Tag: prime minister modi

  • ಕೊರೊನಾ ಲಸಿಕೆ- ಜ.11ರಂದು ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

    ಕೊರೊನಾ ಲಸಿಕೆ- ಜ.11ರಂದು ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

    ನವದೆಹಲಿ: ಕೊರೊನಾ ಲಸಿಕೆಗೆ ಹಂಚಿಕೆ ಕುರಿತು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ.

    ಜನವರಿ 11ರಂದು ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ಅಂದೇ ವ್ಯಾಕ್ಸಿನ್ ಹಂಚಿಕೆ ಸಹ ಆರಂಭವಾಗಲಿದೆ. ಹೀಗಾಗಿ ಪ್ರಧಾನಿ ಮೋದಿ ನಡೆಸುತ್ತಿರುವ ವಿಡಿಯೋ ಸಂವಾದದ ಕುರಿತು ಕುತೂಹಲ ಹೆಚ್ಚಿದೆ. ಕೊರೊನಾ ಲಸಿಕೆ ಹಂಚಿಕೆ ಕುರಿತು ಈಗಾಗಲೇ ದೇಶಾದ್ಯಂತ ಎರಡನೇ ಹಂತದ ಡ್ರೈ ರನ್ ನಡೆಸಲಾಗಿದ್ದು, 33 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 736 ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿದೆ.

    ಲಸಿಕೆ ವಿತರಣೆ ಪ್ರಕ್ರಿಯೆ ಸರಾಗವಾಗಿ ನಡೆಯಬೇಕೆಂಬ ಉದ್ದೇಶದಿಂದ ಹಾಗೂ ಈ ಕುರಿತು ಖಚಿತಪಡಿಸಿಕೊಳ್ಳುವ ಸಲುವಾಗಿ ಡ್ರೈ ರನ್ ನಡೆಸಲಾಗಿದೆ. ಇದೆಲ್ಲದ ಮಧ್ಯೆ ಲಸಿಕೆ ನೀಡುವ ಪ್ರಕ್ರಿಯೆ ಸಹ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

    ಭಾರತದ ಎರಡು ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ. ಆರಂಭದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಪ್ರಥಮ ದರ್ಜೆ ಕಲಸಗಾರರಿಗೆ ಲಸಿಕೆ ನೀಡಲಾಗುತ್ತಿದೆ.

  • ಅಹ್ಮದ್ ಪಟೇಲ್ ವಿಧಿವಶ – ಮೋದಿ, ರಾಹುಲ್ ಗಾಂಧಿ ಸಂತಾಪ

    ಅಹ್ಮದ್ ಪಟೇಲ್ ವಿಧಿವಶ – ಮೋದಿ, ರಾಹುಲ್ ಗಾಂಧಿ ಸಂತಾಪ

    ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ವಿಧಿವಶರಾಗಿದ್ದು, ಪ್ರಧಾನಿ ಮೋದಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ದೇಶದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹ್ಮದ್ ಪಟೇಲ್ ಇಂದು ಬೆಳಗಿನ ಜಾವ 3.30ಕ್ಕೆ ನಿಧನ ಹೊಂದಿದ್ದಾರೆ. ಸೋನಿಯಾ ಗಾಂಧಿ ಆಪ್ತರಲ್ಲಿ ಅಹ್ಮದ್ ಪಟೇಲ್ ಒಬ್ಬರಾಗಿದ್ದರು.

    ಅಹ್ಮದ್ ಪಟೇಲ್ ಸುದ್ದಿ ಅಘಾತವನ್ನುಂಟು ಮಾಡಿದೆ. ತಮ್ಮ ಬಹುತೇಕ ಜೀವನವನ್ನ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಅಹ್ಮದ್ ಪಟೇಲ್ ಅವರ ಪಾತ್ರ ಪ್ರಮುಖವಾದದ್ದು. ತಮ್ಮ ಅಗಾಧ ನೆನಪಿನ ಶಕ್ತಿಗೆ ಪಟೇಲರು ಹೆಸರುವಾಸಿಯಾಗಿದ್ದರು. ಪಟೇಲ್ ಅವರ ಪುತ್ರ ಫೈಸಲ್ ಜೊತೆ ಮಾತನಾಡಿದ್ದು, ಅಹ್ಮದ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

    ಇಂದು ಅತ್ಯಂತ ದುಃಖದಾಯ ದಿನ. ಅಹ್ಮದ್ ಪಟೇಲ್ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದರು. ಎಂತಹ ಕಠಿಣ ಸಂದರ್ಭಗಳಲ್ಲಿಯೂ ಕಾಂಗ್ರೆಸ್ ಪರವಾಗಿ ನಿಂತ ನಾಯಕ. ಅಹ್ಮದ್ ಪಟೇಲ್ ನಮ್ಮ ದೊಡ್ಡ ಶಕ್ತಿಯಾಗಿದ್ದರು. ನಾವು ಪಟೇಲರು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಸಂತಾಪ ಸೂಚಿಸಿ ಪಟೇಲರ ಕುಟುಂಬದ ಜೊತೆ ನಾವು ಇರುತ್ತೇವೆ ಎಂದಿದ್ದಾರೆ.

    ಇಂದು ಬೆಳಗ್ಗೆ 3.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ತಂದೆ ನಿಧನರಾಗಿದ್ದಾರೆ ಎಂದು ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದರು. ಕಳೆದ ಒಂದು ತಿಂಗಳಿನಿಂದಲೂ ತಂದೆ ಕೊರೊನಾ ಸೋಂಕಿನ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ವೇಳೆ ಅವರ ದೇಹದ ಅಂಗಗಳು ನಿಷ್ಕ್ರಿಯಗೊಂಡಿದ್ದವು. ಬಹು ಅಂಗಾಂಗ ವೈಫಲ್ಯದಿಂದಾಗಿ ತಂದೆಯ ನಿಧನರಾಗಿದ್ದಾರೆ ಎಂದು ಫೈಸಲ್ ತಿಳಿಸಿದ್ದರು.

  • ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ತಿಳಿಸಿದ್ರು ಮೋದಿ, ಅಮಿತ್ ಶಾ

    ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ತಿಳಿಸಿದ್ರು ಮೋದಿ, ಅಮಿತ್ ಶಾ

    ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ವಿವಿಧ ಗಣ್ಯರು ಶುಭ ಕೋರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದಾರೆ. ಮೋದಿ ಹಾಗೂ ಅಮಿತ್ ಶಾ ಕನ್ನಡದಲ್ಲೇ ಟ್ವೀಟ್ ಮಾಡಿರುವುದು ವಿಶೇಷವಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಅಮಿತ್ ಶಾ ಟ್ವೀಟ್ ಮಾಡಿ, ಕರ್ನಾಟಕದ ಜನತೆಗೆ ‘ಕರ್ನಾಟಕ ರಾಜ್ಯೋತ್ಸವ’ದ ಶುಭಾಶಯಗಳು. ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಕರ್ನಾಟಕ ಸದಾ ಮಹತ್ವದ ಪಾತ್ರವನ್ನು ನಿಭಾಯಿಸುತ್ತಾ ಬಂದಿದೆ. ಮುಂಬರುವ ವರ್ಷಗಳಲ್ಲೂ ರಾಜ್ಯ ಮತ್ತಷ್ಟು ಸಮೃದ್ಧಿ ಹೊಂದಿ ಪ್ರಗತಿ ಸಾಧಿಸಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ನಾಡಿನ ಸಮಸ್ತ ಜನತೆಗೆ 65ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಭಾಷೆ, ಸಂಸ್ಕೃತಿಗಳ ರಕ್ಷಣೆಯ ಜೊತೆಗೆ ಸಮೃದ್ಧ, ಆರೋಗ್ಯಪೂರ್ಣ, ಸಹಬಾಳ್ವೆಯ, ಅಭಿವೃದ್ಧಿಶೀಲ ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರೂ ಒಂದಾಗಿ ಮುನ್ನಡೆಯೋಣ. ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ! ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬರೆದು ಕರ್ನಾಟಕದ ಮ್ಯಾಪ್ ಇರುವ ಚಿತ್ರ ಹಾಕಿದ್ದಾರೆ.

    ಕನ್ನಡ ರಾಜ್ಯೋತ್ಸವ ಎಂದರೆ.. ನಮ್ಮ ಜನ, ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ-ಬೆಳೆಸಲು ದುಡಿದ-ಮಡಿದ ಹಿರಿಯ ಮಹಾಪುರುಷರಿಗೆ ತಲೆಬಾಗುವ ದಿನ. ಆ ಪುಣ್ಯಪುರುಷರನ್ನು ಒಡಲಾಳದ ಕೃತಜ್ಞತೆಯಿಂದ ಸ್ಮರಿಸೋಣ. ಕನ್ನಡ ಮೊದಲು, ನಾನು ಮೊದಲು ಕನ್ನಡಿಗ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

  • ದೇಶದ ಮೊದಲ ಸೀಪ್ಲೇನ್‍ಗೆ ಮೋದಿ ಚಾಲನೆ – ಟಿಕೆಟ್ ದರ ಎಷ್ಟು? ಮುಂದೆ ಎಲ್ಲೆಲ್ಲಿ ಜಾರಿ?

    ದೇಶದ ಮೊದಲ ಸೀಪ್ಲೇನ್‍ಗೆ ಮೋದಿ ಚಾಲನೆ – ಟಿಕೆಟ್ ದರ ಎಷ್ಟು? ಮುಂದೆ ಎಲ್ಲೆಲ್ಲಿ ಜಾರಿ?

    ಗಾಂಧಿನಗರ: ದೇಶದ ಮೊದಲ ಸೀಪ್ಲೇನ್‍ಗೆ ಪ್ರಧಾನಿ ನರೇದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜ್ಮದಿನಾಚಣೆಯ ಸಂದರ್ಭದಲ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ.

    ಸರ್ದಾರ್ ಸರೋವರದ ಡ್ಯಾಮ್‍ನ ಬಳಿಯ ಮೂರನೇ ಡ್ಯಾಮ್ ಬಳಿ ಮೋದಿ ಸೀಪ್ಲೇನ್‍ಗೆ ಚಾಲನೆ ನೀಡಿದರು. ಗುಜರಾತ್‍ನ ಸ್ಟ್ಯಾಚ್ಯೂ ಆಫ್ ಯುನಿಟಿಯ ಕೆವಾಡಿಯಾ ಕಾಲೋನಿ ಸ್ಥಳದಿಂದ ಅಹಮದಾಬಾದ್‍ನ ಸಬರಮತಿ ನಡುವೆ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಒಂದು ಗಂಟೆಯಲ್ಲಿ ಪ್ರಯಾಣವನ್ನು ಮಾಡಲಿದೆ.

    ಸೀಪ್ಲೇನ್ ವಿಶೇಷತೆ ಏನು?
    ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ಸಾಧ್ಯವಿರುವ ಏರೋಪ್ಲೇನ್‍ಗೆ ಸೀಪ್ಲೇನ್ ಎಂದು ಕರೆಯುತ್ತಾರೆ. ಸ್ಪೈಸ್ ಜೆಟ್ ಕಂಪನಿ ಭಾರತದಲ್ಲಿ ಸದ್ಯ ಸೀಪ್ಲೇನ್ ಸರ್ವೀಸ್ ನೀಡಲಿದ್ದು, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇವೆ ನೀಡಲಾಗುತ್ತಿದೆ. 19 ಆಸನಗಳನ್ನು ಹೊಂದಿರುವ ವಿಮಾನದಲ್ಲಿ 12 ಪ್ರಯಾಣಿಕರು ಈ ವಾಹನದಲ್ಲಿ ಏಕಕಾಲದಲ್ಲಿ ಪ್ರಯಾಣ ಮಾಡಬಹುದಾಗಿದೆ.

    ಟಿಕೆಟ್ ದರ ಎಷ್ಟು?
    ಒಬ್ಬರಿಗೆ 4,800 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ಪ್ರತಿದಿನ ಸೀಪ್ಲೇನ್ ವಿಮಾನ ಅಹಮದಾಬಾದ್‍ನಿಂದ ಕೆವಾಡಿಯಾಗೆ 4 ಬಾರಿ, ಮತ್ತು ಕೆವಾಡಿಯಿಂದ ಅಹಮದಾಬಾದ್‍ಗೆ 4 ಬಾರಿ ಸಂಚಾರ ಮಾಡಲಿದೆ.

    ಮಾಲ್ಡೀವ್ಸ್‍ನಿಂದ ಅಕ್ಟೋಬರ್ 26 ರಂದು ಸೀಪ್ಲೇನ್ ಬಂದಿಗಳಿದಿತ್ತು. ಸರ್ಕಾರದ ಉಡಾನ್ ಯೋಜನೆಯಡಿ ಇದನ್ನು ಒದಗಿಸಲಾಗಿದೆ. ಯೋಜನೆಗಾಗಿ ಗುಜರಾತ್ ಸರ್ಕಾರ ಜುಲೈನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿತ್ತು. ಸಬರಮತಿ ಮತ್ತು ಸರ್ದಾರ್ ಸರೋವರ ಮಾರ್ಗವನ್ನು ದೇಶದ 16 ಸೀಪ್ಲೇನ್ ಮಾರ್ಗಗಳಲ್ಲಿ ಸೇರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಹೈಡ್ರೋಗ್ರಾಫಿಕ್ ಸಮೀಕ್ಷೆಗಳು ಪೂರ್ಣಗೊಳಿಸಲಾಗಿದೆ. ಸೀಪ್ಲೇನ್‍ಗಳು ಭೂಮಿ ಮತ್ತು ಲಕ್ಷದ್ವೀಪಗಳು ಮತ್ತು ಕೊಚ್ಚಿಯಲ್ಲಿನ ಒಳನಾಡಿನ ನೀರಿನ ಮಾರ್ಗಗಳ ನಡುವೆ ಸಂಚರಿಸ ಬಹುದಾದ ಉತ್ತಮ ತಾಂತ್ರಿಕತೆಯನ್ನು ಹೊಂದಿದೆ.

    ಮುಂದೆ ಎಲ್ಲೆಲ್ಲಿ ಸಾಧ್ಯತೆ?
    ಸಬರಮತಿ ಬಳಿಕ ದೇಶದ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಭಾರತದ ಸೀಪ್ಲೇನ್ ಬೆಳವಣಿಗೆ ದೇಶಕ್ಕೆ ಹೊಸ ಸಾರಿಗೆ ವಿಧಾನವನ್ನು ಕಲ್ಪಿಸಲಿದ್ದು, ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ ಸಿಕ್ಕಿದಂತಾಗುತ್ತದೆ. ಏಕೆಂದರೆ ಯಾವುದೇ ಕೊಳವನ್ನು ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಬಹುದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದು, ಇಂದು ಅವರ ಗುಜರಾತ್ ಭೇಟಿ ಅಂತ್ಯವಾಗಲಿದೆ. ಸ್ಟ್ಯಾಚ್ಯೂ ಆಫ್ ಯುನಿಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್), ಗುಜರಾತ್ ಪೊಲೀಸರು ಏಕ್ತಾ ದಿವಾಸ್ ಪೆರೇಡನ್ನು ಆಯೋಜಿಸಿದ್ದರು. ಉಳಿದಂತೆ ಶುಕ್ರವಾರ ಗುಜರಾತ್‍ಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು, ನರ್ಮದಾ ಜಿಲ್ಲೆಯ ಕೆವಾಡಿಯಾದ ಸ್ಟ್ಯಾಚ್ಯೂ ಆಫ್ ಯುನಿಟಿ ಬಳಿ ಹೊಸ ಪ್ರವಾಸಿ ಆಕರ್ಷಣೆಗಳು ಸೇರಿದಂತೆ ಗುಜರಾತ್‍ನಲ್ಲಿ 17 ಹೊಸ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಆರೋಗ್ಯ ವ್ಯಾನ್, ಏಕ್ತಾ ಮಾಲ್, ಸರ್ದಾರ್ ಪಟೇಲ್ ಪಾರ್ಕ್, ದೋಣಿ ವಿಹಾರ ಸೇರಿದಂತೆ ಹಲವು ಪ್ರಮುಖ ಆಕರ್ಷಣಿಯ ಯೋಜನೆಗಲು ಇದರಲ್ಲಿ ಸೇರಿದೆ.

  • ಎಲ್ಲಿಯವರೆಗೂ ಮದ್ದಿಲ್ಲ, ಅಲ್ಲಿಯವರೆಗೂ ಕೊರೊನಾ ಬಗ್ಗೆ ಮೈಮರೆಯಬೇಡಿ : ಪ್ರಧಾನಿ ಮೋದಿ

    ಎಲ್ಲಿಯವರೆಗೂ ಮದ್ದಿಲ್ಲ, ಅಲ್ಲಿಯವರೆಗೂ ಕೊರೊನಾ ಬಗ್ಗೆ ಮೈಮರೆಯಬೇಡಿ : ಪ್ರಧಾನಿ ಮೋದಿ

    – ವ್ಯಾಕ್ಸಿನ್ ಬಂದ ಕೂಡಲೇ ಪ್ರತಿಯೊಬ್ಬ ಭಾರತೀಯನಿಗೆ ಲಸಿಕೆ

    ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಸಂತಸದ ವಿಷಯವನ್ನ ಹಂಚಿಕೊಂಡರು. ಇಂದು ಮಧ್ಯಾಹ್ನ ಟ್ವೀಟ್ ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುವ ಕುರಿತು ಪ್ರಧಾನಿಗಳು ಮಾಹಿತಿ ನೀಡಿದ್ದರು. ಲಾಕ್‍ಡೌನ್ ಬಳಿಕ ಪ್ರಧಾನಿಗಳ ಏಳನೇ ಭಾಷಣ ಇದಾಗಿತ್ತು.

    ಜನತಾ ಕರ್ಫ್ಯೂ ಬಳಿಕ ಇಂದಿನವರೆಗೆ ಹಲವು ಸಂಕಷ್ಟಗಳನ್ನು ಎದುರಿಸಿದ್ದೇವೆ. ಕೊರೊನಾ ನಡುವೆ ಜೀವನ ನಿರ್ವಹಣೆಗಾಗಿ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಲಾಕ್‍ಡೌನ್ ತೆರವು ಆಗಿರಬಹುದ್ರೆ ಆದ್ರೆ ವೈರಸ್ ಹೋಗಿಲ್ಲ. ಕಳೆದ ಎಂಟು ದಿನಗಳಿಂದ ಕಾಪಾಡಿಕೊಂಡ ಸ್ಥಿತಿಯನ್ನ ಮುಂದೆ ಹಾಳು ಮಾಡಿಕೊಳ್ಳಬಾರದು. ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ.83ರಷ್ಟಿದೆ. ಅಭಿವೃದ್ಧಿ ರಾಷ್ಟ್ರಗಳಲ್ಲಿ ಕೊರೊನಾ ಮರಣ ಪ್ರಮಾಣ ಹೆಚ್ಚಿದ್ದು, ನಮ್ಮಲ್ಲಿ ಕಡಿಮೆ ಇದೆ.

    ದೇಶದ 2 ಸಾವಿರ ಲ್ಯಾಬ್ ಗಳಲ್ಲಿ ಕೊರೊನಾ ಟೆಸ್ಟ್ ಮಾಡಲಾಗ್ತಿದೆ. 90 ಲಕ್ಷದಷ್ಟು ಬೆಡ್ ಗಳ ವ್ಯವಸ್ಥೆ ದೇಶದಲ್ಲಿದೆ. ಭಾರತದಲ್ಲಿ ನಾಗರೀಕರ ಜೀವ ಉಳಿಸುವಲ್ಲಿ ಸರ್ಕಾರ ಸಫಲವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಬೇಜಾವಾಬ್ದಾರಿತನ ತೋರಿಸಬಾರದು. ನಿರ್ಲಕ್ಷ್ಯ ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಭಾರತದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗ್ತಿದೆ.

    ಪೂರ್ಣ ಪ್ರಮಾಣದಲ್ಲಿ ಸಫಲತೆ ಸಿಗದೇ ಖುಷಿ ಪಡೋದು ಸರಿಯಲ್ಲ. ಕೆಲಸ ಪೂರ್ಣವಾಗದೇ ಸಂತೋಷಪಡೋದು ಒಳ್ಳೆಯದಲ್ಲ. ಕೊರೊನಾಗೆ ವ್ಯಾಕ್ಸಿನ್ ಸಿಗೋವರೆಗೂ ಎಲ್ಲ ನಿಯಮಗಳನ್ನ ಪಾಲಿಸಬೇಕು. ವಿದೇಶಗಳು ಸೇರಿದಂತೆ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ ಸಂಶೋಧನೆಗಳು ನಡೆಯುತ್ತಿವೆ. ವ್ಯಾಕ್ಸಿನ್ ಸಿದ್ಧವಾದ ಕೂಡಲೇ ಅದನ್ನ ಪ್ರತಿ ದೇಶವಾಸಿಗೆ ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ.

    ಸದ್ಯ ಸಾಲು ಸಾಲು ಹಬ್ಬಗಳು ಬಂದಿದೆ. ಈ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹಬ್ಬಗಳನ್ನು ಆಚರಿಸಿ. ಈ ಹಬ್ಬಗಳು ನಿಮ್ಮಲ್ಲಿ ಉತ್ಸಾಹ ಮತ್ತು ಸಂತೋಷವನ್ನ ತರಲಿ ಎಂದು ಆಶಿಸುತ್ತೇನೆ. ಹಾಗಾಗಿ ಮಾಸ್ಕ್ ಧರಿಸುವಿಕೆ ಸೇರಿದಂತೆ ಎಲ್ಲ ಕೊರೊನಾ ನಿಯಮಗಳನ್ನ ಪಾಲಿಸಿ ಎಂದು ಆಗ್ರಹಿಸುತ್ತೇನೆ. ಕೊರೊನಾ ತಡೆಯುವಲ್ಲಿ ಸರ್ಕಾರ ನಡೆಸುತ್ತಿರುವ ಶ್ರಮಕ್ಕೆ ಎಲ್ಲರೂ ಸಾಥ್ ನೀಡಬೇಕು.

    ಇದೇ ವೇಳೆ ದೇಶದ ಜನತೆಗೆ ದಸರಾ, ನವರಾತ್ರಿ, ಈದ್, ಗುರುನಾನಕ, ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಜನತೆಗೆ ಸಲಹೆ ನೀಡಿದರು.

  • ಎರಡು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಸಚಿನ್ ಮೀಗಾ

    ಎರಡು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಸಚಿನ್ ಮೀಗಾ

    ದಾವಣಗೆರೆ: ಕೇಂದ್ರ ಸರ್ಕಾರದ ವಿರುದ್ಧ ನವೆಂಬರ್ 7, 8 ಇಲ್ಲವೇ 9 ರಂದು ರಾಜ್ಯದಲ್ಲಿ ಕಿಸಾನ್ ಯಾತ್ರೆ ಆರಂಭಿಸಲಿದ್ದೇವೆ. ಎರಡು ದಿನಗಳ ಕಾಲ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸಚಿನ್ ಮೀಗಾ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಕಿಸಾನ್ ಯಾತ್ರೆ ಆರಂಭಿಸಲಿದ್ದೇವೆ. ಎರಡು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಈಗಾಗಲೇ ದೇಶಾದ್ಯಂತ ಪ್ರತಿಭಟನೆಗಳು ಶುರುವಾಗಿದೆ. ಬೆಳಗಾವಿ ಹಾಗೂ ಬೀದರ್ ವಿಭಾಗದಲ್ಲಿ ಕಿಸಾನ್ ಯಾತ್ರೆ ನಡೆಯಲಿದೆ. ಪಕ್ಷದ ಮುಖಂಡರು ಸೇರಿ ಸರಿಯಾದ ದಿನಾಂಕ ಹಾಗೂ ಯಾತ್ರೆಯ ಮಾರ್ಗ ನಿಗದಿ ಮಾಡಲಿದ್ದಾರೆ ಎಂದರು.

    ಕೇಂದ್ರ ಸರ್ಕಾರದ ವಿರುದ್ಧ ದೇಶದಲ್ಲಿ ವಿರೋಧಿ ಅಲೆ ಎದ್ದಿದ್ದು. ಬೆದರಿಕೆ ಪತ್ರ ಮೂಲಕ ಸುಗ್ರೀವಾಜ್ಞೆ ಹೊರಡಿಸಿರುವ ಬಿಜೆಪಿ ಸರ್ಕಾರ ಜನ ವಿರೋಧಿ, ರೈತ ವಿರೋಧಿ ಮಸೂದೆ ಜಾರಿಗೆ ತಂದಿದೆ. ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ. ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆಗಳು ಸಭೆಗಳು ನಡೆಯುತ್ತಿದ್ದು, ಈಗ ಕಿಸಾನ್ ಕಾಂಗ್ರೆಸ್ ನಿಂದ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದರ ಮೂಲಕ ಕಾಯ್ದೆಯನ್ನು ಹಿಂಪಡೆಯುವಂತೆ ಪತ್ರ ಚಳುವಳಿ ನಡೆಸಲಾಗುವುದು.

    ಅಂತಾರಾಷ್ಟ್ರೀಯ ಮಾರುಕಟ್ಟೆ ಹೆಸರಲ್ಲಿ ರೈತರ ಶೋಷಣೆ ನಡೆಯುತ್ತದೆ. ರೈತರು ಉದ್ಯಮಿಗಳ ಗುಲಾಮರಾಗ ಬೇಕಾಗುತ್ತದೆ. ಮೋದಿಯವರು ಅಂಬಾನಿ ಕುಟುಂಬಕ್ಕೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಉದಾಹರಣೆ ಜಿಯೋಗೆ ಅವಕಾಶ ಮಾಡಿಕೊಟ್ಟು ಬಿಎಸ್‍ಎನ್‍ಎಲ್ ಸಂಸ್ಥೆಯನ್ನೇ ಮುಚ್ಚಿ ಹಾಕುತ್ತಿದ್ದಾರೆ. ಹೀಗೆ ಕೇಂದ್ರ ಸರ್ಕಾರ ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಟ್ಟಂತೆ ಎಪಿಎಂಸಿಯನ್ನು ಅದೇ ರೀತಿ ಮಾಡಲು ಮುಂದಾಗಿದೆ. ಮುಂದಿನ ತಿಂಗಳು ರಾಜ್ಯದಲ್ಲಿ ಕಿಸಾನ್ ಯಾತ್ರೆ ಆರಂಭಿಸುವ ಮೂಲಕ ಹೋರಾಟ ಮಾಡುತ್ತೇವೆ ಎಂದರು.

  • ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಕೃಷಿ ಮಸೂದೆ ಕಸದ ಬುಟ್ಟಿ ಸೇರುತ್ತೆ: ರಾಹುಲ್ ಗಾಂಧಿ

    ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಕೃಷಿ ಮಸೂದೆ ಕಸದ ಬುಟ್ಟಿ ಸೇರುತ್ತೆ: ರಾಹುಲ್ ಗಾಂಧಿ

    – ಮಸೂದೆಗಳಿಂದ ರೈತರಿಗೆ ಸಂತಸವಾಗಿದ್ರೆ, ಯಾಕೆ ಹೋರಾಟ ಮಾಡ್ತಿದ್ದಾರೆ?

    ಚಂಡೀಗಡ: ಕೃಷಿ ಮಸೂದೆ ಕುರಿತು ದೇಶಾದ್ಯಂತ ರೈತರು ಭಾರೀ ಹೋರಾಟ ನಡೆಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ. ಇದರ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಕೃಷಿ ಮಸೂದೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

    ಪಂಜಾಬ್‍ನ ಮೋಗಾದಲ್ಲಿ ನಡೆದ ಖೇತಿ ಬಚಾವ್ ಯಾತ್ರೆಯ ರ್ಯಾಲಿಯಲ್ಲಿ ಮಾತನಾಡಿದ ಅವರು, ಕೊರೊನಾ ಹೊತ್ತಲ್ಲಿ ಈ ಕಾನೂನುಗಳನ್ನು ಜಾರಿಗೆ ತರುವ ಅಗತ್ಯವೇನಿತ್ತು? ಅಂತಹ ಆತುರವೇನಿತ್ತು? ಒಂದು ವೇಳೆ ನೀವು ಜಾರಿಗೆ ತರಲೇ ಬೇಕೆಂದಿದ್ದರೆ ಲೋಕಸಭೆಯಲ್ಲಿ ಈ ಕುರಿತು ಚರ್ಚಿಸಬೇಕಿತ್ತು. ರೈತರಿಗಾಗಿಯೇ ಕಾನೂನು ರೂಪಿಸಿರುವುದಾಗಿ ಪ್ರಧಾನಿ ಮೋದಿ ಹೇಳುತ್ತಾರೆ, ಹಾಗಿದ್ದರೆ ಇದನ್ನು ಸದನದಲ್ಲಿ ಏಕೆ ಚರ್ಚಿಸಲಿಲ್ಲ? ರೈತರಿಗೆ ಇದರಿಂದ ಸಂತಸವಾಗಿದ್ದರೆ ದೇಶಾದ್ಯಂತ ರೈತರು ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಪಂಜಾಬ್‍ನ ಎಲ್ಲ ರೈತರು ಯಾಕೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಅವರು ಪ್ರಶ್ನಿಸಿದ್ದಾರೆ.

    ದೇಶದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನವೇ ಈ ಮೂರು ಕಪ್ಪು ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನಾವು ಈ ಕಪ್ಪು ಕಾನೂನುಗಳನ್ನು ತೆಗೆದು ಕಸದ ಬುಟ್ಟಿಗೆ ಹಾಕಿಯೇ ಹಾಕುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಂಜಾಬ್‍ನ ಬಧ್ನಿ ಕಲನ್‍ನಿಂದ ಕತ್ತ್‍ಪುರದ ವರೆಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು. ಈ ವೇಳೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಹ ಭಾಗಿಯಾಗಿದ್ದರು. ಮೂರು ದಿನಗಳ ಈ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ಪಂಜಾಬ್ ಹಾಗೂ ಹರಿಯಾಣಗಳಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ನಡೆಸಿರು.

    ಕೃಷಿ ಮಸೂದೆ ಸಂಬಂಧ ಪ್ರಧಾನಿ ಮೋದಿ ಹಲವು ಬಾರಿ ಸ್ಪಷ್ಟನೆ ನೀಡಿದ್ದು, ರೈತರ ಶ್ರೇಯಸ್ಸಿಗಾಗಿಯೇ ಕೃಷಿ ಬಿಲ್ ತರಲಾಗುತ್ತಿದೆ. ಆದರೆ ಈ ಬಗ್ಗೆ ವಿಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿದ್ದರು. ಕೃಷಿ ಮಸೂದೆಗಳು ಯಾವುದೇ ಕಾರಣಕ್ಕೂ ರೈತ ವಿರೋಧಿ ಅಲ್ಲ. ಇವುಗಳಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಲಿವೆ. ಈ ಮಸೂದೆಗಳಿಂದಾಗಿ ಬೆಳೆಗಳಿಗೆ ಬೆಂಬಲ ಬೆಲೆಯೂ ರದ್ದಾಗಲ್ಲ. ಬೆಂಬಲ ಬೆಲೆ ಮುಂದುವರೆಯಲಿದೆ ಎಂದು ಈ ಮೂಲಕ ರೈತರಿಗೆ ಭರವಸೆ ನೀಡುತ್ತಿದ್ದೇನೆ. ನೂತನ ಕೃಷಿ ಮಸೂದೆಯಿಂದಾಗಿ ರೈತರು ಎಲ್ಲಿ ಬೇಕಾದ್ರೂ ತಮ್ಮ ಉತ್ಪನ್ನಗಳನ್ನು ಮಾರಬಹುದು. ದೇಶದ ಯಾವುದೇ ಮಂಡಿಯನ್ನು ಮುಚ್ಚುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದರು.

  • ಮಹಾತ್ಮಾ ಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನ – ಮೋದಿ, ಕೋವಿಂದ್ ನಮನ

    ಮಹಾತ್ಮಾ ಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನ – ಮೋದಿ, ಕೋವಿಂದ್ ನಮನ

    ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 151ನೇ ಜನ್ಮದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಗೆ ಹೂವಿನ ಗೌರವ ಸಲ್ಲಿಸಿದ್ದಾರೆ.

    ರಾಜ್‍ಘಾಟ್‍ಗೆ ತೆರಳಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಪಿತ ಗಾಂಧೀಜಿ ಅವರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, “ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಆಲೋಚನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ರಚಿಸಲು ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ” ಎಂದು ಮೋದಿ ಹೇಳಿದ್ದಾರೆ.

    ರಾಷ್ಟ್ರಪಿತ ಗಾಂಧಿಯವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ಸಂದೇಶವು ಸಮಾಜದಲ್ಲಿ ಸಾಮರಸ್ಯವನ್ನು ತುಂಬುತ್ತದೆ. ವಿಶ್ವದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಅವರು ಮಾನವೀಯತೆಯ ಪ್ರತೀಕವಾಗಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

    ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 116ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೀಗಾಗಿ ವಿಜಯ್ ಘಾಟ್‍ಗೆ ಹೋಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು.

    https://twitter.com/narendramodi/status/1311843987532050437

    ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರು ಸ್ಥಿರ ಮತ್ತು ಅತ್ಯಂತ ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯನ್ನು ನಿರೂಪಿಸಿದ್ದರು. ಅಲ್ಲದೇ ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದ್ದರು. ಅಷ್ಟೇ ಅಲ್ಲದೇ ಅವರು ಭಾರತಕ್ಕಾಗಿ ಮಾಡಿದ ಎಲ್ಲದಕ್ಕೂ ಆಳವಾದ ಕೃತಜ್ಞತೆಗಳೊಂದಿಗೆ ಅವರ ಜಯಂತಿಯಲ್ಲಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ” ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಗೆ ಶುಭಾಶಯ ಕೋರಿದ್ದಾರೆ.

  • ಗ್ಯಾಂಗ್‍ರೇಪ್, ಸಾವು ಪ್ರಕರಣ – ಅಪರಾಧಿಗಳನ್ನ ಗಲ್ಲಿಗೇರಿಸಿಯೆಂದ ಅಕ್ಷಯ್‍ಗೆ ರಮ್ಯಾ ತಿರುಗೇಟು

    ಗ್ಯಾಂಗ್‍ರೇಪ್, ಸಾವು ಪ್ರಕರಣ – ಅಪರಾಧಿಗಳನ್ನ ಗಲ್ಲಿಗೇರಿಸಿಯೆಂದ ಅಕ್ಷಯ್‍ಗೆ ರಮ್ಯಾ ತಿರುಗೇಟು

    – ಮೃತಪಟ್ಟ ಮಹಿಳೆ ಕಥೆ ಏನು ಮೋದಿ ಜಿ?

    ನವದೆಹಲಿ: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಸಾವಿಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ನಡುವೆ ಸಂತ್ರಸ್ತೆಯ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ – ಸಂತ್ರಸ್ತೆ ಕುಟುಂಬ ಹೊರಗಿಟ್ಟು 2.30ಕ್ಕೆ ಪೊಲೀಸರಿಂದ್ಲೇ ಅಂತ್ಯಕ್ರಿಯೆ!

    ನಟ ಅಕ್ಷಯ್ ಕುಮಾರ್ ರೇಪ್ ಸಂತ್ರಸ್ತೆಯ ಸಾವಿನ ನಂತರ ಅಪರಾಧಿಗಳನ್ನು ಗಲ್ಲಿಗೇರಿಸಿ. ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ರಕ್ಷಿಸಲು ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ನಟಿ, ಮಾಜಿ ಸಂಸದೆ ರಮ್ಯಾ ಬಿಜೆಪಿ ಮತ್ತು ಪಿಎಂ ಮೋದಿ ವಿರುದ್ಧ ಮಾತನಾಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ್ಲೇ ರೇಪ್ ಸಂತ್ರಸ್ತೆಯ ಅಂತ್ಯಕ್ರಿಯೆ – ಸಿದ್ದರಾಮಯ್ಯ, ದಿನೇಶ್ ಕಿಡಿ

    ಅಕ್ಷಯ್ ಕುಮಾರ್ ಟ್ವೀಟ್:
    “ಕೋಪ ಮತ್ತು ಹತಾಶೆ! ಹತ್ರಾಸ್ ಗ್ಯಾಂಗ್‍ರೇಪ್‍ನಲ್ಲಿ ಇಂತಹ ಕ್ರೂರತೆ. ಇದು ಯಾವಾಗ ನಿಲ್ಲುತ್ತದೆ? ನಮ್ಮ ಕಾನೂನುಗಳು ಮತ್ತು ಅವುಗಳನ್ನು ಜಾರಿಗೊಳಿಸುವಿಕೆಯು ಕಟ್ಟುನಿಟ್ಟಾಗಿರಬೇಕು. ಕೇವಲ ಶಿಕ್ಷೆಯ ಆಲೋಚನೆಯೇ ಅತ್ಯಾಚಾರಿಗಳನ್ನು ಭಯದಿಂದ ನಡುಗಿಸಬೇಕಾಗುತ್ತದೆ. ಹೀಗಾಗಿ ಅಪರಾಧಿಗಳನ್ನು ಗಲ್ಲಿಗೇರಿಸಿ. ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ರಕ್ಷಿಸಲು ಧ್ವನಿಯನ್ನು ಹೆಚ್ಚಿಸಿ. ಇದು ನಾವು ಮಾಡಬಹುದಾದ ಕನಿಷ್ಠ ಕರ್ತವ್ಯ” ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.

    ನೀವು ನಿರಾಶೆಗೊಳ್ಳುವುದನ್ನು ಮುಂದುವರಿಸುತ್ತೀರಿ. ಯಾಕೆಂದರೆ ಇದು ಕೊನೆಯದಾಗಿರುವುದಿಲ್ಲ. ಏಕೆ ಎಂದು ನಿಮಗೆ ತಿಳಿದಿದೆಯೇ? ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ “ಇದು ಕಾನೂನಿನ ವಿಚಾರವಲ್ಲ, ಇದು ದ್ವೇಷಪೂರಿತ ಮನಸ್ಥಿತಿ. ಇಂತಹ ಮನಸ್ಥಿತಿಯನ್ನು ಯಾರು ಪೋಷಿಸುತ್ತಿದ್ದಾರೆ? ಬಿಜೆಪಿ ಎಂದಿದ್ದಾರೆ.

    ಮೊದಲಿಗೆ ಪ್ರಧಾನಿ ಮೋದಿ ಪ್ರತಿದಿನ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕುವ ರಾಕ್ಷಸರನ್ನು ಅನುಸರಿಸುತ್ತಾರೆ. ಹೀಗಾಗಿ ಬದಲಾವಣೆ ಮೇಲ್ಭಾಗದಲ್ಲಿ ಪ್ರಾರಂಭವಾಗಬೇಕು ಎಂದು ನೀವು ಯೋಚಿಸುವುದಿಲ್ಲವೇ?” ಎಂದು ಅಕ್ಷಯ್ ಕುಮಾರ್ ಟ್ವೀಟ್‍ಗೆ ರಮ್ಯಾ ತಿರುಗೇಟು ನೀಡಿದ್ದಾರೆ.

    ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿ. ಅಲ್ಲದೇ ಅವರ ಸರ್ಕಾರವನ್ನು ಬೆಂಬಲಿಸಿರುವ ನಟ. ಆದ್ದರಿಂದ ರಮ್ಯಾ ಅಕ್ಷಯ್ ಕುಮಾರ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕುವೈತ್ ದೊರೆ ಮೃತಪಟ್ಟಿದ್ದಕ್ಕೆ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು. ಹೀಗಾಗಿ ಅತ್ಯಾಚಾರ ಸಂತ್ರಸ್ತೆ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಮೋದಿಯನ್ನು ಪ್ರಶ್ನಿಸಿದ್ದಾರೆ.

    “ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಮಹಿಳೆ ಕಥೆ ಏನು ಮೋದಿ ಜಿ? ನಿಮ್ಮ ಖಂಡನೆಯನ್ನು ಅಥವಾ ಸಂತಾಪವನ್ನು ನಾವು ನಿರೀಕ್ಷಿಸುವುದಿಲ್ಲ. ಮಹಿಳೆಯರಿಗೆ ಪ್ರತಿದಿನ ಅತ್ಯಾಚಾರ ಮತ್ತು ಮಾರಣಾಂತಿಕ ಬೆದರಿಕೆಗಳನ್ನು ಹಾಕುವ ರಾಕ್ಷಸರನ್ನು ಅನುಸರಿಸುವ ನೀವು, ಮಹಿಳೆಯರ ಬಗ್ಗೆ ಹೊಂದಿರುವ ಗೌರವ, ಅನುಭೂತಿ ಮತ್ತು ಸಹಾನುಭೂತಿ ಏನು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

    ಗ್ಯಾಂಗ್‍ರೇಪ್ ಪ್ರಕರಣ?
    ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಎರಡು ವಾರಗಳ ಅಂದರೆ ಮಂಗಳವಾರ ದೆಹಲಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 20 ವರ್ಷದ ಯುವತಿಯ ಅಂತ್ಯಸಂಸ್ಕಾರವನ್ನು ಕಳೆದ ರಾತ್ರಿ ಪೊಲೀಸರೇ ನೆರವೇರಿಸಿದ್ದಾರೆ. ಈ ವೇಳೆ ಮೃತ ಯುವತಿಯ ಕುಟುಂಬ ಮತ್ತು ಸಂಬಂಧಿಕರನ್ನು ಅವರ ಮನೆಯಲ್ಲೇ ಕೂಡಿಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಈ ವೇಳೆ ಯುವತಿ ಕುಟುಂಬ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಮಗಳ ಮುಖವನ್ನು ನೋಡಲು ಬಿಡದಿದ್ದರಿಂದ ಉದ್ರಿಕ್ತರಾದ ಕುಟುಂಬಸ್ಥರು, ಅಂಬುಲೆನ್ಸ್ ಮೇಲೆ ಮರದ ತುಂಡುಗಳನ್ನು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದರೂ ಪೊಲೀಸರು ಮಾತ್ರ ಕ್ಯಾರೇ ಎನ್ನದೇ ಮೃತದೇಹವನ್ನು ತೆಗೆದುಕೊಂಡು ಹೋಗಿ ತಾವೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಇದರಿಂದ ಯುವತಿಯ ಕುಟುಂಬಸ್ಥರು ಅಸಹಾಯಕರಾಗಿ ಕಣ್ಣೀರಿಟ್ಟಿದ್ದಾರೆ.

  • ಅಕ್ಟೋಬರ್‌ನಲ್ಲಿ ಥಿಯೇಟರ್ ಓಪನ್ ಆಗುತ್ತಾ? ಕುತೂಹಲ ಮೂಡಿಸಿದ ಅನ್‍ಲಾಕ್-5

    ಅಕ್ಟೋಬರ್‌ನಲ್ಲಿ ಥಿಯೇಟರ್ ಓಪನ್ ಆಗುತ್ತಾ? ಕುತೂಹಲ ಮೂಡಿಸಿದ ಅನ್‍ಲಾಕ್-5

    ನವದೆಹಲಿ: ಕೊರೊನಾ ವಿಜೃಂಭಣೆ ನಡುವೆಯೂ ಹಳಿ ತಪ್ಪಿರುವ ಆರ್ಥಿಕ ಸ್ಥಿತಿ ಸರಿ ದಾರಿಗೆ ತರಲು ಕೇಂದ್ರ ಸರ್ಕಾರ, ಅನ್‍ಲಾಕ್ ರೂಪದಲ್ಲಿ ಪ್ರತಿ ತಿಂಗಳು ಶ್ರಮಿಸುತ್ತಿದೆ. ಈಗಾಗಲೇ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಅಕ್ಟೋಬರ್ 1ರಿಂದ ಅನ್‍ಲಾಕ್-05 ಜಾರಿ ಆಗಲಿದೆ.

    ಅನ್‍ಲಾಕ್-5 ಜಾರಿ ಸಂಬಂಧ ಕೇಂದ್ರ ಗೃಹ ಮಂತ್ರಾಲಯ ಮಾರ್ಗಸೂಚಿ ಪ್ರಕಟಿಸಲಿದೆ. ಸಿನಿಮಾ ಹಾಲ್, ಈಜುಕೊಳ, ಎಂಟರ್ ಟೈನ್ಮೆಂಟ್ ಪಾರ್ಕ್, ಪ್ರಾಥಮಿಕ ಶಾಲೆ ತೆರೆಯಲು ಅನುಮತಿ ನೀಡುತ್ತಾ? ಅಥವಾ ದಸರಾ-ದೀಪಾವಳಿ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳಲ್ಲಿ ಯಾವ ರೀತಿ ಇರಬೇಕು ಎಂಬ ಅಂಶಗಳು ಇರಲಿವೆಯಾ ಎಂಬ ಕುತೂಹಲ ಮನೆ ಮಾಡಿದೆ.

    ಮೊನ್ನೆಯಷ್ಟೇ ಕರ್ನಾಟಕ ಸೇರಿ ಅತೀ ಹೆಚ್ಚು ಸೋಂಕಿರುವ 7 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಈ ವೇಳೆ ಕಂಟೈನ್ಮೆಂಟ್ ಝೋನ್‍ಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳನ್ನಾಗಿಸುವಂತೆ, ಅಗತ್ಯ ಬಿದ್ದರೆ ಲೋಕಲ್ ಲಾಕ್‍ಡೌನ್‍ಗೆ ಮೋದಿ ಸೂಚನೆ ನೀಡಿದ್ದರು.

    ಇತ್ತ ದೇಶದಲ್ಲಿ ಕೊರೊನಾ ತಾಂಡವ ಮುಂದುವರಿದಿದ್ದು, ದೇಶದಲ್ಲಿ ಒಟ್ಟು ಬಾಧಿತರ ಸಂಖ್ಯೆ 61 ಲಕ್ಷ ದಾಟಿದೆ. 1,039 ಮಂದಿ ನಿನ್ನೆ ಸೋಂಕಿಗೆ ಬಲಿ ಆಗಿದ್ದು, ಒಟ್ಟು ಸಾವುಗಳ ಸಂಖ್ಯೆ 96 ಸಾವಿರ ದಾಟಿದೆ. ಕೇವಲ 12 ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ನಮೂದಾಗಿವೆ.

    ಕೇರಳದಲ್ಲಿ ಸೆಕೆಂಡ್ ರೌಂಡ್ ಕೊರೊನಾ ದಾಳಿ ಶುರುವಾಗಿದ್ದು, ನಿನ್ನೆ ಒಂದೇ ದಿನ 7 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಜನರು ನಿಯಮಗಳನ್ನು ಪಾಲನೆ ಮಾಡದಿದ್ದರೇ ಮತ್ತೆ ಲಾಕ್‍ಡೌನ್ ಜಾರಿ ಮಾಡುವುದಾಗಿ ಕೇರಳ ಸರ್ಕಾರ ಎಚ್ಚರಿಕೆ ನೀಡಿದೆ. ಇದರ ನಡುವೆಯೇ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲೂ ಹೊಸ ದಾಖಲೆ ನಿರ್ಮಾಣವಾಗಿದ್ದು, ಇದುವರೆಗೂ 50 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 11 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.