Tag: Private Education Institute

  • ಫೆಬ್ರವರಿ 23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

    ಫೆಬ್ರವರಿ 23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

    ಬೆಂಗಳೂರು: ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಸಮರ ಮುಂದುವರಿದಿದೆ. ಸರ್ಕಾರದ ಆದೇಶ ಮರು ಪರಿಶೀಲನೆ ಮಾಡಬೇಕು, ಇಲ್ಲದಿದ್ರೆ ಫೆಬ್ರವರಿ 23ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ಖಾಸಗಿ ಶಾಲೆಗಳು ಸಜ್ಜಾಗಿವೆ.

    ಇಂದು ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ ಸಭೆ ಸೇರಿದ್ದ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟು ದಿನ ಸರ್ಕಾರದ ಶುಲ್ಕವನ್ನ ಒಳಗೊಳಗೆ ವಿರೋಧಿಸುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿವೆ. ರಾಜ್ಯ ಸರ್ಕಾರ ಶೇ.30 ಶುಲ್ಕ ಕಡಿತಗೊಳಿಸಿರುವುದು ಅವೈಜ್ಞಾನಿಕವಾಗಿದ್ದು, ಒಟ್ಟು ಶುಲ್ಕದಲ್ಲಿ ಶೇ.60 ರಿಂದ 70ರಷ್ಟು ಕಡಿತವಾಗುತ್ತಿದೆ. ಈ ಆದೇಶವನ್ನ ಸರ್ಕಾರ ಹಿಂಪಡೆದು ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

    ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ಯಾವುದೇ ಕೊಡುಗೆಗಳನ್ನ ನೀಡಿಲ್ಲ. ಪೋಷಕರಿಗೂ ಸಹ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಸರ್ಕಾರದ ನಿರ್ಧಾರದಿಂದ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರಿಗೆ ಸಾಕಷ್ಟು ಸಮಸ್ಯೆ ಆಗ್ತಿದೆ. ಸರ್ಕಾರ ಯಾವ ಅಧಿಕಾರದ ಮೇಲೆ ಶುಲ್ಕ ಕಡಿತ ಮಾಡಿದೆ ಅಂತ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

    ಖಾಸಗಿ ಶಿಕ್ಷಣ ಸಂಸ್ಥೆಗಳು ಇದೇ ತಿಂಗಳ 23ರಂದು ಬೆಂಗಳೂರಿನ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧಾರ ಮಾಡಿವೆ.

    ಖಾಸಗಿ ಶಾಲೆಗಳ ಬೇಡಿಕೆಗಳು:
    1. ರಾಜ್ಯ ಸರ್ಕಾರ ಆದೇಶ ಮಾಡಿರುವ ಶೇ.30ರಷ್ಟು ಶುಲ್ಕ ಕಡಿತದ ಆದೇಶವನ್ನ ಪುನರ್ ಪರಿಶೀಲನೆ ಮಾಡಬೇಕು.
    2. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡಿ.
    3. ಕಟ್ಟಡ ಸುರಕ್ಷಿತ ಪ್ರಮಾಣ ಪತ್ರಗಳನ್ನ ಹಿಂದಿನ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯ.
    4. 1 ರಿಂದ 5 ನೇ ತರಗತಿಗಳನ್ನ ಆರಂಭ ಮಾಡಬೇಕು.
    5. ಬಿಇಓ ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

    ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಎಂಎಲ್‍ಸಿ ಪುಟ್ಟಣ್ಣ ಸಹ ಸರ್ಕಾರದ ಕ್ರಮವನ್ನ ವಿರೋಧಿಸಿದ್ದಾರೆ. ಇದೇ 23ಕ್ಕೆ ಬೃಹತ್ ಪ್ರತಿಭಟನೆಯನ್ನ ಮಾಡುತ್ತೇವೆ. ನಮ್ಮ ಹೋರಾಟ ಅಂದಿಗೆ ಕೊನೆಯಾಗಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಸದಿದ್ರೆ ಶಿಕ್ಷಣ ಸಚಿವರ ಕಚೇರಿಗೆ ಬೀಗ ಹಾಕಿ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತೆ ಎಂದು ಎಂಎಲ್‍ಸಿ ಪುಟ್ಟಣ್ಣ ಎಚ್ಚರಿಕೆ ನೀಡಿದ್ದಾರೆ.

  • ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರಿ ಅವಾಂತರದ ಪ್ರತಿಭಾ ಪುರಸ್ಕಾರ

    ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರಿ ಅವಾಂತರದ ಪ್ರತಿಭಾ ಪುರಸ್ಕಾರ

    ರಾಮನಗರ: ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಕಾರ್ಯಕ್ರಮವನ್ನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆಸುವ ಮೂಲಕ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಟೂರ್ ರೀತಿ ಕಾರ್ಯಕ್ರಮ ನಡೆಸುವ ಮೂಲಕ ಸಾರ್ವಜನಿಕ ಟೀಕೆಗೆ ಒಳಗಾಗಿದೆ. ಇದನ್ನೂ ಓದಿ: SSLC, PUC ಪ್ರತಿಭಾ ಪುರಸ್ಕಾರ- ವಿದ್ಯಾರ್ಥಿಗಳಿಗೆ ಡಿಕೆಶಿ ಭಾವಚಿತ್ರದ ವಾಚ್ ವಿತರಣೆ

    ಅಂದಹಾಗೇ ಕನಕಪುರ ತಾಲೂಕಿನ ರಸ್ತೆಜಕ್ಕಸಂದ್ರದ ಖಾಸಗಿ ಶಿಕ್ಷಣ ಸಂಸ್ಥೆಯಾದ ಜೈನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಾಮನಗರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರಸಭೆ ಪುರಸಭೆ ಸಹಯೋಗದೊಂದಿಗೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶೇ 100% ರಷ್ಟು ಫಲಿತಾಂಶ ಪಡೆದ ಶಾಲೆಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಯ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.

    ಆದರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಒಂದು ಸಾವಿರ ಆಸನ ವ್ಯವಸ್ಥೆಯ ಸಭಾಂಗಣದಲ್ಲಿ ನಾಲ್ಕು ಸಾವಿರದಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಹ್ವಾನ ನೀಡಲಾಗಿತ್ತು. ಸಭಾಂಗಣದ ಒಳಗೆ ಕೇವಲ ಸಾವಿರ ಮಂದಿ ಆಸೀನರಾಗಿದ್ದರೆ ಉಳಿದ ಮೂರು ಸಾವಿರದಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರು ಸಭಾಂಗಣದ ಹೊರಗೆ ಅಲೆಯುವಂತಾಗಿತ್ತು.

    ಸಭಾಂಗಣದ ಒಳಗೆ ಚೇರ್‌ಗಳು ಸಿಗದೇ ಸರಿಯಾಗಿ ಉಸಿರಾಡಲು ಸ್ಥಳಾವಕಾಶವೂ ಸಿಗದೇ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಇನ್ನೂ ಚೇರ್‌ಗಳು ಸಿಗದ ಕಾರಣ ವಿದ್ಯಾರ್ಥಿಗಳು ಕ್ಯಾಂಪಸ್ ರೌಂಡ್ಸ್ ಹೊಡೆಯುವಂತಾಗಿದ್ರೆ, ಮೆಟ್ಟಿಲು, ಹೊರಗಡೆಯ ಜಾಗದಲ್ಲಿ ತಮ್ಮ ಸರತಿಗಾಗಿ ವಿದ್ಯಾರ್ಥಿಗಳು ಕಾಯ್ದು ಕೂರುವಂತಾಗಿತ್ತು. ಇದೇ ವೇಳೆ ಬಯಲಿನಲ್ಲಿ ಉರಿ ಬಿಸಿಲಿನಲ್ಲಿ ಊಟದ ಆಯೋಜನೆ ಮಾಡಿದ್ರೆ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದರು.

    ಜಿಲ್ಲಾ ಕ್ರೀಡಾಂಗಣವೇ ಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ನೀಡುವ ಸ್ಥಳವಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಟಾಚಾರಕ್ಕೆ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಸುವ ಮೂಲಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಪರದಾಡುವಂತೆ ಮಾಡಿದ್ದು, ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.