Tag: prime minister

  • ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

    ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

    ಬೀದರ್: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು 15 ನಿಮಿಷ ಯಾವುದೇ ನೋಟ್ಸ್ ಸಹಾಯವಿಲ್ಲದೇ ಮಾತನಾಡುವಂತೆ ಸವಾಲು ಎಸೆದಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆ ಗಳನ್ನು ಕೇಳುವ ಮೂಲಕ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.

    ಜಿಲ್ಲೆಯ ಔರಾದದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಕಳಾಜಿ ಇಲ್ಲ. ಸುಳ್ಳು ಹೇಳುವ ಮೂಲಕ ಜನರನ್ನು ಹೆದರಿಸುವ ಕಾರ್ಯಮಾಡುತ್ತಿದ್ದಾರೆ. ನಾನು ಮೋದಿ ಅವರನ್ನು ಎಂದು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಆದ್ರೆ ಮೋದಿ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಇವರಿಗೆ ತಾನು 3 ಪ್ರಶ್ನೆಗಳನ್ನು ಕೇಳುತ್ತೇನೆ ಉತ್ತರಿಸಲಿ ಎಂದು ಸವಾಲು ಎಸೆದರು.

    ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ಅವರು ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ ಅವರು ನೀರವ್ ಮೋದಿಯನ್ನು ದೇಶ ಬಿಟ್ಟು ಹೋಗಲು ಅವಕಾಶ ನೀಡಿದ್ದು ಯಾಕೆ? ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಯರಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಿದ್ದು ಯಾಕೆ? ಭ್ರಷ್ಟಾಚಾರ ಆರೋಪ ಹೊಂದಿರುವ ಅಮಿತ್ ಶಾ ಪುತ್ರನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಈ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಹೇಳಿದರು.

    ಬಿಜೆಪಿ ನಾಯಕರು ಆರ್ ಎಸ್‍ಎಸ್ ಸಿದ್ಧಾಂತವನ್ನು ದೇಶದಲ್ಲಿ ಜಾರಿಗೆ ತರಲು ಮುಂದಾಗಿದ್ದಾರೆ. ಬಸವಣ್ಣನವರ ಬಗ್ಗೆ ಮೋದಿ ಅವರು ಮಾತನಾಡುತ್ತಾರೆ. ಆದರೆ ಬಸವಣ್ಣನವರ ನುಡಿದಂತೆ ನಡೆಯಬೇಕು ಎಂಬ ತತ್ವವನ್ನು ಅನುಸರಿಸುವುದಿಲ್ಲ. ಭ್ರಷ್ಟಾಚಾರ ನಡೆಸಿ ಜೈಲು ಸೇರಿದ್ದ ಜನಾರ್ದನ ರೆಡ್ಡಿರನ್ನು ಮತ್ತೆ ವಿಧಾನಸೌದಕ್ಕೆ ತರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

  • ಪ್ರಧಾನಿಗೆ ಪತ್ರ ಬರೆದು ಫ್ಲೈ ಓವರ್ ನಲ್ಲಿ ಅಪ್ರಾಪ್ತ ಬಾಲಕ ಆತ್ಮಹತ್ಯೆ!

    ಪ್ರಧಾನಿಗೆ ಪತ್ರ ಬರೆದು ಫ್ಲೈ ಓವರ್ ನಲ್ಲಿ ಅಪ್ರಾಪ್ತ ಬಾಲಕ ಆತ್ಮಹತ್ಯೆ!

    ಚೆನ್ನೈ: ಅಪ್ರಾಪ್ತ ಬಾಲಕನೊಬ್ಬ ನಗರದ ಫ್ಲೈ ಓವರ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವನ್ನಾರಪೇಟೆ ನಗರದಲ್ಲಿ ನಡೆದಿದೆ.

    ನಗರದ ನಮಕ್ಕಲ್ ಶಾಲೆಯ 12 ತರಗತಿಯ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದು, ಸಾವಿಗೂ ಮುನ್ನ ಆತ ತನ್ನ ಸಾವಿಗೆ ಕಾರಣ ತಿಳಿಸಿ ಪತ್ರ ಬರೆದಿಟ್ಟು ಸಾವನ್ನಪ್ಪಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಬಾಲಕ ಪತ್ರದಲ್ಲಿ ತನ್ನ ತಂದೆ ಮದ್ಯವ್ಯಸನಿಯಾಗಿದ್ದು ದಯಮಾಡಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ ಎಂದು ಪ್ರಧಾನಿ ಮೋದಿ ಹಾಗೂ ತಮಿಳುನಾಡು ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದಾನೆ. ಅಲ್ಲದೇ ತನ್ನ ಅಂತಿಮ ವಿಧಿ ವಿಧಾನಗಳಿಂದ ತಂದೆಯನ್ನು ದೂರವಿಡುವಂತೆ ತಿಳಿಸಿದ್ದಾನೆ.

    2015ರ ತಮಿಳುನಾಡಿನ ವಿಧಾನಸಭಾ ಚುನಾವಣೆ ವೇಳೆ ಜಯಲಲಿತಾ ಅವರು ಮದ್ಯ ಮಾರಾಟ ನಿಷೇಧ ಮಾಡುವ ಕುರಿತು ಆಶ್ವಾಸನೆ ನೀಡಿದ್ದರು. ಆದರೆ ಅಧಿಕಾರ ವಹಿಸಿಕೊಂಡ ಬಳಿಕ ಈ ವಿಷಯ ನೆನೆಗುದಿಗೆ ಬಿದ್ದಿತ್ತು. ಈ ಹಿಂದೆ 1971 ರಲ್ಲಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರ ವಹಿಸಿದ್ದ ವೇಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಬಳಿಕ ಈ ನೀತಿಯನ್ನು ಮತ್ತೆ ಹಿಂಪಡೆಯಲಾಗಿತ್ತು.

    ತಮಿಳುನಾಡು ಸರ್ಕಾರ ಪ್ರತಿ ವರ್ಷ 27 ಸಾವಿರ ಕೋಟಿ ರೂ. ಆದಾಯವನ್ನು ಮದ್ಯ ಮಾರಾಟದಿಂದ ಪಡೆಯುತ್ತಿದೆ. ಜಯಲಲಿತಾ ಅವರ ಸಾವಿನ ಬಳಿಕ ಅಧಿಕಾರ ವಹಿಸಿಕೊಂಡ ಇ ಪನ್ನೀರ್ ಸೇಲ್ವಂ 500 ಅನಧಿಕೃತ ಮದ್ಯ ಮಳಿಗೆಗಳನ್ನು ಮುಚ್ಚಿಸಿದ್ದಾರೆ.

  • ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

    ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

    ವಿಜಯಪುರ: ರಾಷ್ಟ್ರೀಕೃತ ಬ್ಯಾಂಕ್‍ ಗಳಲ್ಲಿ ಸಾಲ ಮನ್ನಾ ಮಾಡುವ ಬಗ್ಗೆ ಯಡಿಯೂರಪ್ಪ ಅವರಿಗೆ ಈಗ ಜ್ಞಾನೋದಯವಾಗಿದೆ. ಹಾಗಾಗಿ ಈಗ ಟ್ವೀಟ್ ಮಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಯಡ್ಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದ ಜೆಡಿಎಸ್ ಅಭ್ಯರ್ಥಿ ಎಸ್.ಕೆ ಬೆಳ್ಳುಬ್ಬಿ ಪರ ಮತಯಾಚನೆ ಮಾಡುವ ಹಿನ್ನೆಲೆಯಲ್ಲಿ ನಗರದ ದರಬಾರ್ ಮೈದಾನದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನ ಆಯೋಜಿಸಲಾಗಿತ್ತು. ಗಿಡಕ್ಕೆ ನೀರು ಹಾಕುವ ಮುಖಾಂತರ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಇದನ್ನೂ ಓದಿ: ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ `ನಮೋ’- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ?

    ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‍ಡಿಕೆ, ರಿಸರ್ವ್ ಬ್ಯಾಂಕ್ ನವರು ನೋಟ್ ಪ್ರಿಂಟ್ ಮಾಡುವ ಮಷೀನ್ ನೀಡಿಲ್ಲ. ಹಾಗಾಗಿ ಸಾಲ ಮನ್ನಾ ಮಾಡಲು ಆಗಲ್ಲ ಎಂದು ಯಡಿಯೂರಪ್ಪ ಮೊದಲು ಹೇಳಿದ್ದರು. ಚುನಾವಣೆ ಬಂದಾಕ್ಷಣ ಯಡಿಯೂರಪ್ಪ ಅವರಿಗೆ ರೈತರ ಮೇಲೆ ಕನಿಕರ ಬಂತಾ ಎಂದು ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ವಿಚಾರ ಪ್ರಸ್ತಾಪ ಮಾಡದೇ ಹೋದರೆ ರೈತರು ಮತ ಹಾಕಲ್ಲ ಎಂದು ಈಗ ಸಾಲ ಮನ್ನಾ ಬಗ್ಗೆ ಮಾತಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸವಾಲಿನಂತೆ ರಾಜೀನಾಮೆ ಕೊಟ್ಟರೂ ಮೋದಿ ಸ್ವೀಕರಿಸದೇ ವಿನಂತಿಸಿಕೊಂಡ್ರು: ಅಂದಿನ ಘಟನೆಯನ್ನು ನೆನಪಿಸಿಕೊಂಡ ಎಚ್‍ಡಿಡಿ

    ದೇವೇಗೌಡರ ಬಗ್ಗೆ ಅನುಕಂಪದ ಮಾತಾಡಿದ ಮೋದಿ ಕುರಿತು ಪ್ರತಿಕ್ರಿಯಿಸಿದ ಅವರು, 2014 ರ ಲೋಕಸಭಾ ಚುನಾವಣೆ ವೇಳೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸುತ್ತೇನೆಂದು ಯಾಕೆ ಹೇಳಿದ್ರು ಎಂದು ಪ್ರಶ್ನಿಸಿದ್ದಾರೆ. ಈಗೇಕೆ ದೇವೇಗೌಡರ ಬಗ್ಗೆ ಅನುಕಂಪ ಬಂತು. ರಾಜ್ಯದ ಜನತೆ ಈಗಾಗಲೇ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಮೋದಿ ಅವರು ಬಿಟ್ಟಿರುವಂತ ಪದ ಪುಂಜಗಳು ಎಲ್ಲರಲ್ಲಿ ಗೊಂದಲ ಸೃಷ್ಟಿಸಿದೆ. ಮೋದಿ ಅವರು ನನಗೆ ಬಾಲ್ ಹಾಕೋಕೆ ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.

  • ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಚಾಮರಾಜನಗರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ 15 ನಿಮಿಷ ಚೀಟಿ ಇಟ್ಟುಕೊಳ್ಳದೇ ಭಾಷಣ ಮಾಡಲು ಸಾಧ್ಯವೇ? 5  ಬಾರಿ ವಿಶ್ವೇಶ್ವರಯ್ಯ ಹೆಸರನ್ನು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಇಂದು ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಆಗಮಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕನ್ನಡದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತ್ ಮತಾಕೀ, ಇಲ್ಲಿ ನೆರೆದಿರುವ ಕನ್ನಡ ನಾಡಿನ ಜನರಿಗೆ ನನ್ನ ನಮಸ್ಕಾರ. ಚಾಮರಾಜ ಒಡೆಯರ್ ಮತ್ತು ಡಾ. ರಾಜ್‍ಕುಮಾರ್ ಅವರಿಗೆ ನನ್ನ ನಮಸ್ಕಾರಗಳು ಎಂದರು.

    ಮಾಜಿ ಶಾಸಕ ನಂಜುಂಡಸ್ವಾಮಿ ಪ್ರಧಾನಿಗೆ ಸನ್ಮಾನ ಮಾಡಿದ್ದು, ಗದೆ ನೀಡಿದರು. ಆದರೆ ಮೋದಿ ಶಾಲು, ಹಾರ ಸ್ವೀಕರಿಸಿದ್ದು, ಆದ್ರೆ  ಬೆಳ್ಳಿ ಗದೆಯನ್ನು ನಿರಾಕರಣೆ ಮಾಡಿದ್ದಾರೆ. ಬಿಎಸ್‍ವೈಗೆ ಕಮಲದ ಹೂ ನೀಡಿ ಶುಭ ಕೋರಿದ್ದಾರೆ. ಮಂಟೇಸ್ವಾಮಿ, ಬಿಳಿಗಿರಿ ರಂಗ ಸ್ವಾಮಿ, ಹಿಮವದ್ ಗೋಪಾಲ ಸ್ವಾಮಿ, ಚಾಮರಾಜೇಶ್ವರ ದೇವರಿಗೆ ನಮನ ಅರ್ಪಿಸಿದರು. ಅಷ್ಟೇ ಅಲ್ಲದೇ ಸುತ್ತೂರು ಮಠ, ಕನಕಗಿರಿ, ಸಾಲೂರು ಮಠಕ್ಕೂ ನಮನ ಸಲ್ಲಿಸಿ ಭಾಷಣ ಮಾಡಿದರು. ಮೋದಿ ಭಾಷಣದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

    https://www.youtube.com/watch?v=hE7SrGlvAGM

    ಮುಖ್ಯಾಂಶಗಳು:
    * ನೀವು ನಾವು ರಾಜ್ಯಕ್ಕೆ ಏನ್ ಮಾಡಿದ್ದೇವೆ ಅಂತಾ ಕೇಳುತ್ತೀರಾ. ಕರ್ನಾಟಕದಲ್ಲಿ 39 ಗ್ರಾಮಗಳಲ್ಲಿ ವಿದ್ಯುತ್ ಇರಲಿಲ್ಲ. ನಮ್ಮ ಸರಕಾರದ ಯೋಜನೆಯಿಂದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಬಂದಿದೆ.

    * ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತು ನೀವು ಕೇಳಲ್ಲ. ಅದು ಬೇಡ ನಿಮ್ಮ ತಾಯಿಯ ಮಾತನ್ನಾದರೂ ನಡೆಸಿಕೊಡಿ. 2009 ರ ಒಳಗೆ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಕೊಡುತ್ತೇವೆ ಅಂತಾ ಹೇಳಿದರು. ಸ್ವಲ್ಪ ಕೇಳಿಸಿಕೊಳ್ಳಿ ರಾಹುಲ್ ಗಾಂಧಿ.

    * ವಂದೇ ಮಾತರಂ ಗೀತೆಗೆ ಗೌರವ ಕೊಡುವುದು ಗೊತ್ತಿಲ್ಲ. ಈ ದೇಶದ ಇತಿಹಾಸದ ಬಗ್ಗೆ ಗೊತ್ತಿಲ್ಲ. ಅದಿರಲಿ ಅವರ ಪಕ್ಷದ ಸರಕಾರದ ಆಡಳಿತದ ಬಗ್ಗೆಯೂ ಗೊತ್ತಿಲ್ಲ.

    * 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೇವೆ. ಇದನ್ನು ಕಾಂಗ್ರೆಸ್ ಶ್ಲಾಘಿಸುವುದಿಲ್ಲ. ಅವರ ಕೆಲಸ ಮಾಡುವವರು ಅಲ್ಲ. ಬರೀ ಹೆಸರು ಬೇಕು ಎನ್ನುವ ಜನ. 70 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಮಾಡಿದ್ದೇನು? ಇನ್ನೂ ಯಾಕೆ ಜನ ವಿದ್ಯುತ್ ಸಂಪರ್ಕ ಇಲ್ಲದೆ ಬದುಕುತ್ತಿದ್ದಾರೆ.

    * ದೇಶದ 18 ಸಾವಿರ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ನೀಡಿದೆ. ಇದು ನಮ್ಮ ಕಾರ್ಮಿಕರ ಹೆಮ್ಮೆಯ ಕೆಲಸ. ಅವರನ್ನು ಇಂದು ನೆನಪಿಸಿಕೊಳ್ಳುತ್ತೇನೆ. ಮಣಿಪುರದ ಕೊನೆ ಹಳ್ಳಿಗೆ ವಿದ್ಯುತ್ ತಲುಪಿಸಿದೆ. ದೆಹಲಿಯಲ್ಲಿ ನಾವು ಕೇಳುತ್ತಿದ್ದೇವೆ. ಕರ್ನಾಟದಲ್ಲಿ ಬದಲಾವಣೆ ಅಲೆ ಇದೆ ಅಂತಾ ನಾನು ಇಲ್ಲಿ ಬಂದು ನೋಡಿದ ಮೇಲೆ ಇಲ್ಲಿ ಅಲೆಯ ಬಿರುಗಾಳಿ ಬೀಸುತ್ತಿದೆ.

    * ಇಂದು ಮೇ1 ಕಾರ್ಮಿಕರ ದಿನ. ಕಾರ್ಮಿಕ ವರ್ಗದವರು ದೇಶವನ್ನು ಮುಂದೆ ತರುವಲ್ಲಿ ಬೆವರು ಸುರಿಸಿದ್ದಾರೆ. ಅವರಿಗೆ ಈ ದಿನವನ್ನು ಅರ್ಪಿಸುತ್ತೇನೆ

    * ಚಾಮರಾಜನಗರದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಆದ್ರೆ ಇಲ್ಲಿ ಅಭಿವೃದ್ಧಿ ಕುಂಠಿತವಾಗಿರೋದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಹೊಣೆ. ಕೇಂದ್ರ ಸರ್ಕಾರ ಚಾಮರಾಜನಗರಕ್ಕೆ ರೈಲು ಮಂಜೂರು ಮಾಡಿದೆ, ಹಣವನ್ನೂ ಬಿಡುಗಡೆ ಗೊಳಿಸಿದೆ. ಆದರೆ ಇಲ್ಲಿನ ಸರ್ಕಾರ ಭೂಮಿಯನ್ನು ಮಂಜೂರು ಮಾಡಿಲ್ಲ

    * ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಲೋಕಾಯುಕ್ತರಿಗೂ ಸರಿಯಾಗಿ ರಕ್ಷಣೆ ಇಲ್ಲ, ಇನ್ನೂ ಸಾಮಾನ್ಯ ಜನರ ಹೇಗಿರಬೇಕು. ಇದು ಕಾಂಗ್ರೆಸ್ ಆಡಳಿತ ವೈಖರಿ. ಈ ದುಸ್ಥಿತಿಗೆ ಕಾರಣರಾದವರನ್ನು ನಾವು ಬದಲಿಸಬೇಕಿದೆ.

    * ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭಾಗಿಯಾಗದೇ ಇರುವ ಯಾವ ರಾಜಕಾರಣಿಯೂ ಈ ಸರ್ಕಾರದಲ್ಲಿಲ್ಲ. ಪ್ರತಿ ಒಬ್ಬರ ಮೇಲೆ ಕನಿಷ್ಟ ಒಂದಾದರೂ ಭ್ರಷ್ಟಾಚಾರದ ಪ್ರಕರಣ ದಾಖಲಾಗಿವೆ.

     

    * ಕರ್ನಾಟಕದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳಿಗೆ 2+1 ಫಾರ್ಮುಲಾ ಇದ್ರೆ, ಇತರೆ ಮಂತ್ರಿಗಳು 1 + 1 ಫಾರ್ಮುಲದಡಿ ಅವರಿಗೆ ಮತ್ತು ಅವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ?.

    * ಮೇ 12 ರಂದು, ಕೇವಲ ಮತ ಚಲಾವಣೆ ಮಾಡುವುದಷ್ಟೇ ಅಲ್ಲ. ಕರ್ನಾಟಕದ ಭವಿಷ್ಯ ಬದಲಾಯಿಸುವ ದಿನವೂ ಹೌದು. ಅಂದಿನ ದಿನ ಬಿಜೆಪಿಗೆ ಮತ ನೀಡಿ ಇಲ್ಲಿನ 10% ಕಮಿಷನ್ ಸರ್ಕಾರವನ್ನು ಕಿತ್ತೆಸೆಯಿರಿ.

    * ಯಾವಾಗಲೋ ಒಮ್ಮೊಮ್ಮೆ ಎಚ್ಚರದಲ್ಲಿರುವ, ಅತೀ ಹೆಚ್ಚು ಸಮಯವನ್ನು ನಿದ್ದೆಯಲ್ಲಿಯೇ ಕಳೆಯುವ ಮುಖ್ಯಮಂತ್ರಿಗಳು, ತಾವು ಸೋಲುವದಲ್ಲದೇ, ತಮ್ಮ ಮಗನನ್ನು ಕೂಡಾ ಬಲಿ ಕೊಡುತ್ತಿದ್ದಾರೆ. ತಾವು 2 ಕ್ಷೇತ್ರದಲ್ಲಿ ಹಾಗೂ ತಮ್ಮ ಮಗನ 1 ಕ್ಷೇತ್ರದಲ್ಲೂ ಸೋಲುವುದು ನಿಶ್ಚಿತ.

    * ರಾಹುಲ್ ಗಾಂಧಿ ಅವರು ತಮಗೆ ಬೇಕಾದ ಭಾಷೆಯಲ್ಲಿ, ಹಿಂದಿ ಆಗಿರಲಿ ಅಥವಾ ತಮ್ಮ ಮಾತಾಜಿ ಅವರ ಹುಟ್ಟು ಭಾಷೆಯಾಗಿರಲಿ, ಕೇವಲ 15 ನಿಮಿಷ ಕರ್ನಾಟಕ ಸರ್ಕಾರದ ಸಾಧನೆಗಳನ್ನು, ಯಾವುದೇ ಕಾಗದ ನೋಡಿಕೊಳ್ಳದೆ ಹೇಳಲಿ, ಅವರ ಸಾಮಥ್ರ್ಯ ಗೊತ್ತಾಗುತ್ತೆ.

    * ಸೋನಿಯ ಗಾಂಧಿ 2005ರಲ್ಲಿ 2009ರ ಒಳಗೆ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದರು. ಆದರೆ, ನಾವು ಅಧಿಕಾರಕ್ಕೆ ಬರುವವರೆಗೂ ಇದು ಆಗಲಿಲ್ಲ ಅಂದ್ರೆ ಕಾಂಗ್ರೆಸ್ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಿ.

     

  • ಜನಾರ್ದನ ರೆಡ್ಡಿಗೂ ಪಕ್ಷಕ್ಕೂ ಸಂಬಂಧವಿಲ್ಲ: ಶ್ರೀರಾಮುಲು

    ಜನಾರ್ದನ ರೆಡ್ಡಿಗೂ ಪಕ್ಷಕ್ಕೂ ಸಂಬಂಧವಿಲ್ಲ: ಶ್ರೀರಾಮುಲು

    ಬಾಗಲಕೋಟೆ: ಗೆಳತನಕ್ಕಾಗಿ ಮಾತ್ರ ನನ್ನ ಪರ ಜನಾರ್ದನರೆಡ್ಡಿ ಅವರು ಪ್ರಚಾರಕ್ಕೆ ಆಗಮಿಸಿದ್ದಾರೆ ವಿನಃ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದ್ದಾರೆ.

    ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಬಾದಾಮಿಯಲ್ಲಿ ಎರಡನೇ ಹಂತದ ಚುನಾವಣೆ ಪ್ರಚಾರ ಆರಂಭಿಸಿದ್ದ ಶ್ರೀ ರಾಮುಲು ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದರು. ಬಾದಾಮಿಯಲ್ಲಿ ಜನರಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಎರಡು ಕ್ಷೇತ್ರದಲ್ಲೂ ಪಕ್ಷದ ಪರ ಗೆಲುವು ಸಾಧಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತರನ್ನು ಒಡೆದಿರುವ ಸತ್ಯ ಎಲ್ಲಾ ಜನರಿಗೂ ತಿಳಿದಿದೆ. ಕ್ಷೇತ್ರದಲ್ಲಿ ಪಕ್ಷದ ಸ್ಥಳೀಯ ನಾಯಕರು ಗೆಲುವಿಗಾಗಿ ಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಭ್ರಷ್ಟಚಾರ ಅಂಶಗಳನ್ನು ಮುಂದಿಟ್ಟು ಪ್ರಚಾರ ನಡೆಸುತ್ತಿದ್ದೇನೆ. ಅವರ ಆಡಳಿತಾವಧಿಯಲ್ಲಿ ಐಎಎಸ್ ಅಧಿಕಾರಿಗಳು, ಪೊಲೀಸರು, ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಅವರಿಗೆ ಸವಾಲು ನೀಡುತ್ತೇನೆ. ಬಹಿರಂಗ ಚರ್ಚೆಗೆ ಸಿದ್ಧವಿದ್ದು, ರಾಜ್ಯದ 224 ಕ್ಷೇತ್ರದ ಯಾವುದೇ ಸ್ಥಳಕ್ಕೆ ಕರೆದರೂ ಆಗಮಿಸುತ್ತೇನೆ ಎಂದರು.

    ಚುನಾವಣೆಯಲ್ಲಿ ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಜಯ ಸಾಧಿಸಿದರೆ ಯಾವ ಕ್ಷೇತ್ರದವನ್ನು ಉಳಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದ ನಾಯಕರು ತನ್ನನ್ನು ಬಾದಾಮಿಗೆ ಕಳುಹಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ. ಬಾದಾಮಿಯಲ್ಲಿ ತಾನು ಬಾಡಿಗೆ ಮನೆ ಮಾಡುತ್ತಿಲ್ಲ, ಮುಂದಿನ ದಿನಗಳಲ್ಲಿ ಸ್ವಂತ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದರು.

    ಈ ಬಾರಿ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯ ಹಾಗೂ ಬಿಎಸ್‍ವೈ ಅಡಳಿತ ಅವಧಿಯಲ್ಲಿ ಜಾರಿಗೆ ಮಾಡಿರುವ ಯೋಜನೆಗಳನ್ನು ತಿಳಿಸಿ ಅಧಿಕಾರ ಪಡೆಯುತ್ತೇವೆ. ರಾಜ್ಯದಲ್ಲಿ ಪಕ್ಷದ ಅಧಿಕಾರಕ್ಕೆ ತರುವುದು ಹಾಗೂ ಬಿಎಸ್‍ವೈ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಎಂದು ಹೇಳಿದರು.

  • ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ, ಆದ್ರೆ ಬಿಜೆಪಿಗೆ ಮತ ಹಾಕಬೇಡಿ: ಪ್ರಕಾಶ್ ರೈ

    ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ, ಆದ್ರೆ ಬಿಜೆಪಿಗೆ ಮತ ಹಾಕಬೇಡಿ: ಪ್ರಕಾಶ್ ರೈ

    ವಿಜಯಪುರ: ಚುನಾವಣೆಯಲ್ಲಿ ನಾನು ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ. ಆದರೆ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಮಾಡಿ ಎಂದು ಹೇಳುತ್ತಾರೆ. ಹೀಗೆ ಹೇಳಲು ಇವರು ಯಾರು ಎಂದು ಪ್ರಶ್ನಿಸಿದ ರೈ, ಬಿಜೆಪಿ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದರೆ ನನ್ನ ಹೋರಾಟ ಇನ್ನೂ ತೀವ್ರಗೊಳಿಸುತ್ತೇನೆ ಎಂದು ಹೇಳಿದರು.

    ರಾಜಕೀಯ ಪ್ರವೇಶ ಇಲ್ಲ: ಇದೇ ವೇಳೆ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ ರೈ, ನನಗೆ ರಾಜಕೀಯ ಬೇಡ. ನಾನು ಹಲವು ಭಾಷೆಗಳಲ್ಲಿ ಸಿನಿಮಾ ಮಾಡುತ್ತೇನೆ. ಸಾಕಷ್ಟು ಹಣ, ಹೆಸರು ಮಾಡಿದ್ದೇನೆ. ಸದ್ಯ ಪ್ರಜೆಗಳಿಗೆ ಧ್ವನಿ ಇಲ್ಲ. ರಾಜಕೀಯ ಬಿಟ್ಟು ಅವರ ಧ್ವನಿಯಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

    ಕಾವೇರಿ ಒಂದು ಜೀವನದಿ, ಒಂದೇ ದೇಶದಲ್ಲಿರುವ ಎರಡು ರಾಜ್ಯಗಳು ಸರಿಯಾಗಿ ಹಂಚಿಕೊಳ್ಳಲು ಆಗುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳಿಗೆ ಸಮಸ್ಯೆ ಬಗೆಹರಿಯುವುದು ಬೇಕಾಗಿಲ್ಲ. ಕಾವೇರಿ ನದಿಯ ಮೂಲವನ್ನು ರಕ್ಷಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಕಾವೇರಿಯ ಕಾಡನ್ನು ರಕ್ಷಿಸುತ್ತಿಲ್ಲ, ಕಾವೇರಿ ತಟದಲ್ಲಿ ನಡೆಯುವ ಮರಳುಗಾರಿಕೆ ನಿಲ್ಲಿಸುವ ಕೆಲಸ ಯಾರೂ ಮಾಡುತ್ತಿಲ್ಲ ಎಂದು ಹೇಳಿ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದರು.

    ಕಾವೇರಿಯ ವಿಚಾರವಾಗಿ ತಜ್ಞರು ಚರ್ಚಿಸ ಬೇಕಾದ ವಿಚಾರವನ್ನು ಇಂದು ಯಾರೂ ಬೇಕಾದರು ಮಾತನಾಡುವಂತಾಗಿದೆ. ಕಾವೇರಿ ನದಿಯ ವಿಚಾರವಾಗಿ ತಜ್ಞರೊಂದಿಗೆ ಮಾತನಾಡಿದ್ದೇನೆ. ನದಿಯ ಪಾತ್ರ ಎಷ್ಟಿದೆ. ಎಷ್ಟು ಟಿಎಂಸಿ ನೀರು ಸಿಗುತ್ತೆ. ಟಿಎಂಸಿ ಅಂದರೆ ಏನು? ಎಲ್ಲದರ ಬಗ್ಗೆ ಒಂದೂವರೆ ತಿಂಗಳೊಳಗೆ 20 ನಿಮಿಷದ ಸಾಕ್ಷ್ಯ ಚಿತ್ರವನ್ನು ಮಾಡಿಕೊಡಿ ಎಂದು ಹೇಳಿರುವುದಾಗಿ ತಿಳಿಸಿದ್ದೇನೆ. ನದಿ ಜೋಡಣೆ ಹಾಗೂ ನದಿ ತಿರುವು ಯೋಜನೆಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂದರು. ಅಲ್ಲದೇ ಪರ ಭಾಷಾ ಸಿನಿಮಾಗಳನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದರು.

    ಅನಂತಕುಮಾರ್ ಹೆಗ್ಡೆ ವಿರುದ್ಧ ಕಿಡಿ: ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಆ ವೇಳೆ ಸಂವಿಧಾನ ಬದಲಾವಣೆ ಮಾಡಬೇಡಿ ಎಂದರೆ ತಂದೆ ತಾಯಿ, ರಕ್ತ, ಹುಟ್ಟಿನ ಬಗ್ಗೆ ಮಾತನಾಡಿದರೆ ನೋವು ಆಗುವುದಿಲ್ವಾ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ, ಅನಂತಕುಮಾರ ಹೆಗ್ಡೆ ಅಂಥವರನ್ನು ನಾನು ವಿರೋಧಿಸುತ್ತೇನೆ. ನಾನು ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ಇಂತಹ ರಾಕ್ಷಸರ ಬಗ್ಗೆ ಮಾತನಾಡುತ್ತೇನೆ ಎಂದು ಕಿಡಿ ಕಾರಿದರು.

    ಇತಂಹವರ ಬಗ್ಗೆ ಮಾತನಾಡಿದರೆ ನನ್ನನ್ನು ಹಿಂದೂ ವಿರೋಧಿ ಎಂದು ಏಕೆ ತಿಳಿದುಕೊಳುತ್ತೀರಿ. ಅನಂತಕುಮಾರ್ ಅವರೇ ಧೈರ್ಯ ಇದ್ದರೆ ಎದುರಿಗೆ ಬನ್ನಿ. ಒಂದೇ ವೇದಿಕೆಯಲ್ಲಿ ಎದುರು ಬದುರು ಕುಳಿತು ಚರ್ಚೆ ಮಾಡೋಣ ಎಂದು ಸವಾಲು ಎಸೆದರು. ಇದೇ ವೇಳೆ ಜಿಎಸ್‍ಟಿ ಬಗ್ಗೆಯೂ ಕಿಡಿಕಾರಿದ ಅವರು, ಕೈಮಗ್ಗಕ್ಕೆ ಏಕೆ 15% ತೆರಿಗೆ ವಿಧಿಸಿದ್ದೀರಾ ಎಂದು ಮೋದಿ ಅವರನ್ನು ಪ್ರಶ್ನಿಸಿದರು.

    ಅಮಿತ್ ಶಾ ವಿರುದ್ಧ ವಾಗ್ದಾಳಿ: ತಮ್ಮ ಪಕ್ಷದ ವಿರುದ್ಧ ನಾಯಿ, ಬೆಕ್ಕು, ಹಾವುಗಳು ಎಲ್ಲರೂ ಒಂದಾಗಿದ್ದಾರೆ ಎಂದು ದೇಶದ ಪ್ರಮುಖ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವವರು ಹೇಳುತ್ತಾರೆ. ಮೋದಿ ಹಾಗೂ ಅಮಿತ್ ಶಾ ಇಬ್ಬರು ಮಾತ್ರ ಮನುಷ್ಯರಾ? ಮೋದಿ ಎನ್ನುವ ಪ್ರಳಯ ಬಂದಿದೆ ಎಂದು ಅವರೇ ಹೇಳುತ್ತಾರೆ. ಪ್ರಳಯ ಬಂದರೆ ಎಲ್ಲಾ ಪ್ರಾಣಿಗಳು ಕೊಚ್ಚಿ ಹೋಗಬಾರದು ಎಂದು ಎಲ್ಲರೂ ಮೇಲೆ ಬರುತ್ತಾರೆ. ಜೀವಿಸುವ ಆಸೆ ಹಾಗೂ ಕನಸುಗಳು ಇರುವ ಪ್ರತಿಯೊಬ್ಬರು ಮೇಲೆ ಎದ್ದು ಬರುತ್ತಾರೆ ಎಂದು ಟಾಂಗ್ ನೀಡಿದರು.

  • 5 ದಿನ ಪ್ರಧಾನಿ ಆದರೆ ಸಾಕು, ದೇಶವನ್ನು ಬದಲಾವಣೆ ಮಾಡುತ್ತೇನೆ: ಹುಚ್ಚ ವೆಂಕಟ್

    5 ದಿನ ಪ್ರಧಾನಿ ಆದರೆ ಸಾಕು, ದೇಶವನ್ನು ಬದಲಾವಣೆ ಮಾಡುತ್ತೇನೆ: ಹುಚ್ಚ ವೆಂಕಟ್

    ಮಡಿಕೇರಿ: ಈ ಬಾರಿಯ ವಿಧಾನಸಭಾ ಚುನಾವಣೆ ಮೂಲಕ ತಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಹೇಳಿದ್ದಾರೆ.

    ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್, ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಿರ್ಮಿಸುತ್ತಾ ಜನರ ಸೇವೆಯನ್ನು ಮಾಡುತ್ತಿದ್ದೇನೆ. ಇದೀಗ ರಾಜಕೀಯವಾಗಿ ಜನರ ಸೇವೆ ಮಾಡಲು ಮುಂದಾಗಿದ್ದೇನೆ. ಈ ಹಿನ್ನಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿ ರಾಜಕೀಯ ಪಕ್ಷಗಳು ಆಫರ್ ಕೊಟ್ಟರೆ ಹೋಗುತ್ತೇನೆ. ನಾನು ಚುನಾವಣೆಯಲ್ಲಿ ಸೀರೆ, ಹೆಂಡ, ಹಣ ಕೊಡಲ್ಲ. ಜನರಿಗೆ ಕೈ ಮುಗಿಯಲ್ಲ ಮತ್ತು ಕ್ಯಾನ್ವಾಸ್ ಮಾಡಲ್ಲ. ನಾನು ಓಟ್ ನ ಭಿಕ್ಷೆ ಬೇಡಲ್ಲ. ಇಲ್ಲ ನಿಮ್ಮನ್ನ ನಾನು ಕೊಂಡುಕೊಳ್ಳಲ್ಲ. ನಿಮ್ಮ ಕೆಲಸ ಮಾಡಬೇಕು ಎಂದು ಬಂದಿದ್ದೇನೆ ಕೆಲಸ ಕೊಡಿ ಎಂದು ಹೇಳಿದ್ದಾರೆ.

    ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ರಾಜಕೀಯ ಪಕ್ಷಗಳು ಆಹ್ವಾನ ನೀಡಿದರೆ ಪಕ್ಷದ ಮೂಲಕ ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ. ಜನರಿಗೆ ಕೈ ಕೂಡಾ ಮುಗಿಯುವುದಿಲ್ಲ. ಜನರ ಕೆಲಸ ಮಾಡಬೇಕು ಅಂತಾ ನಾನು ಬರುತ್ತಿದ್ದೇನೆ. ಜನತೆ ಅವರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

    ನಾನು ಶಾಸಕನಾಗಿ ಮುಂದೆ ಮುಖ್ಯಮಂತ್ರಿ ಕೂಡಾ ಆಗುತ್ತೇನೆ. ನಂತರ ಪ್ರಧಾನಿ ಕೂಡ ಆಗುತ್ತೇನೆ. ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತೇನೆ, ನನಗೆ ಕೇವಲ 5 ದಿನ ಪ್ರಧಾನಿಯಾಗುವ ಅವಕಾಶ ನೀಡಿದರೆ ದೇಶವನ್ನು ಬದಲಾಯಿಸುತ್ತೇನೆ. ಇಡೀ ವಿಶ್ವವೇ ಭಾರತ ನಂ. 1 ಎನ್ನುವಂತೆ ಮಾಡುತ್ತೇನೆ ಎಂದು ಅವರು ಹೇಳಿದರು.

    ನಾನು ಇಲ್ಲಿ ಸೋತರೆ ದೆಹಲಿಗೆ ಹೋಗುತ್ತೇನೆ. ಅಲ್ಲೂ ಸೋತರೆ ಅಮೆರಿಕಕ್ಕೆ ಹೋಗುತ್ತೇನೆ. ನನಗೆ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳಿಲ್ಲ. ಎಲ್ಲ ಕಡೆನೂ ಇದ್ದಾರೆ. ಆದರೆ ನನ್ನ ಮನೆ ಇರುವುದು ಕರ್ನಾಟಕದಲ್ಲಿ ನನ್ನನ್ನು ಸೋಲಿಸಿದರೂ ನಾನು ಬೇಸರಪಡದೆ ಜನರ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿ ಇದ್ದು ಜನರ ಕೆಲಸ ಮಾಡಬೇಕೆಂದಿಲ್ಲ ಎಂದು ಹುಚ್ಚ ವೆಂಕಟ್ ಸ್ಪಷ್ಟ ಪಡಿಸಿದ್ದಾರೆ.

  • ಹಜ್ ವಿಮಾನ ಪ್ರಯಾಣ ದರ ಕಡಿತಗೊಳಿಸಿದ ಕೇಂದ್ರ: ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಹಜ್ ವಿಮಾನ ಪ್ರಯಾಣ ದರ ಕಡಿತಗೊಳಿಸಿದ ಕೇಂದ್ರ: ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ನವದೆಹಲಿ: ಹಜ್ ಸಬ್ಸಿಡಿ ಕಡಿತ ಗೊಳಿಸದ ಬೆನ್ನಲ್ಲೇ ಕೇಂದ್ರ ಸರ್ಕಾರ ಹಜ್ ಯಾತ್ರೆ ವಿಮಾನ ಪ್ರಯಾಣ ದರವನ್ನು ಕಡಿತಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಆಸಕ್ತಿ ಹೊಂದಿದ್ದಾರೆ. ಯಾವುದೇ ಶಿಫಾರಸ್ಸು ಇಲ್ಲದೇ ಈ ನಿರ್ಧರವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

    ಭಾರತದ 21 ವಿಮಾನ ನಿಲ್ದಾಣಗಳಿಂದ ಹೊರಡುವ ಏರ್ ಇಂಡಿಯಾ, ಸೌದಿ ಏರ್ ಲೈನ್ಸ್ ಮತ್ತು ಫ್ಲೈನಾಸ್ ವಿಮಾನಯಾನ ಸಂಸ್ಥೆಗಳಲ್ಲಿ ಈ ನಿಯಮಗಳು ಅನ್ವಯಿಸುತ್ತವೆ ಎಂದರು.

    ಸರ್ಕಾರದ ಈ ಕ್ರಮದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಅಲ್ಲದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಜ್ ಯಾತ್ರೆ ಹೆಸರಿನಲ್ಲಿ ನಡೆಸುತ್ತಿದ್ದ ಆರ್ಥಿಕ ಹಾಗೂ ರಾಜಕೀಯ ಶೋಷಣೆ ಕೊನೆಗೊಳ್ಳುತ್ತದೆ ಎಂದು ಹೇಳಿದರು.

    ಪ್ರಯಾಣ ದರ ಎಷ್ಟು? ಅಹಮದಾಬಾದ್ ನಿಂದ 2013-14 ನೇ ಸಾಲಿನಲ್ಲಿದ್ದ 98,750 ರೂ. ದರದಿಂದ 65,015 ರೂ.ಗೆ ಇಳಿಯಲಿದೆ. ಮುಂಬೈ ನಿಂದ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ 98,750 ರೂ. ಗಳಿಂದ ದರ 57,857 ರೂ. ಗೆ ಇಳಿಕೆ ಆಗಲಿದೆ.

    ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಅನ್ವಯ ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳ ವೇಳೆ 2018 ರಿಂದಲೇ ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ರದ್ದು ಪಡಿಸಲಾಗಿತ್ತು. ಈ ಹಣವನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು.

    ಸಬ್ಸಿಡಿ ರದ್ದಾಗಿದ್ದು ಯಾಕೆ?
    ಹಜ್ ಸಬ್ಸಿಡಿ ಹೆಸರಿನಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ತಲುಪುಬೇಕಾದವರಿಗೆ ಸಹಾಯಧನ ತಲುಪದೇ ಬೇರೆ ಯಾರಿಗೋ ತಲುಪುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. 2022ರೊಳಗಾಗಿ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ಸ್ಥಗಿತಗೊಳ್ಳಿಸಬೇಕೆಂದು 2012ರಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಖರ್ಚುಗಳನ್ನು ಭರಿಸಲು ಸಾಧ್ಯವಿರುವ ಮಂದಿ ಮಾತ್ರ ಹಜ್ ಯಾತ್ರೆಯನ್ನು ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಹೀಗಾಗಿ ಸಬ್ಸಿಡಿ ಪಡೆದು ಯಾತ್ರೆ ಮಾಡುವುದು ಕುರಾನ್ ಬೋಧನೆಗೆ ವಿರುದ್ಧವಾಗುತ್ತದೆ ಅಲ್ಲವೇ ಎಂದು ಸುಪ್ರೀಂ ಪ್ರಶ್ನಿಸಿತ್ತು. ಹಜ್ ಯಾತ್ರೆಗೆ ಬಳಸುವ ಹಣವನ್ನು ಅಲ್ಪಸಂಖ್ಯಾತರ ಶಿಕ್ಷಣ, ಅಭಿವೃದ್ಧಿಗೆ ಬಳಸಬೇಕೆಂದು ಸಲಹೆ ನೀಡಿತ್ತು. 2012ರ ತನಕ ಪ್ರತೀ ವರ್ಷ ಹಜ್ ಯಾತ್ರೆಗೆ ಸುಮಾರು 650 ಕೋಟಿ ರೂ. ಮೀಸಲಿಡಲಾಗುತ್ತಿತ್ತು. ಸುಪ್ರೀಂ ಆದೇಶ ಬಳಿಕ ಇದನ್ನು 450 ಕೋಟಿ ರೂ. ಗೆ ಕಡಿತಗೊಳಿಸಲಾಗಿತ್ತು.

    ಸೌದಿ ಸರ್ಕಾರದ ಜೊತೆ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮವಾಗಿರುವ ಕಾರಣ 2018ರಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮಂದಿ ಯಾತ್ರೆಗೆ ಅವಕಾಶ ನೀಡಿದೆ. ಇದರಿಂದಾಗಿ ಈ ವರ್ಷ 1,75,025 ಮಂದಿ ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 40 ಸಾವಿರ ಮಂದಿಗೆ ಅವಕಾಶ ಸಿಕ್ಕಿದ್ದು, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅತಿ ಹೆಚ್ಚು ಮಂದಿ ಯಾತ್ರೆ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ 1,36,020 ಮಂದಿ ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 1,75,025ಕ್ಕೆ ಏರಿಕೆಯಾಗಿದೆ ಎಂದು ನಖ್ವಿ ಹೇಳಿದ್ದರು.

  • ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ರೇಟಿಂಗ್ ನಲ್ಲಿ ಮೋದಿಗೆ 3ನೇ ಸ್ಥಾನ

    ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ರೇಟಿಂಗ್ ನಲ್ಲಿ ಮೋದಿಗೆ 3ನೇ ಸ್ಥಾನ

    – 2015ರ ಸಮೀಕ್ಷೆಯಲ್ಲಿ 5ನೇ ಸ್ಥಾನದಲ್ಲಿದ್ದ ಮೋದಿ ಈ ಬಾರಿ ಮೂರರಲ್ಲಿ
    – ಪುಟಿನ್, ಟ್ರಂಪ್ ರನ್ನ ಹಿಂದಿಕ್ಕಿದ ಮೋದಿ, ಪಾತಾಳಕ್ಕೆ ಕುಸಿದ ಟ್ರಂಪ್
    – ಮೋದಿಯನ್ನ ದ್ವೇಷಿಸುವ ದೇಶಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನ
    – ಫಾರಿನ್ ಪ್ರವಾಸದಿಂದಲೂ ಆಗಿದೆ ಪರಿಣಾಮ

    ನವದೆಹಲಿ: ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ.

    ಪ್ರತಿಷ್ಠಿತ ಗ್ಯಾಲಪ್ ಅಂತರಾಷ್ಟ್ರೀಯ ವಾರ್ಷಿಕ ಸಮೀಕ್ಷೆಯಾದ ಒಪೀನಿಯನ್ ಆಫ್ ಗ್ಲೋಬಲ್ ಲೀಡರ್ಸ್ ನಲ್ಲಿ ಮೋದಿ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ. ಸ್ವಿಜರ್ಲ್ಯಾಂಡ್ ನ ಗ್ಯಾಲಪ್ ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಹಾಗೂ ಸಿ-ವೋಟರ್ ಸಹಯೋಗದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ವಿಶ್ವದಾದ್ಯಂತ 55 ರಾಷ್ಟ್ರಗಳಲ್ಲಿ 53,769 ಜನರನ್ನ ಸಂದರ್ಶನ ಮಾಡಿ ಈ ಸಮೀಕ್ಷಾ ವರದಿ ನೀಡಲಾಗಿದೆ.

    ಚೀನಾ ಅಧ್ಯಕ್ಷ ಕ್ಸೀ ಜಿನ್‍ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂತಾದ ನಾಯಕರನ್ನ ಹಿಂದಿಕ್ಕಿ ಮೋದಿ ಮೂರನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಟಾಪ್ ಒಂದನೇ ಸ್ಥಾನ ಪಡೆದಿದ್ದು, ನೂತನ ಫ್ರೆಂಚ್ ಅಧ್ಯಕ್ಷ ಇಮ್ಮ್ಯಾನುವಲ್ ಮ್ಯಾಕ್ರನ್ ಎರಡನೇ ಸ್ಥಾನ ಪಡೆದು ಮೋದಿಗಿಂತ ಮುಂದಿದ್ದಾರೆ. ಈ ಸಮೀಕ್ಷೆಯಲ್ಲಿ ಈವರೆಗೆ ಭಾರತೀಯ ಪ್ರಧಾನಿಗೆ ಸಿಕ್ಕ ಅತ್ಯಂತ ಹೆಚ್ಚಿನ ಶ್ರೇಯಾಂಕ ಇದಾಗಿದೆ ಎಂದು ವರದಿಯಾಗಿದೆ.

     

    2015ರಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ 5ನೇ ಸ್ಥಾನದಲ್ಲಿದ್ದರು. ಈ ವೇಳೆ ಅವರ ನೆಟ್ ಸ್ಕೋರ್ (ಪಾಸಿಟಿವ್ ರೇಟಿಂಗ್ 24ನಿಂದ ನೆಗೆಟೀವ್ ರೇಟಿಂಗ್ 20 ಕಳೆದಾಗ) 4 ಇತ್ತು. ಈ ವರ್ಷ ಅದು ದುಪ್ಪಟ್ಟಾಗಿದ್ದು ನೆಟ್ ಸ್ಕೋರ್ 8 ಸಿಕ್ಕಿದೆ.

    ಮೋದಿಯ ನಂತರ ಬ್ರಿಟನ್ ಪ್ರಧಾನಿ ಥೆರೆಸಾ ಮೇ ನಾಲ್ಕನೇ ಸ್ಥಾನ, ಚೀನಾ ಅಧ್ಯಕ್ಷ ಜಿನ್‍ಪಿಂಗ್ ಐದನೇ ಸ್ಥಾನ, ರಷ್ಯಾ ಅಧ್ಯಕ್ಷ ಪುಟಿನ್ ಆರನೇ ಸ್ಥಾನ ಹಾಗೂ ಸೌದಿ ದೊರೆ ಸಲ್ಮಾನ್ ಅಬ್ದುಲ್ ಅಜೀಜ್ ಅಲ್ ಸೌ ಏಳನೇ ಸ್ಥಾನದಲ್ಲಿದ್ದಾರೆ. ಇಸ್ರೇಲ್‍ನ ಬೆಂಜಮಿನ್ ನೇತನ್ಯಾಹು ಎಂಟನೇ ಸ್ಥಾನದಲ್ಲಿದ್ದರೆ, ಇರಾನ್ ಅಧ್ಯಕ್ಷ ಹಸನ್ ರೌಹಾನಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತಾಳಕ್ಕೆ ಕುಸಿದಿದ್ದು 11ನೇ ಸ್ಥಾನ ಪಡೆದಿದ್ದಾರೆ. ಎರಡು ವರ್ಷಗಳ ಹಿಂದಿನ ಸಮೀಕ್ಷೆಯಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರು. ಟ್ರಂಪ್‍ಗಿಂತ ಮುಂಚೂಣಿಯಲ್ಲಿರೋ ಟರ್ಕಿ ಅಧ್ಯಕ್ಷ ಎರ್ಡೋಗನ್ 10ನೇ ಸ್ಥಾನ ಪಡೆದಿದ್ದಾರೆ. ಆಶ್ಚರ್ಯವೆಂದರೆ ಧಾರ್ಮಿಕ ನಾಯಕರಾದ ಪೋಪ್ ಫ್ರಾನ್ಸಿಸ್ 38 ನೆಟ್ ಸ್ಕೋರ್ ಪಡೆದಿದ್ದಾರೆ.

    ಮೋದಿಯನ್ನ ಪ್ರೀತಿಸೋ ದೇಶಗಳು: ವಿಯಾಟ್ನಾಮ್, ಫಿಜಿ ಹಾಗೂ ಅಫ್ಘಾನಿಸ್ತಾನ ಮೋದಿಯನ್ನ ಇಷ್ಟಪಡುವ ಟಾಪ್ ಮೂರು ದೇಶಗಳು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ 2015ರಲ್ಲಿ ವಿಯೆಟ್ನಾಂ ನಲ್ಲಿ ಮೋದಿಯನ್ನ ಇಷ್ಟಪಡುವವರ ನೆಟ್ ಸ್ಕೋರ್ 9 ಇದ್ದಿದ್ದು, 2017ರ ಪಟ್ಟಿಯಲ್ಲಿ ಬರೋಬ್ಬರಿ 62ಕ್ಕೆ ಏರಿದೆ.

    ಮೋದಿಯನ್ನ ದ್ವೇಷಿಸೋ ದೇಶಗಳು: ಮೋದಿಯನ್ನು ದ್ವೇಷಿಸುವ ರಾಷ್ಟ್ರಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. 2015ರಲ್ಲಿ ನೆಟ್ ಸ್ಕೋರ್ – 43 ಇದ್ದರೆ 2017ರಲ್ಲಿ ನೆಟ್ ಸ್ಕೋರ್ -54ಕ್ಕೆ ಏರಿದೆ. ಮೋದಿಯನ್ನು ದ್ವೇಷಿಸುವ ಎರಡನೇ ದೇಶ ದಕ್ಷಿಣ ಕೊರಿಯಾ ಹಾಗೂ ಮೂರನೇ ದೇಶ ಪ್ಯಾಲೆಸ್ಟೀನ್ ಆಗಿದೆ.

    ಜಿ8 ರಾಷ್ಟ್ರಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?: ಜಿ8 ರಾಷ್ಟ್ರಗಳಾದ ರಷ್ಯಾ, ಅಮೆರಿಕ, ಕೆನಡಾ, ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿ ಹಾಗೂ ಇಟಲಿ ದೇಶಗಳ ನಡುವೆ ಮೋದಿಯ ಜನಪ್ರಿಯತೆ ಸರಾಸರಿ 4 ಅಂಕಗಳಷ್ಟು ಕಡಿಮೆಯಾಗಿದೆ. 2015ರಲ್ಲಿ ರಷ್ಯಾದಲ್ಲಿ ಮೋದಿಯ ಫೇವರೆಬಿಲಿಟಿ 47 ಅಂಕ ಇದ್ದರೆ 2017ರಲ್ಲಿ 16ಕ್ಕೆ ಇಳಿದಿದೆ. ಅದರಲ್ಲೂ ರಷ್ಯಾಗೆ ಮೋದಿ ನಾಲ್ಕು ಬಾರಿ ಭೇಟಿ ನೀಡಿದ ಹೊರತಾಗಿಯೂ -31 ಸ್ಕೋರ್ ಸಿಕ್ಕಿದೆ. ಅಮೆರಿಕ, ಇಂಗ್ಲೆಂಡ್, ಇಟಲಿ ಹಾಗೂ ಜಪಾನ್‍ನಲ್ಲಿ ಮೋದಿಯ ಫೇವರೆಬಿಲಿಟಿ ಕ್ರಮವಾಗಿ ಮೂರು, ನಾಲ್ಕು, ಒಂದು ಹಾಗೂ ಒಂದು ಅಂಕಗಳಷ್ಟು ಹೆಚ್ಚಿದೆ. ಕೆನಡಾದಲ್ಲಿ ಯಾವುದೇ ಬದಲಾವಣೆ ಇಲ್ಲ.

    ಸಾರ್ಕ್ ದೇಶಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?: ಸಾರ್ಕ್ ದೇಶಗಳಾದ ಅಫ್ಘಾನಿಸ್ತಾನ, ಬಂಗ್ಲಾದೇಶ ಹಾಗೂ ಪಾಕಿಸ್ತಾನದ ಪೈಕಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ನೆಟ್ ಸ್ಕೋರ್ ಕಡಿಮೆಯಾಗಿದೆ. ಅದರಲ್ಲೂ ಬಾಂಗ್ಲೇದೇಶದಲ್ಲಿ ಕಳೆದ ಸಮೀಕ್ಷೆಯಲ್ಲಿ 50 ಇದ್ದ ನೆಟ್ ಸ್ಕೋರ್ 13ಕ್ಕೆ ಕುಸಿದಿದೆ. ಅಫ್ಘಾನಿಸ್ತಾನದಲ್ಲಿ 3 ಅಂಕ ಹೆಚ್ಚಿದೆ.

    ಬ್ರಿಕ್ಸ್ ರಾಷ್ಟ್ರಗಳಲ್ಲಿ ಹೇಗಿದೆ ಮೋದಿ ಹವಾ?: ಬ್ರಿಕ್ಸ್ ರಾಷ್ಟ್ರಗಳಾದ ರಷ್ಯಾ, ದಕ್ಷಿಣ ಆಫ್ರಿಕಾ, ಚೀನಾ, ಬ್ರೆಜಿಲ್ ಪೈಕಿ ಮೋದಿಯ ಒಟ್ಟಾರೆ ಸ್ಕೋರ್‍ನಲ್ಲಿ(ಭಾರತದ 6 ಅಂಕ ಸರಿದೂಗಿಸಿಯೂ) 2 ಅಂಕ ಕಡಿಮೆಯಾಗಿದೆ. ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕ್ರಮವಾಗಿ 12 ಹಾಗೂ 2 ಅಂಕಗಳು ಹೆಚ್ಚಾಗಿದೆ. ಚೀನಾದಲ್ಲಿ ಯಾವುದೇ ಬದಲಾವಣೆ ಇಲ್ಲ.

    ವಿದೇಶಿ ಪ್ರವಾಸ ಎಫೆಕ್ಟ್: ಮೋದಿ ಭೇಟಿ ನೀಡಿದ ರಾಷ್ಟ್ರಗಳ ಪೈಕಿ ಮೆಕ್ಸಿಕೋ ಹಾಗೂ ಟರ್ಕಿಯಲ್ಲಿ ಗುಣಾತ್ಮಕ ಬದಲಾವಣೆ ಆಗಿದೆ. ಮೆಕ್ರಿಕೋದ ನೆಟ್ ಸ್ಕೋರ್ -1 ರಿಂದ 31ಕ್ಕೆ ಜಿಗಿದಿದ್ದರೆ, ಟರ್ಕಿಯಲ್ಲಿ -4ರಿಂದ 10ಕ್ಕೆ ಏರಿದೆ. ಆದ್ರೆ ಆಶ್ಚರ್ಯವೆಂಬಂತೆ ನೆದರ್‍ಲೆಂಡ್ಸ್ ಹಾಗೂ ಕೊರಿಯಾದಲ್ಲಿ ಮೋದಿ ಭೇಟಿ ಹೊರತಾಗಿಯೂ ಅವರ ಜನಪ್ರಿಯತೆ ಕ್ಷೀಣಿಸಿದೆ.

    ಭಾರತೀಯರು ಟಾಪ್ 10 ಲೀಡರ್‍ಗಳನ್ನ ಹೇಗೆ ರೇಟ್ ಮಾಡಿದ್ದಾರೆ?: ಭಾರತದಲ್ಲಿ ಮೋದಿಯ ಪಾಸಿಟೀವ್ ಸ್ಕೋರ್ 85, ನೆಗೆಟೀವ್ ಸ್ಕೋರ್ 14 ಇದ್ದರೆ ನೆಟ್ ಸ್ಕೋರ್ 71 ಇದೆ. 2015ರ ಸಮೀಕ್ಷೆಗೆ ಹೋಲಿಸಿದ್ರೆ ನೆಟ್ ಸ್ಕೋರ್ 61 ಇದ್ದಿದ್ದು 71ಕ್ಕೆ ಏರಿದೆ. ಸಮೀಕ್ಷೆಯ ವರದಿಯನ್ನ ಪಕ್ಕಕ್ಕಿಟ್ಟರೆ ಭಾರತೀಯರು ತಮ್ಮದೇ ರೀತಿಯಲ್ಲಿ ಇತರೆ ಟಾಪ್ 10 ನಾಯಕರನ್ನ ರೇಟ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಸಮೀಕ್ಷೆಯಲ್ಲಿಯೂ ಬರಾಕ್ ಒಬಾಮಾಗೆ ಭಾರತೀಯರು ಮೊದಲ ಸ್ಥಾನ ನೀಡಿದ್ದರು. ಈ ಬಾರಿಯ ಸಮೀಕ್ಷೆಯಲ್ಲಿ ಪುಟಿನ್ ಎರಡನೇ ಸ್ಥಾನ ಹಾಗೂ ಏಂಜೆಲಾ ಮರ್ಕೆಲ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಚೀನಾದ ಕ್ಸೀ ಜಿನ್‍ಪಿಂಗ್ ಕೊನೆಯ ಸ್ಥಾನ ಪಡೆದಿದ್ದಾರೆ.

  • ರಿಸಲ್ಟ್ ಬರೋ ದಿನವೇ ಮಂಗ್ಳೂರಿಗೆ ಮೋದಿ – ನಾಳೆ ಕರಾವಳಿಯಲ್ಲಿ ಪ್ರಧಾನಿ ವಾಸ್ತವ್ಯ

    ರಿಸಲ್ಟ್ ಬರೋ ದಿನವೇ ಮಂಗ್ಳೂರಿಗೆ ಮೋದಿ – ನಾಳೆ ಕರಾವಳಿಯಲ್ಲಿ ಪ್ರಧಾನಿ ವಾಸ್ತವ್ಯ

    ಮಂಗಳೂರು: ಗುಜರಾತ್ ಚುನಾವಣೆಯ ಫಲಿತಾಂಶದ ದಿನವಾದ ಸೋಮವಾರವೇ ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಆಗಮಿಸಲಿದ್ದಾರೆ.

    ಪ್ರಧಾನಿ ಮೋದಿ ಅವರ ಮಂಗಳೂರು ಭೇಟಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ. ಲಕ್ಷದ್ವೀಪಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಾಳೆ ರಾತ್ರಿ 11.30ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ನಗರದ ಗೆಟ್ ವೇ ಹೊಟೇಲ್ ಅಥವಾ ಸಕ್ರ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ

    ಡಿ.19ಕ್ಕೆ ಬೆಳಗ್ಗೆ ಸುಮಾರು 7.30ಕ್ಕೆ ಮಂಗಳೂರಿನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪ್ಕಕ್ಕೆ ತೆರಳಲಿದ್ದಾರೆ. ಲಕ್ಷದ್ವೀಪದಲ್ಲಿ ಪ್ರಧಾನಿಯವರು ಒಖ್ಹಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶವನ್ನು ವೀಕ್ಷಣೆ ಮಾಡಲಿದ್ದಾರೆ ಅಂತ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಧರ್ಮಾಧಿಕಾರಿ ಮನವಿ

    ಇದನ್ನೂ ಓದಿ: ಧರ್ಮಸ್ಥಳದಲ್ಲಿ ನಮೋ ಮೇನಿಯಾ- ಭಾಷಣದುದ್ದಕ್ಕೂ ಹೆಗ್ಗಡೆ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಇದನ್ನೂ ಓದಿ: ಇದು ಎಳನೀರಲ್ಲ ಅಮೃತ ಎಂದು ಕರಾವಳಿಯ ಎಳನೀರಿನ ಸವಿಗೆ ಮನಸೋತ ಮೋದಿ!