Tag: Prime Minister Sheikh Hasina

  • ನಾಲ್ಕನೇ ಬಾರಿಗೆ ಬಾಂಗ್ಲಾ ಅಧಿಕಾರದ ಗದ್ದುಗೆ ಏರಿದ ಶೇಖ್ ಹಸೀನಾ

    ನಾಲ್ಕನೇ ಬಾರಿಗೆ ಬಾಂಗ್ಲಾ ಅಧಿಕಾರದ ಗದ್ದುಗೆ ಏರಿದ ಶೇಖ್ ಹಸೀನಾ

    – ಮತದಾನದ ವೇಳೆ 17 ಜನ ಬಲಿ

    ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಾರ್ಟಿ ಜಯಗಳಿಸಿದ್ದು, ಪಕ್ಷದ ನಾಯಕಿ ಶೇಖ್ ಹಸೀನಾ ಅವರು ನಾಲ್ಕನೇ ಬಾರೀ ಪ್ರಧಾನಿ ಅಧಿಕಾರ ಸ್ವೀಕರಿಸಲಿದ್ದಾರೆ.

    ಬಾಂಗ್ಲಾದೇಶ 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳ ಮತದಾನವು ನಿನ್ನೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಡೆಯಿತು. ಬಳಿಕ ಆರಂಭವಾದ ಮತ ಎಣಿಕೆಯಲ್ಲಿ ಅವಾಮಿ ಲೀಗ್ ಪಾರ್ಟಿ ಮುನ್ನಡೆ ಸಾಧಿಸಿದೆ.

    17 ಜನ ಬಲಿ:
    ಮತದಾನದ ವೇಳೆ ಆಡಳಿತರೂಢ ಅವಾಮಿ ಲೀಗ್ ಪಾರ್ಟಿ ಮತ್ತು ವಿಪಕ್ಷ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‍ಪಿ) ಕಾರ್ಯಕರ್ತರ ನಡುವೆ ಜಗಳ ಆರಂಭವಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಪರಿಣಾಮ ಓರ್ವ ಪೊಲೀಸ್, ಸರ್ಕಾರಿ ಅಧಿಕಾರಿಗಳು, ಅವಾಮಿ ಲೀಗ್ ಪಾರ್ಟಿ ಐವರು ಸದಸ್ಯರು, ಬಿಎನ್‍ಪಿ ಕಾರ್ಯಕರ್ತರು ಸೇರಿದಂತೆ 17 ಜನರು ಬಲಿಯಾಗಿದ್ದಾರೆ. ಇವರಲ್ಲಿ ಮೂವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

    ಇವಿಎಂ ಬಳಕೆ:
    ಸಾರ್ವತ್ರಿಕ ಚುನಾವಣೆ ವೇಳೆ ಇದೇ ಮೊದಲಬಾರಿಗೆ ಬಾಗ್ಲಾದೇಶ ಚುನಾವಣಾ ಆಯೋಗವು ಮತಯಂತ್ರ (ಇವಿಎಂ) ಬಳಕೆ ಮಾಡಿದೆ. 300 ಕ್ಷೇತ್ರಗಳ ಪೈಕಿ 21 ಲಕ್ಷ ಜನಸಂಖ್ಯೆ ಇರುವ 6 ಕ್ಷೇತ್ರಗಳಲ್ಲಿ ಇವಿಎಂ ವ್ಯವಸ್ಥೆ ಅಳವಡಿಸಲಾಗಿತ್ತು. ಎರಡು ಕಡೆಗಳಲ್ಲಿ ಮಾತ್ರ ಇವಿಎಂ ದೋಷ ಕಂಡುಬಂದಿದೆ.

    ಚುನಾವಣಾ ಭದ್ರತೆ:
    ಸಾರ್ವತ್ರಿಕ ಚುನಾವಣೆ ವೇಳೆ ಭಾರೀ ಭದ್ರತೆಗೆ ಮುಂದಾಗಿದ್ದ ಆಡಳಿತ ರೂಢ ಪಕ್ಷವು, 6 ಲಕ್ಷ ಸೈನಿಕರು, ಸ್ಥಳೀಯ ಪೊಲೀಸ್ ಹಾಗೂ ವಿವಿಧ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು. ಆದರೆ ಅವಾಮಿ ಲೀಗ್ ಪಾರ್ಟಿ ಮತ್ತು ಬಿಎನ್‍ಪಿ ಕಾರ್ಯಕರ್ತರ ಮಾರಾಮರಿಯಿಂದಾಗಿ 17 ಜನರು ಮೃತಪಟ್ಟಿದ್ದಾರೆ. ಬಿಎನ್‍ಪಿ ಸದಸ್ಯನೊಬ್ಬ ಹಿಂಸಾಚಾರದ ವೇಳೆ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಂಗ್ಲಾದೇಶದ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ರದ್ದು

    ಬಾಂಗ್ಲಾದೇಶದ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ರದ್ದು

    ಢಾಕಾ: ಸರ್ಕಾರಿ ಸೇವೆಗಳಲ್ಲಿ ನೀಡಲಾಗುತ್ತಿದ್ದ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ.

    ಬಾಂಗ್ಲಾ ದೇಶದಲ್ಲಿ ಈವರೆಗೂ ವಿಶೇಷ ವರ್ಗಕ್ಕೆ ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಬುಧವಾರದಂದು ಪ್ರಧಾನಿ ಶೇಖ್ ಹಸೀನಾ ಮೀಸಲಾತಿ ರದ್ದು ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಮೀಸಲಾತಿ ರದ್ದು ಮಾಡುವಂತೆ ಆಗ್ರಹಿಸಿ ರಾಜಧಾನಿ ಢಾಕಾದಲ್ಲಿ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಮಣಿದ ಸರ್ಕಾರ ಈಗ ಮೀಸಲಾತಿಯನ್ನು ರದ್ದು ಪಡಿಸುವ ನಿರ್ಧಾರವನ್ನು ಕೈಗೊಂಡಿದೆ.

    ಬಾಂಗ್ಲಾದೇಶದ ಸರ್ಕಾರಿ ವಲಯದಲ್ಲಿ ಶೇ.56 ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿತ್ತು. ವಿಶೇಷವಾಗಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಉದ್ಯೋಗದಲ್ಲಿ ಮೀಸಲಾತಿ ಇತ್ತು. ಈಗ ಮೀಸಲಾತಿ ರದ್ದಾಗಿದ್ದರೂ ಅಂಗವಿಕಲರು ಮತ್ತು ಹಿಂದುಳಿದ ವರ್ಗದ ಅಲ್ಪಸಂಖ್ಯಾತರಿಗಿದ್ದ ಮೀಸಲಾತಿ ಮುಂದುವರಿಯಲಿದೆ.

    ದೇಶದ ಜನಸಂಖ್ಯೆಯಲ್ಲಿ ಇರುವ ಶೇ.98 ರಷ್ಟು ಜನ ಕೇವಲ ಶೇ.44 ಉದ್ಯೋಗಕ್ಕೆ ಪೈಪೋಟಿ ನಡೆಸಬೇಕು. ಶೇ.2 ರಷ್ಟಿರುವವರಿಗೆ ಶೇ.56 ಮೀಸಲಾತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ತೀವ್ರಗೊಂಡ ಬಳಿಕ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಮೀಸಲಾತಿ ರದ್ದು ಮಾಡುವ ಕುರಿತು ನಿರ್ಧಾರವನ್ನು ಪ್ರಕಟಿಸಿದೆ.

    ವಿದ್ಯಾರ್ಥಿಗಳ ಹಿಂಸಾಚಾರದ ಪ್ರತಿಭಟನೆಯಿಂದ ಢಾಕಾ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿದ್ಯಾರ್ಥಿಗಳ ವಿರುದ್ಧ ಅಶ್ರುವಾಯು ಹಾಗೂ ರಬ್ಬರ್ ಗುಂಡು ಹಾರಿಸಿದ್ದರು. ಈ ಸಂಬಂಧ 100ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಲ್ಲದೇ ದೇಶ ನಾನಾ ಭಾಗಗಳಲ್ಲಿ ಮೀಸಲಾತಿ ರದ್ದತಿಯ ವಿರುದ್ಧ ಹೋರಾಟಗಳು ನಡೆಯುತಿತ್ತು.

    ವಿದ್ಯಾರ್ಥಿಗಳ ಪ್ರತಿಭಟನೆಯಿಂದ ದೇಶದ್ಯಾಂತ ಇರುವ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿ ಹಾಗೂ ಪರೀಕ್ಷೆ ರದ್ದಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಶೇಖ್ ಹಸೀನಾ, ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಮೀಸಲಾತಿ ರದ್ದಾಗಿರುವುದರಿಂದ ಈಗ ವಿದ್ಯಾರ್ಥಿಗಳು ಮನೆಗೆ ತೆರಳಬೇಕು ಎಂದು ಮನವಿ ಮಾಡಿದ್ದಾರೆ.