Tag: Priyanka Mary Francis

  • ಹಾಸನ ಜಿಲ್ಲಾಧಿಕಾರಿ ವರ್ಗಾವಣೆ

    ಹಾಸನ ಜಿಲ್ಲಾಧಿಕಾರಿ ವರ್ಗಾವಣೆ

    ಹಾಸನ: ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಹಾಸನ ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಕ್ರಂ ಪಾಷಾ ಅವರು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಂ ಪಾಷಾ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆಗ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಹಾನಸ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು. ಈ ಹಿಂದೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆಯಲ್ಲಿ ನಿರ್ದೇಶಕರಾಗಿ ಪ್ರಿಯಾಂಕಾ ಮೇರಿ ಕಾರ್ಯನಿರ್ವಹಿಸಿದ್ದರು.

    ಇದೀಗ ಮತ್ತೊಮ್ಮೆ ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂಪಾಷಾ ಬಂದಿದ್ದಾರೆ. ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಚುನಾವಣಾ ಮಾರ್ಗಸೂಚಿ ಪಾಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿತ್ತು. ರೋಹಿಣಿ ಸಿಂಧೂರಿ ಅವರವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಬಳಿಕ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಜಿಲ್ಲಾಧಿಕಾರಿ ಸ್ಥಾನಕ್ಕೆ ಅಕ್ರಂ ಪಾಷಾ ಅವರನ್ನು ನೇಮಿಸಲಾಗಿತ್ತು.

    ಅಕ್ರಂಪಾಷಾ ಅವರು ಫೆಬ್ರವರಿ 22 ರಂದು ಹಾಸನಕ್ಕೆ ವರ್ಗಗೊಂಡು ಆಗಮಿಸಿದ್ದರು. ಆದರೆ ಒಂದು ತಿಂಗಳ ಅವಧಿಯಲ್ಲೇ ಪಾಷಾರನ್ನು ಕೂಡ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.

    ವರ್ಗಾವಣೆಗೆ ಕಾರಣವೇನು?
    ಬಿಜೆಪಿ ಶಾಸಕ ಪ್ರೀತಂಗೌಡ ಚುನಾವಣಾ ಆಯೋಗಕ್ಕೆ ದೂರು ನೀಡಿ ಡಿಸಿ ಅವರನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಈ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿತ್ತು.

  • ಪ್ರಜ್ವಲ್ ರೇವಣ್ಣನ ಅತಂಕವನ್ನು ದೂರ ಮಾಡಿದ ಡಿಸಿ ಪತ್ರ

    ಪ್ರಜ್ವಲ್ ರೇವಣ್ಣನ ಅತಂಕವನ್ನು ದೂರ ಮಾಡಿದ ಡಿಸಿ ಪತ್ರ

    ಹಾಸನ: ಚುನಾವಣಾ ಆಯೋಗಕ್ಕೆ ಹಾಸನ ಡಿಸಿ ಬರೆದ ಪತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಅಪೂರ್ಣ ಅಫಿಡವಿಟ್ ಸಲ್ಲಿಕೆ ಆರೋಪ ಪ್ರಕರಣದಲ್ಲಿ ಪಾರಾಗಿದ್ದಾರೆ.

    ಬಿಜೆಪಿ ಅಭ್ಯರ್ಥಿ ಎ. ಮಂಜು ಅವರು ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆಯ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಇದರ ಬಗ್ಗೆ ತನಿಖೆ ಆಗಬೇಕು ಎಂದು ಚುನಾವಣೆ ಅಯೋಗಕ್ಕೆ ದೂರು ನೀಡಿದ್ದರು.

    ಈ ದೂರಿನ ಅನ್ವಯ ಪ್ರಜಾ ಪ್ರಾತಿನಿಧ್ಯ ಕಾಯಿದೆ 1951 ಕಲಂ 125ಚಿ ಪ್ರಕಾರ ಕ್ರಮ ಕೈಗೊಳ್ಳುವಂತೆ ಚುನಾವಣೆ ಆಯೋಗ ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಪತ್ರ ಬರೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ಉತ್ತರ ನೀಡಿರುವ ಡಿಸಿ ಚುನಾವಣಾ ಆಯೋಗದ ನಿರ್ದೇಶನಗಳನ್ನೇ ಉಲ್ಲೇಖಿಸಿ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಫಿಡವಿಟ್‍ನಲ್ಲಿ ತಪ್ಪು ಮಾಹಿತಿ ಬಗ್ಗೆ ಚುನಾವಣಾ ಅಧಿಕಾರಿ ನೇರ ಕ್ರಮ ಅಸಾಧ್ಯ. ಈ ಬಗ್ಗೆ ದೂರುದಾರರೇ ಸೂಕ್ತ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು ಎಂದು ಮರು ಪತ್ರ ಬರೆದಿದ್ದಾರೆ.

    ಅರೋಪವೇನು?
    ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಪ್ರಜ್ವಲ್ ರೇವಣ್ಣ ಅವರು ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಅವರು 7 ಕೋಟಿಗೂ ಹೆಚ್ಚು ಆದಾಯ ತೋರಿಸಿದ್ದಾರೆ. ಆದರೆ ಕೇವಲ ಮೂರು ಕೋಟಿಯಷ್ಟು ಆದಾಯದ ಮೂಲ ತೋರಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು 23 ಲಕ್ಷ ಪ್ರಜ್ವಲ್‍ಗೆ ಸಾಲ ನೀಡಿರೋದಾಗಿ ಹೇಳಿದ್ದಾರೆ. ಆದರೆ ಪ್ರಜ್ವಲ್ ಅಫಿಡವಿಟ್‍ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಎ. ಮಂಜು ಆರೋಪಿಸಿದ್ದರು.

  • ರೇವಣ್ಣ ಆರೋಪಕ್ಕೆ ತಿರುಗೇಟು ಕೊಟ್ಟ ಹಾಸನ ಡಿಸಿ

    ರೇವಣ್ಣ ಆರೋಪಕ್ಕೆ ತಿರುಗೇಟು ಕೊಟ್ಟ ಹಾಸನ ಡಿಸಿ

    ಹಾಸನ: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದು ಕೆಲಸ ಮಾಡುತ್ತಿದ್ದಾರೆಂಬ ಆರೋಪಕ್ಕೆ ಪ್ರಸ್ತುತ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೇನೆ. ಯಾರಿಂದಲೂ ಸಲಹೆ ಪಡೆಯುವ ಅವಶ್ಯಕತೆ ನನಗಿಲ್ಲ ಎಂದು ಪ್ರಿಯಾಂಕ ಅವರು ಹೇಳುವ ಮೂಲಕ ಸಚಿವ ರೇವಣ್ಣರ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ರೋಹಿಣಿಯವರು ನನ್ನ ಬ್ಯಾಚ್ ಮೇಟ್, ಹೀಗಾಗಿ ಅವರನ್ನು ಭೇಟಿ ಮಾಡುತ್ತೇನೆ. ಅದರಲ್ಲಿ ವಿಶೇಷ ಏನಿದೆ? ನಾನು ರೋಹಿಣಿ ಸಿಂಧೂರಿ ಅವರನ್ನು ಎರಡು ದಿನ ಜೊತೆಯಲ್ಲಿ ಇಟ್ಟುಕೊಂಡಿರಲಿಲ್ಲ. ಸಚಿವರ ಆರೋಪದ ಬಗ್ಗೆ ತಮಗೆ ಗೊತ್ತಿಲ್ಲ ಎನ್ನುತ್ತಲೇ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪರೋಕ್ಷ ತಿರುಗೇಟು ನೀಡಿದರು.

    ಆರೋಪವೇನು?
    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಚಿವ ರೇವಣ್ಣ ಅವರು, ಚುನಾವಣೆ ಮುಕ್ತವಾಗಿ ನಡೆದಿದೆ ಎಂದು ಹೇಳಿರುವ ಜಿಲ್ಲಾಧಿಕಾರಿಗಳೇ, 10 ದಿನಗಳ ಬಳಿಕ ಚುನಾವಣಾ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ಏಕೆ ದೂರು ಪಡೆದುಕೊಂಡರು. ಈ ಬಗ್ಗೆ ತನಿಖೆ ಆಗಬೇಕು, ಅಲ್ಲದೇ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು. ಅವರು ವರ್ಗಾವಣೆ ಆಗಿ ಬಂದ ಬಳಿಕ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ಮುಕ್ತ ತನಿಖೆ ನಡೆಸಬೇಕಿದೆ. ಜಿಲ್ಲಾಧಿಕಾರಿಗಳು ಬಿಜೆಪಿ ಪಕ್ಷದ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಈ ಕುರಿತು ಶೀಘ್ರವಾಗಿ ಆಯೋಗಕ್ಕೆ ಲಿಖಿತ ಮನವಿ ನೀಡಲಾಗುವುದು ಎಂದಿದ್ದರು.

    ಇದೇ ವೇಳೆ ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿಸಿ ಅವರು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿದ್ದರು. ಅವರಿಂದ ನಿರ್ದೇಶನ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

  • ಉಡುಪಿಯಲ್ಲಿ ದಾಖಲೆ ಇಲ್ಲದ ಎರಡು ಚೀಲದಲ್ಲಿದ್ದ 1.65 ಕೋಟಿ ರೂ. ವಶ

    ಉಡುಪಿಯಲ್ಲಿ ದಾಖಲೆ ಇಲ್ಲದ ಎರಡು ಚೀಲದಲ್ಲಿದ್ದ 1.65 ಕೋಟಿ ರೂ. ವಶ

    ಉಡುಪಿ: ಶಿವಮೊಗ್ಗ ಉಪಚುನಾವಣೆ ಹಿನ್ನೆಲೆಯಲ್ಲಿ ಕೋಟಿ ಕೋಟಿ ಕಾಂಚಾಣ ಹರಿದಾಡುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಇಂತಹ ಆರೋಪಕ್ಕೆ ಪುಷ್ಟಿ ನೀಡುವಂತೆ ಉಡುಪಿ ರೈಲ್ವೇ ರಕ್ಷಣಾ ದಳ ಪೊಲೀಸರು ದಾಖಲೆ ಇಲ್ಲದ 1.65 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.

    1.65 ಕೋಟಿ ರೂ. ಮೊತ್ತ ಶಿವಮೊಗ್ಗ ಉಪ ಚುನಾವಣೆ ಹಂಚಿಕೆಗೆ ಬಂದಿತ್ತಾ ಎಂಬ ಸಂಶಯ ಶುರುವಾಗಿದೆ. ಉಡುಪಿ ರೈಲ್ವೆ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ರಾಜಸ್ಥಾನದ ಇಬ್ಬರು ಹಾಗೂ ಕಣ್ಣೂರಿನ ಮತ್ತೊರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಹಣ ವಶಕ್ಕೆ ಪಡೆದು, ರೈಲ್ವೇ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

    ವಶದಲ್ಲಿರುವ ಮೂರು ಮಂದಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆರೋಪಿಗಳು ರಾಜಸ್ಥಾನದಿಂದ ಮುಂಬೈ ಮೂಲಕ ಕೇರಳದ ಎರ್ನಾಕುಲಂಗೆ ಟಿಕೆಟ್ ಪಡೆದಿದ್ದರು ಎನ್ನಲಾಗಿದೆ. ನೇತ್ರಾವತಿ ಏಕ್ಸ್ ಪ್ರೆಸ್ ರೈಲಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ಕುಮುಟಾದಲ್ಲಿ ಪೊಲೀಸರಿಗೆ ಅನುಮಾನ ಬಂದಿದೆ. ವಿಚಾರಿಸಿದಾಗ ದುಡ್ಡಿರುವ ಎರಡು ಚೀಲಗಳು ಪತ್ತೆಯಾಗಿದೆ. ರಾಜಸ್ಥಾನದಿಂದ ಬಂದ ಹಣ ಪಡೆಯಲು ಕಣ್ಣೂರಿನ ವ್ಯಕ್ತಿ ಮಂಗಳೂರಿಗೆ ಬಂದಿದ್ದ. ಆತನನ್ನು ಉಡುಪಿಗೆ ಕರೆಸಿ ವಶಕ್ಕೆ ಪಡೆಯಲಾಗಿದೆ. ರೈಲ್ವೇ ಪೊಲೀಸರು ಸಂಶಯ ಬಂದು ಟಿಕೆಟ್ ಕೇಳಿದಾಗ ಅಕ್ರಮ ಹಣಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಉಡುಪಿ, ಮಂಗಳೂರಿನ ಐಟಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಉಡುಪಿ ರೈಲ್ವೇ ರಕ್ಷಣಾ ದಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಉಪಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ತೀವ್ರ ವಿಚಾರಣೆ ಮಾಡಿದ್ದಾರೆ.

    ಆರೋಪಿಗಳಲ್ಲಿ ಇಬ್ಬರು ಜಮೀನು ಖರೀದಿಗಾಗಿ ಹಣ ತಂದಿರುವ ಮಾಹಿತಿ ನೀಡಿದ್ದಾರೆ. ಕಣ್ಣೂರಿನ ವ್ಯಕ್ತಿ ಮನೆ ಬಳಕೆ ವಸ್ತು ಖರೀದಿಗಾಗಿ ಹಣ ಸಾಗಿಸಲಾಗಿದೆ ಎಂದು ಹೇಳಿದ್ದಾನೆ. ಬೇರೆ ಬೇರೆ ಉತ್ತರ,  ಅಧಿಕಾರಿಗಳು ಹಾಗೂ ಪೊಲೀಸರನ್ನು ಮತ್ತಷ್ಟು ಸಂಶಯಕ್ಕೆ ತಳ್ಳಿದೆ.

    ಸಂಶಯಕ್ಕೆ ಎಡೆ: ದಾಖಲೆಯಿಲ್ಲದೆ ಇಷ್ಟು ದೊಡ್ಡ ಮೊತ್ತ ಸಾಗಿಸುವುದು ತಪ್ಪು. ಉಪ ಚುನಾವಣೆ ಹಿನ್ನೆಲೆಯಲ್ಲಿ ತನಿಖೆ ತೀವ್ರವಾಗಿ ನಡೆಯುತ್ತಿದೆ. ವಶದಲ್ಲಿರುವ ಸಂಶಯಾಸ್ಪದ ವ್ಯಕ್ತಿಗಳು ಬೇರೆ ಬೇರೆ ಕಾರಣ ಕೊಡುತ್ತಿರುವುದು ಕೂಡಾ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳೂರು ಐಟಿ ಅಧಿಕಾರಿಗಳು ಹಣ ವಶಕ್ಕೆ ಪಡೆಯುತ್ತಾರೆ. ಸೂಕ್ತ ದಾಖಲೆ ಕೊಡಲು ಅವಕಾಶ ಕೂಡ ಇದೆ ಎಂದು ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಉಡುಪಿ: ಇದು ಅಂತ್ಯ ಅಲ್ಲ.., ಮರಳುಗಾರಿಕೆ ವಿರುದ್ಧದ ಹೊರಾಟದ ಆರಂಭ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳುವ ಮೂಲಕ ಮರಳು ಕಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಜಿಲ್ಲಾಧಿಕಾರಿಗಳು ಮಾತನಾಡಿ, ಅಕ್ರಮದ ವಿರುದ್ಧದ ಹೋರಾಟದ ಆರಂಭ ಮಾಡಿದ್ದೇವೆ. ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ- ಎಸಿಯ ಮೇಲೆ ಇಂತಹ ಅಮಾನವೀಯ ಘಟನೆ ಉಡುಪಿಯಂತಹ ಜಿಲ್ಲೆಯಲ್ಲಿ ನಡೆದದ್ದು ವಿಷಾದನೀಯ. ಇದರ ಹಿಂದೆ ಮರಳು ಮಾಫಿಯಾದ ಕೈವಾಡ ಇರಬಹುದು. ಪೊಲೀಸರ ತನಿಖೆಯಲ್ಲಿ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದರು. ನಿನ್ನೆ ರಾತ್ರಿ ಕಂಡ್ಲೂರಿನ ಭಯಾನಕ ವಾತಾವರಣ ನನ್ನನ್ನು ಕೆಲಕಾಲ ಕಂಗೆಡುವಂತೆ ಮಾಡಿತು ಎಂದು ತಡರಾತ್ರಿಯ ಭಯಾನಕ ಸನ್ನಿವೇಶವನ್ನು ನೆನಪಿಸಿಕೊಂಡರು.

    ಸ್ಥಳೀಯ ಪೊಲೀಸ್ ಠಾಣೆಗಳಿಗೆ, ತಹಶೀಲ್ದಾರ್, ಎಸಿ ಕಚೇರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ ದಾಳಿ ಮಾಡಿದ ಎಲ್ಲಾ ಪ್ರಕರಣಗಳು ಫೇಲ್ ಆಗಿತ್ತು. ಹೀಗಾಗಿ ಈ ಬಾರಿ ಗೌಪ್ಯವಾಗಿ ದಾಳಿ ನಡೆಸಿದ್ದೇವೆ ಎಂದರು.

    ಕುಂದಾಪುರದ ತನಕ ಸುಮಾರು 20 ಬೈಕ್‍ಗಳಲ್ಲಿ ನಮ್ಮನ್ನು ಹಿಂಭಾಲಿಸಿಕೊಂಡು ದುಷ್ಕರ್ಮಿಗಳು ಬಂದರು. ಅವರಿಂದ ತಪ್ಪಿಸಿಕೊಂಡು ಉಡುಪಿಯ ತನಕ ಬಂದಿದ್ದೇವೆ. ಈ ಘಟನೆ ದುರಾದೃಷ್ಟಕರ ಎಂದರು. ಉಡುಪಿ ಜಿಲ್ಲೆಯ ಸಚಿವ ಪ್ರಮೋದ್ ಮಧ್ವರಾಜ್, ಜನಪ್ರತಿನಿಧಿಗಳು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಯಿಂದ ಬೆಂಬಲ ಸಿಕ್ಕಿದೆ. ಸಾರ್ವಜನಿಕರಿಂದ ಕೂಡಾ ಬೆಂಬಲ ಸಿಕ್ಕಿದೆ. ಜಿಲ್ಲೆಯ ಜನ ಕಾನೂನಿನ ಹೋರಾಟದ ಜೊತೆ ಇದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಹೇಳಿದರು.

    https://www.youtube.com/watch?v=NKGXeOVp68g