Tag: prime minister

  • ಜ.2ರಂದು ತುಮಕೂರಿಗೆ ಮೋದಿ- ತ್ರಿವಿಧ ದಾಸೋಹಿಗೆ ಭಾರತ ರತ್ನಕ್ಕೆ ಆಗ್ರಹ

    ಜ.2ರಂದು ತುಮಕೂರಿಗೆ ಮೋದಿ- ತ್ರಿವಿಧ ದಾಸೋಹಿಗೆ ಭಾರತ ರತ್ನಕ್ಕೆ ಆಗ್ರಹ

    ತುಮಕೂರು: ಜನವರಿ 2 ರಂದು ಪ್ರಧಾನಿ ಮೋದಿ ಕಲ್ಪತರು ನಾಡು ತುಮಕೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂಬ ಭಕ್ತಾದಿಗಳ ಆಗ್ರಹ ಮತ್ತೇ ಮನ್ನೆಲೆಗೆ ಬಂದಿದೆ. ಸಂತರ ತಪೋ ಭೂಮಿಗೆ ಬರುತ್ತಿರುವ ಪ್ರಧಾನಿ ಮೋದಿ ತ್ರಿವಿಧ ದಾಸೋಹಿಗಳಿಗೆ ಭಾರತ ರತ್ನ ಘೋಷಿಸಬೇಕು ಎಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.

    ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ರೈತ ಸಮ್ಮಾನ್ ಯೋಜನೆಯ ಎರಡನೇ ಹಂತದ ಕಾರ್ಯಕ್ರಮ ಜನವರಿ 2 ರಂದು ನಡೆಯಲಿದೆ. ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿ ಮಠಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬ ವಿಚಾರ ತಿಳಿಯುತಿದ್ದಂತೆಯೇ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಜನವರಿ 21 ರಂದು ಶ್ರೀಗಳ ವರ್ಷದ ಸಮಾರಾಧನೆ ಇದ್ದು ಮಠಕ್ಕೆ ಭೇಟಿ ನೀಡುವ ಪ್ರಧಾನಿಗಳು ಭಾರತ ರತ್ನ ಘೋಷಣೆ ಮಾಡುವ ಮೂಲಕ ಸಿಹಿ ಸುದ್ದಿ ಕೊಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

    ಕಳೆದ ವರ್ಷ ಜನವರಿ 21 ರಂದು ಶಿವಕುಮಾರ ಶ್ರೀಗಳು ಶಿವೈಕ್ಯರಾಗಿದ್ದರು. ಜನವರಿ 25 ರಂದು ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಬಹುದು ಎಂದು ಕೋಟ್ಯಂತರ ಭಕ್ತಾದಿಗಳು ಎದುರು ನೋಡುತ್ತಿದ್ದರು. ಆದರೆ ಭಕ್ತರ ನಿರೀಕ್ಷೆ ಹುಸಿಯಾಗಿತ್ತು. ತ್ರಿವಿಧ ದಾಸೋಹಿ, ಶತಾಯುಷಿಗಳಾಗಿದ್ದ ಶ್ರೀಗಳಿಗೆ ಭಾರತ ರತ್ನ ಕೊಡಮಾಡದ ಕೇಂದ್ರದ ವಿರುದ್ಧ ಶ್ರೀಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಈಗ ಸ್ವತಃ ಮೋದಿಯವರೇ ಮಠಕ್ಕೆ ಬರುತ್ತಿದ್ದು ಪ್ರಶಸ್ತಿ ಘೋಷಣೆ ಮಾಡಲಿ ಅನ್ನೋದು ಭಕ್ತರ ಒತ್ತಾಸೆಯಾಗಿದೆ. ಭಕ್ತ ಗಣದ ಆಗ್ರಕ್ಕೆ ವಸತಿ ಸಚಿವ ವಿ.ಸೋಮಣ್ಣ ಕೂಡ ದನಿಗೂಡಿಸಿದ್ದಾರೆ. ಭಾರತ ರತ್ನ ನೀಡುವ ಕುರಿತು ಈಗಾಗಲೇ ಕೇಂದ್ರದ ಗಮನಕ್ಕೆ ತಂದಿದ್ದೇವೆ. ಪ್ರಧಾನಿಗಳು ಮಠಕ್ಕೆ ಬಂದಾಗ ಆ ಕುರಿತು ಇನ್ನೊಮ್ಮೆ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.

    ಅನ್ನ, ಅಕ್ಷರ ಹಾಗೂ ಆಶ್ರಯ ದಾಸೋಹ ಮಾಡಿ ತ್ರಿವಿಧ ದಾಸೋಹಿ ಎನಿಸಿ ಮೋದಿ ನಡೆದಾಡಿದ ದೇವರಿಗೆ ಭಾರತ ರತ್ನ ಕೊಟ್ಟರೆ ಆ ಪ್ರಶಸ್ತಿಯ ಮೌಲ್ಯವೇ ಹೆಚ್ಚಾಗಲಿದೆ ಎಂದು ಭಕ್ತರು ನಂಬಿದ್ದಾರೆ.

  • ದೇಶವ್ಯಾಪಿ ಎನ್‌ಆರ್‌ಸಿ ಇಲ್ಲ, ಪ್ರಧಾನಿ ಹೇಳಿದ್ದು ಸರಿ: ಅಮಿತ್ ಶಾ

    ದೇಶವ್ಯಾಪಿ ಎನ್‌ಆರ್‌ಸಿ ಇಲ್ಲ, ಪ್ರಧಾನಿ ಹೇಳಿದ್ದು ಸರಿ: ಅಮಿತ್ ಶಾ

    ನವದೆಹಲಿ: ದೇಶವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಸದ್ಯಕ್ಕಿಲ್ಲ. ಈ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಸರಿಯಿದೆ. ಸದ್ಯಕ್ಕೆ ದೇಶವ್ಯಾಪಿ ಎನ್‌ಆರ್‌ಸಿ ನಡೆಸುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆದಿಲ್ಲ ಎಂದು ಹೇಳಿದರು.

    ಈ ವೇಳೆ ರಾಷ್ಟ್ರೀಯ ಜನಸಂಖ್ಯೆ ನೋಂದಣಿಗೂ(ಎನ್‍ಪಿಆರ್) ಎನ್‌ಆರ್‌ಸಿ ಗೂ ಯಾವುದೇ ಸಂಬಂಧವಿಲ್ಲ. ವಿರೋಧ ಪಕ್ಷಗಳು ಸುಳ್ಳು ಮಾಹಿತಿ ನೀಡಿ ಜನರಲ್ಲಿ ಹೆದರಿಕೆ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಎನ್‍ಪಿಆರ್ ನಿಂದ ಯಾರೂ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ. ಎನ್‌ಆರ್‌ಸಿ ಪ್ರಕ್ರಿಯೆ ಬೇರೆ, ಎನ್‍ಪಿಆರ್ ಬೇರೆ ಎಂದರು. ಇದನ್ನೂ ಓದಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಕ್ಯಾಬಿನೆಟ್ ಒಪ್ಪಿಗೆ – ಏನಿದು ಎನ್‍ಪಿಆರ್? ಏನು ದಾಖಲೆ ನೀಡಬೇಕು?

    ಈ ವೇಳೆ ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರ ಎನ್‍ಪಿಆರ್ ಜಾರಿ ಮಾಡಲು ಬಿಡುವುದಿಲ್ಲ ಎಂಬ ನಿಲುವಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ರೀತಿಯ ಯಾವುದೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ರಾಜಕೀಯಕ್ಕಾಗಿ ಬಡವರ ಅಭಿವೃದ್ಧಿ ಅಡ್ಡಿಯಾಗಬೇಡಿ ಎಂದು ಅಮಿತ್ ಶಾ ಮನವಿ ಮಾಡಿಕೊಂಡರು.

    ಭಾನುವಾರ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಜಾರಿ ಮಾಡುವ ಬಗ್ಗೆ ನಾವು ಚರ್ಚೆ ಮಾಡಿಲ್ಲ. ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ. ಭಾರತದ ಮುಸ್ಲಿಮರ ಪೌರತ್ವದ ಹಕ್ಕು ಕಸಿಯುವುದಿಲ್ಲ ಎಂದು ಹೇಳಿದ್ದರು.

  • ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಪಿಎಂ ಅನುಮೋದನೆ ಬೇಕು: ಸೌರವ್ ಗಂಗೂಲಿ

    ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಪಿಎಂ ಅನುಮೋದನೆ ಬೇಕು: ಸೌರವ್ ಗಂಗೂಲಿ

    ಕೋಲ್ಕತ್ತಾ: ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶಗಳ ಪ್ರಧಾನ ಮಂತ್ರಿಗಳ ಅನುಮೋದನೆ ಬೇಕು ಎಂದು ಬಿಸಿಸಿಐ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಸೌರವ್ ಗಂಗೂಲಿ ಹೇಳಿದ್ದಾರೆ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಗಂಗೂಲಿ ಇಂದು ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶದ ಪ್ರಧಾನ ಮಂತ್ರಿಗಳ ಅನುಮೋದನೆ ಬೇಕು ಎಂದು ತಿಳಿಸಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವೆ ಯಾವಾಗ ದ್ವಿಪಕ್ಷೀಯ ಸರಣಿ ನಡೆಯಬೇಕು ಎಂಬುದನ್ನು ನೀವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅನ್ನು ಕೇಳಬೇಕು. ಇದು ದೇಶ ತೆಗೆದುಕೊಂಡಿರುವ ನಿರ್ಧಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಆಟವಾಡಬೇಕು ಎಂದರೆ ದೇಶದ ಅನುಮತಿ ಇರಬೇಕು. ಅದ್ದರಿಂದ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ ಎಂದು ಹೇಳಿದ್ದಾರೆ.

    ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಭಾರತದ ಪಾಕಿಸ್ತಾನಕ್ಕೆ 2004 ರಲ್ಲಿ ಪ್ರವಾಸ ಹೋಗಿತ್ತು. ಈ ಪ್ರವಾಸ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರವಾಸವಾಗಿತ್ತು. 1989ರ ನಂತರ ಮೊದಲ ಬಾರಿ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಹೋಗಿ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿತ್ತು.

    ಭಾರತ ಮತ್ತು ಪಾಕಿಸ್ತಾನ ಎರಡು ತಂಡಗಳು 2012ರಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಭಾರತದಲ್ಲಿ ಆಡಿತ್ತು. ಈ ಸರಣಿಯಲ್ಲಿ ಭಾರತ ಎರಡು ಟಿ-20 ಪಂದ್ಯಗಳು ಮತ್ತು ಮೂರ ಏಕದಿನ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನ ಐಸಿಸಿ ಟೂರ್ನಿಯಲ್ಲಿ ಬಿಟ್ಟರೆ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ.

    ಕಳೆದ ಭಾನುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಸಂಬಂಧ ಮಾತುಕತೆ ನಡೆದಿತ್ತು. ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ, ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ಕಾರ್ಯದರ್ಶಿಯಾಗಿಯೂ, ಕೇಂದ್ರ ಕಾರ್ಪೋರೇಟ್ ಮತ್ತು ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಲ್ ಖಜಾಂಜಿ ಹುದ್ದೆಗೆ ಸ್ಪರ್ಧಿಸಿದ್ದು ಅ.23ಕ್ಕೆ ಅಧಿಕೃತವಾಗಿ ಘೋಷಣೆಯಾಗಲಿದೆ.

  • ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಾದರಿಯಾದ ಮಕ್ಕಳು

    ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಾದರಿಯಾದ ಮಕ್ಕಳು

    ಕಾರವಾರ: ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಕ್ಕಳು ಮಾದರಿಯಾಗಿದ್ದಾರೆ.

    ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಹೆಗ್ಗಾರ ಗ್ರಾಮದ ಚಿಕ್ಕ ಮಕ್ಕಳು ದೇಶವೇ ಮೆಚ್ಚುವಂತ ಸಮಾಜ ಸ್ವಚ್ಛತಾ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡು ದೊಡ್ಡವರಿಗೆ ಮಾದರಿಯಾಗಿದ್ದಾರೆ. ಶಾಲೆಯ ಪುಟ್ಟ ಹುಡುಗರು ತಮ್ಮ ಊರಿನಲ್ಲಿ ಬಿದ್ದ ಕಸ ಹೆಕ್ಕಿ ಊರಿನ ಜನರಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.

    ಹೆಗ್ಗಾರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿ ತೇಜಸ್ವಿ ಗಾಂವ್ಕರ, ತನ್ನ ಸಹಪಾಠಿ ಸಂಕೇತ ಪಟಗಾರ, ದರ್ಶನ ಸಿದ್ದಿ, ವಿನಯ್ ಭಟ್ ಮಾದರಿಯಾದ ಮಕ್ಕಳು. ಗಂಗಾವಳಿ ನದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದ ಈ ಗ್ರಾಮದಲ್ಲಿ ಬಿದ್ದ ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಬೀದಿಗಳಲ್ಲಿ ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ. ಬೀದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತಾವು ಮನೆಯಿಂದ ತಂದ ಚೀಲಗಳಲ್ಲಿ ತುಂಬಿದ್ದಾರೆ. ಸಹಪಾಠಿ ದರ್ಶನ್ ಸಿದ್ದಿಯ ಸೈಕಲ್ ನಲ್ಲಿ ಕಸದ ಬ್ಯಾಗ್ ಹೇರಿಕೊಂಡು ಬೀದಿಯ ಕೊನೆಯಲ್ಲಿ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಚೊಕ್ಕಗೊಳಿಸಿದ್ದಾರೆ.

    ಇದನ್ನು ಕಂಡ ಊರಿನವರು ಆಶ್ಚರ್ಯಚಕಿತರಾಗಿ ಶಿಕ್ಷಕರೇನಾದರೂ ಈ ರೀತಿ ಅಸೈನ್ಮೆಂಟ್ ಕೊಟ್ಟಿರಬಹುದೇ? ಎಂದು ಪ್ರಶ್ನಿಸಿದರು. ಅದೇನೂ ಇಲ್ಲ, ನಾವು ಪ್ರಧಾನ ಮಂತ್ರಿಗಳ ಮಾತಿನಂತೆ ನಡೆಯುತ್ತಿದ್ದೇವೆ. ಸುಮಾರು ಎರಡು ಕಿಲೊ ಮೀಟರ್ ವ್ಯಾಪ್ತಿಯ ಬೀದಿ ಬದಿಯ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಿದ್ದೇವೆ ಎಂದು ಸ್ವಚ್ಛತೆ ಮಾಡುತಿದ್ದವರ ಗುಂಪಿನಲ್ಲಿದ್ದ ಬಾಲಕ ತೇಜಸ್ವಿ ನುಡಿದಾಗ ಊರಿನ ಜನರು ಬೇರಗಾಗಿದ್ದಾರೆ.

    ಮನೆಯಲ್ಲಿರುವ ಕಸವನ್ನು ಪ್ರತಿ ದಿನ ಮನೆಯ ಮುಂದೆ ನಗರಸಭೆ ಕಸದ ವಾಹನಕ್ಕೆ ಹಾಕಲ್ಲ. ಬೀದಿಯ ಮೂಲೆಯಲ್ಲಿ ಕಸ ಎಸೆದು ಬರುವ ಇಂದಿನ ದಿನದಲ್ಲಿ ನಮ್ಮ ಮನೆಮಾತ್ರ ಸ್ವಚ್ಛವಾಗಿದರೆ ಸಾಕು ಎಂದು ಅಂದುಕೊಳ್ಳುವವರೇ ಹೆಚ್ಚು. ಅಂತಹವರ ನಡುವೆ ಈ ಪುಟ್ಟ ಮಕ್ಕಳು ಮಾದರಿಯಾಗಿದ್ದಾರೆ.

  • ರಾಜೀವ್ ಗಾಂಧಿ ಭಯದ ವಾತಾವರಣ ಸೃಷ್ಟಿ ಮಾಡಿರಲಿಲ್ಲ: ಸೋನಿಯಾ ಗಾಂಧಿ

    ರಾಜೀವ್ ಗಾಂಧಿ ಭಯದ ವಾತಾವರಣ ಸೃಷ್ಟಿ ಮಾಡಿರಲಿಲ್ಲ: ಸೋನಿಯಾ ಗಾಂಧಿ

    ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದಿಗೂ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

    ಇಂದು ರಾಜೀವ್ ಗಾಂಧಿ ಅವರ 75 ನೇ ಹುಟ್ಟು ಹಬ್ಬದ ಪ್ರಯಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1984ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅವರು ಪೂರ್ಣ ಬಹುಮತದಲ್ಲಿ ಅಧಿಕಾರ ಪಡೆದಿದ್ದರು. ಆದರೆ ಅವರು ಅಧಿಕಾರವನ್ನು ಉಪಯೋಗಿಸಿಕೊಂಡು ಯಾವತ್ತು ಜನರರಲ್ಲಿ ಭಯವನ್ನು ತರಿಸುವ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ.

    ಕೆ.ಡಿ ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಹೆಸರನ್ನು ಉಪಯೋಗಿಸದೆ ಕಮಲ ಪಾಳಯಕ್ಕೆ ಟಾಂಗ್ ಕೊಟ್ಟ ಸೋನಿಯಾ ಅವರು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಅಧಿಕಾರವನ್ನು ಉಪಯೋಗಿಸಿಕೊಂಡು ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಮತ್ತು ಅವರನ್ನು ಭಯದ ವಾತಾವರಣದಲ್ಲಿ ಇಡುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷ ಎದ್ದು ನಿಂತು ಭಾರತೀಯ ಮೌಲ್ಯಗಳನ್ನು ನಾಶಮಾಡುತ್ತಿರುವ ಶಕ್ತಿಗಳ ವಿರುದ್ಧ ಹೋರಾಡಬೇಕು. ವಿಭಜನೆಯ ಶಕ್ತಿಗಳು ಮತ್ತು ಭಾರತದ ಕಲ್ಪನೆಯನ್ನು ಬದಲಾಯಿಸಲು ಬಯಸುವವರ ವಿರುದ್ಧ ಪಕ್ಷವು ತನ್ನ ಹೋರಾಟವನ್ನು ಮುಂದುವರಿಸಬೇಕು ಎಂದು ಹೇಳಿದ ಅವರು, ಈಗ ಪ್ರಧಾನ ಮಂತ್ರಿ ಹೇಳಿದಂತೆ ಭಾರತದ ವೈವಿಧ್ಯತೆಯನ್ನು ಆಚರಿಸುವ ಮೂಲಕ ಏಕತೆಯನ್ನು ಕಾಪಾಡಿಕೊಳ್ಳಬಹುದು ಎಂಬ ಸಂದೇಶವನ್ನು ರಾಜೀವ್ ಗಾಂಧಿ ಆಗಲೇ ನೀಡಿದರು ಎಂದು ಹೇಳಿದರು.

    ಪ್ರಧಾನಿ ಮೋದಿಯವರ ಮೇಲೆ ಸೋನಿಯಾ ಗಾಂಧಿ ನಡೆಸಿದ ಪರೋಕ್ಷ ದಾಳಿಯ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿ ದಳ (ಎಸ್‍ಎಡಿ) ಶಾಸಕ ಮಂಜಿಂದರ್ ಎಸ್ ಸಿರ್ಸಾ ಅವರು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷರು “ನಾಚಿಕೆಯಿಲ್ಲದೆ ಸುಳ್ಳು ಹೇಳುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

    “ರಾಜೀವ್ ಗಾಂಧಿ ಎಂದಿಗೂ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಕಾಂಗ್ರೆಸ್ ಗೂಂಡಾಗಳೊಂದಿಗೆ 8,000 ಅಮಾಯಕ ಸಿಖ್ಖರನ್ನು ರಸ್ತೆಗಳಲ್ಲಿ ಜೀವಂತವಾಗಿ ಸುಟ್ಟುಹಾಕಲು ಕಾರಣವಾದ ಅದೇ ರಾಜೀವ್ ಗಾಂಧಿ!! ಜಬ್ ಎಕ್ ಬಡಾ ಪೇಡ್ ಗಿರ್ತಾ ಹೈ ತೋ ತೋ ಧರ್ತಿ ಹಿಲ್ತಿ ಹೈ.” ಎಂದು ಟ್ವೀಟ್ ಮಾಡಿದ್ದಾರೆ.

  • ಬಿಜೆಪಿ ಏನನ್ನೂ ಕಟ್ಟಲ್ಲ, ದಶಕಗಳಿಂದ ಕಟ್ಟಿದ್ದನ್ನು ಕೆಡವುತ್ತಿದೆ: ರಾಹುಲ್ ಗಾಂಧಿ

    ಬಿಜೆಪಿ ಏನನ್ನೂ ಕಟ್ಟಲ್ಲ, ದಶಕಗಳಿಂದ ಕಟ್ಟಿದ್ದನ್ನು ಕೆಡವುತ್ತಿದೆ: ರಾಹುಲ್ ಗಾಂಧಿ

    ನವದೆಹಲಿ: ಭಾರತದ ಆರ್ಥಿಕತೆ ಬೆಳವಣಿಗೆಯಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

    ಕೇಂದ್ರ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಏನನ್ನೂ ನಿರ್ಮಿಸುವುದಿಲ್ಲ. ಬದಲಿಗೆ ದಶಕಗಳಿಂದ ಉತ್ಸಾಹ ಮತ್ತು ಪರಿಶ್ರಮದಿಂದ ನಿರ್ಮಿಸಿರುವುದನ್ನು ಕೆಡವುತ್ತದೆ ಎಂದು ಟ್ವೀಟ್‍ನಲ್ಲಿ ಕುಟುಕಿದ್ದಾರೆ.

    ಪತ್ರಿಕೆಗಳ ವರದಿಗಳ ಹೆಡ್‍ಲೈನ್ ಹಾಕಿ ಮೇಲಿನ ಸಾಲುಗಳನ್ನು ಬರೆದಿದ್ದಾರೆ. ವಿವಿಧ ಪ್ರಮುಖ ಕ್ಷೇತ್ರಗಳಲ್ಲಿನ ದುರ್ಬಲತೆ ಮತ್ತು ಆರ್ಥಿಕತೆಯ ಪ್ರಸ್ತುತ ಸ್ಥಿತಿಗತಿ ಕುರಿತು ತಜ್ಞರ ವ್ಯಾಖ್ಯಾನಗಳ ಹೆಡ್‍ಲೈನ್ ಹಾಕಿದ್ದಾರೆ. ಭಾರತ ಯಾವಾಗ ಆರ್ಥಿಕತೆ ಬೆಳವಣಿಗೆಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡಿತೋ ಆಗಲೇ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಎಂಬ ಹೆಗ್ಗಳಿಕೆಯನ್ನೂ ಕಳೆದುಕೊಂಡಿದೆ. ಭಾರತ ಐದನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದ್ದು, ಈ ಮೂಲಕ ಯುಕೆ ಹಾಗೂ ಫ್ರಾನ್ಸ್ ಆರ್ಥಿಕತೆಯಲ್ಲಿ ನಮಗಿಂತ ಮುಂದೆ ಹೋಗಿವೆ ಎಂದರು.

    ಗ್ರಾಹಕರ ಬೇಡಿಕೆ ಕಡಿಮೆ ಹಾಗೂ ಕಂಪನಿಗಳಿಗೆ ಸಾಲ ನೀಡುವುದರಲ್ಲಿಯೂ ಕೊರತೆ ಉಂಟಾಗಿದ್ದರಿಂದ ಹಲವಾರು ಪ್ರಮುಖ ವಲಯಗಳು ತೀವ್ರ ಕುಸಿತ ಕಂಡಿವೆ. ಬ್ಯಾಂಕೇತರ ಹಣಕಾಸು ಕಂಪನಿಗಳು ಸಣ್ಣ ಸಂಸ್ಥೆಗಳಿಗೆ ಸಾಲ ನೀಡದ್ದರಿಂದ ಆಟೋ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಹಾಗೂ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳು ಕುಸಿತ ಕಂಡಿವೆ.

    ಇತ್ತೀಚೆಗೆ ಕಂಪನಿಯ ಉನ್ನತ ಅಧಿಕಾರಿಗಳು ಆರ್ಥಿಕತೆಯ ಮಂದಗತಿಯ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದಾರೆ. ಅಲ್ಲದೆ, ಬಿಕ್ಕಟ್ಟು ನಿವಾರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

    ಭಾರತದ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತವು ಭಾರತೀಯ ಷೇರು ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದ್ದು, ವಿದೇಶಿ ಬಂಡವಾಳ ಹೂಡಿಕೆದಾರರಿಂದ ಭಾರಿ ಪ್ರಮಾಣದ ಹೂಡಿಕೆಯನ್ನು ನಮ್ಮವರು ಕಳೆದುಕೊಂಡಿದ್ದಾರೆ. ಚೀನಾ ಮತ್ತು ಅಮೆರಿಕಾ ನಡುವಿನ ವ್ಯಾಪಾರದ ಉದ್ವಿಗ್ನತೆಯಂತಹ ಬಾಹ್ಯ ಅಂಶಗಳು ಭಾರತದ ಆರ್ಥಿಕತೆಯ ಬೆಳವಣಿಗೆಯ ಒತ್ತಡವನ್ನು ಹೆಚ್ಚಿಸಿವೆ.

    ಎಲ್ ಆಂಡ್ ಟಿ ಅಧ್ಯಕ್ಷ ಎ.ಎಂ.ನಾಯಕ್ ಮತ್ತು ಎಚ್‍ಡಿಎಫ್‍ಸಿ ಅಧ್ಯಕ್ಷ ದೀಪಕ್ ಪಾರೇಖ್‍ರಂತಹ ಉನ್ನತ ಅಧಿಕಾರಿಗಳು ಆರ್ಥಿಕತೆಯ ಕುರಿತು ಪ್ರತಿಕ್ರಿಯಿಸಿ, ಇತ್ತೀಚೆಗೆ ಆರ್ಥಿಕತೆಯು ‘ವಿಪರೀತ ಕುಸಿತ’ಕ್ಕೆ ಸಾಕ್ಷಿಯಾಗುತ್ತಿದ್ದು, ಪರಿಸ್ಥಿತಿ ಸವಾಲಿನದಾಗಿದೆ. ಆದರೆ, ನಿಧಾನಗತಿ ತಾತ್ಕಾಲಿಕವಾಗಿದ್ದು, ಆರ್ಥಿಕತೆ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲಿವೆ ಎಂದು ಹೇಳಿದ್ದರು.

  • 2 ದಿನ ತರಬೇತಿ ಶಿಬಿರ – ಬಿಜೆಪಿ ಸಂಸದರಿಗಿಲ್ಲ ವೀಕೆಂಡ್ ರಜೆ

    2 ದಿನ ತರಬೇತಿ ಶಿಬಿರ – ಬಿಜೆಪಿ ಸಂಸದರಿಗಿಲ್ಲ ವೀಕೆಂಡ್ ರಜೆ

    ನವದೆಹಲಿ: ಕಲಾಪದಲ್ಲಿ ಭಾಗಿಯಾಗಿರುವ ಬಿಜೆಪಿ ಸಂಸದರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಲಾಗಿದೆ.

    ಆಗಸ್ಟ್ 3 ಮತ್ತು 4 ರಂದು ಬಿಜೆಪಿಯ ಎಲ್ಲ ಸಂಸದರಿಗೆ ಪಕ್ಷದಿಂದ ತರಬೇತಿ ಏರ್ಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೇರಿದಂತೆ ವಿವಿಧ ಬಿಜೆಪಿ ಪ್ರಮುಖರು ಸಹ ದೆಹಲಿಯಲ್ಲಿ ನಡೆಯಲಿರುವ ಈ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.

    ಈ ಕುರಿತು ಬಿಜೆಪಿ ಭಾನುವಾರ ಎಲ್ಲ ಸಂಸದರಿಗೆ ತಿಳಿಸಿದ್ದು, ಆ.3 ರಿಂದ ಪ್ರಾರಂಭವಾಗುತ್ತಿರುವ ‘ಅಭ್ಯಾಸ ವರ್ಗ’ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದೆ.

    ಪಕ್ಷದ ಸಂಸದೀಯ ಕಾರ್ಯಾಲಯ ಸಹ ಈ ಕುರಿತು ಎಲ್ಲ ಸಂಸದರಿಗೆ ಸಂದೇಶ ರವಾನಿಸಿದ್ದು, ಆ.3 ಮತ್ತು 4ರಂದು ನಡೆಯುತ್ತಿರುವ ‘ಅಭ್ಯಾಸ ವರ್ಗ’ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಯಲ್ಲೇ ಉಳಿದುಕೊಳ್ಳಬೇಕು ಎಂದು ತಿಳಿಸಿದೆ.

    ತರಬೇತಿಯಲ್ಲಿ ವಿವಿಧ ಸಮಸ್ಯೆಗಳು ಹಾಗೂ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಮಾತನಾಡಲಿದ್ದು, ಇತ್ತೀಚೆಗೆ ರಾಜಕಾರಣಿಗಳ ದುರ್ವರ್ತನೆ ಕುರಿತು ಸಹ ಸಲಹೆ, ಸೂಚನೆ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ನಿಗದಿಯಂತೆ ಬಜೆಟ್ ಅಧಿವೇಶನ ಜುಲೈ 17ಕ್ಕೆ ಆರಂಭಗೊಂಡು ಜುಲೈ 26ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಈಗ ಈ ಅಧಿವೇಶನ ಆಗಸ್ಟ್ 7 ರವರೆಗೆ ಮುಂದೂಡಿಕೆಯಾಗಿದೆ.

    ಈ ಬಾರಿಯ ಲೋಕಸಭಾ ಕಲಾಪವು ಕಳೆದ 20 ವರ್ಷಗಳಲ್ಲೇ ಅತಿಹೆಚ್ಚು ಪ್ರಮಾಣದ ಉತ್ಪಾದಕತೆಯ ಕಲಾಪವಾಗಿದೆ ಎಂದು ಪಿಆರ್ ಎಸ್ ಶಾಸಕಾಂಗ ಸಂಶೋಧನಾ ಸಂಸ್ಥೆಯ ತಜ್ಞರು ಹೇಳಿದ್ದಾರೆ. 17ನೇ ಲೋಕಸಭೆಯ ಮುಂಗಾರು ಅಧಿವೇಶನವರೆಗೂ ಶೇ.128 ರಷ್ಟು ಪ್ರಮಾಣ ಉತ್ಪಾದಕತೆಯಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

    ರಾಜ್ಯಸಭೆಯ ಕಲಾಪದ ಉತ್ಪಾದಕತೆಯು ಶೇ.98ರಷ್ಟಿದೆ. ಶಾಸಕಾಂಗದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಎರಡು ಸಂದರ್ಭಗಳಲ್ಲಿ ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರು ಮಧ್ಯರಾತ್ರಿವರೆಗೂ ಕಲಾಪ ನಡೆಸಿದ್ದನ್ನು ಪಿಆರ್‍ಎಸ್ ಶ್ಲಾಘಿಸಿದೆ.

    ಜುಲೈ 23ರವರೆಗೆ ಒಟ್ಟು 15 ಮಸೂದೆಗಳು ಲೋಕಸಭೆಯಲ್ಲಿ ಪಾಸ್ ಆಗಿತ್ತು. ಈ ಮೂಲಕ ಕಳೆದ 15 ವರ್ಷದಲ್ಲೇ ಅತಿಹೆಚ್ಚು ಮಸೂದೆ ಪಾಸ್ ಆದ ಮೊದಲ ಅಧಿವೇಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಕ್ಷೇತ್ರಾದ್ಯಂತ 150 ಕಿ.ಮೀ.ಪಾದಯಾತ್ರೆ ಮಾಡಿ: ಸಂಸದರಿಗೆ ಮೋದಿ ಸೂಚನೆ

    ಕ್ಷೇತ್ರಾದ್ಯಂತ 150 ಕಿ.ಮೀ.ಪಾದಯಾತ್ರೆ ಮಾಡಿ: ಸಂಸದರಿಗೆ ಮೋದಿ ಸೂಚನೆ

    ನವದೆಹಲಿ: ಎಲ್ಲ ಸಂಸದರು ನಿಮ್ಮ ಕ್ಷೇತ್ರಗಳಲ್ಲಿ 150 ಕಿ.ಮೀ.ಪಾದಯಾತ್ರೆ ಮಾಡಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

    ಬಿಜೆಪಿ ಸಂಸದರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ‘ಗಾಂಧಿ 150’ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆ ಮಾಡುವಂತೆ ಈ ಸೂಚನೆ ನೀಡಿದ್ದಾರೆ.

    ಅ.2 ಹಾಗೂ ಅ.31 ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅ.2ರಿಂದ 31ರ ನಡುವೆ ಪ್ರತಿ ದಿನ 15 ಕಿ.ಮೀ. ಪಾದಯಾತ್ರೆ ಮೂಲಕ ಕ್ರಮಿಸುವಂತೆ ಎಲ್ಲ ಸಂಸದರಿಗೂ ಸೂಚಿಸಿದ್ದಾರೆ. ಅಲ್ಲದೆ, ರಾಜ್ಯಸಭಾ ಸದಸ್ಯರೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದು, ಪಕ್ಷ ಸಂಘಟನೆ ದುರ್ಬಲ ಇರುವ ಕಡೆ ಪಾದಯಾತ್ರೆ ನಡೆಸುವಂತೆ ಸೂಚಿಸಿದ್ದಾರೆ.

    ರಾಜ್ಯಸಭಾ ಸದಸ್ಯರಿಗೆ ಕ್ಷೇತ್ರವನ್ನು ಹಂಚಿಕೆ ಮಾಡಲಾಗುವುದು. ಪ್ರತಿಯೊಂದು ಕ್ಷೇತ್ರದಲ್ಲೂ ಕನಿಷ್ಠ 15ರಿಂದ 20 ತಂಡಗಳನ್ನು ರಚಿಸಬೇಕು. ಅವರ ನೇತೃತ್ವದಲ್ಲಿ ಪ್ರತಿದಿನ 15 ಕಿಲೋ ಮೀಟರ್ ಪಾದಯಾತ್ರೆ ನಡೆಸಬೇಕು. ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟ ಹಾಗೂ ಸಸಿ ನಡೆಯುವ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಮೋದಿ ಸಭೆಯಲ್ಲಿ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ, ಹಳ್ಳಿಗಳ ಪುನರ್‍ಜೀವನ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವುದು. ಗಿಡ ನೆಡುವುದು ಹಾಗೂ ಶೂನ್ಯ ಬಜೆಟ್ ಕೃಷಿಯತ್ತ ಗಮನಹರಿಸುವಂತೆ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

    ನಾವು ‘ಸಂಕಲ್ಪ ಪತ್ರ’ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು ನಮ್ಮ ಭವಿಷ್ಯದ ಗುರಿಯಾಗಬೇಕೆಂದು ಮೋದಿ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

    ಪ್ರತಿ ದಿನ 15 ಕಿ.ಮೀ.ಪಾದಯಾತ್ರೆ ಮಾಡುವುದರಿಂದ ಎಲ್ಲ ಬೂತ್‍ಗಳನ್ನು ಕವರ್ ಮಾಡಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಸಂಸದರು ಮಹಾತ್ಮಾ ಗಾಂಧಿ ಅವರ ಸಂದೇಶ, ಸಿದ್ಧಾಂತ ಹಾಗೂ ಜೀವನದ ಕುರಿತು ವಿವರಿಸಿ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಕುರಿತು ಸಂಸದರಿಗೆ ವಿವರಿಸಿದ್ದು, ದೂರದೃಷ್ಟಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಇದೇ ವೇಳೆ ಬಜೆಟ್ ಒಳ್ಳೆಯ ಅಂಶಗಳನ್ನು ಜನರಿಗೆ ತಲುಪಿಸುವಂತೆ ತಿಳಿಸಿದ್ದಾರೆ.

  • ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವಂತೆ ಪ್ರಧಾನಿ ಮೋದಿಗೆ ನ್ಯಾ.ಗೊಗೋಯ್ ಪತ್ರ

    ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವಂತೆ ಪ್ರಧಾನಿ ಮೋದಿಗೆ ನ್ಯಾ.ಗೊಗೋಯ್ ಪತ್ರ

    ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹಾಗೂ ನಿವೃತ್ತಿ ಅವಧಿಯನ್ನು ಹೆಚ್ಚಿಸುವಂತೆ ನ್ಯಾ.ರಂಜನ್ ಗೊಗೋಯ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ನ್ಯಾಯಮೂರ್ತಿಗಳ ನೇಮಕ ಮಾಡಿಕೊಳ್ಳುವ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಸಂವಿಧಾನ ವಿಧಿ 128 ಮತ್ತು 224ಎ ತಿದ್ದುಪಡಿ ತಂದು ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ 3 ಪತ್ರ ಬರೆದಿರುವ ನ್ಯಾ.ರಂಜನ್ ಗೊಗೋಯ್, ಈವರೆಗೆ 58,669 ಪ್ರಕರಣಗಳು ಬಾಕಿ ಉಳಿದಿದ್ದು, ಪ್ರತಿ ದಿನ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಕರಣಗಳು ಬಾಕಿ ಉಳಿದಿವೆ. ಅಲ್ಲದೆ, ನ್ಯಾಯಾಧೀಶರ ಕೊರತೆಯಿಂದಾಗಿ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡ ಪ್ರಕರಣ ನಿರ್ಧರಿಸಲು ಅಗತ್ಯ ಸಂವಿಧಾನ ಪೀಠಗಳನ್ನು ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

    1989ರಲ್ಲಿ ಅಂದರೆ ಮೂರು ದಶಕಗಳ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 18 ರಿಂದ 26ಕ್ಕೆ ಹೆಚ್ಚಿಸಲಾಗಿತ್ತು. ಇದಾದ ಎರಡು ದಶಕಗಳ ನಂತರ 2009ರಲ್ಲಿ ಈ ಸಂಖ್ಯೆಯನ್ನು ಮುಖ್ಯ ನ್ಯಾಯಮೂರ್ತಿಯೂ ಸೇರಿದಂತೆ 31ಕ್ಕೆ ಹೆಚ್ಚಿಸಲಾಯಿತು. ಈ ಕುರಿತು ನೆನಪು ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

    ಎರಡನೇ ಪತ್ರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ಅವಧಿಯನ್ನು 62ರಿಂದ 65 ವರ್ಷಕ್ಕೆ ಹೆಚ್ಚಿಸುವ ಕುರಿತು ಸಂವಿಧಾನ ತಿದ್ದುಪಡಿ ತರಬೇಕು ಎಂದು ಗೊಗೋಯ್ ಅವರು ಮನವಿ ಮಾಡಿದ್ದಾರೆ. ಹೈ ಕೋರ್ಟ್ ನ್ಯಾಯಾಧೀಶರ 399(ಶೇ.37) ಹುದ್ದೆಗಳೂ ಸಹ ಖಾಲಿ ಇದ್ದು, ಶಿಘ್ರವೇ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಕಾರ್ಯನಿರತ ನ್ಯಾಯಾಧೀಶರ ಬಲವನ್ನು ಅನುಮೋದಿತ ನ್ಯಾಯಾಧೀಶರ ಮಟ್ಟಕ್ಕೆ ತರಲು ಸಾಧ್ಯವಿಲ್ಲ. ಆದರೆ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು ಗಮನಹರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅನಾಥಾಲಯದ ಮಕ್ಕಳ ಸಾಹಸ ‘ಸುವ್ವಾಲಿ’

    ಅನಾಥಾಲಯದ ಮಕ್ಕಳ ಸಾಹಸ ‘ಸುವ್ವಾಲಿ’

    ಬೆಂಗಳೂರು: ಕಳೆದ 17 ವರ್ಷಗಳಿಂದಲೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಶ್ರೀರಾಂಬಾಬು ಅನಾಥಾಲಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದ್ದಾರೆ. ಸುವ್ವಾಲಿ ಎಂಬ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥಿಯೇಟರ್ ನಲ್ಲಿ ನಡೆಯಿತು.

    ಬಿಜೆಪಿ ಮುಖಂಡ ಮರಿಸ್ವಾಮಿ ಈ ಟೀಸರ್ ಗೆ ಚಾಲನೆ ನೀಡಿದರು. ಲಹರಿ ವೇಲು, ಸಾ.ರಾ.ಗೋವಿಂದು, ಎಂ.ಜಿ.ರಾಮಮೂರ್ತಿ, ಕೆ.ಎಂ.ವೀರೇಶ್, ಎನ್.ಎಂ.ಸುರೇಶ್, ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಈಗಷ್ಟೇ ಪಿಯುಸಿ ಓದುತ್ತಿರುವ ಹಾರ್ದಿಕಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಮಕ್ಕಳೇ ಅಭಿನಯಿಸಿರುವ ಈ ಚಿತ್ರಕ್ಕೆ ಲೋಕಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀರಾಂಬಾಬು ಅವರೇ ಚಿತ್ರದ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ.

    ಚಿತ್ರದ ಕುರಿತಂತೆ ಮಾತನಾಡಿದ ಶ್ರೀರಾಂಬಾಬು ಅನಾಥಾಶ್ರಮದಲ್ಲಿ ನಡೆಯುವಂತಹ ಘಟನೆಗಳು ಅಲ್ಲಿನ ಮಕ್ಕಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿ ಕೊನೆಗೆ ಪ್ರಧಾನಮಂತ್ರಿಗಳನ್ನು ಭೇಟಿಯಾದರೇ, ಇಲ್ಲವೇ ಎಂಬುದನ್ನು ನಮ್ಮ ಚಿತ್ರದ ಮೂಲಕ ಹೇಳಲು ಬಯಸಿದ್ದೇವೆ. 27 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಅದರಲ್ಲಿ 21 ದಿನ ರಾತ್ರಿಯೇ ಶೂಟಿಂಗ್ ಮಾಡಿದ್ದೇವೆ ಎಂದರು.

    ನಾನು ನೋಡಿದ ಹಾಗೆ ಒಂದಷ್ಟು ಅನಾಥಾಲಯದ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಕೆಲ ವ್ಯಕ್ತಿಗಳು ನೀಡುವ ಭರವಸೆಯನ್ನು ನಂಬಿದ 6 ಜನ ಮಕ್ಕಳು ಅನಾಥಾಲಯದಿಂದ ಹೊರಬಂದಾಗ ರಿಯಾಲಿಟಿ ಅರಿವಾಗುತ್ತದೆ. ಅನಾಥಾಲಯವೇ ಮಿಗಿಲೆಂದು ವಾಪಸ್ ಹೊರಡುವಾಗ ಒಂದು ಭಾಷಣ ಕೇಳಿ ನಾವು ನೇರವಾಗಿ ಪ್ರಧಾನ ಮಂತ್ರಿಗಳನ್ನೇ ಭೇಟಿ ಮಾಡಬೇಕೆಂದು ನಿರ್ಧರಿಸುತ್ತಾರೆ. ಕೊನೆಗೂ ಆ ಮಕ್ಕಳಿಗೆ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಯಿತೇ ಎಂದು ‘ಸುವ್ವಾಲಿ’ ಚಿತ್ರದ ಮೂಲಕ ಹೇಳಿದ್ದೇವೆ ಎಂದು ಹೇಳಿದರು.

    ಈ ಚಿತ್ರದಲ್ಲಿ 5 ಹಾಡುಗಳಿದ್ದು ರಾಜೇಶ್ ಕೃಷ್ಣನ್, ನವೀನ್ ಸಜ್ಜು, ಮೇಘನ ಕುಲಕರ್ಣಿ ಹಾಡಿದ್ದಾರೆ. ನಿರ್ದೇಶಕಿ ಹಾರ್ದಿಕಾ ಮಾತನಾಡಿ, 6 ಜನ ಮಕ್ಕಳು ತಮಗಾಗುತ್ತಿರುವ ತೊಂದರೆಗಳನ್ನು ಸರಿಪಡಿಸಿಕೊಳ್ಳಲು ಅನಾಥಾಲಯದಿಂದ ಹೊರಬಂದಾಗ ಏನೆಲ್ಲಾ ಸಂದರ್ಭಗಳನ್ನು ಎದುರಿಸಿದರು ಎನ್ನುವುದೇ ‘ಸುವ್ವಾಲಿ’ ಚಿತ್ರದ ಕಥೆ. ಈ ಹಿಂದೆ ಕೆಲ ಕಿರುಚಿತ್ರಗಳನ್ನು ಮಾಡಿದ್ದು, ಫಸ್ಟ್ ಟೈಂ ನಿರ್ದೇಶನ ಮಾಡಿದ್ದೇನೆ ಎಂದು ಹೇಳಿದರು.

    ಸಾ.ರಾ.ಗೋವಿಂದು ಮಾತನಾಡಿ ‘ಸುವ್ವಾಲಿ’ ಎನ್ನುವ ಹೆಸರೇ ತುಂಬಾ ಚೆನ್ನಾಗಿದೆ. ಪಿ.ಯು.ಸಿ. ಓದುತ್ತಿರುವ ಹೆಣ್ಣುಮಗಳು ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ಮೆಚ್ಚಲೇಬೇಕು. ಈಗ ಸಬ್ಸಿಡಿಗಾಗಿ ಸಿನಿಮಾ ಮಾಡುವವರೇ ಹೆಚ್ಚಾಗಿದ್ದಾರೆ. ಸರ್ಕಾರ ಒಂದು ವರ್ಷ ಸಬ್ಸಿಡಿ ಕೊಡುವುದನ್ನು ನಿಲ್ಲಿಸಬೇಕು. ಆಗ ಒಳ್ಳೆ ಸಿನಿಮಾಗಳು ಮಾತ್ರ ಬರುತ್ತವೆ. ಇಂತಹ ಸಣ್ಣ ಚಿತ್ರಗಳಿಗೆ ಲಹರಿ ವೇಲು ಅವರು ಮೊದಲಿನಿಂದಲೂ ಸಹಕರಿಸುತ್ತಾ ಬಂದಿದ್ದಾರೆ. ಈ ಚಿತ್ರ ಯಶಸ್ವಿಯಾಗಲಿ ಎಂದು ಹೇಳಿದರು.

    ನಿರ್ಮಾಪಕ ಶ್ರೀರಾಂಬಾಬು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಾಧ್ಯವಾದರೆ ಅದನ್ನು ಚಿತ್ರದಲ್ಲಿ ಸೇರಿಸಿಕೊಳ್ಳುತ್ತಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]