ಮುಂಬೈ: ಶಿಖರ್ ಧವನ್, ಪೃಥ್ವಿ ಶಾ ಮಿಂಚಿನ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸುಲಭವಾಗಿ ಜಯಗಳಿಸಿತು. ಆರಂಭಿಕ ಆಟಗಾರರು ಶತಕದ ಜೊತೆಯಾಟದ ಮೂಲಕ ಸ್ಫೋಟಕ ಆರಂಭ ನೀಡಿದರು.

ಪೃಥ್ವಿ, ಧವನ್ ಸ್ಫೋಟಕ ಬ್ಯಾಟಿಂಗ್: ಡೆಲ್ಲಿ ಆರಂಭಿಕ ಆಟಗಾರರಾಗಿ ಇಳಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕಠಿಣ ಗುರಿಯನ್ನು ಸುಲಭವಾಗಿ ತಲುಪುವಂತಾಯಿತು. ಪೃಥ್ವಿ ಶಾ 38 ಬಾಲ್‍ಗೆ 72(3 ಸಿಕ್ಸ್, 9 ಬೌಂಡರಿ) ರನ್ ಸಿಡಿಸುವ ಮೂಲಕ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ 13.3 ನೇ ಓವರಿನಲ್ಲಿ ಮೊಯೀನ್ ಅಲಿಗೆ ಕ್ಯಾಚ್ ನೀಡಿದರು.
ಶಿಖರ್ ಧವನ್ ಸಹ 54 ಬಾಲ್‍ಗೆ ಬರೋಬ್ಬರಿ 85(2 ಸಿಕ್ಸ್, 10 ಬೌಂಡರಿ) ರನ್ ಚಚ್ಚುವ ಮೂಲಕ ತಂಡವನ್ನು ಗೆಲುವಿನ ಬಾಗಿಲಿಗೆ ತಂದು ನಿಲ್ಲಿಸಿದರು. ಆದರೆ 16.3 ನೇ ಓವರಿನಲ್ಲಿ ಶಾರ್ದುಲ್ ಠಾಕೂರ್ ಬಾಲ್‍ಗೆ ಎಲ್‍ಬಿಡಬ್ಲ್ಯೂ ಔಟ್ ಆದರು. ಧವನ್ ಹಾಗೂ ಪೃಥ್ವಿ ಶಾ ಸ್ಫೋಟಕ ಜೊತೆಯಾಟವಾಡಿ 82 ಬಾಲ್‍ಗೆ 138 ರನ್ ಪೇರಿಸುವ ಮೂಲಕ ಚೆನ್ನೈ ತಂಡ ದಂಗಾಗುವಂತೆ ಮಾಡಿದರು.

ನಾಯಕ ರಿಷಭ್ ಪಂತ್ ಔಟಾಗದೆ 12 ಬಾಲ್‍ಗೆ 15(2 ಬೌಂಡರಿ) ರನ್ ಸಿಡಿಸಿದರೆ, ಮಾರ್ಕಸ್ ಸ್ಟೋಯ್ನಿಸ್ 9 ಬಾಲ್‍ಗೆ 14(3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಶಿಮ್ರಾನ್ ಹೆಟ್ಮಾಯೆರ್ ಕ್ರೀಸ್‍ಗೆ ಬರುವಷ್ಟರಲ್ಲಿ ಪಂತ್ ತಂಡವನ್ನೇ ಗೆಲ್ಲಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ವಿಜಯದ ನಗೆ ಬೀರಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಚೆನ್ನೈ, 5 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿ ಕೇವಲ 30ರನ್ ಮಾತ್ರ ಗಳಿಸಿತ್ತು. ಸುರೇಶ್ ರೈನಾ(54), ಮೊಯೀನ್ ಅಲಿ(36) ಹಾಗೂ ಸ್ಯಾಮ್ ಕರ್ರನ್(34) ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಹೆಚ್ಚು ಕಾಲ ನಿಲ್ಲಲಿಲ್ಲ. ಎರಡನೇ ಓವರ್ ಕೊನೆಯಲ್ಲಿ ಅವೇಶ್ ಖಾನ್ ಬಾಲಿಗೆ ಡುಪ್ಲೆಸಿಸ್ ಎಲ್‍ಬಿಡಬ್ಲ್ಯೂ ಆದರು. ಈ ಮೂಲಕ 3 ಬಾಲ್ ಎದುರಿಸಿ ಒಂದೂ ರನ್ ಗಳಿಸದೆ ಡಕ್ ಔಟ್ ಆದರು. ಗಾಯಕ್ವಾಡ್ ಸಹ 8 ಬಾಲ್ ಎದುರಿಸಿ 5 (1 ಬೌಂಡರಿ) ರನ್ ಗಳಿಸಿ ವಿಕೆಟ್ 2ನೇ ಓವರ್ ಆರಂಭದಲ್ಲಿ ಶಿಖರ್ ಧವನ್‍ಗೆ ಕ್ಯಾಚ್ ನೀಡಿದರು.
ಮೊಯೀನ್ ಅಲಿ, ರೈನಾ ಮೋಡಿ: ನಂತರ ಆಗಮಿಸಿದ ಮೊಯೀನ್ ಅಲಿ 24 ಬಾಲ್‍ಗೆ 36 (2 ಸಿಕ್ಸ್, 4 ಬೌಂಡರಿ)ರನ್ ಸಿಡಿಸಿದರು. ಈ ಮೂಲಕ ಸುರೇಶ್ ರೈನಾಗೆ ಸಾಥ್ ನೀಡಿದರು. ಆದರೆ 8.3 ನೇ ಓವರ್‍ನಲ್ಲಿ ಶಿಖರ್ ಧವನ್‍ಗೆ ಕ್ಯಾಚ್ ನೀಡಿದರು. ಸುರೇಶ್ ರೈನಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಅರ್ಧ ಶತಕ ಸಿಡಿಸಿದರು. 36 ಬಾಲ್‍ಗೆ 54(4 ಸಿಕ್ಸ್, 4 ಬೌಂಡಿ) ರನ್ ಚಚ್ಚುವ ಮೂಲಕ ಮಂಕಾಗಿದ್ದ ತಂಡವನ್ನು ಮತ್ತೆ ಪುಟಿದೇಳುವಂತೆ ಮಾಡಿದರು. ಆದರೆ 15ನೇ ಓವರ್ ಆರಂಭದಲ್ಲಿ ರನ್ ಔಟ್ ಆಗುವ ಮೂಲಕ ನಿರಾಸೆಯನ್ನುಂಟು ಮಾಡಿದರು. ಇಬ್ಬರ ಜೊತೆಯಾಟದಲ್ಲಿ 38 ಬಾಲ್‍ಗೆ 53 ರನ್ ಸಿಡಿಸುವ ಮೂಲಕ ಉತ್ತಮ ಜೊತೆಯಾಟದ ಪ್ರದರ್ಶನ ನೀಡಿದರು.
ಸ್ಯಾಮ್ ಕರ್ರನ್ 15 ಬಾಲ್‍ಗೆ 34(2 ಸಿಕ್ಸ್, 4 ಬೌಂಡರಿ) ರನ್ ಸಿಡಿಸುವ ಮೂಲಕ ಮಿಂಚಿನಾಟ ಆಡಿದರು. ಆದರೆ ಕೊನೆಯ ಬಾಲ್‍ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಅಂಬಾಟಿ ರಾಯುಡು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ರೈನಾಗೆ ಸಾಥ್ ನೀಡಿದರು. 16 ಬಾಲ್‍ಗೆ 23(2 ಸಿಕ್ಸ್, 1 ಬೌಂಡರಿ) ಗಳಿಸಿ ಕ್ಯಾಚ್ ನೀಡಿದರು. ರಾಯುಡು ಹಾಗೂ ಸುರೇಶ್ ರೈನಾ ಜೊತೆಯಾಟದಲ್ಲಿ 33 ಬಾಲ್ ಗೆ 63 ರನ್ ಸಿಡಿಸಿ ಮಿಂಚಿದರು.
15.3ನೇ ಓವರಿನಲ್ಲ ನಾಯಕ ಎಂ.ಎಸ್.ಧೋನಿ 2 ಬಾಲ್ ಎದುರಿಸಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರು.