Tag: prime minister

  • ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

    ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

    ದು ಅಕ್ಟೋಬರ್ 31, 1984. ಕೋಲ್ಕತ್ತಾದಿಂದ ದೆಹಲಿಗೆ ಇಂಡಿಯನ್ ಏರ್ ಲೈನ್ಸ್ ಬೋಯಿಂಗ್ 737 ವಿಮಾನ ಹೊರಟಿತು. ರಾಜೀವ್ ಗಾಂಧಿ, ಪ್ರಣಬ್ ಮುಖರ್ಜಿ, ಶೀಲಾ ದೀಕ್ಷಿತ್, ಉಮಾಶಂಕರ್ ದೀಕ್ಷಿತ್, ಬಲರಾಮ್ ಜಖರ್, ಲೋಕಸಭಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಎ.ಬಿ ಅಗ್ನಿ ಖಾನ್ ಚೌಧರಿ ವಿಮಾನದಲ್ಲಿದ್ದರು‌.

    ಅರ್ಧ ಘಂಟೆಯ ಹೊತ್ತಿಗೆ ರಾಜೀವ್ ಗಾಂಧಿ ಇಂದಿರಾ ಗಾಂಧಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆರಂಭಿಕ ಆಘಾತದ ಸ್ವಲ್ಪ ಸಮಯದ ನಂತರ, ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಯಿತು.

    ಪ್ರಣಬ್ ಮುಖರ್ಜಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸುವಾಗ, ನೆಹರೂ ಕಾಲದಿಂದಲೂ, ಇಂತಹ ಪರಿಸ್ಥಿತಿಯಲ್ಲಿ ಮಧ್ಯಂತರ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಂಪ್ರದಾಯವಿದೆ ಎಂದು ಹೇಳಿದರು. ನೆಹರೂ ಅವರ ನಿಧನದ ನಂತರ, ಸಂಪುಟದಲ್ಲಿ ಅತ್ಯಂತ ಹಿರಿಯ ಮಂತ್ರಿ ಗುಲ್ಜಾರಿ ಲಾಲ್ ನಂದಾ ಅವರನ್ನು ಹಂಗಾಮಿ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು ಎಂದು ವಿವರಿಸಿದರು.

    ಖ್ಯಾತ ಪತ್ರಕರ್ತ ರಶೀದ್ ಕಿಡ್ವಾಯ್ ಅವರು ತಮ್ಮ ಬರೆದ ’24 ಅಕ್ಬರ್ ರಸ್ತೆ ‘ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದಂತೆ, ಪ್ರಣಬ್ ಮುಖರ್ಜಿ ವಿಮಾನದ ಶೌಚಾಲಯದಲ್ಲಿ ಅಳಲು ಪ್ರಾರಂಭಿಸಿದರು. ಇಂದಿರಾ ಗಾಂಧಿಯವರ ಸಾವಿನಿಂದ ದುಃಖಿತರಾಗಿದ್ದರು. ಅವರ ಕಣ್ಣುಗಳು ಕೆಂಪಾಗಿದ್ದವು, ಆದ್ದರಿಂದ ಅವರು ವಿಮಾನದ ಹಿಂಭಾಗದಲ್ಲಿ ಕುಳಿತರು. ಇದಕ್ಕೂ ಮುನ್ನ ತಮ್ಮ ಅಭಿಪ್ರಾಯದಲ್ಲಿ ಪ್ರಣಬ್ ತಮ್ಮ ಹಿರಿತನವನ್ನು ರಾಜೀವ್‌ಗಾಂಧಿ ಅವರಿಗೆ ಒತ್ತಿ ಹೇಳಿದರು. ಈ ಮೂಲಕ ಪ್ರಧಾನಿಯಾಗುವ ಇಂಗಿತ ವ್ಯಕ್ತಪಡಿಸಿದರು.

    ಆದರೆ, ಇಂದಿರಾ ಗಾಂಧಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ.ಸಿ ಅಲೆಕ್ಸಾಂಡರ್ ತಮ್ಮ ಆತ್ಮಚರಿತ್ರೆಯಲ್ಲಿ ‘ಥ್ರೂ ದಿ ಕಾರಿಡಾರ್ಸ್ ಆಫ್ ಪವರ್: ಆನ್ ಇನ್ಸೈಡರ್ಸ್ ಸ್ಟೋರಿ’ ಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದ್ದು ರಾಜೀವ್ ಗಾಂಧಿಯನ್ನು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಪ್ರಸ್ತಾಪವಾದ ಕೂಡಲೇ ಅವರನ್ನು ಬಲವಾಗಿ ಬೆಂಬಲಿಸಿದ ಮೊದಲ ವ್ಯಕ್ತಿ ಪ್ರಣಬ್ ಮುಖರ್ಜಿ.

    ರಾಜೀವ್ ಗಾಂಧಿ ಚುನಾವಣೆಯಲ್ಲಿ ಜಯಗಳಿಸಿದ ನಂತರ ತಮ್ಮ ಸಂಪುಟವನ್ನು ರಚಿಸಿದಾಗ, ಪ್ರಣಬ್ ಮುಖರ್ಜಿ ಅವರಿಗೆ ಅಥವಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಯಾವುದೇ ಸ್ಥಾನವನ್ನು ನೀಡಲಾಗಲಿಲ್ಲ. ಅವರು ಪ್ರತ್ಯೇಕ ಪಕ್ಷವಾದ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ರಚಿಸಲು 1986 ರಲ್ಲಿ ಪಕ್ಷದಿಂದ ಹೊರಹೋಗಬೇಕಾಯಿತು. ಕಾಲಾಂತರದಲ್ಲಿ ಇದು ಕಾಂಗ್ರೆಸ್‌ನೊಂದಿಗೆ ವೀಲಿನವಾಯಿತು.

    ಮೊದಲ ಬಾರಿ ರಾಜೀವ್ ಗಾಂಧಿ ಅವರಿಂದ ಪ್ರಧಾನಿ ಹುದ್ದೆಯಿಂದ ವಂಚಿತಗೊಂಡಿದ್ದ ಪ್ರಣಬ್ ಮುಖರ್ಜಿ ಎರಡನೇ ಬಾರಿ ಸೋನಿಯಗಾಂಧಿ ಅವರಿಂದ ವಂಚಿತರಾದರು. ಎರಡನೇ ಬಾರಿ ಬಹುತೇಕ ಪ್ರಣಬ್ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು ಆದರೆ, ಮನಮೋಹನ್ ಸಿಂಗ್ ಅವರನ್ನು ಸೋನಿಯಾ ಆಯ್ಕೆ‌ ಮಾಡಿದ್ದರು. ಇಂದಿರಾಗಾಂಧಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ, ಡಾ.ಮನಮೋಹನ್ ಸಿಂಗ್ ಅವರನ್ನು ಆರ್‌ಬಿಐ ಗವರ್ನರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದರು.

    ಪ್ರಣಬ್ ಮುಖರ್ಜಿ ತಮ್ಮ ಕೆಲವು ದೌರ್ಬಲ್ಯಗಳನ್ನು ಅರಿತುಕೊಂಡಿದ್ದರು. ರಾಜಕೀಯ ಜೀವನದ ಬಹುದೊಡ್ಡ ಭಾಗವನ್ನು ರಾಜ್ಯ ಸಭೆಯಲ್ಲಿ ಕಳೆದಿದ್ದೇ‌ನೆ, ಹಿಂದಿ ಮಾತನಾಡುವಾಗ ಉಂಟಾಗುತ್ತಿದ್ದ ತೊಡಕುಗಳು ತಮ್ಮ ತವರು ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿಲ್ಲ ಎನ್ನುವ ಬಗ್ಗೆ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು‌. ಪ್ರಧಾನಿ ಹುದ್ದೆಗೆ ಇವರು ಹೆಸರು ಕೇಳಿ ಬಂದು ಮತ್ತೊಬ್ಬರು ಪ್ರಧಾನಿಯಾದಗ, ‘ ಪ್ರಧಾನಿಗಳು ಬಂದು ಹೋಗುತ್ತಾರೆ ನಾನು ಯಾವಗಲೀ ಪ್ರಧಾನಿ ಎಂದು ಎಂದು ಆಪ್ತರ ಮುಂದೆ ತಮ್ಮನ್ನು ತಾವು ಗೇಲಿ‌ ಮಾಡಿಕೊಂಡಿದರಂತೆ. ಸುಮಾರು 50 ವರ್ಷಗಳ ರಾಜಕೀಯ ಜೀವನದಲ್ಲಿ, ಪ್ರಧಾನ ಮಂತ್ರಿಯನ್ನು ಹೊರತುಪಡಿಸಿ ಪ್ರತಿಯೊಂದು ಪ್ರಮುಖ ಹುದ್ದೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ‌.

    ರಾಷ್ಟ್ರಪತಿಯಾಗುವುದು ಸೋನಿಯಾ ಗಾಂಧಿಗೆ ಇಷ್ಟವಿರಲಿಲ್ಲ
    2012 ರಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಬ್ ಮುಖರ್ಜಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಮಾಡಿತು. ಆದಾಗ್ಯೂ, ರಾಜಕೀಯ ವ್ಯಾಖ್ಯಾನಕಾರರು ಹೇಳುವಂತೆ ಆರಂಭದಲ್ಲಿ ಸೋನಿಯಾ ಗಾಂಧಿ ರಾಷ್ಟ್ರಪತಿ ಹುದ್ದೆಗೆ ಉಪಾಧ್ಯಕ್ಷರಾಗಿದ್ದ ಹಮೀದ್ ಅನ್ಸಾರಿ ಆಯ್ಕೆ ಮಾಡುವ ಇರಾದೆಯಲ್ಲಿದ್ದರು.

    ಪ್ರಣಬ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸದಿರಲು ಎರಡು ಕಾರಣಗಳಿವೆ. ಒಂದು, ಸರ್ಕಾರದಲ್ಲಿ ಪ್ರಣಬ್ ಮುಖರ್ಜಿ ಪಾತ್ರ ಅನಿವಾರ್ಯವಾಗಿತ್ತು. ಮತ್ತೊಂದು ಕಾರಣ ಸೋನಿಯಾ ಗಾಂಧಿಗೆ ಅವರ ನಿಷ್ಠೆಯ ಬಗ್ಗೆ ಇನ್ನೂ ನಂಬಿಕೆಯಿಲ್ಲ ಇರಲಿಲ್ಲ ಎನ್ನಲಾಗಿದೆ.

    ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದಂತೆ “ರಾಷ್ಟ್ರಪತಿ ಹುದ್ದೆಗೆ ನೀವು ಹೆಚ್ಚು ಅರ್ಹ ವ್ಯಕ್ತಿ ಎಂದು ಸೋನಿಯಾ ಹೇಳಿದ್ದರು. ಆದರೆ ಸರ್ಕಾರವನ್ನು ನಡೆಸುವಲ್ಲಿ ನಿಮಗೂ ಪ್ರಮುಖ ಪಾತ್ರವಿದೆ ಎಂಬುದನ್ನು ನೀವು ಮರೆಯಬಾರದು. ನಿಮ್ಮ ಯಾವುದೇ ಆಯ್ಕೆಗಳನ್ನು ನೀವು ಸೂಚಿಸಬಹುದೇ” ಎಂದು ಸೋನಿಯಗಾಂಧಿ ಕೇಳಿದರಂತೆ. ಇದನ್ನು ಕೇಳಿದ ಪ್ರಣಬ್ ಮುಖರ್ಜಿ ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿಯನ್ನಾಗಿ ತಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬಹುದು ಎಂದು ಯೋಚಿಸಿದರಂತೆ. ಆದರೆ ಮರುದಿನ ಮನಮೋಹನ್‌ ಸಿಂಗ್‌, ಕಾಂಗ್ರೆಸ್ ಕೋರ್ ಸಮಿತಿ ಸಭೆ ನಿಮ್ಮನ್ನು ಪಕ್ಷದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಪ್ರಣಬ್‌ ಅವರಿಗೆ ತಿಳಿಸಿದರಂತೆ.

  • ಭಾರತದ ಕಂಪನಿಯ ಸೈಕಲ್ ಏರಿ ಆರೋಗ್ಯ ಅಭಿಯಾನಕ್ಕೆ ಯುಕೆ ಪಿಎಂ ಚಾಲನೆ

    ಭಾರತದ ಕಂಪನಿಯ ಸೈಕಲ್ ಏರಿ ಆರೋಗ್ಯ ಅಭಿಯಾನಕ್ಕೆ ಯುಕೆ ಪಿಎಂ ಚಾಲನೆ

    ಲಂಡನ್: ಭಾರತದ ಪ್ರಸಿದ್ಧ ಹೀರೋ ಕಂಪನಿಯ ಸೈಕಲ್ ಓಡಿಸಿ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು, ಸರ್ಕಾರದ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಮಾರಕವಾಗಿದ್ದು, ಇಂಗ್ಲೆಂಡ್‌ನಲ್ಲೂ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಪಿಎಂ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ವೈರಸ್ ತಗಲಿತ್ತು. ಇದಕ್ಕಾಗಿ ಅವರು ಸೈಕಲ್ ಮತ್ತು ವಾಕಿಂಗ್ ಅಭಿಯಾನಕ್ಕೆ ದೇಶದಲ್ಲಿ ಚಾಲನೆ ನೀಡಿದ್ದಾರೆ. ಈ ವೇಳೆ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಓಡಿಸಿದ್ದಾರೆ.

    ಎರಡು ಶತಕೋಟಿ ಪೌಂಡ್ ಮೊತ್ತದ ಅಭಿಯಾನಕ್ಕೆ ಮಂಗಳವಾರ ಬೋರಿಸ್ ಜಾನ್ಸನ್ ಅವರು ಚಾಲನೆ ನೀಡಿದ್ದಾರೆ. ಸೈಕಲ್ ಮತ್ತು ಸಾಮಾಜಿಕ ಅಂತರದ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಕೊರೊನಾ ವಿರುದ್ಧ ಹೋರಾಡುವುದು ಇದರ ಉದ್ದೇಶವಾಗಿದೆ. ಈ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಬೋರಿಸ್ ಜಾನ್ಸನ್ ಅವರು ಹೀರೋ ಕಂಪನಿ ನಿರ್ಮಾಣ ಮಾಡಿದ ವೈಕಿಂಗ್ ಪ್ರೋ ಎಂಬ ಸೈಕಲ್ ಅನ್ನು ಚಲಿಸಿಕೊಂಡು ನಾಟಿಂಗ್‍ಹ್ಯಾಮ್‍ನ ಬೀಸ್ಟನ್‍ನಲ್ಲಿರೋ ಹೆರಿಟೇಜ್ ಸೆಂಟರ್ ಗೆ ಹೋಗಿದ್ದಾರೆ.

    ಈ ವೇಳೆ ಮಾತನಾಡಿರುವ ಜಾನ್ಸನ್ ಅವರು, ಸೈಕಲ್ ಮತ್ತು ವಾಕಿಂಗ್ ಮಾಡುವುದರಿಂದ ಜನರು ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರ ಜೊತೆಗೆ ನಮ್ಮಲ್ಲಿ ವಾಹನ ಸಂಚಾರ ಜಾಸ್ತಿಯಾಗಿರುವ ಕಾರಣ ಅದು ಪರಿಸರದ ಮೇಲು ಪರಿಣಾಮ ಬೀರಿದೆ. ಇದರಿಂದ ಜನರಿಗೆ ಹಲವಾರು ತೊಂದರೆಗಳು ಆಗುತ್ತಿವೆ. ಈಗ ಜನರು ಹೆಚ್ಚು ಸೈಕಲ್ ಮತ್ತು ವಾಕಿಂಗ್ ಮಾಡುವುದರಿಂದ ಪರಿಸರಕ್ಕೂ ಉಪಯೋಗವಾಗಲಿದೆ ಮತ್ತು ಆರೋಗ್ಯವಾಗಿ ಇರಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ವೈರಸ್ ತಗುಲಿತ್ತು. ಬೋರಿಸ್ ಜಾನ್ಸನ್ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದರು. ಇದನ್ನು ಓದಿ: ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ 

    ಬೋರಿಸ್ ಜಾನ್ಸನ್ ಅವರು ಮಂಗಳವಾರ ರೈಡ್ ಮಾಡಿದ ಹೀರೋ ಕಂಪನಿಯ ವೈಕಿಂಗ್ ಪ್ರೊ ಸೈಕಲ್ ಭಾರತದ ಹೀರೋ ಮೋಟಾರ್ಸ್ ಕಂಪನಿಯ ಒಡೆತನದ ಇನ್ಸಿಂಕ್ ಬ್ರಾಂಡ್‍ನ ಒಂದು ಭಾಗವಾಗಿದೆ. ಈ ಬ್ರಾಂಡ್ ಅನ್ನು ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಲ್ಲಿ ಡಿಸೈನ್ ಮಾಡಲಾಗುತ್ತದೆ. ಹೀರೋ ಸೈಕಲ್ಸ್ ವೈಕಿಂಗ್, ರಿಡ್ಡಿಕ್ ಮತ್ತು ರೈಡೇಲ್ ಬ್ರಾಂಡ್‍ಗಳನ್ನು ಇನ್ಸಿಂಕ್ ಎಂಬ ಬ್ರಾಂಡ್ ಹೆಸರಿನಲ್ಲಿ ಇಂಗ್ಲೆಂಡ್‍ನಲ್ಲಿ ಮಾರಾಟ ಮಾಡುತ್ತದೆ.

  • ದಬ್ಬಾಳಿಕೆಯಿಂದ ಚೀನಾದವರು ನಮ್ಮ ದೇಶವನ್ನು ಬಗ್ಗು ಬಡಿಯಲಾಗಲ್ಲ: ಎಚ್‍ಡಿಕೆ

    ದಬ್ಬಾಳಿಕೆಯಿಂದ ಚೀನಾದವರು ನಮ್ಮ ದೇಶವನ್ನು ಬಗ್ಗು ಬಡಿಯಲಾಗಲ್ಲ: ಎಚ್‍ಡಿಕೆ

    – ನಮ್ಮ ದೇಶದ ಸೈನಿಕರು ಸಮರ್ಥರು
    – ಎರಡು ದೇಶಗಳ ಪ್ರಧಾನಿಗಳಲ್ಲಿ ಮನವಿ

    ಬೆಂಗಳೂರು: ಭಾರತ ಹಾಗೂ ಚೀನಾ ನಡುವೆ ಯುದ್ಧ ಸಂಘರ್ಷವಾಗಿದ್ದು, ಇಡೀ ವಿಶ್ವ ಹಾಗೂ ಎರಡು ದೇಶಗಳಿಗೂ ಉತ್ತಮ ಬೆಳವಣಿಗೆ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ದುರದೃಷ್ಟಕರ ವಿಚಾರವಾಗಿದೆ. ಈಗಾಗಲೇ ದೇಶದಲ್ಲಿ ಕೋವಿಡ್ 19 ಸಮಸ್ಯೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಈ ವೇಳೆ ನಮ್ಮ ದೇಶ ಮತ್ತು ಚೀನಾ ದೇಶದ ನಡುವೆ ಸಂಘರ್ಷ ನಡೆಯುವಂತ ವಾತಾವರಣ ನಿರ್ಮಾಣವಾಗಿದೆ. ಇದು ಇಡೀ ವಿಶ್ವ ಹಾಗೂ ಎರಡು ದೇಶಗಳಿಗೂ ಉತ್ತಮ ಬೆಳವಣಿಗೆ ಅಲ್ಲ ಎಂದರು.

    ಭಾರತ ಹಾಗೂ ಚೀನಾ ಎರಡು ದೇಶದ ಪ್ರಧಾನಮಂತ್ರಿಗಳಿಗೆ  ನಾನು ಮನವಿ ಮಾಡುತ್ತೇನೆ. ಅದೇನೆಂದರೆ ಇಂತಹ ಸನ್ನಿವೇಶದಲ್ಲಿ ಪರಸ್ಪರ ಅವಿಶ್ವಾಸದ ಹಿನ್ನೆಲೆಯಲ್ಲಿ ಅಥವಾ ಬೇರೆ ಬೇರೆ ಕಾರಣದಿಂದ ಯುದ್ಧದ ವಾತಾವರಣ ನಿರ್ಮಾಣ ಮಾಡುವುದು ಬೇಡ. ಇದರಿಂದ ಒಂದು ಕಡೆ ಅಮಾಯಕ ಯೋಧರ ಬಲಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಎರಡು ದೇಶಗಳ ನಡುವಿನ ಸಾಮರಸ್ಯ ಹಾಳುಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು.

    45 ವರ್ಷಗಳ ನಂತರ ಯುದ್ಧದ ವಾತಾವರಣ ಮೊದಲ ಬಾರಿಗೆ ಆಗಿದೆ. 1967ರ ಯುದ್ಧದ ನಂತರ ಎರಡು ದೇಶಗಳ ನಡುವೆ ಸಾಮರಸ್ಯ ಇರಲಿಲ್ಲ. 35 ವರ್ಷಗಳ ನಂತರ ಚೀನಾದ ಪ್ರಧಾನಿ ದೆಹಲಿಗೆ ಬಂದಿದ್ದು ದೇವೇಗೌಡರು ಪ್ರಧಾನಿ ಆದಾಗ. ಮೊದಲನೇ ಬಾರಿಗೆ ಎಚ್.ಡಿ. ದೇವೇಗೌಡರು ಪ್ರಧಾನಿ ಆದಾಗ ಒಪ್ಪಂದ ಆಗಿದೆ. ಆದರೆ ಅಂದು ದೊಡ್ಡ ಮಟ್ಟದ ಪ್ರಚಾರ ಸಿಗಲಿಲ್ಲ. ಕನ್ನಡಿಗ ಪ್ರಧಾನಿ ಪ್ರಚಾರ ಪಡೆಯದೆ, ದೇಶವನ್ನು ರಕ್ಷಣೆ ಮಾಡುವಲ್ಲಿ ಮಾಡಿದ ಕೆಲಸ ನೆನೆಪಿಸಿಕೊಳ್ಳುವ ಕೆಲಸ ಯಾರೂ ಮಾಡಿಲ್ಲ. ಆದರೆ ಅದು ಇತಿಹಾಸ, ಆಗ ನಾನು ಎಂಪಿ ಆಗಿದ್ದೆ ಎಂದು ಹೇಳಿದರು.

    ಈಗ ನಮ್ಮ ದೇಶದ ಪ್ರಧಾನಿ ಇಡೀ ವಿಶ್ವದಲ್ಲೇ ಬಲಾಢ್ಯ ಪ್ರಧಾನಿ ಅಂತ ಚರ್ಚೆಯಾಗುತ್ತಿದೆ. ಇವತ್ತು ಬಲಾಢ್ಯತೆ ಹೊಂದುವುದು ಬೇರೆ. ಶಾಂತಿಯುತವಾಗಿ ಅಕ್ಕಪಕ್ಕದ ದೇಶಗಳ ಜೊತೆ ವಿಶ್ವಾಸ ಮೂಡಿಸಿಕೊಂಡು ಕೆಲಸ ಮಾಡಬೇಕು. ದಬ್ಬಾಳಿಕೆಯಿಂದ ಚೀನಾದವರು ನಮ್ಮ ದೇಶವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ನಮ್ಮ ದೇಶದ ಸೈನಿಕರು ಎಲ್ಲ ರೀತಿಯಲ್ಲಿ ಸಮರ್ಥರಿದ್ದಾರೆ. ನಮ್ಮ ದೇಶದ ಸೈನಿಕರ ಸಾಹಸ ಬೇರೆ ದೇಶಗಳ ಸೈನಿಕರಿಗೆ ಏನು ಕಡಿಮೆಯಿಲ್ಲ. ನಮ್ಮ ದೇಶದ ರಕ್ಷಣಾ ವ್ಯವಸ್ಥೆಯನ್ನ ಚೀನಾ ಹುಡುಗಾಟಿಕೆ ಅಂತ ಪರಿಗಣಿಸೋದು ಬೇಡ ಎಂದರು.

    ಈಗಾಗಲೇ ಕೊರೊನಾದಿಂದ ಜಗತ್ತಲ್ಲಿ ಸಾವು ಸಂಭವಿಸುತ್ತಿವೆ. ಹೀಗಾಗಿ ಪರಸ್ಪರ ಶಾಂತಿಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ. ಚರ್ಚೆಯ ಹಂತದಲ್ಲೇ ಈ ರೀತಿಯ ಯೋಧರ ಹತ್ಯೆಯಾಗಿರೋದು ಖಂಡನೀಯ. ಚೀನಾ ದೇಶದ ನಡುವಳಿಕೆ ಸಹ ಸರಿಯಲ್ಲ. ಇದನ್ನು ಇಲ್ಲಿಗೆ ಸ್ಥಗಿತಗೊಳಿಸಿ ಹೊಂದಾಣಿಕೆ ಮೂಲಕ ಪರಿಹರಿಸಿಕೊಳ್ಳಬೇಕು. ಸಾವು-ನೋವುಗಳು ಆಗದಂತೆ ತಡೆಯಬೇಕು. ಜವಾಬ್ದಾರಿಯುತ ಸ್ಥಾನಮಾನದಲ್ಲಿರುವವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

  • ಮುಂದಾಗುವ ಅನಾಹುತ ತಿಳಿದೇ ಸರ್ಕಾದಿಂದ ಲಾಕ್‍ಡೌನ್ – ಪ್ರಹ್ಲಾದ್ ಜೋಶಿ

    ಮುಂದಾಗುವ ಅನಾಹುತ ತಿಳಿದೇ ಸರ್ಕಾದಿಂದ ಲಾಕ್‍ಡೌನ್ – ಪ್ರಹ್ಲಾದ್ ಜೋಶಿ

    – ಸರ್ಕಾರದ ಜೊತೆಗೆ ಜನರು ಕೈ ಜೋಡಿಸಬೇಕು

    ನವದೆಹಲಿ: ಜನರ ಸಹಕಾರ ಇಲ್ಲದೇ ಸರ್ಕಾರ ಏನೇ ಕ್ರಮ ತೆಗೆದುಕೊಂಡರು ಅದು ವಿಫಲವಾಗಲಿದೆ. ಶೇಕಡಾ 80% ಜನರು ಭಾರತ ಲಾಕ್‍ಡೌನ್‍ಗೆ ಬೆಂಬಲ ನೀಡಿದ್ದು ಬಾಕಿ 20% ಜನರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇನ್ನು ಪರಿಸ್ಥಿತಿ ಕೈ ಮೀರಿಲ್ಲ ಸರ್ಕಾರ ಇದನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಿದೆ. ಭಾರತ ಲಾಕ್‍ಡೌನ್ ಮಾಡುವ ಮೂಲಕ ಮುಂದಗಾಬಹುದಿದ್ದ ದೊಡ್ಡ ಅನಾಹುತವನ್ನು ತಡೆಯುವ ಪ್ರಯತ್ನ ಸರ್ಕಾರ ಮಾಡಿದೆ. ಸರ್ಕಾರಕ್ಕೆ ಕೊರೊನಾ ಸೃಷ್ಟಿಸಬಹುದಾ ನಷ್ಟದ ಬಗ್ಗೆ ಮುಂಚೆಯೇ ತಿಳಿದಿತ್ತು ಎಂದರು.

    ಕೊರೊನಾ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನಿಜಮುದ್ದೀನ್ ಯಾತ್ರಿಗಳು ಸೇರಿ ಯಾರೇ ಆಗಿರಲಿ ಕೊರೊನಾ ಲಕ್ಷಣಗಳು ಕಂಡು ಬಂದರೆ ಸ್ವಯಂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ. ಬಹುತೇಕ ಪ್ರಮಾಣದ ಜನರು ಬೆಂಬಲ ನೀಡಿದ್ದಾರೆ. ಆದರೆ ಅಲ್ಲಲ್ಲಿ ಜನರು ಮನೆಯಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಜನರು ಕೂಡಾ ಎಚ್ಚೆತುಕೊಂಡು ಮನೆಯಲ್ಲಿರಬೇಕು ತಮ್ಮಗಲ್ಲದಿದ್ದರು ಸಮಾಜದ ಮತ್ತು ದೇಶದ ಸ್ವಾಸ್ಥ್ಯಕ್ಕಾಗಿ ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

    ಭಾರತ ಲಾಕ್‍ಡೌನ್ ಆಗಿ ಹದಿನಾರು ದಿನ ಕಳೆದಿದೆ. ಆದರೆ ಪ್ರಮಾಣ ಇಳಕೆಯಾಗಿಲ್ಲ ಇದಕ್ಕೆ ಕೆಲ ಜನರ ನಿರ್ಲಕ್ಷ್ಯವೂ ಕಾರಣವಾಗಿದೆ. ಲಾಕ್‍ಡೌನ್ ಮುಂದುವರೆಸುವ ಬಗ್ಗೆ ನಾನೇನು ಹೇಳಲು ಸಾಧ್ಯವಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಚಿಂತನೆ ನಡೆಸಿದ್ದು ವಿಪಕ್ಷ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಎಲ್ಲ ಸಿಎಂಗಳ ಜೊತೆಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

    ವೈದ್ಯಕೀಯ ಸಾಮಾಗ್ರಿಗಳ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಸೇರಿ ಅಗತ್ಯ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತಿದೆ. ಆದರೆ ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡಿದೆ. ಕೇಂದ್ರ ಸರ್ಕಾರ ಸಾಮಾಗ್ರಿಗಳ ಪೂರೈಕೆ ಮಾಡಿರುವ ಅಂಕಿ ಅಂಶಗಳನ್ನು ನೀಡಲು ನಾವು ಸಿದ್ಧ ಎಂದು ಸವಾಲು ಹಾಕಿದರು.

  • ಯುಕೆ ಪ್ರಧಾನಿಗೆ ಕೊರೊನಾ ಪಾಸಿಟಿವ್- ವಿಡಿಯೋ ಕಾಲ್‍ನಲ್ಲಿ ಸರ್ಕಾರ ಚಾಲನೆ

    ಯುಕೆ ಪ್ರಧಾನಿಗೆ ಕೊರೊನಾ ಪಾಸಿಟಿವ್- ವಿಡಿಯೋ ಕಾಲ್‍ನಲ್ಲಿ ಸರ್ಕಾರ ಚಾಲನೆ

    ಲಂಡನ್: ಕೊರೊನಾ ಮಹಾಮಾರಿ ಯಾರನ್ನು ಬಿಡುವಂತೆ ಕಾಣುತ್ತಿಲ್ಲ. ಈಗ ಇಂಗ್ಲೆಂಡ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಅವರೇ ಪ್ರತ್ಯೇಕವಾಗಿ ಇರಲು ಆರಂಭಿಸಿದ್ದಾರೆ.

    ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಈ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ವಿಶ್ವದ ಅನೇಕ ನಗರಗಳು ಲಾಕ್‍ಡೌನ್ ಆಗಿದೆ. ಈಗ ಇಂಗ್ಲೆಂಡ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಕೂಡ ಈ ಮಹಾಮಾರಿ ಸೋಂಕಿಗೆ ತುತ್ತಾಗಿದ್ದು, ಮನೆಯಲ್ಲೇ ಕುಳಿತು ವಿಡಿಯೋ ಕಾಲ್ ಮೂಲಕ ಸರ್ಕಾರ ನಡೆಸುತ್ತಿದ್ದಾರೆ.

    ಬೋರಿಸ್ ಜಾನ್ಸನ್ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಬೋರಿಸ್ ಜಾನ್ಸನ್, ನನಗೆ ಸ್ವಲ್ಪ ಪ್ರಮಾಣದಲ್ಲಿ ಕೆಮ್ಮು ಮತ್ತು ದೇಹದ ಉಷ್ಣಾಂಶ ಜಾಸ್ತಿ ಇತ್ತು. ಆಗ ನಾನು ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ನನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ನಾನು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದೇನೆ. ಜೊತೆಗೆ ತಂತ್ರಜ್ಞಾನ ಬಳಸಿ ವಿಡಿಯೋ ಕಾಲ್ ಮೂಲಕ ಸರ್ಕಾರ ನಡೆಸುತ್ತಿದ್ದೇನೆ. ನಾವು ಕೊರೊನಾ ವೈರಸ್ ವಿರುದ್ಧ ಹೊರಾಡೋಣ. ಆದಷ್ಟೂ ಮನೆಯಲ್ಲೇ ಇರಿ ಎಂದು ತಿಳಿಸಿದ್ದಾರೆ.

    ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಈ ಕೊರೊನಾ ವೈರಸ್ ಇಂದು ವಿಶ್ವದ್ಯಾಂತ ಹರಡಿದೆ. ಈಗ ಈ ಕೊರೊನಾ ವೈರಸ್‍ಗೆ ವಿಶ್ವದಲ್ಲಿ 20,000 ಜನರು ಸಾವನ್ನಪ್ಪಿದ್ದರೆ, 5 ಲಕ್ಷ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಭಾರತದಲ್ಲಿ 20 ಜನರು ಸಾವನ್ನಪ್ಪಿದ್ದರೆ, ಸುಮಾರು 761 ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ.

  • ಕೊರೊನಾ ಭೀತಿ- ಗುರುವಾರ ರಾತ್ರಿ 8ಕ್ಕೆ ಪ್ರಧಾನಿ ಮೋದಿ ಭಾಷಣ

    ಕೊರೊನಾ ಭೀತಿ- ಗುರುವಾರ ರಾತ್ರಿ 8ಕ್ಕೆ ಪ್ರಧಾನಿ ಮೋದಿ ಭಾಷಣ

    ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಕೋಲಾಹಲ ಸೃಷ್ಟಿಸಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಹೆಚ್ಚಿದೆ. ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಲೇ ಇದ್ದರು. ಇದೀಗ ನೇರವಾಗಿ ಮಾತನಾಡಲು ಪ್ರಧಾನಿ ಮುಂದಾಗಿದ್ದಾರೆ.

    ಮಾರ್ಚ್ 19ರಂದು ರಾತ್ರಿ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ವೈರಸ್ ಹರಡುವಿಕೆ ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಮಾತನಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇಷ್ಟು ದಿನ ಟ್ವಟ್ಟರ್ ಮೂಲಕವೇ ಜಾಗೃತಿ ಮೂಡಿಸುತ್ತಿದ್ದ ಮೋದಿ, ಸಾಮೂಹಿಕ ಹೋಳಿಯಿಂದಲೂ ದೂರ ಉಳಿದಿದ್ದರು. ಈ ಮೂಲಕ ಒಂದೇ ಕಡೆ ಹೆಚ್ಚು ಜನ ಸೇರಬಾರದು ಎಂಬ ಸಂದೇಶ ಸಾರಿದ್ದರು.

    ಭಾರತದಲ್ಲಿ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ಲಡಾಖ್‍ನಲ್ಲಿ ಸ್ಕೌಟ್ ರೆಜಿಮೆಂಟ್‍ನ ಯೋಧರೊಬ್ಬರಿಗೆ ವೈರಸ್ ಸೋಕಿದೆ. ಯೋಧನ ಜೊತೆ ಸಂರ್ಕದಲ್ಲಿದ್ದ ಎಲ್ಲಾ ಯೋಧರಿಗೂ ಗೃಹನಿರ್ಬಂಧ ವಿಧಿಸಲಾಗಿದೆ. ಪಂಜಾಬ್‍ನ ಲೂಧಿಯಾನದಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದ 167 ಮಂದಿ ನಾಪತ್ತೆಯಾಗಿರೋದು ಆತಂಕಕ್ಕೆ ಕಾರಣ ಆಗಿದೆ. ಪ್ರಸಿದ್ದ ವೈಷ್ಣೋದೇವಿ ಯಾತ್ರೆ ಬಂದ್ ಮಾಡಲಾಗಿದೆ. ಕಾಶಿಯಲ್ಲಿ ಗಂಗಾರತಿ ರದ್ದು ಮಾಡಲಾಗಿದೆ. ತಿರುಪತಿ ತಿರುಮಲದ ಕಲ್ಯಾಣಿಯಲ್ಲಿ ಸ್ನಾನ ಮಾಡೋದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸೌದಿ ಅರೇಬಿಯಾಗೆ ಹೋಗಿ ಬಂದಿದ್ದ ಕೇಂದ್ರದ ಮಾಜಿ ಮಂತ್ರಿ ಸುರೇಶ್ ಪ್ರಭು ಸ್ವಯಂ ಗೃಹ ನಿರ್ಬಂಧ ವಿಧಿಸಿಕೊಂಡಿದ್ದಾರೆ. ನಟಿ ಆಲಿಯಾ ಭಟ್ ಕೂಡ ಮನೆಗೆ ಸೀಮಿತ ಆಗಿದ್ದಾರೆ.

    ದೇಶದ ಗಡಿಗಳನ್ನು ಮುಚ್ಚಲಾಗಿದೆ. ವಿದೇಶಗಳಿಂದ ಬಂದಿಳಿಯುವ ಮಂದಿಯಲ್ಲಿ ತೀವ್ರ ನಿಗಾವಹಿಸಲಾಗಿದೆ. ಪ್ರಮುಖ ನಗರಗಳು ಹೆಚ್ಚು ಕಡಿಮೆ ಸ್ತಬ್ಧವಾಗಿವೆ. ರಸ್ತೆಗೆ ಇಳಿಯುವ ಮಂದಿ ಮಾಸ್ಕ್ ಧರಿಸೋ ಪ್ರಮಾಣ ಹೆಚ್ಚುತ್ತಿದೆ. ಆದರೂ ಎಲ್ಲರ ನಿರೀಕ್ಷೆ ಮೀರಿ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ನಿನ್ನೆ 137 ಇದ್ದ ಸೋಂಕಿತರ ಸಂಖ್ಯೆ ಇಂದು 158ಕ್ಕೆ ಬಂದು ತಲುಪಿದೆ. ಅಂದ್ರೆ ನಿನ್ನೆಗೂ ಇವತ್ತಿಗೂ ವ್ಯತ್ಯಾಸ 20. ಇದು ಮುಂದಿನ ದಿನಗಳ ತೀವ್ರ ಸ್ವರೂಪ ಪಡೆಯುತ್ತಿದೆ. ಏಪ್ರಿಲ್ 15ರ ಹೊತ್ತಿಗೆ, ಈ ಸಂಖ್ಯೆ 10 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಐಸಿಎಂಆರ್‍ನ ವೈರಾಣು ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ಜಾಕೋಬ್ ಜಾನ್ ವ್ಯಕ್ತಪಡಿಸ್ತಾರೆ. ಜೊತೆಗೆ ಹಿಮಪಾತದಂತೆ ಕೊರೋನಾ ಹರಡುತ್ತಿದೆ, ದಿನ ಕಳೆದಂತೆ ಕಡಿಮೆ ಆಗೋದು ಕಷ್ಟ. ಮುಂದಿನ ದಿನಗಳಲ್ಲಿ ಭಾರತ ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

  • ಮಲೇಷ್ಯಾ ಪ್ರಧಾನಿ ರಾಜೀನಾಮೆ – ಭಾರತೀಯರ ಸಂಭ್ರಮಾಚರಣೆ

    ಮಲೇಷ್ಯಾ ಪ್ರಧಾನಿ ರಾಜೀನಾಮೆ – ಭಾರತೀಯರ ಸಂಭ್ರಮಾಚರಣೆ

    ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಮಲೇಷ್ಯಾ ಪ್ರಧಾನಿ 94 ವರ್ಷದ ಮಹತಿರ್ ಮೊಹಮ್ಮದ್ ಅವರು ಇಂದು ಮಧ್ಯಾಹ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ತ ಮಹತೀರ್ ರಾಜೀನಾಮೆ ನೀಡುತ್ತಿದ್ದಂತೆ ಇತ್ತ ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    ತಮ್ಮ ಪ್ರಧಾನಿ ಸ್ಥಾನಕ್ಕೆ ಮಾತ್ರವಲ್ಲದೆ ತಮ್ಮ ಪಕ್ಷಕ್ಕೂ ಕೂಡ ಮಹತಿರ್ ಅವರು ರಾಜೀನಾಮೆ ನೀಡಿದ್ದಾರೆ. ಮಧ್ಯಾಹ್ನ ಮಲೇಷ್ಯಾದ ರಾಜರಿಗೆ ಮಹತಿರ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆ ನೀಡಿದರೂ ಪ್ರಧಾನಿ ಆಯ್ಕೆ ಆಗುವವರೆಗೆ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

    ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತುಕೊಂಡಿದ್ದ ನಜೀಬ್ ರಝಾಕ್ ಚುನಾವಣೆಯಲ್ಲಿ ಸೋತು 2018ರಲ್ಲಿ ಮಹತಿರ್ ಪ್ರಧಾನಿ ಪಟ್ಟ ಏರಿದ್ದರು. ಸರ್ಕಾರ ರಚಿಸಲು ಮಹತಿರ್ ಅವರಿಗೆ ‘ಪಕಟನ್ ಹರಪನ್’ ಪಕ್ಷದ ಮುಖ್ಯಸ್ಥ ಅನ್ವರ್ ಇಬ್ರಾಹಿಂ ಸಹಾಯ ಮಾಡಿದ್ದರು. ಈಗ ಮೈತ್ರಿ ಹಳಸಿದ್ದು ರಾಜೀನಾಮೆ ನೀಡಿದ್ದಾರೆ.

    ಈ ಮಹತಿರ್, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂತೆಗೆದುಕೊಂಡ ನಂತರ ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಟೀಕಿಸಿದ್ದರು. ಪೌರತ್ವ ತಿದ್ದುಪಡಿ ಕಾಯಿದೆಯನ್ನೂ ಅವರು ಟೀಕಿಸಿದ್ದರು. 70 ವರ್ಷಗಳಿಂದ ಜನರು ಯಾವುದೇ ಸಮಸ್ಯೆಯಿಲ್ಲದ ಪ್ರಜೆಗಳಾಗಿ ಒಟ್ಟಾಗಿ ವಾಸಿಸುತ್ತಿರುವಾಗ ಇದನ್ನು ತರುವ ಅವಶ್ಯಕತೆ ಏನಿತ್ತು? ಈ ಕಾನೂನಿನಿಂದ ಜನ ಸಾಯುತ್ತಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು.

    https://twitter.com/AbhishekSR24/status/1231855395712335872

    ವಿಶ್ವಸಂಸ್ಥೆಯ ನಿರ್ಣಯದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ವಶ ಪಡಿಸಿಕೊಂಡಿದೆ ಎಂದು ಮಹತಿರ್ ದೂರಿದ್ದರು. ಭಾರತ ಪಾಕಿಸ್ತಾನ ಭಯೋತ್ಪಾದಕ ದೇಶ ಎಂದು ಕರೆಯುತ್ತಿದ್ದರೆ ಮಲೇಷ್ಯಾ ಪಾಕಿಸ್ತಾನದ ಆಪ್ತ ಸ್ನೇಹಿತನಾಗಿತ್ತು.

    ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟಾದ ಭಾರತ ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಆಮದು ನಿಲ್ಲಿಸಿದ್ದು ಮಲೇಷ್ಯಾಕ್ಕೆ ಭಾರೀ ಹೊಡೆತ ನೀಡಿತ್ತು. ವ್ಯಾಪಾರ ನಿಲ್ಲಿಸುವುದು ಯುದ್ಧಕ್ಕೆ ಸಮ. ಭಾರತದ ನಡೆ ಸರಿಯಲ್ಲ ಎಂದು ಮಹತಿರ್ ಟೀಕಿಸಿದ್ದರು.

    ಒಂದು ಕಡೆ ಕೊರೊನಾ ವೈರಸ್ ನಿಂದಾಗಿ ಚೀನಾ ಆಮದು ಕಡಿಮೆ ಮಾಡಿಕೊಂಡಿದ್ದರೆ ಇತ್ತ ಭಾರತ ವ್ಯಾಪಾರ ಸಮರ ಆರಂಭಿಸಿದ ತಾಳೆ ಎಣ್ಣೆ ದರ ಭಾರೀ ಕುಸಿತ ಕಂಡಿತ್ತು. ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತಿರುವ ಬೆನ್ನಲ್ಲೇ ಪ್ರಧಾನಿ ಮಹತಿರ್ ಈಗ ರಾಜೀನಾಮೆ ನೀಡಿದ್ದಾರೆ.

  • ಕೈ ನಾಯಕರಿಗೇಕೆ ಶಿವನ ಭಕ್ತರ ಬಗ್ಗೆ ಇಷ್ಟೊಂದು ಉರಿ?- ಪ್ರತಾಪ್ ಸಿಂಹ ಪ್ರಶ್ನೆ

    ಕೈ ನಾಯಕರಿಗೇಕೆ ಶಿವನ ಭಕ್ತರ ಬಗ್ಗೆ ಇಷ್ಟೊಂದು ಉರಿ?- ಪ್ರತಾಪ್ ಸಿಂಹ ಪ್ರಶ್ನೆ

    ಮೈಸೂರು: ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

    ಮಾಧ್ಯಮದವರ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್‍ಗೆ ಏಕೆ ಈ ಮಟ್ಟದ ಉರಿ ಅಂತ ನಮಗೆ ಗೊತ್ತಾಗುತ್ತಿಲ್ಲ. ಮಠಕ್ಕೆ ಹೋದ ಪ್ರಧಾನಿಯನ್ನ ಸಿದ್ದರಾಮಯ್ಯ ಅವರು ಟೀಕಿಸುತ್ತಾರೆ. ಪ್ರಧಾನಿ ವಿಭೂತಿಯನ್ನ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ವ್ಯಂಗ್ಯ ಮಾಡುತ್ತಾರೆ. ಕಾಲಭೈರವೇಶ್ವರ ಜಾಗದಲ್ಲಿ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡುತ್ತೀನಿ ಅಂತಾರೆ. ಇದನ್ನ ನೋಡಿದರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್‍ಗೆ ಮತ್ಸರ ಉಂಟಾಗಿರಬೇಕು ಎಂದು ಗರಂ ಆದರು. ಇದನ್ನೂ ಓದಿ: ಸಿದ್ದಗಂಗಾ ಪವಿತ್ರ ನೆಲ ನಿಮ್ಮನ್ನು ಕ್ಷಮಿಸದು: ಮೋದಿ ಭಾಷಣಕ್ಕೆ ಸಿದ್ದರಾಮಯ್ಯ ಕಿಡಿ

    ಯಾಕಾಗಿ ಇಷ್ಟು ಮತ್ಸರ, ಯಾಕೇ ಇಷ್ಟು ಉರಿ ಎಂದು ವ್ಯಂಗ್ಯದಿಂದ ಪ್ರಶ್ನಿಸಿದರು. ದೇಶದ ಜಲ್ವಂತ ಸಮಸ್ಯೆ ಬಗ್ಗೆ ಭವಿಷ್ಯದ ಪ್ರಜೆಗಳಿಗೆ ಪ್ರಧಾನಿ ತಿಳುವಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿದೆ. ಯಾಕೇ ಇಷ್ಟು ಉರಿದುಕೊಂಡು ಟ್ವೀಟ್ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರಿಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

     

  • ರಾಜ್ಯಕ್ಕೆ ಆಗಮಿಸ್ತಿರೋ ಪ್ರಧಾನಿ ಮೋದಿ ಊಟದ ಮೆನು

    ರಾಜ್ಯಕ್ಕೆ ಆಗಮಿಸ್ತಿರೋ ಪ್ರಧಾನಿ ಮೋದಿ ಊಟದ ಮೆನು

    ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿಗೆ ಬಂದಿಳಿಯುವ ಪ್ರಧಾನಿಗಳು ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಪ್ರಯಾಣ ಬೆಳಸಲಿದ್ದಾರೆ.

    ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗಳ ಆಹಾರ ಮೆನು ಸಹ ಈಗಾಗಲೇ ಸಿದ್ಧಗೊಂಡಿದೆ. ಸದಾ ಲವಲವಿಕೆಯಿಂದಿರುವ ಪ್ರಧಾನಿಗಳ ಜೀವನ ಶೈಲಿ ಹೇಗಿರುತ್ತೆ? ಆಹಾರ ಪದ್ಧತಿ ಏನು? ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿರುತ್ತದೆ. ಎರಡು ದಿನಗಳ ಕಾಲ ರಾಜ್ಯದಲ್ಲಿರುವ ಪ್ರಧಾನಿಗಳ ಊಟದ ಮೆನು ಕಾರ್ಡ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ- ಎಲ್ಲೆಲ್ಲಿ ಸಂಚಾರಕ್ಕೆ ತೊಂದ್ರೆಯಾಗುತ್ತೆ ಗೊತ್ತಾ?

    ಪ್ರಧಾನಿ ಮೋದಿ ಊಟದ ಮೆನು
    ಬೆಡ್ ಟೀ: ಶುಂಠಿ ಮಿಶ್ರಿತ ಟೀ, ಶುಗರ್ ಸೆಪರೇಟ್, ಮಾರಿ ಬಿಸ್ಕೆಟ್ಸ್
    ಟಿಫಿನ್ – ಪೋಹಾ/ ಉಪ್ಮಾ/ ಇಡ್ಲಿ ಸಾಂಬಾರ್/ ಕಾಕ್ರ/ ಬ್ರೆಡ್ ಬಟರ್ ಜೊತೆಗೆ ಮಿಕ್ಸಡ್ ಫ್ರೂಟ್ ಮತ್ತು ಟೀ
    ಮಧ್ಯಾಹ್ನದ ಊಟ – ವೆಜಿಟೇಬಲ್ ಸಲಾಡ್ಸ್, ಮಿಕ್ಸಡ್ ವೆಜಿಟೇಬಲ್ ಸೂಪ್, ಚಾಸ್, ತವಾದಿಂದ ಮಾಡಿದ ರೋಟಿ, ಬಿಳಿ ಅಥವ ಜೀರಾ ರೈಸ್, ದಾಲ್, ಎರಡು ಸಬ್ಜಿ (ಪಲ್ಯ) ಕಡಿಮೆ ಮಸಾಲೆ, ಎಣ್ಣೆ ಹಾಕಿರಬೇಕು, ಮೊಸರು, ನಿಂಬೆಹಣ್ಣಿನ ಪೀಸ್, ಸ್ವೀಟ್ ಮಿಕ್ಸಡ್ ಫ್ರೂಟ್ ಕಟ್ಸ್
    ಸಂಜೆ: ಸೆಪರೇಟ್ ಶುಗರ್ ಟೀ ಜೊತೆಗೆ ಮಾರಿ ಬಿಸ್ಕೆಟ್ಸ್
    ರಾತ್ರಿ: ಊಟ ವೆಜ್ ಕಿಚಡಿ/ ಗುಜರಾತಿ ಕರಿ, ರೋಟಿ, ದಾಲ್, ಅನ್ನ, ಎರಡು ಸಬ್ಜಿ, ಮೊಸರು ಮತ್ತು ಮಿಕ್ಸಡ್ ಫ್ರೂಟ್ಸ್

    ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ಪೂಜೆ ನೆರವೇರಿಸಲಿದ್ದಾರೆ. ಅಲ್ಲದೆ ಪ್ರಧಾನಿ ಭೇಟಿಕೊಟ್ಟ ಸ್ಮರಣಾರ್ಥವಾಗಿ ಗದ್ದುಗೆ ಪಕ್ಕದಲ್ಲಿ ಬಿಲ್ವ ಪತ್ರೆ ಗಿಡ ನೆಡಲಿದ್ದಾರೆ. ನಂತರ ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಗುರುವಾರ ಸಂಜೆ ಬೆಂಗಳೂರಿಗೆ ವಾಪಸ್ ಆಗುವ ಪ್ರಧಾನಿಗಳು ರಾಜಭವನದಲ್ಲಿ ಉಳಿದುಕೊಳ್ಳಲಿದ್ದಾರೆ. ಶುಕ್ರವಾರ ಜೆಕೆವಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

  • ಪೇಜಾವರ ಶ್ರೀ ರಾಜಕಾರಣಕ್ಕೆ ಹೋಗಿದ್ರೆ ಪ್ರಧಾನಿಯಾಗುತ್ತಿದ್ದರು: ರಾಜಗುರು ದ್ವಾರಕನಾಥ್

    ಪೇಜಾವರ ಶ್ರೀ ರಾಜಕಾರಣಕ್ಕೆ ಹೋಗಿದ್ರೆ ಪ್ರಧಾನಿಯಾಗುತ್ತಿದ್ದರು: ರಾಜಗುರು ದ್ವಾರಕನಾಥ್

    ಕಲಬುರಗಿ: ಯತಿಶ್ರೇಷ್ಠರಲ್ಲಿ ಒಬ್ಬರಾದ ಉಡುಪಿಯ ಪೇಜಾವರ ಶ್ರೀಗಳು ಮರಳಿ ನಾರಾಯಣನ ಸನ್ನಿಧಿ ಸೇರಿದ್ದಾರೆ. ಇದಕ್ಕೆ ದುಃಖ ಪಡುವುದೇನಿಲ್ಲ ಎಂದು ಖ್ಯಾತ ಜ್ಯೋತಿಷಿ, ರಾಜಗುರು ದ್ವಾರಕನಾಥ್ ಕಲಬುರಗಿಯಲ್ಲಿ ಹೇಳಿದ್ದಾರೆ.

    ಶ್ರೀಗಳಿಗೆ ನಾನು ಹಲವು ಬಾರಿ ಭೇಟಿಯಾಗಿ ಮಾತನಾಡಿಸಿದ್ದು ಈ ಹಿಂದೆ ಶ್ರೀಗಳು ನಮ್ಮ ಮನೆಗೆ ಬಂದಾಗ ನೀವು ಸನ್ಯಾಸ ಬಿಟ್ಟು ರಾಜಕಾರಣಕ್ಕೆ ಹೋಗಿದ್ದರೆ ಪ್ರಧಾನಿಯಾಗಬಹುದು ಎಂದು ಹೇಳಿದ್ದೆ. ಮನುಷ್ಯ ನೋವಿಗೆ ಜಾತಿ ಬೇಧ ದೂರ ಇಟ್ಟು ಸ್ಪಂದಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಮತ್ತೆ ಶ್ರೀಗಳ ಚೇತನ ಭಾರತದಲ್ಲಿ ಮೂಡಲಿ. ಅವರು ಈಗ ಕಾಣದಿದ್ದರೂ ಅವರ ಸ್ಮರಣೆ ಯಾವತ್ತಿಗೂ ಇರಲಿ. ಅವರ ಆಶೀರ್ವಾದ ಭಾರತ ಮತ್ತು ಕರ್ನಾಟಕ ಸಾಮ್ರಾಜ್ಯದ ಮೇಲಿ ಸದಾ ಇರಲಿ. ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪ ಮೇಲೆ ಇರಲಿ ಎಂದು ದ್ವಾರಕನಾಥ್ ಹೇಳಿದರು.