– ಗ್ರಂಥಾಲಯ, ಆರೋಗ್ಯ ಮಾಹಿತಿ ಸಹ ಲಭ್ಯ
– ಖೈದಿಗಳ ಇಷ್ಟದ ಗೀತೆಗಳ ಪ್ರಸಾರ
ಲಕ್ನೋ: ಜೈಲಿನಲ್ಲಿ ಈಗ ಹೊಸ ಟ್ರೆಂಡ್ ಶುರುವಾಗುತ್ತಿದ್ದು, ಖೈದಿಗಳಿಗೆ ರೇಡಿಯೋ ಜಾಕಿಯಾಗುವ ಅವಕಾಶ ಲಭಿಸುತ್ತಿದೆ.
ಖೈದಿಗಳನ್ನು ಖಿನ್ನತೆಯಿಂದ ಹಾಗೂ ಮಾನಸಿಕ ಒತ್ತಡದಿಂದ ಹೊರ ತರಲು ಜೈಲಿನಲ್ಲಿ ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಭಾಗವಾಗಿ ಉತ್ತರ ಪ್ರದೇಶದ ಬಲಂದ್‍ಶಹರ್ ಜಿಲ್ಲೆಯ ಜೈಲು ಅಧಿಕಾರಿಗಳು ಇದೀಗ ರೇಡಿಯೋ ಕೇಂದ್ರ ಪ್ರಾರಂಭಿಸಿದ್ದು, ಖೈದಿಗಳಿಗೆ ಮನರಂಜನೆ ನೀಡಲು ಹಾಗೂ ಅವರನ್ನು ಖಿನ್ನತೆಯಿಂದ ದೂರ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಖೈದಿಗಳ ಮನಸ್ಥಿತಿ ಬದಲಿಸಲು, ಒತ್ತಡದಿಂದ ಅವರನ್ನು ಹೊರ ತರಲು ನಾವು ಜೈಲು ರೇಡಿಯೋ ಪರಿಚಯಿಸಿದ್ದೇವೆ. ಖೈದಿಗಳ ಅಭಿರುಚಿಗೆ ತಕ್ಕಂತೆ ನಾವು ಹಾಡುಗಳನ್ನು ಪ್ರಸಾರ ಮಾಡುತ್ತೇವೆ ಎಂದು ಜೈಲು ಸುಪರಿಂಟೆಂಡೆಂಟ್ ಓ.ಪಿ.ಕಟಿಯಾರ್ ಮಾಹಿತಿ ನೀಡಿದ್ದಾರೆ.

ರೇಡಿಯೋ ಉದ್ದೇಶ ಕೇವಲ ಖೈದಿಗಳಿಗೆ ಮನರಂಜನೆ ನೀಡುವುದು ಮಾತ್ರವಲ್ಲ, ಅವರು ರೇಡಿಯೋ ಜಾಕಿಗಳಾಗಲು ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಭಾರತದ ಇತಿಹಾಸ, ಧರ್ಮ ಹಾಗೂ ಇತಿಹಾಸದ ಸ್ಮಾರಕಗಳ ಕುರಿತು ರೇಡಿಯೋ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಕಟಿಯಾರ್ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೈಲು ಅಧಿಕಾರಿಗಳ ಈ ಕಾರ್ಯಕ್ಕೆ ಖೈದಿಗಳು ಸಹ ಸಂತಸ ವ್ಯಕ್ತಪಡಿಸಿದ್ದು, ರೇಡಿಯೋ ಮಾತ್ರವಲ್ಲದೆ ಜೈಲಿನಲ್ಲಿ ಗ್ರಂಥಾಲಯ ಹಾಗೂ ಇ-ತರಗತಿಗಳ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ.
ಅಕ್ಟೋಬರ್‍ನಲ್ಲಿ ಆಗ್ರಾ ಜೈಲಿನಲ್ಲಿ ಸಹ ಸಮುದಾಯ ರೇಡಿಯೋವನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ಜೈಲಿನಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು. ಅಲ್ಲದೆ ಖೈದಿಗಳಿಗೆ ತಮ್ಮ ವಿವಿಧ ಕೌಶಲ ಹಾಗೂ ಆಸಕ್ತಿಗಳನ್ನು ಪ್ರಸ್ತುತ ಪಡಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಅಲ್ಲದೆ ಠಾಣೆಯನ್ನು ಖೈದಿಗಳೇ ನಿರ್ವಹಿಸುವಂತೆ ಮಾಡಲಾಗಿದೆ. ಈ ರೇಡಿಯೋ ಸ್ಟೇಷನ್‍ನಲ್ಲಿ ಹಾಡುಗಳು ಮಾತ್ರವಲ್ಲದೆ, ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ರೇಡಿಯೋ ಕೇಳಲು ಪ್ರತಿ ಬಂಧಿಖಾನೆಯಲ್ಲಿ ಸ್ಪೀಕರ್‍ಗಳನ್ನು ಅಳವಡಿಸಲಾಗಿದೆ.

ಸಮುದಾಯ ರೇಡಿಯೋ ಎಂದರೇನು?
ಸಮುದಾಯ ರೇಡಿಯೋದಲ್ಲಿ ಸ್ಥಳೀಯರಿಗಾಗಿ ಅವರದ್ದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಇದರಲ್ಲಿ ಭಾಗವಹಿಸುವವರು ಸಹ ಸ್ಥಳೀಯರೇ ಆಗಿರುತ್ತಾರೆ. ಇದು ಸ್ಥಳೀಯರೊಂದಿಗೆ ಸಂಪರ್ಕ ಹೊಂದುವುದು ಹಾಗೂ ಮಾಹಿತಿ ಹಂಚಿಕೊಳ್ಳಲು ಅನುಕೂಲಕರವಾಗಿರುತ್ತದೆ.








































