Tag: prime minister modi

  • ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

    ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

    ಬೆಂಗಳೂರು: ರಾಜಕಾರಣಿಗಳು ದೇವರ ಮನೆಗೆ ಹೋಲಿಕೆ ಇಲ್ಲ. ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ ಎಂದು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯವರ ಹುಟ್ಟಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಟಾಟಾ ಇನ್ಸ್ ಟ್ಯೂಟ್ ಅಡಿಟೋರಿಯಂನಲ್ಲಿ ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ ನೇತೃತ್ವದಲ್ಲಿ ಗುಡ್ ಗರ್ವನರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು.

    ದೇವರ ಮನೆ ಒಂದು ದಿನ ಸ್ವಚ್ಛ ಮಾಡಿದರೂ ಪರವಾಗಿಲ್ಲ. ಆದರೆ ಬಚ್ಚಲು ಮನೆ ಕ್ಲೀನ್ ಮಾಡದೇ ಇದ್ರೆ ಏನಾಗುತ್ತೆ ಹೇಳಿ? ಹಾಗೇ ಇಂದಿನ ರಾಜಕಾರಣಿಗಳು ಆಗಿದ್ದಾರೆ. ನಮ್ಮ ಸರ್ಟಿಫಿಕೇಟ್‍ಗಳಿಂದ ಸಂಸ್ಕಾರ ಬಂದಿಲ್ಲ. ತಂದೆ-ತಾಯಿಗಳಿಂದ ನಮಗೆ ಸಂಸ್ಕಾರ ಬಂದಿದೆ ಎಂದು ಹೇಳಿದರು.

    ಒಳ್ಳೆಯ ಆಡಳಿತ ಹೇಗಿರಬೇಕು ಅಂತ ಹೇಳಿಕೊಟ್ಟವರು ವಾಜಪೇಯಿಯವರು. ಆರೋಗ್ಯ ಸರಿಯಿಲ್ಲದಿದ್ದರೂ ದೇಶ ಹೇಗೆ ನಡೆಯುತ್ತಿದೆ ಅಂತ ಕೇಳುತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಓಟು ಪಡೆದವರಿಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಓಟ್ ಹಾಕಿದವನಿಗೂ ಇರುತ್ತದೆ ಎಂದರು.

    ಆಡಳಿತ ಅಂದ್ರೆ ಅದು ಮೋದಿಯವರ ಆಡಳಿತದಂತೆ ಇರಬೇಕು. ಇಡೀ ವಿಶ್ವವೇ ತಲೆಬಾಗುವ ಆಡಳಿತ ನೀಡುತ್ತಿರುವುದು ನರೇಂದ್ರ ಮೋದಿಯವರು. ಇವತ್ತು ಮೋದಿ ಬಗ್ಗಿದ್ರೆ ವಿಶ್ವದ ನಾಯಕರು ಬಗ್ಗುತ್ತಾರೆ. ಎದ್ರೆ ವಿಶ್ವದ ನಾಯಕರು ಏಳುತ್ತಾರೆ. ಯೋಗವನ್ನು ವಿಶ್ವಕ್ಕೆ ಹರಡಿಸಿದವರು ನರೇಂದ್ರ ಮೋದಿ. ಇದು ಉತ್ತಮ ಆಡಳಿತಕ್ಕೆ ಉದಾಹರಣೆ ಎಂದರು.

    ಪ್ರಧಾನಿ ಮೋದಿ ಟೀಕೆ ಮಾಡಿದವರಿಗೆ ಹೆಗ್ಡೆ ಟಾಂಗ್ ಕೊಟ್ಟ ಸಚಿವರು, ಪ್ರತಿಯೊಂದಕ್ಕೂ ಇಂದಿನ ಪ್ರಧಾನಿ ಲೆಕ್ಕ ನೀಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಯಾವತ್ತಾದ್ರು ಲೆಕ್ಕ ಕೊಟ್ಟಿದ್ದವಾ? ಜನರ ಪ್ರತಿಯೊಂದು ಹಣಕ್ಕೂ ಮೋದಿಯವರು ಲೆಕ್ಕ ಕೊಡುತ್ತಿದ್ದಾರೆ. ಗ್ಯಾಸ್ ಸಬ್ಸಿಡಿ ಹಣದಿಂದ ಹಳ್ಳಿ ಬಡವರಿಗೆ ಗ್ಯಾಸ್ ನೀಡುತ್ತಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕ ನೀಡುತ್ತಿರೋರು ಮೋದಿ. ನಮ್ಮದು ಏನಿದ್ರು ಮಾಡು ಇಲ್ಲವೇ ಮಡಿ ಸಿದ್ಧಾಂತ ಎಂದರು.

    ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತೇವೆ. ಆದರೆ ಹೇಗೆ ಅಭಿವೃದ್ಧಿ ಮಾಡಬೇಕು ಎನ್ನುವುದು ಗೊತ್ತಿಲ್ಲ. ಸೋಗಲಾಡಿ ವಿಷಯಗಳನ್ನು ಇಟ್ಟುಕೊಂಡು ಇಂದು ಚರ್ಚೆ ಮಾಡಲಾಗುತ್ತಿದೆ. ದುಡ್ಡು-ಜಾತಿ ನೋಡಿ ಇವತ್ತು ಓಟ್ ನೀಡುತ್ತಿದ್ದಾರೆ. ಸರ್ಕಾರ ಕಾಮಗಾರಿಗಳನ್ನು ಕೊಡುವುದೇ ಅಭಿವೃದ್ಧಿ ಅಂದುಕೊಂಡವರು 100ಕ್ಕೆ 99 ಜನ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಪ್ಪ-ಅಮ್ಮನ ಗುರುತು ಇಲ್ಲದೇ ಇರೋ ರಕ್ತವನ್ನು ಹೊಂದಿರುವವರು ಜಾತ್ಯತೀತರು: ಅನಂತಕುಮಾರ ಹೆಗ್ಡೆ

    ಕಾಮಗಾರಿಗಳನ್ನು ಇಟ್ಟುಕೊಂಡು ಚರ್ಚೆ ಮಾಡುವವರು ವಿಚಾರವಾದಿಗಳು. ಜಾತಿ, ದುಡ್ಡಿನ ಹೆಸರು ಹೇಳಿಕೊಂಡು ಗೆದ್ದು ಬಂದವರು ನಿಮ್ಮನ್ನ ಅಭಿವೃದ್ಧಿ ಮಾಡ್ತಾರೆ ಎನ್ನುವುದು ನಿಮ್ಮ ಮೂರ್ಖತನ. ಜಾತಿ, ಧರ್ಮ, ಹಣ ಬಿಟ್ಟು ಆಡಳಿತ ನಡೆಸುವವನು ನಿಜವಾಗಿ ಉತ್ತಮ ಆಡಳಿತ ನೀಡುತ್ತಾನೆ. ಈ ಕೆಲಸವನ್ನ ನರೇಂದ್ರ ಮೋದಿ ಮಾಡ್ತಿದ್ದಾರೆ. ಇಡೀ ವಿಶ್ವ ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಗೌರವ ನೀಡುತ್ತಿದೆ ಎಂದು ಹೇಳಿದರು.

    ನನಗೆ ಪ್ರಧಾನಿಯವರು ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ನೀಡಿದ್ದಾರೆ. ಈ ಹೊಣೆ ನೀಡುವ ವೇಳೆ ನನಗೆ ಈ ಇಲಾಖೆ ಬಗ್ಗೆ ಗೊತ್ತಿರಲಿಲ್ಲ. ಆದರೆ ಜವಾಬ್ದಾರಿ ಸಿಕ್ಕಿದ ಮೇಲೆ ತಿಳಿದುಕೊಳ್ಳುತ್ತಾ ಹೋದಾಗ ನನಗೆ ನೀಡಿರುವ ಕೌಶಲ್ಯಾಭಿವೃದ್ಧಿ ಇಲಾಖೆ ನೀರಿಲ್ಲದ ಬಾವಿ ಇದ್ದ ಹಾಗೆ ಎನ್ನುವುದು ಅರಿವಿಗೆ ಬಂತು. ನಮ್ಮ ಯುವಕರು ಸರ್ಟಿಫಿಕೇಟ್ ಮಾತ್ರ ಸಂಪಾದಿಸುತ್ತಾರೆ. ಆದರೆ ಅದಕ್ಕೆ ತಕ್ಕ ಯೋಗ್ಯತೆಗಳು ಅವರಲ್ಲಿ ಇಲ್ಲ. ಶ್ರಮ ಇಲ್ಲದೇ ಇಂದಿನ ಯುವಕರು ದೊಡ್ಡ ಕನಸು ಕಾಣುತ್ತಿದ್ದಾರೆ. ಬದುಕಿನಲ್ಲಿ ಯಶಸ್ವಿಯಾದವರ ಬದುಕಿನ ಹಿಂದೆ ಪರಿಶ್ರಮ ಇರುತ್ತದೆ. ಬೆವರನ್ನು ಚೆಲ್ಲದೇ ಸಾಧನೆ ಸಾಧ್ಯವಿಲ್ಲ. ಬದುಕು ಲಾಟರಿ ಟಿಕೆಟ್ ಅಲ್ಲ. ಪರಿಶ್ರಮ ಇಲ್ಲದೆ ಬದುಕು ಕಟ್ಟಲು ಸಾಧ್ಯವಿಲ್ಲ. ಈ ಸ್ವಭಾವ ಯುವ ಜನತೆಯಲ್ಲಿ ಇಲ್ಲ ಎಂದರು. ಇದನ್ನೂ ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    ದೇಶದ ಬದಲಾವಣೆ ಪ್ರಾರಂಭವಾಗಿದೆ. 120 ಕೋಟಿ ಜನರ ಬದಲಾವಣೆ ದಿಢೀರ್ ಅಂತ ಸಾಧ್ಯವಿಲ್ಲ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಗಳು ಸಿಕ್ಕಿರೋದು ನಮ್ಮ ಪುಣ್ಯ ಎಂದು ಹೇಳಿ ಮೋದಿ ಕಾರ್ಯವನ್ನು ಹೊಗಳಿದರು.

    ಪ್ರತಿಕ್ರಿಯೆ ನೀಡಲ್ಲ: ಅನಂತ್ ಕುಮಾರ್ ಹೆಗ್ಡೆ ನಾಲಾಯಕ್ ಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಕೇಳಲು ಮುಂದಾದಾಗ, ನಾನು ಯಾವುದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಭಾಷಣ ಮುಗಿದ ಕೂಡಲೇ ಅವರು ತೆರಳಿದರು.

  • ಇಂದಿರಾಗಾಂಧಿ ಅವಧಿಯನ್ನು ಪ್ರಸ್ತಾಪಿಸಿ ಸಂಸದೀಯ ಸಭೆಯಲ್ಲಿ ಭಾವುಕರಾದ ಮೋದಿ

    ಇಂದಿರಾಗಾಂಧಿ ಅವಧಿಯನ್ನು ಪ್ರಸ್ತಾಪಿಸಿ ಸಂಸದೀಯ ಸಭೆಯಲ್ಲಿ ಭಾವುಕರಾದ ಮೋದಿ

    ನವದೆಹಲಿ: ವಿರೋಧಿಗಳ ನಕಾರತ್ಮಕ ಟೀಕೆಗಳನ್ನು ನಿರ್ಲಕ್ಷಿಸಿ, ಯುವ ಮತದಾರರನ್ನು ಪಕ್ಷದತ್ತ ಸೆಳೆಯಲು ಗಮನಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸದರಲ್ಲಿ ಕೇಳಿಕೊಂಡಿದ್ದಾರೆ.

    ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾದ ಎರಡು ದಿನದ ಬಳಿಕ ಪಕ್ಷದ ಸಂಸದೀಯ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಗೆಲುವು ಬಿಜೆಪಿ ಪಕ್ಷಕ್ಕೆ ಅತಿದೊಡ್ಡ ಗೆಲುವಾಗಿದೆ ಎಂದು ಹೇಳಿ ಮುಂದಿನ ಗೆಲುವುಗಳ ಬಗ್ಗೆ ಗಮನಹರಿಸಿ ಎಂದು ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ.

    ಅಲ್ಲದೇ ಈ ಗೆಲುವಿನೊಂದಿಗೆ ನಾವು 19 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಇಂದಿರಾ ಗಾಂಧಿ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ 18 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿತ್ತು. ಇದೀಗ ನಾವು ಆದನ್ನೂ ಮೀರಿದ ಸಾಧನೆ ಮಾಡಿದ್ದು, 19 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. 1984ರಲ್ಲಿ ಭಾರತೀಯ ಜನತಾ ಪಕ್ಷ ಕೇವಲ 2 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. ಅಂದಿನಿಂದ ಇಂದಿನವರೆಗೂ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. 2 ಸ್ಥಾನಗಳಿಂದ ಆರಂಭಿಸಿದ ನಾವು ಇಂದು 19 ರಾಜ್ಯಗಳಲ್ಲಿ ಅಧಿಕಾರ ಪಡೆದಿದ್ದೆವೆ ಎಂದು ಹೇಳಿದರು. ಈ ರೀತಿ ಮಾತನಾಡುವಾಗ ಪ್ರಧಾನಿ ಭಾವುಕರಾಗಿದ್ದರು ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ.

    ಪಕ್ಷ ಸಂಸದೀಯ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಜೆಪಿ ಹಿರಿಯ ನಾಯಕ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಆನಂತ್ ಕುಮಾರ್, ವಿರೋಧಿ ಪಕ್ಷಗಳ ಟೀಕೆ, ಹಾಗೂ ಅಭಿಪ್ರಾಯಗಳಿಂದ ಪಕ್ಷದ ಕಾರ್ಯಕರ್ತರು ಹಿಂಜರಿಯಬಾರದು. ದೇಶದ ತಳ ಮಟ್ಟದ ಕಾರ್ಯಕರ್ತರ ನಡುವೆ ಕಾರ್ಯನಿರ್ವಹಿಸಿ, ಯುವ ಸಮುದಾಯವನ್ನು ಪ್ರೇರೇಪಿಸುವ ಕಾರ್ಯ ನಡೆಯಬೇಕು. 2012 ರ ನಂತರ ಜನಿಸಿದ ಯುವ ಸಮೂಹ ಮುಂದಿನ ವರ್ಷದಲ್ಲಿ 18 ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ. ಹೊಸ ಪೀಳಿಗೆ ದೇಶ, ಸಮಾಜ ಹಾಗೂ ಅಭಿವೃದ್ಧಿಗಾಗಿ ಸೇವೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿದ್ದಾರೆ ಎಂದು ಹೇಳಿದರು.

    ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಹಲವು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ ಸಭೆಯಲ್ಲಿ ಪಕ್ಷದ ಮುಂದಿನ ಹಲವು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಯಾವುದೇ ಮಾಹಿತಿ ಬಹಿರಂಗೊಂಡಿಲ್ಲ.

    2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ, 13 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಆದರೆ ಮೂರೇ ವರ್ಷದಲ್ಲಿ ಬಿಜೆಪಿ 12 ರಾಜ್ಯದಲ್ಲಿ ಗೆಲ್ಲುವ ಮೂಲಕ ಒಟ್ಟು 19 ರಾಜ್ಯದಲ್ಲಿ ಈಗ ಆಡಳಿತ ವಿಸ್ತರಣೆ ಮಾಡಿಕೊಂಡಿದೆ. ಕಾಂಗ್ರೆಸ್ 9 ರಾಜ್ಯಗಳನ್ನು ಕಳೆದುಕೊಂಡು ಈಗ ಕೇವಲ ಕರ್ನಾಟಕ, ಮಿಜೋರಾಂ, ಪಂಜಾಬ್, ಮೇಘಾಲಯದಲ್ಲಿ ಅಧಿಕಾರಲ್ಲಿದೆ.

    ಅರುಣಾಚಲ ಪ್ರದೇಶ್, ಅಸ್ಸಾಂ, ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‍ಗಡ, ಗೋವಾ, ಗುಜರಾತ್, ಜಾರ್ಖಂಡ್, ಜಮ್ಮುಮತ್ತು ಕಾಶ್ಮೀರ, ಹರ್ಯಾಣ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ.

    ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಜಯಗಳಿಸಿದ ಬಳಿಕ ಬಿಜೆಪಿ, ಬಿಜೆಪಿ ಮೈತ್ರಿಕೂಟ ಇಲ್ಲದೇ ಇರುವುದು ಕೇವಲ 10 ರಾಜ್ಯಗಳು ಮಾತ್ರ. ಕರ್ನಾಟಕ(ಕಾಂಗ್ರೆಸ್), ತಮಿಳುನಾಡು(ಎಐಎಡಿಎಂಕೆ), ಕೇರಳ(ಸಿಪಿಐಎಂ), ಪಶ್ಚಿಮ ಬಂಗಾಳ(ತೃಣಮೂಲ ಕಾಂಗ್ರೆಸ್), ಒಡಿಶಾ(ಬಿಜು ಜನತಾ ದಳ) ಮೇಘಾಲಯ(ಕಾಂಗ್ರೆಸ್), ತೆಲಂಗಾಣ(ತೆಲಂಗಾಣ ರಾಷ್ಟ್ರೀಯ ಸಮಿತಿ), ಮಿಜೋರಾಂ( ಕಾಂಗ್ರೆಸ್) ದೆಹಲಿ(ಆಮ್ ಆದ್ಮಿ ಪಾರ್ಟಿ), ತ್ರಿಪುರಾ(ಸಿಪಿಐ-ಎಂ).

  • ಕರಾವಳಿಯ ಖಾದ್ಯಕ್ಕೆ ಮನಸೋತ ಮೋದಿ – ತಿಂಡಿ ಬಡಿಸಿದವರಿಗೆ ಪ್ರಧಾನಿಯಿಂದ ಪ್ರಶಂಸೆ

    ಕರಾವಳಿಯ ಖಾದ್ಯಕ್ಕೆ ಮನಸೋತ ಮೋದಿ – ತಿಂಡಿ ಬಡಿಸಿದವರಿಗೆ ಪ್ರಧಾನಿಯಿಂದ ಪ್ರಶಂಸೆ

    -ನೀರುದೋಸೆ, ಕಡುಬು, ಅವಲಕ್ಕಿ ಉಪ್ಪಿಟ್ಟು ಸವಿದ್ರು

    ಮಂಗಳೂರು: ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿಯ ಖಾದ್ಯಕ್ಕೆ ಮನಸೋತಿದ್ದಾರೆ.

    ಪ್ರಧಾನಿಯವರಿಗೆ ಬೆಳಗ್ಗಿನ ಉಪಹಾರಕ್ಕೆ ಓಷಿಯನ್ ಪರ್ಲ್ ಹೋಟೆಲ್ ನಿಂದ ತಿಂಡಿಯನ್ನು ಸಿದ್ಧತೆ ಮಾಡಲಾಗಿತ್ತು. ಹೀಗಾಗಿ ಪ್ರಧಾನಿಯವರು ನೀರುದೋಸೆ, ಕಡುಬು, ಅವಲಕ್ಕಿ ಮತ್ತು ಉಪ್ಪಿಟ್ಟನ್ನು ಸವಿದಿದ್ದಾರೆ. ತಾವು ತಿಂದ ತಿಂಡಿಯಲ್ಲಿ ಕಡುಬಿನ ರುಚಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದು, ನಂತರ ಹೋಟೆಲ್‌ ಸಿಬ್ಬಂದಿ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ. ಕೊನೆಗೆ ತಮಗೆ ತಿಂಡಿ ಬಡಿಸಿದವರಿಗೆ ಪ್ರಶಂಸೆ ಕೂಡ ವ್ಯಕ್ತಪಡಿಸಿದ್ದಾರೆ.

    ಮೋದಿಯವರು ಸೋಮವಾರ ತಡಾರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬಳಿಕ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದು, ಉಪಹಾರ ಸೇವನೆ ಬಳಿಕ ಬೆಳಗ್ಗೆ 7.30 ಕ್ಕೆ ರಸ್ತೆ ಮಾರ್ಗದ ಮೂಲಕ ತೆರಳಿ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ತೆರಳಿದ್ದಾರೆ.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ಕೆಲ ನಿಮಿಷಗಳ ಕಾಲ ತಡೆಹಿಡಿಯಲಾಗಿತ್ತು. ಮೋದಿಯವರ ಲಕ್ಷದ್ವೀಪ ಪ್ರವಾಸಕ್ಕೆ ಎರಡು ವಿಶೇಷ ವಿಮಾನಗಳನ್ನು ಸಿದ್ಧಪಡಿಸಲಾಗಿತ್ತು. ಈ ಪೈಕಿ ಒಂದು ವಿಮಾನದ ಮೂಲಕ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದಾರೆ. ಮೋದಿ ಲಕ್ಷದ್ವೀಪಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಮತ್ತೊಂದು ವಿಶೇಷ ವಿಮಾನ ಕೂಡ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿದೆ.

    ಇತ್ತೀಚೆಗೆ ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಮೋದಿ ಭೇಟಿ ನೀಡಿ ಪುನರ್ವಸತಿ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ.

     

  • ಮಂಗ್ಳೂರಲ್ಲಿ ಪ್ರಧಾನಿ ಮೋದಿ ಸಂಚಲನ – ನೂರಾರು ಕಾರ್ಯಕರ್ತರ ಜೊತೆ `ನಮೋ’ ವಿಜಯೋತ್ಸವ

    ಮಂಗ್ಳೂರಲ್ಲಿ ಪ್ರಧಾನಿ ಮೋದಿ ಸಂಚಲನ – ನೂರಾರು ಕಾರ್ಯಕರ್ತರ ಜೊತೆ `ನಮೋ’ ವಿಜಯೋತ್ಸವ

    ಕಾರವಾರ: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ವಿಜಯೋತ್ಸವ ಬೆನ್ನಲ್ಲೇ ಪ್ರಧಾನಿ ಮೋದಿ ಮಂಗಳೂರಿನಲ್ಲಿ ಸಂಚಲನ ಸೃಷ್ಠಿಸಿದ್ದಾರೆ. ರಾತ್ರೋರಾತ್ರಿ ಲಕ್ಷದ್ವೀಪಕ್ಕೆ ತೆರಳಲು ಕಡಲ ನಗರಿಗೆ ಆಗಮಿಸಿದ್ದಾರೆ.

    ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಲು ಮೊದಲೇ ನಿಗದಿಯಾದಂತೆ ಪ್ರಧಾನಿ ಮೋದಿ ರಾತ್ರಿ 11.45 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದರು. ವಿಮಾನ ನಿಲ್ದಾಣದಿಂದ ಹೊರಬಂದು ತಮ್ಮ ಬುಲೆಟ್ ಪ್ರೂಫ್ ವಾಹನದಲ್ಲಿ ಹೊರಗೆ ನೆರೆದಿದ್ದ ಕಾರ್ಯಕರ್ತರತ್ತ ಆಗಮಿಸಿದ್ದಾರೆ. ಕೈಬೀಸುತ್ತಲೇ ವಾಹನದಿಂದಿಳಿದ ಪ್ರಧಾನಿ, ಅಲ್ಲಿಂದ ನೇರವಾಗಿ ಕಾರ್ಯಕರ್ತರತ್ತ ನಡೆದುಕೊಂಡು ಆಗಮಿಸಿದ್ದಾರೆ. ಪೊಲೀಸ್ ಸರ್ಪಗಾವಲಿನ ಮಧ್ಯೆ ಒಂದೆಡೆ ಸೇರಿದ್ದ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು `ಮೋದಿ, ಮೋದಿ’ ಎಂದು ಹರ್ಷೋದ್ಘಾರ ಹಾಕತೊಡಗಿದ್ದಾರೆ.

    ನೆಚ್ಚಿನ ನಾಯಕನನ್ನು ನೋಡಲು ಸುಮಾರು 2 ಗಂಟೆಗಳಿಗೂ ಮೊದಲೇ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಪ್ರಧಾನಿ ಆಗಮಿಸುತ್ತಿದ್ದಂತೆ, `ಮೋದಿ..ಮೋದಿ’ ಎಂಬ ಹರ್ಷೋದ್ಘಾರ ವ್ಯಕ್ತಪಡಿಸಿದ್ರು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ಕೊಂಬು, ಕಹಳೆ, ಚೆಂಡೆ, ಗೊಂಬೆ ಕುಣಿತಗಳೊಂದಿಗೆ ಪ್ರಧಾನಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಕಾರ್ಯಕರ್ತರ ಜತೆಗೆ ವಿಜಯೋತ್ಸವದ ಆಚರಿಸಿದ ಪ್ರಧಾನಿ ಮೋದಿ, ಕಾರ್ಯಕರ್ತರು ಹಾಗೂ ಜನತೆಯತ್ತ ವಿಜಯದ ಸಂಕೇತ ತೋರುವ ಮೂಲಕ ಅಭಿನಂದನೆ ಸಲ್ಲಿಸಿದರು.

    ಬಳಿಕ ಮೋದಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಉದ್ದಕ್ಕೂ ಕಾರ್ಯಕರ್ತರ ಕೈಕುಲುಕುತ್ತಲೇ ನಡೆಯುತ್ತಾ ಬಂದಿದ್ದಾರೆ. ಈ ವೇಳೆ ಯುವ ಕಾರ್ಯಕರ್ತರಂತೂ ಪೊಲೀಸರು ಹಾಕಿದ್ದ ಬ್ಯಾರಿಕೇಡನ್ನೂ ಲೆಕ್ಕಿಸದೇ ನೆಚ್ಚಿನ ಪ್ರಧಾನಿಯನ್ನು ಹತ್ತಿರದಿಂದ ನೋಡಲು ಮುಗಿಬಿದ್ದರು.

    ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಏರ್ ಪೋರ್ಟ್ ಆವರಣದಲ್ಲಿ ಸೇರಿದ್ದರು. ಕೀಲು ಕುದುರೆ, ಚೆಂಡೆ, ಕೊಂಬು ವಾದ್ಯಗಳ ಕಹಳೆಗೆ ಕುಣಿದು ಕುಪ್ಪಳಿಸತೊಡಗಿದ್ದರು. ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವು ಜಿಲ್ಲಾ ಮುಖಂಡರು ಕಾರ್ಯಕರ್ತರಿಗೆ ಸಾಥ್ ನೀಡಿದ್ದರು. ಎರಡು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಲೇ ಕರ್ನಾಟಕಕ್ಕೆ ಆಗಮಿಸಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

    ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ರಾತ್ರಿ ತಂಗಿದ್ದ ಮೋದಿ, ಬೆಳಗ್ಗೆ 7.30 ಕ್ಕೆ ಲಕ್ಷದ್ವೀಪಕ್ಕೆ ಹೊರಟಿದ್ದಾರೆ. ಇತ್ತೀಚೆಗೆ ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಭೇಟಿ ನೀಡಿ, ಪುನರ್ವಸತಿ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ. ಸಂಜೆ ಅಲ್ಲಿಂದ ತಿರುವನಂತಪುರದ ಮೂಲಕ ದೆಹಲಿಗೆ ಪ್ರಯಾಣಿಸಲಿದ್ದಾರೆ.

     

  • 2018ರ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಹುಟ್ಟದೇ ಇದ್ದರೆ ಅಷ್ಟೇ ಸಾಕು: ಅಣ್ಣಾ ಹಜಾರೆ

    2018ರ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಹುಟ್ಟದೇ ಇದ್ದರೆ ಅಷ್ಟೇ ಸಾಕು: ಅಣ್ಣಾ ಹಜಾರೆ

    ನವದೆಹಲಿ: ಮುಂದಿನ ವರ್ಷ ಮಾರ್ಚ್ 23 ರಿಂದ ಆರಂಭಿಸಲು ಉದ್ದೇಶಿಸಲಾಗಿರುವ ಭ್ರಷ್ಟಚಾರ ವಿರೋಧಿ ಹಾಗೂ ಜನ ಲೋಕಪಾಲ್ ಮಸೂದೆ ಜಾರಿ ಸಂಬಂಧ ನಡೆಸಲಿರುವ ಹೋರಾಟದ ಚಳುವಳಿಯಲ್ಲಿ ಮತ್ತೊಬ್ಬ ಅರವಿಂದ ಕೇಜ್ರಿವಾಲ್ ಹುಟ್ಟಿ ಬಾರದೇ ಇದ್ದರೆ ಅಷ್ಟೇ ಸಾಕು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

    ಅಣ್ಣಾ ಹಜಾರೆ ಅವರು ಬರುವ ಮಾರ್ಚ್ 23ಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದ ಚಳುವಳಿ ಆಯೋಜಿಸಲಿದ್ದು, ಈ ಚಳುವಳಿಯಲ್ಲಿ ದೇಶದ ನಾನಾ ಭಾಗಗಳ ರೈತರು ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.

    ಆಗ್ರಾದ ಶಾಹಿರ್ ಸ್ಮಾರಕ್ (ಸ್ವಾತಂತ್ರ್ಯ ಹುತಾತ್ಮರ ಸ್ಮಾರಕ ) ಸಭೆಯಲ್ಲಿ ಮಾತನಾಡಿದ ಅವರು ಜನ ಲೋಕಪಾಲ್ ಮಸೂದೆಯ ಜಾರಿಗೆ ಮೋದಿ ಸರ್ಕಾರ ವಿಳಂಬ ಮಾಡುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಪ್ಪಿತಸ್ಥರು ಎಂದು ಆರೋಪಿಸಿದರು. ಅಲ್ಲದೇ ನಾವು ಬಂಡವಾಳಶಾಹಿಗಳ ಸರ್ಕಾರವನ್ನು ಬಯಸುವುದಿಲ್ಲ. ಮೋದಿ ಅಥವಾ ರಾಹುಲ್ ಗಾಂಧಿ ಯಾರೇ ಆಗಿರಲಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಸರ್ಕಾರವನ್ನು ನಾವು ಬಯಸುತ್ತೇವೆ ಎಂದರು.

    ಕೇಜ್ರಿವಾಲ್ ಜೊತೆಗೆ ಸದ್ಯ ನನಗೆ ಯಾವುದೇ ಸಂಬಂಧವಿಲ್ಲ, ಮುಂದಿನ ಹೋರಾಟದಲ್ಲಿ ಮತ್ತೆ ಅವರು ನನ್ನ ಚಳುವಳಿಯಲ್ಲಿ ಭಾಗವಹಿಸಿವುದಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

    2011 ರಲ್ಲಿ ಅಣ್ಣಾ ಹಜಾರೆ ಯುಪಿಎ ಸರ್ಕಾರದ ವಿರುದ್ಧ ಜನ ಲೋಕಪಾಲ್ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್, ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಂತರ 2012 ರಲ್ಲಿ ತಮ್ಮ ಸ್ವಂತ ಆಮ್ ಆದ್ಮಿ ಪಕ್ಷ ಸ್ಥಾಪಿಸಿ ರಾಜಕೀಯ ರಂಗ ಪ್ರವೇಶ ಮಾಡಿದರು. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ದಿನಗಳಲ್ಲಿ ಹಜಾರೆ ಅವರು ತಮ್ಮ ಭ್ರಷ್ಟಾಚಾರ ಚಳುವಳಿಯಿಂದ ಸ್ವಲ್ಪ ಹಿಂದೆ ಸರಿದಿದ್ದರು.

    ಪ್ರಸ್ತುತ ಮತ್ತೆ ಜನ್ ಲೋಕಪಾಲ್ ನೇಮಕ, ಭ್ರಷ್ಟಚಾರ ವಿರೋಧಿ ಚಳುವಳಿ, ಚುನಾವಣೆ ಸುಧಾರಣೆಗಳು ಹಾಗೂ ದೇಶದಲ್ಲಿನ ರೈತರ ಸಮಸ್ಯೆಗಳ ಕುರಿತು ಹೋರಾಟಕ್ಕಿಳಿದಿರುವ ಅಣ್ಣಾ ಹಜಾರೆ ತನ್ನ ಹೋರಾಟವನ್ನು ಬೆಂಬಲಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

    ಕಳೆದ ವರ್ಷ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡಿದ್ದ ನೋಟು ನಿಷೇಧ ಕ್ರಮವು ವಿಫಲವಾಗಿದ್ದು, ದೇಶದಲ್ಲಿ ಭ್ರಷ್ಟಾಚಾರ ಮುಂದುವರೆದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸ್ತುತ ರಾಜಕೀಯ ಸನ್ನಿವೇಶಗಳು ಯುವ ಜನರಿಗೆ ರಾಜಕೀಯ ಭವಿಷ್ಯದ ಭರವಸೆಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

    ನಾನು ಪ್ರಜಾಪ್ರಭುತ್ವದ ವ್ಯವಸ್ಥೆಯ ವಿರೋಧಿ ಅಲ್ಲ, ಆದರೆ ಚುನಾವಣೆಗಳು ಸಂವಿಧಾನದ ನೈಜ ಉದ್ದೇಶಗಳ ಅಡಿಯಲ್ಲಿ ನಡೆಸಬೇಕು. ನಾಯಕರು ಸಾಮಾನ್ಯ ವರ್ಗದ ಜನರಿಂದ ಬರಬೇಕು. ನಾವು ಬ್ರಿಟಿಷರನ್ನು ತೊರೆದು ಸ್ವಾತಂತ್ರ್ಯ ಪಡೆದಿದ್ದೇವೆ ಆದರೆ ಜನರು ಇನ್ನೂ ಪ್ರಜಾಪ್ರಭುತ್ವದ ನಿಜವಾದ ಅರ್ಥಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

  • ಬಿಎಸ್‍ವೈ ರಾಜಕೀಯದಲ್ಲೇ ಅತ್ಯಂತ ಬೇಜವಾಬ್ದಾರಿಯುತ ಮನುಷ್ಯ: ಸಿಎಂ

    ಬಿಎಸ್‍ವೈ ರಾಜಕೀಯದಲ್ಲೇ ಅತ್ಯಂತ ಬೇಜವಾಬ್ದಾರಿಯುತ ಮನುಷ್ಯ: ಸಿಎಂ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮುಂದೆ ಸಿದ್ದರಾಮಯ್ಯ ಬಚ್ಚಾ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿ ಅವರು ಯಡಿಯೂರಪ್ಪ ರಾಜಕೀಯದಲ್ಲಿ ಅತ್ಯಂತ ಬೇಜವಾಬ್ದಾರಿಯುತ ಮನುಷ್ಯ. ಯಡಿಯೂರಪ್ಪಗೆ ರಾಜಕೀಯ ಸಂಸ್ಕೃತಿ ಇಲ್ಲ. ಅವರಿಗೆ ಸಂಸದೀಯ ಪದಗಳೇ ಗೊತ್ತಿಲ್ಲ. ನಾನು ಮೋದಿ, ಯಡಿಯೂರಪ್ಪ ಇಬ್ಬರನ್ನು ಹೋಲಿಕೆ ಮಾಡಿಕೊಳ್ಳುವುದಿಲ್ಲ. 40 ವರ್ಷಗಳಿಂದ ಸಾರ್ವಜನಿಕ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.

    ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದ ಮೇಲೆ ಅಚ್ಚೇ ದಿನ ಬರುತ್ತದೆ ಎನ್ನುವ ಬಿಎಸ್ ವೈ ಹೇಳಿಕೆಗೂ ತಿರುಗೇಟು ನೀಡಿದ ಅವರು, ಅಚ್ಚೇ ದಿನ ಬರುತ್ತೆ ಅಂತ ಹೇಳಿದ್ದು ಯಾರು? ಮೋದಿ ಹೇಳಿ ಎಷ್ಟು ದಿನ ಆಯ್ತು? ಕ್ಯಾ ಅಚ್ಚೇ ದಿನ್ ಆಗಯಾ ಕ್ಯಾ ಅಂತ ಹಿಂದಿಯಲ್ಲೇ ಪ್ರಶ್ನೆ ಮಾಡಿದರು. ಬಿಜೆಪಿಯವರು ತಿಪ್ಪರಲಾಗ ಹಾಕಿದ್ರೂ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿ ಸಾಧ್ಯವಿಲ್ಲ. ಬಿಜೆಪಿ ನಾಯಕರು, ಯಡಿಯೂರಪ್ಪ ಹತಾಶರಾಗಿದ್ದಾರೆ. ಅದಕ್ಕೆ ಏನೇನೋ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಾಗಿದೆ ಅದ್ದರಿಂದಲೇ ಅವರು ಹೀಗೆ ಕಿತಾಪತಿ ಮಾಡುತ್ತಿದ್ದಾರೆ. ಸತ್ತ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ನನ್ನನ್ನು ಕಂಡರೆ ಮೋದಿಗೆ ಭಯ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಕಲಬುರಗಿಯಲ್ಲಿ ನಡೆದ ನವಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಬಿಎಸ್‍ವೈ ಪ್ರಸ್ತಾಪಿಸಿ, ಮೋದಿ ಮುಂದೆ ಸಿದ್ದರಾಮಯ್ಯ ಬಚ್ಚಾ, ನಾಚಿಕೆಯಾಗಬೇಕು ನಿಮಗೆ ಎಂದು ಹೇಳಿದ್ದರು. ಅಲ್ಲದೇ ಸಿಎಂ ರಾಜ್ಯದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

     

  • ನಿಮ್ಮ ಸ್ವ ಸಾಮರ್ಥ್ಯ ದಿಂದ ಚುನಾವಣೆ ಗೆಲ್ಲಿ, ನಮ್ಮನ್ನು ತರಬೇಡಿ: ಮೋದಿಗೆ ಪಾಕ್ ಟಾಂಗ್

    ನಿಮ್ಮ ಸ್ವ ಸಾಮರ್ಥ್ಯ ದಿಂದ ಚುನಾವಣೆ ಗೆಲ್ಲಿ, ನಮ್ಮನ್ನು ತರಬೇಡಿ: ಮೋದಿಗೆ ಪಾಕ್ ಟಾಂಗ್

    ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಪ್ರಧಾನಿ ಮೋದಿ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ವಿನಾಕಾರಣ ಭಾರತ ಚುನಾವಣೆಯಲ್ಲಿ ನಮ್ಮನ್ನು ಎಳೆಯುವುದನ್ನು ನಿಲ್ಲಿಸಿ, ನಿಮ್ಮ ಸ್ವಸಾಮರ್ಥ್ಯದಿಂದ ಚುನಾವಣೆಯಲ್ಲಿ ಗೆಲುವು ಪಡೆಯಿರಿ ಎಂದು ಪ್ರತಿಕ್ರಿಯಿಸಿದೆ.

    ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮಹ್ಮದ್ ಫೈಸಲ್, ಭಾರತ ಚುನಾವಣೆಯಲ್ಲಿ ಪಾಕಿಸ್ತಾನವನ್ನು ವಿನಾಕಾರಣ ಎಳೆದು ತರುವುದನ್ನು ನಿಲ್ಲಿಸಿ, ಸ್ವಸಾಮರ್ಥ್ಯದ ಮೇಲೆ ಚುನಾವಣೆಯಲ್ಲಿ ಗೆಲುವು ಪಡೆಯಿರಿ. ಪಾಕಿಸ್ತಾನದ ವಿರುದ್ಧ ಬೇಜವಾಬ್ದಾರಿಯತ ಹಾಗೂ ಆಧಾರವಿಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    ಗುಜರಾತ್ ವಿಧಾನ ಸಭೆ ಚುನಾವಣೆ ಎರಡನೇ ಹಂತದ ಪ್ರಚಾರ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ಗುಜರಾತ್ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ. ಕಾಂಗ್ರೆಸ್‍ನ ಹಿರಿಯ ಮುಖಂಡರು ಪಾಕಿಸ್ತಾನದ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಈ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದರು.

    ಪ್ರಚಾರದ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್ ಗುಜರಾತ್‍ನ ಸಿಎಂ ಆಗಬೇಕು ಎಂದು ಪಾಕಿಸ್ತಾನ ಸೇನೆಯ ಮಾಜಿ ಮಹಾ ನಿರ್ದೇಶಕ ಸರ್ದಾರ್ ಅರ್ಷದ್ ರಫೀಕ್ ಹೇಳಿದ್ದಾರೆ ಎಂಬ ವರದಿಯನ್ನು ಮೋದಿ ಪ್ರಸ್ತಾಪಿಸಿದ್ದರು.

    ಅಲ್ಲದೇ ಪಾಕಿಸ್ತಾನದ ಮುಖಂಡರ ಜೊತೆಗಿನ ಮಾತುಕತೆಯ ನಂತರ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ತಮ್ಮನ್ನು `ನೀಚ’ ಎಂದು ಕರೆದರು. ಈ ಕುರಿತು ಮಾಧ್ಯಮಗಳು ವರದಿಯನ್ನು ಪ್ರಸಾರ ಮಾಡಿದೆ. ಕಾಂಗ್ರೆಸ್ ಮಣಿಶಂಕರ್ ಅಯ್ಯರ್ ಅವರ ಮನೆಯಲ್ಲಿ ಸಭೆ ಸೇರಲಾಗಿದ್ದು, ಈ ಸಭೆಯಲ್ಲಿ ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು ಎಂಬ ಆರೋಪಿಸಿದ್ದರು.

     

  • ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಲಕ್ನೋ: ಉತ್ತರ ಪ್ರದೇಶದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿದಕ್ಕೆ ಪತಿ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

    ಉತ್ತರ ಪ್ರದೇಶ ಮುಸ್ಲಿಂ ಮಹಿಳೆ ಫಿರಾ ಎಂಬವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಕ್ರಮವನ್ನ ಬೆಂಬಲಿಸಲು ಮೋದಿ ಅವರು ನಡೆಸಿದ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಆದರೆ, ಫಿರಾ ಪತಿ ಡ್ಯಾನಿಶ್ ಸಂಬಂಧಿ ಮಹಿಳೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದು, ಮಗುವನ್ನು ಸಹ ಹೊಂದಿದ್ದಾರೆ. ಇದರಿಂದ ಆತ ಪ್ರತಿದಿನವೂ ತನಗೆ ತಲಾಕ್ ನೀಡುವಂತೆ ಹಿಂಸೆ ನೀಡುತ್ತಿದ್ದ. ಅಲ್ಲದೇ ನಾನು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸ್ ಬಂದ ನಂತರ ಮೋದಿ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನನ್ನ ಮಗುವಿನೊಂದಿಗೆ ನಮ್ಮಿಬ್ಬರನ್ನು ಹೊಡೆದು ಮನೆಯಿಂದ ಹೊರ ಹಾಕಿರುವುದಾಗಿ ತಿಳಿಸಿದ್ದಾರೆ.

    ಆದರೆ ಪತ್ನಿಯ ಆರೋಪವನ್ನು ನಿರಾಕರಿಸಿರುವ ಡ್ಯಾನಿಶ್, ತನ್ನ ಪತ್ನಿ ಆಕ್ರಮ ಸಂಬಂಧ ಹೊಂದಿದ್ದಳು. ಆಕೆ ಜಿನ್ಸ್ ಪ್ಯಾಂಟ್ ಧರಿಸುತ್ತಿದ್ದಳು. ಅಲ್ಲದೇ ಆಕೆಯ ಚಿಕ್ಕಪ್ಪ ನನಗೆ ತೊಂದರೆ ನೀಡುತ್ತಿದ್ದ ಮತ್ತು ಹಲ್ಲೆಗೈದಿದ್ದಾನೆ. ನಾನು ತಲಾಕ್ ನೀಡುವುದಕ್ಕೂ ಮೋದಿ ರ‍್ಯಾಲಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

  • ಕಣ್ಣೊರೆಸಲು ಅಯ್ಯರ್ ಅಮಾನತು: ಶೋಭಾ ಕರಂದ್ಲಾಜೆ

    ಕಣ್ಣೊರೆಸಲು ಅಯ್ಯರ್ ಅಮಾನತು: ಶೋಭಾ ಕರಂದ್ಲಾಜೆ

    ಉಡುಪಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿಯನ್ನು ನೀಚ ಎಂದು ಬೈದಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶಗೊಂಡು ವಾಗ್ದಾಳಿ ಮಾಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಅಯ್ಯರ್ ಮಾತನಾಡಿದ್ದು, ಕಾಂಗ್ರೆಸ್‍ನ ಮಾನಸಿಕ ಮನಸ್ಥಿತಿಯನ್ನು ತೋರಿಸುತ್ತದೆ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಮಾತ್ರ ಚಡಪಡಿಕೆಯ ಮಾತು ಬರುತ್ತದೆ ಎಂದು ಕಿಡಿಕಾರಿದ್ದಾರೆ.

    ಪ್ರಧಾನಿ ಮೋದಿಯನ್ನು ಯಾಕೆ ನೀಚ ಎಂದು ಕರೆದರು ಎಂದು ಕಾಂಗ್ರೆಸ್ ಉತ್ತರ ಕೊಡಬೇಕಾಗಿದೆ. ಆದ್ದರಿಂದ ಕಣ್ಣೊರೆಸುವ ತಂತ್ರದಿಂದ ಅವರನ್ನು ಅಮಾನತು ಮಾಡಿದ್ದೀರಿ ಎಂದು ಶೋಭಾ ಕೋಪದಿಂದ ಹೇಳಿದ್ದಾರೆ.

    ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ಇದು ದುಬಾರಿಯಾಗುತ್ತದೆ. ಭಾರತವನ್ನು ಕಾಂಗ್ರೆಸ್‍ನ ವಂಶಾಡಳಿತಕ್ಕೆ ಬರೆದುಕೊಟ್ಟಿಲ್ಲ. ಅಧಿಕಾರ ಇಲ್ಲದಿದ್ದಾಗ ಇವರಿಗೆ ಚಡಪಡಿಕೆ ಶುರುವಾಗುತ್ತದೆ. ಅದರ ಪ್ರತಿಫಲವೇ ನೀಚ ಎಂಬ ಶಬ್ದವನ್ನು ಬಳಸಿರುವುದು. ಗುಜರಾತಿನ ಜನರು ಕಾಂಗ್ರೆಸ್‍ಗೆ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಆರಂಭವಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಜನ ಐದು ವರ್ಷದ ಹಿಂದೆ ಆಶೀರ್ವಾದ ಮಾಡಿದ್ದರು. ಈಗ ಮಾಡುವುದು ಕನಸಿನ ಮಾತು. ಸಿಎಂ ಅವರು ಘೋಷಿಸಿರುವ ಎಲ್ಲಾ ಭಾಗ್ಯಗಳು ಪ್ಲಾಪ್ ಆಗಿರುವಾಗ ಜನ ಯಾಕೆ ಆಶೀರ್ವಾದ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿ ಮಾತನಾಡಿದರು.

    ಇದನ್ನು ಓದಿ: ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?

  • ಮೋದಿಯೊಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ: ಉಪೇಂದ್ರ

    ಮೋದಿಯೊಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ: ಉಪೇಂದ್ರ

    ಉಡುಪಿ: ಮೋದಿಯೊಬ್ಬರಿಂದ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ ಎಂದು ನಟ ಕೆಪಿಜೆಪಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಪ್ಪಿ, ನಾನು ಪ್ರಾಕ್ಟಿಕಲ್ ಇಲ್ಲ ಅಂತ ಜನ ನನ್ನನ್ನು ನೋಡಿ ನಗುತ್ತಿದ್ದಾರೆ. ಆದರೆ ರಾಜಕೀಯ ದೃಷ್ಟಿಯಲ್ಲಿ ನೋಡಿದರೆ ನಾನು ಪ್ರಾಕ್ಟಿಕಲ್ ಇಲ್ಲ. ಪ್ರಜೆಗಳು ಮಾತನಾಡುವ ಕಾಲ ಬಂದಿದೆ ಎಂದು ಉಪ್ಪಿ ಹೇಳಿದರು. ಎಂಎಲ್‍ಎ ಸೀಟು ಗೆಲ್ಲಲು 50 ಕೋಟಿ ರೂಪಾಯಿ ಬೇಕು. ನನ್ನ ಬಳಿ ಕಾಸಿಲ್ಲ. ಆದರೆ ಕನಸಿದೆ. ಅದನ್ನು ಈಡೇರಿಸಲು ಜನ ಬೆಂಬಲ ಬೇಕಾಗಿದೆ ಎಂದರು.

    ಸತ್ಯಕ್ಕೆ ಸಾವಿಲ್ಲ ಸತ್ಯ ಸಾಯೋದೇ ಇಲ್ಲ. ನನಗೆ ಶೀಘ್ರವಾಗಿ ಕೆಲಸವಾಗಬೇಕಿಲ್ಲ, ನಾನು ಸ್ಮಾರ್ಟಾಗಿ ಕೆಲಸ ಮಾಡುತ್ತೇನೆ. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್‍ಗೆ ಇತ್ತು. ಅರವಿಂದ ಕೇಜ್ರೀವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಹೇಳಿದರು. ನಮ್ಮ ದೇಶದಲ್ಲಿ ಆರೋಗ್ಯ, ಶಿಕ್ಷಣ ಸರಿಯಾಗಿ ಸಿಕ್ಕಿದ್ದರೆ ಇವತ್ತು ಭ್ರಷ್ಟಾಚಾರ ಎಂಬುವುದು ಇರುತ್ತಿರಲಿಲ್ಲ ಎಂದು ತಿಳಿಸಿದರು.

    ರಾಷ್ಟ್ರೀಯ ಪಕ್ಷಗಳಿಂದ ಬೇಡಿಕೆ ಬಂದಿದೆ. 15 ವರ್ಷದಿಂದ ಆಹ್ವಾನಗಳಿದ್ದರೂ ನಾನು ನನ್ನ ಕನಸನ್ನು ಹೊತ್ತು ಈಗ ಹೊರಟಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ. ಗಂಟೆ ಬಾರಿಸಲು ಜನ ಬೇಕು. 50 ಸಾವಿರ ಜನರ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ ಎಂದು ಉಪೇಂದ್ರ ಹೇಳಿದರು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನನ್ನ ಆಲೋಚನೆಯ ಜನ ತಮ್ಮ ಆಲೋಚನೆಗಳನ್ನು ಹೇಳಬೇಕಿದೆ ಎಂದು ಮನವಿ ಮಾಡಿದರು.