Tag: printing

  • 2 ಸಾವಿರ ಮುಖಬೆಲೆಯ ನೋಟ್ ಮುದ್ರಣ ನಿಲ್ಲಿಸಲಿದೆ ಆರ್‌ಬಿಐ

    2 ಸಾವಿರ ಮುಖಬೆಲೆಯ ನೋಟ್ ಮುದ್ರಣ ನಿಲ್ಲಿಸಲಿದೆ ಆರ್‌ಬಿಐ

    ನವದೆಹಲಿ: ದೇಶದಲ್ಲಿನ ಕಪ್ಪುಹಣಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

    ನವೆಂಬರ್ 8, 2016ರಲ್ಲಿ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.

    ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್‍ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.

    2 ಸಾವಿರ ರೂ. ನೋಟುಗಳ ಮುದ್ರಣವನ್ನು ಕಡಿಮೆ ಮಾಡಿ, ಮುಂದಿನ ದಿನಗಳಲ್ಲಿ ಕಡಿಮೆ ಮೌಲ್ಯದ ನೋಟುಗಳ ಚಲಾವಣೆಯನ್ನು ಸರ್ಕಾರ ಹೆಚ್ಚಿಸಲಿದೆ. ಇದು ಹೊಸ ಪ್ರಕ್ರಿಯೆ ಏನಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

    ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ. 86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ 2018ರ ಮಾರ್ಚ್ 31ಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಶೇ.37.3ಕ್ಕೆ ಕುಸಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ರೂ. ನಾಣ್ಯ ಟಂಕಿಸಲು 1.11 ರೂ. ವೆಚ್ಚ!- ಯಾವ ನಾಣ್ಯಕ್ಕೆ ಎಷ್ಟು?

    ಒಂದು ರೂ. ನಾಣ್ಯ ಟಂಕಿಸಲು 1.11 ರೂ. ವೆಚ್ಚ!- ಯಾವ ನಾಣ್ಯಕ್ಕೆ ಎಷ್ಟು?

    ನವದೆಹಲಿ: ಇತ್ತೀಚಿನ ಮಕ್ಕಳಿಗೆ ಒಂದು ರೂಪಾಯಿ ಕೊಟ್ಟರೆ ನಮಗೆ ಬೇಡ. ಇದರಲ್ಲಿ ಏನು ಸಿಗುತ್ತೆ ಅಂತಾ ಪ್ರಶ್ನೆ ಮಾಡುತ್ತಾರೆ. ಅಷ್ಟೇ ಅಲ್ಲ ಒಂದು ರೂ. ಮುಖಬೆಲೆಯ ನಾಣ್ಯ ಮುದ್ರಣ ಮಾಡೋದಕ್ಕೆ ಸರ್ಕಾರ ಕೂಡ ಅದಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಬೇಕಾಗುತ್ತದೆ.

    ಹೌದು, 1.ರೂ ಟಂಕಿಸಲು ಸರ್ಕಾರ 1.11 ರೂ. ವೆಚ್ಚ ಮಾಡಬೇಕಾಗಿದೆ. ನಾಣ್ಯಗಳನ್ನು ಟಂಕಿಸಲು ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರ ಎಲ್ಲ ರೀತಿಯ ಮುಖ ಬೆಲೆಯ ನಾಣ್ಯಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತದೆ ಎನ್ನುವ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

    ಯಾವ ನಾಣ್ಯಕ್ಕೆ ಎಷ್ಟು ವೆಚ್ಚ?:
    1, 2, 5 ಹಾಗೂ 10 ರೂ. ಮುಖಬೆಲೆಯ ನಾಣ್ಯಗಳನ್ನು ಟಂಕಿಸಿ ಮಾರುಕಟ್ಟೆಗೆ ಬಿಡುಗಡೆಮಾಡುವ ಕೆಲಸವನ್ನು ಆರ್‌ಬಿಐ ಮಾಡುತ್ತಿದೆ. 2ರೂ. ನಾಣ್ಯಕ್ಕೆ 1.20 ರೂ., 5 ರೂ. ನಾಣ್ಯಕ್ಕೆ 3.69 ರೂ., ಮತ್ತು 10 ರೂ. ನಾಣ್ಯಕ್ಕೆ 5.54 ರೂ. ವೆಚ್ಚ ಮಾಡಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv