Tag: prime minister modi

  • ಕಾಂಗ್ರೆಸ್‍ಗೆ ಮತ್ತೆ ಮತ್ತೆ ಸೋಲು: ಅಮೇಥಿಯಲ್ಲಿ ರಾಹುಲ್‍ಗೆ ಭಾರೀ ಮುಖಭಂಗ

    ಕಾಂಗ್ರೆಸ್‍ಗೆ ಮತ್ತೆ ಮತ್ತೆ ಸೋಲು: ಅಮೇಥಿಯಲ್ಲಿ ರಾಹುಲ್‍ಗೆ ಭಾರೀ ಮುಖಭಂಗ

    ಲಕ್ನೋ: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಭಾರೀ ಮುಖಭಂಗವಾಗಿದ್ದು, 16 ಮೇಯರ್ ಸ್ಥಾನಗಳ ಪೈಕಿ 14 ಬಿಜೆಪಿ ಪಾಲಾಗಿದೆ.

    ಆಡಳಿತರೂಢ ಬಿಜೆಪಿಗೆ 14 ಸ್ಥಾನ ಸಿಕ್ಕಿದರೆ, ಅಚ್ಚರಿ ಫಲಿತಾಂಶ ಎಂಬಂತೆ ಬಹುಜನ ಸಮಾಜವಾದಿ ಪಕ್ಷ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿದೆ.

    ಉತ್ತರ ಪ್ರದೇಶದ 652 ಸ್ಥಳೀಯ ಸಂಸ್ಥೆಗಳ ಚುನಾವಣೆ ನವೆಂಬರ್ 22, 26 ಮತ್ತು 29ರಂದು ಮೂರು ಹಂತಗಳಲ್ಲಿ ನಡೆದಿದ್ದು, ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಯಿತು. ಕಳೆದ 7 ತಿಂಗಳ ಯೋಗಿ ಸರ್ಕಾರದ ಆಡಳಿತಕ್ಕೆ ಜನರು ನೀಡಿದ ಜನಾದೇಶವೆಂದು ಈ ಫಲಿತಾಂಶವನ್ನು ಪರಿಗಣಿಸಲಾಗುತ್ತಿದೆ.

    ಇನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಕರೆಯಲಾಗುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ಸೋಲಾಗಿದ್ದು, ಬಿಜೆಪಿ ಗೆಲುವು ಕಂಡಿದೆ.

    ಫಲಿತಾಂಶವನ್ನು ನೋಡಿ ಸಿಎಂ ಯೋಗಿ ಅದಿತ್ಯನಾಥ್ ಹರ್ಷ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಪರ ಯೋಜನೆಗಳು ಪಕ್ಷದ ಗೆಲುವುವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದ ಸಿಎಂ ಯೋಗಿ ಅದಿತ್ಯನಾಥ್ ಗುಜರಾತ್ ಚುನಾವಣೆಗಳ ಕುರಿತು ಮಾತನಾಡುತ್ತಿರುವವರು ಅಮೇಥಿಯಲ್ಲಿ ಖಾತೆ ತೆರೆಯಲು ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಉತ್ತರ ಪ್ರದೇಶದ ಚುನಾವಣೆಯಲ್ಲಿ ಸರ್ಕಾರ ಮಾಡಿರುವ ಸಾಧನೆಗೆ ಸಿಎಂ ಯೋಗಿ ಅದಿತ್ಯನಾಥ್ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶ ಸ್ಥಳೀಯ ಚುನಾವಣೆಯಲ್ಲಿ ಗೆಲವು ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ದೇಶದ ಲೋಕಸಭಾ ಚುನಾವಣೆಯಲ್ಲಿ ಹೇಗೆ ಗೆಲುವು ಪಡೆಯುತ್ತಾರೆ ಎಂದು 2014ರಲ್ಲಿ ಅಮೇಥಿಯಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ  ಪ್ರಶ್ನಿಸಿದ್ದಾರೆ.

    ಅಮೇಥಿ, ವಾರಾಣಾಸಿ, ಗೋರಖ್‍ಪುರ, ಕಾನ್ಪುರ್, ಘಜಿಯಾಬಾದ್, ಅಲಹಾಬಾದ್, ಲಕ್ನೋ, ಫಿರೋಜಾಬಾದ್, ಅಯೋಧ್ಯಾ, ಮಥುರಾ, ಸಹರಾಣ್‍ಪುರ್ ಮತ್ತು ಮೊರಾದಾಬಾದ್‍ನಲ್ಲಿ ಬಿಜೆಪಿಯ ಮೇಯರ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆಲಿಘಡ್‍ನಲ್ಲಿ ಬಿಎಸ್‍ಪಿ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.

    ಸಿಎಂ ಯೋಗಿ ಅದಿತ್ಯನಾಥ್ ಕ್ಷೇತ್ರವಾದ ಗೋರಖ್‍ಪುರದ ಗೋರಖ್‍ನಾಥ್ ದೇವಾಲಯ ವಾರ್ಡ್ ನಂ.68 ರಲ್ಲಿ ಪಕ್ಷೇತರ ಅಭ್ಯರ್ಥಿ ನಾಡಿರಾ ಅವರು ಗೆಲುವು ಪಡೆದಿದ್ದು, ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ.

    2012ರ ಮೇಯರ್ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ 11ರಲ್ಲಿ ಬಿಜೆಪಿ ಜಯಗಳಿಸಿತ್ತು. ನೋಟ್ ನಿಷೇಧ, ಜಿಎಸ್‍ಟಿಯಿಂದಾಗಿ ಈ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜನರು ಮತ್ತೊಮ್ಮೆ ಕಮಲದ ಕೈ ಹಿಡಿದಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 80 ಸ್ಥಾನಗಳ ಪೈಕಿ 71ರಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. 2017ರ ವಿಧಾನಸಭಾ ಚುನಾವಣೆಯ ಒಟ್ಟು 403 ಸ್ಥಾನಗಳ ಪೈಕಿ 302ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದರು.

     

  • ಆಜಾನ್ ಧ್ವನಿ ಕೇಳಿ ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ

    ಆಜಾನ್ ಧ್ವನಿ ಕೇಳಿ ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ

    ಅಹಮದಾಬಾದ್: ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ.

    ಮೋದಿ ಭಾಷಣ ನಿಲ್ಲಿಸಲು ಕಾರಣವಾಗಿದ್ದು ಆಜಾನ್(ನಮಾಜ್). ಬುಧವಾರ ನವ್ಸಾರಿಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಮೀಪದ ಮಸೀದಿಯಿಂದ ಆಜಾನ್(ನಮಾಜ್) ಧ್ವನಿ ಕೇಳಿತು. ತಕ್ಷಣವೇ ಪ್ರಧಾನಿ ಮೋದಿ ಕೆಲ ಕ್ಷಣಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರು. ನಂತರ ಆಜಾನ್ ಮುಗಿದ ಬಳಿಕ ಮತ್ತೆ ಭಾಷಣ ಮುಂದುವರೆಸಿದರು.

    ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ನಿಲ್ಲಿಸುತ್ತಿದ್ದಂತೆ ಸಭಿಕರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಆದರೆ ಮೋದಿ ಅವರು ಆಜಾನ್ ಮುಗಿದ ಬಳಿಕ ಭಾಷಣ ಆರಂಭಿಸುತ್ತಿದಂತೆ ಎಲ್ಲ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಮೋದಿಯವರ ನಡೆಯನ್ನು ಸ್ವಾಗತಿಸಿದರು.

    ಇದೇ ಮೊದಲಲ್ಲ: ಆಜಾನ್ ವೇಳೆ ಮೋದಿ ಅವರು ಭಾಷಣ ನಿಲ್ಲಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಪಶ್ಚಿಮ ಬಂಗಾಳದ ಖರಗ್‍ಪುರದಲ್ಲಿ ಭಾಷಣ ಮಾಡುವ ವೇಳೆ ಆಜಾನ್ ಧ್ವನಿ ಕೇಳಿಸಿದಾಗಲೂ ಪ್ರಧಾನಿ ತಮ್ಮ ಭಾಷಣವನ್ನು ನಿಲ್ಲಿಸಿ ಮೌನ ವಹಿಸಿದ್ದರು. ನಂತರ ಭಾಷಣ ಆರಂಭಿಸಿದ ಅವರು ಯಾರ ಪ್ರಾರ್ಥನೆಯನ್ನು ನಡುವೆ ಅಡ್ಡಿಪಡುಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ಭಾಷಣವನ್ನು ನಡುವೆ ನಿಲ್ಲಿಸಬೇಕಾಯಿತು ಎಂದು ಹೇಳಿದ್ದರು.

    ಭಾಷಣ ವೇಳೆ ಮತ್ತೊಂದು ಅಚ್ಚರಿ: ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ಮತ್ತೊಂದು ಅಚ್ಚರಿ ಘಟನೆ ನಡೆಯಿತು. ಪ್ರಧಾನಿ ಮೋದಿಯಂತೆ ಬಟ್ಟೆತೊಟ್ಟಿದ್ದ ಪುಟ್ಟ ಪೋರನೊಬ್ಬ ವೇದಿಕೆ ಮೇಲೆ ಬಂದು ಪ್ರಧಾನಿಗಳಿಗೆ ಶುಭಾಶಯ ತಿಳಿಸಿದ. ಬಾಲಕನನ್ನು ಮಾತನಾಡಿಸಿದ ಪ್ರಧಾನಿ ಮೋದಿ ಬಾಲಕನ ಬಳಿ ಬಂದು ಶುಭ ಕೋರಿದರು.

    ಕಳೆದ ಎರಡು ದಿನಗಳಿಂದ ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.

  • ಮೋದಿ ಹುಲಿ, ಸಿದ್ದರಾಮಯ್ಯ ಇಲಿ: ಸಂಸದೆ ಶೋಭಾ ಕರಂದ್ಲಾಜೆ

    ಮೋದಿ ಹುಲಿ, ಸಿದ್ದರಾಮಯ್ಯ ಇಲಿ: ಸಂಸದೆ ಶೋಭಾ ಕರಂದ್ಲಾಜೆ

    ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ, ಪ್ರಧಾನಿ ಮೋದಿ ಸಂವಿಧಾನದ ಬಗ್ಗೆ ಕೇಂದ್ರದಿಂದ ಜಾಹೀರಾತು ಹಾಕಿದರೆ ಅವರ ಫೋಟೋ ಚಿಕ್ಕದಾಗಿ ಬಳಕೆ ಮಾಡುತ್ತಾರೆ. ಇದರಿಂದ ಯಾರು ಏನು ಎಂಬುದು ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ.

    ಆದರೆ ಸಿದ್ದರಾಮಯ್ಯ ಸರ್ಕಾರದ ಜಾಹೀರಾತು ಹಾಕಿದರೆ ಅವರ ಫೋಟೋನೇ ದೊಡ್ಡದಾಗಿರುತ್ತದೆ. ಡಾ. ಅಂಬೇಡ್ಕರ್ ಗೆ ಸಿಎಂ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಇಂದು ದೇಶಕ್ಕೆ ಸಂವಿಧಾನ ಕೊಟ್ಟ ದಿನವಾಗಿದೆ. ಆದರೆ ಅವರ ಫೋಟೋ ಇಲ್ಲದೆ ಜಾಹಿರಾತು ಮುದ್ರಣವಾಗಿದೆ. ಜಾಹೀರಾತಿನಲ್ಲಿ ಸಿಎಂ ಫೋಟೋವನ್ನು ಫುಲ್ ಪೇಜ್ ಬಳಸಿದ್ದು, ಅಂಬೇಡ್ಕರ್ ಫೋಟೋ ಒಂದನ್ನು ಬಳಕೆ ಮಾಡಲಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಸಿಎಂ ತಾನೊಬ್ಬ ಅಹಿಂದ ಲೀಡರ್ ಅಂತ ಫೋಸ್ ಕೊಟ್ಟಿದ್ದಾರೆ. ಅಂಬೇಡ್ಕರ್ ಗಿಂತ ಅವರು ದೊಡ್ಡವರಾ?. ಕಾಂಗ್ರೆಸ್ ನಿಂದ ಅಂಬೇಡ್ಕರ್ ಗೆ ನಿರಂತರವಾಗಿ ಅವಮಾನವಾಗುತ್ತಿದೆ. ಆದ್ದರಿಂದ ಕೂಡಲೇ ಸಿಎಂ ರಾಜ್ಯದ ಜನತೆಯ ಕ್ಷಮೆಯನ್ನು ಯಾಚಿಸಬೇಕು ಎಂದು ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಾರಿದರು.

  • ಫಿಲಿಪೈನ್ಸ್ ಅಧ್ಯಕ್ಷರ ಜೊತೆ ಹೊಲದಲ್ಲಿ ರೈತರಾದ್ರು ಪ್ರಧಾನಿ ಮೋದಿ

    ಫಿಲಿಪೈನ್ಸ್ ಅಧ್ಯಕ್ಷರ ಜೊತೆ ಹೊಲದಲ್ಲಿ ರೈತರಾದ್ರು ಪ್ರಧಾನಿ ಮೋದಿ

    ಮನಿಲಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳ್ಳಂಬೆಳಗ್ಗೆ ಹೊಲದಲ್ಲಿ ಹಾರೆ ಹಿಡಿದುಕೊಂಡು ಕೆಲಕಾಲ ರೈತರಾಗಿದ್ದರು.

    ಮೂರು ದಿನಗಳ ಕಾಲ ಫಿಲಿಪ್ಪಿನ್ಸ್ ಪ್ರವಾಸದಲ್ಲಿರುವ ಮೋದಿ ಅವರು ಇಂದು ಲಾಸ್ ಬನೋಸ್‍ನಲ್ಲಿರುವ ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಫಿಲಿಪ್ಪಿನ್ಸ್ ಅಧ್ಯಕ್ಷರ ಜೊತೆಗೂಡಿ ಹಾರೆಯಿಂದ ಹೊಲದಲ್ಲಿ ಮಣ್ಣು ತೆಗೆದು ಒಂದು ಗಿಡವನ್ನು ನೆಟ್ಟಿದ್ದಾರೆ. ನಂತರ ಅಕ್ಕಿ ಪ್ರಯೋಗಾಲಯವನ್ನು ಇಬ್ಬರು ಜಂಟಿಯಾಗಿ ಉದ್ಘಾಟಿಸಿದರು.

    ಐಆರ್‍ಆರ್‍ಐ ಸಂಸ್ಥೆಯು ಉತ್ತಮ ಗುಣಮಟ್ಟದ ಅಕ್ಕಿ ಬೀಜವನ್ನು ಅಭಿವೃದ್ಧಿಪಡಿಸುವ ಹಾಗೂ ಆಹಾರ ಕೊರತೆಯ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ದಕ್ಷಿಣ ಏಷ್ಯಾದ ಮೊದಲ ಪ್ರಾಥಮಿಕ ಕೇಂದ್ರವನ್ನು ವಾರಣಾಸಿಯಲ್ಲಿ ತೆರೆಯಲು ಐಆರ್‍ಆರ್‍ಐ ಮಾಡಿದ್ದ ಪ್ರಸ್ತಾಪಕ್ಕೆ ಜುಲೈನಲ್ಲಿ ಸಂಸತ್ತು ಅನುಮೋದನೆ ನಿಡಿತ್ತು. ವಾರಣಾಸಿ ಸೆಂಟರ್ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅಕ್ಕಿ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

    31 ನೇ ಏಷ್ಯನ್ ಸಮಿತ್ ಸಮಾರಂಭದಲ್ಲಿ ವಿಶ್ವದ ಪ್ರಮುಖ ನಾಯಕರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಅದ್ಧೂರಿಯಾಗಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವು ಮರೆಗು ನೀಡಿತ್ತು. ಮೂರು ದಿನಗಳ ಕಾಲದಲ್ಲಿ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡುಟೆರ್ಟೆ ಮತ್ತು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೆ ದ್ವಿ ಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

  • ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ

    ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ

    – ಎಲೆಕ್ಷನ್ ಕಹಳೆ ಮೊಳಗಿಸಲಿದ್ದಾರೆ ಬಿಜೆಪಿ ಚಾಣಕ್ಯ

    ಬೆಂಗಳೂರು: ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಇಂದು ಚಾಲನೆ ಸಿಗಲಿದೆ. ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದು, ಈ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

    ಅಮಿತ್ ಶಾ ಅವರು ಬೆಳಗ್ಗೆ 11ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಐಇಸಿಗೆ ಬಂದು ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಸಮಾವೇಶಕ್ಕೆ ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ 27 ಸಾವಿರ ಬೂತ್‍ಗಳಿಂದ ಕಾರ್ಯಕರ್ತರು ಆಗಮಿಸಲಿದ್ದು, ಒಂದು ಬೂತ್‍ನಿಂದ ಕನಿಷ್ಠ 3 ಬೈಕ್ ಗಳಲ್ಲಿ 6 ಕಾರ್ಯರ್ತರು ಭಾಗವಹಿಸಲಿದ್ದಾರೆ.


    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಯಾತ್ರೆ ಇದಾಗಿದ್ದು, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪರಿವರ್ತನಾ ಯಾತ್ರೆ ಸಂಚರಿಸಲಿದೆ. ಇದು ಕೇರಳದ ಜನರಕ್ಷಾ ಯಾತ್ರೆಯ ಸ್ವರೂಪದ ರೀತಿಯಲ್ಲಿ ರಾಜ್ಯದಲ್ಲೂ ಯಾತ್ರೆ ನಡೆಯಲಿದೆ. 75 ದಿನಗಳ ಕಾಲ ಯಾತ್ರೆಯಲ್ಲಿ ಪ್ರಯಾಣಿಸಲು ವಿಶೇಷವಾಗಿ ಸಿದ್ಧ ಪಡಿಸಿರುವ ವಾಹನದಲ್ಲಿ ಯಡಿಯೂರಪ್ಪ ಅವರು ಪ್ರಯಾಣ ಮಾಡಲಿದ್ದಾರೆ. ವಾರಕ್ಕೆ ಒಬ್ಬರು ಕೇಂದ್ರದ ಬಿಜೆಪಿ ದಿಗ್ಗಜರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದು, ಯಾತ್ರೆಯಲ್ಲಿ ಭಾಗವಹಿಸುವ ಪ್ರತಿ ಕಾರ್ಯಕರ್ತರ ಮಾಹಿತಿಯನ್ನು ರಾಜ್ಯ ಬಿಜೆಪಿ ಸಂಗ್ರಹಿಸಿದೆ.

    ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಹಾಗೂ ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ದಂಡು ಯಾತ್ರೆಯಲ್ಲಿ ಬಂದು ಪ್ರಚಾರ ನಡೆಸಲಿದ್ದು, ಕಟು ಹಿಂದುತ್ವ ವಾದಿಗಳಾದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉಮಾಭಾರತಿ ಮತ್ತು ಸಾಧ್ವಿ ನಿರಂಜನ್ ಅವರು ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳು ಕೂಡ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

    ಪ್ರತಿ ದಿನ ಸುಮಾರು 100 ಕಿಮೀಗೂ ಹೆಚ್ಚು ಸಂಚಾರ ಮಾಡಲಿರುವ ಯಾತ್ರೆ, ಒಟ್ಟು ಸುಮಾರು 11 ಸಾವಿರ ಕಿಮೀ ಸುತ್ತಲಿದೆ. ಯಾತ್ರೆ ಪ್ರಾರಂಭವಾಗಿ ಇಂದು ಸಂಜೆ 5 ಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ಗೆ ಹೋಗಿ ಅಲ್ಲಿ ಯಾತ್ರೆಯ ಮೊದಲ ದಿನದ ವಾಸ್ತವ್ಯ ಹೂಡಲಿದ್ದಾರೆ. ಡಿಸೆಂಬರ್ 21 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದ ರಥಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.

    ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಯಾತ್ರೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡುವ ಸಾಧ್ಯತೆ ಕಡಿಮೆ. ನವೆಂಬರ್ 8 ರಂದು ಕೊಡಗು ಯಾತ್ರೆಗೆ ಪ್ರವೇಶ ಮಾಡಬೇಕಿತ್ತು. ಇನ್ನೂ ನವೆಂಬರ್ 10, 11, 12 ಹಾಗೂ 13 ರಂದು ಮಂಗಳೂರು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ಮಾಡಲಿದ್ದು, ಮಂಗಳೂರಿನಲ್ಲೇ ಕೋರ್ ಕಮಿಟಿ ಸಭೆ ನಡೆಸಲಿದೆ. ಜನವರಿ 25 ರಂದು ಮೈಸೂರಿನಲ್ಲಿ ಬೃಹತ್ ರ‍್ಯಾಲಿ ಸಮಾವೇಶ ನಡೆಯಲಿದೆ.

    224 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿ ಅಂತಿಮವಾಗಿ ಜನವರಿ 28ರಂದು ರ‍್ಯಾಲಿ ಅಂತ್ಯಗೊಳ್ಳಲಿದ್ದು, ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಧಿಕೃತವಾಗಿ ಚುನಾವಣಾ ರಣಕಹಳೆ ಊದಲಿದ್ದಾರೆ. ಇನ್ನು ಬಿಜೆಪಿ ಯಾತ್ರೆಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ತುಮಕೂರು- ಬೆಂಗಳೂರು ರಸ್ತೆಯಲ್ಲಿ ನಾಳೆ ಬ್ಯುಸಿ ಇರಲಿದ್ದು, ಟ್ರಾಫಿಕ್ ಇರುತ್ತೆ. ಹಾಗಾಗಿ ಈ ರಸ್ತೆಯಲ್ಲಿ ಸಂಚಾರ ಮಾಡುವುರುವರು ಸ್ವಲ್ಪ ಎಚ್ಚರ ವಹಿಸಿರಿ.

    https://twitter.com/ShobhaBJP/status/925772367703392256

    https://twitter.com/ShobhaBJP/status/925378322413973504

     

     

  • ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

    ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

    ಬೆಂಗಳೂರು: ಇಂದು ರಾಜ್ಯಾದ್ಯಂತ 62ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕೂಡ ರಾಜ್ಯದ ಜನತೆಗೆ ಕನ್ನಡದಲ್ಲೇ ಶುಭಾಶಯವನ್ನು ತಿಳಿಸಿದ್ದಾರೆ.

    ನಾಡಿನಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು ಮೂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್‍ನಲ್ಲಿ ಕನ್ನಡದಲ್ಲಿಯೇ ಬರೆದು ಪೋಸ್ಟ್ ಮಾಡಿ ಕನ್ನಡಿಗರಿಗೆ ಶುಭಾಶಯವನ್ನು ಹೇಳಿದ್ದಾರೆ. “ಕರ್ನಾಟಕ ರಾಜ್ಯೋತ್ಸವದಂದು ಕರ್ನಾಟಕದ ಜನತೆಗೆ ನನ್ನ ಶುಭ ಹಾರೈಕೆಗಳು. ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಅದರ ಪ್ರಗತಿಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಮೋದಿ ಅವರು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

    ಕರ್ನಾಟಕ ಏಕೀಕರಣಗೊಂಡ ಕಾರಣ 1956 ರಿಂದ ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.

     

     

     

  • ಧರ್ಮಸ್ಥಳದಲ್ಲಿ ಪೂಜೆ ಮುಗಿಯುವವರೆಗೂ ಪ್ರಧಾನಿ ಮೋದಿ ಉಪವಾಸ!

    ಧರ್ಮಸ್ಥಳದಲ್ಲಿ ಪೂಜೆ ಮುಗಿಯುವವರೆಗೂ ಪ್ರಧಾನಿ ಮೋದಿ ಉಪವಾಸ!

    ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮಂಜುನಾಥ ಸ್ವಾಮಿಯ ದರ್ಶನದ ಪ್ರಯುಕ್ತ ಪೂಜೆ ಸಲ್ಲಿಸುವರೆಗೂ ಉಪವಾಸ ಮಾಡಲಿದ್ದಾರೆ.

    ಸ್ವಾಮಿಯ ದರ್ಶನಕ್ಕಾಗಿ ಪ್ರಧಾನಿ ಮೋದಿ ಅವರು ಬೆಳಗ್ಗೆಯಿಂದ ಉಪವಾಸವಿದ್ದು, ದೇವರ ದರ್ಶನ ಹಾಗೂ ಪೂಜೆ ಆದ ಬಳಿಕ ಪ್ರಸಾದ ಸ್ವೀಕಾರ ಮಾಡಿ ನಂತರ ಉಪಾಹಾರ ಸೇವಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಬೆಳಗ್ಗಿನ ಉಪಾಹಾರವನ್ನು ಧರ್ಮಸ್ಥಳ ಕ್ಷೇತ್ರದ ಸುತ್ತುಪೌಳಿಯ ಹೊರಭಾಗದಲ್ಲಿರುವ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಡಾ. ಹೆಗ್ಗಡೆಯವರ ಶ್ರೀಮತಿಯವರು, ಮಕ್ಕಳು- ಸಹೋದರರು ಅವರ ಮಡದಿ ಮಕ್ಕಳು ಉಪಾಹಾರ ಬಡಿಸಲಿದ್ದಾರೆ.

    ಈಗ ಸುಮಾರು 11 ಗಂಟೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. ಎಸ್ ಪಿಜಿ ಎನ್ ಎಸ್‍ಜಿ, ಪೊಲೀಸ್ ಅಧಿಕಾರಿಗಳು ದೇವಸ್ಥಾನ ಮತ್ತು ಹೆಲಿಪ್ಯಾಡ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ದೇವಸ್ಥಾನಕ್ಕೆ ಪ್ರವೇಶವಾದ ಕೂಡಲೇ ಪ್ರಧಾನಿ ಮೋದಿ ಪಂಚೆ ಮತ್ತು ಶಲ್ಯವನ್ನು ತೊಡಿಸುವ ವ್ಯವಸ್ಥೆ ಮಾಡಲಾಗಿದೆ. ನಂತರ ಪ್ರಧಾನಿ ಮಂಜುನಾಥಸ್ವಾಮಿಯ ದರ್ಶನ ಮಾಡಲಿದ್ದಾರೆ.

    ಮಂಜುನಾಥಸ್ವಾಮಿಗೆ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಮಾಡಲಿದ್ದು, ದೇವರ ವಿರುದ್ಧ ದಿಕ್ಕಿನಲ್ಲಿರುವ ಅಣ್ಣಪ್ಪಸ್ವಾಮಿ ಗುಡಿಗೆ ಭೇಟಿಕೊಟ್ಟು ಅಲ್ಲೂ ಪೂಜೆ ಸಲ್ಲಿಕೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಗುಡಿಯ ಹಿಂಭಾಗದಲ್ಲಿರುವ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ಗಣಪತಿಗೆ ಸೇವೆ ಸಲ್ಲಿಕೆ ಮಾಡಲಿದ್ದಾರೆ. ನಂತರ ದೇವಳದ ಪ್ರಾಂಗಣದಲ್ಲಿರುವ ಅಮ್ಮನವರ ಗುಡಿಗೆ ತೆರಳಿ ಅಲ್ಲಿ ಮಹಾಪೂಜೆ ಸಲ್ಲಿಕೆ ಮಾಡಲಿದ್ದಾರೆ.

    ನಾಲ್ವರು ಅರ್ಚಕರಿಗೆ ಪೂಜೆಯ ಬಗ್ಗೆ ಡಾ. ಹೆಗ್ಗಡೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ. ನಂತರ ಸುಮಾರು 10 ನಿಮಿಷ ಮೋದಿ ಧ್ಯಾನ ಮಾಡುತ್ತಾರೆ ಅನ್ನೊ ಮಾಹಿತಿ ಕೂಡ ಇದೆ. ದೇವರ ದರ್ಶನ- ಪೂಜೆ ಸಲ್ಲಿಕೆಯಾದ ಮೇಲೆ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

    ಪ್ರಧಾನಿ ಮೋದಿ ಭೇಟಿಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಿಟಿ ರವಿ ಬಂದು ಪೂಜೆ ಸಲ್ಲಿಕೆ ಮಾಡಿದ್ದು, ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಆಪ್ತ 15 ಮಂದಿಯನ್ನು ದೇವಸ್ಥಾನದ ಒಳಗೆ ಬಿಡಲಾಗಿದೆ.

  • ದೀಪಾಲಂಕಾರದಿಂದ ಕಂಗೊಳಿಸತ್ತಿರೋ ಬೀದರ್ ರೈಲ್ವೇ ನಿಲ್ದಾಣದಲ್ಲಿ ಸೆಲ್ಫಿ ಕ್ರೇಜ್

    ದೀಪಾಲಂಕಾರದಿಂದ ಕಂಗೊಳಿಸತ್ತಿರೋ ಬೀದರ್ ರೈಲ್ವೇ ನಿಲ್ದಾಣದಲ್ಲಿ ಸೆಲ್ಫಿ ಕ್ರೇಜ್

    – ನೂತನ ಕಲಬುರಗಿ-ಬೀದರ್ ರೈಲು ಮಾರ್ಗಕ್ಕೆ ಇಂದು ಮೋದಿ ಚಾಲನೆ

    ಕಲಬುರಗಿ: ರಾಜ್ಯಕ್ಕೆ ಮೋದಿ ಆಗಮನವಾಗುತ್ತಿರೋ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಮೋದಿ ಬರುವ ಪ್ರಯುಕ್ತ ರಾಜ್ಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮೋದಿ ಭೇಟಿ ನೀಡುವ ಸ್ಥಳಗಳೆಲ್ಲಾ ಶೃಂಗಾರಗೊಂಡು ಜಗಮಗಿಸುತ್ತಿವೆ.

    ಬೆಂಗಳೂರಿನಿಂದ ಪ್ರಧಾನಿ ಮೋದಿ ಅವರು ವಿಶೇಷ ವಿಮಾನದ ಮೂಲಕ ಬೀದರ್‍ಗೆ ಬಂದು ಮೂರು ದಶಕಗಳ ಹಿಂದೆ ಘೋಷಿಸಲಾಗಿದ್ದ ಕಲಬುರಗಿ-ಬೀದರ್ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದು ಈ ರೈಲು ಮಾರ್ಗವನ್ನು ಪ್ರಧಾನಿ ಮೋದಿಯವರು ಲೋಕಾರ್ಪಣೆ ಮಾಡಲಿದ್ದು, ಈ ಹಿನ್ನೆಲೆ ಪ್ರಯುಕ್ತ ರೈಲ್ವೇ ನಿಲ್ದಾಣ ಸಂಪೂರ್ಣವಾಗಿ ದೀಪಾಲಂಕಾರದಿಂದ ಶೃಂಗಾರಗೊಂಡು ಹೊಳೆಯುತ್ತಿದೆ.

    ಇತಿಹಾಸದಲ್ಲೇ ಎಂದು ನೋಡದ ದೀಪಾಲಂಕಾರ ನೋಡಿ ಗಡಿ ಜಿಲ್ಲೆಯ ಬೀದರ್ ಮಂದಿ ಸೆಲ್ಫಿ ತೆಗೆದುಕೊಳ್ಳಲು ರೈಲ್ವೇ ನಿಲ್ದಾಣಕ್ಕೆ ಮುಗಿಬಿದ್ದಿದ್ದಾರೆ. ಪ್ರವಾಸಿ ಮಂದಿರವಾಗಿ ಬದಲಾಗಿರುವ ರೈಲ್ವೇ ನಿಲ್ದಾಣದ ಮುಂದೆ ಕುಟಂಬದ ಜೊತೆ ಹಾಗೂ ಗೆಳೆಯರ ಜೊತೆ ಬಂದು ಸೆಲ್ಫಿ ತೆಗೆದುಕೊಂಡು ಖುಷಿಯಿಂದ ವಾಪಸ್ಸಾಗುತ್ತಿದ್ದಾರೆ.

    ನೂತನ ರೈಲಿಗೆ ಹಸಿರು ನಿಶಾನೆ ತೋರಿ ನಂತರ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಅವರ ಆಗಮನ ಹಿನ್ನೆಲೆಯಲ್ಲಿ ಬೀದರ್ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

    ಬೀದರ್‍ನಿಂದ ಕಲಬುರಗಿಗೆ ಸುಮಾರು 110 ಕಿ.ಮೀ. ಉದ್ದ ಹೊಸ ರೈಲು ಸಂಚಾರ ಮಾರ್ಗ ನಿರ್ಮಾಣವಾಗಿದ್ದು, ಇದು 2000ನೇ ಇಸವಿಯಲ್ಲಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದಿಂದ ಪ್ರಾರಂಭವಾಗಿದೆ. ಈ ಯೋಜನೆ ಮುಕ್ತಾಯವಾಗಲು ಬರೋಬ್ಬರಿ 17 ವರ್ಷ ಬೇಕಾಗಿದೆ. ಒಟ್ಟು 1,542 ಕೋಟಿ ರೂ. ವೆಚ್ಚದಿಂದ ಸುಮಾರು 1.67 ಕಿ.ಮೀ. ಸುರಂಗ ಮಾರ್ಗಕ್ಕೆ 70 ಕೋಟಿ ರೂ. ಖರ್ಚು ಮಾಡಲಾಗಿದೆ.

    ಕಾಂಗ್ರೆಸ್ ಅಸಮಾಧಾನ: ಬೀದರ್‍ನ ರೈಲು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಯೋಜನೆಗೆ ಶ್ರಮಿಸಿದ ನಮಗೆ ಸೌಜನ್ಯಕ್ಕೂ ಆಹ್ವಾನ ನೀಡಿಲ್ಲ ಅಂತಾ ಕೇಂದ್ರದ ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಇನ್ನು ಈ ಯೋಜನೆಗೆ ಮೊದಲಿಗೆ ಕಲಬುರಗಿ-ಬೀದರ್ ಅಂತ ಹೆಸರಿಡಲಾಗಿತ್ತು. ಆದರೆ ಖರ್ಗೆ ಅವರನ್ನು ಮೂಲೆಗುಂಪು ಮಾಡಲೆಂದೇ ಬೀದರ್-ಕಲಬುರಗಿ ಅಂತ ಹೆಸರನ್ನು ಬದಲಿಸಲಾಗಿದೆ ಅಂತ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ದೂರಿದ್ದಾರೆ. ಸಿಎಂ ಸಹ ಆಹ್ವಾನ ಬಂದಿಲ್ಲ. ಜಾಗ ರಾಜ್ಯದ್ದು, ಹಣ ರಾಜ್ಯದ್ದು, ಉದ್ಘಾಟನೆ ಮಾತ್ರ ಮೋದಿ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

     

  • ಧರ್ಮಸ್ಥಳದ ಬಳಿಕ ಬೆಂಗ್ಳೂರಿಗೆ ಪ್ರಧಾನಿ- ಮೋದಿ ಬರೋ ರಸ್ತೆಯ ಗುಂಡಿಗಳೆಲ್ಲಾ ಮಾಯ

    ಧರ್ಮಸ್ಥಳದ ಬಳಿಕ ಬೆಂಗ್ಳೂರಿಗೆ ಪ್ರಧಾನಿ- ಮೋದಿ ಬರೋ ರಸ್ತೆಯ ಗುಂಡಿಗಳೆಲ್ಲಾ ಮಾಯ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದ್ರಿ ಅವರ ಕೃಪೆಯಿಂದ ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳೇ ಮಾಯವಾಗಿದ್ದು, ರಸ್ತೆಗಳೆಲ್ಲಾ ಥಳ ಥಳ ಎಂದು ಹೊಳೆಯುತ್ತಿವೆ.

    ರಸ್ತೆ ಗುಂಡಿಗಳಲ್ಲಿ ಬಿದ್ದು ಐವರು ಸತ್ತರೂ ತಲೆಕೆಡಿಸಿಕೊಳ್ಳಿಲ್ಲ. ಜನರು ಯಮಗುಂಡಿ ರಸ್ತೆಗಳನ್ನು ಮುಚ್ಚಿ ಅಂತಾ ಕೇಳಿಕೊಂಡರು ಸರ್ಕಾರಕ್ಕೆ ಕಾಳಜಿ ಇರಲಿಲ್ಲ. ಆದರೆ ಪ್ರಧಾನಿ ಮೋದಿ ಅವರು ನಗರಕ್ಕೆ ಭೇಟಿ ನೀಡುತ್ತಾರೆ ಎಂದು ಒಂದೇ ದಿನದಲ್ಲಿ ಯಮಗುಂಡಿಗಳಂತಹ ರಸ್ತೆಗಳೆಲ್ಲವನ್ನು ರಿಪೇರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೋದಿ ಅವರು ಬರುವ ರಸ್ತೆಗಳೆಲ್ಲಾ ಥಳ ಧಳ ಅಂತಾ ಹೊಳೆಯುತ್ತಿವೆ.

    ಪ್ರಧಾನಿ ಮೋದಿ ಹೆಚ್‍ಎಲ್‍ನಿಂದ ಪ್ಯಾಲೇಸ್ ಗ್ರೌಂಡ್‍ಗೆ ಬರಲಿದ್ದಾರೆ. ಹೀಗಾಗಿ ಎಂಜಿ ರೋಡ್, ಒಲ್ಡ್ ಟ್ರಿನಿಟಿ ರೋಡ್, ಡಿಕೆನ್ಸನ್ ರೋಡ್, ರಾಜಭವನ ರಸ್ತೆ, ಸ್ಯಾಂಕಿ ರೋಡ್‍ನಲ್ಲಿ ಇದ್ದಂತಹ ಯಮಗುಂಡಿಗಳು ಒಂದೇ ದಿನದಲ್ಲಿ ಮಾಯವಾಗಿವೆ.

    ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಆಗಮಿಸುತ್ತಿದ್ದು, ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರ ಮಧ್ಯಾಹ್ನ ಸುಮಾರು 3.30 ಕ್ಕೆ ಬೆಂಗಳೂರಿಗೆ ಬಜ್ಪೆಯಿಂದ ವಿಮಾನದ ಮೂಲಕ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ ಬಂದು ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಲಹರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಸಂಜೆ ಸುಮಾರು 4.45 ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಧಾನಿ ಮೋದಿ ಅವರು ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಂಜೆ 5.10 ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20 ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

     

  • ಮೋದಿ ಆಗಮನ- ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹಾವು, ನಾಯಿ ಹಿಡಿಯಲು ಟೀಂ ನೇಮಕ

    ಮೋದಿ ಆಗಮನ- ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹಾವು, ನಾಯಿ ಹಿಡಿಯಲು ಟೀಂ ನೇಮಕ

    ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ನಗರಕ್ಕೆ ಬರುವ ಹಿನ್ನಲೆಯಲ್ಲಿ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಇಂದಿನಿಂದಲೇ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ. ನಿಲ್ದಾಣದಲ್ಲಿ ಹಾವು, ನಾಯಿಗಳನ್ನ ಹಿಡಿಯಲು ಸಿಬ್ಬಂದಿಯನ್ನ ನೇಮಿಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ನಾಳೆ ಆಗಮಿಸುತ್ತಿದ್ದು, ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರ ಮಧ್ಯಾಹ್ನ ಸುಮಾರು 3.30 ಕ್ಕೆ ಬೆಂಗಳೂರಿಗೆ ಬಜ್ಪೆಯಿಂದ ವಿಮಾನದ ಮೂಲಕ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ ಬಂದು ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಮೋದಿ ಬರುವ ಹಿನ್ನಲೆಯಲ್ಲಿ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಹಾವು ಮತ್ತು ನಾಯಿಗಳನ್ನು ಹಿಡಿದು ಹಾಕಿ ಎಂದು ಪೊಲೀಸರು ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರ ಮನವಿಯ ಮೇರೆಗೆ ಬಿಬಿಎಂಪಿ ವಿಮಾನ ನಿಲ್ದಾಣದಲ್ಲಿ ಹಾವು, ನಾಯಿಗಳನ್ನು ಹಿಡಿಯಲು ಅರಣ್ಯ ಘಟಕದ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ.

    ಲಹರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಸಂಜೆ ಸುಮಾರು 4.45 ಕ್ಕೆ ಬೆಂಗಳೂರಿನಿಂದ ಬೀದರ್‍ಗೆ ಪ್ರಧಾನಿ ಮೋದಿ ಅವರು ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಂಜೆ 5.10 ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20 ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

    ನಾಳೆ ಬೆಳಗ್ಗೆ 10.45ಕ್ಕೆ ಶ್ರೀಕ್ಷೇತ್ರಕ್ಕೆ ಆಗಮಿಸಲಿರುವ ಪ್ರಧಾನಿ, ಮಂಜುನಾಥ ಸ್ವಾಮಿಯ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಕುರ್ತಾ, ಫೈಜಾಮಾ ಧರಿಸಲಿರೋ ಪ್ರಧಾನಿ, ನಾಳೆ ಪಂಜೆ- ಶಲ್ಯ ತೊಟ್ಟು ಪೂಜೆಯಲ್ಲಿ ತೊಡಗಲಿದಾರೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 2 ಗಂಟೆವರೆಗೆ ಭಕ್ತಾದಿಗಳಿಗೆ ದರ್ಶನ ಭಾಗ್ಯ ನಿರ್ಬಂಧಿಸಲಾಗಿದೆ. ದೇವರ ದರ್ಶನ ವೇಳೆ ಅಧಿಕಾರಿಗಳು ಹಾಗೂ ಸಚಿವರಿಗಳಿಗೂ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಾಳೆ ಬೆಳಗ್ಗೆ 9ರಿಂದ ಧರ್ಮಸ್ಥಳ-ಉಜಿರೆ-ಕೊಕ್ಕಡ ನಡುವೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದ್ರೆ ಚಾರ್ಮಾಡಿ, ಮಂಗಳೂರು ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆ ಮಾಡಲಾಗಿದೆ. ಪ್ರಧಾನಿ ಸ್ವಾಗತಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ನವವಧುವಿನಂತೆ ಶೃಂಗಾರಗೊಂಡಿದೆ.

    ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿ. ರಮಾನಾಥ ರೈ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಡಿ. ವೀರೇಂದ್ರ ಹೆಗ್ಗಡೆ, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.