Tag: prof

  • ಭಗವಾನ್ ಬಾಯಿಗೆ ಬೀಗ ಹಾಕಿದ ಪೊಲೀಸರು!

    ಭಗವಾನ್ ಬಾಯಿಗೆ ಬೀಗ ಹಾಕಿದ ಪೊಲೀಸರು!

    ಮೈಸೂರು: ಯಾವುದೇ ಹೇಳಿಕೆ ನೀಡದಂತೆ ವಿಚಾರವಾದಿ ಕೆ.ಎಸ್ ಭಗವಾನ್ ಅವರಿಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

    ಭಗವಾನ್ ಈಗಾಗಲೇ ಶ್ರೀ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದರಿಂದ ಭಗವಾನ್ ಮನೆಯ ಮುಂದೆ ಹಲವರು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಭಗವಾನ್ ಮನೆ ಮುಂದೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದೀಗ ಪೊಲೀಸರು ಭಗವಾನ್ ಅವರಿಗೆ ಯಾವುದೇ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ ಎಂದ ಮೂಲಗಳು ತಿಳಿಸಿವೆ.

    ಪೊಲೀಸರು ಭಗವಾನ್ ಮನೆಯ ಬಳಿ ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ. ರಾಮ ಮಂದಿರ ಯಾಕೆ ಬೇಡ ಎನ್ನುವ ಪುಸ್ತಕದ ಮೂಲಕ ರಾಮ, ಆಂಜನೇಯ, ಸೀತೆಯ ಬಗ್ಗೆ ನಿಂದಿಸಿದ ಪ್ರೊಫೆಸರ್ ಭಗವಾನ್ ಸದ್ಯ ತೀವ್ರ ಚರ್ಚೆಗೀಡಾಗಿದ್ದರು.

    ಜೀವಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಭಗವಾನ್ ಭದ್ರತೆಗಾಗಿ ರಾಜ್ಯ ಸರ್ಕಾರ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಸಶಸ್ತ್ರ ಮೀಸಲು ಪಡೆಯ ಮೂವರು ಪೊಲೀಸರು ಮತ್ತು ಓರ್ವ ಪೊಲೀಸ್ ಅಧಿಕಾರಿ ಭಗವಾನ್ ಮನೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಭಗವಾನ್ ಹೋದ ಬಂದ ಕಡೆಯೆಲ್ಲಾ ಓರ್ವ ಗನ್‍ಮ್ಯಾನ್ ಇರುತ್ತಾರೆ. ಮೈಸೂರಿನಲ್ಲಿರುವ ಭಗವಾನ್ ಮನೆಗೆ ಸರ್ಕಾರ ಕಡೆಯಿಂದಲೇ ಸಿಸಿಟಿವಿ ಅಳವಡಿಸಲಾಗಿದೆ. ಅದರ ನಿರ್ವಹಣೆಯನ್ನೂ ಸರ್ಕಾರವೇ ಮಾಡುತ್ತಿದೆ.

    ಈ ಬಗ್ಗೆ ಭಗವಾನ್ ಅವರನ್ನು ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, “ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಇದು ಸರ್ಕಾರ ಮತ್ತು ಸದರಿ ಇಲಾಖೆಗೆ ಬಿಟ್ಟ ವಿಷಯವಾಗಿದೆ. ಸಂವಿಧಾನ ಪ್ರಕಾರವಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಭದ್ರತೆಗೆ ಖರ್ಚು ಆಗುತ್ತಿರುವ ಹಣದ ಬಗ್ಗೆ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಷಯ. ನನಗೆ ಈ ವಿಚಾರದ ಬಗ್ಗೆ ಕೇಳಬೇಡಿ” ಎಂದು ಹಾರಿಕೆಯ ಉತ್ತರ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಹಿತ್ಯ ಸಮ್ಮೇಳನದಲ್ಲಿ ಟಾಂಗ್ ಕೊಟ್ಟ ಬೆನ್ನಲ್ಲೇ ಅನಂತ್ ಕುಮಾರ್ ಗೆ ಚಂಪಾ ತಿರುಗೇಟು

    ಸಾಹಿತ್ಯ ಸಮ್ಮೇಳನದಲ್ಲಿ ಟಾಂಗ್ ಕೊಟ್ಟ ಬೆನ್ನಲ್ಲೇ ಅನಂತ್ ಕುಮಾರ್ ಗೆ ಚಂಪಾ ತಿರುಗೇಟು

    ಮೈಸೂರು: ನಾನು ಯಾವ ಪಕ್ಷಕ್ಕೂ ಮತ ಹಾಕಿ ಅಂದಿಲ್ಲ. ನಾನು ಸೆಕ್ಯೂಲರ್ ಪಕ್ಷಕ್ಕೆ ಮತ ಹಾಕಿ ಅಂದಿರೋದು. ನಾನು ಯಾವ ಪಕ್ಷದ ಪರ ಇಲ್ಲ ಅಂತ ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ ಹೇಳಿದ್ದಾರೆ.

    83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ತೆರೆ ಬಿದ್ದಿದ್ದು, ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಂಪಾ, ಸೆಕ್ಯುಲರ್ ಪದ ಕೇಳಿದ್ರೆ ಅವರು ಚಿಕ್ಕ ಮಕ್ಕಳಂತೆ ಉಚ್ಚೆ ಊಯ್ದುಕೊಳ್ಳುತ್ತಾರೆ. ಕನ್ನಡ, ನೆಲ, ಜಲದ ವಿಚಾರವಾಗಿ ಕೆಲಸ ಮಾಡುವ ಪ್ರಾದೇಶಿಕ ಜಾತ್ಯಾತೀತ ಪಕ್ಷ ಬೇಕು. ಜಾತ್ಯಾತೀತ ಅನ್ನೋ ಪದವೇ ಸಚಿವ ಅನಂತಕುಮಾರ್ ಅವರಿಗೆ ಅರ್ಥವಾಗಿಲ್ಲ. ಅವರನ್ನು ರಿಪೇರಿ ಮಾಡೋದು ನಮ್ಮ ಕೆಲಸವಲ್ಲ. ಅವರನ್ನು ರಿಪೇರಿ ಮಾಡುವ ಪ್ರಯತ್ನವೂ ವ್ಯರ್ಥ. ಕನ್ನಡದ ಭಾಷೆ, ನೆಲ, ಜಲದ ವಿಚಾರದಲ್ಲಿ ಇದುವರೆಗೂ ಪಕ್ಷಾತೀತವಾದ ಒಂದೇ ಒಂದು ಕೆಲಸ ಆಗಿಲ್ಲ ಎಂದು ಅನಂತ ಕುಮಾರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ರು.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತಕುಮಾರ್ ಅವರ ಭಾಷಣದಲ್ಲಿ ಪವಿತ್ರ ಗಂಗಾ ಜಲವೂ ಇತ್ತು. ಮಲೀನ ಗಟಾರದ ನೀರೂ ಇತ್ತು. ಒಳ್ಳೆಯದನ್ನು ನಾನು ಸ್ವೀಕರಿಸಿದ್ದೇನೆ. ಕೆಟ್ಟದ್ದನ್ನು ಬಿಟ್ಟುಬಿಡೋಣ. ನಾನು ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಸ್ವೀಕರಿಸುತ್ತೇನೆ. ಅವರ ಭಾಷಣದ ಶೇ.50ರಷ್ಟನ್ನು ನಾನು ಸ್ವೀಕರಿಸಿದ್ದೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಉತ್ತರ ಕರ್ನಾಟಕದವರು. ಅವರ ತಾಯಿ ಉತ್ತಮ ವ್ಯಕ್ತಿ. ಅವರ ಪರಂಪರೆಯನ್ನು ಅನಂತ್ ಕುಮಾರ್ ಮುಂದುವರಿಸಿದ್ದಾರೆ ಅಂದ್ರು.

    ಇನ್ನು ಅನಂತ್ ಕುಮಾರ್ ಹೋಗುವಾಗ ಚಂಪಾ ನಮ್ ಮೇಷ್ಟ್ರು ಅಂದ್ರು. ಅನಂತ್ ಕುಮಾರ್ ನನ್ನ ವಿದ್ಯಾರ್ಥಿ ಆಗಿರಬಹುದು. ಅದನ್ನ ನೆನಪಿಟ್ಟಿದ್ದಕ್ಕೆ ನಾನು ಋಣಿ. ಕನ್ನಡದ ಬಗ್ಗೆ ಕಳಕಳಿಯಿಂದ ಮಾತಾಡಿದ್ದು ಖುಷಿ ಕೊಡ್ತು. ಇದು ಏಕಮುಖ ವೇದಿಕೆ ಅಲ್ಲ. ಆದ್ರೆ ಕೆಲವರು ತಾವು ಏನು ಹೇಳಬೇಕೋ ಹೇಳಿ, ಬೇರೆಯವರು ಏನು ಹೇಳ್ತಾರೆ ಎಂಬುದನ್ನ ಕೇಳುವ ತಾಳ್ಮೆ ಇರದೆ ಹೋಗ್ತಾರೆ. ಅನಂತ್ ಕುಮಾರ್, ಪ್ರತಾಪ್ ಹೋದ್ರೂ ಅವರ ಕಣ್ಣು, ಕಿವಿ ಇಲ್ಲೇ ಇವೆ. ನನ್ನ ಮಾತು ವಾಟ್ಸಪ್, ಫೇಸ್ ಬುಕ್, ಟಿವಿ ಮೂಲಕ ಅನಂತ್ ಕುಮಾರ್ ಕಿವಿಗೆ ಬೀಳುತ್ತೆ ಅಂತ ನೇರವಾಗಿಯೇ ಟಾಂಗ್ ನೀಡಿದ್ರು.

    ಸಚಿವರು ಏನ್ ಹೇಳಿದ್ದರು?: ಈ ವೇದಿಕೆ ರಾಜಕೀಯ ಭಾಷಣ ಮಾಡಲು ಅಲ್ಲ. ಯಾರಿಗೆ ಮತ ಹಾಕಬೇಕು ಅನ್ನುವುದನ್ನು ಹೇಳುವುದಕ್ಕೆ ಬೇರೆ ವೇದಿಕೆಗಳಿವೆ, ಅಲ್ಲಿ ಹೇಳಿ. ಕನ್ನಡ ಸಮ್ಮೇಳನದಲ್ಲಿ ಕನ್ನಡದ ಬಗ್ಗೆ ಮಾತನಾಡಿ. ಇಡೀ ದೇಶವೇ ಸಮ್ಮೇಳವನ್ನು ನೋಡುತ್ತಿದೆ. ಹೀಗಿರುವಾಗ ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳದಲ್ಲಿ ಡೋಂಗಿತನಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ವೇದಿಕೆಯ ಮೌಲ್ಯ ಹಾಳಾಗುತ್ತದೆ ಎಂದು ಅನಂತ್ ಕುಮಾರ್ ನೇರವಾಗಿ ಹೇಳಿದ್ದರು.