Tag: Prime Minister’s Fund

  • ಕೊರೊನಾ ವಿರುದ್ಧದ ಹೋರಾಟಕ್ಕೆ 51 ಕೋಟಿ ದೇಣಿಗೆ ನೀಡಿದ ಬಿಸಿಸಿಐ

    ಕೊರೊನಾ ವಿರುದ್ಧದ ಹೋರಾಟಕ್ಕೆ 51 ಕೋಟಿ ದೇಣಿಗೆ ನೀಡಿದ ಬಿಸಿಸಿಐ

    ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ನೆರವಾಗಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಧಾನ ಮಂತ್ರಿ ನಿಧಿಗೆ 51 ಕೋಟಿ ರೂಗಳ ಧನಸಹಾಯ ಮಾಡಿದೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಭೀತಿಯಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರಗೆ ಲಾಕ್‍ಡೌನ್ ಮಾಡಿದ್ದಾರೆ. ಇದರಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ದೇಶ ಹೊರಬರಲೆಂದು ದೊಡ್ಡ ದೊಡ್ಡ ಉದ್ಯಮಿಗಳು, ಕ್ರಿಕೆಟಿಗರು, ಕೇಂದ್ರ ಸರ್ಕಾರಕ್ಕೆ ದೇಣಿಗೆ ನೀಡುತ್ತಿದ್ದಾರೆ. ಅದರಂತೆ ಬಿಸಿಸಿಐ ಕೂಡ ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ 51 ಕೋಟಿ ನೀಡಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಸಿಸಿಐ, ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ ನಾವು 51 ಕೋಟಿಯನ್ನು ದೇಣಿಗೆ ನೀಡುತ್ತಿದ್ದೇವೆ ಎಂದು ಬರೆದುಕೊಂಡಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಹಲವಾರು ಕ್ರಿಕೆಟಿಗರು ಕೈಜೋಡಿಸುತ್ತಿದ್ದ, ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರು, ತಮ್ಮ ಮೂರು ತಿಂಗಳ ಶಾಸಕ ಸಂಭಳ ಮತ್ತು ಬಿಸಿಸಿಐ ಪಿಂಚಣಿಯನ್ನು ದೇಣಿಗೆಯಾಗಿ ನೀಡಿದ್ದರು.

    ಇಂದು ಟ್ವೀಟ್ ಮಾಡಿರುವ ಕ್ರಿಕೆಟಿಗ ಸುರೇಶ್ ರೈನಾ ಅವರು, ಕೊರೊನಾ ವೈರಸ್ ಅನ್ನು ತಡೆಗಟ್ಟಲು ನಮ್ಮ ಕೈಯಲ್ಲಿ ಆದ ಸಹಾಯವನ್ನು ದೇಶಕ್ಕೆ ಮಾಡಬೇಕಿದೆ. ನಾನು ಕೂಡ 52 ಲಕ್ಷ ರೂ. ಗಳನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇನೆ. ಅದರಲ್ಲಿ 31 ಲಕ್ಷವನ್ನು ಪ್ರಧಾನಿ ಅವರ ನಿಧಿಗೆ ಮತ್ತು ಉಳಿದ 21 ಲಕ್ಷವನ್ನು ಉತ್ತರ ಪ್ರದೇಶದ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ನಿಮ್ಮ ಕೈಯಲ್ಲಿ ಆದ ಸಹಾಯವನ್ನು ನೀವು ಮಾಡಿ ಎಂದು ಟ್ವೀಟ್ ಮಾಡಿದ್ದರು.

    ಕ್ರಿಕೆಟಿಗರ ಜೊತೆಗೆ ಸಿನಿಮಾ ನಟ-ನಟಿಯರು ಕೂಡ ದೇಶಕ್ಕಾಗಿ ಧನಸಹಾಯ ಮಾಡುತ್ತಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 25 ಕೋಟಿ ದೇಣಿಗೆ ನೀಡಿದ್ದಾರೆ. ಇವರಂತೆ ಸೂಪರ್ ಸ್ಟಾರ್ ರಜನೀಕಾಂತ್, ನಟ ಅಲ್ಲು ಅರ್ಜುನ್, ಪ್ರಭಾಸ್, ಪವನ್ ಕಲ್ಯಾಣ್, ನಿತಿನ್, ಮಹೇಶ್ ಬಾಬು, ರಾಮ್ ಚರಣ್, ಹೃತಿಕ್ ರೋಷನ್, ಕಪಿಲ್ ಶರ್ಮಾ ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.