– ಶಾಸಕ, ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ
ಬೆಳಗಾವಿ: ಉಕ್ರೇನ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದಲ್ಲಿ ಕರ್ನಾಟಕದ ಐವರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಬಾಲಕಿಯರಿದ್ದಾರೆ. ಕ್ರೀಡಾಕೂಟಕ್ಕೆ ಆಯ್ಕೆಯಾದರೂ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದ ಬೆಳಗಾವಿಯ ಕ್ರೀಡಾಪಟುವಿಗೆ ಸ್ಥಳೀಯ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳು ಸಹಾಯ ಹಸ್ತ ಚಾಚಿ ಶುಭ ಹಾರೈಸಿದ್ದಾರೆ.

ಉಕ್ರೇನ್‍ನಲ್ಲಿ ಅಂತಾರಾಷ್ಟ್ರೀಯ ಕಿರಿಯರ ಪುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯ ಆಯೋಜಿಸಲಾಗಿದೆ. ಇವರಲ್ಲಿ ಬೆಳಗಾವಿಯ ಪ್ರಿಯಾಂಕಾ ಕಂಗ್ರಾಳಕರ್, ಅದಿಥಿ ಜಾಧವ್, ಅಂಜಲಿ ಹಿಂಡಲಗೇಕರ್ ಇದ್ದಾರೆ. ಬೆಳಗಾವಿ ಜಿಲ್ಲೆಯ ಮೂವರು ಬಾಲಕಿಯರಿರುವುದು ಕುಂದಾನಗರಿಯ ಗೌರವ ಹೆಚ್ಚಿಸಿದೆ. ಆದರೆ ಕಡುಬಡ ಕುಟುಂಬದ ಪ್ರಿಯಾಂಕಾ ಕಂಗ್ರಾಳಕರ್ ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಳು. ಸುದ್ದಿ ತಿಳಿದ ಮಾಜಿ ನಗರ ಸೇವಕಿ, ಸಾಮಾಜಿಕ ಕಾರ್ಯಕರ್ತೆ ಸರಳಾ ಹೇರೇಕರ್ ಪ್ರಿಯಾಂಕಾ ನೆರವಿಗೆ ನಿಂತರು.

ಬಳಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಿಯಾಂಕಾಗೆ ನೆರವು ಕೊಡಿಸುವಲ್ಲಿ ಯಶಸ್ವಿಯಾದರು. ಈಗ ಸಂತಸದಲ್ಲಿ ಪ್ರಿಯಾಂಕಾ ಭಾರತೀಯ ತಂಡ ಸೇರಿಸಿಕೊಳ್ಳುವ ತವಕದಲ್ಲಿದ್ದಾಳೆ. ಪ್ರಿಯಾಂಕಾಗೆ ಆರ್ಥಿಕ ನೆರವು ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪಾಲಿಕೆ ಆಯುಕ್ತ ಜಗದೀಶ್, ಡಿಸಿಪಿ ಡಾ.ವಿಕ್ರಮ ಆಮ್ಟೆ ಅವರ ಮಾನವೀಯ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪರನ್ನು ನೆನೆದು ಭಾವುಕರಾದ ರೇಣುಕಾಚಾರ್ಯ

ಈ ವೇಳೆ ನೆರವು ಪಡೆದ ಪ್ರಿಯಾಂಕಾ ಕಂಗ್ರಾಳಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕರ್ನಾಟಕದಿಂದ ನಾವು 5 ಜನ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದೇವೆ. 23 ವರ್ಷದೊಳಗಿನ ಮಿನಿ ಪುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇವೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಸಾಮಾಜಿಕ ಕಾರ್ಯಕರ್ತೆ ಸರಳಾ ಹೇರೇಕರ್ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದ ಕ್ರೀಡಾಪ್ರತಿಭೆ ಪ್ರಿಯಾಂಕಾ ನೆರವಿಗೆ ಬಂದವರನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಶಾಸಕ ಸತೀಶ್ ಜಾರಕಿಹೊಳಿ, ಡಿಸಿಪಿ ಡಾ.ವಿಕ್ರಮ ಆಮ್ಟೆ, ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್ ಸೇರಿ ಹಲವು ಅಧಿಕಾರಿಗಳು ಹಲವು ಬಗೆಯಲ್ಲಿ ನೆರವು ನೀಡಿದ್ದಾರೆ. ಅವರೆಲ್ಲರಿಗೂ ಬೆಳಗಾವಿ ಜನತೆಯ ಪರವಾಗಿ ಕೃತಜ್ಞತೆಗಳು. ದೇಶದ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಿಯಾಂಕಾ ಸೇರಿ ಎಲ್ಲ ಕ್ರೀಡಾಪಟುಗಳು ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಬಸವನಗೌಡ ಪಾಟೀಲ್, ಶುಭಂ ಪಾಟೀಲ್ ಮತ್ತಿತರರು ಇದ್ದರು.
