Tag: programe

  • ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    -ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು

    ಕೋಲಾರ: ಸಮಾಜದಲ್ಲಿ ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ ಎಂದು ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕ್ರಮದಲ್ಲಿ ನಟ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಸೇವಾ ಸಮಿತಿ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಒಳತಿಗಾಗಿ ಯಾರು ಅನ್ಯಾಯವನ್ನು ಪ್ರಶ್ನಿಸುತ್ತಾರೋ ಅವರಿಗೆ ದೇಶ ದ್ರೋಹದ ಪಟ್ಟ ಕಟ್ಟುತ್ತಾರೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದವರನ್ನ ಕೊಲ್ಲುವುದು, ಬಂಧಿಸುವ ಸ್ಥಿತಿ ಇದೆ. ಸಾಹಿತಿ ಎಂ.ಎಂ ಕಲಬುರ್ಗಿ ಎಂತಹ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋದಾಗ ಧಾರ್ಮಿಕ ವಾದಿಗಳು ಹತ್ಯೆಗೈದಿದ್ದಾರೆ. ಆದರೆ ಅನ್ಯಾಯದ ವಿರುದ್ಧ ಹೋರಾಡಲು ಅಂಬೇಡ್ಕರ್ ಸಂವಿಧಾನ ರಚಿಸಿದರು. ಹೀಗಾಗಿ ಬುದ್ಧ ಹಾಗೂ ಅಂಬೇಡ್ಕರ್ ಅವರ ಸಿದ್ಧಾಂತಗಳು ನಮ್ಮ ದೇಶದ ಹೆಮ್ಮೆ ಎಂದು ಹೇಳಿದರು.

    ಸಂವಿಧಾನ ವಿರೋಧಿಗಳು ಧರ್ಮಗಳನ್ನ ಒಡೆಯುತ್ತಿದ್ದಾರೆ. 300 ವರ್ಷಗಳ ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು ಸುಲ್ತಾನ. ಅಂತಹ ಟಿಪ್ಪು ದೇಶ ರಕ್ಷಣೆ ಮಾಡಿ, ಮಠ ಮಾನ್ಯಗಳನ್ನ ರಕ್ಷಣೆ ಮಾಡಿದ್ದಾರೆ. ಆದ್ರೆ ಇಂದು ಅವರನ್ನು ದೇಶದ್ರೋಹಿಯಂತೆ ಬಿಂಬಿಸುತ್ತಿದ್ದಾರೆ. ಟಿಪ್ಪುವಿಗೆ ದೇಶದ್ರೋಹದ ಪಟ್ಟ ಕಟ್ಟುವವರು ನಿಜಕ್ಕೂ ಇತಿಹಾಸವನ್ನೂ ಅರಿತಿಲ್ಲ ಎಂದು ಕಿಡಿಕಾರಿದರು.

    ಹಾಗೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತಿ ಭಗವಾನ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಮಾನತೆ ಇದೆ, ಆದ್ರೆ ಮನುಸ್ಮೃತಿಯಲ್ಲಿ ಸಮಾನತೆ ಇಲ್ಲ. ಮನುಸ್ಮೃತಿ ಇರುವುದು ಬ್ರಾಹ್ಮಣರು ಶೂದ್ರರ ಮೇಲೆ ದಾಸ್ಯ ಹೇರಲು ಮಾತ್ರ ಇದೆ. ಆದರೆ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಬದಿಗೆ ಸರಿಸಿ ಸಂವಿಧಾನವನ್ನು ತಂದರು ಎಂದು ಸಾಹಿತಿ ಭಗವಾನ್ ತಿಳಿಸಿದರು.

    ಸಂವಿಧಾನವನ್ನ ಯಾರೂ ಓದಿ ಅರ್ಥ ಮಾಡಿಕೊಂಡಿಲ್ಲ, ಸಂವಿಧಾನದಲ್ಲಿ ಸಮಾನತೆ ಇದೆ ದಾಸ್ಯ ಇಲ್ಲ. ಬ್ರಾಹ್ಮಣರು ಬಿಟ್ಟು ಉಳಿದವರೆಲ್ಲಾ ಗುಲಾಮರು ಎಂಬುದು ಮನುಸ್ಮೃತಿ. ಆದ್ದರಿಂದ ಸಂವಿಧಾನವನ್ನ ತೆಗೆಯಲು ಹೊರಟಿದ್ದಾರೆ ಎಂದರು. ಬಳಿಕ ಬ್ರಿಟಿಷರು ಬಂದ ಮೇಲೆ ನಮಗೆಲ್ಲಾ ಶಿಕ್ಷಣ ಸಿಕ್ಕಿತು. ಅಲ್ಲಿಯವರೆಗೂ ಎಲ್ಲರೂ ಹೆಬ್ಬಟ್ಟುಗಳೆ ಆಗಿದ್ದರು. ಕೆಲಸಕ್ಕೆ ಬಾರದ ತುಳಿಯುವ, ಕಡಿಯುವ ಇಲ್ಲಸಲ್ಲದ ದೇವರುಗಳನ್ನ ತಂದು ನಮ್ಮ ಮೇಲೆ ಹೇರಿದ್ದಾರೆ. ಇದರಿಂದ ನಾವು ಹೊರಗೆ ಬರಬೇಕು, ಸಂವಿಧಾನವನ್ನು ಅಧ್ಯಯನ ಮಾಡಿ ಅರಿವು ಪಡೆಯಬೇಕು ಎಂದು ಕಿವಿ ಮಾತನ್ನು ಹೇಳಿದರು.

  • ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿದೆ ಸಾಂಸ್ಕೃತಿಕ ನಗರಿ- ಚಾಮುಂಡಿ ಬೆಟ್ಟಕ್ಕೆ ರಾತ್ರಿ ಸಂಚಾರ ನಿಷೇಧ

    ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿದೆ ಸಾಂಸ್ಕೃತಿಕ ನಗರಿ- ಚಾಮುಂಡಿ ಬೆಟ್ಟಕ್ಕೆ ರಾತ್ರಿ ಸಂಚಾರ ನಿಷೇಧ

    ಮೈಸೂರು: ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಇಂದು ಸಂಜೆಯಿಂದಲೇ ಅರಮನೆಯಲ್ಲಿ ಸಾಂಸ್ಕೃತಿಕ ವೈಭವ ಆರಂಭವಾಗಲಿದೆ.

    ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸಲು ಮೈಸೂರು ಸಿಂಗಾರಗೊಂಡಿದೆ. ಇಂದು ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 12 ರವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿ ನಡೆಯಲಿವೆ. 12 ಗಂಟೆಗೆ ಸರಿಯಾಗಿ ಪಟಾಕಿ, ಬಾಣಬಿರುಸುಗಳನ್ನು ಸಿಡಿಸಲು ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಳ್ಳಲಾಗಿದೆ. ಈ ಸಂತೋಷದ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಇಂದು ರಾತ್ರಿ ಚಾಮುಂಡಿ ಬೆಟ್ಟಕ್ಕೆ ಸಂಚಾರ ನಿಷೇಧಿಸಲಾಗಿದೆ.

    ಚಾಮುಂಡಿ ಬೆಟ್ಟಕ್ಕೆ ರಾತ್ರಿ 10ರಿಂದ ಬೆಳಗಿನ ಜಾವ 6ರವರೆಗೆ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಹಾಗೆಯೇ ಹಿನಕಲ್ ಫ್ಲೈಓವರ್‌ನಲ್ಲೂ ಕೂಡ ಹೊಸ ವರ್ಷ ಆಚರಣೆ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗವಾಗಿ ಇಂದು ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ನಗರದ ಹೋಟೆಲ್, ಕ್ಲಬ್, ರೆಸ್ಟೋರೆಂಟ್, ರೆಸಾರ್ಟ್, ಬಾರ್ ಗಳಲ್ಲಿ ಮಧ್ಯರಾತ್ರಿ 1ರವರೆಗೆ ಮದ್ಯ ಸರಬರಾಜು ಮಾಡಬೇಕಾದರೆ ಅಬಕಾರಿ ಇಲಾಖೆ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಯುವ ಕಾರ್ಯಕರ್ತರಿಂದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

    ಬಿಜೆಪಿ ಯುವ ಕಾರ್ಯಕರ್ತರಿಂದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

    ರಾಂಚಿ: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹೊಡೆದು ಹಲ್ಲೆ ಮಾಡಿರುವ ಘಟನೆ ಜಾರ್ಖಂಡ್‍ನ ಪಾಕುರ್ ನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಪೊಲೀಸರಿಗೆ ಆದೇಶಿಸಿದ್ದಾರೆ.

    ಸ್ವಾಮಿ ಅಗ್ನಿವೇಶ್ ಅವರು ಪಾಕುರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ಬಂದು ಅಲ್ಲಿನ ಹೋಟೆಲ್‍ವೊಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸಮಾರಂಭಕ್ಕೆ ತೆರಳಲು ಹೋಟೆಲ್‍ನಿಂದ ಹೊರಬರುತ್ತಿದ್ದಂತೆ ಸುತ್ತುವರಿದು ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

    ಸ್ಥಳೀಯ ಬುಡಕಟ್ಟು ಜನರನ್ನು ಮತಾಂತರಗೊಳಿಸಲು ಕ್ರೈಸ್ತ ಮಿಷನರಿಗಳ ಪರವಾಗಿ ಪ್ರವಚನ ನೀಡಲು ಆಗಮಿಸಿದ್ದಾರೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಸ್ವಾಮಿ ಅಗ್ನಿವೇಶ್‍ಅವರು, ತನ್ನ ಆಗಮನದ ಬಗ್ಗೆ ಪೊಲೀಸ್ ಆಡಳಿತ ವರ್ಗಕ್ಕೆ ತಿಳಿಸಿದ್ದರು. ಆದರೆ ಹೋಟೆಲ್‍ನಿಂದ ಹೊರ ಬರುವ ಸಂದರ್ಭದಲ್ಲಿ ಯಾರು ಇರಲಿಲ್ಲ ಆ ವೇಳೆ ದಾಳಿ ನಡೆಸಲಾಗಿದೆ.

    ದಾಳಿಕೋರರು ಮೊದಲಿಗೆ ಘೋಷಣೆಯನ್ನು ಕೂಗಿದ್ದಾರೆ. ಕಪ್ಪು ಧ್ವಜವನ್ನು ತೋರಿಸಿದ್ದಾರೆ. ಅನಂತರ ಅಗ್ನಿವೇಶ್ ಅವರನ್ನು ಹೊಡೆದು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಯೂ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಪೊಲೀಸರು ಅದರ ಆಧಾರದ ಮೇರೆಗೆ 20 ದಾಳಿಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಳವಿಲ್ಲ. ಆದರೆ ಸ್ವಾಮಿ ಅಗ್ನಿವೇಶ್ ತನ್ನ ಭದ್ರತೆಗಾಗಿ ಮೊದಲೇ ಸಂಘಟಿಸಬೇಕಾಗಿತ್ತು ಎಂದು ಜಾರ್ಖಂಡ್ ಬಿಜೆಪಿ ವಕ್ತಾರ ಪಿ ಶಾಹ್ದೇವ್ ಹೇಳಿದ್ದಾರೆ.