Tag: professional tax

  • 11 ತಿಂಗಳು 200 ರೂ., 1 ತಿಂಗಳು 300 ರೂ. ಕಡಿತ – ಏನಿದು ಉದ್ಯೋಗಿಗಳ ವೃತ್ತಿ ತೆರಿಗೆ ಲೆಕ್ಕಾಚಾರ?

    11 ತಿಂಗಳು 200 ರೂ., 1 ತಿಂಗಳು 300 ರೂ. ಕಡಿತ – ಏನಿದು ಉದ್ಯೋಗಿಗಳ ವೃತ್ತಿ ತೆರಿಗೆ ಲೆಕ್ಕಾಚಾರ?

    ಬೆಂಗಳೂರು: ಗ್ಯಾರಂಟಿ ಯೋಜನೆ (Congress Guarantee) ಜಾರಿಗೆ ಹಣ ಹೊಂದಿಸಲು ಈಗಾಗಲೇ ಹಲವು ಮಾರ್ಗಗಳನ್ನು ಹುಡುಕುತ್ತಿರುವ ಸರ್ಕಾರ ಈಗ ಉದ್ಯೋಗಿಗಳ ವೇತನಕ್ಕೆ (Salary) ಕೈಹಾಕಿದೆ. ಇನ್ಮುಂದೆ ಉದ್ಯೋಗಿಗಳ ಫೆಬ್ರವರಿ ತಿಂಗಳ ವೇತನದಿಂದ 300 ರೂ. ವೃತ್ತಿ ತೆರಿಗೆ ಕಡಿತವಾಗಲಿದೆ.

    ವೃತ್ತಿ ತೆರಿಗೆ (Professional Tax) ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500 ರೂ.ಗಳಿಗೆ ಅನುಗುಣವಾಗಿ, ಸಂಬಳ ಅಥವಾ ಮಜೂರಿ ಪಡೆಯುವ ವ್ಯಕ್ತಿಗಳು ಫೆಬ್ರವರಿ ತಿಂಗಳಲ್ಲಿ ಪಾವತಿಸುತ್ತಿರುವ ವೃತ್ತಿ ತೆರಿಗೆಯನ್ನು ಪ್ರಸ್ತುತ 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಾಲಿನ ದರ 5 ರೂ. ಹೆಚ್ಚಳಕ್ಕೆ ಚಿಂತನೆ: ಭೀಮಾನಾಯ್ಕ್

    ಉದ್ಯೋಗ, ವೃತ್ತಿ, ವ್ಯಾಪಾರಗಳಿಂದ ಮಾಸಿಕ ಮಾಸಿಕ 15,000 ರೂ. ಗಿಂತ ಹೆಚ್ಚಿನ ಆದಾಯ ಪಡೆಯುತ್ತಿರುವ ಉದ್ಯೋಗಿಗಳ ವೇತನದಿಂದ ಇಲ್ಲಿಯವರೆಗೆ ವರ್ಷದ 11 ತಿಂಗಳು 200 ರೂ.ನಂತೆ ವೃತ್ತಿ ತೆರಿಗೆ ಕಡಿತವಾಗುತ್ತಿತ್ತು. ಇನ್ನು ಮುಂದೆ ಒಂದು ತಿಂಗಳು ಮಾತ್ರ 300 ರೂ. ವೃತ್ತಿ ತೆರಿಗೆಯನ್ನು ಸರ್ಕಾರ ವಿಧಿಸಲಿದೆ.

    ಈಗಾಗಲೇ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಅನುಮೋದನೆ ನೀಡಿತ್ತು. ಈ ಅಧಿವೇಶನದಲ್ಲಿ ಈ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಿದೆ.

    ಸಂವಿಧಾನದ ಅನುಚ್ಛೇದ 276ರಲ್ಲಿ ನಿಗದಿಪಡಿಸಿದಂತೆ ವೃತ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷಕ್ಕೆ ಗರಿಷ್ಠ 2,500 ರೂ. ವಿಧಿಸಲು ಮಾತ್ರ ಅವಕಾಶವಿದೆ. ಹಾಲಿ ವೃತ್ತಿಪರ ಉದ್ಯೋಗಿಗಳಿಗೆ ಮಾಸಿಕ ವೇತನದಲ್ಲಿ 200 ರೂಪಾಯಿ ವೃತ್ತಿ ತೆರಿಗೆ ವಿಧಿಸಲಾಗುತ್ತಿತ್ತು.

     

    ಸದ್ಯ ತಿಂಗಳಿಗೆ 200 ರೂ. ಪ್ರತಿ ವರ್ಷ ಉದ್ಯೋಗಿಯೊಬ್ಬನಿಂದ 2,400 ರೂ. ಸಂಗ್ರಹವಾಗುತ್ತಿತ್ತು. ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸರಾಸರಿ ಒಟ್ಟು ಸುಮಾರು 1,300 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತಿತ್ತು. ಫೆಬ್ರವರಿಯಲ್ಲಿ 100 ರೂ. ವೃತ್ತಿ ತೆರಿಗೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 50 ಕೋಟಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದೆ. ಒಂದು ತಿಂಗಳು 300 ರೂಪಾಯಿ ವೃತ್ತಿ ತೆರಿಗೆ ವಿಧಿಸುವ ಮೂಲಕ ವಾರ್ಷಿಕ ಅಂದಾಜು ಸುಮಾರು 1,360 ರೂಪಾಯಿ ವೃತ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆಯಿದೆ.

    ದೇಶದಲ್ಲಿ ಕರ್ನಾಟಕ ಸೇರಿ 17 ರಾಜ್ಯಗಳು ವೃತ್ತಿ ತೆರಿಗೆ ವಿಧಿಸುತ್ತಿದ್ದು, ಈಗಿರುವ 2,500 ರೂ. ವಾರ್ಷಿಕ ಮಿತಿಯನ್ನು 6,000 ರೂ.ಗೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಹಲವು ರಾಜ್ಯಗಳ ಮನವಿ ಮಾಡಿದೆ. ಕೇಂದ್ರ ಸರ್ಕಾರ ಮಿತಿ ಹೆಚ್ಚಳದ ಬಗ್ಗೆ ಇಲ್ಲಿ ತನಕ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ 6 ಸಾವಿರ ರೂ.ಗೆ ಏರಿಕೆ ಮಾಡಿದರೆ ಪ್ರತಿ ತಿಂಗಳು ಉದ್ಯೋಗಿಯ ಸಂಬಳದಿಂದ 500 ರೂ. ವೃತ್ತಿ ತೆರಿಗೆ ಕಡಿತವಾಗಲಿದೆ.

  • ವೃತ್ತಿ ತೆರಿಗೆ ಕಟ್ಟಿಲ್ಲ ಎಐಸಿಸಿ ಸೋಷಿಯಲ್ ಮೀಡಿಯಾ ಚೀಫ್ ರಮ್ಯಾ!

    ವೃತ್ತಿ ತೆರಿಗೆ ಕಟ್ಟಿಲ್ಲ ಎಐಸಿಸಿ ಸೋಷಿಯಲ್ ಮೀಡಿಯಾ ಚೀಫ್ ರಮ್ಯಾ!

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಈಗ ಎಐಸಿಸಿಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ನೇಮಕವಾಗಿರುವ ರಮ್ಯಾ ಅವರು ತಮ್ಮ ವೃತ್ತಿ ತೆರಿಗೆಯನ್ನೇ ಪಾವತಿಸಿಲ್ಲ. ಅಷ್ಟೇ ಯಾಕೆ ಇನ್ನೂ ಹಲವು ನಟಿ ಮತ್ತು ನಟರು ವೃತ್ತಿ ತೆರಿಗೆ ಪಾವತಿಸಿಲ್ಲ. ಮೂರು ಬಾರಿ ನೋಟಿಸ್ ನೀಡಿರುವ ತೆರಿಗೆ ಅಧಿಕಾರಿಗಳು ಈಗ ನ್ಯಾಯಾಲಯದಲ್ಲಿ ಕೇಸ್ ಹಾಕಲು ಮುಂದಾಗಿದ್ದಾರೆ.

    ಕನ್ನಡದ ಸಿನಿಮಾ ತಾರೆಯರು ವರ್ಷಕ್ಕೆ ಲಕ್ಷ ಲಕ್ಷ ಸಂಪಾದಿಸುತ್ತಾರೆ. ಇಷ್ಟೆಲ್ಲ ಸಂಪಾದಿಸಿದರೂ ವಾರ್ಷಿಕ 2500 ರೂಪಾಯಿ ವೃತ್ತಿ ತೆರಿಗೆ ಮಾತ್ರ ಪಾವತಿಸಿಲ್ಲ. ಈ ಹಿಂದೆ ಪಬ್ಲಿಕ್ ಟಿವಿ ತೆರಿಗೆ ಕಟ್ಟದೇ ಇರುವ ಸ್ಯಾಂಡಲ್‍ವುಡ್ ತಾರೆಯರ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತ ಕೆಲವರು ವೃತ್ತಿ ತೆರಿಗೆ ಪಾವತಿ ಮಾಡಿದ್ದರು.

    ನಟ ಜಗ್ಗೇಶ್ ವೃತ್ತಿ ತೆರಿಗೆಯನ್ನ ದಂಡದ ಸಮೇತ ಪಾವತಿಸಿ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಕಟ್ಟಿ ಅಂತ ಟ್ವಿಟರ್‍ನಲ್ಲಿ ಜಾಗೃತಿ ಮೂಡಿಸಿದ್ದರು. ಪಬ್ಲಿಕ್ ಟಿವಿ ವರದಿ ಬಳಿಕ ಸುಮಾರು 10 ಲಕ್ಷ ರೂ. ತೆರಿಗೆ ಸಂಗ್ರಹವಾಗಿದೆ ಎಂದು ವೃತ್ತಿ ತೆರಿಗೆಯ ಜಂಟಿ ಆಯುಕ್ತರಾದ ರಾಮನ್ ಕೆ ತಿಳಿಸಿದ್ದಾರೆ.

    ನಟಿಯರ ಪಟ್ಟಿ:
    ರಮ್ಯಾ, ರಾಧಿಕಾ ಪಂಡಿತ್, ಪ್ರಿಯಾಂಕ ಉಪೇಂದ್ರ, ರಕ್ಷಿತಾ ಪ್ರೇಮ್, ರಚಿತಾ ರಾಮ್, ರಾಗಿಣಿ ದ್ವಿವೇದಿ, ಅಮೂಲ್ಯ, ಮಾಲಾಶ್ರೀ, ಭಾವನಾ, ಪೂಜಾ ಗಾಂಧಿ, ಅನು ಪ್ರಭಾಕರ್.

    ನಟರ ಪಟ್ಟಿ:
    ಉಪೇಂದ್ರ, ಗಣೇಶ್, ಯಶ್, ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ದೇವರಾಜ್, ಪ್ರಜ್ವಲ್ ದೇವರಾಜ್, ದಿಗಂತ್, ಪ್ರೇಮ್, ವಿನೋದ್ ಪ್ರಭಾಕರ್, ಚಿರು ಸರ್ಜಾ

    ನಟಿ, ನಟರ ಜೊತೆ ಕಾಮಿಡಿ ಸ್ಟಾರ್‍ಗಳಾದ ಚಿಕ್ಕಣ್ಣ, ಸಾಧು ಕೋಕಿಲಾ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಇವರೂ ವೃತ್ತಿ ತೆರಿಗೆ ಕಟ್ಟಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಕೇಸ್ ಹಾಕುವ ಮುನ್ನ ಸ್ಯಾಂಡಲ್‍ವುಡ್ ತಾರೆಗಳು ಎಚ್ಚೆತ್ತುಕೊಂಡು ತೆರಿಗೆ ಪಾವತಿಸಿದರೆ ಒಳ್ಳೆಯದು. ಇಲ್ಲದಿದ್ದರೆ, 2500 ರೂಪಾಯಿಗಾಗಿ ಮುಜುಗರ ಅನುಭವಿಸಬೇಕಾದಿತು.

    ಬೆಂಗಳೂರು ಮಹಾನಗರ ಪಾಲಿಕೆ ಒಂದ್ರಲ್ಲಿಯೇ ತಿಂಗಳಿಗೆ 50 ರಿಂದ 55 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತೆ. ಅದ್ರೇ ಚಿತ್ರರಂಗದ ಅನೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ಅವ್ರಿಗೆಲ್ಲಾ ಇ-ಮೇಲ್‍ನಲ್ಲೂ ನೋಟಿಸ್ ನೀಡಿದ್ದಾರೆ. ಈ ವಿಚಾರದಲ್ಲಿ ಟೈಗರ್ ಪ್ರಭಾಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾವು ಬದುಕಿರುವವರೆಗೂ ವೃತ್ತಿ ತೆರಿಗೆಯನ್ನು ಪ್ರತ ವರ್ಷ ತಪ್ಪದೇ ಪಾವತಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: 2500 ರೂ. ಕಟ್ಟದೆ ನೋಟಿಸ್ ಪಡೆದ ಸ್ಯಾಂಡಲ್‍ವುಡ್ ನಟ-ನಟಿಯರು

  • 2500 ರೂ. ಕಟ್ಟದೆ ನೋಟಿಸ್ ಪಡೆದ ಸ್ಯಾಂಡಲ್‍ವುಡ್ ನಟ-ನಟಿಯರು

    2500 ರೂ. ಕಟ್ಟದೆ ನೋಟಿಸ್ ಪಡೆದ ಸ್ಯಾಂಡಲ್‍ವುಡ್ ನಟ-ನಟಿಯರು

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್‍ಗಳಿಗೆ ತೆರಿಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ವೃತ್ತಿ ತೆರಿಗೆ ಪಾವತಿಸದ ಸ್ಟಾರ್ ನಟನಟಿಯರಿಗೆ ತೆರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಘಟಾನುಘಟಿ ನಟನಟಿಯರಿಂದ ಹಿಡಿದು ಹಲವಾರು ಕಿರುತೆರೆ ಸ್ಟಾರ್ಸ್ ವೃತ್ತಿ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 800 ಕ್ಕೂ ಹೆಚ್ಚು ಕಲಾವಿದರಿಗೆ ತೆರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ನೋಟಿಸ್ ಪಡೆದ ನಟರು: ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ರಾಕಿಂಗ್ ಸ್ಟಾರ್ ಯಶ್, ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ಶ್ರೀ ಮುರಳಿ, ವಿಜಯ್ ರಾಘವೇಂದ್ರ, ದೇವರಾಜ್, ಪ್ರಜ್ವಲ್ ದೇವರಾಜ್, ಶರಣ್, ದೂದ್‍ಪೇಡ ದಿಗಂತ್, ಲೂಸ್ ಮಾದ ಯೋಗಿ, ಜೋಗಿ ಪ್ರೇಮ್, ದುನಿಯಾ ವಿಜಿ, ವಿನೋದ್ ಪ್ರಭಾಕರ್, ಚಿರು ಸರ್ಜಾ

    ನೋಟಿಸ್ ಪಡೆದ ನಟಿಯರು: ರಾಧಿಕ ಪಂಡಿತ್, ಪ್ರಿಯಾಂಕ ಉಪೇಂದ್ರ, ಸ್ಯಾಂಡಲ್‍ವುಡ್ ಕ್ವೀನ್ ರಮ್ಯ, ರಕ್ಷಿತಾ ಪ್ರೇಮ್, ರಚಿತಾ ರಾಮ್, ರಾಗಿಣಿ ದ್ವಿವೇದಿ, ಅಮೂಲ್ಯ, ಮಾಲಾಶ್ರೀ, ಭಾವನ, ಪೂಜಾ ಗಾಂಧಿ, ಶೃತಿ, ಅನು ಪ್ರಭಾಕರ್

    ಇವರಷ್ಟೇ ಅಲ್ಲದೆ ಹಾಸ್ಯ ನಟರಾದ ಚಿಕ್ಕಣ್ಣ, ಸಾಧು ಕೋಕಿಲಾ, ರಂಗಾಯಣ ರಘು, ರವಿಶಂಕರ್, ಬುಲೆಟ್ ಪ್ರಕಾಶ್ ಹಾಗೂ ಹಿರಿಯ ನಟ ನಟಿಯರಾದ ಅವಿನಾಶ್, ಸುಮಲತಾ ಅಂಬರೀಶ್ ಕೂಡ ತೆರಿಗೆಯನ್ನ ಕಟ್ಟದೆ ನೋಟಿಸ್ ಪಡೆದಿದ್ದಾರೆ.

    ನೋಟಿಸ್ ಪಡೆದ ಮೇಲೆ ನೇರವಾಗಿ ಕಚೇರಿಗೆ ಬಂದು ತೆರಿಗೆ ಜೊತೆಗೆ ದಂಡ ಮತ್ತು ಬಡ್ಡಿಯನ್ನ ನಟ ಜಗ್ಗೇಶ್, ಮಾಸ್ಟರ್ ಆನಂದ್, ನಿರೂಪಕಿ ಅನುಶ್ರೀ, ರಾಜೇಶ್ ಕೃಷ್ಣನ್, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ ಮತ್ತಿತರೆ ನಟರು ಪಾವತಿ ಮಾಡಿದ್ದಾರೆ. ಎಜಿ ವರದಿಯ ಪ್ರಕಾರ ಕೇವಲ 70 ಜನ ಮಾತ್ರ ಇಲ್ಲಿವರೆಗೆ ವೃತ್ತಿ ತೆರಿಗೆ ಪಾವತಿಸಿದ್ದಾರಂತೆ.

    ಕರ್ನಾಟಕದಲ್ಲಿ ಎಲ್ಲಿ ಯಾವುದೇ ವೃತ್ತಿ ಮಾಡ್ತಿದ್ರೂ ವೃತ್ತಿ ತೆರಿಗೆ ಅಂತ ವಾರ್ಷಿಕವಾಗಿ 2,500 ರೂಪಾಯಿ ಪಾವತಿಸಲೇಬೇಕು. ಆದ್ರೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು, ನಿರೂಪಕರು, ಗಾಯಕರು, ನಿರ್ದೇಶಕರು, ವಿತಕರು ವೃತ್ತಿ ತೆರಿಗೆಯನ್ನ ಕಳೆದ ಐದು ವರ್ಷದಿಂದ ಕಟ್ಟಿಲ್ಲ ಎಂದು ವೃತ್ತಿ ತೆರಿಗೆ ಜಂಟಿ ಆಯುಕ್ತರಾದ ಕೆ ರಾಮನ್ ಹೇಳಿದ್ದಾರೆ.

    ಬೆಂಗಳೂರು ಮಹಾನಗರ ಪಾಲಿಕೆ ಒಂದ್ರಲ್ಲಿಯೇ ತಿಂಗಳಿಗೆ 50 ರಿಂದ 55 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತೆ. ಅದ್ರೇ ಚಿತ್ರರಂಗದ ಅನೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ಅವ್ರಿಗೆಲ್ಲಾ ಇ-ಮೇಲ್‍ನಲ್ಲೂ ನೋಟಿಸ್ ನೀಡಿದ್ದಾರೆ. ಈ ವಿಚಾರದಲ್ಲಿ ಟೈಗರ್ ಪ್ರಭಾಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾವು ಬದುಕಿರುವವರೆಗೂ ವೃತ್ತಿ ತೆರಿಗೆಯನ್ನ ಪ್ರತೀ ವರ್ಷ ತಪ್ಪದೇ ಕಟ್ಟಿದ್ದಾರೆ ಅಂತ ತಿಳಿದುಬಂದಿದೆ.

    https://www.youtube.com/watch?v=jogPlQH6UmQ