Tag: prime minister

  • ಮೋದಿಗಾಗಿ ಯುವಕರಿಂದ ಪಾದಯಾತ್ರೆ

    ಮೋದಿಗಾಗಿ ಯುವಕರಿಂದ ಪಾದಯಾತ್ರೆ

    ಕೋಲಾರ: ಮತ್ತೊಮ್ಮೆ ಮೋದಿ, ಈ ದೇಶದ ಪ್ರಧಾನಿ ಆಗಬೇಕೆಂದು ಆಶಿಸಿ ಯುವಕರ ತಂಡವೊಂದು ಕೋಲಾರ ಲೋಕಸಭಾ ಕ್ಷೇತ್ರದಾದ್ಯಂತ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ.

    ಗುರುವಾರ ಮಾಲೂರುನಿಂದ ಪ್ರಾರಂಭಿಸಿರುವ ಆರು ಜನ ಯುವಕರ ತಂಡ ಟೇಕಲ್ ಮಾರ್ಗವಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಕೋಲಾರ, ಶ್ರೀನಿವಾಸಪುರದಿಂದ ಚಿಂತಾಮಣಿ ಶಿಡ್ಲಘಟ್ಟ ಕ್ಷೇತ್ರಗಳವರೆಗೂ ಪಾದಯಾತ್ರೆ ಮಾಡಿದ್ದಾರೆ.

    ಇನ್ನುಳಿದ ಏಳು ದಿನಗಳವರೆಗೂ ಪಾದಯಾತ್ರೆ ನಡೆಸಲಿದ್ದು, ಯಾವುದೋ ಒಂದು ಪಕ್ಷ ಅಭ್ಯರ್ಥಿಯ ಪರ ಮತಯಾಚಿಸದೆ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಶ್ರಮಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುಲಿದ್ದಾರೆ.

    ಸ್ಥಳೀಯರೇ ಆಗಿರುವ ಇವರು ಬೆಂಗಳೂರಿನಲ್ಲಿ ಉದ್ಯೋಗ, ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಮೋದಿ ಅವರ ಆಡಳಿತಕ್ಕೆ ಮನಸೋತು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂದು ಪಾದಯಾತ್ರೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಪಾದಯಾತ್ರೆಯುದ್ದಕ್ಕೂ ಮೋದಿ ಅವರಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  • ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಸಿದ್ದರಾಮಯ್ಯ ಎಡವಟ್ಟು

    ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಸಿದ್ದರಾಮಯ್ಯ ಎಡವಟ್ಟು

    ಬೀದರ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೊಗಳುವ ಬರದಲ್ಲಿ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಎಡವಟ್ಟು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಎಡವಟ್ಟು ಮಾಡಿಕೊಂಡಿದ್ದಾರೆ.

    ನಗರದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎನ್ನಲು ಹೋಗಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.  ಇದನ್ನು ಓದಿ : ದೇಶಕ್ಕಾಗಿ ರಾಹುಲ್ ಗಾಂಧಿ ಸತ್ತಿದ್ದಾರೆ- ಹೊಗಳುವ ಭರದಲ್ಲಿ ಸಿಎಂ ಇಬ್ರಾಹಿಂ ಎಡವಟ್ಟು

    “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಇದಕ್ಕೂ ಮುನ್ನ ಎಚ್.ಡಿ.ದೇವೇಗೌಡರ ಜೊತೆಗೆ ಪ್ರಚಾರ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ನಾನು ಹಾಗೂ ಎಚ್.ಡಿ.ದೇವೇಗೌಡರು ಒಟ್ಟಿಗೆ ಪ್ರಚಾರ ಮಾಡುತ್ತೇವೆ. ಲೋಕಸಭಾ ಚುನಾವಣೆಗಾಗಿ ಗುರು-ಶಿಷ್ಯರು ಮತ್ತೆ ಒಂದಾಗಿದ್ದೇವೆ ಎಂದು ತಿಳಿಸಿದರು.

  • ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ದೈವಭಕ್ತರು. ಹೀಗಾಗಿ ದೈವ ಶಕ್ತಿಯಿಂದ ದೆಹಲಿಯಲ್ಲಿ ಉನ್ನತ ಸ್ಥಾನ ಅಲಂಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಪರೋಕ್ಷವಾಗಿ ದೇವೇಗೌಡರು ಪ್ರಧಾನಿ ಆಗಬಹುದು ಎಂದು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಶಾಸಕರು, ಎಚ್.ಡಿ.ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿ ಸಂಸತ್‍ಗೆ ಹೋದರೆ ಒಂದು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರ್ಯಕರ್ತರು ದೇವೇಗೌಡರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.

    ಹೇಮಾವತಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರಿಂದ ತುಮಕೂರಿಗೆ ಯಾವುದೇ ರೀತಿ ಅನ್ಯಾಯವಾಗಿಲ್ಲ. ಹೇಮಾವತಿಯ ನೀರು ಸರಿಯಾಗಿ ಹಂಚಿಕೆ ಆಗುತ್ತಿರಲಿಲ್ಲ. ಹೀಗಾಗಿ ಹೋರಾಟ ಮಾಡುತ್ತಿದ್ದೇವು. ಸುಖಾಸುಮ್ಮನೆ ಎಚ್.ಡಿ.ದೇವೇಗೌಡರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

    ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಹಾಸನದ ರಾಜಕಾರಣಿಗಳಿಂದಲೂ ಯಾವುದೇ ರೀತಿಯ ತೊಂದರೆ ಆಗುತ್ತಿರಲಿಲ್ಲ. ಎರಡು ಜಿಲ್ಲೆಯ ಅಧಿಕಾರಿಗಳೇ ನಿರ್ಲಕ್ಷ್ಯ ತೋರುತ್ತಿದ್ದರು. ಹೀಗಾಗಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಈಗ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಯಥೇಚ್ಛವಾಗಿ ಹರಿಯುತ್ತಿದೆ ಎಂದು ಎಂ.ಟಿ.ಕೃಷ್ಣಪ್ಪ ಅವರು, ದೇವೇಗೌಡರನ್ನು ಸಮರ್ಥಿಸಿಕೊಂಡರು.

  • ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ನಾನು ಪ್ರಧಾನಿ ಅಭ್ಯರ್ಥಿ: ಮಾಯಾವತಿ

    ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ನಾನು ಪ್ರಧಾನಿ ಅಭ್ಯರ್ಥಿ: ಮಾಯಾವತಿ

    ನವದೆಹಲಿ: ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ ನಿನ್ನೆಯಷ್ಟೇ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ನಾನು ಪ್ರಧಾನಿ ಅಭ್ಯರ್ಥಿ ಎಂದು ತಿಳಿಸಿದ್ದಾರೆ.

    ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ತಾವು ಪ್ರಧಾನಿಯಾಗುವ ಬಗ್ಗೆ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 1995ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಸಿಎಂ ಆಗಿ ಆಯ್ಕೆ ಅಧಿಕಾರ ಸ್ವೀಕರಿಸಿದ ಕುರಿತು ಮಾಯಾವತಿ ಹೇಳಿಕೊಂಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‍ಪಿ) ಜೊತೆಗೆ ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದೆ. ಈ ಸಂಬಂಧ ಜನವರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಎಸ್‍ಪಿ ನಾಯಕ ಅಖಿಲೇಶ್ ಯಾದವ್, ಮಾಯಾವತಿ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರು. ಆದರೆ ಈಗ ಮಾಯಾವತಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಮುಂದೇನು ಎನ್ನುವ ಪ್ರಶ್ನೆ ಎಸ್‍ಪಿ, ಬಿಎಸ್‍ಪಿ ಮೈತ್ರಿಯಲ್ಲಿ ಶುರುವಾಗಿತ್ತು. ಇದಕ್ಕೆ ಮಾಯಾವತಿ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 1995ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದೆ. ಆಗ ನಾನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದ್ಯಸೆ ಆಗಿರಲಿಲ್ಲ. ಅದೇ ರೀತಿ ಪ್ರಧಾನಿಯಾದ ಆರು ತಿಂಗಳ ಒಳಗಾಗಿ ಲೋಕಸಭೆ ಇಲ್ಲವೇ ರಾಜ್ಯಸಭೆಯಲ್ಲಿ ಸದಸ್ಯತ್ವ ಪಡೆಯಬೇಕಾಗುತ್ತದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ನನ್ನ ನಿರ್ಧಾರವನ್ನು ನಿರಾಶೆಗೊಳಿಸಬೇಡಿ ಎಂದು ಮಾಯಾವತಿ, ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪ್ರಧಾನಿ ಅಥವಾ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ವ್ಯಕ್ತಿ ಲೋಕಸಭಾ ಅಥವಾ ರಾಜ್ಯಸಭೆಯ ಸದಸ್ಯರಾಗಿರಬೇಕು. ಸದಸ್ಯರಾಗದೇ ಇದ್ದರೂ ಪ್ರಮಾಣವಚನ ಸ್ವೀಕರಿಸಬಹುದು. ಆದರೆ ಅಧಿಕಾರ ಸ್ವೀಕರಿಸಿದ 6 ತಿಂಗಳ ಒಳಗಡೆ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಬೇಕಾಗುತ್ತದೆ. ಈ ಅವಧಿಯ ಒಳಗಾಗಡೆ ಸದಸ್ಯರಾಗದೇ ಇದ್ದಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ.

  • ರಾಹುಲ್ ಗಾಂಧಿಗೆ ಪತ್ರ ಬರೆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

    ರಾಹುಲ್ ಗಾಂಧಿಗೆ ಪತ್ರ ಬರೆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

    ಕರ್ನಾಟಕದಿಂದಲೇ ಸ್ಪರ್ಧೆ ಮಾಡುವಂತೆ ಪತ್ರ ಬರೆಯುವ ಮೂಲಕ ರಾಹುಲ್ ಗಾಂಧಿ ಅವರಿಗೆ ದಿನೇಶ್ ಗುಂಡೂರಾವ್ ಆಹ್ವಾನ ನೀಡಿದ್ದಾರೆ.

    ಪತ್ರದಲ್ಲಿ ಏನಿದೆ?
    “ನಿಮ್ಮ ಸ್ಪರ್ಧೆಯಿಂದ ಇಡೀ ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ದಕ್ಷಿಣ ಭಾರತಕ್ಕೆ ಬಲ ಬರಲಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಇದೆ. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಈ ಸಲ ಗೆಲ್ಲಲಿದೆ. ನಿಮ್ಮ ಸ್ಪರ್ಧೆಗೆ ಸದಾ ಸ್ವಾಗತ. ರಾಜ್ಯ ಕಾಂಗ್ರೆಸ್ ನಿಮ್ಮ ಸ್ಪರ್ಧೆಯ ನಿರೀಕ್ಷೆಯಲ್ಲಿದೆ. ಅಲ್ಲದೆ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿಯ ಅವರನ್ನು ನಮ್ಮ ರಾಜ್ಯದಿಂದ ಲೋಕಸಭೆಗೆ ಗೆಲ್ಲಿಸಿ ಕಳುಹಿಸಿದ್ದೇವೆ” ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ವಾರ ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ದಿನೇಶ್, ರಾಹುಲ್ ಗಾಂಧಿಯವರು ಕೇವಲ ಉತ್ತರ ಭಾರತದಿಂದ ಮಾತ್ರ ಸ್ಪರ್ಧೆ ಮಾಡುವುದಲ್ಲ, ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ. ಅದರಲ್ಲೂ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ ಎಂದು ಹೇಳಿ ಆಹ್ವಾನ ನೀಡಿದ್ದರು. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಾವು ಆಯ್ಕೆ ಮಾಡಿದ್ದೆವು. ಈಗ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಹುಲ್ ಗಾಂಧಿ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ: ದಿನೇಶ್ ಗುಂಡೂರಾವ್

    ರಾಹುಲ್ ಗಾಂಧಿ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ: ದಿನೇಶ್ ಗುಂಡೂರಾವ್

    ಚಾಮರಾಜನಗರ: ಎಐಸಿಸಿ ಅಧಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಹ್ವಾನ ಕೊಟ್ಟಿದ್ದಾರೆ.

    ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕೇವಲ ಉತ್ತರ ಭಾರತದಿಂದ ಮಾತ್ರ ಸ್ಪರ್ಧೆ ಮಾಡುವುದಲ್ಲ. ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ. ಅದರಲ್ಲೂ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ ಎಂದು ಹೇಳಿ ಆಹ್ವಾನ ನೀಡಿದರು.

    ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಾವು ಆಯ್ಕೆ ಮಾಡಿದ್ದೇವು. ಈಗ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಎಂದು ಹೇಳಿದರು.

    ಐದು ವರ್ಷಗಳ ನಂತರ ಮೋದಿ ರಿಪೋರ್ಟ್ ಕಾರ್ಡ್ ಶೂನ್ಯವಾಗಿದೆ. ಮೋದಿಯವರು ಕೇವಲ ಭಾಷಣ ಮತ್ತು ಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೇ. 7ರಷ್ಟು ತಾಂಡವಾಡುತ್ತಿದೆ. ಕಪ್ಪು ಹಣ ತರುವುದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಮೋದಿಯನ್ನು ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವಂತಿಲ್ಲ. ಏಕೆಂದರೆ ಪ್ರಶ್ನೆ ಮಾಡಿದರೆ ದೇಶ ದ್ರೋಹಿಗಳು ಎಂದು ಹೇಳುತ್ತಿದ್ದಾರೆ ಎಂದರು.

    ಮೋದಿಯವರಿಂದ ಸಾಧನೆ ಏನೂ ಇಲ್ಲ ಬರೀ ಭಾವನೆ. ಉಜ್ವಲ ಯೋಜನೆ ಒಂದು ಬೋಗಸ್. ಯಾವ ಮಹಿಳೆಗೂ ಉಚಿತವಾಗಿ ಕೊಟ್ಟಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳವಾಗಿದೆ. ಪಾಕಿಸ್ತಾನದ ಮೇಲೆ ದಾಳಿ ಮಾಡಿ ಗೆಲ್ಲಲು ಹೊರಟಿದ್ದಾರೆ. ದೇಶದ ರಕ್ಷಣೆಗಾಗಿ ಚೆಲ್ಲಿದ ರಕ್ತದ ಮೇಲೆ ಬಿಜೆಪಿ ಇಂದು ಗೆಲ್ಲಲು ಹೊರಟಿದೆ. 2014ರಲ್ಲಿ ಜಮ್ಮು ಕಾಶ್ಮೀರ ಶಾಂತಯುತವಾಗಿ ಇತ್ತು ಹಾಗೂ ಎಂಎಲ್‍ಎ ಮತ್ತು ಎಂಪಿ ಚುನಾವಣೆ ನಡೆದಿತ್ತು. ಆದರೆ ಇಂದು ಕಾಶ್ಮೀರದಲ್ಲಿ ಚುನಾವಣೆ ಮಾಡಲು ಆಗುತ್ತಿಲ್ಲ. ಐದು ವರ್ಷದಲ್ಲಿ ಒಂದು ಸರ್ಕಾರ ಕೊಡಲು ಸಾಧ್ಯವಾಗದೇ ಅಶಾಂತಿ ನೆಲೆಸುವಂತೆ ಮಾಡಿದ್ದಾರೆ. ಸದ್ಯ ಮೈತ್ರಿ ಕರ್ನಾಟಕದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಆಡಳಿತ ಪಕ್ಷ ಆಲ್ ಇಂಡಿಯಾ ಅಣ್ಣ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಡ್ಯಾಡಿ (ತಂದೆ) ಎಂದು ಡೈರಿ ಅಭಿವೃದ್ಧಿ ಸಚಿವ ಕೆ.ಟಿ.ರಾಜೇಂತಿರ ಬಾಲಾಜಿ ಹೇಳಿದ್ದಾರೆ.

    ವಿರುದುನಗರ್ ಜಿಲ್ಲೆಯ ಶ್ರೀವಿಲ್ಲಿಪುತುರ್‍ನಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಅಮ್ಮ (ಎಐಎಡಿಎಂಕೆ ನಾಯಕಿ ಜಯಲಲಿತಾ) ಅವರ ಮೃತರಾದ ಬಳಿಕ ಪ್ರಧಾನಿ ಮೋದಿ ಅವರು ಎಐಎಡಿಎಂಕೆಗೆ ತಂದೆಯಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೊಗಳಿದರು.

    ಪ್ರಧಾನಿ ನರೇಂದ್ರ ಮೋದಿ ನಮ್ಮ ತಂದೆ. ಜಯಲಲಿತಾ ಅವರನ್ನು ಕಳೆದುಕೊಂಡ ಬಳಿಕ ನಮಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಕೇವಲ ನಮಗಷ್ಟೇ ತಂದೆಯಲ್ಲ, ಇಡೀ ದೇಶಕ್ಕೆ ತಂದೆಯಾಗಿದ್ದಾರೆ. ಇದೇ ಕಾರಣಕ್ಕೆ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ತಿಳಿಸಿದರು.

    ಎಐಎಡಿಎಂಕೆ 2014ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಒಟ್ಟು 39 ಸೀಟುಗಳಲ್ಲಿ 37 ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಎಐಎಡಿಎಂಕೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ 39 ಸೀಟುಗಳ ಪೈಕಿ, ಐದು ಸ್ಥಾನಗಳನ್ನು ಬಿಜೆಪಿಗೆ ನೀಡಲಾಗಿದೆ.

    ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ “ತಮಿಳುನಾಡಿನ ಮಹಿಳೆಯೋ ಅಥವಾ ಗುಜರಾತಿನ ಮೋದಿಯೋ?” ಎಂಬ ಘೋಷವಾಕ್ಯದ ಭಾರೀ ಪ್ರಚಾರ ಮಾಡಿದ್ದರು. ಈ ಘೋಷಣೆ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದರು.

    ನನ್ನ ನೇತೃತ್ವದ ತಮಿಳುನಾಡು ಸರ್ಕಾರವು ಗುಜರಾತ್‍ನ ನರೇಂದ್ರ ಮೋದಿ ಸರ್ಕಾರಕ್ಕಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡಿನ ಮಹಿಳೆ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯವಾಡಿದ್ದರು.

    ಇತ್ತ ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರ್ ರಾಜೀನಾಮೆ ನೀಡಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವ ಇಚ್ಛೇ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ವಿರೋಧಿಗಳು ದೇಶದ್ರೋಹಿಗಳಾಗಲು ಹೇಗೆ ಸಾಧ್ಯ?: ಬಿಜೆಪಿ ಕುಟುಕಿದ ಸತೀಶ್ ಜಾರಕಿಹೊಳಿ

    ಮೋದಿ ವಿರೋಧಿಗಳು ದೇಶದ್ರೋಹಿಗಳಾಗಲು ಹೇಗೆ ಸಾಧ್ಯ?: ಬಿಜೆಪಿ ಕುಟುಕಿದ ಸತೀಶ್ ಜಾರಕಿಹೊಳಿ

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಗಳು ದೇಶದ್ರೋಹಿಗಳಾಗಲು ಹೇಗೆ ಸಾಧ್ಯ? ನಾವು ಕೂಡ ದೇಶದ ಮೂಲ ನಿವಾಸಿಗಳು. ನಮಗೂ ದೇಶದ ಮೇಲೆ ಹಾಗೂ ಯೋಧರ ಮೇಲೆ ಅಪಾರ ಗೌರವ ಇದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಸಭೆ ನಡೆಯಲಿದೆ. ಈಗಾಗಲೇ ಚಿಕ್ಕೋಡಿ ಕ್ಷೇತ್ರಕ್ಕೆ ಸಂಸದ ಪ್ರಕಾಶ ಹುಕ್ಕೇರಿ ಅಭ್ಯರ್ಥಿಯಾಗಿದ್ದಾರೆ. ಆದರೆ ಬೆಳಗಾವಿ ಕ್ಷೇತ್ರಕ್ಕೆ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಟ್ಯಾಂಕರ್ ಮೂಲಕ ನೀರು ಸರಬಾರಜಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಆಪ್ತ ಶಫಿ ಬೆನ್ನಿ ದೇಶ ವಿರೋಧಿ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ. ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.

    ಇದಕ್ಕೂ ಮುನ್ನ ಸಚಿವರು ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕುಡಿಯುವ ನೀರು, ಅಕ್ರಮ ಮರಳುಗಾರಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಹಾಗೂ ಶಾಸಕರಿಂದ ಮಾಹಿತಿ ಪಡೆದರು. ಸಭೆಗೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಗೈರಾಗಿದ್ದರೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಜರರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ

    ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ

    ಇಸ್ಲಾಮಾಬಾದ್: ಭಾರತದ ಪೈಲಟ್ ಅಭಿನಂದನ್ ಅವರು ಶುಕ್ರವಾರ ಅಧಿಕೃತವಾಗಿ ಬಿಡುಗಡೆಯಾಗಲಿದ್ದಾರೆ.

    ಪಾಕಿಸ್ತಾನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್ ಅವರು ಅಭಿನಂದನ್ ಅವರನ್ನು ಶಾಂತಿಯ ಪ್ರತೀಕವಾಗಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬುಧವಾರ ಪಾಕ್ ವಾಯುಸೇನೆ ಜೊತೆಗಿನ ಹೋರಾಟದಲ್ಲಿ ಮಿಗ್ ವಿಮಾನ ಪತನಗೊಂಡಿತ್ತು. ಈ ವಿಮಾನದಲ್ಲಿ ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ನೆಲಕ್ಕೆ ಧುಮುಕಿದ್ದರು.

    ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ ಬಿದ್ದಿದ್ದ ಅಭಿನಂದನ್ ಅವರನ್ನು ಪಾಕ್ ಸೇನೆ ಕಸ್ಟಡಿಗೆ ತೆಗೆದುಕೊಂಡಿತ್ತು. ಜಿನೀವಾ ಒಪ್ಪಂದ ಪ್ರಕಾರ ಪಾಕ್ ಸೇನೆ ಅಭಿನಂದನ್ ಅವರನ್ನು ಬಿಡುಗಡೆ ಮಾಡಲೇಬೇಕಿತ್ತು. ಹೀಗಾಗಿ ಪಾಕಿಸ್ತಾನ ಶುಕ್ರವಾರ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಿದೆ.

    ಏನಿದು ಜಿನೀವಾ ಒಪ್ಪಂದ..?
    ಎರಡನೇ ಮಹಾಯುದ್ಧದ ಬಳಿಕ 1949ರಲ್ಲಿ 196 ದೇಶಗಳ ನಡುವೆ ಏರ್ಪಟ್ಟ ವೇಳೆ ಒಪ್ಪಂದ ನಡೆದಿತ್ತು. ಈ ಒಪ್ಪಂದ ಪ್ರಕಾರ ಯುದ್ಧ ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು. ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದ ಯುದ್ಧ ಕೈದಿಗಳಿಗೆ ಚಿಕಿತ್ಸೆ ನೀಡಬೇಕು. ಜಿನೀವಾ ಒಪ್ಪಂದ ಆರ್ಟಿಕಲ್ 3 ಅಘೋಷಿತ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಯುದ್ಧ ಕೈದಿಯ ಕೊಲೆ, ಹಲ್ಲೆ, ಶಿರಚ್ಛೇದ, ಒತ್ತೆಯಂತಹ ಕೃತ್ಯಗಳನ್ನು ಮಾಡಬಾರದು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು. ಆರೋಪ ಸಾಬೀತಾಗದೇ ಇದ್ದಲ್ಲಿ ಯುದ್ಧ ಕೈದಿಯನ್ನು ಅವರ ದೇಶಕ್ಕೆ ಒಪ್ಪಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ ದಾಳಿಗೆ ಪಾಕ್ ಗಢ ಗಢ – ಮತ್ತೆ ಶಾಂತಿ ಮಂತ್ರ ಪಠಿಸಿದ ಇಮ್ರಾನ್ ಖಾನ್

    ಭಾರತ ದಾಳಿಗೆ ಪಾಕ್ ಗಢ ಗಢ – ಮತ್ತೆ ಶಾಂತಿ ಮಂತ್ರ ಪಠಿಸಿದ ಇಮ್ರಾನ್ ಖಾನ್

    ಇಸ್ಲಾಮಾಬಾದ್: ಪಾಕಿಸ್ತಾನದ ಉಗ್ರ ಕೇಂದ್ರಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಒಂದು ದಿನದ ಬಳಿಕ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ಮಾತುಕತೆಗೆ ಆಹ್ವಾನ ನೀಡಿ ಶಾಂತಿಮಂತ್ರವನ್ನು ಪಠಿಸಿದ್ದಾರೆ.

    ವಿಶ್ವದಲ್ಲಿ ನಡೆದ ಯುದ್ಧಗಳನ್ನು ಕೂಡ ತಪ್ಪಾಗಿ ಆರ್ಥೈಸಲಾಗಿದೆ. ಯುದ್ಧಗಳು ಪ್ರಾರಂಭವಾದ ಬಳಿಕ ಅವು ಎಲ್ಲಿ ಹೋಗಿ ನಿಲ್ಲುತ್ತದೆ ಎನ್ನುವುದು ತಿಳಿಯುವುದಿಲ್ಲ. ನಿಮ್ಮ ಬಳಿಯೂ ಶಸ್ತ್ರಾಸ್ತ್ರವಿದ್ದು ನಮ್ಮ ಬಳಿಯೂ ಶಸ್ತ್ರಾಸ್ತ್ರವಿದೆ. ಆದರೆ ನಾವು ಈ ಸಂದರ್ಭದಲ್ಲಿ ತಪ್ಪಾಗಿ ಶಸ್ತ್ರಾಸ್ತ್ರವನ್ನು ಬಳಸುವುದು ಸರಿಯೇ ಎಂದು ಪ್ರಶ್ನಿಸುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

    ಒಂದೊಮ್ಮೆ ಯುದ್ಧ ಆರಂಭವಾದರೆ ಅದರ ನಿಯಂತ್ರಣ ನನ್ನ ಕೈಯಲ್ಲೂ ಇರುವುದಿಲ್ಲ, ನರೇಂದ್ರ ಮೋದಿ ಅವರ ಕೈಯಲ್ಲೂ ಇಲ್ಲ. ಉಗ್ರವಾದದ ಬಗ್ಗೆ ಮಾತುಕತೆ ನಡೆಸಲು ನಾವು ಸಿದ್ಧವಿದ್ದೇವೆ. ನಾವು ಕುಳಿತು ಮಾತನಾಡುವ ಅಗತ್ಯವಿದೆ ಎಂದಿದ್ದಾರೆ.

    ಪುಲ್ವಾಮಾ ದಾಳಿಯ ಬಳಿಕ ನಾನು ಭಾರತದೊಂದಿಗೆ ಶಾಂತಿ ಮಾತುಕತೆ ಆಹ್ವಾನ ನೀಡಿದ್ದೆ. ನನಗೂ ಯೋಧರ ಕುಟುಂಬಗಳ ನೋವು ಏನಿದು ತಿಳಿಯುತ್ತದೆ. ಈ ಹಿಂದೆ ನಮ್ಮವರನ್ನು ಕಳೆದುಕೊಂಡ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಯೋಧರ ನೋವನ್ನು ಕಂಡಿದ್ದೇನೆ. ಇದರಿಂದಲೇ ನಾನು ಮಾತುಕತೆಗೆ ಆಹ್ವಾನ ನೀಡಿದ್ದೇನೆ ಎಂದರು.

    ಇದೇ ವೇಳೆ ಭಾರತ ಎರಡು ಯುದ್ಧ ವಿಮಾನಗಳನ್ನು ಪಾಕ್ ಸೇನೆ ಹೊಡೆದುರುಳಿಸಿದ್ದಾಗಿ ತಿಳಿಸಿದ ಇಮ್ರಾನ್ ಖಾನ್, ನಾವು ಯಾವುದೇ ಕಠಿಣ ನಿರ್ಧಾರ ಕೈಗೊಳ್ಳಲು ಸಿದ್ಧ. ಆದ್ದರಿಂದಲೇ ನಿಮ್ಮ ದಾಳಿಯ ಪ್ರತಿಕ್ರಿಯೆಯಾಗಿ ನಮ್ಮ ಯುದ್ಧ ವಿಮಾನಗಳು ಗಡಿದಾಟಿ ಬಂದಿದೆ ಎಂದು ಸ್ಪಷ್ಟನೆ ನೀಡಿದರು.

    ಮೊದಲ ವಿಶ್ವಯುದ್ಧ ಒಂದು ವಾರದಲ್ಲಿ ಪೂರ್ಣಗೊಳ್ಳುತ್ತದೆ ಎನ್ನಲಾಗಿತ್ತು. ಆದರೆ ಅದು 6 ವರ್ಷ ನಡೆಯಿತು. ಭಯೋತ್ಪಾದನೆಯ ಹೆಸರಿನಲ್ಲಿ ನಡೆಯುವ ಯುದ್ಧ 17 ವರ್ಷಗಳ ಕಾಲ ನಡೆಯುತ್ತದೆ ಎಂದು ಅಮೆರಿಕ ಸಹ ನಿರೀಕ್ಷೆ ಮಾಡಲಿಲ್ಲ. ಹೀಗಾಗಿ ಈಗ ಮತ್ತೊಮ್ಮೆ ಮಾತುಕತೆಗೆ ಆಹ್ವಾನ ನೀಡುತ್ತಿದ್ದು, ಕುಳಿತು ಚರ್ಚೆ ಮಾಡೋಣ ಎಂದು ಇಮ್ರಾನ್ ಖಾನ್ ಆಹ್ವಾನ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv