Tag: private strike

  • ಖಾಸಗಿ ಬಸ್‌ ಸಂಚಾರ ಬಂದ್‌ ಇಲ್ಲ – ಉಡುಪಿಯಲ್ಲಿ ಒಕ್ಕೂಟದ ಖಜಾಂಚಿ ಹೇಳಿಕೆ

    ಖಾಸಗಿ ಬಸ್‌ ಸಂಚಾರ ಬಂದ್‌ ಇಲ್ಲ – ಉಡುಪಿಯಲ್ಲಿ ಒಕ್ಕೂಟದ ಖಜಾಂಚಿ ಹೇಳಿಕೆ

    ಉಡುಪಿ : ಸೋಮವಾರದ ಖಾಸಗಿ ಬಸ್‌ ಸಂಚಾರ ಬಂದ್‌ ವಿಚಾರದಲ್ಲಿ ಸಂಘಟನೆಯ ಮುಖಂಡರಲ್ಲೇ ಭಿನ್ನ ರಾಗ ಎದ್ದಿದೆ. ಬೆಂಗಳೂರಿನ ಮುಖಂಡರು ಖಾಸಗಿ ಬಸ್‌ ಸಂಚಾರ ಸ್ಥಗಿತ ಮಾಡುತ್ತೇವೆ ಎಂದು ಹೇಳಿದ್ದರೆ, ಕರಾವಳಿ ಭಾಗದ ಮುಖಂಡರು ನಾವು ಬಸ್‌ ಸಂಚಾರ ಸ್ಥಗಿತ ಮಾಡುವುದಿಲ್ಲ ಎಂದು ವಿರುದ್ಧ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಪ್ರತಿಕ್ರಿಯಿಸಿ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧ ಇಲ್ಲ. ರಾಜ್ಯದಲ್ಲಿ ನಾಳೆ ಖಾಸಗಿ ಬಸ್ ಬಂದ್ ಇಲ್ಲ. ರಾಜ್ಯಾದ್ಯಂತ ಎಂದಿನಂತೆ 8,500 ಬಸ್ ಓಡಾಡುತ್ತದೆ ಎಂದು ತಿಳಿಸಿದ್ದಾರೆ.

    ಈ ಹಿಂದೆಯೂ ನಮ್ಮ ಸಂಘಟನೆಯನ್ನು ಬೆದರಿಸುವ ಪ್ರಯತ್ನ ನಡೆದಿತ್ತು. ಇದೂವರೆಗೂ ನಾವು ಜನರಿಗೆ ಸಮಸ್ಯೆ ಮಾಡಿ ಬಂದ್‌ ಮಾಡಿಲ್ಲ.  ನಮ್ಮ ಸಮಸ್ಯೆಗಳು ಏನೇ ಇದ್ದರೂ ನ್ಯಾಯಯುತವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಎಂದಿನಂತೆ ಬಸ್‌ ಸಂಚಾರ ಇರಲಿದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾತನಾಡಿದ ನಟರಾಜ್‌ ಶರ್ಮಾ ಈ ಹಿಂದೆ ನಾವು ಹಲವು ಬೇಡಿಕೆಗಳನ್ನು ಇಟ್ಟಿದ್ದೇವೆ. ಆದರೆ ಈ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಹೀಗಾಗಿ ನಾವು ಸರ್ಕಾರಿ ನೌಕರರ ಜೊತೆ ಬೆಂಬಲಕ್ಕೆ ನಿಂತಿದ್ದು ಖಾಸಗಿ ಬಸ್ಸುಗಳನ್ನು ರಸ್ತೆಗೆ ಇಳಿಸಲ್ಲ ಎಂದು ಎಂದು ತಿಳಿಸಿದ್ದರು.

    ಖಾಸಗಿ ವಾಹನಗಳ ಮುಖಂಡರು ಒಂದೊಂದು ಹೇಳಿಕೆ ನೀಡುತ್ತಿರುವ ಕಾರಣ ಖಾಸಗಿ ಬಸ್‌ ಸಂಚಾರ ಇರುತ್ತಾ? ಇಲ್ಲವೋ? ಎನ್ನುವುದು ಸೋಮವಾರ ಬೆಳಗ್ಗೆ ಸ್ಪಷ್ಟವಾಗಲಿದೆ.