Tag: Private Vehicle

  • ಆ.5ರಂದು ಸಾರಿಗೆ ನೌಕರರ ಮುಷ್ಕರ; 40% ಖಾಸಗಿ ಬಸ್ ರಸ್ತೆಗಿಳಿಸಲು ಸರ್ಕಾರ ನಿರ್ಧಾರ

    ಆ.5ರಂದು ಸಾರಿಗೆ ನೌಕರರ ಮುಷ್ಕರ; 40% ಖಾಸಗಿ ಬಸ್ ರಸ್ತೆಗಿಳಿಸಲು ಸರ್ಕಾರ ನಿರ್ಧಾರ

    ಬೆಂಗಳೂರು: ಆ.5ರಂದು ಸಾರಿಗೆ ನೌಕರರ ಮುಷ್ಕರ (Transport Employees Strike) ನಡೆದರೆ ಸರ್ಕಾರದ ಬಳಿ ಪರ್ಯಾಯ ವ್ಯವಸ್ಥೆಯಿದ್ದು, 32 ಸಾವಿರ ಖಾಸಗಿ ವಾಹನಗಳ ಪೈಕಿ 40%ರಷ್ಟು ವಾಹನಗಳನ್ನ ಓಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.

    ಬೆಂಗಳೂರು (Bengaluru) ನಗರದಲ್ಲಿ ಒಟ್ಟು 32,582 ಖಾಸಗಿ ವಾಹನಗಳಿವೆ. ಇದರಲ್ಲಿ ಖಾಸಗಿ ಬಸ್, ಟೆಂಪೋ ಟ್ರಾವಲ್ಸ್, ಮ್ಯಾಕ್ಸಿ ಕ್ಯಾಬ್‌ಗಳು ಸೇರಿವೆ. ಇದೀಗ 32 ಸಾವಿರ ಖಾಸಗಿ ವಾಹನಗಳ ಪೈಕಿ 40%ರಷ್ಟು ವಾಹನಗಳನ್ನ ಓಡಿಸಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಪ್ರತಿಭಟನಾ ರ‍್ಯಾಲಿ ಆ.8ಕ್ಕೆ ಮುಂದೂಡಿಕೆ: ಡಿಕೆಶಿ

    ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ. ಸಿಎಂ ನೇತೃತ್ವದಲ್ಲಿ ಸಾರಿಗೆ ನೌಕರರ ಜೊತೆ ಸಭೆ ನಡೆಯುತ್ತಿದ್ದು, ಸಂಧಾನ ಸಭೆ ಯಶಸ್ವಿ ಆಗದಿದ್ದರೆ ಬಸ್ ಬಂದ್ ಗ್ಯಾರಂಟಿ. ಇದನ್ನೂ ಓದಿ: ಇಂದಿನಿಂದಲೇ ಸಾರಿಗೆ ನೌಕರರ ರಜೆ ರದ್ದು – ಸಾರಿಗೆ ಇಲಾಖೆ ಆದೇಶ

    ಈ ಮುಷ್ಕರ ಆರಂಭವಾದರೆ ಸಹಜವಾಗಿಯೇ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಾರೆ. ಬಿಎಂಟಿಸಿಯಿಂದ (BMTC) 7 ಸಾವಿರ ಬಸ್‌ಗಳು, ಕೆಎಸ್‌ಆರ್‌ಟಿಯಿಂದ 8 ಸಾವಿರ ಬಸ್‌ಗಳು ಮುಷ್ಕರದಲ್ಲಿ ಭಾಗಿಯಾಗಲಿವೆ. 1.2 ಲಕ್ಷ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದು, ನಾಳೆ ಸಾರ್ವಜನಿಕರಿಗೆ ಬಸ್ ಸಮಸ್ಯೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ವಾಹನಗಳನ್ನು ರಸ್ತೆಗಿಳಿಸಲು ಪ್ಲ್ಯಾನ್ ಮಾಡಿದೆ.

  • ಖಾಸಗಿ ವಾಹನ ಮಾಲೀಕರ ಷರತ್ತಿಗೆ ಒಪ್ಪಿಗೆ – ಸರ್ಕಾರದ ಪರ್ಯಾಯ ವ್ಯವಸ್ಥೆ ಏನು?

    ಖಾಸಗಿ ವಾಹನ ಮಾಲೀಕರ ಷರತ್ತಿಗೆ ಒಪ್ಪಿಗೆ – ಸರ್ಕಾರದ ಪರ್ಯಾಯ ವ್ಯವಸ್ಥೆ ಏನು?

    ಬೆಂಗಳೂರು: ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಖಾಸಗಿ ವಾಹನಗಳಿಗೆ ಮಣೆ ಹಾಕಲು ನಿರ್ಧರಿಸಿದೆ.

    ಸಾವಿರ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್, ಮಿನಿ ಬಸ್, ಶಾಲಾ ಬಸ್, ಟಿಟಿ ಸೇರಿ ಒಟ್ಟು 32 ಸಾವಿರ ವಾಹನಗಳನ್ನು ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರ ನಿಗದಿ ಪಡಿಸಿದ ದರವನ್ನು ಪ್ರಯಾಣಿಕರಿಂದ ಖಾಸಗಿ ವಾಹನಗಳು ಪಡೆಯಬೇಕು ಎಂಬ ನಿರ್ದೇಶನ ನೀಡಿದೆ.

    ಈ ಬೆನ್ನಲ್ಲೇ, ಖಾಸಗಿ ವಾಹನಗಳಿಗೆ ಏಪ್ರಿಲ್ ತಿಂಗಳ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ವಾಹನಗಳ ಓಡಾಟಕ್ಕೆ ಪೊಲೀಸ್ ಇಲಾಖೆ ಫ್ರೀ ಪರ್ಮಿಟ್ ನೀಡಿದೆ. ಖಾಸಗಿ ವಾಹನಗಳಿಗೆ ಸೂಕ್ತ ಭದ್ರತೆ ನೀಡಲು ಸಹ ಪೊಲೀಸ್ ಇಲಾಖೆ ನಿರ್ಧರಿಸಿದೆ.

    ಬೆಂಗಳೂರಿನಲ್ಲಿ ಮೆಟ್ರೋ ಸೇವೆಯ ಅವಧಿಯನ್ನು ಮಧ್ಯರಾತ್ರಿವರೆಗೂ ವಿಸ್ತರಿಸಲಾಗಿದೆ. ಐದು ನಿಮಿಷಕ್ಕೊಂದು ಮೆಟ್ರೋ ಓಡಾಡಲಿದೆ. ರಜೆಗಳು ಬರುತ್ತಿರುವ ಕಾರಣ ಹೆಚ್ಚು ರೈಲು ಓಡಿಸುವಂತೆ ರೈಲ್ವೇ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

    ಇದಕ್ಕೂ ಮುನ್ನ ಖಾಸಗಿ ಬಸ್‍ಗಳನ್ನು ರಸ್ತೆಗೆ ಇಳಿಸಲು ಒಕ್ಕೂಟ ಷರತ್ತು ವಿಧಿಸಿತ್ತು. ಒಂದು ತಿಂಗಳು ರಸ್ತೆ ತೆರಿಗೆ ವಿಧಿಸಬಾರದು, 3 ತಿಂಗಳ ಮುಂಗಡ ತೆರಿಗೆಯನ್ನು ಒಂದು ತಿಂಗಳಿಗೆ ಇಳಿಸಬೇಕು. ಪ್ರತಿ ಬಸ್‍ಗೂ ಸೂಕ್ತ ಭದ್ರತೆ ನೀಡಿದಲ್ಲಿ ಬಸ್ ಓಡಿಸಲು ರೆಡಿ ಎಂದು ಖಾಸಗಿ ಬಸ್‍ಗಳ ಮಾಲೀಕರ ಸಂಘ ಹೇಳಿತ್ತು.

    ಡ್ಯೂಟಿಗೆ ಬರೋದು ಬಿಡೋದು ಅವರ ಇಲಾಖೆಗೆ ಸಂಬಂಧಿಸಿದ್ದು. ಆದರೆ ಯಾರಾದ್ರೂ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಕಲ್ಲು ತೂರಾಟ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ. ಮುಲಾಜಿಲ್ಲದೇ ಅರೆಸ್ಟ್ ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಎಚ್ಚರಿಕೆ ನೀಡಿದ್ದಾರೆ.

  • ಇನ್ಮುಂದೆ ಅಂತರ್‌ಜಿಲ್ಲಾ ಓಡಾಟಕ್ಕೆ ಪಾಸ್ ಅಗತ್ಯವಿಲ್ಲ

    ಇನ್ಮುಂದೆ ಅಂತರ್‌ಜಿಲ್ಲಾ ಓಡಾಟಕ್ಕೆ ಪಾಸ್ ಅಗತ್ಯವಿಲ್ಲ

    ಬೆಂಗಳೂರು: ಇನ್ಮುಂದೆ ಅಂತರ್‌ಜಿಲ್ಲೆಗಳ ಮಧ್ಯೆ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹೇಗೆ ಪಾಸ್ ಅಗತ್ಯವಿಲ್ಲವೋ, ಅದೇ ರೀತಿ ಅಂತರ್‌ಜಿಲ್ಲೆಗಳ ನಡುವೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ಡಿಜಿಪಿ ಕರ್ನಾಟಕ ಟ್ವೀಟ್ ಮಾಡಿದೆ.

    ಲಾಕ್‍ಡೌನ್ 3 ಜಾರಿಯಾದಾಗ ಯಾವೆಲ್ಲ ಷರತ್ತುಗಳು ಇತ್ತೋ ಆ ಎಲ್ಲ ಷರತ್ತುಗಳು ಅನ್ವಯವಾಗುತ್ತದೆ. ಅಂದರೆ ಖಾಸಗಿ ವ್ಯಕ್ತಿಗಳು ಸೇವಾ ಸಿಂಧು ವೆಬ್‍ಸೈಟ್ ಮೂಲಕ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆದು ತೆರಳಬೇಕಾಗುತ್ತದೆ ಎಂಬ ನಿಯಮ ಈ ಹಿಂದೆ ಇತ್ತು. ಆದರೆ ಈ ನಿಯಮವನ್ನು ಈಗ ಕೈಬಿಡಲಾಗಿದ್ದು, ಅಂತರ್‌ಜಿಲ್ಲೆಗೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

    ಈ ಹಿಂದಿನ ನಿಯಮದ ಪ್ರಕಾರ, ಸರ್ಕಾರಿ ನೌಕರರು, ಸಿಬ್ಬಂದಿಗೆ, ಕಂಪನಿಗಳ ಉದ್ಯೋಗಿಗಳಿಗೆ ಅಂತರ್‌ಜಿಲ್ಲಾ ಪಾಸ್ ಅಗತ್ಯವಿಲ್ಲ. ಈ ವ್ಯಕ್ತಿಗಳು ಪೊಲೀಸರಿಗೆ ಐಡಿ ಕಾರ್ಡ್ ತೋರಿಸಿದರೆ ಅನುಮತಿ ನೀಡಲಾಗುತ್ತದೆ. ಹಾಗೆಯೇ ಟ್ಯಾಕ್ಸಿ ಯಲ್ಲಿ ಚಾಲಕರೊಂದಿಗೆ ಇಬ್ಬರು, ಮ್ಯಾಕ್ಸಿ ಕ್ಯಾಬ್ ನಲ್ಲಿ ಮೂರು ಜನ ಮತ್ತು ಚಾಲಕರು ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಆದರೆ ಪ್ರಯಾಣಿಕರಿಗೆ ಪಾಸ್ ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೆ ಈಗ ಖಾಸಗಿ ವಾಹನದಲ್ಲಿ ಹೋಗುವವರಿಗೂ ಪಾಸ್ ಅಗತ್ಯವಿಲ್ಲ. ಆದರೆ ಲಾಕ್‍ಡೌನ್ ನಿಯಮವನ್ನು ಪಾಲಿಸಬೇಕು, ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಖಾಸಗಿ ವಾಹನಗಳು ಸಂಚರಿಸುವಂತಿಲ್ಲ ಎಂದು ತಿಳಿಸಿದೆ.

  • ಕೋವಿಡ್ ಮಧ್ಯೆ ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ

    ಕೋವಿಡ್ ಮಧ್ಯೆ ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ

    ಬೆಂಗಳೂರು: ಕೋವಿಡ್-19 ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವು ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ ನೀಡಿದೆ.

    ಹೌದು, ರಾಜ್ಯದ ಖಾಸಗಿ ಬಸ್, ಟೆಂಪೋ, ಟ್ಯಾಕ್ಸಿಗಳಿಗೆ ಮೋಟಾರು ವಾಹನ ತೆರಿಗೆ ವಿನಾಯ್ತಿ ನೀಡಿದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯದ ವಿವಿಧ ಪ್ರದೇಶದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸೇರಿಸಲು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಇಲ್ಲವೆ ಅಧಿಕೃತ ಪ್ರಾಧಿಕಾರಗಳಿಂದ ಸಂಚಾರಕ್ಕೆ ಅನುಮತಿ ಪಡೆದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

    ಈ ಮೂಲಕ ರಾಜ್ಯದ ಖಾಸಗಿ ವಾಹನಗಳಿಗೆ ಸರ್ಕಾರವು ಒಟ್ಟು ಎರಡು ತಿಂಗಳ ತೆರಿಗೆ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ.

    ಅಧಿಸೂಚನೆಯಲ್ಲಿ ಏನಿದೆ?:
    ಕೋವಿಡ್-19 ಹಿನ್ನೆಲೆ ಕರ್ನಾಟಕ ರಾಜ್ಯವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ. ಆದರೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 16(1)ರ ಅನ್ವಯ ರಾಜ್ಯದಲ್ಲಿ ನೋಂದಾಯಿಸಿರು (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ತೆರಿಗೆಯನ್ನು ಮಾರ್ಚ್ 24ರಿಂದ ಮೇ 23ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.