ಧಾರವಾಡ: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಭೆ ಮಾಡಿದ್ದೇವೆ, ನಮಗೆ ಇನ್ನಷ್ಟು ಬೆಡ್ ಅವಶ್ಯಕತೆ ಇದೆ. ಶೇ.50 ರಷ್ಟು ಮೀಸಲಿಡಲು ಆದೇಶಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಈ ಮುಂಚೆಯೂ ಹಲವಾರು ಬಾರಿ ಸಭೆ ನಡೆಸಿದ್ದೇವೆ. ಆಸ್ಪತ್ರೆಯವರ ಸಮಸ್ಯೆ ಬಗ್ಗೆಯೂ ಇದೀಗ ಚರ್ಚೆ ಮಾಡಿದ್ದೇವೆ. ಆಸ್ಪತ್ರೆಯವರು ಸರ್ಕಾರದ ನಿರ್ಧಾರಕ್ಕೆ ಸಿದ್ಧರಿದ್ದೇವೆ ಎಂದಿದ್ದಾರೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆ ವಿಚಾರವಾಗಿ 080 47168111 ನಂಬರ್ ಗೆ ಫೋನ್ ಮಾಡಬಹುದು ಎಂದು ತಿಳಿಸಿದರು.
ವಾರ್ ರೂಮ್‍ನಿಂದ ಆಸ್ಪತ್ರೆ, ಬೆಡ್ ಬಗ್ಗೆ ವ್ಯವಸ್ಥೆ ಮಾಡಲಾಗುತ್ತೆ, ಬಳಿಕ ಆಸ್ಪತ್ರೆ ಹೆಸರು, ಬೆಡ್ ಸಂಖ್ಯೆಯನ್ನು ರೋಗಿಗೆ ತಿಳಿಸಲಾಗುತ್ತದೆ. ಖಾಸಗಿಯವರು ಆರಂಭದಲ್ಲಿ ಬೆಡ್ ಕೊಡಲು ನಿರಾಕರಿಸಿದ್ದರು, ಅವರಿಗೆ ನೋಟಿಸ್ ಕೊಟ್ಟಿದ್ದೇವೆ. ಕಾನೂನು ಸಂಘರ್ಷಕ್ಕೆ ಅವಕಾಶ ಕೊಡುವುದು ಬೇಡ. ಜೊತೆಗೆ ಕೋವಿಡ್ ಅಲ್ಲದ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಕೊಡಲಾಗುವುದು ಎಂದು ಹೇಳಿದರು.
ಹಾವೇರಿ: ಜಿಲ್ಲೆಯ ಹಿರೇಕೆರೂರು ಶಾಸಕ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಕೋವಿಡ್-19 ಸೋಂಕಿತರಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದರೆ ಅಂತವರಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಹಾವೇರಿ ಜಿಲ್ಲೆಯ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕು ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿದವರು ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯಲು ಮುಂದಾದರೆ ಅಂತವರು ಚಿಕಿತ್ಸೆ ಪಡೆದ ಬಳಿಕ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್ ಹಾಗೂ ಆಸ್ಪತ್ರೆ ಬಿಲ್ ನೀಡಿದರೆ ವೆಚ್ಚ ಭರಿಸುತ್ತೇನೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಿರೇಕೆರೂರು ಮತಕ್ಷೇತ್ರ ವ್ಯಾಪ್ತಿಯಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಕೋವಿಡ್ ಸೋಂಕಿನ ಹಿನ್ನೆಲೆ ಹಿರೇಕೆರೂರು ಸೇರಿದಂತೆ ಹಾವೇರಿ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಲ್ಲಿ, ಅಂತವರ ಚಿಕಿತ್ಸಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲು ತೀರ್ಮಾನಿಸಿದ್ದೇನೆ.#Hirekerur | #Rattihallipic.twitter.com/ZCpHHDKS93
ಮಹಾಮಾರಿ ಕೊರೊನಾ ವಿಶ್ವವ್ಯಾಪಿಯಾಗಿ ಹೆಚ್ಚು ಸೋಂಕು ಹರಡುತ್ತಿದೆ. ಸರ್ಕಾರ ಕೂಡ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಜನರು ಸಹ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಕೊರೊನಾ ಅಂದರೆ ಭಯಬೇಡ, ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ನಾವು ಪಾಲನೆ ಮಾಡೋಣ ಎಂದು ಎಚ್ಚರಿಕೆ ನೀಡಿದ್ದಾರೆ.
ಧಾರವಾಡ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳ ಪೈಕಿ ಶೇ.50ರಷ್ಟನ್ನು ಕಡ್ಡಾಯವಾಗಿ ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಲು ಧಾರವಾಡ ಜಿಲ್ಲಾಡಳಿತ ಏಪ್ರಿಲ್ 15ರಂದು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ನಿರ್ದೇಶನ ನೀಡಿತ್ತು. ಆದರೆ ಆಸ್ಪತ್ರೆಗಳು ತಪ್ಪು ಮಾಹಿತಿ ನೀಡುತ್ತಿದ್ದು, 3 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಸರ್ಕಾರದ ಆದೇಶ ಉಲ್ಲಂಘಿಸಿರುವ ಹುಬ್ಬಳ್ಳಿಯ ಪ್ರಮುಖ ಮೂರು ಆಸ್ಪತ್ರೆಗಳಿಗೆ ಸಾಂಕ್ರಾಮಿಕ ರೋಗ ಕಾಯ್ದೆ-1987 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005 ರನ್ವಯ 24 ಗಂಟೆಯಲ್ಲಿ ಉತ್ತರ ನೀಡುವಂತೆ ತಿಳಿಸಿ, ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಹುಬ್ಬಳ್ಳಿಯ ಶಕುಂತಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 75 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 31 ಜನ ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದರು. ಅದೇ ರೀತಿ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ನಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 26 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 26 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿತ್ತು. ತತ್ವದರ್ಶಾ ಆಸ್ಪತ್ರೆ 150 ಹಾಸಿಗೆಗಳಿಗೆ ಅನುಮತಿ ಪಡೆದಿದ್ದು, ಇದರಲ್ಲಿ ಶೇ.50 ರಷ್ಟು ಅಂದರೆ 75 ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗೆ ಮೀಸಲಿಡಬೇಕು.
ತತ್ವದರ್ಶಾ ಆಸ್ಪತ್ರೆಯವರು ಕೋವಿಡ್-19 ದೃಢಪಟ್ಟ ಪ್ರಕರಣಗಳ ಲ್ಯಾಬೋರೇಟರಿ ಫಲಿತಾಂಶ ಇಲ್ಲದೆ ಕೋವಿಡ್-19 ಪ್ರಕರಣಗಳೆಂದು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಮೂರು ಆಸ್ಪತ್ರೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್ ಚಿಕಿತ್ಸೆಗಾಗಿ ಸರ್ಕಾರದ ನಿರ್ದೇಶನದ ಸ್ಪಷ್ಟ ಉಲ್ಲಂಘನೆ ಕಂಡುಬಂದ ಹಿನ್ನೆಲೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ಬೆಡ್ ಗಳಿದ್ರೂ ಖಾಸಗಿ ಆಸ್ಪತ್ರೆಗಳು ಸುಳ್ಳು ಹೇಳುತ್ತಿವೆಯಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊರೊನಾ ಸಮಯದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳ ದುಡ್ಡು ಮಾಡೋಕೆ ನಿಂತಿವೆ. ಪಬ್ಲಿಕ್ ಟಿವಿಯಲ್ಲಿ ಖಾಸಗಿ ಆಸ್ಪತ್ರೆಗಳ ದಂಧೆ ಬಯಲಾಗಿದೆ. ಖಾಸಗಿ ಆಸ್ಪತ್ರೆಗಳು ಹೇಳುವ ಹಣ ಕೇಳಿದ್ರೆ ರೋಗಿ ಗುಣಮುಖರಾಗಿ ಸಾಲ ಹೊತ್ತುಕೊಂಡು ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತೆ.
ಒಂದು ದಿನದ ಬೆಡ್‍ಗೆ ಖಾಸಗಿ ಆಸ್ಪತ್ರೆಗಳು 70 ಸಾವಿರ ರೂ. ಬಿಲ್ ಮಾಡುತ್ತಿವೆ. ರೋಗಿಯ ಸಂಬಂಧಿಯೊಬ್ಬರು ಖಾಸಗಿ ಆಸ್ಪತ್ರೆ ಮಾತನಾಡಿದ ಆಡಿಯೋ ಕ್ಲಿಪ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೊದಲಿಗೆ ಬೆಡ್ ಇಲ್ಲ ಅಂತ ಹೇಳುವ ಆಸ್ಪತ್ರೆ, ನಗದು ಬಿಲ್ ನೀಡುತ್ತೇವೆ ಎಂದಾಗ ಬಂದು ದಾಖಲಾಗಿ ಅಂತ ಹೇಳುತ್ತೆ. ತದನಂತರ ಮುಂಗಡವಾಗಿಯೇ ಮೂರುವರೆ ಲಕ್ಷ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಡಿಮ್ಯಾಂಡ್ ಮಾಡುತ್ತಾರೆ. ರೋಗಿಯ ಸಂಬಂಧಿ ಮತ್ತು ಖಾಸಗಿ ಆಸ್ಪತ್ರೆಯ ಸಂಭಾಷಣೆ ಹೀಗಿದೆ.
ರೋಗಿಯ ಕಡೆಯವರು – ಕೋವಿಡ್ ವಾರ್ಡ್ ಬೆಡ್ ಇದ್ಯಾ? ಖಾಸಗಿ ಆಸ್ಪತ್ರೆ ಸಿಬ್ಬಂದಿ – ಪೇಷೆಂಟ್ ಕಂಡಿಷನ್ ಹೇಗಿದೆ ನಾರ್ಮಲ್ ಇದ್ಯಾ? ಆಕ್ಸಿಜನ್ ಬೇಕಾ..? ರೋಗಿಯ ಕಡೆಯವರು – ಆಕ್ಸಿಜನ್ ಬೇಡ. ಆದ್ರೇ ಸ್ವಲ್ಪ ಪ್ಯಾನಿಕ್ ಆಗಿದ್ದಾರೆ ಖಾಸಗಿ ಆಸ್ಪತ್ರೆ ಸಿಬ್ಬಂದಿ- ಹೌದಾ …? ಸಿರೀಯಸ್ ಆಗಿಲ್ವಲ್ಲ? ರೋಗಿಯ ಕಡೆಯವರು- ಇಲ್ಲ.. ಎಷ್ಟಾಗುತ್ತೆ ಬೆಡ್…? ಖಾಸಗಿ ಆಸ್ಪತ್ರೆ ಸಿಬ್ಬಂದಿ- ಅದೇ ನಾರ್ಮಲ್ ಆಕ್ಸಿಜನ್ ಒಂದು, ವೆಂಟಿಲೇಟರ್ ಇದೆ: ಪೇಷೆಂಟ್ ಕಂಡೀಷನ್ ಮೇಲೆ ಡಿಪೆಂಡ್ ಆಗುತ್ತೆ. ರೋಗಿಯ ಕಡೆಯವರು – ಇದ್ಯಾ….?
ಖಾಸಗಿ ಆಸ್ಪತ್ರೆ ಸಿಬ್ಬಂದಿ- ಇದೆ… ಇರಿ ಇನ್ನೊಂದು ಲೈನ್ ಗೆ ಕನೆಕ್ಟ್ ಮಾಡ್ತೀನಿ.. ರೋಗಿಯ ಕಡೆಯವರು – ಸರ್… ನಾರ್ಮಲ್ ಬೆಡ್ ಎಷ್ಟಾಗುತ್ತೆ…? ಖಾಸಗಿ ಆಸ್ಪತ್ರೆ ಸಿಬ್ಬಂದಿ– ಕೋವಿಡ್ ಪೇಷೆಂಟಾ…? ರೋಗಿಯ ಕಡೆಯವರು – ಹೌದು ಖಾಸಗಿ ಆಸ್ಪತ್ರೆ ಸಿಬ್ಬಂದಿ– ಇಲ್ಲ… ಕೋವಿಡ್ ಪೇಷೆಂಟ್‍ಗೆ ಬೆಡ್ ಇಲ್ಲ ಯಾರು ಹೇಳಿದ್ದು? ರೋಗಿಯ ಕಡೆಯವರು – ಈಗ ಹೇಳಿದ್ರಲ್ಲ… ಕಾಲ್ ಟ್ರಾನ್ಸ್ ಫರ್ ಮಾಡಿರೋರು ಖಾಸಗಿ ಆಸ್ಪತ್ರೆ ಸಿಬ್ಬಂದಿ– ಏನ್ ನಿಮ್ಮ ಹತ್ರ ಇನ್ಶೂರೆನ್ಸ್ ಇರೋದಾ ಕ್ಯಾಶ್? ರೋಗಿಯ ಕಡೆಯವರು – ಕ್ಯಾಶ್
ಖಾಸಗಿ ಆಸ್ಪತ್ರೆ ಸಿಬ್ಬಂದಿ– ಆಕ್ಸಿಜನ್ ಬೇಕಾ ರೋಗಿಯ ಕಡೆಯವರು – ಬೇಡ. ನಾರ್ಮಲ್ ಬೆಡ್ ಸಾಕು. ಖಾಸಗಿ ಆಸ್ಪತ್ರೆ ಸಿಬ್ಬಂದಿ– ಆಯ್ತು ಎರಡು ನಿಮಿಷ ಬಿಟ್ಟು ಕಾಲ್ ಮಾಡಿ ಹೇಳ್ತೀವಿ ರೋಗಿಯ ಕಡೆಯವರು – ಎರಡು ನಿಮಿಷ ಬಿಟ್ಟು ಕಾಲ್ ಮಾಡೋಕೆ ಹೇಳಿದ್ರಲ್ಲ ಖಾಸಗಿ ಆಸ್ಪತ್ರೆ ಸಿಬ್ಬಂದಿ– ಹಾ… ಜನರಲ್ ವಾರ್ಡ್ ಅಂತಾ ಹೇಳಿದ್ರಲ್ಲ ನೀವು ರೋಗಿಯ ಕಡೆಯವರು – ಹೌದು ಬ್ರದರ್ ಖಾಸಗಿ ಆಸ್ಪತ್ರೆ ಸಿಬ್ಬಂದಿ– ಎಲ್ಲಿಂದ ಬರ್ತಾ ಇರೋದು…? ರೋಗಿಯ ಕಡೆಯವರು – ಅಭಿನವ್ ಆಸ್ಪತ್ರೆ ನಲ್ಲಿದ್ದಾರೆ. ಅಲ್ಲಿ ಬೆಡ್ ಇಲ್ಲ ಅದಕೆ ಶಿಫ್ಟ್
ಖಾಸಗಿ ಆಸ್ಪತ್ರೆ ಸಿಬ್ಬಂದಿ– ಪ್ರತಿದಿನ ಬೆಡ್ ಚಾರ್ಜ್ ಬಂದು 75 ಸಾವಿರ ಆಗುತ್ತೆ. ರೋಗಿಯ ಕಡೆಯವರು – 75 ಸಾವಿರ ಆಗುತ್ತಾ…? ಖಾಸಗಿ ಆಸ್ಪತ್ರೆ ಸಿಬ್ಬಂದಿ– ಹಾ 75 ಆಗುತ್ತೆ .ಪ್ರತಿ ದಿನ ಬೆಡ್ ಚಾರ್ಜ್ ನೀವು ಈಗ್ಲೇ ಆಟ್ ಲೀಸ್ಟ್ 4 ಲಕ್ಷ ಅಡ್ವಾನ್ಸ್ ಮಾಡಬೇಕು. ರೋಗಿಯ ಕಡೆಯವರು – ಓಕೆ…. ಸರಿ ಟೂ ಮಿನಿಟ್ ಹೇಳ್ತೀನಿ ಖಾಸಗಿ ಆಸ್ಪತ್ರೆ ಸಿಬ್ಬಂದಿ: ಇದು ಬರೀ ನಾನು ಹೇಳ್ತಿರೋದು ಬೆಡ್ ಚಾರ್ಜ್ ಮಾತ್ರ. ಇಂಜೆಕ್ಷನ್ ಸಪರೇಟ್ ನೀವು ನೋಡ್ಕೇಬೇಕು. ಡಾಕ್ಟರ್ ಚಾರ್ಜ್. ಬೆಡ್ ಚಾರ್ಜ್ ಇನ್ ಕ್ಲ್ಯೂಡ್ ಆಗುತ್ತೆ. ಆದ್ರೇ ಲ್ಯಾಬ್ ಇನ್ವೇಸ್ಟಿಗೇಷನ್ ಫಾರ್ಮಸಿ ಸಪರೇಟ್.. ರೋಗಿಯ ಕಡೆಯವರು – ಓಕೆ….ಫ್ಯಾಮಿಲಿ ಜೊತೆ ಮಾತಾನಾಡಿ ಹೇಳ್ತೀನಿ..
ರೋಗಿ ದಾಖಲಾಗುವ ಮೊದಲೇ ವಿಮೆ ಇದೆಯಾ? ಬಿಬಿಎಂಪಿ ಖೋಟಾನಾ ಎಂಬುದನ್ನ ಮೊದಲೇ ಖಚಿತ ಪಡಿಸಿಕೊಳ್ಳುತ್ತಾರೆ. ನಗದು ನೀಡಲು ರೋಗಿಗಳು ಮುಂದಾದ್ರೆ ಮಾತ್ರ ಬೆಡ್ ಸಿಗುತ್ತೆ. ಆದ್ಗರೆ ಸರ್ಕಾರ ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ದರ ನಿಗದಿ ಮಾಡಿದೆ. ಆದ್ರೆ ಆ ದರಗಳಿಗೆ ಖಾಸಗಿ ಆಸ್ಪತ್ರೆಗಳು ಡೋಂಟ್ ಕೇರ್ ಮಾಡುತ್ತಿವೆ. ಇನ್ನಾದ್ರೂ ಸರ್ಕಾರ ಎಚ್ಚತ್ತುಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಬೆಂಗಳೂರು: ಗಂಭೀರ ಅಲ್ಲದ ಕೊರೊನಾ ಸೋಂಕಿತರಿಗೆ ಹೋಟೆಲ್ ರೂಂಗಳಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲು ಸರ್ಕಾರ ದರವನ್ನು ನಿಗದಿ ಮಾಡಿದೆ.
ಗಂಭೀರ ಅಲ್ಲದ ಕೊರೊನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಬೆಡ್ ಗಳು ಈಗಾಗಲೇ ಭರ್ತಿಯಾಗಿದೆ. ಹೀಗಾಗಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಗಂಭೀರವಲ್ಲದ ರೋಗಿಗಳಿಗೆ ಹೋಟೆಲ್‌ಗಳಿಗೆ ಚಿಕಿತ್ಸೆ ನೀಡಲು ದರ ನಿಗದಿಯಾಗಿದೆ.
1 ದಿನಕ್ಕೆ ಎಷ್ಟು?
ಎಕಾನಮಿ/ ಬಜೆಟ್ ಹೋಟೆಲ್ – 8 ಸಾವಿರ ರೂ.
3 ಸ್ಟಾರ್ ಹೋಟೆಲ್ – 10 ಸಾವಿರ ರೂ.
5 ಸ್ಟಾರ್ ಹೋಟೆಲ್ – 12 ಸಾವಿರ ರೂ.
ವೈದ್ಯರ ಸಲಹೆಯ ಮೇರೆಗೆ ಸೋಂಕಿತರು ಹೋಟೆಲ್‌ಗಳಲ್ಲಿ ಅಡ್ಮಿಟ್ ಆಗಬಹುದು. ಹೋಟೆಲ್‌ನಲ್ಲಿ 24*7 ಅಂಬುಲೆನ್ಸ್ ಸೌಲಭ್ಯ ಇರಬೇಕೆಂದು ಸರ್ಕಾರ ಸೂಚಿಸಿದೆ.
ಚಾಮರಾಜನಗರ: ಲಾಕ್‍ಡೌನ್ ಮಾಡಿದ್ರೆ ಸರ್ಕಾರಕ್ಕೆ ಹೆವಿ ರೆವಿನ್ಯೂ ಲಾಸ್ ಆಗುತ್ತದೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಏತ ನೀರಾವರಿ ಮೂಲಕ ನೀರು ತುಂಬಿಸುವ ಮಾಸ್ಟರ್ ಪ್ಲಾನ್ ಕುರಿತು ಚಾಮರಾಜನಗರದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಕೊರೊನಾ ನಿಯಂತ್ರಣಕ್ಕೆ ನೈಟ್ ಕಫ್ರ್ಯೂ ಮಾಡಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ನಮ್ಮ ನಿರೀಕ್ಷೆ ಮೀರಿ ಬೆಂಗಳೂರಿನಲ್ಲಿ ಕೊರೊನಾ ಪರಿಣಾಮ ಬೀರುತ್ತಿದೆ. ಜೀವನ, ಜೀವ ಎರಡು ನೋಡಬೇಕಿದೆ. ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೋ ನೋಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ಮಾತನಾಡಿರುವ ಅವರು, ಲಾಕ್ ಡೌನ್ ಮಾಡಿದ್ರೆ ಹೆವಿ ರೆವಿನ್ಯೂ ಲಾಸ್ ಆಗುತ್ತದೆ. ಕಳೆದ ಬಾರಿ ಲಾಕ್ ಡೌನ್ ಮಾಡಿ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಸುಬುದಾರರಿಗೆ ಕೆಲಸ ನಿಲ್ಲಿಸಿ ಅಂದ್ರೆ ಅವರಿಗೆ ಪರಿಹಾರ ನೀಡಬೇಕಾಗುತ್ತದೆ. ಸಿಎಂ ಹಣಕಾಸು ಸಚಿವಾಲಯದ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕು. ಲಾಕ್ ಡೌನ್ ಮಾಡಿ ಎಂದು ಹೇಳುತ್ತಾರೆ. ಆದರೆ ಇಂಡಸ್ಟ್ರಿ, ಆಟೋ ಡ್ರೈವರ್ ಕೆಲಸ ನಿಲ್ಲಿಸಿದ್ರೆ ತುಂಬಾ ತೊಂದರೆಯಾಗುತ್ತೆ. ಇದೆಲ್ಲಾ ಯೋಚಿಸಿ ನಿರ್ಧಾರ ಮಾಡಬೇಕಿದೆ ಎಂದು ಲಾಕ್‍ಡೌನ್ ನಿರ್ಧಾರವನ್ನು ಸಚಿವ ಮಾಧುಸ್ವಾಮಿ ತಳ್ಳಿ ಹಾಕಿದ್ದಾರೆ.
ರಾಜ್ಯದಲ್ಲಿ ಬೆಡ್ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಇರುವ 50 ಬೆಡ್ ಕೊಟ್ಟಿದ್ದೇವೆ. ಜಿಲ್ಲಾ ಮಟ್ಟದಲ್ಲಿ 200 ರಿಂದ 400 ಬೆಡ್ ಇದೆ. ಎಲ್ಲಾ ತಾಲೂಕುಗಳಲ್ಲಿ 5 ರಿಂದ 6 ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದೇವೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ಮಕ್ಕಳು ಈ ಬಾರಿ ಹಾಸ್ಟೆಲ್‍ನಲ್ಲಿದ್ದಾರೆ. ಅವರ ಪರೀಕ್ಷೆ ಯಾವಾಗ ನಡೆಯುತ್ತದೆ ಎಂದು ಗೊತ್ತಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಕೋವಿಡ್ ಸೆಂಟರ್, ಎಕ್ಸ್ಟ್ರಾ ಕೋವಿಡ್ ಸೆಂಟರ್ ಮಾಡಲೂ ಈ ಬಾರಿ ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಹೋಂ ಕ್ವಾರಂಟೈನ್‍ಗೆ ಹೆಚ್ಚು ಒತ್ತು ಕೊಡಲಾಗಿದೆ. ಕಳೆದ ಬಾರಿ ಹಾಸ್ಟೆಲ್ ತೆಗೆದುಕೊಂಡು ಕೋವಿಡ್ ಸೆಂಟರ್ ಮಾಡಿದ್ದೆವು. ಮೇ-ಜೂನ್ ನಲ್ಲಿ ಪರೀಕ್ಷೆ ಮುಗಿದರೆ ಹಾಸ್ಟೆಲ್ ಸುಪರ್ದಿಗೆ ತೆಗೆದುಕೊಂಡು ಕೋವಿಡ್ ಸೆಂಟರ್ ಮಾಡುತ್ತೇವೆ ಎಂದರು.
ಇನ್ನು ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ಬೆಂಗಳೂರಲ್ಲಿ ಕಷ್ಟವಾಗಿತ್ತು. ನಿನ್ನೆ, ಮೊನ್ನೆಯಿಂದ ಪ್ರೈವೆಟ್ ಹಾಸ್ಪಿಟಲ್ ಈ ವಿಚಾರವಾಗಿ ಸಹಕರಿಸಿರಲಿಲ್ಲ. ಕೊರೋನಾ ರೋಗಿಗಳಿಗೆ 50% ಬೆಡ್ ಕೊಡಲೇಬೇಕು ಎಂದು ತಿಳಿಸಿದ್ದೇವೆ. ಬೆಡ್ ಕೊಡುವ ವಿಚಾರವನ್ನು ಕಾನೂನು ಬದ್ಧವಾಗಿ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಿದೆ. ಈ ಹಿಂದೆ ಹೊರಡಿಸಿದ್ದ ಆದೇಶವನ್ನ ಸರ್ಕಾರವನ್ನು ಮರು ಅನುಷ್ಠಾನ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಪ್ರತಿ ಖಾಸಗಿ ಆಸ್ಪತ್ರೆ ಶೇ.50ರಷ್ಟು ಬೆಡ್ ಗಳನ್ನ ಸೋಂಕಿತರಿಗೆ ಮೀಸಲಿಡಬೇಕೆಂದು ಸೂಚಿಸಿತ್ತು.
ಜನರಲ್ ವಾರ್ಡ್‍ಗೆ 5,200 ರೂಪಾಯಿ, ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್‍ಗೆ ನಿತ್ಯ 7 ಸಾವಿರ ರೂಪಾಯಿ, ಐಸಿಯು ವಾರ್ಡ್‍ಗೆ 8,500 ರೂ. ಮತ್ತು ಐಸಿಯು ಜೊತೆಗೆ ವೆಂಟಿಲೇಟರ್ ಉಳ್ಳ ವಾರ್ಡ್‍ಗೆ 10 ಸಾವಿರ ನಿಗದಿ ಮಾಡಲಾಗಿದೆ.
ಉಳಿದಂತೆ ನಗದು ಹಾಗೂ ವಿಮಾ ಯೋಜನೆ ಹೊಂದಿರುವವರಿಗೆ ಜನರಲ್ ವಾರ್ಡ್‍ಗೆ ದಿನಕ್ಕೆ 10 ಸಾವಿರ ರೂಪಾಯಿ, ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್‍ಗೆ 12 ಸಾವಿರ ರೂ., ಐಸಿಯು ವಾರ್ಡ್‍ಗೆ 15,000 ರೂಪಾಯಿ, ಐಸಿಯು ಮತ್ತು ವೆಂಟಿಲೇಟರ್ ಹೊಂದಿರುವ ವಾರ್ಡ್‍ಗೆ 25,000 ರೂಪಾಯಿ ಫಿಕ್ಸ್ ಮಾಡಲಾಗಿದೆ.
ಬೆಂಗಳೂರು: ನಾಳೆ ಆಸ್ಪತ್ರೆಗೆ ಹೋಗಬೇಕು ಅಂತಾ ಪ್ಲಾನ್ ಮಾಡಿಕೊಂಡಿದ್ದರೆ ಅದನ್ನ ಒಂದು ದಿನ ಮುಂದಕ್ಕೆ ಹಾಕಿಕೊಳ್ಳಿ. ಎಮರ್ಜೆನ್ಸಿ ಹೊರತು ಉಳಿದ ಕಾಯಿಲೆಗಳಿಗೆ ನಾಳೆ ಚಿಕಿತ್ಸೆ ಸಿಗಲ್ಲ. ಶುಕ್ರವಾರ ಖಾಸಗಿ ಆಸ್ಪತ್ರೆಗಳ ಎಲ್ಲಾ ಓಪಿಡಿ (ಹೊರ ರೋಗಿಗಳ ವಿಭಾಗ)ಗಳು ಬಂದ್ ಆಗಲಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ವೈದ್ಯರು ನಾಳೆ ಬಂದ್ ಮಾಡ್ತಿದ್ದಾರೆ.
ಕಳೆದ ಶನಿವಾರವಷ್ಟೇ ಕನ್ನಡ ಸಂಘಟನೆಗಳ ಬಂದ್ ಮಾಡಿದ್ದರು. ರೈತ ಸಂಘಟನೆಗಳಂತೂ 4 ದಿನಗಳಿಂದ ಬಂದ್, ಪ್ರತಿಭಟನೆ ನಡೆಸುತ್ತಿದ್ದಾರೆ ಇದೇ ಸಮಯ ಅಂತ ಇವತ್ತು ಸಾರಿಗೆ ನೌಕರರು ಕೂಡ ರೈತರ ಜೊತೆ ಸೇರ್ಕೊಂಡು ಬೀದಿಗಿಳಿದಿದ್ದರು. ಈ ಬೆನ್ನಿಗೆ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಮತ್ತೊಂದು ಗೆಜೆಟ್ ನೋಟಿಫಿಕೇಶನ್ ವಿರುದ್ಧ ವೈದ್ಯರು ಸಿಡಿದೆದ್ದಿದ್ದಾರೆ. ನಾಳೆ ದೇಶವ್ಯಾಪಿ ಓಪಿಡಿ ಬಂದ್ ಮಾಡೋ ಮೂಲಕ ಪ್ರತಿಭಟನೆ ಮಾಡಲು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕರೆ ನೀಡಿದೆ.
ವೈದ್ಯಲೋಕದ ಬಂದ್ ಯಾಕೆ?: ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮೂಲಕ ಆಯುರ್ವೇದಿಕ್ ವ್ಯಾಸಂಗ ಮಾಡಿದ ವೈದ್ಯರು, ಅಲೋಪತಿ ವೈದ್ಯರು ಮಾಡುವ ಅನೇಕ ಶಸ್ತ್ರಚಿಕಿತ್ಸೆಯನ್ನು ಮಾಡಬಹುದೆಂದು ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರ ಮಾಡಲು ಮುಂದಾಗಿದ್ದಾರೆ. ಆಯುರ್ವೇದ ವೈದ್ಯರಿಗೆ ಸರ್ಜರಿ ಮಾಡಲು ಅವಕಾಶ ಕೊಡಬಾರದು. ಆ ಅಧಿಸೂಚನೆಯನ್ನ ತಿದ್ದುಪಡಿ ಮಾಡಬೇಕು ಎಂದು ಒತ್ತಡ ಹಾಕಲು ನಾಳೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಓಪಿಡಿ ಬಂದ್ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರದ ನೋಟಿಫಿಕೇಶನ್‍ಲ್ಲಿ ಈ ವರ್ಷದ ಪಿಜಿ ಕೋರ್ಸ್‍ಗಳಲ್ಲಿ 39 ಜನರಲ್ ಸರ್ಜರಿ ಮತ್ತು 19 ಸ್ಪೆಷಲ್ ಸರ್ಜರಿ ತರಬೇತಿಗೆ ಅವಕಾಶ ಮಾಡಿಕೊಟ್ಟಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್‍ನ ಇತ್ತೀಚಿನ ನಡೆಯಿಂದಾಗಿ ಇಡೀ ದೇಶದ ಆಧುನಿಕ ವೈದ್ಯಕೀಯ ವೃತ್ತಿಯು ಕಷ್ಟಕ್ಕೆ ಸಿಲುಕಿದೆ ಅನ್ನೋದು ವೈದ್ಯರ ಅಭಿಪ್ರಾಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ರೋಗಿಗಳಿಗೂ ಸಮಸ್ಯೆ ಆಗಲಿದೆ ಅನ್ನೋದು ವೈದ್ಯರ ಆತಂಕ.
ನಾಳೆ ನಡೆಯಲಿರುವ ಬಂದ್‍ನಿಂದ ಹೊರರೋಗಿಗಳಿಗೆ ಸಮಸ್ಯೆ ಆಗಲಿದೆ. ತುರ್ತು ಸೇವೆ ಮತ್ತು ಕೋವಿಡ್ ಸೇವೆ ಎಂದಿನಂತೆ ಇರಲಿದೆ. ಆದರೆ ಕೆಮ್ಮು, ನೆಗಡಿ, ಜ್ವರ, ರೆಗ್ಯೂಲರ್ ಚೆಕ್‍ಪ್ ಹೋಗುವವರಿಗೆ ಓಪಿಡಿ ಸೇವೆ ಅಲಭ್ಯವಾಗಲಿದೆ. ಐಎಂಎ ನೀಡಿರುವ ಬಂದ್ ಕರೆಗೆ ಫನಾ ಸೇರಿದಂತೆ ಹಲವು ಸಂಘಟನೆಗಳು ಸಾಥ್ ನೀಡಿದ್ದಾರೆ.
ಸರ್ಕಾರಿ ವೈದ್ಯರ ರಜೆ ರದ್ದು: ಖಾಸಗಿ ವೈದ್ಯರ ಮುಷ್ಕರಕ್ಕೆ ಎಚ್ಚೆತ್ತ ಸರ್ಕಾರ, ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ನಾಳೆ ರಜೆ ರದ್ದು ಮಾಡಿದೆ. ಕಡ್ಡಾಯವಾಗಿ ಸೇವೆಗೆ ಬರುವಂತೆ ಸೂಚಿಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಹಿಸಿದೆ.
ಬೆಂಗಳೂರು: ಕೊರೊನಾ ಸೋಂಕಿನ ನಿಯಂತ್ರಣಕ್ಕೆ ತರಲು ಸರ್ಕಾರ ಹೆಣಗಾಡುತ್ತಿದೆ. ಇದರ ನಡುವೆಯೇ ಆರ್ಥಿಕ ಸಂಕಷ್ಟ ಸುಧಾರಣೆ ಮಾಡಲು ಸಾಲವನ್ನು ಪಡೆಯಲು ಮುಂದಾಗಿದೆ. ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ಕೋವಿಡ್ ಆರ್ಥಿಕ ಹೊರೆ ಎದುರಾಗಿದ್ದು, ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿರುವ ಜನಪ್ರತಿನಿಧಿಗಳ ಮತ್ತು ಕುಟುಂಬಸ್ಥರ ಆಸ್ಪತ್ರೆ ಬಿಲ್ ವೆಚ್ಚದ ಹೊರೆಯೂ ಸರ್ಕಾರ ಮೇಲೆ ಬಿದ್ದಿದೆ.
ಕೊರೊನಾ ಸೋಂಕಿಗೆ ತುತ್ತಾಗಿರುವ ರಾಜ್ಯದ ಹಲವು ಜನ ಪ್ರತಿನಿಧಿಗಳು, ಅವರ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ವೇಳೆ ಚಿಕಿತ್ಸೆ ಪಡೆದ ಆಸ್ಪತ್ರೆಯ ವೆಚ್ಚದ ಬಿಲ್ ಮರುಪಾವತಿಗೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಕುಟುಂಬಸ್ಥರ ಕೋವಿಡ್ ಬಿಲ್ ಲಕ್ಷ ಲಕ್ಷ ಆಗಿದ್ದು, ಆಸ್ಪತ್ರೆ ವೆಚ್ಚದ ಬಿಲ್ ಗಳನ್ನು ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಅದರ ಮಾಹಿತಿ ಇಂತಿದೆ.
1) ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕರ ಅನಿಲ್ ಬೆನಕೆ ಅವರು ಸರ್ಕಾರಕ್ಕೆ ತಮ್ಮ ಹಾಗೂ ಕುಟುಂಬ ಚಿಕಿತ್ಸೆ ಪಡೆದ 8,55,856 ರೂ.ಗಳ ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಅನಿಲ್ ಬೆನಕೆ ಅವರ ಚಿಕಿತ್ಸಾ ವೆಚ್ಚ 1,92,000 ರೂ., ಅವರ ಪತ್ನಿ ಮನಿಷಾ ಎಸ್ 1,35,500 ರೂ., ಬೆನಕೆ ಅವರ ಪುತ್ರಿಯರಾದ ಅಂಜಲಿ ಅನಿಲ್ ಬೆನಕೆ ಮತ್ತು ಲೀಲಾ ಅನಿಲ್ ಬೆನಕೆ ಅವರ ಚಿಕಿತ್ಸಾ ವೆಚ್ಚ ತಲಾ 1,35,500 ರೂ., ಅನಿಲ್ ಬೆನಕೆ ಅವರ ತಂದೆ ಶೆಟ್ಟುಪ್ಪಾ ಸುಬ್ಬರಾವ್ ಬೆನಕೆ ಮತ್ತು ತಾಯಿ ಪಾರ್ವತಿ ಕಟ್ಟುಪ್ಪಾ ಬೆನಕೆ ಅವರ ಚಿಕಿತ್ಸಾ ವೆಚ್ಚ ಕ್ರಮವಾಗಿ 1,27,824 ರೂ., 1,29,532 ರೂ. ಸೇರಿದೆ.
2)ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು 2,36,021 ರೂ. ಮೊತ್ತದ ಬಿಲ್‍ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ರಾಘವೇಂದ್ರ ಹಿಟ್ನಾಳ್ ಅವರದ್ದು 1,01,141 ರೂ,. ಶಾಸಕರ ಮಗ ಸುದರ್ಶನ ಮತ್ತು ಪುತ್ರಿ ವಿಜಯಶ್ರೀ ಅವರ ಚಿಕಿತ್ಸಾ ವೆಚ್ಚ ಕ್ರಮವಾಗಿ 73,301 ರೂ., 61,579 ರೂ. ಸೇರಿದೆ.
3)ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು 3,07,113 ರೂ., ಮೊತ್ತದ ಬಿಲ್‍ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಾಸಕರ ಚಿಕಿತ್ಸಾ ವೆಚ್ಚ 1,52,959 ರೂ., ಶಾಸಕರ ಪತ್ನಿ ಸುಶೀಲಾ ಡಿ.ಐಹೊಳೆ ಅವರ ಚಿಕಿತ್ಸಾ ವೆಚ್ಚ 1,54,154 ರೂ. ಸೇರಿದೆ.
4)ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಚಿಕಿತ್ಸಾ ವೆಚ್ಚ 2,29,654 ರೂ. ಮೊತ್ತದ ಬಿಲ್‍ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
5)ಕಲಘಟ್ಟಗಿ ಬಿಜೆಪಿ ಶಾಸಕ ಸಿಎಂ ನಿಂಬಣ್ಣನವರ್ ಅವರು 2,91,045 ರೂ. ಮೊತ್ತದ ಆಸ್ಪತ್ರೆಯ ಚಿಕಿತ್ಸಾ ಬಿಲ್‍ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
6)ಭದ್ರಾವತಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ವರ್ ಮತ್ತು ಕುಟುಂಬದ ಚಿಕಿತ್ಸಾ ವೆಚ್ಚ 5,11,172 ರೂ. ಮೊತ್ತದ ಬಿಲ್‍ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಅವರ ಚಿಕಿತ್ಸಾ ವೆಚ್ಚ 2,99,336 ರೂ., ಪತ್ನಿ ಕಾವ್ಯ ಕೊನೆರಿರಾ ಅವರ ಚಿಕಿತ್ಸಾ ವೆಚ್ಚ 2,12,376 ರೂ. ಸೇರಿದೆ.
7)ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ತಮ್ಮ ಚಿಕಿತ್ಸೆಯ 1,07,112 ರೂ. ಮೊತ್ತದ ಆಸ್ಪತ್ರೆಯ ಬಿಲ್‍ಅನ್ನು ಮರುಪಾವತಿ ಮಾಡುವಂತೆ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
8)ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರ ಪತ್ನಿ ಗೀತಾ ಜೆಆರ್ ಅವರ ಒಟ್ಟು 2,24,279 ರೂ. ಮೊತ್ತದ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಬಿಲ್‍ಅನ್ನು ಮರುಪಾವತಿ ಮಾಡುವಂತೆ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
9)ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರು ಒಟ್ಟು 5,52,242 ರೂ. ಮೊತ್ತದ ಬಿಲ್‍ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಾಸಕರ ಚಿಕಿತ್ಸೆ 3,29,359 ರೂ. ಮತ್ತು ಶಾಸಕ ಪತ್ನಿ ಕಾಂತಮ್ಮ ಅವರ ಚಿಕಿತ್ಸೆಯ 2,22,883 ರೂ. ಸೇರಿದೆ.
10)ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಒಟ್ಟು 2,29,247 ರೂ. ಮೊತ್ತದ ಬಿಲ್‍ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
ನಿಯಮಗಳ ಅನ್ವಯ ಶಾಸಕರು ಹಾಗೂ ಅವರ ಕುಟುಂಬಸ್ಥರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದರೇ ಸರ್ಕಾರ ಆ ಚಿಕಿತ್ಸಾ ಮೊತ್ತವನ್ನು ಮರುಪಾವತಿ ಮಾಡಲು ಅವಕಾಶವಿದೆ. ಆದರೆ ಕೊರೊನಾ ಸೋಂಕಿನ ವಿಚಾರದಲ್ಲಿ ಸರ್ಕಾರ ಕೆಲ ನಿಯಮಗಳನ್ನು ಮಾಡಿದ್ದು, ಸೋಂಕಿಗೆ ತುತ್ತಾದ ವ್ಯಕ್ತಿಗೆ ಚಿಕಿತ್ಸೆ ಬೆಂಗಳೂರು ನಗರದಲ್ಲಿ ಬಿಬಿಎಂಪಿ ಹಾಗೂ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಗಮನಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೇ ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಮೊತ್ತವನ್ನು ಸರ್ಕಾರವೇ ಬರಿಸುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಸೂಚನೆ ನೀಡಿದರೆ ಉಚಿತ ಚಿಕಿತ್ಸೆಯನ್ನು ನೀಡುತ್ತದೆ. ಈ ನಿಯಮಗಳ ಅನ್ವಯ ಜನಪ್ರತಿನಿಧಿಗಳು ಸ್ವತಃ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಸರ್ಕಾರವನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಿಲ್ ಮೊತ್ತವನ್ನು ಮರುಪಾವತಿ ಮಾಡುವಂತೆ ಸೂಚಿಸುವುದು ಎಷ್ಟು ಸರಿ ಎಂಬುವುದು ಪ್ರಶ್ನೆಯಾಗಿದೆ.
ಸದ್ಯ ಶಾಸಕರಾದ ದುರ್ಯೋಧನ ಐಹೊಳೆ, ಟಿ.ಡಿ.ರಾಜೇಗೌಡ, ರಾಘವೇಂದ್ರ ಹಿಟ್ನಾಳ್, ಸುರೇಶ್‍ಗೌಡ, ಸಿ.ಎಂ. ನಿಂಬಣ್ಣನವರ್, ನಾಗನಗೌಡ ಕಂದಕೂರ್, ಕೆ.ಪೂರ್ಣಿಮಾ ಶ್ರೀನಿವಾಸ್, ಬೆಳ್ಳಿ ಪ್ರಕಾಶ್, ಅನಿಲ್ ಬೆನಕೆ, ಬಿ.ಕೆ.ಸಂಗಮೇಶ್ವರ್ ರ ಕೋವಿಡ್ ಚಿಕಿತ್ಸಾ ಬಿಲ್ ಗಳನ್ನು ಕೊರೊನಾ ಚಿಕಿತ್ಸಾ ವೆಚ್ಚದ ಮರುಪಾವತಿಗಾಗಿ ವಿಧಾನಸಭೆ ಸಚಿವಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿದೆ. ಒಟ್ಟು 35,44,281 ರೂಪಾಯಿ ಚಿಕಿತ್ಸಾ ವೆಚ್ಚದ ಮೊತ್ತವನ್ನು ಮರುಪಾವತಿಸುವಂತೆ ಮನವಿ ಮಾಡಲಾಗಿದೆ. 10 ಶಾಸಕರು ಸಲ್ಲಿಸಿರುವ ಚಿಕಿತ್ಸಾ ವೆಚ್ಚದ ಬಿಲ್‍ನ್ನು ವಿಧಾನಸಭೆ ಸಚಿವಾಲಯವೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶನಾಲಯಕ್ಕೆ ಕಳುಹಿಸಿದೆ.
ಕಾರವಾರ: ಕೊರೊನಾ ಹೆಮ್ಮಾರಿ ಉಳ್ಳವರು-ಇಲ್ಲದವರು ಹೀಗೆ ಯಾರನ್ನೂ ಬಿಡದೇ ಹಿಂಡಿ ಹಿಪ್ಪೆ ಮಾಡ್ತಿದೆ. ಸ್ವತಃ ಚಿಕಿತ್ಸೆ ನೀಡುವ ವೈದ್ಯರು ಕೂಡ ಚೀನಿ ವೈರಸ್ ಇಕ್ಕಳದಲ್ಲಿ ಸಿಲುಕಿ ನಲುಗ್ತಿದ್ದಾರೆ. ಹೀಗಿದ್ದರೂ ಅವರೇ ದೋಖಾ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಖಾಸಗಿ ಆಸ್ಪತ್ರೆಯೊಂದು ಕೊರೊನಾ ಟೆಸ್ಟ್‍ಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಂಟಿ ಬಾಡಿ ಸ್ಕ್ರೀನಿಂಗ್ ಟೆಸ್ಟ್ ಮಾಡಿದೆ. ಅಸಲಿಗೆ ಈತನಿಗೆ ಪಾಸಿಟಿವ್ ಇರಲಿಲ್ಲ, ಆದರೆ ಪಾಸಿಟಿವ್ ವರದಿ ನೀಡಿ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿ ಹಣ ಪೀಕಿದೆ.
ಸಿದ್ದಾಪುರ ತಾಲೂಕಿನ ತ್ಯಾಗಳಿ ಶೀಗೇಹಳ್ಳಿ ನಿವಾಸಿ ರಾಘವೇಂದ್ರ ಸದಾನಂದ ಹೆಗಡೆ ಎಂಬವರಿಗೆ ಅಕ್ಟೋಬರ್ 1ರಂದು ಜ್ವರ ಹಾಗೂ ಕಫದಿಂದಾಗಿ ಆರೋಗ್ಯ ಏರುಪೇರಾಗಿತ್ತು. ಹಿಗಾಗಿ ತಮ್ಮ ಮಗನೊಂದಿಗೆ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯ ರಮೇಶ್ ಹೆಗಡೆ ಬಳಿ ತೋರಿಸಿದ್ರು. ಕಫ, ಜ್ವರ ಹೆಚ್ಚಾದ್ದರಿಂದ ಬಾಡಿ ಸ್ಕ್ಯಾನಿಂಗ್ ಮಾಡಿದ್ದು ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು. ಆದರೆ ಇದೇ ಆಸ್ಪತ್ರೆ ಕೋವಿಡ್ ಚಿಕಿತ್ಸಾ ಕೇಂದ್ರವಾಗಿದ್ದರಿಂದ ಇದೇ ವೈದ್ಯರ ಶಿಫಾರಸ್ಸಿನ ಮೇಲೆ ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಅವರ ರಕ್ತ ಮಾದರಿ ಹಾಗೂ ಸ್ಕ್ಯಾನಿಂಗ್ ಆಧಾರದಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಬ್ಲಡ್ ಟೆಸ್ಟ್ ಗಾಗಿ 4,100ರೂ ಶುಲ್ಕ ವಿಧಿಸಿದ್ದಾರೆ. ಇದರ ಜೊತೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು. 5-8 ದಿನಗಳ ಕಾಲ ಅಬ್ಸರ್ವೇಶನ್‍ನಲ್ಲಿರಬೇಕು. ಇದಕ್ಕೆಲ್ಲಾ ದಿನಕ್ಕೆ 25,000 ರೂ. ಆಗುತ್ತೆ. ಜೊತೆಗೆ ಜಿಎಸ್‍ಟಿ ಕಟ್ಟಿ. ಊಟ, ತಿಂಡಿ ಎಲ್ಲಾನೂ ಆಸ್ಪತ್ರೆ ವತಿಯಿಂದಲೇ ನೀಡಲಾಗುವುದು ಎಂದು ಹೇಳಿದ್ದಾರೆ. ಆದರೆ ರಾಘವೇಂದ್ರ ಹೆಗಡೆ ರವರ ಮಗನಿಗೆ ಅನುಮಾನ ಬಂದು ಮರುದಿನ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ತಂದೆಯವರಿಗೆ ಗಂಟಲು ದ್ರವ ತೆಗೆಸಿ ಕೊರೊನಾ ಟೆಸ್ಟ್ ಮಾಡಿಸಿದ್ದು ಅಕ್ಟೋಬರ್ 5ರಂದು ನೆಗಟೀವ್ ವರದಿ ಬಂದಿದೆ.
ಸರ್ಕಾರ ರ‍್ಯಾಪಿಡ್ ಟೆಸ್ಟ್ ಗೆ 1500ರೂ. ಮಾಡಿದ್ದರೂ, ಶಿರಸಿಯ ಮಾರಿಕಾಂಬ ಆಸ್ಪತ್ರೆಯವರು ಮಾತ್ರ 4,100ರೂ. ಶುಲ್ಕ ವಸೂಲಿ ಮಾಡುತಿದ್ದಾರೆ. ಜೊತೆಗೆ ಕಫ, ಜ್ವರ ಎಂದು ಬಂದವರಿಗೆ ಕೊರೊನಾ ಭಯ ಹುಟ್ಟಿಸಿ ದಿನ ಒಂದಕ್ಕೆ 25 ಸಾವಿರ ದುಬಾರಿ ಶುಲ್ಕ ವಸೂಲಿಗೆ ಇಳಿದಿದ್ದಾರೆ. ಕೊರೊನಾ ಇಲ್ಲದಿದ್ದವರಿಗೂ ಆಂಟಿ ಬಾಡಿ ಸ್ಕ್ರೀನಿಂಗ್ ಟೆಸ್ಟ್, ರಕ್ತ ಮಾದರಿ ಪರೀಕ್ಷೆ ಎಂದು ಸಾವಿರಾರು ರುಪಾಯಿ ಪೀಕುತ್ತಿದ್ದು ಇದಕ್ಕೆ ಹಲವು ಖಾಸಗಿ ಆಸ್ಪತ್ರೆಯವರು ಜೊತೆಯಾಗಿದ್ದಾರೆ. ಸದ್ಯ ತಮಗಾದ ಮೋಸವನ್ನ ರಾಘವೇಂದ್ರ ಅವರ ಮಗ ದಾಖಲೆ ಸಮೇತವಾಗಿ ತೆರೆದಿಟ್ಟಿದ್ದಾರೆ.
ಕೊರೊನಾ ಇದ್ದವರಿಗೆ ಕೇವಲ ಒಂದು ದಿನದಲ್ಲಿ ಪಾಸಿಟಿವ್ ನಂತರ ನೆಗಟಿವ್ ಬರಲು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ಕೊರೊನಾ ಭಯವನ್ನೇ ಬಂಡವಾಳವಾಗಿಸಿಕೊಂಡು ಖಾಸಗಿ ಆಸ್ಪತ್ರೆಯವರು ಹೇಗೆ ಲೂಟಿ ಮಾಡ್ತಿದ್ದಾರೆ. ದಂಡ ಅಂತೆಲ್ಲಾ ವಿಧಿಸೋ ಮೊದಲು ಇಂತ ಅಕ್ರಮಗಳಿಗೆ ಮೊದಲು ಬ್ರೇಕ್ ಆಗ್ಬೇಕಿದೆ.