Tag: prime minister modi

  • ಕೊರೊನಾ ಊಹೆಗೆ ನಿಲುಕದ ವೈರಸ್- ಮತ್ತೆ ಲಾಕ್‍ಡೌನ್ ಸುಳಿವು ನೀಡಿದ ಸಿಟಿ ರವಿ

    ಕೊರೊನಾ ಊಹೆಗೆ ನಿಲುಕದ ವೈರಸ್- ಮತ್ತೆ ಲಾಕ್‍ಡೌನ್ ಸುಳಿವು ನೀಡಿದ ಸಿಟಿ ರವಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಲ್ ಲಾಕ್‍ಡೌನ್ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವ ಸಿಟಿ ರವಿ ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿಟಿ ರವಿ, ಕೊರೊನಾ ನಮ್ಮ ಊಹೆಗೂ ನಿಲುಕದ ವೈರಸ್ ಆಗಿದ್ದು, ಈ ಬಗ್ಗೆ ಯೋಚನೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: 1-2 ದಿನ ಲಾಕ್‌ಡೌನ್‌ – ರಾಜ್ಯಗಳ ಸಲಹೆ ಕೇಳಿದ ಮೋದಿ

    ಸದ್ಯ ಆರೋಗ್ಯವಾಗಿದ್ದ ಕೇಂದ್ರ ಸಚಿವರು ವಿಧಿವಶರಾಗಿದ್ದು, ರಾಜ್ಯ, ದೇಶಕ್ಕೆ ದೊಡ್ಡ ನಷ್ಟವಾಗಿದೆ. ಹಲವು ಕೊರೊನಾ ಪ್ರಕರಣದಲ್ಲಿ 90 ವರ್ಷದವರೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ 30 ವರ್ಷಗಳ ವಯಸ್ಸಿನವರು ಸಾವನ್ನಪ್ಪುತ್ತಿದ್ದಾರೆ. ಈಗ ಕೊರೊನಾವನ್ನು ನಿರ್ಲಕ್ಷ್ಯ ಮಾಡುವ ಸ್ಥಿತಿ ಇಲ್ಲ. ಅಚಾನಕ್ ಸಾವುಗಳು ಸಂಭವಿಸುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆ ನೀಡಿರುವ ಎಲ್ಲಾ ಎಚ್ಚರಿಕೆಗಳನ್ನು ವೈಯುಕ್ತಿಕವಾಗಿಯೂ ಅನುಸರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಸಂದೇಶ ಲಭಿಸಿದೆ ಎಂದರು.

    ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಆದರೆ ಕೆಲವರು ಇದನ್ನೂ ಕೇವಲ ಸರ್ಕಾರದ ಜವಾಬ್ದಾರಿ ಅಷ್ಟೇ ಎಂದುಕೊಂಡಿದ್ದಾರೆ. ಕೊರೊನಾ ವಿಚಾರದಲ್ಲಿ ಸರ್ಕಾರಕ್ಕಿಂತ ವೈಯುಕ್ತಿಕ ಜವಾಬ್ದಾರಿ ಬಹಳ ಹೆಚ್ಚಿದೆ. ಆದ್ದರಿಂದ ಎಲ್ಲರೂ ನಿಯಮಗಳನ್ನು ಪಾಲಿಸಿ ಕೊರೊನಾವನ್ನು ದೂರ ಮಾಡೋಣ ಎಂದರು.

    ಸದನದಲ್ಲಿ ಕಾಂಗ್ರೆಸ್ ಪಕ್ಷ ಕಾಯ್ದೆಗಳಿಗೆ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಜನರ ವಿಶ್ವಾಸ ಕಳೆದುಕೊಂಡವರು ಇನ್ನು ಏನು ಮಾಡಲು ಸಾಧ್ಯ. ಕಾಂಗ್ರೆಸ್ ಪಕ್ಷದವರು ಜನರ ವಿಶ್ವಾಸ ಕಳೆದುಕೊಂಡಿದ್ದು, ಅವರಿಗೆ ನೈತಿಕತೆ ಎಲ್ಲಿದೆ. ತಾಂತ್ರಿಕವಾಗಿಯೂ ನಾವು ಗೆಲ್ಲುತ್ತೇವೆ, ನಂಬರ್ ನಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕೋವಿಡ್‌ ನಿಯಮ ಪಾಲಿಸಿ, ಮಾದರಿಯಾಗೋಣ – ದೆಹಲಿಯಲ್ಲೇ ಅಂಗಡಿ ಅಂತ್ಯಕ್ರಿಯೆ

  • ಪ್ರಧಾನಿ ನೇತೃತ್ವದಲ್ಲಿ ಇಂದು ಸಿಎಂಗಳ ಸಭೆ- ಟಫ್ ರೂಲ್ಸ್ ಘೋಷಿಸ್ತಾರಾ ಮೋದಿ?

    ಪ್ರಧಾನಿ ನೇತೃತ್ವದಲ್ಲಿ ಇಂದು ಸಿಎಂಗಳ ಸಭೆ- ಟಫ್ ರೂಲ್ಸ್ ಘೋಷಿಸ್ತಾರಾ ಮೋದಿ?

    ನವದೆಹಲಿ: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಕೊರೋನಾ ಸ್ಫೋಟ, ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಸಭೆ ನಡೆಯಲಿದ್ದಾರೆ.

    ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ದೆಹಲಿ, ಪಂಜಾಬ್ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಮಾಲೋಚನೆ ಮಾಡಲಿದ್ದಾರೆ. ದೇಶದ ಒಟ್ಟು ಕೊರೊನಾ ಪ್ರಕರಣದಲ್ಲಿ 7 ರಾಜ್ಯಗಳಿಂದಲೇ ಶೇ.63ರಷ್ಟು ಪ್ರಕರಣಗಳು ದಾಖಲಾಗಿದೆ. ಆದ್ದರಿಂದ ಪ್ರಧಾನಿಗಳೊಂದಿಗೆ ನಡೆಯುವ ಸಭೆಯಲ್ಲಿ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯಕ್ಕೆ ಸೂಚಿಸುವ ನಿರೀಕ್ಷೆ ಇದೆ.

    ಕೊರೊನಾ ಆರಂಭ ಕಾಲದಲ್ಲಿ ಅತ್ಯುತ್ತಮವಾಗಿ ಸೋಂಕು ನಿಯಂತ್ರಣ ಮಾಡಲಾಗಿದೆ ಎಂದು ಖುದ್ದು ಪ್ರಧಾನಿ ಕರ್ನಾಟಕ ಸರ್ಕಾರವನ್ನು ಶ್ಲಾಘಿಸಿದ್ದರು. ಆದರೆ ಈಗ ಕರ್ನಾಟಕದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಕೊರೊನಾ ಹಾಟ್‍ಸ್ಪಾಟ್ ರಾಜ್ಯಗಳ ಪೈಕಿ ನಮ್ಮ ರಾಜ್ಯವೂ ಒಂದು. ಸಭೆಯಲ್ಲಿ ಕರ್ನಾಟಕದಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿವರಣೆ ನೀಡಲಿದ್ದಾರೆ. ಅಲ್ಲದೇ ಶಾಲಾ-ಕಾಲೇಜು, ಥಿಯೇಟರ್‌ಗಳನ್ನ ತೆರೆಯುವ ಬಗ್ಗೆಯೂ ಚರ್ಚೆ ಆಗುವ ನಿರೀಕ್ಷೆ ಇದೆ.

    ಪ್ರಧಾನಿ ಮೋದಿ ಅವರು ಕೊರೊನಾ ಹತ್ತಿಕ್ಕುವ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸುವ ಸಂಭವ ಇದೆ. ಕ್ವಾರಂಟೈನ್, ಕೊರೊನಾ ಟೆಸ್ಟಿಂಗ್ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡುವ ಸಂಭವ ಇದೆ. ಚಿತ್ರಮಂದಿರ, ಸ್ಕೂಲ್-ಕಾಲೇಜ್ ಓಪನ್ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

    ಇತ್ತ ರಾಜ್ಯದಲ್ಲಿ ಕೊರೋನಾ ಟೆಸ್ಟ್ ಗಳನ್ನು ಕಡಿಮೆ ಮಾಡಲಾದ ಕಾರಣ ನಿನ್ನೆ ಸೋಂಕಿತರ ಸಂಖ್ಯೆಯೂ ಕಡಿಮೆ ಆಗಿದೆ. ಇಂದು 55 ಸಾವಿರ ಟೆಸ್ಟ್ ನಡೆಸಿದ್ದು, ಇದರಲ್ಲಿ 6,974 ಮಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,33,850 ಆಗಿದೆ. ಇನ್ನು ಮೃತರ ಸಂಖ್ಯೆ ಎಂದಿಗಿಂತ ಇಳಿಮುಖವಾಗಿದ್ದು, 83 ಮಂದಿ ಕೊರೊನಾಗೆ ಇಂದು ಬಲಿ ಆಗಿದೆ. ಒಟ್ಟು ಮೃತರ ಸಂಖ್ಯೆ 8,228 ಕ್ಕೇರಿದೆ. ಸೋಂಕಿನಿಂದ ಚೇತರಿಕೆ ಪ್ರಮಾಣ ಹೆಚ್ಚಿದ್ದು, 9,073 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 93,153ಕ್ಕೆ ಇಳಿಮುಖವಾಗಿದೆ.

  • ವಿಜಯನಗರ ಕಾಲದ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಿದ ಬ್ರಿಟನ್

    ವಿಜಯನಗರ ಕಾಲದ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಿದ ಬ್ರಿಟನ್

    ನವದೆಹಲಿ: 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದು ಎನ್ನಲಾದ ರಾಮ, ಸೀತಾ, ಲಕ್ಷ್ಮಣ ವಿಗ್ರಹಗಳನ್ನು ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಹಿಂದಿರುಗಿಸಿದ್ದಾರೆ. ಈ ವಿಗ್ರಹಗಳು ತಮಿಳುನಾಡಿನ ದೇವಸ್ಥಾನದಲ್ಲಿ ಕಳವು ಮಾಡಿ ಬ್ರಿಟನ್‍ಗೆ ರವಾನಿಸಲಾಗಿತ್ತು ಎನ್ನಲಾಗಿದೆ.

    ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಯುನೈಟೆಡ್ ಕಿಂಗ್‍ಡಮ್ ಅಧಿಕಾರಿಗಳು ವಿಗ್ರಹಗಳನ್ನು ಹಿಂದಿರುಗಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ವಿಗ್ರಹಗಳು ಭಾರತಕ್ಕೆ ಸೇರಿದ್ದು, 1978ರಲ್ಲಿ ತಮಿಳುನಾಡಿನ ದೇವಾಲಯವೊಂದರಿಂದ ಕಳವು ಮಾಡಲಾಗಿತ್ತು. ಈ ವಿಗ್ರಹಗಳು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದಿಂದ ಬಂದಿದೆ. ಇತ್ತೀಚಿಗೆ ಯುಕೆ ಅಧಿಕಾರಿಗಳು ಇದೇ ರೀತಿಯ ಎರಡು ವಿಗ್ರಹಗಳು ಮತ್ತು ಒಂದು ಸ್ತಂಭವನ್ನು ಹಸ್ತಾಂತರಿಸಿದ್ದರು ಎಂದು ಪಟೇಲ್ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಗ್ರಹಗಳನ್ನು ಹಿಂದಿರುಗಿಸಿದ ಯುಕೆ ಸರ್ಕಾರ ಮತ್ತು ಲಂಡನ್‍ನ ಭಾರತೀಯ ಹೈಕಮಿಷನ್‍ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಈ ನಿಟ್ಟನಲ್ಲಿ ಮೋದಿ ಸರ್ಕಾರದ ಸಾಧನೆಗಳ ಕುರಿತು ಮಾಹಿತಿ ನೀಡಿದ ಸಚಿವರು, 2014 ರಿಂದ ಈವರೆಗೂ ಇಂತಹ 40ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಸರ್ಕಾರ ಸಂಗ್ರಹಿಸಿದೆ. ಸ್ವಾತಂತ್ರ್ಯ ನಂತರ 2013ರವರೆಗೂ ಕೇವಲ 13 ಪ್ರಾಚೀನ ವಸ್ತು ಮತ್ತು ಕಲಾಕೃತಿಗಳನ್ನು ಭಾರತ ಸರ್ಕಾರ ಮರಳಿ ತಂದಿತ್ತು ಎಂದು ಅವರು ವಿವರಿಸಿದರು.

  • ಪ್ರಧಾನಿ ಮೋದಿ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ನಿರ್ಧಾರ

    ಪ್ರಧಾನಿ ಮೋದಿ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ನಿರ್ಧಾರ

    ಹುಬ್ಬಳ್ಳಿ: ಸೇವಾ ಹೀ ಸಂಘಟನಾ ಎಂಬ ಪರಿಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಲು ರಾಜ್ಯ ಬಿಜೆಪಿ ಘಟಕ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದರು.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹೇಶ್ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೆ.ಪಿ.ನಡ್ಡಾರವರ ಕರೆಯ ಮೇರೆಗೆ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 02 ರವರೆಗೆ ಸೇವಾ ಸಪ್ತಾಹ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮಾ ಗಾಂಧಿ ಜಯಂತಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರತಿ ವರ್ಷದಂತೆ ಸೇವಾ ಸಪ್ತಾಹದ ಮೂಲಕ ವಿವಿಧ ರೀತಿಯ ಸೇವಾ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತಿದೆ ಎಂದರು.

    ರಾಷ್ಟ್ರೀಯ ಅಧ್ಯಕ್ಷ ನಡ್ಡಾರವರ ನಿರ್ದೇಶನದಂತೆ ಸೆಪ್ಟಂಬರ್ 14 ರಿಂದ ಸೆಪ್ಟೆಂಬರ್ 20 ರವರೆಗೆ ಪ್ರತಿ ಮಂಡಲಗಳಲ್ಲಿ 70 ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣಾ ಉಪಕರಣಗಳನ್ನು ನೀಡುವುದು. 70 ಬಡ ಪುರುಷರು ಮತ್ತು ಮಹಿಳೆಯರಿಗೆ ಉಚಿತ ಕನ್ನಡಕಗಳನ್ನು ನೀಡುವುದು. ಕೋವಿಡ್ 19 ನಿಯಮಗಳನ್ನು ಪಾಲಿಸಿ ಪ್ರತಿ ಜಿಲ್ಲೆಯ 70 ಆಸ್ಪತ್ರೆ ಮತ್ತು ಬಡ ಕಾಲೋನಿಗಳಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುವುದು. ಸ್ಥಳೀಯ ಆವಶ್ಯಕತೆ ಅನುಗುಣವಾಗಿ ಆಸ್ಪತ್ರೆಯ ಮೂಲಕ ಕೋವಿಡ್-19 ರಿಂದ ಪೀಡಿತರಾದ 70 ವ್ಯಕ್ತಿಗಳಿಗೆ ಪ್ಲಾಸ್ಮಾ ದಾನ ಮಾಡುವುದು.

    ಯುವಮೋರ್ಚಾದ ವತಿಯಿಂದ ರಾಜ್ಯದಲ್ಲಿ 70 ರಕ್ತದಾನ ಶಿಬಿರಗಳನ್ನು ಮಾಡುವುದು. ಪ್ರತಿ ಜಿಲ್ಲೆಗಳಲ್ಲಿ ಕನಿಷ್ಟ 1 ರಕ್ತದಾನ ಶಿಬಿರ ಆಯೋಜಿಸುವುದು. ಪ್ರತಿ ಬೂತ್‍ನಲ್ಲಿ 70 ವೃಕ್ಷಾರೋಹಣ ಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣೆಯ ಸಂಕಲ್ಪ ಕಾರ್ಯಕ್ರಮ. ಪ್ರತಿ ಜಿಲ್ಲೆಗಳ 70 ಹಳ್ಳಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವುದು. ಪ್ಲಾಸ್ಟಿಕ್ ನಿಷೇಧ ಕುರಿತು ಜನಜಾಗೃತಿ, ಪ್ರತಿ ಜಿಲ್ಲಾ ಕೇಂದ್ರದಲ್ಲಿ 70 ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಮುಂತಾದ ಸೇವಾ ಸಪ್ತಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು.

  • ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚುವುದೇ ಒಳ್ಳೆಯದು- ಕೇಂದ್ರದ ವಿರುದ್ಧ ರೇವಣ್ಣ ಕಿಡಿ

    ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚುವುದೇ ಒಳ್ಳೆಯದು- ಕೇಂದ್ರದ ವಿರುದ್ಧ ರೇವಣ್ಣ ಕಿಡಿ

    ಹಾಸನ: ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರಿಗೆ ಹಣ ಕೊಡುತ್ತಿಲ್ಲ, ಹೀಗಾಗಿ ಅವುಗಳನ್ನು ಮುಚ್ಚುವುದು ಒಳ್ಳೆಯದು ಎಂದು ಮಾಜಿ ಸಚಿವ ಎಚ್‍ಡಿ ರೇವಣ್ಣ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರೈತರಿಗೆ ಗೋಳು ಕೊಡುವ ಬ್ಯಾಂಕ್ ಎಂದರೆ ಅದು ರಾಷ್ಟ್ರೀಕೃತ ಬ್ಯಾಂಕ್‍ಗಳು. ಈ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಡ ರೈತರಿಗೆ ಸಾಲ ಕೊಡುತ್ತಿಲ್ಲ. ರೈತರು ಒಂದು ಲಕ್ಷ ರೂ. ಸಾಲ ತೆಗೆದುಕೊಂಡರೇ ಒಂದು ವರ್ಷಕ್ಕೆ 5 ಲಕ್ಷ ರೂ. ಹಣ ಕಟ್ಟಿ ಎಂದು ಹೇಳುತ್ತಾರೆ. ಈ ಬ್ಯಾಂಕ್ ಗಳು ಉಳ್ಳವರಿಗೆ ಮಾತ್ರ ಉಪಯೋಗವಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚಲಿ ಎಂದು ಒತ್ತಾಯ ಮಾಡಿದರು.

    ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರ ಮನೆ ಹಾಳಾಗುತ್ತಿದೆ. ಮೋದಿಯವರೇ ನೀವೇ ಹೇಳಿ ಈ ಬ್ಯಾಂಕ್‍ಗಳು ಯಾಕೆ ಇದೆ ಎಂದು. ಈ ಬ್ಯಾಂಕ್‍ಗಳಿಂದ ಉಳ್ಳವರೆಗೆ ಸಾಲ ಕೊಡುತ್ತೇವೆ ಎಂದು ಒಂದು ಆದೇಶ ಹೊರಡಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

    ಕೊರೊನಾದಿಂದ 4,200 ಟನ್ ಹಾಲಿನ ಪೌಡರ್ ಮಾರಾಟವಾಗದೇ ಡೈರಿಯಲ್ಲೇ ಉಳಿದಿದೆ. ಕೊರೊನಾ ಸಮಯದಲ್ಲಿ ವಿವಿಧ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದು ಹಾಗೂ ಕೆ.ಎಂ.ಎಫ್. ಮೂಲಕವೇ ಜೋಳ ಖರೀದಿ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರ ನೆರವಿಗೆ ಸರ್ಕಾರ ಬರಬೇಕು. ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ಹಣ್ಣು, ಹೂವು, ತರಕಾರಿ ಬೆಳೆಗಳು ಸೇರಿ ಅಂದಾಜು 104 ಕೋಟಿ ರೂ.ಗಳ ನಷ್ಟವಾಗಿದೆ. ಜೊತೆಗೆ ಮಳೆ ಹಾನಿಗೂ ಇದುವರೆಗೂ ಯಾವ ಪರಿಹಾರವನ್ನು ಸರ್ಕಾರ ನೀಡಿಲ್ಲ. ತೋಟಗಾರಿಕ ಬೆಳೆಗಳಲ್ಲಿ ಸಮೀಕ್ಷೆ ಪ್ರಕಾರ ಆಗಸ್ಟ್ ತಿಂಗಳ ಒಳಗೆ 19,23,37,000 ರೂ ನಷ್ಟವಾಗಿದೆ. ಕಾಫಿ ಬೆಳೆಯಲ್ಲಿ 18,10,57,000 ರೂ. ನಷ್ಟ ಸಂಭವಿಸಿದೆ ಎಂದು ವಿವರಿಸಿದರು.

    ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು, ಮಳೆ ಹಾನಿ ಸೇರಿದಂತೆ ಇತರೆ ಪ್ರಕೃತಿ ವಿಕೋಪದ ಕಾರಣ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪರಿಹಾರ ಒದಗಿಸಲಿ. ಜಿಲ್ಲೆಯ ಹೂವಿನ ಬೆಳೆಗಾರರಿಗೆ ಇದುವರೆಗೆ 7 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಅಲ್ಲದೆ ಬ್ಯಾಂಕ್ ಖಾತೆಯೂ ಸರಿ ಇಲ್ಲ ಎಂಬ ಕಾರಣಕ್ಕೆ ಹಲವರಿಗೆ ಪರಿಹಾರ ತಲುಪಿಲ್ಲ ಎಂದರು.

    ಜಿಲ್ಲೆಯಲ್ಲಿ ಈ ಬಾರಿ ಸುಮಾರು 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯುವ ನಿರೀಕ್ಷೆ ಇತ್ತು. ಆದರೆ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. 6 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳದ ಇಳುವರಿ ಬರುವ ನಿರೀಕ್ಷೆ ಇದ್ದು, ಇವರಿಗೆ ಬೆಂಬಲ ಬೆಲೆ ನೀಡಬೇಕು. ಒಟ್ಟು 6 ಲಕ್ಷ ಟನ್ ಜೋಳವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

    ಜೋಳ ಖರೀದಿಯಲ್ಲಿ ರೈತರನ್ನು ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದು, ಜೋಳಕ್ಕೆ 1,700 ರೂ. ಇದ್ದರೇ ದಲ್ಲಾಳಿಗಳು 1,200 ರೂ.ಗೆ ಖರೀದಿ ಮಾಡಿ 1,700 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್‍ಗೆ ರೈತರು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಗಮನ ಕೊಡಬೇಕು ಎಂದು ಸಲಹೆ ನೀಡಿದರು.

  • ಭಾರತದ ರೇಡಿಯೊ ಖಗೋಳ ವಿಜ್ಞಾನ ಜನಕ ನಿಧನ – ಪ್ರಧಾನಿ ಸಂತಾಪ

    ಭಾರತದ ರೇಡಿಯೊ ಖಗೋಳ ವಿಜ್ಞಾನ ಜನಕ ನಿಧನ – ಪ್ರಧಾನಿ ಸಂತಾಪ

    ಮುಂಬೈ: ಭಾರತದ ರೇಡಿಯೊ ಖಗೋಳ ವಿಜ್ಞಾನ ಜನಕ ಡಾ.ಗೋವಿಂದ್ ಸ್ವರೂಪ್ (91) ನಿಧನರಾಗಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ಗೋವಿಂದ್ ಸ್ವರೂಪ್ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಪುಣೆಯಲ್ಲಿ ನಿಧನರಾಗಿದ್ದಾರೆ.

    ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಹಲವು ವಲಯಗಳಲ್ಲಿ ಮಹತ್ವದ ಸಂಶೋಧನೆಗಳ ಕೊಡುಗೆಯನ್ನು ನೀಡಿದ್ದಾರೆ. ಈ ಮೂಲಕ ಡಾ.ಗೋವಿಂದ್ ಸ್ವರೂಪ್ ರೇಡಿಯೊ ಖಗೋಳ ವಿಜ್ಞಾನ ಮುಂಚೂಣಿಯ ವಿಜ್ಞಾನಿಯಾಗಿದ್ದರು. ವಿಜ್ಞಾನಿಯ ನಿಧನದ ಬಗ್ಗೆ ತಿಳಿದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

    “ಪ್ರೊ.ಡಾ.ಗೋವಿಂದ್ ಸ್ವರೂಪ್ ಖ್ಯಾತ ವಿಜ್ಞಾನಿ. ರೇಡಿಯೋ ಖಗೋಳ ವಿಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಇದರಿಂದ ಜಾಗತಿಕ ಪ್ರಶಂಸೆಯನ್ನು ಗಳಿಸಿದ್ದಾರೆ” ಎಂದು ಡಾ.ಗೋವಿಂದ್ ಸ್ವರೂಪ್ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿದರು. ಜೊತೆಗೆ ಅವರ ಆತ್ಮೀಯರಿಗೆ ಧೈರ್ಯ ತುಂಬಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಸಹ ವಿಜ್ಞಾನಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಡಾ.ಗೋವಿಂದ್ ಸ್ವರೂಪ್ ಪದ್ಮಶ್ರೀ, ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಎಚ್.ಕೆ. ಫಿರೋಡಿಯಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

  • ‘ಸಿಂಗಂ’ಅಂತೆ ಆಗಬೇಡಿ- ಯುವ ಐಪಿಎಸ್ ಅಧಿಕಾರಿಗಳಿಗೆ ಮೋದಿ ಸಂದೇಶ

    ‘ಸಿಂಗಂ’ಅಂತೆ ಆಗಬೇಡಿ- ಯುವ ಐಪಿಎಸ್ ಅಧಿಕಾರಿಗಳಿಗೆ ಮೋದಿ ಸಂದೇಶ

    ಹೈದರಾಬಾದ್: ‘ಸಿಂಗಂ’ ನಂತಹ ಸಿನಿಮಾಗಳನ್ನು ನೋಡಿ ನಾವು ಎಲ್ಲರಿಗಿಂತ ಹೆಚ್ಚು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಡಿ ಎಂದು ಯುವ ಐಪಿಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

    ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಪ್ರೊಬೆಷನರ್ ಗಳ ‘ದೀಕ್ಷಾಂತ್ ಪೆರೇಡ್’ ಸಂದರ್ಭದಲ್ಲಿ ಪಿಎಂ ಮೋದಿ ಯುವ ಐಪಿಎಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

    ಯುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಜನರ ನಂಬಿಕೆಯನ್ನು ಗೆಲ್ಲುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನು ನೀಡಿದರು.

    ಪೊಲೀಸ್ ಅಧಿಕಾರಿಗಳು ಮೊದಲು ತಾವು ಕರ್ತವ್ಯದಲ್ಲಿ ಸೇರ್ಪಡೆಯಾದ ಸಂದರ್ಭದಲ್ಲಿ ಎಲ್ಲರೂ ತಮಗೆ ಭಯ ಪಡೆಬೇಕು ಎಂದುಕೊಳ್ಳುತ್ತಾರೆ. ಪ್ರಮುಖವಾಗಿ ಗ್ಯಾಂಗ್‍ಸ್ಟಾರ್, ಕಾನೂನು ಬಾಹಿರ ಕೃತ್ಯ ನಡೆಸುವವರು ತಮ್ಮನ್ನು ನೋಡಿ ಭಯ ಪಡೆಬೇಕು ಎಂದು ಭಾವಿಸುತ್ತಾರೆ. ಇದರಿಂದ ಅತ್ಯುತ್ತಮ ಕೆಲಸಗಳನ್ನು ನಿರ್ಲಕ್ಷಿಸುವ ಅವಕಾಶವಿದೆ. ಇದರಿಂದ ಜನರ ಮನಸ್ಸಿನಲ್ಲಿ ಪೊಲೀಸ್ ಪಡೆಯ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸುತ್ತದೆ ಎಂದು ಮೋದಿ ಎಚ್ಚರಿಕೆಯ ಸಲಹೆಯನ್ನು ನೀಡಿದರು.

    ನಿಮ್ಮ ಸಮವಸ್ತ್ರ ನೋಡಿದರೆ ನಿಮಗೆ ಹೆಮ್ಮೆ ಎನಿಸಬೇಕೆ ವಿನಾಃ ಆ ಸಮವಸ್ತ್ರಕ್ಕಿರುವ ಅಧಿಕಾರವನ್ನು ನೋಡಿ ಅಲ್ಲ. ಖಾಕಿ ಸಮವಸ್ತ್ರಕ್ಕಿರುವ ಹೆಮ್ಮೆಯನ್ನು ಎಂದು ಕಳೆದುಕೊಳ್ಳಬಾರದು. ಯುವ ಅಧಿಕಾರಿಗಳು ಸಾಮಾನ್ಯ ಜನರ ದೃಷ್ಟಿಯಲ್ಲಿ ಪೊಲೀಸರ ಚಿತ್ರಣ ಬದಲಾಗುವಂತೆ ನೋಡಿಕೊಳ್ಳಬೇಕು. ಜನರು ಪೊಲೀಸ್ ಇಲಾಖೆಯ ಮಾನವ ಮುಖವನ್ನು ನೋಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

    ಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಗೌರವವನ್ನು ಆಧರಿಸಿ ಸಂಬಂಧವನ್ನು ಬೆಳೆಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜನರೊಂದಿಗೆ ಪ್ರೀತಿಯ ಸೇತುವೆಯನ್ನು ನಿರ್ಮಿಸಿ. ನೀವು ನಿವೃತ್ತಿಯಾದ ಬಳಿಕವೂ ಜನರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನಮ್ಮ ಸಮಯದಲ್ಲಿ ಅತ್ಯುತ್ತಮ ಅಧಿಕಾರಿಯೊಬ್ಬರು ಹೇಳುತ್ತಾರೆ. ಒಮ್ಮೆ ನೀವು ಜನರ ಮನಸ್ಸನ್ನು ಗೆದ್ದರೆ ಎಲ್ಲವೂ ಬದಲಾಗುತ್ತದೆ ಎಂದು ತಿಳಿಸಿದರು.

  • ಚನ್ನಪಟ್ಟಣದ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮೋದಿ ಮಾತು

    ಚನ್ನಪಟ್ಟಣದ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮೋದಿ ಮಾತು

    – ಭಾರತವನ್ನ ಸ್ವಾವಲಂಬಿಗಳನ್ನಾಗಿ ಮಾಡೋದು ನಮ್ಮ ಜವಾಬ್ದಾರಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಮನಗರದ ಚನ್ನಪಟ್ಟಣದ ಬಗ್ಗೆ ಮಾತನಾಡಿದ್ದಾರೆ.

    ಇಂದು ಪ್ರಧಾನಿ ಮೋದಿ ಅವರು 68ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಮೊದಲಿಗೆ ಪ್ರಧಾನಿ ಮೋದಿ ಅವರು ಕೊರೊನಾ ವೈರಸ್ ಮಧ್ಯೆ ತಂತ್ರಜ್ಞಾನಕ್ಕೆ ಹೊಂದಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರನ್ನು ಶ್ಲಾಘಿಸಿದರು. ಈ ವೇಳೆ ಚೀನಾದಿಂದ ಆಟಿಕೆಗಳನ್ನು ಕಡಿಮೆ ಮಾಡಿ ಭಾರತದ ಆಟಿಕೆಗಳನ್ನು ಖರೀದಿಸಬೇಕೆಂದು ಪರೋಕ್ಷವಾಗಿ ತಿಳಿಸಿದರು.

    ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳು ಇದ್ದಾರೆ. ಭಾರತದ ಕೆಲವು ಭಾಗಗಳಿಂದು ಆಟಿಕೆ ಸಮೂಹಗಳಾಗಿ ಬೆಳೆಯುತ್ತಿದೆ. ಅಂದರೆ ಆಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ. ಹಾಗೆ ರಾಮನಗರದ ಚನ್ನಪಟ್ಟಣ (ಕರ್ನಾಟಕ), ಕೃಷ್ಣದಲ್ಲಿ ಕೊಂಡಪಲ್ಲಿ (ಆಂಧ್ರಪ್ರದೇಶ), ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬ್ರಿ, ಯುಪಿಯಲ್ಲಿ ವಾರಣಾಸಿ ಆಟಿಕೆಗಳ ಕೇಂದ್ರಗಳಾಗಿವೆ. ಇಷ್ಟೇ ಅಲ್ಲ ಇನ್ನೂ ಅನೇಕ ಹೆಸರುಗಳನ್ನು ಭಾರತದಲ್ಲಿ ಎಣಿಸಬಹುದು ಎಂದರು.

    ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಆಟಿಕೆಗಳತ್ತ ಗಮನ ಹರಿಸಿದ್ದೇವೆ. ಆಡುವಾಗ ಕಲಿಯುವುದು, ಆಟಿಕೆಗಳು ತಯಾರಿಸುವುದು ಇತ್ಯಾದಿಗಳನ್ನು ಪಠ್ಯಕ್ರಮದ ಒಂದು ಭಾಗವನ್ನಾಗಿ ಮಾಡಲಾಗಿದೆ. ಜಾಗತಿಕೆ ಆಟಿಕೆ ವ್ಯವಹಾರ ಸುಮಾರು 7 ಲಕ್ಷ ಕೋಟಿ ರೂ. ಆಗಿದ್ದು, ಇದರಲ್ಲಿ ಭಾರತದ ಪಾಲು ತುಂಬಾ ಕಡಿಮೆ ಇದೆ. ಹಿಗಾಗಿ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಯೋಜನೆ ರೂಪಿಸಲಿದೆ ಎಂದು ತಿಳಿಸಿದರು.

    ನಮ್ಮ ಹಬ್ಬಗಳು ಮತ್ತು ಪರಿಸರದ ನಡುವೆ ಬಲವಾದ ಬಂಧವಿದೆ. ನಮ್ಮ ಪರಿಸರದ ರಕ್ಷಣೆಗೆ ಸಂಬಂಧಿಸಿದ ಅನೇಕ ಹಬ್ಬಗಳು ನಮ್ಮಲ್ಲಿವೆ. ಓಣಂ ಹಬ್ಬವನ್ನು ಸಹ ಸಂತೋಷದಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಚಿಂಗಂ ತಿಂಗಳಲ್ಲಿ ಬರುತ್ತದೆ. ಈ ಅವಧಿಯಲ್ಲಿ, ಜನರು ಹೊಸದನ್ನು ಖರೀದಿಸುತ್ತಾರೆ. ಮನೆಗಳನ್ನು ಅಲಂಕರಿಸುತ್ತಾರೆ, ಪೂಕಲಂ ತಯಾರಿಸುತ್ತಾರೆ, ಓಣಂ-ಸಾದಿಯಾವನ್ನು ಆನಂದಿಸುತ್ತಾರೆ. ವೈವಿಧ್ಯಮಯ ಆಟಗಳು, ಸ್ಪರ್ಧೆಗಳು ಸಹ ನಡೆಯುತ್ತವೆ. ಇದು ಹಬ್ಬಗಳ ಸಮಯ. ಆದರೆ ಅದೇ ಸಮಯದಲ್ಲಿ ಕೊರೊನಾ ಪರಿಸ್ಥಿತಿಯಿಂದಾಗಿ ಜನರಲ್ಲಿ ಶಿಸ್ತಿನ ಪ್ರಜ್ಞೆಯೂ ಇದೆ ಎಂದು ಮೋದಿ ಹೇಳಿದರು.

    ಈ ತಿಂಗಳ ಆರಂಭದಲ್ಲಿ ಅಪ್ಲಿಕೇಶನ್ ಸಂಶೋಧನಾ ಸವಾಲನ್ನು ದೇಶದ ಯುವಕರ ಮುಂದೆ ಇಡಲಾಗಿತ್ತು. ಆತ್ಮನಿರ್ಭರ್ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್‍ನ ಅಡಿಯಲ್ಲಿ kutuki kids ಹೆಸರಿನ ಕಲಿಕಾ ಆಪ್ಯ ಒಂದು ಸಿದ್ಧವಾಗಿದೆ. ಇದರ ಮೂಲಕ ಗಣಿತ, ವಿಜ್ಞಾನದ ಅನೇಕ ವಿಷಯಗಳನ್ನು ಹಾಡು ಮತ್ತು ಕತೆಗಳ ಮೂಲಕ ಮಕ್ಕಳು ಸುಲಭವಾಗಿ ಕಲಿಯಬಹುದು ಎಂದು ತಿಳಿಸಿದರು.

    ನಾವು ದೇಶದಲ್ಲಿ ತಯಾರಾದ ಹಲವು ವಿಭಿನ್ನ ಅಪ್ಲಿಕೇಶನ್‍ಗಳನ್ನು ಹೊಂದಿದ್ದೇವೆ. ಮತ್ತೊಂದು ಆ್ಯಪ್ ಇದೆ. ಅದರ ಹೆಸರು ಸ್ಟಪ್ ಸೆಟ್ ಗೋ. ಇದೊಂದು ಫಿಟ್‍ನೆಸ್ ಆ್ಯಪ್ ಆಗಿದ್ದು, ನೀವು ಎಷ್ಟು ದೂರ ಹೋಗಿದ್ದೀರಿ ಮತ್ತು ಎಷ್ಟು ಕ್ಯಾಲರಿ ಬರ್ನ್ ಮಾಡಿದ್ದೀರಿ ಎಂಬ ಮಾಹಿತಿಯನ್ನು ನೀಡುತ್ತದೆ. ಈ ಮೂಲಕ ನೀವು ಫಿಟ್ ಆಗಿರಲು ಉತ್ಸಾಹ ತುಂಬುತ್ತದೆ. ಅದೇ ರೀತಿ ಭಾರತೀಯರಲ್ಲಿ ‘ಚಿಂಗಾರಿ ಆ್ಯಪ್’ ಪ್ರಖ್ಯಾತವಾಗಿದೆ ಎಂದರು.

    ಕೋವಿಡ್ 19 ಸಮಯದಲ್ಲಿ ನಮ್ಮ ರೈತರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನೂ ರಾಷ್ಟ್ರದ ಭದ್ರತಾ ಕಾರ್ಯಾಚರಣೆಯಲ್ಲಿ ಶ್ವಾನಗಳ ಪಾತ್ರವನ್ನು ಪ್ರಮುಖವಾಗಿದೆ ಎಂದು ಶ್ಲಾಘಿಸಿದರು.

  • ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ – ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

    ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ – ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

    ನವದೆಹಲಿ: ಇಂದು 74 ಸ್ವಾತಂತ್ರ್ಯ ದಿನಾಚರಣೆ. ಕೊರೊನಾ ಭೀತಿ ನಡುವೆ ಮುನ್ನೆಚ್ಚರಿಕೆ ವಹಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡಿದ್ದಾರೆ.

    ಈ ಬಾರಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಕೆಂಪುಕೋಟೆಯನ್ನು ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗಿದೆ. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಮಹಾತ್ಮ ಗಾಂಧಿ ಸಮಾಧಿ ರಾಜ್‍ಘಾಟ್‍ಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ನಂತರ ಕೆಂಪು ಕೋಟೆಯ ಮುಖ್ಯ ದ್ವಾರಕ್ಕೆ ಆಗಮಿಸುತ್ತಿದ್ದಂತೆ ಮೂರು ಸೇನೆಯಿಂದ ಮೋದಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ನಂತರ ಮೋದಿ ಧ್ವಜಾರೋಹಣ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಭದ್ರತೆ ವಹಿಸಲಾಗಿತ್ತು. ಎನ್‍ಎಸ್‍ಜಿ, ಎಸ್ಪಿಜಿ, ಸಿಆರ್‌ಪಿಎಫ್, ಬಿಎಸ್‍ಎಫ್, ದೆಹಲಿ ಪೊಲಿಸ್ ಸೇರಿದಂತೆ 4,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಅಲ್ಲದೇ 30ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಬಾರಿ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಇಲ್ಲ. ಕೇವಲ ಮುಖ್ಯ ಅಥಿತಿಗಳಿಗೆ ಕುಟುಂಬಸ್ಥರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರದಡಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

  • 74ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗ್ತಿದೆ ಇಡೀ ದೇಶ

    74ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗ್ತಿದೆ ಇಡೀ ದೇಶ

    – ರಾಜ್ಯದಲ್ಲೂ ಸ್ವಾತಂತ್ರ್ಯ ದಿನಾಚರಣೆ ವಿಭಿನ್ನ

    ನವದೆಹಲಿ: ಆಗಸ್ಟ್ 15 ಅಂದರೆ ನಾಳಿನ 74ನೇ ಸ್ವಾತಂತ್ರೋತ್ಸವಕ್ಕೆ ಇಡೀ ದೇಶವೇ ಸಜ್ಜಾಗುತ್ತಿದೆ. ದೇಶಾದ್ಯಂತ ಭಾರೀ ಬಿಗಿ ಭದ್ರತೆ ಕೈಕೊಳ್ಳಲಾಗಿದೆ.

    ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ 300 ಕ್ಯಾಮೆರಾಗಳು, 4 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಕ್ಕಿಂತ ಮುಖ್ಯವಾಗಿ ಕೊರೊನಾ ಹೆಮ್ಮಾರಿ ಇರುವ ಕಾರಣ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಂಪುಕೋಟೆಯಲ್ಲಿ ಪ್ರತಿಬಾರಿ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿಲ್ಲ. ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಗುರುವಾರವೂ ಕವಾಯತು ಪಡೆಗಳು ಮಾಸ್ಕ್ ಧರಿಸಿಯೇ ಪೂರ್ವ ತಾಲೀಮು ಮಾಡಿದವು.

    ಸೇನಾ ಪಡೆಗಳು ಗಾಳಿಯಲ್ಲಿ 21 ಸುತ್ತು ಗುಂಡು ಹಾರಿಸಿ, ಪ್ರಧಾನಿ ಮೋದಿ ಅವರಿಗೆ ಗಾರ್ಡ್ ಆಫ್ ಹಾನರ್ ಗೌರವ ಸಲ್ಲಿಸಲಿವೆ. ಬಳಿಕ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡಲಿದ್ದು, ರಾಷ್ಟ್ರಗೀತೆ ಹಾಡಲಿದ್ದಾರೆ. ಬಳಿಕವಷ್ಟೇ ದೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಾರಿ ಕೊರೊನಾ ಇರೋ ಕಾರಣ ಕೊರೊನಾ, ಸ್ವಚ್ಛತೆ, ಸೇನಾಪಡೆಗಳ ಬಲವರ್ಧನೆ, ರಾಮಮಂದಿರ ಕುರಿತಂತೆಯೇ ಹೆಚ್ಚಿನ ಮಾತು ಇರಲಿದೆ ಎನ್ನಲಾಗುತ್ತಿದೆ.

    ರೆಡ್‍ ಫೋರ್ಟ್ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಯ್ದ ಕೆಲವರಿಗಷ್ಟೇ ಆಹ್ವಾನ ನೀಡಲಾಗಿದೆ. ಕೇವಲ ಕೊರೊನಾ ವಾರಿಯರ್ಸ್‌ಗಳಾದ ಡಾಕ್ಟರ್, ನರ್ಸ್ ಹಾಗೂ ಕೊರೊನಾ ಗೆದ್ದ ಕೆಲವರಿಗೆ ಆಹ್ವಾನ ನೀಡಲಾಗುತ್ತಿದೆ. ಇವರೆಲ್ಲರೂ ಪಿಪಿಇ ಕಿಟ್ ಧರಿಸಿರಲಿದ್ದಾರೆ. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿದೆ. ರೆಡ್‍ ಫೋರ್ಟ್‌ನ 2 ಕಡೆಯ ಮೈದಾನಗಳು ಮುಚ್ಚಲ್ಪಟ್ಟಿರುತ್ತವೆ. ಕೇವಲ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗಬಹುದು. ಇವರೆಲ್ಲರಿಗೂ ಮಾಸ್ಕ್ ಧರಿಸೋದು ಕಡ್ಡಾಯಗೊಳಿಸಲಾಗಿದೆ.

    ರಾಜ್ಯದಲ್ಲೂ ವಿಭಿನ್ನವಾಗಿರಲಿದೆ ಸ್ವಾತಂತ್ರ್ಯ ದಿನಾಚರಣೆ
    ರಾಜ್ಯದಲ್ಲೂ ಕೂಡ ಕೊರೊನಾ ಮಾರ್ಗಸೂಚಿ ಅನುಸಾರವೇ ಸ್ವಾತಂತ್ಯ ದಿನಾಚರಣೆ ನಡೆಯಲಿದೆ. ಕೇಂದ್ರ ಸರ್ಕಾರದ ಆದೇಶದಂತೆ ಹೆಚ್ಚು ಜನ ಒಂದೆಡೆ ಸೇರಲು ಅವಕಾವಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಾರ್ವಜನಿಕ ಪ್ರವೇಶವಿರುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಡಿಸಿಪಿ ಸಿ.ಆರ್. ಗಿರೀಶ್ ಪರೇಡ್ ನೇತೃತ್ವ ವಹಿಸಲಿದ್ದಾರೆ. ಪರೇಡ್ ನಲ್ಲಿ ಟ್ರಾಫಿಕ್ ಪೊಲೀಸ್, ಕೆಎಸ್‌ಆರ್‌ಪಿ, ಬಿ.ಎಸ್.ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್ ಸೇರಿದಂತೆ 16 ತುಕಡಿಗಳಲ್ಲಿ 350 ಮಂದಿ ಭಾಗವಹಿಸುತ್ತಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಹೇಳಿದ್ದಾರೆ.

    9 ಜನ ಡಿಸಿಪಿ ಸೇರಿದಂತೆ 680 ಜನ ಭದ್ರತಾ ಕೆಲಸದಲ್ಲಿ ಹಾಜರಿರುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು 500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಯ ಕೋವಿಡ್ ವಾರಿಯರ್ಸ್ 100 ಸಿಬ್ಬಂದಿ, ಕೋವಿಡ್ ನಿಂದ ಗುಣಮುಖರಾದ ಎಲ್ಲಾ ವಯೋಮಾನದ 25 ಜನರನ್ನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮ ನೇರ ಪ್ರಸಾರವನ್ನು ದೂರದರ್ಶನ ಮೂಲಕ ಪ್ರಸಾರ ಮಾಡಲಾಗುತ್ತಿದೆ.