Tag: private hospital

  • ಕೊರೊನಾ ರೋಗಿಯಿಂದಲೂ ಹಣ ವಸೂಲಿ- ಸರ್ಕಾರದಿಂದಲೂ ದುಡ್ಡು ಗುಳಂ

    ಕೊರೊನಾ ರೋಗಿಯಿಂದಲೂ ಹಣ ವಸೂಲಿ- ಸರ್ಕಾರದಿಂದಲೂ ದುಡ್ಡು ಗುಳಂ

    -ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯ ಕಳ್ಳಾಟ

    ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿತರಿಂದಲೂ ಹಣ ಪಡೆದು, ಇತ್ತ ಸರ್ಕಾರಕ್ಕೂ ಬಿಲ್ ಪಾವತಿಸಿ ಎಂದು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ದಾಖಲಾತಿ ಸಲ್ಲಿಸಿದೆ. ಈ ಮೂಲಕ ಎರಡೂ ಕಡೆಯಿಂದ ಹಣ ಹೊಡೆಯುವ ಪ್ಲಾನ್ ಮಾಡಿಕೊಂಡಿದ್ದ ಆಸ್ಪತ್ರೆಯ ನಿಜ ಬಣ್ಣ ಬಯಲಾಗಿದೆ.

    ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ. ದಿನೇ ದಿನೇ ಏರುತ್ತಿರೋ ಕೊರೊನಾ ಸೋಂಕಿತರ ಸಂಖ್ಯೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಹೀಗಾಗಿ ಸರ್ಕಾರವೇ ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಉಚಿತ ಚಿಕಿತ್ಸೆ ನೀಡಿ ಅದರ ವೆಚ್ಚವನ್ನ ಆಯುಷ್ಮಾನ್ ಭವ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ನಾವು ಖಾಸಗಿ ಆಸ್ಪತ್ರೆಗೆ ಕೊಡುತ್ತೇವೆ ಅಂತ ತಿಳಿಸಿದೆ.

    ಸುರಕ್ಷ ಆರೋಗ್ಯ ರಕ್ಷ ಯೋಜನೆಯಡಿ ನೋಂದಾಯಿಸಿಕೊಂಡ ಚಿಕ್ಕಬಳ್ಳಾಪುರ ನಗರದ ಅನನ್ಯ-ಜೀವನ್ ಖಾಸಗಿ ಆಸ್ಪತ್ರೆಗೆ ಕೊರೊನಾ ಸೋಂಕಿತರನ್ನ ಸ್ವತಃ ಜಿಲ್ಲಾಡಳಿತವೇ ದಾಖಲು ಮಾಡಿತ್ತು. ಈಗ ಸರ್ಕಾರದಿಂದ ಜೀವನ್-ಅನನ್ಯ ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತರಿಂದಲೂ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿರುವ ಆಸ್ಪತ್ರೆ ಮಾಲೀಕ ಐಎಸ್ ರಾವ್, ಸರ್ಕಾರಕ್ಕೂ ತಮ್ಮ ಆಸ್ಪತ್ರೆಯಲ್ಲಿ ನೀವು ದಾಖಲು ಮಾಡಿದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಅದರ ಲಕ್ಷಾಂತರ ರೂಪಾಯಿ ವೆಚ್ಚವನ್ನ ಪಾವತಿಸುವಂತೆ ದಾಖಲಾತಿಗಳನ್ನ ಸಲ್ಲಿಸಿಕೊಂಡಿದ್ದಾರೆ.

    ಆಯುಷ್ಮಾನ್ ಭವ ಹಾಗೂ ಆರೋಗ್ಯ ಕರ್ನಾಟಕ (ಎಬಿಎಆರ್ ಕೆ) ಯೋಜನೆಯಡಿ ತಮಗೆ ಹಣ ಮಂಜೂರು ಮಾಡುವಂತೆ ಆಸ್ಪತ್ರೆ ಮಾಲೀಕ ಐಎಸ್ ರಾವ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಕೊರೊನಾ ಸೋಂಕಿತರ ಕಡೆಯಿಂದಲೂ ಲಕ್ಷ ಲಕ್ಷ ಬಿಲ್ ವಸೂಲಿ ಮಾಡಿಕೊಂಡಿದ್ದಾರೆ. ಅನನ್ಯ ಆಸ್ಪತ್ರೆಯಲ್ಲಿ 43 ಕೊರೊನಾ ಸೋಂಕಿತರನ್ನ ಸರ್ಕಾರ ದಾಖಲಿಸಿದೆ ಎನ್ನಲಾಗಿದ್ದು, ಇದರಲ್ಲಿ 11 ಮಂದಿಯ ಚಿಕಿತ್ಸಾ ವೆಚ್ಚ ಪಾವತಿಸುವಂತೆ ಎಬಿಎಆರ್‍ಕೆ ಗೆ ದಾಖಲೆಗಳನ್ನ ಸಲ್ಲಿಸಿಕೊಂಡಿದ್ದಾರೆ.

    ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಬಿಎಆರ್‍ಕೆ ನಿರ್ಗಮಿತ ಸಂಯೋಜಕಿ ಶ್ವೇತಾ ಎಂಬವರು ಅನನ್ಯ ಆಸ್ಪತ್ರೆ ಮಾಲೀಕರ ಗೋಲ್ ಮಾಲ್ ಪತ್ತೆ ಹಚ್ಚಿ ಸುರಕ್ಷ ಆರೋಗ್ಯ ಸಮಿತಿಗೆ ಆಸ್ಪತ್ರೆಗೆ ದುಡ್ಡು ಪಾವತಿಸಿದ ರೋಗಿಯ ಸಂಬಂಧಿಕರಿಂದ ದೂರು ಕೊಡಿಸಿದ್ದಾರೆ. ಇದೆಕೆಲ್ಲಾ ಸಂಯೋಜಕಿ ಶ್ವೇತಾನೇ ಕಾರಣ. ನನ್ನ ಬಳಿ ಪ್ರತಿ ಪೇಷೆಂಟ್ ಗೆ ತಲಾ 5,000 ರೂ. ಲಂಚ ಕೇಳಿದ್ದರು. ನಾನು ಕೊಡಲ್ಲ ಅಂದಿದ್ದಕ್ಕೆ ಈ ರೀತಿ ದೂರು ಕೊಡಿಸಿದ್ದಾರೆ ಎಂದು ಅನನ್ಯ ಆಸ್ಪತ್ರೆ ಮಾಲೀಕ ಐ.ಎಸ್.ರಾವ್ ಆರೋಪಿಸುತ್ತಾರೆ.

    ಸದ್ಯ 11 ಮಂದಿ ರೋಗಿಗಳಿಂದ ಬರೋಬ್ಬರಿ ಒಬ್ಬೊಬ್ಬರದ್ದು ಒಂದೊಂದು ದರ ಪಟ್ಟಿ ಎಂಬಂತೆ ಸರಿಸುಮಾರು 11 ಲಕ್ಷ ರೂಪಾಯಿಗಳನ್ನ ಸರ್ಕಾರದಿಂದ ಪಾವತಿ ಮಾಡಿ ಅಂತ ಐಎಸ್ ರಾವ್ ದಾಖಲೆಗಳನ್ನ ಸಲ್ಲಿಸಿಕೊಂಡಿದ್ದಾರೆ. ಗೋಲ್ ಮಾಲ್ ಬಯಲಿಗೆ ಬರ್ತಿದ್ದಂತೆ ಚಿಕ್ಕಬಳ್ಳಾಪುರ ಡಿಸಿ ಆರ್.ಲತಾ ಸಭೆ ನಡೆಸಿ ಐ.ಎಸ್.ರಾವ್ ಗೆ ತರಾಟೆ ತೆಗೆದುಕೊಂಡಿದ್ದಾರೆ. ಈಗ ಕೊರೊನಾ ಸೋಂಕಿತರು ಕಟ್ಟಿದ ದುಡ್ಡು ವಾಪಾಸ್ ಮಾಡ್ತೀನಿ ಅಂತ ರಾವ್ ತಪ್ಪೊಪ್ಪಿಕೊಂಡಿದ್ದಾರೆ.

  • ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದ್ರು: ಸೌಮ್ಯ ರೆಡ್ಡಿ

    ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದ್ರು: ಸೌಮ್ಯ ರೆಡ್ಡಿ

    ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಜನ ಇವತ್ತು ಬೆಡ್, ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಸರ್ಕಾರದ ಕಿಡಿಕಾರಿದರು.

    ಆಸ್ಪತ್ರೆಗಳಲ್ಲಿ ಇಂದಿಗೂ ಬೆಡ್ ಸಿಗುತ್ತಿಲ್ಲ. ನಾನೇ ಎಷ್ಟೇ ಬಾರಿ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಇದುವರೆಗೂ ನಮ್ಮ ಯಾವುದೇ ಸಲಹೆಯನ್ನು ಸರ್ಕಾರ ಸ್ವೀಕರಿಸಿಲ್ಲ. ಕೇವಲ ನಮ್ಮನ್ನು ಕರೆದು ಕುರಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

    ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದರು. ನಾನೇ ಅಲ್ಲಿಗೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ನೋಡಿದ್ದೇನೆ. ಬಿಬಿಎಂಪಿ ದೃಢಿಕರಿಸಿದ ಬಳಿಕವೂ 2 ಗಂಟೆಯಾದರೂ ಆಕ್ಸಿಜನ್ ನೀಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಸರಿ ಸುಮಾರು 16 ಲಕ್ಷದ ವರೆಗೂ ಹಣ ಲೂಟಿ ಮಾಡುತ್ತಿದ್ದಾರೆ. ಕೊರೊನಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು 3 ರಿಂದ 4 ಲಕ್ಷ ರೂ. ಪ್ಯಾಕೇಜ್ ಮಾಡುತ್ತಿವೆ. ಖಾಸಗಿ ಆಸ್ಪತ್ರೆ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರ ಏನು ಉತ್ತರ ನೀಡುತ್ತೆ ಉತ್ತರಿಸಲಿ ಎಂದು ಪ್ರಶ್ನಿಸಿದರು.

  • ಕೊರೊನಾ ಚಿಕಿತ್ಸೆಗೆ 12 ಲಕ್ಷ ಬಿಲ್- ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಬದಲಿಸಿದ ಉದ್ಯಮಿ

    ಕೊರೊನಾ ಚಿಕಿತ್ಸೆಗೆ 12 ಲಕ್ಷ ಬಿಲ್- ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಬದಲಿಸಿದ ಉದ್ಯಮಿ

    -ಸರ್ಕಾರಕ್ಕೆ ಆಸ್ಪತ್ರೆ ಹಸ್ತಾಂತರಿಸಿ, ಷರತ್ತು ಹಾಕಿದ ಉದ್ಯಮಿ
    -84 ಬೆಡ್, 10 ಐಸಿಯು ಬೆಡ್ ವ್ಯವಸ್ಥೆ

    ಗಾಂಧಿನಗರ/ಸೂರತ್: ಇಬ್ಬರಿಗೆ ಕೊರೊನಾ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ 12 ಲಕ್ಷ ರೂ. ಬಿಲ್ ಮಾಡಿದೆ. ತಮ್ಮ ಮತ್ತು ತಾಯಿ ಚಿಕಿತ್ಸೆಯ ಬಿಲ್ ಪಾವತಿಸಿದ ಉದ್ಯಮಿ, ಬಡವರಿಗಾಗಿ ತನ್ನ ಕಚೇರಿಯನ್ನೇ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿಸಿದ್ದಾರೆ.

    ಸೂರತ್ ರಿಯಲ್ ಎಸ್ಟೇಟ್ ವ್ಯಾಪಾರಿ ಖಾದರ್ ಶೇಖ್ ಕಚೇರಿಯನ್ನು ಆಸ್ಪತ್ರೆಯಾಗಿ ಮಾಡಿದ್ದಾರೆ. ತಾಯಿ ಮತ್ತು ತಮ್ಮನಿಗೆ ಕೊರೊನಾ ಸೋಂಕು ತಗುಲಿತ್ತು. ಅಮ್ಮ 45 ದಿನ ಮತ್ತು ತಮ್ಮ 24 ದಿನಗಳಲ್ಲಿ ಗುಣಮುಖರಾದರು. ಇಬ್ಬರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆ 12 ಲಕ್ಷ ರೂ. ಬಿಲ್ ನೀಡಿತ್ತು. ಬಿಲ್ ಪಾವತಿಸಿದ ಬಳಿಕ ಬಡವರಿಗೆ ರೋಗ ಬಂದ್ರೆ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತು. ಹಾಗಾಗಿ 84 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಿದೆ. 84 ನಾರ್ಮಲ್ ಬೆಡ್, 10 ಐಸಿಯು ಬೆಡ್, ಹಾಗೆ ಪ್ರತಿ ಹಾಸಿಗೆಗೂ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಖಾದರ್ ಹೇಳುತ್ತಾರೆ.

    ತಮ್ಮನ ಕೊರೊನಾ ವರದಿ ನೆಗೆಟಿವ್ ಬಂದಿದ್ರೂ ಆತನ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳಿಲ್ಲ. ಆತ ಕೊರೊನಾ ಬಂದ ಬಳಿಕ ಇಳಿದು ಹೋಗಿದ್ದಾನೆ. ತಮ್ಮ ಮತ್ತು ತಾಯಿಗೆ ಯಾವುದೇ ಉತ್ತಮ ಚಿಕಿತ್ಸೆ ನೀಡಿರಲಿಲ್ಲ. 12 ಲಕ್ಷ ರೂ. ಬಿಲ್ ಪಡೆದ್ರೂ ಸಾಮಾನ್ಯ ರೋಗಿಗಳ ರೀತಿಯಲ್ಲಿ ಅವರಿಗೆ ಚಿಕಿತ್ಸೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಖಾದರ್ ಶೇಖ್ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

    ತಮ್ಮನ ಡಿಸ್ಚಾರ್ಜ್ ಬಳಿಕ ಆತನ ಸ್ಥಿತಿ ನೋಡಿ ಆಸ್ಪತ್ರೆಯ ನಿರ್ಮಾಣದ ಕುರಿತು ಖಾದರ್ ನಿರ್ಧಾರ ತೆಗೆದುಕೊಂಡಿದ್ದರು. ಈ ಕುರಿತು ಸ್ಥಳೀಯ ಸಂಸದರನ್ನು ಭೇಟಿಯಾಗಿ ಅನುಮತಿ ಪಡೆದುಕೊಂಡಿದ್ದಾರೆ. ತಮ್ಮ ಬಳಿಯಲ್ಲಿರುವ ಮೂರು ಅಂತಸ್ತಿನ ಕಟ್ಟಡವಿದ್ದು, ಒಂದು ಫ್ಲೋರ್ ನಲ್ಲಿ ಕಚೇರಿಯನ್ನು ನಡೆಸುತ್ತಿದ್ದರು. ಕಚೇರಿಯನ್ನ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿಕೊಡುವದಾಗಿ ಭರವಸೆ ನೀಡಿದ್ದರು.

    ಸಂಸದರ ಮುಂದೆ ಖಾದರ್ ಕಂಡೀಷನ್: ನೀಡಿದ ಭರವಸೆಯಂತೆ ಖಾದರ್ ಕೇವಲ 20 ದಿನದಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಒಂದು ಫ್ಲೋರ್ ನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಉಳಿದುಕೊಳ್ಳುವ ವ್ಯವಸ್ಥೆ ಸಹ ಕಲ್ಪಿಸಿದ್ದಾರೆ. ಆಸ್ಪತ್ರೆಯನ್ನ ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಇಲ್ಲಿ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ನೀಡಬೇಕು. ರೋಗಿಗಳಿಗೆ ಔಷಧಿ ಸಹ ಉಚಿತವಾಗಿ ಕೊಡಬೇಕು ಎಂಬ ಷರತ್ತು ಖಾದರ್ ಸಂಸದರ ಮುಂದೆ ಇಟ್ಟಿದ್ದರು. ಖಾದರ್ ಷರತ್ತನ್ನ ಸರ್ಕಾರ ಸಹ ಒಪ್ಪಿಕೊಂಡಿದೆ.

    ಆಸ್ಪತ್ರೆ ಹಸ್ತಾಂತರಿಸಿದ ಬಳಿಕ ಮಾತನಾಡಿರುವ ಖಾದರ್, ಮೊದಲ ಬಾರಿಗೆ ಮನಸ್ಸಿಗೆ ಒಂದು ರೀತಿಯ ಶಾಂತಿ ಸಿಕ್ಕಿದೆ. ಮತ್ತೊಬ್ಬರ ಜೀವನಕ್ಕೆ ನೆರವಾಗಿದ್ದಕ್ಕೆ ಸಂತೋಷವಾಗುತ್ತಿದೆ. ಯಾರೂ ಬೇಕಾದ್ರೂ ಇಲ್ಲಿಗೆ ಬಂದು ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದ್ದು, ಬಡವರಿಗೆ ನಮ್ಮ ಮೊದಲ ಆದ್ಯತೆ. ಇಲ್ಲಿಗೆ ಬರೋ ರೋಗಿಗಳು ಟೂಥ್‍ಪೇಸ್ಟ್, ಬ್ರಶ್, ಸಾಬೂನು ಮತ್ತು ಕೊರೊನಾ ತೆಗದುಕೊಂಡು ಬರಬೇಕು. ಚಿಕಿತ್ಸೆಯ ಜೊತೆಗೆ ಎಲ್ಲ ಸೌಲಭ್ಯವೂ ಸಿಗಲಿದೆ ಎಂದು ತಿಳಿಸಿದರು.

    ಕೊರೊನಾ ಒಂದು ಹಂತದವರೆಗೂ ನಿಯಂತ್ರಣಕ್ಕೆ ಸಿಗೋವರೆಗೂ ಈ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ. ಇದು ವರ್ಷ ಅಥವಾ ಮೂರು ವರ್ಷವಾದ್ರೂ ಕಟ್ಟಡವನ್ನ ನಮ್ಮ ವಶಕ್ಕೆ ಪಡೆಯಲ್ಲ ಹಾಗೂ ಸರ್ಕಾರದಿಂದ ಬಾಡಿಗೆ ತೆಗೆದುಕೊಳ್ಳಲ್ಲ ಎಂದು ಖಾದರ್ ಹೇಳಿದ್ದಾರೆ. ಆಸ್ಪತ್ರೆಯ ಜವಾಬ್ದಾರಿಯನ್ನ ನಿವೃತ್ತ ಡಿಎಸ್‍ಪಿ ಸಿರಾಜ್ ಜಾಬಾ ಅವರಿಗೆ ನೀಡಲಾಗಿದೆ.

  • ಖಾಸಗಿ ಆಸ್ಪತ್ರೆಗಳಿಗೆ ಸಚಿವ ಈಶ್ವರಪ್ಪ ಎಚ್ಚರಿಕೆ

    ಖಾಸಗಿ ಆಸ್ಪತ್ರೆಗಳಿಗೆ ಸಚಿವ ಈಶ್ವರಪ್ಪ ಎಚ್ಚರಿಕೆ

    ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯ ಜೊತೆ ಜೊತೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸೇರಿಸಿಕೊಂಡು ಕೊರೊನಾ ಸೋಂಕು ತಡೆಯುವಲ್ಲಿ ಕ್ರಮ ವಹಿಸಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕೊರೊನಾ ವಿಷಯದಲ್ಲಿ ಸರ್ಕಾರದ ನಿಯಮಗಳನ್ನು ಅನುಸರಿಸಬೇಕಾದ ಅಂಶಗಳ ಕುರಿತು ಇಂದು ಸಭೆ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ಸಮನ್ವಯ ಸಭೆ ನಡೆಸಿದರು. ಈ ವೇಳೆ ಕೆಲ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಕೊರೊನಾ ಸೋಂಕಿತ ವ್ಯಕ್ತಿಗಳ ಜೊತೆ ಸರಿಯಾಗಿ ನಡೆದುಕೊಳ್ಳಿ. ಅವರಿಗೆ ಸರಿಯಾಗಿ ಚಿಕಿತ್ಸೆ ನೀಡಿ ಎಂದು ತಾಕೀತು ಮಾಡಿದರು.

    ಕೆಲ ಆಸ್ಪತ್ರೆಗಳ ಸಿಬ್ಬಂದಿ ಈ ವಿಷಯದಲ್ಲಿ ಅಸಡ್ಡೆ ತೋರಿದ್ದು, ಅಂತಹ ಆಸ್ಪತ್ರೆ ಮೇಲೆ ಮುಂದಿನ ದಿನಗಳಲ್ಲಿ ಕಠಿಣ ನಿಲುವು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ರಾಜ್ಯ ಕಂದಾಯ ಇಲಾಖಾ ನೌಕರರಿಗೂ, ಕೊರೊನಾ ತಡೆಯುವ ನಿಟ್ಟಿನಲ್ಲಿ, ಆಯುರ್ವೇದ ಬೂಸ್ಟರ್ ಔಷಧ ಕಿಟ್ ನ್ನು ಸಚಿವ ಈಶ್ವರಪ್ಪ ವಿತರಿಸಿದರು.

  • ಮೂರು ಬಾರಿ ನೆಗೆಟಿವ್ ಬಂದ ರೋಗಿಗೆ ಖಾಸಗಿ ಆಸ್ಪತ್ರೆಯಲ್ಲಿ ಪಾಸಿಟಿವ್ ಟ್ರೀಟ್ಮೆಂಟ್!

    ಮೂರು ಬಾರಿ ನೆಗೆಟಿವ್ ಬಂದ ರೋಗಿಗೆ ಖಾಸಗಿ ಆಸ್ಪತ್ರೆಯಲ್ಲಿ ಪಾಸಿಟಿವ್ ಟ್ರೀಟ್ಮೆಂಟ್!

    – ಇದೂವರೆಗೂ ಆಗಿದೆ 4 ಲಕ್ಷ ರೂ. ಬಿಲ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸದ ನಡುವೆ, ಖಾಸಗಿ ಆಸ್ಪತ್ರೆಗಳ ಕೊರೊನಾ ಪಾಸಿಟಿವ್, ನೆಗೆಟಿವ್ ಮಿಸ್ಟರಿಯೊಂದು ಬಯಲಾಗಿದೆ.

    ಹೌದು. ಮೂರು ಬಾರಿ ನೆಗೆಟಿವ್ ಬಂದ ರೋಗಿಗೆ ಖಾಸಗಿ ಆಸ್ಪತ್ರೆಯಲ್ಲಿ ಪಾಸಿಟಿವ್ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಬಿಬಿಎಂಪಿ ವರದಿಯಲ್ಲಿ ನೆಗೆಟಿವ್ ಎಂದು ಬಂದಿದ್ದು, ಆದರೆ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಮಾತ್ರ ಪಾಸಿಟಿವ್ ಎಂದು ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಆಸ್ಪತ್ರೆ ಸಿಬ್ಬಂದಿ ಪಾಸಿಟಿವ್ ರಿಪೋರ್ಟ್ ಮಾತ್ರ ಕೊಡ್ತಿಲ್ಲ. ಆದರೆ ರೋಗಿಯ ನೆಗೆಟಿವ್ ರಿಪೋರ್ಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಏನಿದು ಘಟನೆ?
    52 ವರ್ಷದ ವ್ಯಕ್ತಿ ಜುಲೈ 21 ರಂದು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಉಸಿರಾಟದ ಸಮಸ್ಯೆ ಅಂತ ಹೋಗಿದ್ದಾರೆ. ನಂತರ ಅಲ್ಲಿನ ವೈದ್ಯರು ಟೆಸ್ಟ್ ಮಾಡಿ ಎಕ್ಸ್ ರೇ ಮಾಡಬೇಕು ಅಂದಿದ್ದಾರೆ. ಎಕ್ಸ್ ರೇ ಮಾಡಿದ ವೈದ್ಯರು, ರೋಗಿಗೆ ಸಾಕಷ್ಟು ಸಮಸ್ಯೆ ಇದೆ ಎಮರ್ಜೆನ್ಸಿ ವಾರ್ಡಿಗೆ ಶಿಫ್ಟ್ ಮಾಡಬೇಕು ಅಂದಿದ್ದಾರೆ.

    ಅಲ್ಲದೆ ಸಂಜೆ ಒಂದು ಲಕ್ಷ ರುಪಾಯಿ ಹಣ ಕಟ್ಟಲು ಹೇಳಿದ್ದಾರೆ. ವೈದ್ಯರ ಮಾತು ನಂಬಿದ ಕುಟುಂಬಸ್ಥರು 23 ರಂದು ಬೆಳಗ್ಗೆ ಒಂದು ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಜುಲೈ 16ರಂದು ರೋಗಿಗೆ ಮತ್ತಿಕೆರೆ ಬಿಬಿಎಂಪಿ ಕಚೇರಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ ಅಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ.

    ಎರಡು ದಿನಗಳವರೆಗೆ ಬ್ಯಾಪಿಸ್ಟ್ ನಲ್ಲಿಯೇ ಚಿಕಿತ್ಸೆ ನೀಡಿದ್ದು, 25 ರಂದು ಕೋವಿಡ್ ಟೆಸ್ಟ್ ಮಾಡಬೇಕು ಅಂತ ಸ್ವಾಬ್ ತೆಗೆದುಕೊಂಡಿದ್ದಾರೆ. ರಾತ್ರಿ 8 ಗಂಟೆ ವೇಳೆಗೆ ಮೊಬೈಲ್ ಗೆ ರಿಪೋರ್ಟ್ ನೆಗೆಟಿವ್ ಅಂತ ಬಂದಿದೆ. ಆಗಸ್ಟ್ 2ರಂದು ಮತ್ತೆ ಕೋವಿಡ್ ಟೆಸ್ಟ್ ಮಾಡಲು ಸ್ವಾಬ್ ತೆಗೆದುಕೊಂಡಿದ್ದಾರೆ.

    ಆಗಸ್ಟ್ 4ರಂದು ಬೆಳಗ್ಗೆಯೇ ನಿಮಗೆ ಪಾಸಿಟಿವ್ ಅಂತ ಹೇಳಿ ಸಂಜೆ ಕೊರೊನಾ ಸೋಂಕಿತರು ಇರುವ ವಾರ್ಡಿಗೆ ಶಿಫ್ಟ್ ಮಾಡಿದ್ದಾರೆ. ಕುಟುಂಬಸ್ಥರು ಪಾಸಿಟಿವ್ ರಿಪೋರ್ಟ್ ಕೇಳಿದ್ರೆ ಆಸ್ಪತ್ರೆಯವರು ಡಾಕ್ಟರ್ ಬಳಿ ಇದೆ ನಮ್ಮ ಬಳಿ ಇಲ್ಲ ಅಂದಿದ್ದಾರೆ. ಆದರೆ ಇತ್ತ ರೋಗಿಯ ಮೊಬೈಲ್ ಗೆ ಕೊರೊನಾ ನೆಗೆಟಿವ್ ಅಂತ ರಿಪೋರ್ಟ್ ಬಂದಿದೆ.

    ಸಂಜೆ ವೇಳೆಗೆ ಮಲ್ಲೇಶ್ವರಂ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಹೋಗಿ ಕೇಳಿದ್ರೆ ಅಲ್ಲಿ ರೋಗಿಗೆ ನೆಗೆಟಿವ್ ಅಂತ ಮಾಹಿತಿ ನೀಡಿದ್ದಾರೆ. ಆದರೂ ಆಸ್ಪತ್ರೆಯವರು ಕೋವಿಡ್ ರೋಗಿಗಳ ವಾರ್ಡ್ ನಲ್ಲೇ ಚಿಕಿತ್ಸೆ ಕೊಡ್ತಿದ್ದಾರೆ. ಇಲ್ಲಿಯವರೆಗೆ ಆಸ್ಪತ್ರೆಯ ಬಿಲ್ 4 ಲಕ್ಷ ರುಪಾಯಿವರೆಗೆ ಆಗಿದೆ. ಕುಟುಂಬಸ್ಥರು ಎರಡು ಲಕ್ಷದ ಐವತ್ತು ಸಾವಿರ ರುಪಾಯಿ ಹಣ ಕಟ್ಟಿದ್ದಾರೆ.

    ಒಟ್ಟಿನಲ್ಲಿ ಕೊರೊನಾ ಭೀಕರತೆಯ ಮಧ್ಯೆ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಒಂದೊಂದಾಗಿಯೇ ಬಯಲಾಗುತ್ತಿದೆ.

  • ಖಾಸಗಿ ಆಸ್ಪತ್ರೆ ಮೊಂಡಾಟ ಮುಂದುವರಿಕೆ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಸಾವು

    ಖಾಸಗಿ ಆಸ್ಪತ್ರೆ ಮೊಂಡಾಟ ಮುಂದುವರಿಕೆ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಸಾವು

    ಬೆಂಗಳೂರು: ಸರ್ಕಾರ ಎಷ್ಟು ಬಾರಿ ಎಚ್ಚರಿಕೆ ಕೊಟ್ಟಿದ್ದರೂ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.

    70 ವರ್ಷದ ವೃದ್ಧೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಮಹಾಲಕ್ಷ್ಮಿ ಲೇಔಟ್‍ನಲ್ಲಿ ವೃದ್ಧೆಗೆ ಆರೋಗ್ಯ ಸಮಸ್ಯೆ ಕಾಣಿಸಿದೆ. ತಕ್ಷಣ ಅವರನ್ನು ವೆಸ್ಟ್ ಆಫ್ ಕಾರ್ಡ್ ರೋಡ್‍ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಆಸ್ಪತ್ರೆಯಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದೆ. ಆದರೆ ಇಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಇಲ್ಲ ಎಂದು ಹೇಳಿ ವೈದ್ಯರು ಕಳುಹಿಸಿದ್ದಾರೆ. ಕೊನೆಗೆ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ವೃದ್ಧೆ ಮೃತಪಟ್ಟಿದ್ದಾರೆ.

    ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಬೆಡ್ ಇಲ್ಲ ಅಂತ ನೆಪ ಹೇಳಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಪರಿಣಾಮ 70 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಇದರಿಂದ ಸರ್ಕಾರ ಎಷ್ಟೇ ಎಚ್ಚರಿಕೆ ಕೊಟ್ಟರೂ ಖಾಸಗಿ ಆಸ್ಪತ್ರೆ ಮಾತ್ರ ಅಮಾನವೀಯವಾಗಿ ವರ್ತಿಸುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ.

  • “ಬೆಡ್, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” – ಖಾಸಗಿ ಆಸ್ಪತ್ರೆಯ ಭರ್ಜರಿ ಆಫರ್

    “ಬೆಡ್, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” – ಖಾಸಗಿ ಆಸ್ಪತ್ರೆಯ ಭರ್ಜರಿ ಆಫರ್

    ಬೆಂಗಳೂರು: “ಬೆಡ್ ಖಾಲಿ ಇದೆ, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” ಎಂದು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಭರ್ಜರಿ ಆಫರ್ ಕೊಟ್ಟಿದೆ.

    ನಗರದಲ್ಲಿ ಶೇ.50ರಷ್ಟು ಬೆಡ್ ಬಿಟ್ಟು ಕೊಡುವುದಕ್ಕೆ ಕಳ್ಳಾಟ ವಾಡುತ್ತಿರುವ ಖಾಸಗಿ ಆಸ್ಪತ್ರೆಯ ಮಧ್ಯೆ ಲಗ್ಗೆರೆಯ ‘ಬೆಥಲ್ ಮೆಡಿಕಲ್ ಮಿಷನ್’ ಆಸ್ಪತ್ರೆ ಸೇವಾ ಮನೋಭಾವ ಹೊಂದಿದೆ. ಈ ಡಿಸೆಂಬರಿನಲ್ಲಿ ಉದ್ಘಾಟನೆಯಾಗಬೇಕಾಗಿದ್ದ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ರೋಗಿಗಳಿಗೆ ಮೀಸಲಿಟ್ಟಿದೆ.

    ಬರೋಬ್ಬರಿ 400 ಬೆಡ್, 12 ಐಸಿಯು ವೆಂಟಿಲೇಟರ್ ಬೆಡ್ ಇಲ್ಲಿ ಲಭ್ಯವಿದೆ. ಕೊರೊನಾ ರೋಗಿಗಳು ರಸ್ತೆ ರಸ್ತೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪುತ್ತಿರುವುದನ್ನ, ನರಳಾಡುತ್ತಿರುವುದನ್ನು ನೋಡಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ.

    ಸುಸಜ್ಜಿತ ಐದು ಮಳಿಗೆಯ ಆಸ್ಪತ್ರೆ ಸಂಪೂರ್ಣವಾಗಿ ಕೊರೊನಾ ರೋಗಿಗಳಿಗೆ ಇಂದಿನಿಂದ ಮೀಸಲಿಡಲಾಗಿದೆ. ಈ ಖಾಸಗಿ ಆಸ್ಪತ್ರೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರಕ್ಕೆ ಬೆಡ್ ನೀಡಲು ಮುಂದಾಗಿದೆ. ಅವಶ್ಯಕತೆ ಇದ್ದರೆ ಇನ್ನೂ 300 ಬೆಡ್ ವ್ಯವಸ್ಥೆ ಮಾಡುತ್ತೇವೆ ಎಂದು ಭರಸೆ ಕೂಡ ನೀಡಿದೆ.

  • ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ಆರು ದಿನದ ಬಾಣಂತಿ ಕೊರೊನಾಗೆ ಬಲಿ

    ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ಆರು ದಿನದ ಬಾಣಂತಿ ಕೊರೊನಾಗೆ ಬಲಿ

    -ಆಂಬುಲೆನ್ಸ್‌ನಲ್ಲೇ ಪ್ರಾಣ ಬಿಟ್ಟ ಮಹಿಳೆ

    ಬೆಂಗಳೂರು: ಆಸ್ಪತ್ರೆಯಲ್ಲಿ ಬೆಡ್ ಸಿಗದೆ 6 ದಿನದ ಬಾಣಂತಿ ಕೊರೊನಾಗೆ ಬಲಿಯಾಗಿರುವ ಅಮಾನವೀಯ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

    ರಾಜಾಜಿನಗರ ಖಾಸಗಿ ಆಸ್ಪತ್ರೆಯಲ್ಲಿ 6 ದಿನಗಳ ಹಿಂದೆ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು. ಆದರೆ ಮನೆಗೆ ತೆರಳಿದ ಸಂದರ್ಭದಲ್ಲಿ ಮಹಿಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಬಾಣಂತಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಅವರಿಗೆ ಆ್ಯಂಟಿಜೆನ್‌ ಟೆಸ್ಟ್ ಮಾಡಿದ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

    ಕೊರೊನಾ ಸೋಂಕು ದೃಢವಾಗುತ್ತಿದಂತೆ ಮಹಿಳೆಯನ್ನು ಖಾಸಗಿ ಆಸ್ಪತ್ರೆಯಿಂದ ಕರೆದುಕೊಂಡು ಚಿಕಿತ್ಸೆ ಪಡೆಯಲು ಆಂಬುಲೆನ್ಸ್ ನಲ್ಲಿ ತೆರಳಿದ್ದರು. ನಿನ್ನೆ ಸಂಜೆ 4 ಗಂಟೆಯಿಂದ ಬಾಣಂತಿಯನ್ನು ಕರೆದುಕೊಂಡು ವಿವಿಧ ಆಸ್ಪತ್ರೆಗೆ ಭೇಟಿ ನೀಡಿದರೂ ಚಿಕಿತ್ಸೆ ನೀಡಲು ನಿರಾಕರಿಸಲಾಗಿತ್ತು. ಬಹುತೇಕ ಆಸ್ಪತ್ರೆಗಳು ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ತಿಳಿಸಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು.

    ಮಹಿಳೆಯ ಕುಟುಂಬಸ್ಥರು ತಮಗೆ ತಿಳಿದಿದ್ದ ವ್ಯಕ್ತಿಯೊಬ್ಬರಿಂದ ಶಿಫಾರಸು ಪಡೆದು ಕೊನೆಗೆ ಮುಂಜಾನೆ 4 ಗಂಟೆ ವೇಳೆಗೆ ಬೊಮ್ಮಸಂದ್ರದ ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲು ಆಗಮಿಸಿದ್ದರು. ಆದರೆ ಆ ವೇಳೆಗೆ ಬಾಣಂತಿ ಆಂಬುಲೆನ್ಸ್ ನಲ್ಲೇ ಸಾವನ್ನಪ್ಪಿದ್ದರು. ಸರಿ ಸುಮಾರು 12 ಗಂಟೆಗಳ ಕಾಲ ನಗರದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು ಮಹಿಳೆಗೆ ಚಿಕಿತ್ಸೆ ಲಭಿಸಿರಲಿಲ್ಲ.

  • ಸೋಂಕಿತರಿಂದ ಸುಲಿಗೆ- ಖಾಸಗಿ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

    ಸೋಂಕಿತರಿಂದ ಸುಲಿಗೆ- ಖಾಸಗಿ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

    – ಸೋಂಕಿತರಿಂದ 5 ಲಕ್ಷ ಪಡೆದಿರುವ ಬಗ್ಗೆ ಮಾಹಿತಿ
    – ಹಣ ಮರಳಿಸುವಂತೆ ತಾಕೀತು

    ಬೆಂಗಳೂರು: ಕೊರೊನಾ ಸೋಂಕಿತರಿಂದ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಆಸ್ಪತ್ರೆಗಳ ಮೇಲೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಇಂದೂ ಸಹ ಹಲವು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ.

    ಎಡಿಜಿಪಿ ಸುನೀಲ್ ಅಗರ್‍ವಾಲ್, ಐಎಎಸ್ ಉಮಾ ಮಹಾದೇವನ್ ತಂಡದಿಂದ ಪರಿಶೀಲನೆ ನಡೆಸಲಾಗಿದ್ದು, ಸರ್ಜಾಪುರ ರಸ್ತೆಯ ಕೊಲಂಬಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಂದ ಹೆಚ್ಚುವರಿ ಹಣ ಪಡೆದಿರುವುದು ಪತ್ತೆಯಾಗಿದೆ. 14 ಸೋಂಕಿತರಿಂದ 5,02,245 ರೂ.ಗಳನ್ನ ಪಡೆದಿದ್ದು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದಿರುವುದು ದಾಳಿ ವೇಳೆ ಪತ್ತೆಯಾಗಿದೆ. ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಸೋಂಕಿತ ಬ್ಯಾಂಕ್ ಖಾತೆಗೆ ಮರಳಿ ಜಮೆ ಮಾಡುವಂತೆ ಅಧಿಕಾರಿಗಳು ಆಸ್ಪತ್ರೆಗೆ ಸೂಚಿಸಿದ್ದಾರೆ. ಅಲ್ಲದೆ ಸೋಂಕಿತರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿರುವ ಬಗ್ಗೆ ಡಿಸ್ ಪ್ಲೇ ಬೊರ್ಡ್ ಖಡ್ಡಾಯವಾಗಿ ಅಳವಡಿಸುವಂತೆ ಇದೇ ವೇಳೆ ಸೂಚನೆ ನೀಡಿದ್ದಾರೆ. ತಂಡ ಇನ್ನೂ ನಾಲ್ಕು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಮಾರತ್ ಹಳ್ಳಿಯ ಸರ್ಕಾರಿ ಆಸ್ಪತ್ರೆ, ಯಶೋಮತಿ, ವೈಟ್‍ಫೀಲ್ಡ್ ನ ಕೋಲಂಬಿಯಾ ಏಷ್ಯಾ, ವೈದೇಹಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ನಾಲ್ಕು ಆಸ್ಪತ್ರೆಗಳ ಬಿಲ್ ಪರಿಶೀಲನೆ ನಡೆಸಿದ್ದು ಹೆಚ್ಚು ಹಣ ಪಡೆಯದಂತೆ ವಾರ್ನ್ ಮಾಡಿದ್ದಾರೆ.

  • ಓರ್ವ ಕೊರೊನಾ ರೋಗಿಗೆ 5 ಲಕ್ಷ ಬಿಲ್ – ಖಾಸಗಿ ಆಸ್ಪತ್ರೆ ವಿರುದ್ಧ ಸುಧಾಕರ್ ಕೆಂಡಾಮಂಡಲ

    ಓರ್ವ ಕೊರೊನಾ ರೋಗಿಗೆ 5 ಲಕ್ಷ ಬಿಲ್ – ಖಾಸಗಿ ಆಸ್ಪತ್ರೆ ವಿರುದ್ಧ ಸುಧಾಕರ್ ಕೆಂಡಾಮಂಡಲ

    – ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ

    ಬೆಂಗಳೂರು: ಕೊರೊನಾ ರೋಗಿಗೆ 5 ಲಕ್ಷ ರೂ. ಬಿಲ್‌ ಮಾಡಿದ ಖಾಸಗಿ ಆಸ್ಪತ್ರೆಯ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಕೆಂಡಾಮಂಡಲವಾಗಿದ್ದಾರೆ.

    ಬೆಂಗಳೂರಿನಲ್ಲಿ ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಹಣ ಲೂಟಿ ಮಾಡುವ ಕೆಲಸ ನಡೆಯುತ್ತಲೇ ಇದೆ. ಕೊರೊನಾ ರೋಗವನ್ನು ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಆಸ್ಪತ್ರೆಗಳು ದುಡ್ಡು ಮಾಡುವ ದಂಧೆಗೆ ಇಳಿದಿವೆ. ಸರ್ಕಾರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದರ ನಿಗದಿ ಮಾಡಿದ್ದರೂ ಆಸ್ಪತ್ರೆಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈಗ ಸುಧಾಕರ್ ಅವರು ಖಾಸಗಿ ಆಸ್ಪತ್ರೆಯ ಕರ್ಮಕಾಂಡದ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಖಾಸಗಿ ಆಸ್ಪತ್ರೆಯ ಮೇಲೆ ಕಿಡಿಕಾರಿ ಟ್ವೀಟ್ ಮಾಡಿರುವ ಸುಧಾಕರ್ ಅವರು, ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ, ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಪಡೆದಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಇಂದು ಆ ಖಾಸಗಿ ಆಸ್ಪತ್ರೆಯ ವಿರುದ್ಧ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಸುಧಾಕರ್, ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ಎಚ್ಚರಿಕೆ ಮಾಡಿದ್ದೇನೆ. ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ಬಿಲ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು ಎಂದು ಬರೆದು ಬಿಲ್‌ ಫೋಟೋ ಅಪ್ಲೋಡ್‌ ಮಾಡಿದ್ದಾರೆ.