Tag: privacy

  • ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ ಸೇರಿದಂತೆ ನಾಯಕರ ಟ್ವಿಟ್ಟರ್ ಖಾತೆ ಬ್ಲಾಕ್

    ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ ಸೇರಿದಂತೆ ನಾಯಕರ ಟ್ವಿಟ್ಟರ್ ಖಾತೆ ಬ್ಲಾಕ್

    ನವದೆಹಲಿ: ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯ ಜೊತೆಗೆ ಕೆಲ ನಾಯಕರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.

    ಅತ್ಯಾಚಾರಕ್ಕೀಡಾಗಿ ಕೊಲೆಯಾದ 9 ವರ್ಷದ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಶೇರ್ ಮಾಡಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ಕಳೆದ ವಾರ ಬ್ಲಾಕ್ ಮಾಡಿತ್ತು. ಇದಾದ ಬಳಿಕ ಈಗ ಪಕ್ಷದ ಖಾತೆಯ ಜೊತೆಗೆ ಹಲವು ನಾಯಕರ ಮತ್ತು ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.

    ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತ ಪ್ರತಿಕ್ರಿಯಿಸಿ, ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ಸುಮಾರು 5 ಸಾವಿರ ಹಿರಿಯ ನಾಯಕರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಸರ್ಕಾರದ ಒತ್ತಡದ ಮೇರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಟ್ವಿಟ್ಟರ್ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

     

    View this post on Instagram

     

    A post shared by Congress (@incindia)


    ಸರ್ಕಾರದ ಒತ್ತಡದಲ್ಲಿ ಟ್ವಿಟ್ಟರ್ ಸ್ಪಷ್ಟವಾಗಿ ಕೆಲಸ ಮಾಡುತ್ತಿದೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಅದೇ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿತ್ತು, ಆದರೆ ಆಯೋಗ ಫೋಟೋವನ್ನು ತೆಗೆಯಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿ

    ಯಾರೆಲ್ಲ ಖಾತೆ ಬ್ಲಾಕ್?
    ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ, ಕೆ ಸಿ ವೇಣುಗೋಪಾಲ್, ಅಜಯ್ ಮಕೇನ್, ಪಕ್ಷದ ಸಚೇತಕ ಮಣಿಕ್ಕಮ್ ಠಾಕೋರ್, ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಮತ್ತು ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಖಾತೆಗಳನ್ನು ಸಹ ಬ್ಲಾಕ್ ಮಾಡಲಾಗಿದೆ.

    ಈ ಕುರಿತು ಬುಧವಾರ ರಾತ್ರಿ ಪಕ್ಷದ ಸಂವಹನ ವಿಭಾಗದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಪ್ರಣವ್ ಜಾ ಟ್ವೀಟ್ ಮಾಡಿದ್ದು ಕೊನೆಗೆ ಅವರ ಖಾತೆಯೂ ಬ್ಲಾಕ್ ಆಗಿದೆ.

    ಟ್ವಿಟ್ಟರ್‌ಗೆ ದೂರು:
    ಕಳೆದ ವಾರ ರಾಹುಲ್ ಗಾಂಧಿ 9 ವರ್ಷದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಪ್ರಕಟಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಟ್ವಿಟ್ಟರ್ ಸಂಸ್ಥೆಗೆ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು.

    ಭಾರತದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಫೋಟೋ, ಹೆಸರು, ಪೋಷಕರ ಫೋಟೋಗಳನ್ನು ಪ್ರಕಟಿಸುವಂತಿಲ್ಲ. ಇದು ಕಾನೂನಿನ ಉಲ್ಲಂಘನೆ. 2018ರಲ್ಲಿ ಜಮ್ಮು ಕಾಶ್ಮೀರ ಕಥುವಾದ 8 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಗುರುತನ್ನು ಮಾಧ್ಯಮ ಸಂಸ್ಥೆಗಳು ಪ್ರಕಟಿಸಿತ್ತು.

    ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಡ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿ 12 ಮಾಧ್ಯಮ ಸಂಸ್ಥೆಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿತ್ತು.

  • ಬಳಕೆದಾರರ ಗೌಪ್ಯತೆ, ಭಾರತದ ಸಮಗ್ರತೆಗೆ ದಕ್ಕೆ ಉಂಟುಮಾಡಿಲ್ಲ – ಬ್ಯಾನ್ ಬಳಿಕ ಟಿಕ್‍ಟಾಕ್ ಪ್ರತಿಕ್ರಿಯೆ

    ಬಳಕೆದಾರರ ಗೌಪ್ಯತೆ, ಭಾರತದ ಸಮಗ್ರತೆಗೆ ದಕ್ಕೆ ಉಂಟುಮಾಡಿಲ್ಲ – ಬ್ಯಾನ್ ಬಳಿಕ ಟಿಕ್‍ಟಾಕ್ ಪ್ರತಿಕ್ರಿಯೆ

    ನವದೆಹಲಿ: ಭಾರತದಲ್ಲಿನ ಕಾನೂನುಗಳನ್ನು ಪಾಲಿಸುತ್ತಿದ್ದೇವೆ. ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಭಾರತದ ಭದ್ರತೆ, ಸಮಗ್ರತೆಗೆ ದಕ್ಕೆ ಉಂಟು ಮಾಡುವುದಿಲ್ಲ ಎಂದು ಟಿಕ್ ಟಾಕ್ ಸ್ಪಷ್ಟನೆ ನೀಡಿದೆ.

    ಸೋಮವಾರ ಭಾರತದಲ್ಲಿ ಟಿಕ್‍ಟಾಕ್ ಸೇರಿ 59 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿದ ಬಳಿಕ ಇಂದು ಟಿಕ್‍ಟಾಕ್ ಮೊದಲ ಪ್ರತಿಕ್ರಿಯೆ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಲಿದ್ದೇವೆ ಎಂದು ಹೇಳಿದೆ.

    ಸರ್ಕಾರ ಅವಕಾಶ ನೀಡಿದರೆ ನಾವು ಸ್ಪಷ್ಟೀಕರಣ ನೀಡಲಿದ್ದೇವೆ ಭಾರತದಲ್ಲಿನ ಕಾನೂನುಗಳನ್ನು ಪಾಲಿಸುತ್ತಿದ್ದೇವೆ. ಬಳಕೆದಾರರ ವೈಯಕ್ತಿಕ ಮಾಹಿತಿ ಗೌಪ್ಯವಾಗಿಟ್ಟಿದೆ. ಚೀನಾ ಸೇರಿದಂತೆ ಯಾವುದೇ ವಿದೇಶಗಳಿಗೆ ಮಾಹಿತಿ ಹಂಚಿಕೊಂಡಿಲ್ಲ ಮುಂದೆಯೂ ಮಾಹಿತಿ ಹಂಚಿಕೊಳ್ಳವುದಿಲ್ಲ ಎಂದು ಭರವಸೆ ನೀಡಿದೆ.

    ನಾವು ಬಳಕೆದಾರರ ಮಾಹಿತಿಗೆ ಮತ್ತು ಭಾರತದ ಸಮಗ್ರತೆಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಹದಿನಾಲ್ಕು ಭಾಷೆಯಲ್ಲಿ ನೂರಾರು ಮಿಲಿಯನ್ ಬಳಕೆದಾರನ್ನು ಟಿಕ್‍ಟಾಕ್ ಹೊಂದಿದೆ. ಹಲವು ಬಗೆಗೆ ಪ್ರತಿಭೆಗಳಿಗೆ ಟಿಕ್‍ಟಾಕ್ ಜೀವನ ಕಲ್ಪಿಸಿದೆ. ಟಿಕ್‍ಟಾಕ್ ಬ್ಯಾನ್ ನಿಂದ ಅವರ ಜೀವನಕ್ಕೆ ತೊಂದರೆಯಾಗಬಹುದು. ಟಿಕ್‍ಟಾಕ್ ಬ್ಯಾನ್ ಪರಿಶೀಲಿಸುವಂತೆ ಭಾರತದ ಟಿಕ್‍ಟಾಕ್ ಮುಖ್ಯಸ್ಥ ನಿಖಿಲ್ ಗಾಂಧಿ ಮನವಿ ಮಾಡಿದ್ದಾರೆ.

    2017ರಿಂದ ಬಳಕೆಗೆ ಬಂದ ಟಿಕ್‍ಟಾಕ್ ಬಹಳ ಜನಪ್ರಿಯವಾಗಿತ್ತು. ಚೀನಾವನ್ನು ಹೊರತು ಪಡಿಸಿದರೇ ಟಿಕ್‍ಟಾಕ್ ಅನ್ನು ಭಾರತೀಯರೇ ಹೆಚ್ಚು ಬಳಸುತ್ತಿದ್ದರು. ನೋಡ ನೋಡುತ್ತಲೇ ಟಿಕ್‍ಟಾಕ್ 2006ರಲ್ಲಿ ಬಂದ ಫೇಸ್‍ಬುಕ್‍ಗೆ ಪ್ರತಿಸ್ಫರ್ಧಿಯಾಗಿ ಬೆಳದಿತ್ತು. ಮೊಬೈಲ್ ಅನಲಿಟಿಕ್ಸ್ ಕಂಪನಿ ಆಪ್ ಅನ್ನಿ ಪ್ರಕಾರ 2019ರಲ್ಲಿ ಭಾರತೀಯರು ಸುಮಾರು 555 ಕೋಟಿ ಗಂಟೆ ಟಿಕ್‍ಟಾಕ್ ನೋಡಿದ್ದರು.

    ಭಾರತದಲ್ಲಿ ಜನ ಸಂಖ್ಯೆ ಜಾಸ್ತಿ ಇರುವ ಕಾರಣ ಚೀನಾದ ಟಿಕ್‍ಟಾಕ್‍ಗೆ ಭಾರತವೇ ಅದಾಯ ಮೂಲವಾಗಿತ್ತು. 2019ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಒಟ್ಟು, 8.1 ಕೋಟಿ ಜನ ಟಿಕ್‍ಟಾಕ್ ಬಳಕೆದಾದರು ಇದ್ದರು. ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಕ್‍ಟಾಕ್ 25 ಕೋಟಿ ರೂ. ಅದಾಯಗಳಿಸಿತ್ತು. ಈಗಿನ ಜುಲೈ-ಸೆಪ್ಟಂಬರ್ ತ್ರೈಮಾಸಿಕಕ್ಕೆ 100 ಕೋಟಿ ಅದಾಯ ಗಳಿಸುವ ಯೋಜನೆಯಲ್ಲಿತ್ತು. ಈಗ ಕೇಂದ್ರ ಸರ್ಕಾರ ಆ್ಯಪ್ ಅನ್ನು ಬಾನ್ ಮಾಡಿ ಚೀನಾಗೆ ಶಾಕ್ ನೀಡಿದೆ.

  • ವಾಟ್ಸಪ್ ಭದ್ರತಾ ವೈಶಿಷ್ಟ್ಯ, ಖಾಸಗಿ ಮಾಹಿತಿ ರಕ್ಷಣೆ – ಇಲ್ಲಿದೆ ಮಾಹಿತಿ

    ವಾಟ್ಸಪ್ ಭದ್ರತಾ ವೈಶಿಷ್ಟ್ಯ, ಖಾಸಗಿ ಮಾಹಿತಿ ರಕ್ಷಣೆ – ಇಲ್ಲಿದೆ ಮಾಹಿತಿ

    ನವದೆಹಲಿ: ಹಲವು ರೀತಿಯ ಬದಲಾವಣೆಗಳ ನಂತರ ಇದೀಗ ವಾಟ್ಸಪ್ ಭದ್ರತಾ ವೈಶಿಷ್ಟ್ಯಗಳನ್ನು ಬಲಪಡಿಸಲು ಮುಂದಾಗಿದ್ದು, ಗೌಪ್ಯತೆ ಅದರಲ್ಲೂ ವಿಶೇಷವಾಗಿ ಸುಳ್ಳು ಸುದ್ದಿಗಳು ಹಾಗೂ ತಪ್ಪು ಮಾಹಿತಿ ಕುರಿತು ನಿಗಾವಹಿಸಿದೆ.

    ದೇಶಾದ್ಯಂತ ಪ್ರತಿ ತಿಂಗಳು ಸುಮಾರು 20 ಕೋಟಿಗೂ ಅಧಿಕ ಆಕ್ಟಿವ್ ಬಳಕೆದಾರರನ್ನು ಹೊಂದಿರುವ ವಾಟ್ಸಪ್, ದೇಶದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಬಳಕೆಯಲ್ಲಿರುವ ಆಪ್ ಆಗಿದೆ. ಬಳಕೆದಾರರ ಅಗತ್ಯತೆಗನುಗಣವಾಗಿ ವಾಟ್ಸಪ್‍ನ ವೈಶಿಷ್ಟ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಸ್ಟಿಕ್ಕರ್ಸ್, ವಿಡಿಯೋ ಕಾಲಿಂಗ್ ಸೇರಿದಂತೆ ವಿವಿಧ ಬಗೆಯ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ಭದ್ರತೆ, ಗೌಪ್ಯತೆ, ಸುಳ್ಳು ಸುದ್ದಿ ಹರಡುವಿಕೆ ಹಾಗೂ ತಪ್ಪು ಮಾಹಿತಿ ಹಂಚಿಕೊಳ್ಳುವಿಕೆ ಕುರಿತು ತೀವ್ರ ನಿಗಾ ವಹಿಸಿದೆ.

    ಇತ್ತೀಚೆಗೆ ಫಾರ್ವರ್ಡೆಡ್ ಲೇಬಲ್, ಫ್ಯಾಕ್ಟ್ ಚೆಕ್‍ನಿಂದ ಅನುಮಾನಾಸ್ಪದ ಲಿಂಕ್ ಪತ್ತೆ ಹಚ್ಚುವುದು ಸೇರಿದಂತೆ ಭದ್ರತೆಯ ಕುರಿತು ವಿವಿಧ ವೈಶಿಷ್ಟ್ಯಗಳನ್ನು ಸೇರಿಸಿದೆ. ಅಲ್ಲದೆ, ಸ್ಪ್ಯಾಮ್ ಮತ್ತು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಿ ತೆಗೆಯುವ ವೇಳೆ ಪ್ರತಿ ತಿಂಗಳು ಸುಮಾರು 2 ಲಕ್ಷ ಅಕೌಂಟ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.

    ವಾಟ್ಸಪ್‍ನ ಪ್ರಮುಖ ಗೌಪ್ಯತೆ ಮತ್ತು ಭದ್ರತೆ ವೈಶಿಷ್ಟ್ಯಗಳು

    ಟು ಸ್ಟೆಪ್ ವೆರಿಫಿಕೇಷನ್
    ಆರು ಪಿನ್ ಸಂಖ್ಯೆಗಳ ಮೂಲಕ ನಿಮ್ಮ ಅಕೌಂಟ್‍ನ್ನು ವೈರಿಫೈ ಮಾಡಿಕೊಳ್ಳಬಹುದಾಗಿದೆ. ಹೇಗೆ ಎಂಬುದು ಇಲ್ಲಿದೆ.
    ಟು ಸ್ಟಪ್ ವೆರಿಫಿಕೇಷನ್ – ಸೆಟ್ಟಿಂಗ್ಸ್> ಅಕೌಂಟ್> ಟು ಸ್ಟೆಪ್ ವೆರಿಫಿಕೇಷನ್ > ಎನೇಬಲ್

    ರಿಪೋರ್ಟಿಂಗ್ ಬ್ಲಾಕಿಂಗ್
    ನಿಮಗೆ ಅಪರಿಚಿತ ನಂಬರ್‍ನಿಂದ ಸ್ಪ್ಯಾಮ್ ಮೆಸೇಜ್ ಬಂದಲ್ಲಿ ಆ ಚಾಟ್ ತೆರೆದು, ಸೆಂಡರ್ ನೇಮ್ ಇಲ್ಲವೇ ನಂಬರ್, ಗ್ರೂಪ್ ಆಗಿದ್ದರೆ ಗ್ರೂಪ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಪ್ರೊಫೈಲ್ ತೆರೆಯಿರಿ. ಕೆಳಗಡೆಗೆ ಸ್ಕ್ರಾಲ್ ಮಾಡಿ ಅಲ್ಲಿ ರಿಪೋರ್ಟ್ ಕಾಂಟ್ಯಾಕ್ಟ್ ಇಲ್ಲವೆ ರಿಪೋರ್ಟ್ ಗ್ರೂಪ್ ಮೇಲೆ ಕ್ಲಿಕ್ ಮಾಡಿ. ಇಲ್ಲವೇ ಬ್ಲಾಕ್ ಮಾಡುವ ಮೂಲಕ ಸಹ ನೀವು ಸ್ಪ್ಯಾಮ್ ಮೆಸೇಜ್‍ನಿಂದ ದೂರ ಇರಬಹುದು. ಇಲ್ಲವೆ ಗ್ರೂಪ್‍ನಿಂದ ಎಕ್ಸಿಟ್ ಸಹ ಆಗಬಹುದು.

    ಸುಳ್ಳು ಸುದ್ದಿ ಮತ್ತು ವಿಡಿಯೋಗಳು ಹರಿದಾಡಿ ಗಲಾಟೆ ಸಂಭವಿಸಿದ ಪ್ರಕರಣಗಳು ಕಳೆದ ವರ್ಷ ಭಾರತದಲ್ಲಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಸುಳ್ಳು ಸುದ್ದಿಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಈ ಸಂಬಂಧ ದೂರು ನೀಡಲು ಒಬ್ಬರು ಅಧಿಕಾರಿಯನ್ನು ನೇಮಿಸಬೇಕೆಂಂದು ವಾಟ್ಸಪ್ ಕಂಪನಿಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸಪ್ ಕಂಪನಿ ಮೊದಲ ಬಾರಿಗೆ ಗ್ರೀವೇನ್ಸ್ ಆಫೀಸರ್(ಕುಂದುಕೊರತೆ ಅಧಿಕಾರಿ)ನ್ನು ನೇಮಿಸಿದೆ. ಈ ಅಧಿಕಾರಿಗೆ ನಿಮ್ಮ ಕುಂದು ಕೊರತೆಗಳ ಕುರಿತು ನೇರವಾಗಿ ದೂರು ನೀಡಬಹುದಾಗಿದೆ. ಅಧಿಕಾರಿಗೆ ನೀವು ಇ-ಮೇಲ್ ಮೂಲಕ ಇಲ್ಲವೆ ದೂರು ಪ್ರತಿಯಲ್ಲಿ ನಿಮ್ಮ ಎಲೆಕ್ಟ್ರಿಕ್ ಸಿಗ್ನೇಚರ್ ಮಾಡಿರುವ ಪ್ರತಿ ಮೂಲಕ ದೂರು ನೀಡಬಹುದು. ನಿಮ್ಮ ಖಾತೆ ಬಗ್ಗೆ ತಿಳಿಯಬೇಕಾದಲ್ಲಿ ನಿಮ್ಮ ಮೊಬೈಲ್ ನಂಬರ್ (+91 ಸೇರಿಸಿ) ಮೂಲಕ ಪಡೆಯಬಹುದು. ಪೋಸ್ಟ್ ಮೂಲಕ ಸಹ ಅಧಿಕಾರಿಯನ್ನು ಸಂಪರ್ಕಿಸಬಹುದು.

    ರಿಕ್ವೆಸ್ಟ್ ಅಕೌಂಟ್ ಇನ್ಫೋ
    ವಾಟ್ಸಪ್ ಬಳಕೆದಾರರು ನಿಮ್ಮ ಖಾತೆಯ ಡಾಟಾವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು ಹಾಗೂ ಬೇರೊಬ್ಬರಿಗೆ ಕಳುಹಿಸಬಹುದಾಗಿದೆ. ನೀವು ಮನವಿ ಮಾಡಿ ಮೂರು ದಿನಗಳ ನಂತರ ವಾಟ್ಸಪ್ ನಿಮ್ಮ ಎಲ್ಲ ರೀತಿಯ ಡಾಟಾವನ್ನು ನೀಡುತ್ತದೆ. ಸೆಟ್ಟಿಂಗ್ಸ್> ಅಕೌಂಟ್> ರಿಕ್ವೆಸ್ಟ್ ಅಕೌಂಟ್ ಇನ್ಫೋ. ಮನವಿ ಮಾಡಿದ ಮೇಲೆ ಡೌನ್‍ಲೋಡ್ ಮಾಡಿಕೊಳ್ಳಲು ಸಿದ್ಧವಾದ ನಂತರ ನಿಮಗೆ ಸಂದೇಶ ರವಾನೆಯಾಗುತ್ತದೆ. ನಂತರ ಸೆಟ್ಟಿಂಗ್ಸ್> ಅಕೌಂಟ್> ರಿಕ್ವೆಸ್ಟ್ ಅಕೌಂಟ್ ಇನ್ಫೋ> ಡೌನ್‍ಲೋಡ್ ರಿಪೋರ್ಟ್ ಕ್ಲಿಕ್ ಮಾಡಿದ ನಂತರ ಜಿಪ್ ಫೈಲ್‍ನ್ನು ಡೌನ್‍ಲೋಡ್ ಮಾಡಬಹುದಾಗಿದೆ.

  • ನೀವು ಬೇಕಾದ್ರೆ ಗುಂಡಿಟ್ಟು ಕೊಲ್ಲಬಹುದು. ಆದ್ರೆ ಸೇನಾ ಮಾಹಿತಿ ನೀಡಲ್ಲ: ಉಗ್ರರ ಗುಂಡೇಟಿಗೆ ಬಲಿಯಾದ ಯೋಧನ ಕೊನೆಯ ಮಾತು

    ನೀವು ಬೇಕಾದ್ರೆ ಗುಂಡಿಟ್ಟು ಕೊಲ್ಲಬಹುದು. ಆದ್ರೆ ಸೇನಾ ಮಾಹಿತಿ ನೀಡಲ್ಲ: ಉಗ್ರರ ಗುಂಡೇಟಿಗೆ ಬಲಿಯಾದ ಯೋಧನ ಕೊನೆಯ ಮಾತು

    ಶ್ರೀನಗರ: “ನೀವು ಬೇಕಿದ್ದರೆ ನನ್ನನ್ನು ಗುಂಡಿಕ್ಕಿ ಕೊಂದು ಬಿಡಿ. ಆದರೆ ನಾನು ಯಾವುದೇ ಕಾರಣಕ್ಕೂ ಸೇನೆಯ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ”. ಇದು ಉಗ್ರರ ಗುಂಡೇಟಿಗೆ ಬಲಿಯಾದ ಲ್ಯಾನ್ಸ್ ನಾಯಕ್ ಮುಕ್ತಾರ್ ಅಹ್ಮದ್ ಮಲ್ಲಿಕ್ ಅವರ ಕೊನೆಯ ಮಾತು.

    ಮುಕ್ತಾರ್ ಅವರ ಮಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಗ ನಾಲ್ಕು ದಿನದ ಬಳಿಕ ಸೆಪ್ಟೆಂಬರ್ 15 ರಂದು ಮೃತಪಟ್ಟಿದ್ದರು.

    ಮಗ ಮೃತಪಟ್ಟ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತಾರ್ ಅಹ್ಮದ್ ಕುಲ್ಗಾಂಗೆ ಬಂದಿದ್ದರು. ಸೋಮವಾರ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರದ ಸಿದ್ಧತೆ ನಡೆಸುತ್ತಿದ್ದಾಗ ಪತ್ರಕರ್ತರ ವೇಷವನ್ನು ಧರಿಸಿ ಮೂವರು ಉಗ್ರರು ಮನೆಯನ್ನು ಪ್ರವೇಶಿಸಿದ್ದಾರೆ.

    ಮಗನ ಅಂತ್ಯಸಂಸ್ಕಾರ ನಡೆಸುತ್ತಿದ್ದಾಗ ಉಗ್ರರು ತಮ್ಮ ನಿಜ ರೂಪವನ್ನು ತೋರಿಸಿ ಸೇನೆಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಮಾಹಿತಿ ನೀಡುವಂತೆ ಮಲ್ಲಿಕ್ ಅವರನ್ನು ಬಲವಂತ ಪಡಿಸಿದ್ದಾರೆ. ಆದರೆ ಮಲ್ಲಿಕ್ ಅವರು, ನೀವು ಬೇಕಾದರೆ ನನ್ನನ್ನು ಗುಂಡಿಟ್ಟು ಹತ್ಯೆ ಮಾಡಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಸೇನೆಯ ಮಾಹಿತಿಯನ್ನು ನೀಡುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ನಿರೀಕ್ಷೆ ಮಾಡದ ಉತ್ತರ ಬಂದ ಹಿನ್ನೆಲೆಯಲ್ಲಿ ಮೂವರು ಉಗ್ರರು ಮಲ್ಲಿಕ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.

    ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಮರ್ ಮಜೀದ್, ಓವೈಸಿ ರಾಜಾ, ಜಾವೀದ್ ಭಟ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು ಅವರ ಶೋಧ ಕಾರ್ಯ ಆರಂಭಗೊಂಡಿದೆ.

    ಭಾರತೀಯ ಸೇನೆ ಉಗ್ರರ ಕಾರ್ಯಯೋಜನೆಗಳನ್ನು ವಿಫಲ ಮಾಡುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಈಗ ಕಾಶ್ಮೀರದ ಸೈನಿಕರ ಕುಟುಂಬಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಶ್ಮೀರದ ಸೈನಿಕರನ್ನು ಹತ್ಯೆ ಮಾಡಲು ಮುಂದಾಗುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಖಾಸಗಿತನ ಮೂಲಭೂತ ಹಕ್ಕು – ಸಾಂವಿಧಾನಿಕ ಪೀಠದಿಂದ ಸರ್ವಸಮ್ಮತ ತೀರ್ಪು

    ಖಾಸಗಿತನ ಮೂಲಭೂತ ಹಕ್ಕು – ಸಾಂವಿಧಾನಿಕ ಪೀಠದಿಂದ ಸರ್ವಸಮ್ಮತ ತೀರ್ಪು

    ನವದೆಹಲಿ: ತ್ರಿವಳಿ ತಲಾಕ್ ಬ್ಯಾನ್ ಮಾಡುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಇಂದು ಮತ್ತೊಂದು ಐತಿಹಾಸಿಕ ತೀರ್ಪು ನೀಡಿದೆ. ಖಾಸಗಿತನ ಮೂಲಭೂತ ಹಕ್ಕು ಎಂದು ಮಹದತ್ವದ ಆದೇಶ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ಆಧಾರ್ ಯೋಜನೆಗೆ ಹಿನ್ನಡೆ ಉಂಟಾದಂತಾಗಿದೆ.

    ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಒಂಭತ್ತು ನ್ಯಾಯಾಧೀಶರ ಸಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ. ಆದ್ರೆ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಆಧಾರ್ ಸಂಖ್ಯೆಯನ್ನು ಸಂಯೋಜನೆಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಒತ್ತಾಯ ಖಾಸಗಿತನದ ಉಲ್ಲಂಘನೆಯೇ ಎಂಬ ಬಗ್ಗೆ ಕೋರ್ಟ್ ಯಾವುದೇ ಹೇಳಿಕೆ ನೀಡಿಲ್ಲ. ಈ ನಿರ್ಧಾರವನ್ನ ಸುಪ್ರೀಂ ಕೋರ್ಟ್‍ನ ಪ್ರತ್ಯೇಕ ಹಾಗೂ ಸಣ್ಣ ಪೀಠದಲ್ಲಿ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.

    ಕೇಂದ್ರ ಸರ್ಕಾರದ ಆಧಾರ್ ಯೋಜನೆಯಿಂದ ಪಡೆದ ಖಾಸಗಿ ದಾಖಲೆಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗೂ ಒಬ್ಬ ವ್ಯಕ್ತಿಯ ಎಲ್ಲ ಮಾಹಿತಿಯನ್ನು ಸರ್ಕಾರ ಒಂದೆಡೆ ದಾಖಲಿಸುವುದು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಬರಲಿದೆ ಅಂತಾ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಕಳೆದ ತಿಂಗಳು ಸುಪ್ರೀಂಕೋರ್ಟ್ ಆರು ದಿನಗಳ ದೀರ್ಘ ವಿಚಾರಣೆ ನಡೆಸಿತ್ತು.

    ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಗೋಪಾಲ್ ಸುಬ್ರಮಣ್ಯ ಮತ್ತು ಶಾಮ್ ದಿವಾನ್, ಖಾಸಗಿತನ ಮಾನವನ ಪ್ರತಿಯೊಂದು ಪ್ರಕ್ರಿಯೆಯಲ್ಲಿದ್ದು, ಖಾಸಗಿತನವನ್ನು ಸಂವಿಧಾನಿಕವಾಗಿ ಮೂಲಭೂತ ಹಕ್ಕೆಂದು ಪರಿಗಣಿಸಬೇಕು ಅಂತಾ ವಾದ ಮಂಡಿಸಿದ್ರು. ಇನ್ನೂ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಮಾಜಿ ಅರ್ಟಾನಿ ಜನರಲ್ ಮುಕುಲ್ ರೊಹ್ಟಗಿ ಹಾಗೂ ಹಾಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಭಾರತೀಯರಿಗೆ ಖಾಸಗಿತನ ಸಂವಿಧಾನಿಕ ಮೂಲಭೂತ ಹಕ್ಕಲ್ಲ ಎಂದು ವಾದಿಸಿದ್ರು.

    ಆಧಾರ್ ಒಂದು ಉತ್ತಮ ಯೋಜನೆಯಾಗಿದ್ದು ಆಹಾರ, ಆಶ್ರಯ, ಅಭಿವೃದ್ಧಿ ಯೋಜನೆಗಳನ್ನು ಲಕ್ಷಾಂತರ ಜನರಿಗೆ ತಲುಪಿಸಲು ಸಹಾಯವಾಗಲಿದೆ. ಈಗಾಗಲೇ ಸುಮಾರು 6300 ಕೋಟಿ ವ್ಯಯ ಮಾಡಲಾಗಿದ್ದು ನೂರು ಕೋಟಿ ಜನರಿಗೆ ಆಧಾರ್ ನೀಡುವ ವ್ಯವಸ್ಥೆ ಮಾಡಲಾಗಿದೆ. ನ್ಯಾಯಲಯ ಇದನ್ನು ಪರಿಗಣಿಸಿ ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಬೇಕು ಅಂತಾ ಪ್ರತಿವಾದ ಮಂಡಿಸಿದ್ರು.

    ಈ ಹಿಂದೆ 1954 ರಲ್ಲಿ 8 ನ್ಯಾಯಾಧೀಶರ ಪೀಠ ಹಾಗೂ 1962ರಲ್ಲಿ 6 ನ್ಯಾಯಧೀಶರು ಪೀಠ ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿದ್ದವು.