Tag: Prime Minister National Boys Award

  • ಪುತ್ತೂರಿನ ಬಾಲಕನ ಆವಿಷ್ಕಾರಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ

    ಪುತ್ತೂರಿನ ಬಾಲಕನ ಆವಿಷ್ಕಾರಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ

    – ಮೋದಿ ಜೊತೆ ವೀಡಿಯೋ ಸಂವಾದ
    – ನನ್ನ ಪಾಲಿನ ಅವಿಸ್ಮರಣೀಯ ಕ್ಷಣ ಎಂದ ಬಾಲಕ

    ಮಂಗಳೂರು: ದಕ್ಷಿಣ ಕನ್ನಡದ ರಾಕೇಶ್‍ಕೃಷ್ಣ ಕೆ. ಮತ್ತು ಬೆಂಗಳೂರಿನ ವೀರ್ ಕಶ್ಯಪ್ ಸೇರಿದಂತೆ ದೇಶದ ಒಟ್ಟು 32 ಮಕ್ಕಳಿಗೆ ಈ ಬಾರಿಯ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಲಭಿಸಿದೆ.

    ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಅವರ ಸೀಡೋಗ್ರಾಫರ್ ಅನ್ನೋ ಬೀಜ ಬಿತ್ತನೆಯ ಕೃಷಿ ಯಂತ್ರ ಸಂಶೋಧನೆಗೆ ಈ ಪ್ರಶಸ್ತಿ ಸಂದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಂಗಳೂರಿನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವ ಅವಕಾಶವೂ ರಾಕೇಶ್ ಕೃಷ್ಣಗೆ ಲಭಿಸಿದೆ. ಇನ್ನಷ್ಟು ಸಾಧನೆಗೈಯಲು ಪ್ರಧಾನಿ ಮೋದಿಯವರ ಮಾತುಗಳು ಪ್ರೇರಣೆ ನೀಡಿದೆ ಎಂದು ರಾಕೇಶ್ ಕೃಷ್ಣ ಸಂತಸ ವ್ಯಕ್ತಪಡಿಸಿದ್ದಾನೆ.

    ಪ್ರಸ್ತುತ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ರಾಕೇಶ್ ಕೃಷ್ಣ ಅವರು ಪುತ್ತೂರಿನ ಬನ್ನೂರಿನ ಕೃಷಿಕ ರವಿಶಂಕರ್ ಹಾಗೂ ಡಾ.ದುರ್ಗಾರತ್ನ ಅವರ ಪುತ್ರನಾಗಿದ್ದಾನೆ. ರಾಕೇಶ್ ಕೃಷ್ಣ ತನ್ನ ಸಾಧನೆಗೆ ತನ್ನ ಅಕ್ಕ ರಶ್ಮಿ ಮಾರ್ಗದರ್ಶನವೇ ಸ್ಪೂರ್ತಿ ಎಂದಿದ್ದಾನೆ. ಏಳನೇ ತರಗತಿಯಿಂದ ಆವಿಷ್ಕಾರ ಆರಂಭಿಸಿದ ರಾಕೇಶ್ ಕೃಷ್ಣ ಕೃಷಿ ಬಿತ್ತನಾ ಯಂತ್ರದಲ್ಲಿ ಮಲ್ಟಿಪಲ್ ಆಪರೇಟಿಂಗ್ ಸಿಸ್ಟಮ್ ಆವಿಷ್ಕಾರ ಮಾಡಿದ್ದಾನೆ. ಇಂದು ಪ್ರಧಾನಿ ಜೊತೆಗೆ ಸಂವಾದ ನಡೆಸಿದ ಈ ದಿನ ನನ್ನ ಪಾಲಿನ ಅವಿಸ್ಮರಣೀಯ ಕ್ಷಣ ಎಂದು ರಾಕೇಶ್ ಕೃಷ್ಣ ಪ್ರತಿಕ್ರಿಯಿಸಿದ್ದಾನೆ.

    ದ.ಕ.ಜಿಲ್ಲಾಡಳಿತ ವತಿಯಿಂದ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನಿ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಉಪಸ್ಥಿತರಿದ್ದು ಪ್ರಶಸ್ತಿ ಪಡೆದ ರಾಕೇಶ್ ಕೃಷ್ಣ ಅವರನ್ನ ಅಭಿನಂದಿಸಿದರು. ಪ್ರಶಸ್ತಿಗೆ ಆಯ್ಕೆಯಾದ ದೇಶದ ಒಟ್ಟು 32 ಮಕ್ಕಳಲ್ಲಿ ನಾವೀನ್ಯತೆ ವಿಭಾಗದಲ್ಲಿ 9, ಕಲೆ ಮತ್ತು ಸಂಸ್ಕøತಿಯಲ್ಲಿ 7, ಶೈಕ್ಷಣಿಕ ಸಾಧನೆ ಮತ್ತು ಕ್ರೀಡಾ ವಿಭಾಗಗಳಲ್ಲಿ ತಲಾ 5, ಶೌರ್ಯ ವಿಭಾಗದಲ್ಲಿ 3 ಮತ್ತು ಸಾಮಾಜಿಕ ಸೇವೆ ವಿಭಾಗದಲ್ಲಿ ಒಬ್ಬರಿಗೆ ಪ್ರಶಸ್ತಿ ಲಭಿಸಿದೆ. ಒಟ್ಟಿನಲ್ಲಿ ಮೂವತ್ತೆರಡು ಮಕ್ಕಳಲ್ಲಿ ಕರ್ನಾಟಕದ ಇಬ್ಬರು ಆಯ್ಕೆಯಾಗಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.