Tag: prime minister

  • ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ

    ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯ ಪ್ರವಾಸ ಏಪ್ರಿಲ್ 5ರಂದು ನಿಗದಿಯಾಗಿತ್ತು. ಇದೀಗ ರಾಜ್ಯ ಪ್ರವಾಸ ರದ್ದುಗೊಂಡಿದೆ.

    ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ರಾಜ್ಯ ಪ್ರವಾಸಕ್ಕೆ ದಿನ ನಿಗದಿಯಾಗಿತ್ತು. ಇದೀಗ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಮೋದಿ ರಾಜ್ಯ ಭೇಟಿ ರದ್ದುಗೊಳಿಸಲಾಗಿದೆ ಎಂದು ಪ್ರಧಾನಿ ಕಚೇರಿಯಿಂದ ಕರ್ನಾಟಕ ಸರ್ಕಾರಕ್ಕೆ ಮಾಹಿತಿ ರವಾನೆಯಾಗಿದೆ. ಇದನ್ನೂ ಓದಿ: ಏಪ್ರಿಲ್‍ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಇಸ್ರೇಲ್ ಪ್ರಧಾನಿ

    ಇಸ್ರೇಲ್ ಪ್ರಧಾನಿ ಬೆನೆಟ್ ಜೊತೆಗೆ ಮೋದಿ, ಏಪ್ರಿಲ್ 5 ರಂದು ಕರ್ನಾಟಕದಲ್ಲಿ 3 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಗಿತ್ತು. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಲೋಕಾರ್ಪಣೆ, ಟಾಟಾ ಸಹಭಾಗಿತ್ವದಲ್ಲಿ ಮೇಲ್ದರ್ಜೆಗೇರಿಸಿದ 150 ಐಟಿಐ ಉದ್ಘಾಟನೆ ಮತ್ತು ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಶಂಕು ಸ್ಥಾಪನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬೇಕಿತ್ತು. ಇದೀಗ ಇದು ಮುಂದೂಡಲಾಗಿದೆ. ಇದನ್ನೂ ಓದಿ: ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ – ಬಿಎಸ್‍ವೈ ವಿರುದ್ಧ ಎಸಿಬಿಗೆ ದೂರು

  • ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

    ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

    ಹು ಚರ್ಚಿತ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಪ್ರಧಾನಿಯನ್ನು ಭೇಟಿ ಮಾಡಿದ ಬಗ್ಗೆ ನಿರ್ದೇಶಕ ವಿಕೇಕ್ ಅಗ್ನಿಹೋತ್ರಿ ಖಚಿತ ಪಡಿಸಿ, ಪ್ರಧಾನಿಗಳು ಸಿನಿಮಾ ಬಗ್ಗೆ ಉತ್ತಮ ಮಾತುಗಳನ್ನು ಆಡಿದ್ದಾರೆ ಎಂದು ಹೇಳಿದ್ದರು. ಇದೀಗ ಸ್ವತಃ ಪ್ರಧಾನಿಯವರೇ ಸಿನಿಮಾದ ಕುರಿತು ಮಾತನಾಡಿದ್ದಾರೆ.

    ಇಂದು ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ಸಿನಿಮಾ ಕುರಿತು ನರೇಂದ್ರ ಮೋದಿ ಮಾತನಾಡಿದ್ದಾರೆ. ಎಲ್ಲ ಸಂಸದರೂ ಈ ಸಿನಿಮಾವನ್ನು ನೋಡಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಇದೇ ಸಂದರ್ಭದಲ್ಲಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತೂ ಹೇಳಿದ್ದಾರೆ. ಇಂತಹ ಸಿನಿಮಾಗಳು ಹೆಚ್ಚೆಚ್ಚು ನಿರ್ಮಾಣಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಸದ್ಯ ಕಾಶ್ಮೀರ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡಂತೆ ತಣ್ಣಗಾಗಿದೆ. ರಾಜಕೀಯ ಮೇಲಾಟಗಳು ಗುದುಮುರುಗಿ ಕಟ್ಟಿಕೊಂಡು ಮೂಲೆ ಗುಂಪಾಗುತ್ತಿವೆ. ಇಂತಹ ಹೊತ್ತಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಈಗ ಸಿನಿಮಾ ಬಗ್ಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಜತೆಗೆ ವಿರೋಧ ಕೂಡ ವ್ಯಕ್ತವಾಗಿದೆ.

  • ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ನವದೆಹಲಿ: ಉಕ್ರೇನ್‌ನಲ್ಲಿ ಭಾರತೀಯ ಪ್ರಜೆಗಳು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರುವ ಪ್ರಯತ್ನಗಳನ್ನು ನಿಲ್ಲಿಸುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

    ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಅಭಿಯಾನವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಉದಯೋನ್ಮುಖ ಶಕ್ತಿಯಾಗಿ ಬೆಳೆದಿದೆ. ಉಕ್ರೇನ್‌ನಿಂದ ಭಾರತೀಯರನ್ನು ವಾಪಸ್‌ ಕರೆತರುವ ಸಾಮರ್ಥ್ಯವೂ ನಮ್ಮ ಸರ್ಕಾರಕ್ಕಿದೆ. ಈ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಸಶಸ್ತ್ರ ಪಡೆಗಳ ಶೌರ್ಯ ಮತ್ತು ಮೇಕ್ ಇನ್ ಇಂಡಿಯಾವನ್ನು ಪ್ರಶ್ನಿಸುವವರು ದೇಶವನ್ನು ಬಲಿಷ್ಠಗೊಳಿಸಲಾರರು ಎಂದು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಚುನಾವಣೆಗಳ ಆಕ್ರಮಣಕಾರಿ ಪ್ರಚಾರದ ನಡುವೆ, ಉಕ್ರೇನ್ ಬಿಕ್ಕಟ್ಟು ಮತ್ತು ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಅವಸ್ಥೆಯು ಸರ್ಕಾರದ ಮೇಲೆ ವಿರೋಧದ ಅಲೆಯನ್ನು ಹುಟ್ಟುಹಾಕಿದೆ. ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಪ್ರಧಾನಿ ಮೋದಿ ನೇತೃತ್ವದಲ್ಲಿ ಈವರೆಗೂ ನಾಲ್ಕು ಸಭೆಗಳು ನಡೆದಿವೆ. ಇದನ್ನೂ ಓದಿ: ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಉಕ್ರೇನ್‌ನಲ್ಲಿ ಮಂಗಳವಾರ ರಷ್ಯಾ ಸೇನಾ ಪಡೆ ನಡೆಸಿದ ಶೆಲ್‌ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಬಲಿಯಾಗಿದ್ದಾರೆ. ಈ ಘಟನೆಯಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಒತ್ತಡ ಹೆಚ್ಚಾಗಿದೆ.

  • ಕೃಷಿ ಕ್ಷೇತ್ರದಲ್ಲಿ ಕ್ರಾಂತಿ – 100 ʼಕಿಸಾನ್‌ ಡ್ರೋನ್‌ʼಗಳಿಗೆ ಪ್ರಧಾನಿ ಮೋದಿ ಚಾಲನೆ

    ಕೃಷಿ ಕ್ಷೇತ್ರದಲ್ಲಿ ಕ್ರಾಂತಿ – 100 ʼಕಿಸಾನ್‌ ಡ್ರೋನ್‌ʼಗಳಿಗೆ ಪ್ರಧಾನಿ ಮೋದಿ ಚಾಲನೆ

    ನವದೆಹಲಿ: ಬೆಳೆ ಮೌಲ್ಯಮಾಪನ, ಭೂ ದಾಖಲೆಗಳು ಮತ್ತು ಕೀಟನಾಶಕಗಳ ಸಿಂಪಡಣೆಗಾಗಿ ಬಳಕೆ ಮಾಡುವ ಉದ್ದೇಶದಿಂದ 100 ʼಕಿಸಾನ್‌ ಡ್ರೋನ್‌ʼಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

    ಡ್ರೋನ್‌ ವಲಯದಲ್ಲಿ ಹೆಚ್ಚುತ್ತಿರುವ ಭಾರತದ ಸಾಮರ್ಥ್ಯವು ಜಗತ್ತಿಗೆ ಹೊಸ ನಾಯಕತ್ವವನ್ನು ನೀಡುತ್ತದೆ. ಇದು ರೈತರಿಗೆ ಅತ್ಯಂತ ನವೀನ ಮತ್ತು ಉತ್ತೇಜಕ ಉಪಕ್ರಮವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕುಟುಂಬ ಮಣಿಪುರವನ್ನು ಎಟಿಎಂ ಆಗಿ ಬಳಸಿದೆ: ಸ್ಮೃತಿ ಇರಾನಿ

    ಭಾರತದಲ್ಲಿ ಡ್ರೋನ್‌ ಸ್ಟಾರ್ಟ್‌ಅಪ್‌ಗಳ ಹೊಸ ಸಂಸ್ಕೃತಿ ಸಿದ್ಧವಾಗುತ್ತಿದೆ. ಈ ಸಂಖ್ಯೆ ಈಗ 200ಕ್ಕಿಂತ ಬೃಹತ್‌ ಪ್ರಮಾಣದಲ್ಲಿದ್ದು, ಉದ್ಯೋಗಾವಕಾಶಗಳ ಉತ್ಪಾದನೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರ.

    ನೀತಿಯು ಸರಿಯಾಗಿದ್ದರೆ ದೇಶವು ಎಷ್ಟು ಬೆಳೆಯಬಲ್ಲದು ಎಂಬುದಕ್ಕೆ ಉದಾಹರಣೆಯಾಗಿದೆ. ಕೆಲವು ವರ್ಷಗಳ ಹಿಂದೆ ಡ್ರೋನ್‌ಗಳು ಹೆಚ್ಚಾಗಿ ರಕ್ಷಣಾ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದವು. ಈಗ ಅದು ಬದಲಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.

    21ನೇ ಶತಮಾನದಲ್ಲಿ ಆಧುನಿಕ ಕೃಷಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಹೊಸ ಅಧ್ಯಾಯವಾಗಿದ್ದು, ಡ್ರೋನ್‌ ವಲಯದ ಅಭಿವೃದ್ಧಿಯಲ್ಲಿ ಮೈಲುಗಲ್ಲಾಗಿದೆ. ಡ್ರೋನ್‌ ವಲಯವನ್ನು ತೆರೆಯುವ ಬಗ್ಗೆ ನಮ್ಮ ಸರ್ಕಾರವು ಆತಂಕಗಳಗೆ ಸಮಯ ವ್ಯರ್ಥಮಾಡಲಿಲ್ಲ. ನಮ್ಮ ಸರ್ಕಾರ ಬಜೆಟ್‌ ಮತ್ತು ನೀತಿ ಕ್ರಮಗಳಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಆದ್ಯತೆ ನೀಡಿದೆ ವಿವರಿಸಿದ್ದಾರೆ. ಇದನ್ನೂ ಓದಿ: ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲು

    ಕಿಸಾನ್‌ ಡ್ರೋನ್‌ಗಳು ಹೊಸ ಕ್ರಾಂತಿಗೆ ನಾಂದಿ ಹಾಡಿವೆ. ರೈತರು ತಮ್ಮ ಉತ್ಪನ್ನಗಳಾದ ಉತ್ಪನ್ನಗಳಾದ ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳನ್ನು ಕಡಿಮೆ ಸಮಯದಲ್ಲಿ ಮಾರುಕಟ್ಟೆಗಳಿಗೆ ಆಗಿಸುವ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳನ್ನು ಬಳಸಬಹುದು. ಇದರಿಂದ ಆದಾಯವೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಬಜೆಟ್‌ 2022ರಲ್ಲಿ ಕಿಸಾನ್‌ ಡ್ರೋನ್‌ ಬಳಕೆ ಬಗ್ಗೆ ತಿಳಿಸಲಾಗಿತ್ತು. ‘ಬೆಳೆ ಮೌಲ್ಯಮಾಪನ, ಭೂ ದಾಖಲೆಗಳು, ಕೀಟನಾಶಕಗಳ ಸಿಂಪಡಣೆಗಾಗಿ ಕಿಸಾನ್ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಇದರಿಂದ ಕೃಷಿ ವಲಯದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುವ ನಿರೀಕ್ಷೆ ಇದೆ’ ಎಂದು ಅವರು ಬಜೆಟ್ ಭಾಷಣದ ವೇಳೆ ತಿಳಿಸಿದ್ದರು. ಇದನ್ನೂ ಓದಿ: ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ – ಅಂಜುಮನ್ ಸಂಸ್ಥೆಯಿಂದ ಮನವಿ

  • ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ: ಓವೈಸಿ

    ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ: ಓವೈಸಿ

    ಲಕ್ನೋ: ಹಿಜಬ್ ಧರಿಸಿದ ಮಹಿಳೆಯೇ ದೇಶದಲ್ಲಿ ಮುಂದೊಂದು ದಿನ ಪ್ರಧಾನಿ ಸ್ಥಾನಕ್ಕೆ ಏರುತ್ತಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಭವಿಷ್ಯ ನುಡಿದರು.

    ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವೀಡಿಯೋ ಮಾಡಿರುವ ಅವರು, ಹಿಜಬ್‍ನ್ನು ಧರಿಸಿ ಕಾಲೇಜಿಗೂ ಹೋಗುತ್ತಾರೆ. ಹಿಜಬ್ ಧರಿಸಿಯೇ ಡಾಕ್ಟರ್, ಜಿಲ್ಲಾಧಿಕಾರಿಯಂತಹ ವಿವಿಧ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ. ಜೊತೆಗೆ ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ಪ್ರಧಾನಿಯಾಗುತ್ತಾರೆ. ಇದನ್ನು ನೋಡಲು ನಾನು ಬದುಕಿರುತ್ತೇನೋ, ಇಲ್ಲವೋ ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನಾನು ಹೇಳಿದ ಮಾತು ಒಂದು ದಿನ ಸತ್ಯವಾಗುತ್ತದೆ ಎಂದರು.

    ಹೆಣ್ಣು ಮಕ್ಕಳು ಹಿಜಬ್ ಧರಿಸಲು ನಿರ್ಧರಿಸಿ ಅದನ್ನು ಪೋಷಕರಿಗೆ ತಿಳಿಸಿದರೆ ಅದನ್ನು ಎಲ್ಲಾ ಪೋಷಕರು ಬೆಂಬಲಿಸುತ್ತಾರೆ. ಆಗ ಅದನ್ನು ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಈ ವೀಡಿಯೋ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದ್ದಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಿಡಿಕಾರಿದ ಅವರು, ಮೋದಿ ಅವರು ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ, ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಹಾಗೇ ಮಾತನಾಡುವಾಗಲೆಲ್ಲಾ ತ್ರಿವಳಿ ತಲಾಖ್ ಕಾನೂನನ್ನು ಉಲ್ಲೇಖಿಸುತ್ತಾರೆ. ಆದರೆ ಈಗ ಹಿಜಬ್ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಬ್ ಮುಸ್ಲಿಂ ಹುಡುಗಿಯರ ಹಕ್ಕು. ಆದರೆ ಅದನ್ನು ಧರಿಸಲು ನಿರಾಕರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಇದೇ ವೇಳೆ ಹಿಜಬ್ ಹಕ್ಕು ಪ್ರತಿಪಾದಿಸುತ್ತಿರುವ ಕರ್ನಾಟಕದ ಮಹಿಳೆಯರಿಗೆ ನನ್ನ ಸಲಾಂ ಎಂದು ಹೇಳಿದರು. ಅಷ್ಟೇ ಅಲ್ಲ, ಕೇಸರಿ ಶಾಲು ಧರಿಸಿ ಜೈಶ್ರೀರಾಮ್ ಎಂದು ಕೂಗಿದವರಿಗೆ ಪ್ರತಿಯಾಗಿ, ಅಲ್ಲಾ ಹು ಅಕ್ಬರ್ ಎಂದು ಕೂಗಿದ ಮಂಡ್ಯದ ಮುಸ್ಕಾನ್ ಖಾನ್‍ರನ್ನೂ ಶ್ಲಾಘಿಸಿದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ಫೇಮಸ್ ಸಾಂಗ್ ಹಾಡಿ ಗೌರವ ಸಲ್ಲಿಸಿದ ಸಲ್ಮಾನ್ – ವೀಡಿಯೋ ವೈರಲ್

  • ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ

    ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ

    ನವದೆಹಲಿ: ಈ ಬಾರಿಯ ಬಜೆಟ್‌ನ ಮಹತ್ವಪೂರ್ಣ ಘಟ್ಟವೆಂದರೆ ಬಡವರ ಕಲ್ಯಾಣ. ಪ್ರತಿಯೊಬ್ಬ ಬಡವನಲ್ಲೂ ಸುಸಜ್ಜಿತ ಮನೆ ಇರಬೇಕು, ಅದರಲ್ಲಿ ನಲ್ಲಿಯ ವ್ಯವಸ್ಥೆ, ಶೌಚಾಲಯ, ಗ್ಯಾಸ್ ವ್ಯವಸ್ಥೆ ಈ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ಗಮನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಬಜೆಟ್ ಬಗೆಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕತೆ ಬಂದಿದೆ. ಟೆಕ್ನಾಲಜಿ, ಕಿಸಾನ್ ಡ್ರೋನ್, ವಂದೇ ಭಾರತ್ ರೈಲು, ಡಿಜಿಟಲ್ ಕರೆನ್ಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಯುನಿಟ್‌ಗಳು, ಡಿಜಿಟಲ್ ಪರಿಸರ ವ್ಯವಸ್ಥೆ ಬರಲಿದೆ. ಯುವ, ಮಧ್ಯಮ, ಬಡವರು, ದಲಿತರು, ಎನ್ನುವ ತಾರತಮ್ಯ ಇಲ್ಲದೇ ಎಲ್ಲರಿಗೂ ಈ ಸೇವೆ ಲಭ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.

    ಆಧುನಿಕ ಇಂಟರ್‌ನೆಟ್ ಸಂಪರ್ಕದ ಬಗೆಯೂ ಅಷ್ಟೇ ಮಹತ್ವ ನೀಡಲಾಗಿದೆ. ದೇಶದ ಎತ್ತರದ ಪ್ರದೇಶಗಳಾದ ಹಿಮಾಲಯ, ಜಮ್ಮು ಕಾಶ್ಮೀರಗಳಲ್ಲಿ ಜನಜೀವನ ಸರಳವಾಗಬೇಕು. ಆ ಪ್ರದೇಶಗಳಿಂದ ಜನರು ಪಲಾಯನಗೈಯುವಂತಾಗಬಾರದು. ಇವುಗಳನ್ನು ಗಮನದಲ್ಲಿರಿಸಿಕೊಂಡೇ ಹೊಸ ಘೋಷಣೆಗಳನ್ನು ಮಾಡಲಾಗಿದೆ. ಭಾರತದ ಎತ್ತರದ ಪ್ರದೇಶಗಳಿಗಾಗಿ ಪರ್ವತ್ ಮಾಲಾ ಯೋಜನೆ ತರಲಾಗಿದೆ. ಇದು ಸಾರಿಗೆ ಹಾಗೂ ಸಂಪರ್ಕದ ಆಧುನಿಕ ವ್ಯವಸ್ಥೆಯ ನಿರ್ಮಾಣ ಮಾಡುತ್ತದೆ. ಇದರಿಂದ ಗಡಿ ಪ್ರದೇಶದ ಜನರಿಗೂ ದೊಡ್ಡ ಮಟ್ಟದ ಬಲ ದೊರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?

    ಭಾರತದ ಕೋಟಿ ಕೋಟಿ ಜನರ ಆಶಯ ಗಂಗೆಯ ಶುದ್ಧೀಕರಣ. ಇದರೊಂದಿಗೆ ರೈತರ ಕಲ್ಯಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆ ಇಡಲಾಗಿದೆ. ಗಂಗಾ ನದಿ ತೀರ ಪ್ರದೇಶಗಳಲ್ಲಿ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಗಂಗೆ ನೀರಿಗೆ ರಾಸಾಯನಿಕ ಬೆರಕೆಯಾಗುವುದನ್ನು ತಡೆಯಲು ಸಹಾಯವಾಗುತ್ತದೆ ಎಂದರು.

    ಹೊಸ ಕೈಗಾರಿಕೆಯ ಸ್ಟಾರ್ಟ್ಪ್‌ಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ಸಹಾಯ ನಿಧಿ ನೀಡಲಾಗುತ್ತಿದೆ. ಆಹಾರ ಸಂಸ್ಕರಣೆ ಉದ್ಯೋಗಕ್ಕೆ ಹೊಸ ಪ್ಯಾಕೇಜ್ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಲಾಭ ದೊರಕಿಸಲು ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ. ರೈತರ ಖಾತೆಗಳಿಗೆ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

    ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಹಾಗೂ ಅವರ ಸಂಪೂರ್ಣ ತಂಡಕ್ಕೆ ಜನ ಸ್ನೇಹಿ ಹಾಗೂ ಪ್ರಗತಿಶೀಲ ಬಜೆಟ್ ಮಂಡನೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತುಂಬು ಹೃದಯದ ಧನ್ಯವಾದ ತಿಳಿಸಿದರು.

  • ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    ಬೆಂಗಳೂರು: ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷನಾಗಿ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕರಿಸಿದ್ದು, ಈ ವೇಳೆ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡುವಾಗ ‘ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ’ ಎಂದಿದ್ದರು. ಈ ಹೇಳಿಕೆಗೆ ವ್ಯಂಗ್ಯವಾಗಿ ಬಿಜೆಪಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದೆ.

    ಪಬ್ಲಿಕ್ ಟಿವಿಗೆ ನಲಪಾಡ್ ಕೊಟ್ಟ ಹೇಳಿಕೆಯನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ, ಅತ್ತು ಕರೆದು ಔತಣ ಮಾಡಿಸಿಕೊಂಡು ಎಂಥ ಮಾತಾಡಿಬಿಟ್ಟಿರಿ ಮಿಸ್ಟರ್ ನಲಪಾಡ್. ಮೊದಲು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡೋಕೆ ಸಿದ್ದರಾಮಯ್ಯ ಅವರು ಬಿಡುತ್ತಾರೆಯೇ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಿ. ಆಮೇಲೆ ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಿ ಎಂದು ಟೀಕಿಸಿದೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ: ನಲಪಾಡ್ ಅಧಿಕಾರ ಸ್ವೀಕಾರ

    ಅಧಿಕಾರ ಸ್ವೀಕಾರ ಮಾಡಿದ ದಿನವಾದರೂ ಸ್ವಲ್ಪ ಒಳ್ಳೆಯ ಯೋಚನೆ ಮಾಡಿ. ನೀವು ಪ್ರಸ್ತಾಪ ಮಾಡಿದ ವಿಚಾರ ಕೈ ಗೂಡುವುದಿಲ್ಲ ಎಂದು ಅರ್ಥವಾಗಿ ಎಂತೆಂತವರೋ ಮೂಲೆಗುಂಪಾಗಿದ್ದಾರೆ. ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸುವುದು ಮರಳುಗಾಡಿನಲ್ಲಿ ಮರಿಚೀಕೆಯನ್ನು ಹಿಡಿದಂತೆ. ಎಂದಿಗೂ ಕೈಗೂಡದು ಎಂದು ಬರೆದು ಟ್ವೀಟ್ ಮಾಡಿದೆ.

    ನಲಪಾಡ್ ಇಂದು ಅಧಿಕಾರ ಸ್ವೀಕರಿಸಿ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಗುರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ಕಚೇರಿ ಪೂಜೆ ನೆರವೇರಿಸಿದರು. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಫೆಬ್ರವರಿ 10 ರಂದು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಎಲ್ಲ ಯುವಕರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. 2018ರಲ್ಲಿ ಆದ ತಪ್ಪು ಮತ್ತೆ ಆಗುವುದಿಲ್ಲ. ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ ಎಂದು ಹೇಳಿದ್ದರು. ಇದನ್ನೂ ಓದಿ: ನಾನು ಹಿಂದೂತ್ವವಾದಿ, ನನ್ನ ಏಳಿಗೆ ಸಹಿಸದೇ ಕೆಲವರು ಈ ರೀತಿ ಮಾಡಿದ್ದಾರೆ: ಶಾಸಕ ಬೆಲ್ಲದ

  • ಕೊರೊನಾದಿಂದ ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ

    ಕೊರೊನಾದಿಂದ ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ

    ವೆಲ್ಲಿಂಗ್ಟನ್: ಕೊರೊನಾ ಸೋಂಕಿನ ಕಠಿಣ ನಿಯಮ ಪಾಲನೆಗಾಗಿ ನ್ಯೂಜಿಲೆಂಡ್ ಪ್ರಧಾನಿ ಸ್ವಂತ ಮದುವೆಯನ್ನೇ ರದ್ದುಗೊಳಿಸುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

    ನ್ಯೂಜಿಲೆಂಡ್‍ನ ಪ್ರಧಾನಿ ಜೆಸಿಂದಾ ಆರ್ಡೆನ್ ಅವರು ದೀರ್ಘಕಾಲದ ಜೊತೆಗಾರ ಕ್ಲಾರ್ಕ್ ಗೆಫಾರ್ಡ್ ಜೊತೆ ಆರ್ಡೆನ್ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಈ ವಿವಾಹವನ್ನು ಮುಂದಿನ ವಾರಗಳಲ್ಲಿ ನಿಶ್ಚಯಿಸಲಾಗಿತ್ತು. ಆದರೆ ದಿನಾಂಕವನ್ನು ಘೋಷಿಸಲಾಗಿರಲಿಲ್ಲ. ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೆಸಿಂದಾ ಆರ್ಡೆನ್ ಅವರು ಸ್ವಂತ ಮದುವೆಯನ್ನೇ ರದ್ದು ಗೊಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್‌ – ಗೋವಾ ಮಾಜಿ ಸಿಎಂ ಪರ್ಸೇಕರ್‌ ರಾಜೀನಾಮೆ

    ಕೋವಿಡ್ ಕಠಿಣ ನಿಯಮಗಳ ಹೇರಿಕೆಯಿಂದ ತಮ್ಮ ಮದುವೆ ರದ್ದುಗೊಂಡ ಬಗೆಗಿನ ಪ್ರಶ್ನೆಗೆ ಜೀವನ ಎಂದರೆ ಹೀಗೆ ಇರುತ್ತದೆ. ನನ್ನ ವಿವಾಹವು ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ ಎಂದು ಜೆಸಿಂದಾ ಉತ್ತರಿಸಿದ್ದಾರೆ. ಇದನ್ನೂ ಓದಿ:   UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ಸೋಂಕಿನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದ ನ್ಯೂಜಿಲೆಂಡ್ ಸಾವಿರಾರು ಮಂದಿಯಲ್ಲಿ ನಾನೂ ಒಬ್ಬಳು. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪ್ರೀತಿ ಪಾತ್ರರ ಜೊತೆಗೆ ಇರಲಾಗದೆ ಇರುವ ಸ್ಥಿತಿ ಕರುಳು ಹಿಂಡುವಂತದ್ದಾಗಿದೆ ಎಂದು ಸೋಂಕು ಹಬ್ಬಿರುವ ಕುರಿತಾಗಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿ, ರೋಡ್ ಶೋ ಗಳಿಗೆ ಜ.31ರ ವರೆಗೆ ನಿರ್ಬಂಧ

    ನ್ಯೂಜಿಲೆಂಡ್‍ನಲ್ಲಿ ಕೋವಿಡ್ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ವಿವಾಹ ಸಮಾರಂಭಕ್ಕೆ ಪೂರ್ಣವಾಗಿ ಲಸಿಕೆ ಪಡೆದ 100 ಮಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ನ್ಯೂಜಿಲೆಂಡ್‍ನಲ್ಲಿ ಇದುವರೆಗೆ 15,104 ಕೋವಿಡ್ 19 ಪ್ರಕರಣಗಳು ವರದಿ ಆಗಿವೆ. 52 ಮಂದಿ ಕೋವಿಡ್ ಕಾರಣದಿಂದ ಮೃತರಾಗಿದ್ದಾರೆ. ಕಳೆದ 2 ವರ್ಷಗಳಿಂದ ಗಡಿಯಲ್ಲಿ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ.

  • ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

    ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

    – ಪ್ರಧಾನಿ ಭದ್ರತೆ ರಾಷ್ಟ್ರೀಯ ಭದ್ರತೆಯ ವಿಚಾರ
    – ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾದ ವಿಶೇಷ ಪ್ರಕರಣ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಪ್ರಯಾಣ ಮಾಹಿತಿಯನ್ನು ಸಂರಕ್ಷಿಸಿಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟರ್ ಜನರಲ್‍ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮೋದಿ ಪ್ರಯಾಣದ ವೇಳೆಯಲ್ಲಾದ ಭದ್ರತಾ ವೈಫಲ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹಿಸಿ ಲಾಯರ್ಸ್ ವಾಯ್ಸ್ ಅಸೊಶಿಯೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಈ ಸೂಚನೆ ನೀಡಿದೆ.

    ಇಂದು ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಮಣಿಂದರ್ ಸಿಂಗ್, ಎಸ್‍ಪಿಜಿ ನಿಯಮಗಳ ಪ್ರಕಾರ ಪಿಎಂ ಭದ್ರತೆ ನಿರಾಕರಿಸುವಂತಿಲ್ಲ, ಪ್ರಧಾನಿ ಭದ್ರತೆ ಎನ್ನುವುದು ಕೇಂದ್ರ ಅಥವಾ ರಾಜ್ಯದ ವಿಚಾರವಲ್ಲ, ಇದು ರಾಷ್ಟ್ರೀಯ ಭದ್ರತೆಯ ವಿಚಾರ ಇದು ಸಂಸದೀಯ ವ್ಯಾಪ್ತಿಗೆ ಬರಲಿದೆ. ಪಿಎಂ ಕಾನ್ವೆ ನಡು ದಾರಿಯಲ್ಲಿ ನಿಂತಿದ್ದು ರಾಜ್ಯವೊಂದರ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ, ಇದು ಬಹುದೊಡ್ಡ ಭದ್ರತಾ ವೈಫಲ್ಯವಾಗಿದೆ. ಈ ವೈಫಲ್ಯವನ್ನು ವೃತ್ತಿಪರವಾಗಿ ತನಿಖೆ ನಡೆಸಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಈ ತನಿಖೆ ಸಾಧ್ಯವಿಲ್ಲ ಅಲ್ಲದೇ ಇದನ್ನು ತನಿಖೆ ನಡೆಸಲು ರಾಜ್ಯಕ್ಕೆ ಯಾವುದೇ ವಿಶೇಷ ಅಧಿಕಾರವಿಲ್ಲ ಎಂದರು. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ದಲಿತ ಎಂಬ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಮಾಡ್ತಿದೆ: ಅಶೋಕ್ ಗೆಹ್ಲೋಟ್

    ರಾಜ್ಯ ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರಚಿಸಿದೆ. ಸರ್ಕಾರದಿಂದ ಸಮಿತಿಗೆ ನೇಮಕಗೊಂಡ ಸಮಿತಿಯ ಅಧ್ಯಕ್ಷರು ಈ ಹಿಂದೆ ಭಾರಿ ಸೇವಾ ಸಂಬಂಧಿತ ಹಗರಣದ ಭಾಗವಾಗಿದ್ದರು. ಈ ನ್ಯಾಯಾಧೀಶರ ನಡತೆಯ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದರು. ಹೀಗಾಗಿ ಇವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಈ ಸಮಿತಿಯ ತನಿಖೆ ಬದಲು ಪ್ರಕರಣವನ್ನು ಭಟಿಂಡಾ ಜಿಲ್ಲಾ ನ್ಯಾಯಾಧೀಶರು ಮತ್ತು ಎನ್‍ಐಎ ಅಧಿಕಾರಿಗಳು ಪರಿಶೀಲಿಸಬಹುದು ಮತ್ತು ಪ್ರಧಾನಿ ಪ್ರಯಾಣದ ಸಾಕ್ಷ್ಯಗಳನ್ನು ಎನ್‍ಐಎ ಸಂರಕ್ಷಿಸಿ ಇಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಮಣಿಂದರ್ ಸಿಂಗ್ ಬಳಿಕ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾದ ವಿಶೇಷ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದಕ್ಕೆ ಸುಪ್ರೀಂಕೋರ್ಟ್ ಧನ್ಯವಾದ ಹೇಳಿದರು. ಪ್ರಧಾನ ಮಂತ್ರಿ ರಸ್ತೆ ಮಾರ್ಗವಾಗಿ ತೆರಳಲು ಸಂಬಂಧಿಸಿದ ರಾಜ್ಯದ ಡಿಜಿ ಅನುಮತಿ ನೀಡಬೇಕು. ಈ ಪ್ರಕರಣದಲ್ಲಿ ಡಿಜಿ ಅನುಮತಿ ನೀಡಿದ್ದಾರೆ, ಅನುಮತಿ ನೀಡದ ಬಳಿಕವಷ್ಟೆ ಪ್ರಧಾನಿ ರಸ್ತೆ ಮೂಲಕ ಹೊರಟಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ 

    ಪ್ರತಿಭಟನೆ ನಡೆಯುತ್ತಿದ್ದ ಪ್ರದೇಶದಲ್ಲಿ ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾಕಾರರ ಜೊತೆಗೆ ಚಹಾ ಹೀರುತ್ತಿದ್ದರು. ಭದ್ರತಾ ಸಮಸ್ಯೆ ಬಗ್ಗೆ ಪಿಎಂ ಸೆಕ್ಯುರಿಟಿ ಅಲರ್ಟ್ ವಾಹನಕ್ಕೆ ಕನಿಷ್ಠ ಮಾಹಿತಿಯನ್ನು ನೀಡಿಲ್ಲ. ಪಿಎಂ ಕಾನ್ವೆ ಪ್ಲೈವೋರ್ ಮೇಲಿದ್ದಾಗ ಪ್ರತಿಭಟನಾಕಾರರು ಹಿಂದೆ ದೊಡ್ಡ ಪ್ರಮಾಣದಲ್ಲಿ ಘೋಷಣೆ ಕೂಗುತ್ತಿದ್ದರು. ಪರಿಸ್ಥಿತಿ ಏನಾಗಬಹುದಿತ್ತು ಯೋಚಿಸಿ ಎಂದು ಆತಂಕ ವ್ಯಕ್ತಪಡಿಸಿದರು. ಇದಲ್ಲದೇ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಜನರು XYZ (ವಿವಾದಿತ ಪದಗಳನ್ನು ಬಳಸದೇ) ಕೆಲಸವನ್ನು ಮಾಡಲು ಕರೆ ನೀಡಿದ್ದರು. ಇದು ಗಡಿಯಾಚೆಗಿನ ಭಯೋತ್ಪಾದನೆಯ ಸಮಸ್ಯೆಯಾಗಿರಬಹುದು. ಆದ್ದರಿಂದ ಈ ಪ್ರಕರಣ ಜಿಲ್ಲಾ ನ್ಯಾಯಾಧೀಶರು ಮತ್ತು NIA ಅಧಿಕಾರಿಗಳ ಬಳಿ ಇರಲಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

    ಬಳಿಕ ಪಂಜಾಬ್ ಸರ್ಕಾರದ ಪರ ವಾದ ಮಂಡಿಸಿದ ಅಡಿಷನಲ್ ಜನರಲ್, ಪಂಜಾಬ್ ಸರ್ಕಾರ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಜನವರಿ 5 ರಂದು ಘಟನೆ ಸಂಭವಿಸಿದಾಗ ಅದೇ ದಿನ ಸಮಿತಿಯನ್ನು ರಚಿಸಲಾಯಿತು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸಲಾಗಿದೆ, ನಿನ್ನೆ ಎಫ್‍ಐಆರ್ ಕೂಡ ದಾಖಲಿಸಿದ್ದೇವೆ. ಕೇಂದ್ರವು ಈ ವಿಷಯವನ್ನು ತನಿಖೆ ಮಾಡಲು ಸಮಿತಿಯನ್ನು ಸಹ ರಚಿಸಿದೆ. ಪ್ರಕರಣದ ತನಿಖೆಗೆ ಯಾವುದೇ ವ್ಯಕ್ತಿಯನ್ನು ನೇಮಿಸಬಹುದು ಒಂದು ವೇಳೆ ಲೋಪವಿದ್ದರೆ ತನಿಖೆಯ ಅಗತ್ಯವಿದೆ. ಮೋದಿ ನಮ್ಮ ಪ್ರಧಾನಿ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ. ನಾವು ಪ್ರಕರಣವನ್ನು ರಾಜಕೀಯಗೊಳಿಸಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ವಾದ ಮಂಡನೆಯ ಬಳಿಕ ತುಷಾರ್ ಮೆಹ್ತಾರನ್ನು ಪ್ರಶ್ನಿಸಿದ ಸಿಜೆಐ ಎನ್‍ವಿ ರಮಣ, ನೀವೂ ಸ್ವತಂತ್ರ ತನಿಖೆಯನ್ನು ಬಯಸುತ್ತಿದ್ದಿರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ದಾಖಲೆಗಳ ಸಂಗ್ರಹದೊಂದಿಗೆ ನಾಳೆ ನಮ್ಮ ವೈಯಕ್ತಿಕ ಕನಿಮ್ಮ ಮುಂದೆ ಇಡಲಿದ್ದೇವೆ. ಅದನ್ನು ಪರಿಶೀಲಿಸಿ ತಿರ್ಮಾನ ತೆಗೆದುಕೊಳ್ಳಿ ಎಂದು ಎಂದರು. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಬಳಿಕ ಮಧ್ಯಂತರ ಆದೇಶ ನೀಡಿದ ನ್ಯಾ.ಎನ್.ವಿ ರಮಣ, ದೇಶದ ಪ್ರಧಾನಿಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಯ ದೃಷ್ಟಿಯಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಸಾಕ್ಷ್ಯಗಳನ್ನು (PM ಪ್ರಯಾಣ ದಾಖಲೆಗಳು) ಸುರಕ್ಷಿತವಾಗಿರಿಸಲು ಮತ್ತು ಸಂರಕ್ಷಿಸಲು ನಿರ್ದೇಶಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ತಕ್ಷಣವೇ ಪಂಜಾಬ್ ಪೊಲೀಸ್ ಅಧಿಕಾರಿಗಳು ಮತ್ತು ಎಸ್‍ಪಿಜಿ ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಸಹಕರಿಸಲು ಮತ್ತು ರಿಜಿಸ್ಟ್ರಾರ್ ಜನರಲ್‍ಗೆ ಅಗತ್ಯ ನೆರವು ನೀಡಲು ನಿರ್ದೇಶಿಸುತ್ತೇವೆ. ಎಲ್ಲಾ ದಾಖಲೆಗಳನ್ನು ಅವರ ಸುರಕ್ಷಿತ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ನಾವು ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸುತ್ತೇವೆ ಎಂದು ಮೌಕಿಕವಾಗಿ ಹೇಳಿದರು. ಅಲ್ಲದೇ ಸೋಮವಾರದವರೆಗೂ ಕೇಂದ್ರ ಮತ್ತು ರಾಜ್ಯದಿಂದ ರಚನೆಯಾದ ಸಮಿತಿಗಳು ತನಿಖೆ ನಡೆಸದಂತೆ ಸೂಚನೆ ನೀಡಿದರು. ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆಯಾಗಿದ್ದು ಸೋಮವಾರ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಸಮಿತಿ ರಚನೆ ಮಾಡುವ ಸಾಧ್ಯತೆಗಳಿದೆ.

  • ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ಖಾರ್ಟುಮ್: ಸುಡಾನ್‌ ಪ್ರಧಾನ ಮಂತ್ರಿ ಅಬ್ದುಲ್ಲಾ ಹಮ್‌ಡೋಕ್‌ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ರಾಜಕೀಯ ಬಿಕ್ಕಟ್ಟು ಹಾಗೂ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಕಾರಣದಿಂದಾಗಿ ರಾಜೀನಾಮೆ ನೀಡಲು ಪ್ರಧಾನಿ ನಿರ್ಧರಿಸಿದ್ದಾರೆ.

    ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿರುವ ಸುಡಾನ್‌ನಲ್ಲಿ ಮಿಲಿಟರಿ ಪ್ರಾಬಲ್ಯದಿಂದಾಗಿ 2019ರಲ್ಲಿ ಒಮರ್‌ ಅಲ್-ಬಷೀರ್‌ ಅಧಿಕಾರ ಕಳೆದುಕೊಂಡರು. ಬಳಿಕ ರಾಜಕೀಯ ಮತ್ತು ಅಧಿಕಾರ ವ್ಯವಸ್ಥೆಯಲ್ಲಿ ಹೊಯ್ದಾಟ ನಡೆಯುತ್ತಿದೆ. ಆದರೆ ದೇಶದ ಜನತೆ ಪ್ರಜಾಪ್ರಭುತ್ವ ಆಡಳಿತಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ನಕಲಿ ನಂಬರ್ ಪ್ಲೇಟ್ – ವಿಕ್ಕಿ ಕೌಶಲ್ ವಿರುದ್ಧ ಕೇಸ್

    ಸುಡಾನ್‌ನ ಭದ್ರತಾ ಪಡೆಗಳು, ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆಸಿ ಚದುರಿಸಲು ಮುಂದಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

    ಡಾರ್ಫರ್‌ ಪ್ರದೇಶದ ಪೋರ್ಟ್‌ ಸುಡಾನ್‌ ಮತ್ತು ನ್ಯಾಲಾ ಸೇರಿದಂತೆ ಅನೇಕ ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಯಿಂದಾಗಿ ಒಮ್ದುರ್ಮನ್‌ನಲ್ಲಿ ಸೇತುವೆ ಮತ್ತು ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಅಲ್ಲದೇ ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸಂಪರ್ಕಗಳನ್ನೂ ಕಡಿತಗೊಳಿಸಲಾಗಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ

    ಒಮರ್‌ ಅಲ್-ಬಷೀರ್‌ ಅವರು ಅಧಿಕಾರ ಕಳೆದುಕೊಂಡ ನಂತರ ಸುಡಾನ್‌ ಪರಿವರ್ತನಾ ಸರ್ಕಾರವನ್ನು ನವೆಂಬರ್‌ನಲ್ಲಿ ಮರುಸ್ಥಾಪಿಸಲಾಯಿತು. ಈ ಸರ್ಕಾರವನ್ನು ಸೇನಾ ಪಡೆಯು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಪರಿಣಾಮವಾಗಿ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಪ್ರಧಾನಿ ಸ್ಥಾನಕ್ಕೆ ಅಬ್ದುಲ್ಲಾ ಹಮ್‌ಡೋಕ್‌ ರಾಜೀನಾಮೆ ಘೋಷಿಸಿದ್ದಾರೆ.