Tag: prime minister modi

  • 16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್

    16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡುವ ಮೂಲಕ 16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದಿದ್ದಾರೆ.

    ಆಗ್ರಾದ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಿದರೆ ಸಿಎಂ ಹುದ್ದೆ ಕಳೆದು ಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಬಲವಾಗಿ ಯುಪಿ ರಾಜಕೀಯ ವಲಯದಲ್ಲಿ ಇದೆ. ಈ ಕಾರಣದಿಂದ ಕಳೆದ 16 ವರ್ಷಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆ ಏರಿದ ಯಾರೊಬ್ಬರು ಕೂಡ ಇಲ್ಲಿ ವಾಸ್ತವ್ಯ ಹೂಡಿರಲಿಲ್ಲ.

    ಆದರೆ ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಅದೇ ಸರ್ಕಿಟ್ ಹೌಸ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಮೂಢ ನಂಬಿಕೆಯನ್ನು ದೂರ ಮಾಡಿದ್ದಾರೆ. ಈ ಮೂಲಕ ತಾವು ವೈಜ್ಞಾನಿಕ ಚಿಂತನೆ ಇರುವ ಸಿಎಂ ಎಂದು ಸಾಬೀತು ಪಡಿಸಿದ್ದಾರೆ. ಮಂಗಳವಾರ ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ನೆತುನ್ಯಾಹು ದಂಪತಿ ಆಗ್ರಾ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಅವರಿಗೆ ಸ್ವಾಗತ ಕೋರಲು ಆಗ್ರಾಕ್ಕೆ ಬಂದಿದ್ದ ಯೋಗಿ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಿದ್ದರು.

    16 ವರ್ಷಗಳ ಹಿಂದೆ ಉತ್ತರ ಪ್ರದೇಶ ಸಿಎಂ ಪ್ರಸ್ತುತ ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ಇಲ್ಲಿ ವಾಸ್ತವ್ಯ ಹೂಡಿ ತಮ್ಮ ಸಿಎಂ ಹುದ್ದೆಯನ್ನು ಕಳೆದು ಕೊಂಡಿದ್ದರು. ನಂತರ ಯುಪಿ ಸಿಎಂಗಳಾದ ಮುಲಾಯಂ ಸಿಂಗ್ ಯಾದವ್, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇಲ್ಲಿ ವಾಸ್ತವ್ಯ ಮಾಡಿರಲಿಲ್ಲ. ಒಂದು ವೇಳೆ ಆಗ್ರಾಕ್ಕೆ ಬಂದಿದ್ದರೂ ನಗರದ ಸ್ಟಾರ್ ಹೋಟೆಲ್‍ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡುವ ಮುಖ್ಯಮಂತ್ರಿಗಳು ತಮ್ಮ ಪದವಿ ಕಳೆದುಕೊಳ್ಳಲಿದ್ದಾರೆ ಎಂಬ ಮೂಢನಂಬಿಕೆ ಚಾಲ್ತಿಗೆ ಬಂದಿತ್ತು.

    ಯೋಗಿ ಆದಿತ್ಯನಾಥ್ ಅವರ ಈ ನಿರ್ಧಾರವನ್ನು ಕಂಡು ಮಾಧ್ಯಮದವರು ಪ್ರಶ್ನಿಸಿದ ವೇಳೆ ಮುಗುಳುನಕ್ಕು ಸುಮ್ಮನಾಗಿದ್ದಾರೆ. ಕಳೆದ ವರ್ಷ ಕೂಡ ಯೋಗಿ 29 ವರ್ಷಗಳ ಮೂಢನಂಬಿಕೆಯನ್ನು ಧಿಕ್ಕರಿಸಿ ನೋಯ್ಡಾಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ಸಹ ಆದಿತ್ಯನಾಥ್ ಅವರ ನಿರ್ಧಾರವನ್ನು ಕೇಳಿ ಶ್ಲಾಘಿಸಿದ್ದರು.

    ನೋಯ್ಡಾಗೆ ಭೇಟಿ ನೀಡುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮೂಢ ನಂಬಿಕೆ ಉತ್ತರಪ್ರದೇಶಲ್ಲಿದೆ. ಡಿಸೆಂಬರ್ ನಲ್ಲಿ ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂತಾ ಮೆಟ್ರೋ ಲೈನ್ ನಿರ್ಮಿಸಲಾಗಿದ್ದು, ಮೆಟ್ರೋ ರೈಲು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ ನೀಡಿದ್ದರು.

  • ಕರ್ನಾಟಕವನ್ನು ನೋಡಿ ಮೋದಿಗೆ ಗಾಬರಿ: ಡಿಕೆಶಿ ‘ಪವರ್’ ಫುಲ್ ಪಂಚ್

    ಕರ್ನಾಟಕವನ್ನು ನೋಡಿ ಮೋದಿಗೆ ಗಾಬರಿ: ಡಿಕೆಶಿ ‘ಪವರ್’ ಫುಲ್ ಪಂಚ್

    ಚಿತ್ರದುರ್ಗ: ತುಮಕೂರಿನ ಪಾವಗಡ ಸೋಲಾರ್ ಪಾರ್ಕ್ ನೋಡಿ ಪ್ರಧಾನಿ ಮೋದಿ ಗಾಬರಿಯಾಗಿದ್ದಾರೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಇಂದು ಜಿಲ್ಲೆಯ ಹೊಸದುರ್ಗದಲ್ಲಿ ವಿದ್ಯುತ್ ಉಪಕೇಂದ್ರಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿ ನಿರ್ಮಾಣವಾಗುತ್ತಿದೆ. ಜಮೀನು ಖರೀದಿ ಮಾಡದೇ, ಭೂ ಸ್ವಾಧೀನವೂ ಇಲ್ಲದೆ, 12 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದೆ. ಇದನ್ನು ಕಂಡು ಪ್ರಧಾನಿ ಮೋದಿ ಅವರೇ ಗಾಬರಿಯಾಗಿದ್ದಾರೆ ಎಂದು ಹೇಳಿದರು.

    ಸರ್ಕಾರ ಆರಂಭದಲ್ಲಿ ತಮಗೇ ಸಚಿವ ಸ್ಥಾನ ನೀಡಿರಲಿಲ್ಲ. ನಾನು ಕಳಂಕಿತ ಎಂದು ದೂರು ಕೊಟ್ಟ ಕಾರಣಕ್ಕೆ ಆರಂಭದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ನಂತರದಲ್ಲಿ ಸತ್ಯಾಂಶ ತಿಳಿದು ಇಂಧನ ಇಲಾಖೆ ಜವಾಬ್ದಾರಿ ನೀಡಿದರು. ಅನೇಕರು ಶೋಭಕ್ಕ ಉಗಿಸಿಕೊಂಡಿದ್ದು ಆಯ್ತು. ಇನ್ನೂ ನೀನು ಏಕೆ ಇಂಧನ ಇಲಾಖೆ ತೆಗೆದುಕೊಳ್ಳುತ್ತೀರಾ ಎಂದರು. ಅದರೂ ನಾನು ಈ ವೇಳೆ ಕಷ್ಟವಾದ ಇಲಾಖೆ ನಿಭಾಯಿಸಿಯೇ ಹೋಗಬೇಕು ಎಂಬ ಕಾರಣಕ್ಕೆ ಇಂಧನ ಇಲಾಖೆ ವಹಿಸಿಕೊಂಡೆ. ಈಗ ಈ ಇಲಾಖೆಯನ್ನು ನಾನು  ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಹೇಳಿದರು.

    ಕೇಂದ್ರ ಸರ್ಕಾರಕ್ಕೆ ಸಾಲ ಮನ್ನಾ ಮಾಡಲು ಮನಸ್ಸಿಲ್ಲ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯದ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಅದನ್ನು ಲಾಲಿಪಪ್ ಎಂದಿದ್ದಾರೆ. 50 ಸಾವಿರ ಲಾಲಿಪಪ್ ಸರ್ಕಾರ ನೀಡಿದೆ. ನೀವು ಕೇಂದ್ರದವರು ಕನಿಷ್ಟ ಚಾಕೊಲೇಟ್ ಆದರು ನೀಡಿ ಎಂದರು. ಇದನ್ನೂ ಓದಿ:  ಮೆಗಾ ಸೋಲಾರ್ ಹಗರಣ – ಡಿಕೆಶಿ ವಿರುದ್ಧ ಇಡಿಗೆ ದೂರು

    ಬಿಜೆಪಿಯವರು ಅವರೇ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ಮೋದಿ ನೋಡಿಕೊಂಡು ಮತ ಹಾಕುತ್ತಾರೆ ಅಂದುಕೊಂಡಿದ್ದಾರೆ. ಆದರೆ ಜನ ಹೋದ ಕಡೆ ಎಲ್ಲಾ ಖಾತೆಗೆ 15 ಲಕ್ಷ ನೀಡಿ ಎನ್ನುತ್ತಿದ್ದಾರೆ. ಅಧಿಕಾರಲ್ಲಿ ಇದ್ದಾಗ ಜೈಲಿಗೆ ಹೋಗಿ, ಬ್ಲೂಫಿಲಂ ನೋಡಿ ಎಂದು ಯಾರು ಹೇಳಿದ್ದರು. ಯಡಿಯೂರಪ್ಪ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಎನ್ನುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಏನು ಹೇಳುತ್ತಿಲ್ಲ. ರಾಜ್ಯದ ಜನರು ಗುರುತಿಸುವಂತಹ ಒಂದು ಕಾರ್ಯಕ್ರಮ ನೀಡಿಲ್ಲ ಎಂದರು.

    ಇದೇ ವೇಳೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಬರುವುದಕ್ಕಿಂತ ಮೊದಲಿಂದಲೂ ನಾನು ಗೋವಿಂದಪ್ಪನವರು ಸ್ನೇಹಿತರು. ಕಳೆದ ಐದು ವರ್ಷದಲ್ಲಿ ನಿಮ್ಮ ಕೆಲಸ ಮಾಡಿದ್ದೇವೆ ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ. ನಾನು 6 ಬಾರಿ ಗೆಲವು ಪಡೆದಿದ್ದೇನೆ, ಗೋವಿಂದಪ್ಪರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.  ಇದನ್ನೂ ಓದಿ: ಭಾಷಣದ ವೇಳೆ ಜಾವಡೇಕರ್ ಬದಲು ಜಾವೀದ್ ಎಂದ ಡಿಕೆ ಶಿವಕುಮಾರ್

    ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಿದ್ದರಾಮಯ್ಯ ನಮ್ಮ ನಾಯಕ ಅವರ ನಾಯಕತ್ವದಲ್ಲೇ ಚುನಾವಣೆಗೆ ಎದುರಿಸುತ್ತೇವೆ. ಮಹದಾಯಿ ವಿಚಾರದಲ್ಲಿ ನಾವು ಕಾನೂನು ಬಿಟ್ಟು ಏನು ಮಾಡಿಲ್ಲ. ಆದರೆ ಗೋವಾ ಸಚಿವ ಪ್ಯಾಲೆಕರ್ ಸುಮ್ಮನೆ ಮಹದಾಯಿ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂಷಿಸಿದರು.

  • ನಾವೇ ದುಡ್ಡು ಹಾಕಿ ನೀರು ತರ್ತೀವಿ- ಮಹದಾಯಿಗಾಗಿ ಸ್ಥಾಪನೆಯಾಯ್ತು ಜನಸಾಮಾನ್ಯರ ಪಕ್ಷ

    ನಾವೇ ದುಡ್ಡು ಹಾಕಿ ನೀರು ತರ್ತೀವಿ- ಮಹದಾಯಿಗಾಗಿ ಸ್ಥಾಪನೆಯಾಯ್ತು ಜನಸಾಮಾನ್ಯರ ಪಕ್ಷ

    ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಜನ ಸಾಮಾನ್ಯರ ಮಧ್ಯದಲ್ಲಿಯೇ ನೂತನ ಜನ ಸಾಮಾನ್ಯರ ಪಕ್ಷಕ್ಕೆ ಚಾಲನೆ ನೀಡಲಾಯಿತು. ಡಾ. ಅಯ್ಯಪ್ಪ ನೇತೃತ್ವದಲ್ಲಿ ಮುನ್ನಡೆಯುತ್ತಿರೋ ಪಕ್ಷಕ್ಕೆ ರೈತ ಮಹಿಳೆ ನಿಂಬೆವ್ವ ದೊರೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

    ಜನ ಸಾಮಾನ್ಯರ ಪಕ್ಷವನ್ನ ಬೆಂಬಲಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಚಂಪಾ, ಮಹಾದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಸೇರಿದಂತೆ ಮಹದಾಯಿ ಹೋರಾಟಗಾರರು ಹಾಗೂ ಬಹುತೇಕ ರೈತಪರ ಸಂಘಟನೆಗಳು ಪಕ್ಷ ಸ್ಥಾಪನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಹದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಅವರು, ರೈತರಿಗಾಗಿ, ಮಹದಾಯಿಗಾಗಿ ಯಾರು ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೋ ಆ ಪಕ್ಷಕ್ಕೆ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ. ಸರ್ಕಾರದ ದುಡ್ಡಿನ ಸಹಾಯವಿಲ್ಲದೇ ರೈತರೇ ದುಡ್ಡು ಹಾಕಿ ಕಾಲುವೆ ನಿರ್ಮಿಸಿ ರಾಜ್ಯಕ್ಕೆ ನೀರು ತರುತ್ತೇವೆ. ನಮ್ಮ ಹೋರಾಟಕ್ಕೆ ಆರ್ಥಿಕ ಸಹಾಯ ಮಾಡಲು ನೂತನ ಜನ ಸಾಮಾನ್ಯರ ಪಕ್ಷ ಮುಂದೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪ್ರಮುಖ ಪಕ್ಷಗಳಿಗೆ ಎಚ್ಚರಿಕೆ ನೀಡುತ್ತೇನೆ ಎಂದರು.

    ಜನ ಸಾಮಾನ್ಯ ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ ಅವರು ಮಾತನಾಡಿ, ದಿನಕ್ಕೆ ಐದು ತರಹ ಡ್ರೆಸ್ ಹಾಕುವ ಪ್ರಧಾನಿ ರೈತರ ಕೈ ಹಿಡಿಯುವುದಿಲ್ಲ. ಪ್ರಧಾನಿ ಮೋದಿ ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಬರೀ ಯುದ್ಧದ ಬಗ್ಗೆ ಮಾತನಾಡುತ್ತಾರೆ. ನಿಮಗೆ ಅನ್ನ ಬೇಕಾ, ಯುದ್ಧ ಬೇಕಾ ಎಂದು ಜನರಿಗೆ ಪ್ರಶ್ನಿಸಿದರು.

    ಈ ವೇಳೆ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನ ಸಾಮಾನ್ಯರ ಪಕ್ಷದಿಂದ 20 ಕೋಟಿ ರೂ. ಖರ್ಚು ಮಾಡಲು ಸಿದ್ಧರಿದ್ದು, ಶ್ರಮದಾನದ ಮೂಲಕ ಕೆಲಸ ಮಾಡುತ್ತೇವೆ. ಕಳಸಾ ಬಂಡೂರಿ ನಾಲಾ ಕಾಮಗಾರಿಗೆ ಅನುಮತಿ ಕೊಡಿ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡಿ ಮುಗಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಎಸೆದರು.

    ಆರ್ ಎಸ್‍ಎಸ್ ಒಂದು ನಿರುದ್ಯೋಗಿಗಳ ಸಂಘ. ಪ್ರಧಾನಿ ಮೋದಿ ನಿರುದ್ಯೋಗಿಗಳ ಸಂಘದ ಸದಸ್ಯ. ಪ್ರಧಾನಿ ಮೋದಿ ಅವರು ಬರೀ ಯಾವ ರೀತಿ ಭಾಷಣ ಮಾಡಬೇಕು ಎಂದು ಯೋಚಿಸುತ್ತಾರೆ. ಈ ಮೂಲಕ ಭಾಷಣ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿವೆ. ಶೀಘ್ರದಲ್ಲೇ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

     

  • ತನಗೆ ನೀಡಿದ ‘ಆ’ ವಿಶೇಷ ಸ್ವಾಗತಕ್ಕೆ ಶಿಷ್ಟಾಚಾರ ಬದಿಗಿರಿಸಿ ಮೋದಿಯಿಂದ ಇಸ್ರೇಲ್ ಪ್ರಧಾನಿಗೆ ಸ್ವಾಗತ

    ತನಗೆ ನೀಡಿದ ‘ಆ’ ವಿಶೇಷ ಸ್ವಾಗತಕ್ಕೆ ಶಿಷ್ಟಾಚಾರ ಬದಿಗಿರಿಸಿ ಮೋದಿಯಿಂದ ಇಸ್ರೇಲ್ ಪ್ರಧಾನಿಗೆ ಸ್ವಾಗತ

    ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಆಗಮಿಸಿದ್ದು, 15 ವರ್ಷಗಳ ಬಳಿಕ ಇಸ್ರೇಲ್ ಪ್ರಧಾನಿಯೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಶಿಷ್ಟಾಚಾರ ಬದಿಗಿರಿಸಿ ವಿಮಾನ ನಿಲ್ದಾಣಕ್ಕೆ ತೆರಳಿ ಬೆಂಜಮಿನ್ ಅವರಿಗೆ ಸ್ವಾಗತ ಕೋರಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಮೋದಿ ಅವರು, ನನ್ನ ಆತ್ಮೀಯ ಗೆಳೆಯನಿಗೆ ಭಾರತಕ್ಕೆ ಸ್ವಾಗತ, ನಿಮ್ಮ ಭೇಟಿ ಐತಿಹಾಸಿಕವಾದದ್ದು, ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    ಇಸ್ರೇಲ್ ಗೆ ಪ್ರಧಾನಿ ನರೇಂದ್ರ ಮೋದಿ ಜುಲೈ ನಲ್ಲಿ ಭೇಟಿ ನೀಡಿದ್ದಾಗ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಹ ಶಿಷ್ಟಾಚಾರ ಬದಿಗಿರಿಸಿ ನಮ್ಮ ಪ್ರಧಾನಿಯನ್ನು ಟೆಲ್ ಅವೀವ್‍ ವಿಮಾನ ನಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಧರ್ಮ ಗುರು ಪೋಪ್ ಅವರಿಗೆ ಈ ಸ್ವಾಗ ನೀಡಿದ್ದರು. ಇಸ್ರೇಲ್ ಪ್ರಧಾನಿಯಿಂದ ಈ ವಿಶೇಷ ಸ್ವಾಗತ ಪಡೆದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದರು.

    ಆರು ದಿನಗಳ ಭಾರತದ ಭೇಟಿಗೆ ಆಗಮಿಸುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಅವರಿಗೆ ಪ್ರಧಾನಿ ಮೋದಿ ರಾತ್ರಿ ಔತಣ ಕೂಟ ಏರ್ಪಡಿಸಿದ್ದಾರೆ. ಅಲ್ಲದೇ ಇಸ್ರೇಲ್ ಪ್ರಧಾನಿ ತಾಜ್ ಮಹಲ್ ಗೂ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇಸ್ರೇಲ್ ಪ್ರಧಾನಿ ಬೆಂಜಮಿನ್ ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಷ್ಟ್ರಪತಿ ಭವನದ ಮುಂದೆ ಅಧಿಕೃತ ಸ್ವಾಗತ ಕಾರ್ಯಕ್ರಮ ನಡೆಯಿತು. ನಂತರ ಅವರು ತೀನ್ ಮೂರ್ತಿ ಸ್ಮಾರಕಕ್ಕೆ ಭೇಟಿ ನೀಡಿದರು. 100 ವರ್ಷಗಳ ಹಿಂದೆ ಭಾರತದ ಮೂರು ರೆಜಿಮೆಂಟ್ ಗಳು ಹೈಫಾ ಯುದ್ಧದಲ್ಲಿ ಭಾಗವಹಿಸಿದ್ದ ಸ್ಮರಣೆಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ. ಅಲ್ಲದೇ ಈ ವೇಳೆ ತೀನ್ ಮೂರ್ತಿ ಮಾರ್ಗ್ ಚೌಕಕ್ಕೆ ತೀನ್ ಮೂರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನೂ ಓದಿ: ಟ್ರಂಪ್, ಪೋಪ್ ಬಳಿಕ ಇಸ್ರೇಲಿನಲ್ಲಿ ಮೋದಿಗೆ ಸಿಕ್ತು ‘ಆ’ ವಿಶೇಷ ಸ್ವಾಗತ: ವಿಡಿಯೋ ನೋಡಿ

    ಈ ಸ್ಮಾರಕದಲ್ಲಿ ಸ್ಥಾಪನೆ ಮಾಡಲಾಗಿರುವ ಮೂರು ಕಂಚಿನ ಪ್ರತಿಮೆಗಳು ಮೈಸೂರು, ಹೈದರಾಬಾದ್ ಮತ್ತು ಜೋಧ್ಪುರ್ ಪಡೆಗಳನ್ನು ಪ್ರತಿನಿಧಿಸುತ್ತವೆ. ಮೊದಲ ವಿಶ್ವ ಯುದ್ಧ ಸಮಯದಲ್ಲಿ ಇಸ್ರೇಲ್ ನ ಹೈಫಾ ನಗರವನ್ನು 1918, ಸೆಪ್ಟೆಂಬರ್ 23 ಬ್ರಿಟಿಷ್ ಒಕ್ಕೂಟ ಸೈನ್ಯ ಜಯಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೈನಿಕರ ತೋರಿದ ಸಾಧನೆಯ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಹೈಫಾ ನಗರವನ್ನು ವಿಮೋಚನೆ ಮಾಡುವ ಸಮರದಲ್ಲಿ ಭಾರತದ 44 ಸೈನಿಕರು ತಮ್ಮ ಜೀವವನ್ನು ತ್ಯಾಗ ಮಾಡಿದ್ದರು.

    ಪ್ರಧಾನಿ ಮೋದಿ ಶಿಷ್ಟಾಚಾರ ಉಲ್ಲಂಘಿಸುವುದು ಇದೇ ಮೊದಲೆನಲ್ಲ. ಈ ಹಿಂದೆ 2015ರ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಆಗಮಿಸಿದ್ದ ವೇಳೆ ಮೋದಿ ವಿಮಾನ ನಿಲ್ದಾಣಕ್ಕೆ ಹೋಗಿ ಅವರನ್ನು ಸ್ವಾಗತಿಸಿದ್ದರು. ಇದಾದ ಬಳಿಕ ಬುಲೆಟ್ ರೈಲು ಯೋಜನೆ ಶಂಕುಸ್ಥಾಪನೆಗೆ ಆಗಮಿಸಿದ್ದ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು 2017ರ ಸೆಪ್ಟೆಂಬರ್ ನಲ್ಲಿ ಮೋದಿ ಗುಜರಾತ್ ನ ಅಹಮದಬಾದ್ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಕೋರಿದ್ದರು.

    ಭಾರತಕ್ಕೆ ಭೇಟಿ ನೀಡುತ್ತಿರುವ ಎರಡನೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಗಿದ್ದು, ಈ ಹಿಂದೆ 2003ರಲ್ಲಿ ಏರಿಯಲ್ ಶರೋನ್ ಭಾರತ ಪ್ರವಾಸ ಕೈಗೊಂಡಿದ್ದರು.

  • ಬೆಂಗಳೂರನ್ನು ದೇಶದ 2ನೇ ರಾಜಧಾನಿ ಮಾಡಿ- ಮೋದಿ ಸರ್ಕಾರಕ್ಕೆ ಕರ್ನಾಟಕದ ಪತ್ರ

    ಬೆಂಗಳೂರನ್ನು ದೇಶದ 2ನೇ ರಾಜಧಾನಿ ಮಾಡಿ- ಮೋದಿ ಸರ್ಕಾರಕ್ಕೆ ಕರ್ನಾಟಕದ ಪತ್ರ

    ಬೆಂಗಳೂರು: ನಮ್ಮ ಹೆಮ್ಮೆಯ ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸುವಂತೆ ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

    ಭಾರತದಲ್ಲಿ ಎಲ್ಲಾ ಭಾಷೆಗಳನ್ನೂ ಆಡುವ ಜನರು ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದಾರೆ. ತಾಂತ್ರಿಕ, ವೈದ್ಯಕೀಯ, ಏರೋಸ್ಪೇಸ್, ಮಾಹಿತಿ-ತಂತ್ರಜ್ಞಾನ, ಸಂಗೀತ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳ ಸಾಧಕರು ಇಲ್ಲಿದ್ದಾರೆ. ದೇಶದ 2ನೇ ರಾಜಧಾನಿಗೆ ಬೆಂಗಳೂರಿಗಿಂತ ಒಳ್ಳೆಯ ನಗರ ಮತ್ತೊಂದಿಲ್ಲ ಅಂತ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ಬೆಂಗಳೂರು 2ನೇ ರಾಜಧಾನಿಯಾದರೆ ದಕ್ಷಿಣದ ರಾಜ್ಯಗಳಿಗೆ ನೆರವಾಗುತ್ತದೆ. ಅಷ್ಟೇ ಅಲ್ಲದೇ ಇಲ್ಲೇ ಚಳಿಗಾಲದ ಸಂಸತ್ ಅಧಿವೇಶನ ನಡೆಸಬಹುದು. ಸುಪ್ರೀಂಕೋರ್ಟ್ ಪೀಠ, ಯುಪಿಎಸ್‍ಸಿ ಕಚೇರಿ, ವಿದೇಶಗಳ ವೀಸಾ ಕಚೇರಿಗಳನ್ನು ತೆರೆಯಬಹುದು ಎಂದು ದೇಶಪಾಂಡೆ ಪತ್ರದಲ್ಲಿ ಹೇಳಿದ್ದಾರೆ.

  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರನ್ನು ಹೊಗಳಿದ ಪ್ರಧಾನಿ ಮೋದಿ: ವಿಡಿಯೋ

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರನ್ನು ಹೊಗಳಿದ ಪ್ರಧಾನಿ ಮೋದಿ: ವಿಡಿಯೋ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ಒಂದರಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಆಗಿರುವ ರತ್ನಪ್ರಭಾ ಅವರನ್ನು ಹೊಗಳಿದ್ದಾರೆ.

    ಜನವರಿ 5ರಂದು ನೀತಿ ಆಯೋಗದ ವತಿಯಿಂದ ನವದೆಹಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಾಳಿನ ಜಿಲ್ಲೆಗಳು ಹೇಗಿರಬೇಕು ಎನ್ನುವ ವಿಚಾರದ ಬಗ್ಗೆ ಸಮ್ಮೇಳನ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ನಾನು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪಡೆಯುತ್ತಿದ್ದ ವೇಳೆ ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಟ್ವೀಟ್ ಗಮನಿಸಿದೆ. ಆದರಲ್ಲಿ ಮಹಿಳಾ ಅಧಿಕಾರಿ ತಮ್ಮ ಜೀವನದ ಅಚ್ಚರಿಯ ಘಟನೆಯನ್ನು ಹಂಚಿಕೊಂಡಿದ್ದರು. ನಾನು ಅವರ ಹೆಸರನ್ನು ಮರೆತುಬಿಟ್ಟಿದ್ದೇನೆ. ಈ ವಿಷಯ ಓದಿ ನನಗೆ ತುಂಬಾ ಸಂತೋಷವಾಯಿತು ಎಂದು ತಾವು ಓದಿದ ಟ್ವೀಟ್ ಕುರಿತು ಮಾಹಿತಿ ನೀಡಿದರು.

    ಮಹಿಳಾ ಅಧಿಕಾರಿ 25 ವರ್ಷಗಳ ಹಿಂದೆ ಬಾಲಕನೊಬ್ಬನನ್ನು ಶಾಲೆಗೆ ಸೇರಿಸಿದ್ದರು. ಆತ ಉತ್ತಮ ಶಿಕ್ಷಣ ಪಡೆದು ಇಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಅಧಿಕಾರಿಯೊಬ್ಬರ ಸಣ್ಣ ಕಾರ್ಯ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಎಂತಹ ಬದಲಾವಣೆ ತಂದಿದೆ. ಇಂತಹ ಸಂತೋಷದ ಕ್ಷಣ ಯಾವ ಅಧಿಕಾರಿಗೂ ಸಿಗುವುದಿಲ್ಲ. ಅಲ್ಲದೇ ಇವರು ಎಲ್ಲಾ ಅಧಿಕಾರಿಗಳಿಗೂ ಮಾದರಿ ಎಂದು ರತ್ನಪ್ರಭಾ ಅವರ ಕಾರ್ಯವನ್ನು ಶ್ಲಾಘಿಸಿದರು.

    ರತ್ನಪ್ರಭಾ ಅವರ ಟ್ವೀಟ್‍ನಲ್ಲಿ ಏನಿತ್ತು?
    ನಾನು ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬ ಹುಡುಗನೊಬ್ಬ ಕುರಿ ಮೇಯಿಸುತ್ತಿದ್ದ. ಈ ದೃಶ್ಯವನ್ನು ನೋಡಿ ಕಾರು ನಿಲ್ಲಿಸಿದೆ. ನಂತರ ಸಮೀಪದಲ್ಲೇ ಇದ್ದ ಶಾಲೆಯ ಶಿಕ್ಷಕರನ್ನು ಕರೆದು ಈ ಹುಡುಗನನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದೆ. ಈ ಘಟನೆಯಾಗಿ 27 ವರ್ಷವಾಗಿದ್ದು, ಇತ್ತೀಚೆಗೆ ಒಂದು ದಿನ ನರಸಪ್ಪ ಎಂಬ ಪೊಲೀಸ್ ಪೇದೆ ನನ್ನ ಕಚೇರಿಗೆ ಬಂದು ಸೆಲ್ಯೂಟ್ ಮಾಡಿ, ಅಂದು ನೀವು ಅಂದು ಕುರಿಗಾಹಿಯಾಗಿದ್ದ ನನ್ನ ಶಾಲೆಗೆ ಸೇರಿಸಿದ್ದರಿಂದ ಇಂದು ನಾನು ಪೊಲೀಸ್ ಪೇದೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದ. ಸಣ್ಣ ಉಪಕಾರವೂ ಹೇಗೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

    ರತ್ನಪ್ರಭಾ ಅವರು ಜನವರಿ 3 ರಂದು ಈ ಟ್ವೀಟ್ ಮಾಡಿದ್ದರೆ, 5ನೇ ತಾರೀಖಿನಂದು ಬಳಕೆದಾರರೊಬ್ಬರು, ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ನೀವು ಟ್ವೀಟ್ ನಲ್ಲಿ ಹೇಳಿದ ವಿಚಾರವನ್ನು ಪ್ರಸ್ತಾಪ ಮಾಡಿದ್ದರು, ಇದೊಂದು ದೊಡ್ಡ ಪ್ರೇರಣೆ ಎಂದು ತಿಳಿಸಿದ್ದರು.

    ಈ ಟ್ವೀಟ್ ಗೆ ರತ್ನಪ್ರಭಾ ಅವರು ಪ್ರತಿಕ್ರಿಯಿಸಿ, ನಾನು ಭಾಷಣವನ್ನು ಕೇಳಿದೆ. ನಾನು ನನ್ನ ಟ್ವೀಟ್‍ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೊಗಳಿಕೆ ಕಾರಣವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ಆಡಿರುವ ಮಾತನ್ನು ಕೇಳಿ ನನಗೆ ಬಹಳ ಸಂತೋಷವಾಗುತ್ತಿದೆ. ಇದರಿಂದಾಗಿ ಜನರ ಸೇವೆ ಮತ್ತಷ್ಟು ಮಾಡಲು ಪ್ರೇರಣೆ ಸಿಕ್ಕಿದೆ ಎಂದು ಬರೆದು ಕೊನೆಯಲ್ಲಿ ಕೈಮುಗಿದು ನಮಸ್ಕರಿಸುತ್ತಿರುವ ಇಮೋಜಿ ಹಾಕಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಮೋದಿ

    https://www.youtube.com/watch?v=yGzHg3prwAo

     

  • ಮದರಸಾಗಳಿಂದ ಎಂಜಿನಿಯರ್, ಡಾಕ್ಟರ್ ತಯಾರಾಗ್ತಿಲ್ಲ, ಭಯೋತ್ಪಾದಕರ ಉತ್ಪಾದನೆ ಆಗ್ತಿದೆ: ಶಿಯಾ ವಕ್ಫ್ ಬೋರ್ಡ್

    ಮದರಸಾಗಳಿಂದ ಎಂಜಿನಿಯರ್, ಡಾಕ್ಟರ್ ತಯಾರಾಗ್ತಿಲ್ಲ, ಭಯೋತ್ಪಾದಕರ ಉತ್ಪಾದನೆ ಆಗ್ತಿದೆ: ಶಿಯಾ ವಕ್ಫ್ ಬೋರ್ಡ್

    ನವದೆಹಲಿ: ದೇಶದಲ್ಲಿರುವ ಮದರಸಾಗಳಿಂದ ಎಂಜಿನಿಯರ್ ಹಾಗೂ ಡಾಕ್ಟರ್ ಗಳು ತಯಾರಾಗುತ್ತಿಲ್ಲ. ಬದಲಾಗಿ ಭಯೋತ್ಪಾದಕರ ಉತ್ಪಾದನೆ ಕೇಂದ್ರವಾಗುತ್ತಿದೆ ಎಂದು ಶಿಯಾ ವಕ್ಫ್ ಬೋರ್ಡ್ ಹೇಳಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

    ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಶಿಯಾ ಕೇಂದ್ರ ವಕ್ಫ್ ಬೋರ್ಡ್ ಮುಖ್ಯಸ್ಥ ವಾಸೀಂ ರಿಜ್ವಿ ಈ ವಿಚಾರವಾಗಿ ಪತ್ರ ಬರೆದಿದ್ದು, ಎಲ್ಲ ಮದರಸಾಗಳನ್ನು ಶಿಕ್ಷಣ ಇಲಾಖೆಯ ಅಡಿಯಲ್ಲಿ ತರುವಂತೆ ಮನವಿ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಾಸೀಂ ರಿಜ್ವಿ, ದೇಶದಲ್ಲಿರುವ ಎಷ್ಟು ಮದರಸಾಗಳು ಎಂಜಿನಿಯರ್, ಡಾಕ್ಟರ್, ಐಎಎಸ್ ಅಧಿಕಾರಗಳನ್ನು ತಯಾರಿಸಿವೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕೆಲ ಮದರಸಾಗಳು ಭಯೋತ್ಪಾದಕರನ್ನು ಮಾತ್ರ ಉತ್ಪಾದಿಸುತ್ತಿವೆ ಎಂದು ಆರೋಪಿಸಿದ್ದಾರೆ. ತಮ್ಮ ಪತ್ರದಲ್ಲಿ ಅವರು ಮದರಸಾಗಳು ಸಿಬಿಎಸ್‍ಸಿ, ಐಸಿಎಸ್‍ಸಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು. ಮುಸ್ಲಿಂಯೇತರ ವಿದಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ಐಚ್ಛಿಕ ವಿಷಯವನ್ನಾಗಿ ಓದಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದ್ದಾರೆ.

    ಮುಂದೆ ದೇಶವನ್ನು ಸದೃಢಗೊಳಿಸಲು ನಾನು ಈ ವಿಚಾರದ ಬಗ್ಗೆ ಪ್ರಧಾನಿ ಮೋದಿ ಮತ್ತು ಯೋಗಿಗೆ ಪತ್ರ ಬರೆದಿದ್ದೇನೆ ಎಂದು ರಿಜ್ವಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಪತ್ರದಲ್ಲಿ ಭಯೋತ್ಪದಕರನ್ನು ತಯಾರಿಸುತ್ತಿರುವ ಕೆಲವು ಮದರಸಾಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ವಾಸೀಂ ರಿಜ್ವಿ ಅವರ ಈ ಪತ್ರ ಹಲವು ಮುಸ್ಲಿಂ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಆಲ್ ಇಂಡಿಯಾ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮಿನ್(ಎಐಎಂಐಎಂ) ಸಂಘಟನೆ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ರಿಜ್ವಿ ಅವರನ್ನು ಅವಕಾಶವಾದಿ ಹಾಗೂ ಮೂರ್ಖ ವ್ಯಕ್ತಿ ಎಂದು ಟೀಕಿಸಿದ್ದಾರೆ. ಅವಕಾಶವಾದಿಯಾಗಿರುವ ರಿಜ್ವಿ ತನ್ನನ್ನು ಆರ್ ಎಸ್‍ಎಸ್ ಗೆ ಮಾರಾಟ ಮಾಡಿಕೊಂಡಿದ್ದಾರೆ. ಒಂದು ವೇಳೆ ರಿಜ್ವಿ ಬಳಿ ಸಾಕ್ಷ್ಯವಿದ್ದರೆ ಅದನ್ನು ಗೃಹ ಇಲಾಖೆ ನೀಡಲಿ. ಅದನ್ನು ಬಿಟ್ಟು ಈ ರೀತಿ ಮೂರ್ಖ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಉತ್ತರಾಖಂಡ ಸರ್ಕಾರ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಕುವಂತೆ ಆದೇಶ ನೀಡಿತ್ತು. ಆದರೆ ಸರ್ಕಾರದ ಆದೇಶ ಷರಿಯಾ ಕಾನೂನಿಗೆ ವಿರುದ್ಧ ಎಂದು ಮುಸ್ಲಿಂ ಸಂಸ್ಥೆಗಳನ್ನು ವಿರೋಧಿಸಿತ್ತು. ಅಷ್ಟೇ ಅಲ್ಲದೇ ಯಾವುದೇ ಸರ್ಕಾರವು ಈ ರೀತಿಯ ಆದೇಶವನ್ನು ನೀಡಿಲ್ಲ ಎಂದು ಹೇಳಿತ್ತು.

    ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ನಮ್ಮ ಪುಸ್ತಕಗಳಲ್ಲಿಯೂ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಅದ್ದರಿಂದ ಸರ್ಕಾರ ಆದೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

  • ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕರೆಗೆ ಸ್ಪಂದಿಸಿದ ಸೌದಿ ದೊರೆ, 2015 ರಲ್ಲಿ ಯೆಮನ್ ಮೇಲಿನ ಬಾಂಬ್ ದಾಳಿ ನಿಲ್ಲಿಸಿದ್ದರು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಹೇಳಿದ್ದಾರೆ.

    ಆಸಿಯಾನ್ ಪ್ರವಾಸಿ ಭಾರತೀಯರ ದಿನಾಚರಣೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಈ ಕುರಿತು ಮಾಹಿತಿ ನೀಡಿದರು. ಯೆಮನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಕೈಗೊಂಡಿದ್ದ ಆಪರೇಷನ್ `ರಹಾತ್’ ಗೆ ಸೌದಿ ದೊರೆ ಸಹಕಾರ ನೀಡಿದ್ದರು ಎಂದು ತಿಳಿಸಿದ್ದಾರೆ.

    ಯೆಮನ್ ನಲ್ಲಿದ್ದ 4000ಕ್ಕೂ ಹೆಚ್ಚು ಭಾರತೀಯರು ಸಂಕಷ್ಟದಲ್ಲಿ ಸಿಕ್ಕಿದ್ದರು. 2015 ಏಪ್ರಿಲ್ 1 ರಂದು ಆಪರೇಷನ್ ರಹಾತ್ ಎಂಬ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿತ್ತು.

    ಈ ವೇಳೆ ಸೌದಿ ಯೆಮನ್ ನಲ್ಲಿ ಉಗ್ರರ ವಿರುದ್ಧ ಬಾಂಬ್ ದಾಳಿ ನಡೆಸುತ್ತಿತ್ತು. ಸುಷ್ಮಾ ಅವರ ಸಲಹೆಯಂತೆ ಮೋದಿ ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ ನಡೆಸಲು ಅನುವಾಗುವಂತೆ ಬಾಂಬ್ ದಾಳಿ ಸ್ಥಗಿತಕ್ಕೆ ಸೌದಿ ದೊರೆಯನ್ನು ಕೋರಿದ್ದರು.

    ಈ ಮನವಿಗೆ ಪ್ರತಿಕ್ರಿಯಿಸಿದ್ದ ಸೌದಿ ದೊರೆ, ಪ್ರಧಾನಿ ಮೋದಿಯವರೊಂದಿಗಿನ ಸ್ನೇಹಕ್ಕೆ ಅವರ ಮನವಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದರೆ ಬಾಂಬ್ ದಾಳಿಯನ್ನೂ ಪೂರ್ಣ ನಿಲ್ಲಿಸಲಾಗದು. ಭಾರತೀಯರ ಸುರಕ್ಷಿತ ತೆರವಿಗಾಗಿ ಪ್ರತಿನಿತ್ಯ ಎರಡು ಘಂಟೆಗಳ ಕಾಲ ಬೆಳಗ್ಗೆ 9 ರಿಂದ 11 ರ ವರೆಗೆ ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಸುಷ್ಮಾ ಸ್ವರಾಜ್ ಘಟನೆಯನ್ನು ವಿವರಿಸಿದರು.

    ಸೌದಿ ದೊರೆಯ ಭರಸೆಯಂತೆ ಭಾರತೀಯ ಸೇನೆ 2015ರ ಏ.1ರಿಂದ 11 ದಿನಗಳ ಕಾಲ ಸೇನಾ ವಿಮಾನ ನಿಲ್ದಾಣದಿಂದ 4,800ಕ್ಕೂ ಹೆಚ್ಚು ಭಾರತೀಯರು ಮತ್ತು 1,972 ನೆರೆಹೊರೆಯ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ರಕ್ಷಿಸಿ ತವರಿಗೆ ಕರೆತಂದಿತ್ತು. ಈ ಕಾರ್ಯಾಚರಣೆಯನ್ನು ಭಾರತ ವಿದೇಶಾಂಗ ಸಲಹೆಗಾರ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಮುಂದಾಳತ್ವದಲ್ಲಿ ನಡೆಯಿತು ಎಂದು ಸುಷ್ಮಾ ಸ್ವರಾಜ್ ಹೇಳಿದರು.

  • 2018 ಗಣರಾಜೋತ್ಸವಕ್ಕೆ ಆಸಿಯಾನ್ ರಾಷ್ಟ್ರಗಳ ನಾಯಕರ ಆಗಮನ: ಪ್ರಧಾನಿ ಮೋದಿ

    2018 ಗಣರಾಜೋತ್ಸವಕ್ಕೆ ಆಸಿಯಾನ್ ರಾಷ್ಟ್ರಗಳ ನಾಯಕರ ಆಗಮನ: ಪ್ರಧಾನಿ ಮೋದಿ

    ನವದೆಹಲಿ: 2018, ಜನವರಿ 26 ರ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಆಸಿಯಾನ್ (ಆಗ್ನೇಯ ಏಷ್ಯಾ ದೇಶಗಳ ಸಂಘಟನೆ) ಒಕ್ಕೂಟದ 10 ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

    ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 2018 ಜನವರಿ 26ರಂದು ನಡೆಯೋ ಗಣರಾಜೋತ್ಸವ ಕಾರ್ಯಕ್ರಮ ದೇಶದ ಇತಿಹಾಸದಲ್ಲೇ ಸ್ಮರಣೀಯವಾಗಿ ಉಳಿಯುತ್ತದೆ. ಆಸಿಯಾನ್ ರಾಷ್ಟ್ರಗಳ ಪ್ರಮುಖ ನಾಯಕರು ದೇಶದ ಮಹತ್ವದ ಸಮಾರಂಭಕ್ಕೆ ಸಾಕ್ಷಿಯಾಲಿದ್ದಾರೆ ಎಂದು ತಿಳಿಸಿದರು.

    ಅಲ್ಲದೇ 2017 ವರ್ಷವು ಆಸಿಯಾನ್ ರಾಷ್ಟ್ರ ಒಕ್ಕೂಟ ಹಾಗೂ ಭಾರತಕ್ಕೆ ವಿಶೇಷವಾದ ವರ್ಷವಾಗಿದ್ದು, ಆಸಿಯಾನ್ ರಾಷ್ಟ್ರ ಒಕ್ಕೂಟ ರಚನೆಯಾಗಿ 50 ವರ್ಷಗಳು ಹಾಗೂ ಭಾರತ ಈ ಒಕ್ಕೂಟವನ್ನು ಸೇರಿ 25 ವರ್ಷಗಳು ಪೂರ್ಣಗೊಳ್ಳಲಿದೆ ಎಂದು ಹೇಳಿದರು.

    ಇದೇ ವೇಳೆ ಮುಂದಿನ ವರ್ಷದ ಆಗಸ್ಟ್ 15 ಅನ್ನು ಗುರಿಯಾಗಿಸಿಕೊಂಡು ದೆಹಲಿಯಲ್ಲಿ ಅಣಕು ಸಂಸತ್ ನಡೆಸುವ ವಿಷಯವನ್ನು ಪ್ರಸ್ತಾಪಿಸಿದರು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಜಿಲ್ಲೆಗಳಿಂದ ಯುವ ಪೀಳಿಗೆಯನ್ನು ಆಯ್ಕೆ ಮಾಡುವ ಮೂಲಕ ಮುಂದಿನ 5 ವರ್ಷಗಳಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬುವುದರ ಬಗ್ಗೆ ಯುವ ಸಮುದಾಯದಿಂದ ಸಲಹೆಗಳನ್ನು ಪ್ರಸ್ತುತ ಪಡಿಸಲಾಗುವುದು ಎಂದರು.

  • ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

    ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

    ಬೆಂಗಳೂರು: ಮಹದಾಯಿ ಹೋರಾಟವನ್ನು ರಾಜಕೀಯ ಪಕ್ಷಗಳು ಪತ್ರ ರಾಜಕೀಯ ನಡೆಸಲು ಬಳಸಿಕೊಳ್ಳುತ್ತಿದ್ದು, ರಾಜ್ಯದ ಪ್ರಮುಖ ಮೂರು ಪಕ್ಷಗಳು ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿವೆ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.

    ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ಅವರು, ಮೂರು ಪಕ್ಷಗಳು ಮಹದಾಯಿ ಇತ್ಯರ್ಥ ಮಾಡುವಲ್ಲಿ ವಿಫಲವಾಗಿವೆ. ಇವರಿಗೆ ರೈತರ ಸಮಸ್ಯೆ ಬಗೆಹರಿಸುವ ಚಿಂತೆ ಇಲ್ಲ. ಕೇವಲ ಅಧಿಕಾರದ ಆಸೆ ಇದೆ. ಅದ್ದರಿಂದ ಜನ ಸಾಮಾನ್ಯರ ಹೋರಾಟಕ್ಕೆ ಪರ್ಯಾಯ ಶಕ್ತಿ ಬೇಕಿದೆ ಎಂದರು.

    ಮಹದಾಯಿ ಸಮಸ್ಯೆ ಬರೀ ಪಕ್ಷದ ಸಮಸ್ಯೆ ಮಾತ್ರವಲ್ಲ. ಈ ಸಮಸ್ಯೆ ಕರ್ನಾಟಕದ ಮೂಲಭೂತ ಹಕ್ಕು. ಯಡಿಯೂರಪ್ಪ ಅವರು 15 ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳದೇ ಈಗ ವಚನ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು.

    ಇದೇ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಆದರೆ ಒಮ್ಮೆಯೂ ಮಹದಾಯಿ ಕುರಿತು ಮಾತನಾಡಿಲ್ಲ. ಕೇವಲ ಬುಲೆಟ್ ರೈಲು, ಸ್ಮಾಟ್ ಸಿಟಿ, ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಅವರಿಗೆ ರೈತರು, ಜನಸಾಮಾನ್ಯರ ಬಗ್ಗೆ ಕಳಜಿ ಇಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿಚಾರವಾಗಿ ಮಧ್ಯ ಪ್ರವೇಶ ಮಾಡಬೇಕೆಂದು ಎಂದು ಆಗ್ರಹಿಸಿದರು.

    ರಾಜ್ಯಸರ್ಕಾರವು ಕೇವಲ ಪತ್ರ ಬರೆದು ಕೈತೊಳೆದುಕೊಂಡಿದೆ. ಆದರೆ ಸರ್ಕಾರದ ಪ್ರತಿನಿಧಿಗಳನ್ನು ರಾಷ್ಟ್ರಪತಿಗಳ ಬಳಿ ಕಳುಹಿಸಿ ಮನವಿ ಮಾಡಬೇಕು. ರಾಜಕೀಯ ಬಿಟ್ಟು ಕೆಲಸ ಮಾಡಿದರೆ ಈ ವಿಚಾರವನ್ನು ಕೆಲವೇ ನಿಮಿಷಗಳಲ್ಲಿ ಬಗೆಹರಿಸಬಹುದು. ಆದರೆ ಅವರಿಗೆ ಈ ಸಮಸ್ಯೆಯನ್ನು ಪರಿಹರಿಸುವ ಅವಶ್ಯಕತೆ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿಗೆ ತಿರುಗುಬಾಣವಾದ ಮಹದಾಯಿ ವಿವಾದ – ಉಸ್ತುವಾರಿಗಳ ಮೇಲೆ ಶಾ ಗರಂ

    ಕನ್ನಡ ಚಿತ್ರರಂಗ ನಿರಂತರವಾಗಿ ರೈತರ ಪರ ಹೋರಾಟಕ್ಕೆ ಬೆಂಬಲ ಸೂಚಿಸುತ್ತದೆ. ಕೇವಲ ಯಾವುದೇ ಒಂದು ಸ್ಥಳಕ್ಕೆ ಭೇಟಿ ನೀಡಿ ಮೆರವಣಿಗೆ ಮಾಡಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ನಿರಂತರವಾಗಿ ಸಮಸ್ಯೆ ಬಗೆ ಹರಿಯುವವರೆಗೆ ನಾವು ಹೋರಾಟಗಾರರ ಪರ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

    ಹೆಗ್ಡೆಗೆ ತಿರುಗೇಟು: ಕೇಂದ್ರ ಸಚಿವರೊಬ್ಬರು ಕೆಲಸಕ್ಕೆ ಬಾರದ ವಿಷಗಳ ಕುರಿತು ಮಾತನಾಡುತ್ತಾರೆ. ಆದರೆ ರೈತರ ಪರವಾಗಿ ಧ್ವನಿ ಎತ್ತಲಿ. ಅದನ್ನು ಬಿಟ್ಟು ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟಾಂಗ್ ನೀಡಿದರು. ಇದನ್ನೂ ಓದಿ: Exclusive ಮಹದಾಯಿ ಪ್ರತಿಭಟನೆ, ಅನಂತ್‍ ಕುಮಾರ್ ಭಾಷಣ: ಬಿಜೆಪಿ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    https://www.youtube.com/watch?v=hzIeun7Lix8