Tag: Priyanka Jarkiholi

  • ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

    ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

    ಚಿಕ್ಕೂಡಿ: ಜಿದ್ದಾಜಿದ್ದಿನ ಕಣವಾಗಿಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ (Congress Party) ಗೆಲುವಿನ ನಗೆ ಬೀರಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಗೆಲುವು ಸಾಧಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ (Annasaheb Jolle) ವಿರುದ್ಧ ಪ್ರಿಯಾಂಕಾ ಜಾರಕಿಹೊಳಿ 92,655 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ‌ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ 6,18,168 ಮತಗಳನ್ನು ಪಡೆದರೆ ಪ್ರಿಯಾಂಕಾ ಜಾರಕಿಹೊಳಿ 7,10,823 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

    ಇನ್ನೂ ಅಂಚೆ ಮತ ಎಣಿಕೆ ಹಾಗೂ ಇಟಿಪಿಬಿಎಸ್ ಮತ ಎಣಿಕೆ ಜಾರಿಯಿದ್ದು ಕೈ ಅಭ್ಯರ್ಥಿಯ ಗೆಲುವಿನ ಅಂತರದಲ್ಲಿ ಅಲ್ಪ ವ್ಯತ್ಯಾಸ ಆಗುವ ಸಾಧ್ಯತೆಗಳಿವೆ. 22 ಸುತ್ತಿನ ಮತ ಎಣಿಕೆಯ ಒಂದೇ ಒಂದು ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮುನ್ನಡೆ ಸಾಧಿಸಲಿಲ್ಲ. ಎಲ್ಲ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಪಡೆದುಕೊಂಡಿದ್ದು ವಿಶೇಷ. ಅಲ್ಲದೇ ಪತ್ನಿ ಶಶಿಕಲಾ ಅವರು ಶಾಸಕರಾಗಿರುವ ನಿಪ್ಪಾಣಿ ಕ್ಷೇತ್ರದಲ್ಲೇ ಕಾಂಗ್ರೆಸ್‌ 29,752 ಮತಗಳ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ತೀವ್ರ ಮುಖಭಂಗವುಂಟುಮಾಡಿದೆ.

    ಪ್ರಧಾನಿ ಮೋದಿ ಅಲೆಯ ನಡುವೆಯೂ ಚಿಕ್ಕೋಡಿ ಮತದಾರ ಪ್ರಭುಗಳು ಜಾರಕಿಹೊಳಿ ಕುಟುಂಬಕ್ಕೆ ಜೈ ಎಂದಿದ್ದಾರೆ. ತಂದೆ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ್‌ ಜಾರಕಿಹೊಳಿ ಹಾಗೂ ಅಭ್ಯರ್ಥಿ ಪ್ರೀಯಾಂಕಾ ಜಾರಕಿಹೊಳಿ ಹಗಲಿರುಳು ಕ್ಷೇತ್ರದಲ್ಲಿ ಗೆಲುವಿಗಾಗಿ ಶ್ರಮಿಸಿದ್ದರು.

    ಅಲ್ಲದೇ, ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವುದೇ ಕಷ್ಟ ಎನ್ನುತ್ತಿದ್ದವರಿಗೆ ಜಾತಿಗಿಂತ ವ್ಯಕ್ತಿ ಮುಖ್ಯ ಎನ್ನುವ ಸಂದೇಶವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರು ಸಾರಿದ್ದಾರೆ.

  • ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ಗೆ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಎಂಟ್ರಿ

    ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ಗೆ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಎಂಟ್ರಿ

    ಬೆಳಗಾವಿ: ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಜಿಲ್ಲಾ ಯೂಥ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಾಗೂ ಸತೀಶ ಶುಗರ್ಸ್ ಲಿ. ವತಿಯಿಂದ ಸದಸ್ಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ವಿತರಿಸುವ ಮೂಲಕ ಅಧಿಕೃತವಾಗಿ ಜಿಲ್ಲಾ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ.

    ರಾಹುಲ್ ಜಾರಕಿಹೊಳಿ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರು ಜಿಲ್ಲಾ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಯೂಥ್ ಕಾಂಗ್ರೆಸ್ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

    ಕಳೆದ 2 ವರ್ಷಗಳಿಂದ ಇಡೀ ಜಿಲ್ಲಾದ್ಯಂತ ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ರಾಹುಲ್ ಜಾರಕಿಹೊಳಿ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರು ನಿರಂತರವಾಗಿ ಸಮಾಜಸೇವೆ ಮಾಡಿದ್ದಾರೆ. ಹೀಗಾಗಿ, ಇಂದು ಅಧಿಕೃತವಾಗಿ ರಾಷ್ಟ್ರೀಯ ಪಕ್ಷಕ್ಕೆ ಎಂಟ್ರಿ ಕೊಟ್ಟಿರುವುದರಿಂದ, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಆನೆ ಬಲ ಬಂದಾಂತಾಗಿದೆ ಎಂದು ಪಕ್ಷದ ಮುಖಂಡರು ಸಂಸತ ವ್ಯಕ್ತಪಡಿಸಿದರು.

    ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಹುಲ್ ಜಾರಕಿಹೊಳಿ ಅವರನ್ನು ಪರಿಚಯಿಸಿ, ಇಂದಿನಿಂದ ಅವರು ಜಿಲ್ಲಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ರಾಹುಲ್ ಅವರನ್ನು ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರು ಹಾಗೂ ಮುಖಂಡರು ಭರ್ಜರಿಯಾಗಿ ಸ್ವಾಗತ ಮಾಡಿಕೊಂಡರು.

    ಪಕ್ಷ ಸಂಘಟನೆಯ ಮೂಲಕ ಸಾಮರ್ಥ್ಯ ಪ್ರದರ್ಶಿಸಿ:
    ಯೂಥ್ ಕಾಂಗ್ರೆಸ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ರಾಜಕೀಯದಲ್ಲಿ ತೊಡಗಿಸಿಕೊಳ್ಳುವರು ಮೊದಲು ಸಮಾಜ, ಸಮಾಜಸೇವೆ ಹಾಗೂ ಪಕ್ಷ ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಇದನ್ನು ಅರಿತಾಗ ಮಾತ್ರ ಅವರು ಯಶಸ್ವಿಯಾಗಲು ಸಾಧ್ಯ ಎಂದರು.

    ಯುವ ಮುಖಂಡರಾದ ರಾಹುಲ್ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಅಧಿಕೃತವಾಗಿ ಜಿಲ್ಲಾ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪಕ್ಷ ಸಂಘಟನೆಯ ಮೂಲಕ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು” ಎಂದು ಹೇಳಿದರು. ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರು ತಮಗೆ ಅವಕಾಶವಿರುವಲ್ಲಿ ಹಾಗೂ ಎಲ್ಲಿ ಜನ ತಮ್ಮ ಸೇವೆ ಬಯಸುತ್ತಾರೊ ಅಲ್ಲೆಲ್ಲಾ ಹೋಗಿ ಸೇವೆ ಮಾಡಬೇಕು. ಜೊತೆಗೆ ಪಕ್ಷವನ್ನು ಬಲಪಡಿಸಬೇಕು. ಹಿರಿಯರು, ಕಿರಿಯರೊಂದಿಗೆ ಬೆರೆತು ಅವರು ಕೊಡುವ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ತಮ್ಮ ವಿಚಾರಗಳನ್ನು ಅವರಿಗೆ ತಿಳಿಸಬೇಕು. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಮೂರು ತಿಂಗಳ ಹಿಂದೆಯೇ ಸದಸ್ಯತ್ವ:
    ಈಗಾಗಲೇ ರಾಹುಲ್ ಹಾಗೂ ಪ್ರಿಯಾಂಕಾ ಇಬ್ಬರು ಕೂಡ ಕಳೆದ ಮೂರು ತಿಂಗಳ ಹಿಂದೆಯೇ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಇಬ್ಬರ ಮೇಲೂ ಸಾಕಷ್ಟು ಜವಾಬ್ದಾರಿ ಇದೆ. ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ಅವರ ಮೇಲೆ ನಮಗೆ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ನಾವು ಸಂಚರಿಸಬೇಕಾಗುತ್ತದೆ. ಹೀಗಾಗಿ, ರಾಹುಲ್ ಹಾಗೂ ಪ್ರಿಯಾಂಕಾ ಇನ್ನು ಮೇಲೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೆ. ಕಾರ್ಯಕರ್ತರು ನನಗೆ ತೋರಿಸಿರುವ ಪ್ರೀತಿ, ಅಭಿಮಾನ ಸಹಕಾರವನ್ನು ಅವರಿಗೂ ನೀಡಬೇಕು. ಅವರಿಂದ ಕೆಲಸ ಪಡೆಯಬೇಕು ಎಂದು ಮನವಿ ಮಾಡಿದರು.

    ಕೋವಿಡ್ ಸಂದರ್ಭದಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಎಲ್ಲ ಮುಖಂಡರು ಹಾಗೂ ಕಾರ್ಯಕರತರು ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಎಲ್ಲರ ಕೆಲಸವೂ ನಮಗೆ ತೃಪ್ತಿ ತಂದಿದೆ. ಮುಂದೆಯೂ ಕೂಡ ಸಮಾಜಕ್ಕೆ ಸೇವೆಯ ಅಗತ್ಯವಿದೆ. ಹೀಗಾಗಿ, ಕಾರ್ಯಕರ್ತರು ಸದಾ ಸನ್ನದ್ಧರಾಗಿರಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.