆಲಸಗಳು ಮುಂದಕ್ಕೆ ಸಾಗಲೇ ಇಲ್ಲ.

    ಕುಮಾರಸ್ವಾಮಿ ಸರ್ಕಾರ ಪತನದ ಬಳಿಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂತು. ಸಿಎಂ ಯಡಿಯೂರಪ್ಪ ದಾಸರಹಳ್ಳಿಯ ಗಾಣಿಗರಹಳ್ಳಿಯಲ್ಲಿ ಸುಮಾರು ಒಂದು ಸಾವಿರ ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ರು. ಶಂಕು ಸ್ಥಾಪನೆ ಮಾಡಿದ ವೇಗದಲ್ಲಿ ಮನೆಗಳ ನಿರ್ಮಾಣ ಮಾತ್ರ ಆಗಲೇ ಇಲ್ಲ. ಯೋಜನೆ ಘೋಷಣೆ ಆಗಿ 3 ವರ್ಷಗಳು ಕಳೆದು ಹೋಯ್ತು. ಹೀಗಿದ್ರು ಇದುವರೆಗೆ ಒಂದೇ ಒಂದು ಮನೆ ನಿರ್ಮಾಣವಾಗಿ, ಫಲಾನುಭವಿಗಳಿಗೆ ಮನೆ ಕೈ ಸೇರಿಲ್ಲ.

    ಒಂದು ಲಕ್ಷ ಮನೆಗಳನ್ನು ಬಹುಮಹಡಿ ಮಾದರಿಯಲ್ಲಿ ಕಟ್ಟಬೇಕು ಅಂತ ಸರ್ಕಾರ ನಿರ್ಧರಿಸಿ ಕೆಲಸ ನಡೆಯುತ್ತಿದೆ. ಸದ್ಯ ಮೊದಲ ಹಂತದ ಪ್ಯಾಕೇಜ್ ನಲ್ಲಿ ಸುಮಾರು 46,499 ಜಿ+14 ಮಾದರಿಯ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆದು 15 ಜನ ಗುತ್ತಿಗೆದಾರರಿಗೆ 15 ಪ್ಯಾಕೇಜ್ ನಲ್ಲಿ ಕೆಲಸ ನೀಡಿ ಕೆಲಸ ಪ್ರಾರಂಭ ಆಗಿದೆ. ಇನ್ನು ಎರಡನೇ ಹಂತದಲ್ಲಿ ಸುಮಾರು 53,501 ಮನೆಗಳನ್ನ ನಿರ್ಮಾಣ ಮಾಡಲು ಸರ್ಕಾರ ಚಿಂತಿಸಿದೆ. ಆದ್ರೆ ಈವರೆಗೂ ಸಂಪೂರ್ಣ ಕೆಲಸ ಪ್ರಾರಂಭ ಆಗಿಲ್ಲ. ಕೇವಲ 3264, ಜಿ+3 ಮಾದರಿ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.

     

    ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಮೊದಲ ಹಂತದ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ಮೊದಲ ಹಂತದ 49,499 ಮನೆಗಳ ನಿರ್ಮಾಣ ಕಾರ್ಯದಲ್ಲಿ ಒಂದೇ ಒಂದೇ ಒಂದು ಮನೆ ಸಂಪೂರ್ಣವಾಗಿ ನಿರ್ಮಾಣ ಆಗಿಲ್ಲ. 22,764 ಮನೆಗಳ ನಿರ್ಮಾಣ ಕಾರ್ಯ ಜಮೀನು ಸಮತಟ್ಟು ಮಾಡುವ ಹಂತದಲ್ಲಿ ಇದೆ. 3669 ಮನೆಗಳು ಮಣ್ಣು ಅಗೆತದ ಹಂತದಲ್ಲಿ ಇದೆ. 5250 ಮನೆಗಳು ತಳಪಾಯದ ಹಂತದಲ್ಲಿ ಇದೆ. 6524 ಮನೆಗಳು ಪ್ಲಿಂಥ್ ಮಟ್ಟದ ಹಂತದಲ್ಲಿದ್ರೆ 244 ಮನೆಗಳು ಛಾವಣಿ ಅಳವಡಿಸುವ ಹಂತದಲ್ಲಿ ಇವೆ. ಇದನ್ನೂ ಓದಿ: ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ಬೆಂಗಳೂರಿನ ಸುತ್ತಮುತ್ತ ಸುಮಾರು 1200 ಎಕರೆ ಜಾಗದಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಸರ್ಕಾರ ಜಾಗ ಗುರುತಿಸಿ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ. ಈಗಾಗಲೇ 4-5 ಕಡೆ ಜಾಗವನ್ನು ಗುರುತಿಸಿದೆ. ಆದ್ರೆ ಸಂಪೂರ್ಣವಾಗಿ ಜಾಗ ಗುರುತಿಸುವ ಕೆಲಸವನ್ನೆ ಸರ್ಕಾರ ಪೂರ್ಣ ಮಾಡಿಲ್ಲ. ಹೀಗಾಗಿ ಮನೆ ನಿರ್ಮಾಣ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಸಾವಿರಾರು ಬಡವರು ಮನೆಯ ಕನಸ್ಸಿನಲ್ಲಿ ಕಾಯುತ್ತಿದ್ದಾರೆ. ಆದ್ರೆ ಸರ್ಕಾರದ ನಿರ್ಲಕ್ಷ್ಯದಿಂದ ಮನೆ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿಲ್ಲ. ಸರ್ಕಾರ ಕೆಲಸಕ್ಕೆ ವೇಗ ಕೊಟ್ಟರೆ ಮಾತ್ರ ಬಡವರ ಕನಸು ನನಸಾಗಲಿದೆ. ಇಲ್ಲದೆ ಹೋದ್ರೆ ಕನಸು ಕನಸಾಗೇ ಉಳಿಯೋದು ಗ್ಯಾರಂಟಿ.

  • ಬಹಿರಂಗ ಸಭೆಯಲ್ಲಿ ಪ್ರತಾಪ್ ಸಿಂಹ, ರಾಮದಾಸ್ ವಾಕ್ಸಮರ

    ಬಹಿರಂಗ ಸಭೆಯಲ್ಲಿ ಪ್ರತಾಪ್ ಸಿಂಹ, ರಾಮದಾಸ್ ವಾಕ್ಸಮರ

    ಮೈಸೂರು: ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಶಾಸಕ ರಾಮದಾಸ್ ಸಭೆಯಲ್ಲಿ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದಾರೆ.

    ಕಸ ವಿಲೇವಾರಿ ಘಟಕ ಸೂಯೇಜ್ ಫಾರಂ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮುಂದೆ ಜಟಾಪಟಿ ಮಾಡಿಕೊಂಡಿದ್ದಾರೆ. ಘಟಕದ ಅಭಿವೃದ್ಧಿ ವಿಚಾರದಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದಾರೆ.

     

    ಸೂಯೇಜ್ ಫಾರಂ ಕಸ ವಿಲೇವಾರಿಗೆ ವರ್ಕ್ ಆರ್ಡರ್ ಆಗಿದೆ ಎಂದು ಪ್ರತಾಪ್ ಸಿಂಹ ವಾದಿಸಿದರು. ಆಗ ಆರ್ಡರ್ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಅಂತ ರಾಮದಾಸ್ ಅಸಮಾಧಾನ ತೋರಿದರು. ಈ ವೇಳೆ ಸಭೆಯಲ್ಲೇ ಮಾತಿನ ಚಕಮಕಿ ನಡೆಯಿತು.

    ಯೋಜನೆಗೆ ರಾಜ್ಯ ಸರ್ಕಾರದ ಹಣ ಬೇಕಿಲ್ಲ ಅಂತಾ ಪ್ರತಾಪ್ ಸಿಂಹ ಹೇಳಿದ್ದಕ್ಕೆ ಯೋಜನೆಯನ್ನು ರಾಜ್ಯ ಸರ್ಕಾರ ಹೊಸದಾಗಿ ಆರಂಭಿಸಿ ಅಂತ ರಾಮದಾಸ್ ಸಚಿವರನ್ನು ಒತ್ತಾಯಿಸಿದರು.

    ರಾಮದಾಸ್ ಮಾತಿಗೆ ಅಪಸ್ವರ ಎತ್ತಿದ ಸಂಸದ, ಮತ್ತೆ ಯೋಜನೆ ಆರಂಭಿಸುವ ಅಗತ್ಯವಿಲ್ಲ ಅಂತ ಹೇಳಿದರು. ಆಗ ರಾಮದಾಸ್ ಕೋಪಗೊಂಡು ಸಭೆಯಲ್ಲಿ ಮಾತಾಡಿದರು. ಮುಖ ತಿರಗಿಸಿಕೊಂಡು ಸಭೆಯಲ್ಲಿ ಇಬ್ಬರು ವಾಕ್ಸಮರ ಮಾಡಿದರು. ಸಚಿವರಾದ ಭೈರತಿ ಬಸವರಾಜ್ ಮತ್ತು ಎಸ್.ಟಿ.ಸೋಮಶೇಖರ್ ಈ ವಾಕ್ಸಮರಕ್ಕೆ ಸಾಕ್ಷಿಯಾದರು.

  • ಎತ್ತಿನಹೊಳೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ – ಸಂಸದ ಎಲ್.ಹನುಮಂತಯ್ಯ ಮನವಿ

    ಎತ್ತಿನಹೊಳೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ – ಸಂಸದ ಎಲ್.ಹನುಮಂತಯ್ಯ ಮನವಿ

    ನವದೆಹಲಿ: ರಾಜ್ಯದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಘೋಷಿಸಬೇಕು ಎಂದು ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

    ಶೂನ್ಯ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ದೇಶದಲ್ಲಿ ಅತಿ ಹೆಚ್ಚು ಒಣ ಭೂಮಿ ಮತ್ತು ಕುಡಿಯುವ ನೀರಿಲ್ಲದೆ ಬಳಲುತ್ತಿರುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮೀಣ ಜಿಲ್ಲೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಕುಡಿಯುವ ನೀರಿಲ್ಲದೆ ತೀವ್ರವಾಗಿ ಹೆಣಗಾಡುತ್ತಿದೆ. ಈ 6 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು “ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ” ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದೆ.

    ಮಳೆಗಾಲದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಬಳಿ ಪಶ್ಚಿಮ ಹರಿಯುವ ತೊರೆಗಳ ಮೇಲ್ಭಾಗದಿಂದ 24 ಟಿಎಂಸಿ ನೀರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (NWDA) ಪ್ರಸ್ತಾಪಿಸಿರುವ ನೇತ್ರಾವತಿ-ಹೇಮವತಿ ಲಿಂಕ್‍ಗಳಿಗೆ ಬದಲಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯನ್ನು ಪರಿಗಣಿಸಿ, ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದರು.

    ಕುಡಿಯುವ ನೀರು ದೇಶದಲ್ಲಿ ಮೂಲಭೂತ ಹಕ್ಕಾಗಿರಬೇಕು. ಕರ್ನಾಟಕದಲ್ಲಿ ಅನೇಕ ಜಿಲ್ಲೆಗಳು ತೀವ್ರ ಬರವನ್ನು ಎದುರಿಸುತ್ತಿವೆ. 30 ಜಿಲ್ಲೆಗಳಲ್ಲಿ ಸುಮಾರು 15 ಜಿಲ್ಲೆಗಳು ಕುಡಿಯುವ ನೀರಿಗೆ ಸಂಬಂಧಿಸಿದಂತೆ ತೀವ್ರ ಬರವನ್ನು ಎದುರಿಸುತ್ತಿವೆ. ಈ 6 ಜಿಲ್ಲೆಗಳ ಸಾಮಾನ್ಯ ಜನರ ಹಿತದೃಷ್ಟಿಯಿಂದ ಭಾರತ ಸರ್ಕಾರವು ಈ ರಾಷ್ಟ್ರೀಯ ಯೋಜನೆಯನ್ನು ಶೀಘ್ರವೇ ಘೋಷಿಸಬೇಕು ಮತ್ತು ಯೋಜನೆಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

  • ಇಂದೋರ್ ಮಾದರಿಗಿಂತ ಉನ್ನತ ಮಟ್ಟದಲ್ಲಿ ಬೆಂಗ್ಳೂರು ಸ್ವಚ್ಛತೆ: ಡಾ. ಅಶ್ವತ್ಥನಾರಾಯಣ

    ಇಂದೋರ್ ಮಾದರಿಗಿಂತ ಉನ್ನತ ಮಟ್ಟದಲ್ಲಿ ಬೆಂಗ್ಳೂರು ಸ್ವಚ್ಛತೆ: ಡಾ. ಅಶ್ವತ್ಥನಾರಾಯಣ

    ಬೆಂಗಳೂರು: ಇಂದೋರ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಬೆಂಗಳೂರಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮಾದರಿ ಯೋಜನಡೆಯಡಿ ಪ್ರಾಯೋಗಿಕವಾಗಿ ಮತ್ತಿಕೆರೆ ವಾರ್ಡಿನಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಡಾ. ಅಶ್ವತ್ಥನಾರಾಯಣ ಮಾತನಾಡಿದರು. ಸ್ವಚ್ಛತೆಯ ದೃಷ್ಟಿಯಿಂದ ಪ್ರಮುಖ ಕಾರ್ಯಕ್ರಮವಾದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದು ಸಾರ್ವಜನಿಕರು ಸೇರುವ ಕಾರ್ಯಕ್ರಮವಲ್ಲ ಎಂದು ಮೊದಲೇ ಸೂಚನೆ ನೀಡಲಾಗಿತ್ತು ಎಂದರು.

    “ಮುಖ್ಯವಾಗಿ ಸ್ವಚ್ಛತೆ ಗುಣಮಟ್ಟ ಹೆಚ್ಚಿಸುವುದು ನಮ್ಮ ಉದ್ದೇಶ. ಇದಕ್ಕೆ ಪೂರಕವಾಗಿ ಇಂದೋರ್ ನ ಕನ್ಸಲ್ಟೆಂಟ್ ಸಂಸ್ಥೆ ಪ್ರಾಯೋಗಿಕವಾಗಿ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ ಮುಂದಾಗಿದೆ. ಈ ಮಾದರಿಗೆ ತಾಂತ್ರಿಕ ಸ್ಪರ್ಶ ನೀಡಿ, ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆರೋಗ್ಯ ಸಮಿತಿ ಅಧ್ಯಕ್ಷರು ಹಾಗೂ ಮಹಾಪೌರರು ನಿರ್ಧರಿಸಿದ್ದಾರೆ” ಎಂದು ಅವರು ತಿಳಿಸಿದರು.

    “ಇಡೀ ಭಾರತದಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದು, ಸ್ವಚ್ಛತೆಗೆ ಬೆಂಗಳೂರು ಹೆಸರು ಮಾಡಿತ್ತು. ಈಗ ಕಸ ನಿರ್ವಹಣೆಯಲ್ಲಿ ಇಂದೋರ್ ನಂಬರ್ 1 ಸ್ಥಾನದ್ದಲ್ಲಿದ್ದು, ಎಲ್ಲರಿಗೂ ಮಾದರಿಯಾಗಿದೆ. ಅದೇ ಮಾದರಿಯನ್ನು ನಮ್ಮ ಭಾಗದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ಸ್ವಚ್ಛತೆ ನಿರ್ವಹಣೆಯಲ್ಲಿ ಕಸ ಸಂಗ್ರಹಣೆ ಒಂದು ಭಾಗವಾದರೆ, ಅದರ ವಿಂಗಡಣೆ ಅದಕ್ಕಿಂತಲೂ ಮುಖ್ಯವಾದ ಭಾಗ. ಹಸಿ, ಒಣ ಹಾಗೂ ಅಪಾಯಕಾರಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ವಿಲೇವಾರಿ ಮಾಡಲು ತಂತ್ರಜ್ಞಾನದ ನೆರವು ಪಡೆಯುವ ಚಿಂತನೆ ಇದೆ. ಈ ಮೂಲಕ ಬೆಂಗಳೂರು ಮಾದರಿ ಆಗಲಿದೆ. ಇದಕ್ಕೆ ನಾಗರಿಕರ ಸಹಕಾರ ಅತ್ಯಗತ್ಯ” ಎಂದು ಹೇಳಿದರು.

    ಕೊರೊನಾ ಜಾಗೃತಿ
    “ಕೊರೊನಾ ಬರದಂತೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಸ್ವಚ್ಛತೆ ಕಾಪಾಡುವ ಮೂಲಕ ನಾಗರಿಕರು ಸಮಾಜದ ಆರೋಗ್ಯ ರಕ್ಷಣೆ ಮಾಡಬಹುದು. ಮುಖ್ಯವಾಗಿ 60 ವರ್ಷ ಮೇಲ್ಪಟ್ಟವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಹೊರಗೆ ಬರದಿರುವುದು ಒಳಿತು. ಮನೆ ಮನೆಗೆ ತೆರಳಿ ವೃದ್ಧರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ನಮ್ಮ ಆರೋಗ್ಯ ಸೇವಾ ಸಿಬ್ಬಂದಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್, ಪಾಲಿಕೆಯ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ ರಾಜು ಹಾಗೂ ನಗರಸಭೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

    ಇಂದೋರ್ ಮಾದರಿ ಹೇಗೆ?
    * ವಾರ್ಡ್‍ನ ಎಲ್ಲ ಮನೆಗಳಿಂದ ಹಾಗೂ ವಾಣಿಜ್ಯ ಮಳಿಗೆಗಳಿಂದ ಮೂಲದಲ್ಲೇ ಶೇ. 100 ರಷ್ಟು ವಿಂಗಡಿಸಿದ ತ್ಯಾಜ್ಯ ಸಂಗ್ರಹಣೆ ಮಾಡಿ, ಅದನ್ನು ತೆರೆದ ಆಟೋ ಟಿಪ್ಪರ್ ಬದಲು ಮುಚ್ಚಿದ ಕಂಪಾರ್ಟ್‍ಮೆಂಟ್ ಇರುವ ಆಟೋ ಟಿಪ್ಪರ್ ಗಳಲ್ಲಿ ಸಾಗಿಸಲಾಗುವುದು.
    * ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ನಿಂರಂತರ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು.
    * ಮನೆಗಳಿಂದ ಬೆಳಗ್ಗೆ ಪಾಳಿಯಲ್ಲಿ ಹಾಗೂ ವಾಣಿಜ್ಯ ಮಳಿಗೆಗಳಿಂದ ರಾತ್ರಿ ಪಾಳಿಯಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡಲಾಗುವುದು ಮತ್ತು ವಾಣಿಜ್ಯ ಪ್ರದೇಶಗಳ ರಸ್ತೆ ಸ್ವಚ್ಛತೆ ಕಾರ್ಯ ಮಾಡಲಾಗುವುದು.
    * ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಮೊದಲು ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು, ನಂತರದ ದಿನಗಳಲ್ಲಿ ದಂಡ ವಿಧಿಸಲಾಗುವುದು.
    * ಸಾರ್ವಜನಿಕ ಸ್ಥಳಗಳಲ್ಲಿ ಕಸ ತೆರವುಗೊಳಿಸಿ ಸುಂದರಗೊಳಿಸಲಾಗುವುದು.
    * ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಂದ ತೆರಿಗೆ ಜತೆ ದಂಡ ವಸೂಲಿ ಮಾಡಲಾಗುವುದು.

  • ತುಂಬಿದ ಬಾಗಲೂರು ಕೆರೆ- ಕಣ್ಮನ ಸೆಳೆಯುತ್ತಿದೆ ರಮಣೀಯ ದೃಶ್ಯ

    ತುಂಬಿದ ಬಾಗಲೂರು ಕೆರೆ- ಕಣ್ಮನ ಸೆಳೆಯುತ್ತಿದೆ ರಮಣೀಯ ದೃಶ್ಯ

    – ಕೆಸಿ ವ್ಯಾಲಿ ಯೋಜನೆಯಡಿ ತುಂಬಿದ ಕೆರೆ
    – ಕೃಷಿ, ಜಾನುವಾರುಗಳಿಗೆ ಮಾತ್ರ ಉಪಯುಕ್ತ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನ ಪೈಪ್ ಮೂಲಕ ಬೆಂಗಳೂರು ಉತ್ತರ ಭಾಗದ ಕೆರೆಗಳನ್ನ ತುಂಬಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿತ್ತು. ಈಗ ಬಾಗಲೂರು ಕೆರೆ ಕೆಸಿ ವ್ಯಾಲಿ ಯೋಜನೆಯಡಿ ತುಂಬಿದೆ. ಈ ರಮಣೀಯ ದೃಶ್ಯ ಎಲ್ಲರ ಕಣ್ಮನ ಸೆಳೆಯುತ್ತಿದೆ.

    ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳಿಗೆ ತುಂಬಿಸುವ ಯೋಜನೆಯ ಮೊದಲ ಹಂತಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಚಾಲನೆ ಸಿಕ್ಕಿತ್ತು. ಆದರೆ ಈಗ ಬಾಗಲೂರು ಕೆರೆ ತುಂಬಿದ್ದು, ಈ ನೀರನ್ನು ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಮಾತ್ರ ಬಳಸಬಹುದಾಗಿದೆ.

    ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ 12 ಕೆರೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ 9 ಕೆರೆಗಳು, ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳು ಸೇರಿ ಒಟ್ಟು 65 ಕೆರೆಗಳು ಈ ಯೋಜನೆಯಡಿ ಬರುತ್ತವೆ. ಈ ಯೋಜನೆಯಿಂದ ವರ್ಷಕ್ಕೆ ಸುಮಾರು 2.70 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ನೀರಿನೊಂದಿಗೆ ಆ ಭಾಗದ ವಾರ್ಷಿಕ ವಾಡಿಕೆ ಮಳೆಯಿಂದ ಲಭ್ಯವಾಗುವ ನೀರು ಸೇರಿದಲ್ಲಿ ಅನೇಕ ಕೆರೆಗಳು ತುಂಬಲಿವೆ. ರೈತಾಪಿ ವರ್ಗಕ್ಕೂ ಯೋಜನೆಯಿಂದ ಅನುಕೂಲವಾಗಲಿದೆ.

    ಬಾಗಲೂರು ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಮಾಜಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ. “ನಮ್ಮ ಕ್ಷೇತ್ರದ ಬಾಗಲೂರು ಕೆರೆ ತುಂಬಿರುವ ಒಂದು ರಮಣೀಯ ದೃಶ್ಯ. ಅಂದು ನಾವು ಕಂಡ ಕನಸು ಇಂದು ನನಸಾಗ ತೊಡಗಿದೆ. ಕಾಂಗ್ರೆಸ್ ಸರ್ಕಾರದ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಬೆಂಗಳೂರಿನ ನೀರನ್ನು ಪೈಪ್‍ಲೈನ್ ಮೂಲಕ ಬೆಂಗಳೂರು ಉತ್ತರ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯಕ್ರಮವು ಹಂತಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೆರೆ ತುಂಬಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

  • ಉಸ್ತುವಾರಿ ಸಚಿವರಿಂದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

    ಉಸ್ತುವಾರಿ ಸಚಿವರಿಂದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

    ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಯೋಜನೆ ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸ್ಥಳೀಯ ಜನರ ಅಭಿಪ್ರಾಯಗಳನ್ನು ಸಹ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಚಿವರು ಇಂದು ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ನೆಹರು ಕ್ರೀಡಾಂಗಣ, ಜಯನಗರ ಕನ್ಸರ್ವೆನ್ಸಿ ಕಾಮಗಾರಿ, ರಾಜೇಂದ್ರ ನಗರ ಚಾನೆಲ್ ಬಳಿಯ ಕಾಮಗಾರಿ, ವಿನಾಯಕ ಪಾರ್ಕ್ ಬಸವನಗುಡಿ ಮತ್ತು ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಡಿಜಿಟಲ್ ಲೈಬ್ರರಿ ಯೋಜನೆ ಅನುಷ್ಠಾನದ ಪರಿಶೀಲನೆ ನಡೆಸಿದರು.

    ಕಾಮಗಾರಿ ಅನುಷ್ಠಾನ ಪೂರ್ವದಲ್ಲಿ ಮತ್ತು ಅನುಷ್ಠಾನದ ವೇಳೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಬೇಕು. ಸ್ಥಳೀಯರ ಅಭಿಪ್ರಾಯಗಳನ್ನು ಸ್ವೀಕರಿಸಿದ ಬಳಿಕ ಕಾಮಗಾರಿ ಆರಂಭಿಸಿದರೆ ಜನರಿಗೆ ಉಪಯೋಗಕರವಾದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಆರಂಭದಲ್ಲಿ ಕುಂಟುತ್ತಾ ಸಾಗುತ್ತಿದ್ದ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ಕಳೆದ 6 ತಿಂಗಳಿನಿಂದ ಚುರುಕಿನಿಂದ ನಡೆಯುತ್ತಿದೆ ಎಂದು ಅವರು ತಿಳಿಸಿದರು.

    ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಟೆಂಡರ್ ಪ್ರಕ್ರಿಯೆ ಆದಷ್ಟು ಬೇಗನೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಲು ತಿಳಿಸಲಾಗಿದೆ. ನಗರದ ಮಧ್ಯ ಭಾಗದಲ್ಲಿ ಹರಿದು ಹೋಗಿರುವ ಚಾನೆಲ್‍ಗಳನ್ನು ಸ್ವಚ್ಛಗೊಳಿಸುವ ಕುರಿತು ಜಿಲ್ಲಾಧಿಕಾರಿ ಅವರು ಮೂರು ದಿನಗಳ ಒಳಗಾಗಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವರು. ಚಾನೆಲ್‍ನಲ್ಲಿ ತಿಳಿಯಾದ ನೀರು ಸದಾ ಕಾಲ ನಿಲ್ಲುವಂತೆ ಮಾಡಲು ಬ್ಯಾರೇಜ್ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

    ಇನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಸುಮಾರು 20 ಸಾವಿರ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಟೆಂಡರ್ ಹಂತದಲ್ಲಿದೆ. ಇದರ ಸರಿಯಾದ ನಿರ್ವಹಣೆಗೂ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ಸಚಿವರು ನೆಹರು ಕ್ರೀಡಾಂಗಣದಲ್ಲಿ ಕಾಮಗಾರಿ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ನಾಗರಿಕರು ಹಲವು ಬೇಡಿಕೆಗಳನ್ನು ಮುಂದಿರಿಸಿದರು. ಕ್ರೀಡಾಂಗಣದಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಮಾಡಬೇಕು. ಬೆಳಕಿನ ವ್ಯವಸ್ಥೆ, ಅಗತ್ಯವಿರುವ ಎಲ್ಲಾ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕ್ರೀಡಾಂಗಣವನ್ನು ಸುಸ್ಥಿತಿಯಲ್ಲಿರಿಸಲು ಕ್ರಮ, ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಮುಂದಿರಿಸಿದರು. ಕ್ರೀಡಾಳುಗಳೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸಚಿವರು ಸೂಚನೆ ನೀಡಿದರು.

    ಡಿಜಿಟಲ್ ಲೈಬ್ರರಿ ಉತ್ತಮ ಯೋಜನೆಯಾಗಿದ್ದು, ಶಾಲಾ ಕಾಲೇಜು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ಶಿಕ್ಷಣ ಸಚಿವರಿಂದ ಈ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಸಮಯ ನಿಗದಿಪಡಿಸುವಂತೆ ಸಚಿವರು ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಉಪ ಮೇಯರ್ ಚನ್ನಬಸಪ್ಪ, ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

  • ಕಳಸಾ ಬಂಡೂರಿ ಯೋಜನೆ ಒಪ್ಪಿಗೆಗೆ ತಾತ್ಕಾಲಿಕ ತಡೆ

    ಕಳಸಾ ಬಂಡೂರಿ ಯೋಜನೆ ಒಪ್ಪಿಗೆಗೆ ತಾತ್ಕಾಲಿಕ ತಡೆ

    ನವದೆಹಲಿ: ಮಹದಾಯಿ ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಯೋಜನೆಗೆ ನೀಡಿದ್ದ ಪರಿಸರ ಒಪ್ಪಿಗೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಈ ಬಗ್ಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಒಪ್ಪಿಗೆ ತಡೆ ಹಿಡಿದಿದೆ ಎಂದು ರಾಜ್ಯ ಸರ್ಕಾರಕ್ಕೆ ಮಾಹಿತಿ ತಿಳಿಸಿದೆ.

    2018 ಅಗಸ್ಟ್ 14 ರಂದು ಮಹದಾಯಿ ನ್ಯಾಯಾಧೀಕರಣ ನೀಡಿದ್ದ ತೀರ್ಪು ಪ್ರಶ್ನಿಸಿ ಗೋವಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮತ್ತಷ್ಟು ನೀರಿನ ಬೇಡಿಕೆ ಇಟ್ಟು ಕರ್ನಾಟಕವೂ ಅರ್ಜಿ ಸಲ್ಲಿಸಿತ್ತು. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ.

    ಇತ್ತೀಚಿಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ಅರಣ್ಯ ಪರಿಸರ ಇಲಾಖೆ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿತ್ತು. ಇದೊಂದು ಕುಡಿಯುವ ನೀರಿನ ಯೋಜನೆಯಾದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿದೆ. ಇಲ್ಲಿ ಯಾವುದೇ ನೀರಾವರಿ ಮತ್ತು ಜಲ ವಿದ್ಯುತ್ ಯೋಜನೆ ಇಲ್ಲದಿರುವ ಹಿನ್ನೆಲೆ ಇಲಾಖೆ ಅನುಮತಿ ನೀಡಲಾಗಿತ್ತು. ಕೇಂದ್ರ ಸರ್ಕಾರದ ಯಾಕ ಆಕ್ಷೇಪಣೆ ಇಲ್ಲದೇ ನೀವೂ ಕಾಮಗಾರಿ ಆರಂಭಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ನಿರಪೇಕ್ಷಣಾ ಪತ್ರವನ್ನು ವಿರೋಧಿಸಿ ಗೋವಾ ನಿಯೋಗ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಭೇಟಿಯಾಗಿ ಒಪ್ಪಿಗೆಯನ್ನು ಹಿಂದೆ ಪಡೆಯುವಂತೆ ಒತ್ತಾಯ ಮಾಡಿತ್ತು.

    ಎಚ್‍ಡಿಕೆ ಕಿಡಿ: ಕನ್ನಡಿಗರನ್ನು ರಾಜಕೀಯಕ್ಕೆ ದುಡಿಸಿಕೊಳ್ಳುವುದು, ಯೋಜನೆ, ಕಾರ್ಯಕ್ರಮ, ಅನುದಾನಗಳ ವಿಷಯದಲ್ಲಿ ಶೋಷಿಸುವುದು ಬಿಜೆಪಿಯ ಚಾಳಿಯಾಗಿದೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿರುವುದನ್ನು ಕನ್ನಡಿಗರಾಗಿ ಟೀಕಿಸಬೇಕೋ? ಬೆಂಬಲಿಸಬೇಕೋ? ಕನ್ನಡಿಗರ ಆತ್ಮಾಭಿಮಾನ ಕೆಣಕುವುದರಲ್ಲಿ ನಿಮಗೆಂಥ ಸಂತೋಷ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಚುನಾವಣೆ ವೇಳೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ವೋಟು ಹಾಕಿಸಿಕೊಂಡ ರಾಜ್ಯದ ಬಿಜೆಪಿ ನಾಯಕರು ಇದೀಗ ಮೋದಿಗೆ ಬೆದರಿ ತಮ್ಮ ಧ್ವನಿಯನ್ನೇ ಕಳೆದುಕೊಂಡಿದ್ದಾರೆ. ಕನ್ನಡಿಗರನ್ನು ದಾಸ್ಯಕ್ಕೆ ಈಡು ಮಾಡುವ ದಲ್ಲಾಳಿಗಳಾಗಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕುಮಾರಸ್ವಾಮಿ ಸರ್ಕಾರದಿಂದ ಕತ್ತರಿ!

    ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕುಮಾರಸ್ವಾಮಿ ಸರ್ಕಾರದಿಂದ ಕತ್ತರಿ!

    ಬೆಂಗಳೂರು: ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕುಮಾರಸ್ವಾಮಿ ಸರ್ಕಾರ ಕತ್ತರಿ ಹಾಕಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಘೋಷಣೆಯಾಗಿದ್ದ ಅನುದಾನಗಳಿಗೆ ಸಿಎಂ ಕುಮಾರಸ್ವಾಮಿ ತಡೆ ನೀಡಿದ್ದಾರೆ.

    ಸಾಲಮನ್ನಾಕ್ಕಾಗಿ ಹಣ ಹೊಂದಿಸಲು ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ಆಡಳಿತ ಬರೆ ಎಳೆದಿದೆ. ಬಜೆಟ್‍ನಲ್ಲಿ ಘೋಷಣೆ ಆಗಿ ಟೆಂಡರ್ ಮುಗಿದಿದ್ದರೂ ಸಮ್ಮಿಶ್ರ ಸರ್ಕಾರ ಇವುಗಳಿಗೆಲ್ಲ ಬ್ರೇಕ್ ಹಾಕಿದೆ.

    ಯಾವೆಲ್ಲಾ ಯೋಜನೆಗಳಿಗೆ ಕತ್ತರಿ?
    – ಕೃಷ್ಣಾ ಭಾಗ್ಯಜಲ ನಿಗಮ – 1,427 ಕೋಟಿ ರೂ.
    – ಕಾವೇರಿ ನೀರಾವರಿ ನಿಗಮ – 688.75 ಕೋಟಿ ರೂ.
    – ಕರ್ನಾಟಕ ನೀರಾವರಿ ನಿಗಮ – 1,825.73 ಕೋಟಿ ರೂ.

    – ಕಿತ್ತೂರು, ಬೈಲಹೊಂಗಲ, ಸವದತ್ತಿ ತಾಲೂಕುಗಳ ಕೆರೆ ತುಂಬಿಸುವ ಯೋಜನೆ
    – ಕೊಪ್ಪಳದ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ
    – ಬಸವ ಅಂತರಾಷ್ಟ್ರೀಯ ಕೇಂದ್ರ ಮತ್ತು ಮ್ಯೂಸಿಯಂ ಯೋಜನೆ
    – ಆಲಮಟ್ಟಿ ಎಡದಂಡೆ ಕಾಲುವೆಗಳ ಆಧುನೀಕರಣ ಯೋಜನೆ
    – ಗಂಡೂರಿ ನಾಲಾ ಮತ್ತು ಮುಲ್ಲಾಮಾರಿ ಯೋಜನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv