Tag: prime minister modi

  • ಅಮಿತ್ ಶಾ ಪುತ್ರನ ಆಸ್ತಿ 60 ಸಾವಿರದಿಂದ 50  ಕೋಟಿ ಹೇಗಾಯ್ತು: ಮೋದಿಗೆ ರಾಹುಲ್ ಪ್ರಶ್ನೆ

    ಅಮಿತ್ ಶಾ ಪುತ್ರನ ಆಸ್ತಿ 60 ಸಾವಿರದಿಂದ 50 ಕೋಟಿ ಹೇಗಾಯ್ತು: ಮೋದಿಗೆ ರಾಹುಲ್ ಪ್ರಶ್ನೆ

    ಯಾದಗಿರಿ: ಅಮಿತ್ ಶಾ ಪುತ್ರನ ಜಯ ಶಾ ಆಸ್ತಿ 60 ಸಾವಿರದಿಂದ 50  ಕೋಟಿಗೆ ಹೇಗೆ ಏರಿಕೆ ಆಯ್ತು  ಎನ್ನುವುದರ ಬಗ್ಗೆ ಪ್ರಧಾನಿ ಮೋದಿ ಉತ್ತರ ನೀಡಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಆಗ್ರಹಿಸಿದ್ದಾರೆ.

    ಉತ್ತರ ಕರ್ನಾಟಕ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಶಹಪುರದಲ್ಲಿ ಏಕಾಏಕಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಫೇಲ್ ಒಪ್ಪಂದದ ಗುತ್ತಿಗೆ ಹೆಚ್‍ಎಎಲ್ ಗೆ ಸಿಗಬೇಕಿತ್ತು. ಆದರೆ ಮೋದಿ ತಮ್ಮ ಬೆಂಬಲಿಗ ಉದ್ಯಮಿಗೆ ನೀಡುವ ಉದ್ದೇಶದಿಂದ ದೇಶದ ಪ್ರತಿಷ್ಠಿತ ಸಂಸ್ಥೆಗೆ ಸಿಗಬೇಕಿದ್ದ ಗುತ್ತಿಗೆಯನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

    ಕರ್ನಾಟಕಕ್ಕೆ ರಾಫೇಲ್ ಕಂಪನಿ ಬರಬೇಕಿತ್ತು. ಆದರೆ ಅವರು ಬೇರೆಯವರಿಗೆ ಗುತ್ತಿಗೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳು ಕರ್ನಾಟಕದ ಉದ್ಯೋಗ ಕಿತ್ತು ಕೊಂಡಿದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಎಲೆಕ್ಷನ್ ಹಿಂದೂ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಯಾವ ದೇವಾಲಯ, ಧಾರ್ಮಿಕ ಕೇಂದ್ರ ಇಷ್ಟ ಅಲ್ಲಿಗೆ ನಾನು ಹೋಗುತ್ತೇನೆ. ದೇವಾಲಯಕ್ಕೂ ಹೋಗುತ್ತೇನೆ ಮಸೀದಿಗೂ ಹೋಗುತ್ತೇನೆ. ಹೀಗಾಗಿ ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಅವರ ಸರ್ಕಾರದ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿಗಳು ಕೂಡ ಜೈಲಿಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಆರ್ ಎಸ್ ಎಸ್ ಮುಖ್ಯಸ್ಥ  ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್, ರಾಷ್ಟ್ರ ರಕ್ಷಣೆಗೆ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ. ಮೋಹನ ಭಾಗವತ್ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: WIRE ವಿರುದ್ಧ 100 ಕೋಟಿ ಮಾನನಷ್ಟ ಕೇಸ್ ಹೂಡಿದ ಅಮಿತ್ ಶಾ ಪುತ್ರ

     

  • ಮೋದಿಯವರೇ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯನವರ ಬಳಿ ಪಾಠ ಕೇಳಿ ತಿಳಿದುಕೊಳ್ಳಿ: ರಾಹುಲ್ ಗಾಂಧಿ

    ಮೋದಿಯವರೇ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯನವರ ಬಳಿ ಪಾಠ ಕೇಳಿ ತಿಳಿದುಕೊಳ್ಳಿ: ರಾಹುಲ್ ಗಾಂಧಿ

    ಬಳ್ಳಾರಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ಅವರ ಬಳಿ ಪಾಠ ಕೇಳಿ ತಿಳಿದುಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಹೊಸಪೇಟೆಯ ಕಾಂಗ್ರೆಸ್ ಜನಾರ್ಶೀವಾದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿದ್ದೇನೆ. ಗುಜರಾತ್ ನಲ್ಲಿಯೂ ಪ್ರವಾಸ ಮಾಡಿದ್ದೇನೆ. ಆದರೆ ಪ್ರಧಾನಿಗಳು ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಗುಜರಾತ್ ನಲ್ಲಿನ ಸತ್ಯ ಬೆಳಕಿಗೆ ಬಂದಿದೆ. ಗುಜರಾತ್‍ನಲ್ಲೂ ಸಾಕಷ್ಟು ಸಮಸ್ಯೆಗಳಿವೆ. ರೈತ, ವ್ಯಾಪಾರಿ, ಜನಸಾಮಾನ್ಯರು ಕಷ್ಟಪಟ್ಟು ಗುಜರಾತ್ ಕಟ್ಟಿದ್ದಾರೆ ವಿನಃ ಮೋದಿ ಅವರಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ಮೊದಲು ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ನಾವು ಸುಳ್ಳಿನ ಆಶ್ವಾಸನೆ ಕೊಟ್ಟಿಲ್ಲ. ಆದರೆ ಮೋದಿಯವರ ಮಾತು ದಾರಿತಪ್ಪಿಸುತ್ತಿದ್ದಾರೆ. ಹೈದರಾಬಾದ್ ಭಾಗದ ಪ್ರಮುಖ ಬೇಡಿಕೆ ಆಗಿದ್ದ 371ಜೆ ಜಾರಿಗೆ ತಂದು 350 ಕೋಟಿ ರೂ. ನೀಡಿದ್ದೇವೆ. ಆದರೆ ಅಡ್ವಾಣಿಯವರು 371ಜೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಮುಂದಿನ ಬಾರಿ ಅಧಿಕಾರ ಪಡೆದರೆ ಈ ಭಾಗದ ಅಭಿವೃದ್ಧಿಗೆ 4 ಸಾವಿರ ಕೋಟಿ ಮಂಜೂರು ಮಾಡುತ್ತೇವೆ. ಇದುವರೆಗೂ 5 ಸಾವಿರ ವಿದ್ಯಾರ್ಥಿಗಳಿಗೆ ಮೆಡಿಕಲ್, ಎಂಜಿನಿಯರಿಂಗ್ ಪ್ರವೇಶ ಅವಕಾಶ ಲಭಿಸಿದೆ. ಸಾವಿರ ಯುವಕರಿಗೆ ಉದ್ಯೋಗ ಸಿಕ್ಕಿದೆ. ಬೀದರ್, ಕೊಪ್ಪಳ, ಕಲಬುರಗಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾಗಿವೆ. ಇದರಿಂದ ಹೈಕ ಭಾಗದ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದು ಹೇಳಿ ಯುಪಿಎ ಸರ್ಕಾರದ ಸಾಧನೆಯನ್ನು ಹೊಗಳಿದರು.

    ನಮ್ಮ ಮುಂದೆ ಕರ್ನಾಟಕ ಚುನಾವಣೆ ಇದೆ. ಜನ ತಮ್ಮ ಭವಿಷ್ಯದ ನಿರ್ಣಯ ಮಾಡಬೇಕಿದೆ. ನೀವು ಯಾವ ಪಕ್ಷದ ಕಡೆ ನಿರ್ಧಾರ ಮಾಡುತ್ತೀರಿ. ಒಂದು ಕಡೆ ಸಿಎಂ ಸಿದ್ದರಾಮಯ್ಯ, ನಾನು, ಪರಮೇಶ್ವರ್ ಇದ್ದರೆ ಮತ್ತೊಂದೆಡೆ ಬಿಜೆಪಿ ನರೇಂದ್ರ ಮೋದಿ, ಯಡಿಯೂರಪ್ಪ ಇದ್ದಾರೆ. ನೀವು ಈಗ ಸತ್ಯ ಹೇಳುವವರ ಮೇಲೆ ನಂಬಿಕೆ ಇಡಬೇಕಿದೆ. ಕಾಂಗ್ರೆಸ್ ಸತ್ಯದ ಪರ. ಬಿಜೆಪಿ ಸುಳ್ಳಿನ ಪರ ಇದೆ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ಅವರು ಚುನಾವಣೆ ವೇಳೆ ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಒಂದೇ ಒಂದು ರೂಪಾಯಿ ಖಾತೆಗೆ ಬಂದಿದೆಯಾ? 2 ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ ಹೋಯಿತು? ದೇಶದಲ್ಲಿ ಸೃಷ್ಟಿಯಾಗಿರುವ ಹೆಚ್ಚಿನ ಉದ್ಯೋಗ ಸಂಖ್ಯೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಕರ್ನಾಟಕದ್ದು. ಇದನ್ನ ಮೋದಿಯವರೇ ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಸೃಷ್ಟಿ ಕೆಲಸ ಮಾಡಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿದೆ. ರೈತರ ಸಮಸ್ಯೆ ಬಿಗಡಾಯಿಸಿದೆ. ಆದಿವಾಸಿ, ದಲಿತರು ಸಮಸ್ಯೆಯಲ್ಲಿದ್ದಾರೆ. ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಒಂದು ಗಂಟೆ ಭಾಷಣದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡಲಿಲ್ಲ. ಯುವಕರ ಉದ್ಯೋಗದ ಬಗ್ಗೆ ಮಾತನಾಡಲಿಲ್ಲ. ರೈತರ ಸಹಾಯದ ಬಗ್ಗೆ ಹೇಳಲಿಲ್ಲ. ಒಂದು ಗಂಟೆ ಭಾಷಣ ನಿರುಪಯುಕ್ತ ಎಂದರು.

    ನಿಮ್ಮನ್ನ ಪ್ರಧಾನಿ ಮಾಡಿದ್ದು ದೇಶದ ಭವಿಷ್ಯ ರೂಪಿಸಲು. ನಿಮ್ಮ ಕಥೆ ಕೇಳಲು ಅಲ್ಲ. ಸಿದ್ದರಾಮಯ್ಯನವರ ಗಾಡಿ ಮುಂದೆ ಹೋಗುವುದು. ಹಿಂದಕ್ಕೆ ಹೋಗುವುದಲ್ಲ. ಮೋದಿ ಮುಂದಿನದನ್ನು ನೋಡುತ್ತಿಲ್ಲ. ಹಿಂದಿನದನ್ನು ಕನ್ನಡಿಯಲ್ಲಿ ನೋಡಿ ಗಾಡಿ ಓಡಿಸುತ್ತಿದ್ದಾರೆ. ಈ ರೀತಿ ಗಾಡಿ ಓಡಿಸಿದರೆ ಅಪಘಾತ ಆಗುತ್ತೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಿಮ್ಮಿಂದ ನಾವು ಮಾತು ಕೇಳೋಕೆ ಪ್ರಧಾನಿ ಮಾಡಿಲ್ಲ. ನೋಟ್ ಬ್ಯಾನ್ ಮೂಲಕ ಕೆಟ್ಟ ತೀರ್ಮಾನ ತೆಗೆದುಕೊಂಡಿದ್ದೀರ. ಅಲ್ಪಸಂಖ್ಯಾತರ ಬಗ್ಗೆ ಅವಹೇಳನ ಮಾಡಿದ್ದೀರಿ. ಜಿಎಸ್‍ಟಿ ಬದಲಾಯಿಸಿ ಗಬ್ಬರ್ ಸಿಂಗ್ ಟ್ಯಾಕ್ಸ್ ರೀತಿ ಪರಿವರ್ತಿಸಿದ್ದರಿಂದ ಚಿಕ್ಕ ಚಿಕ್ಕ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಿಡಿಕಾರಿದರು.

    ಗುಜರಾತ್ ನಲ್ಲಿ ಟಾಟಾ ಸಂಸ್ಥೆ ಪ್ರಾರಂಭವಾಗಿದೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ಕಾರು ತಯಾರಾಗಿಲ್ಲ. 33 ಸಾವಿರ ಕೋಟಿ ನ್ಯಾನೋಗೆ ಕಂಪೆನಿಗೆ ಮೋದಿ ನೀಡಿದ್ದರು. ನ್ಯಾನೋ ಕಾರು ಎಲ್ಲೂ ಕಾಣಿಸುತ್ತಿಲ್ಲ. ಒಬ್ಬ ಉದ್ಯಮಿಗೆ 40 ಸಾವಿರ ಹೆಕ್ಟೆರ್ ಜಮೀನನ್ನು ಕೇವಲ ಒಂದು ರೂಪಾಯಿಗೆ ಮಾರಾಟ ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತೆ. ಆದರೆ ನಾವು ಉದ್ಯೋಗ ಖಾತರಿಯಂತಹ ಯೋಜನೆ ಜಾರಿ ಮಾಡಿ ಬಡವರಿಗೂ ಉದ್ಯೋಗ ನೀಡಿದ್ದೇವು ಎಂದರು.

    ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮರೆತಿದ್ದಾರೆ. ಇಡೀ ವಿಶ್ವದ ಭ್ರಷ್ಟಾಚಾರದ ದಾಖಲೆಯನ್ನು ಹಿಂದಿನ ಬಿಜೆಪಿ ಸರಕಾರ ಮುರಿದಿದೆ. ಯಡಿಯೂರಪ್ಪರನ್ನು ಬಿಜೆಪಿಯವರೇ ತೆಗೆದು ಹಾಕಿದ್ದರು. ರಾಫೇಲ್ ಖರೀದಿ ಹಗರಣ ದೇಶದ ದೊಡ್ಡ ಹಗರಣವಾಗಿದ್ದು ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

    ಫ್ರಾನ್ಸಿಗೆ ತೆರಳಿದ್ದ ಪ್ರಧಾನಿ ಮೋದಿ ಖುದ್ದು ರಾಫೇಲ್ ವಿಮಾನ ಖರೀದಿಯ ಒಪ್ಪಂದ ಬದಲಾಯಿಸಿದರು. ನಾವು ಇದ್ದಾಗ ರಾಫೇಲ್ ವಿಮಾನದ ಖರೀದಿಗೆ ಎಚ್‍ಎಎಲ್ ಸಂಸ್ಥೆ ಜೊತೆ ಒಪ್ಪಂದ ನಡೆಸಿದ್ದೆವು. ದೇಶದಲ್ಲಿ ಎಚ್‍ಎಎಲ್ ನಂಬಿಕಸ್ಥ ಸಂಸ್ಥೆ. ಬೆಂಗಳೂರಿನ ಅಭಿವೃದ್ಧಿಗೆ ಎಚ್‍ಎಎಲ್ ಸಹ ಕಾರಣ. ಮೋದಿ ಎಚ್‍ಎಎಲ್ ಒಪ್ಪಂದವನ್ನು ತಮ್ಮ ಮಿತ್ರರಿಗೆ ನೀಡಿದ್ದಾರೆ. ಯಾವ ಆಧಾರದಲ್ಲಿ ಮೋದಿಯವರು ಈ ಒಪ್ಪಂದ ನೀಡಿದ್ದಾರೆ. ನಿಮ್ಮ ಮಿತ್ರರಿಗೆ ಸಹಾಯ ಮಾಡಲು ಈ ಒಪ್ಪಂದ ನೀಡಿದ್ದೀರಾ? ಬಿಜೆಪಿ ಸಮಯದಲ್ಲಿ ಇದ್ದ ಹಗರಣಗಳ ಬಗ್ಗೆ ಮಾತನಾಡಲಿಲ್ಲ ಏಕೆ? ಮೆಡಿಕಲ್ ಹಗರಣ, ರೇಪ್ ಹಗರಣ, ಭೂ ಹಗರಣ, ಗಣಿ ಹಗರಣ ಬಗ್ಗೆ ಮಾತನಾಡಿಲ್ಲ. ನಮ್ಮ ಸರ್ಕಾರದ ಮೇಲೆ ಒಂದೇ ಒಂದು ಹಗರಣದ ಆರೋಪವಿಲ್ಲ ಎಂದರು.

    ಪ್ರಧಾನಿ ಮೋದಿ ಅವರು ಇಡೀ ದೇಶದಲ್ಲಿ ದಲಿತರು, ಆದಿವಾಸಿಗಳಿಗೆ 55 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 27 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇನ್ನಷ್ಟು ಹೆಚ್ಚಿನ ಕೆಲಸ ಮಾಡುತ್ತೇವೆ. ನಾವು ಯಾವತ್ತೂ ನಾವೊಬ್ಬರೇ ಮಾಡಿದ್ದೇವೆಂದು ಹೇಳಿಕೊಳ್ಳುವುದಿಲ್ಲ. ರಾಜ್ಯದ ಪ್ರಗತಿ ಪಥದಲ್ಲಿ ಸಾಗುತ್ತಿದೆ. ರಾಜ್ಯದ ಪ್ರಗತಿಗೆ ಅನೇಕ ಮಹಿಳೆಯರು, ರೈತರು, ವ್ಯಾಪಾರಿಗಳ ಕೊಡುಗೆಯಿದೆ ಎಂದು ಹೇಳಿದರು.

  • ಕರ್ನಾಟಕದ ಗೆಲುವಿನಿಂದ ಕಾಂಗ್ರೆಸ್ಸಿಗೆ ದೇಶದಲ್ಲೇ ಹೊಸ ಶಕ್ತಿ ಬರುತ್ತೆ: ಸಿಎಂ

    ಕರ್ನಾಟಕದ ಗೆಲುವಿನಿಂದ ಕಾಂಗ್ರೆಸ್ಸಿಗೆ ದೇಶದಲ್ಲೇ ಹೊಸ ಶಕ್ತಿ ಬರುತ್ತೆ: ಸಿಎಂ

    ಬಳ್ಳಾರಿ: ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ದೇಶದಲ್ಲಿ ಕಾಂಗ್ರೆಸ್ ಹೊಸ ಶಕ್ತಿ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಹೊಸಪೇಟೆಯಲ್ಲಿ ನಡೆದ ಜನಾರ್ಶೀವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಗೆಲ್ಲುವ ಮೂಲಕ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಬೇಕಿದೆ. ಇದಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲುವು ನಾಂದಿಯಾಗಲಿದೆ ಎಂದರು.

    ಭ್ರಷ್ಟಾಚಾರಿಗಳಾದ ಬಿಎಸ್ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ನಮ್ಮ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದ ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು. ದೇಶದ ಯಾವುದೇ ನಾಯಕರು ಪ್ರಧಾನಿ ಮೋದಿ ಅವರ ರೀತಿ ಭಾಷಣ ಮಾಡಿರಲಿಲ್ಲ. ಅವರು ಒಂದು ಪಕ್ಷದ ನಾಯಕರಾಗಿಯೂ ಮಾತನಾಡಿಲಿಲ್ಲ. ತಾವು ಪ್ರಧಾನಿ ಎಂಬುದನ್ನು ಮರೆತು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

    ಅರಮನೆ ಮೈದಾನದಲ್ಲಿ ಮಾತನಾಡಿದ ಪ್ರಧಾನಿಗಳು ಮಹದಾಯಿ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಲಿಲ್ಲ. ಸರ್ವಪಕ್ಷ ನಿಯೋಗ ಪ್ರಧಾನಿ ಬಳಿಗೆ ಕರೆದುಕೊಂಡು ಹೋಗಿದ್ದೇವು. ಆದರೆ ಅವರು ಮಧ್ಯಸ್ಥಿಕೆಗೆ ಒಪ್ಪಲಿಲ್ಲ. ಹೀಗಾಗಿ ರಾಜ್ಯದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.

    ಬಳ್ಳಾರಿ ಹೊಸಪೇಟೆ ಐತಿಹಾಸಿಕ ಸ್ಥಳ. ಹಂಪಿ ವಿಜಯನಗರದ ಅರಸರ ರಾಜಧಾನಿಯಾಗಿತ್ತು. ಶ್ರೀಕೃಷ್ಣದೇವರಾಯರು ಇತಿಹಾಸದಲ್ಲಿ ಸ್ಮರಣೀಯ ವ್ಯಕ್ತಿ. ಅವರ ಆಡಳಿತದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿತ್ತು. ಈ ಪ್ರದೇಶದಿಂದಲೇ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಬಾರಿ ಬಂದಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದು 4 ವರ್ಷ 9 ತಿಂಗಳಾಗಿದೆ. ಜನಪರ ಆಡಳಿತ ಕೊಟ್ಟಿದ್ದೇವೆ. ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.

    ನಮ್ಮ ಸರ್ಕಾರದ ಕಾರ್ಯಕ್ರಮಗಳು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಆರು ಕೋಟಿ ಜನರು ಒಂದಲ್ಲ ಒಂದು ರೀತಿ ಸರ್ಕಾರದ ಯಾವುದಾದರೊಂದು ಯೋಜನೆಯ ಫಲ ಪಡೆದಿದ್ದಾರೆ. ಬಡ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡಿದ್ದೇವೆ. ಹೊಸ ಕರ್ನಾಟಕಕ್ಕಾಗಿ ಅಭಿವೃದ್ಧಿ ಮೂಲಕ ಭಾಷ್ಯ ಬರೆದಿದ್ದೇವೆ. ನವ ಕರ್ನಾಟಕ ನಿರ್ಮಾಣ ಕೇವಲ ಕಾಂಗ್ರೆಸ್ ನಿಂದ ಸಾಧ್ಯ. ಹೀಗಾಗಿ ಮರಳಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

    ರಿಪಬ್ಲಿಕ್ ಆಫ್ ಬಳ್ಳಾರಿ: ಬಿಜೆಪಿ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಕರೆಯುತ್ತಿದ್ದರು. ಆದರೆ ನಾವು ಆ ಕಳಂಕವನ್ನು ತೊಲಗಿಸಿದ್ದೇವೆ. ಬಳ್ಳಾರಿ ಅಕ್ರಮ ಗಣಿಗಾರಿಕೆ ಕುರಿತು ಸಂತೋಷ್ ಹೆಗ್ಡೆ ವರದಿ ಕೊಟ್ಟಿದ್ದರು. ಬಳ್ಳಾರಿಯೇ ಒಂದು ದೇಶ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದೇವೆ. ಇಲ್ಲಿಂದಲೇ ಬಿಜೆಪಿ ಪತನ ಆರಂಭವಾಯಿತು ಎಂದರು.

    ಅಮೀತ್ ಶಾ, ಹೆಗ್ದೆ ವಿರುದ್ಧ ಕಿಡಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನಾಲಾಯಕ್. ಅವರು ಗ್ರಾಮಪಂಚಾಯತಿ ಸದಸ್ಯನಾಗಲು ಕೂಡ ಅನರ್ಹ. ಅಮಿತ್ ಶಾ ಮರ್ಡರ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲದೇ ಗಡಿಪಾರಿಗೆ ಗುರಿಯಾಗಿದ್ದರು. ಅದನ್ನು ಮರೆತು ಮೋದಿ ಮರೆತು ಬಿಟ್ಟಿದ್ದಾರೆ. ಗೋದ್ರಾ ಹತ್ಯಾಖಂಡದ ರೂವಾರಿ ಯಾರು ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯ ಮಾಡಿದರು.

    ಕರ್ನಾಟಕ ಬಸವಣ್ಣ, ಶಿಶುನಾಳ ಷರೀಫ್, ಕನಕದಾಸರ ಭೂಮಿ. ಇಲ್ಲಿ ನಿಮ್ಮ ಕೋಮು ದಾಳ ಕೆಲಸ ಮಾಡಲ್ಲ. ರಾಜ್ಯದ ಜನ ನಮ್ಮ ಸರಕಾರವನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಸರಕಾರದ ವಿರುದ್ಧ ಪ್ರಭುತ್ವದ ವಿರುದ್ಧ ಅಲೆ ಇಲ್ಲ. ಕೋಮು ದಳ್ಳುರಿಗೆ ಬೆಂಬಲ ನೀಡುತ್ತಿದ್ದಿರ, ಆದರೆ ನಿಮ್ಮ ಪ್ರಯತ್ನ ಕೇವಲ ಭ್ರಮೆ, ಕನಸಷ್ಟೇ. ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆ. ಆನಂದ್ ಸಿಂಗ್, ನಾಗೇಂದ್ರ, ಭೀಮಾನಾಯ್ಕ ನಮ್ಮ ಜೊತೆ ಬಂದಿದ್ದಾರೆ. ಬಳ್ಳಾರಿಯ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ ಮುನುಷ್ಯತ್ವ ಇಲ್ಲದ ಪಕ್ಷ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇ ಬಾರದು. ಹೀಗಾಗಿ ಮರಳಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

  • ಕಾಂಗ್ರೆಸ್ ದೇಶಕ್ಕೆ ಏನು ಮಾಡದೇ ಹೋಗಿದ್ರೆ ಇಷ್ಟು ಪ್ರಗತಿ ಆಗ್ತಿತ್ತಾ: ಪ್ರಧಾನಿ ಮೋದಿಗೆ ಖರ್ಗೆ ಪ್ರಶ್ನೆ

    ಕಾಂಗ್ರೆಸ್ ದೇಶಕ್ಕೆ ಏನು ಮಾಡದೇ ಹೋಗಿದ್ರೆ ಇಷ್ಟು ಪ್ರಗತಿ ಆಗ್ತಿತ್ತಾ: ಪ್ರಧಾನಿ ಮೋದಿಗೆ ಖರ್ಗೆ ಪ್ರಶ್ನೆ

    ಬಳ್ಳಾರಿ: ಕಾಂಗ್ರೆಸ್ ಜಾತ್ಯಾತೀತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದೆ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಧಾನಿಗಳು ಪ್ರಶ್ನೆ ಮಾಡಿದ್ದಾರೆ. ಆದರೆ ನಾವು ಏನು ಮಾಡದೆ ಹೋಗಿದ್ದರೆ ಇಷ್ಟು ಪ್ರಗತಿ ಆಗುತ್ತಿತ್ತಾ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

    ಹೊಸಪೇಟೆಯಲ್ಲಿ ಏರ್ಪಡಿಲಾಗಿದ್ದ ಜನಾರ್ಶೀವಾದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಿದೆ. ನಾವು ಪ್ರಜಾಪ್ರಭುತ್ವ ಉಳಿಸಿದ್ದರಿಂದಲೇ ನೀವು ಪ್ರಧಾನಿಯಾಗಿದ್ದು ಎಂದು ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಗಳ ಸವಾಲಿಗೆ ಸವಾಲಿಗೆ ಸವಾಲು ಹಾಕಬೇಕು. ಅವರ ಜವಾಬ್ ಗೆ ಜವಾಬ್ ಕೊಡಬೇಕು ಎಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಹೆಸರು ಪ್ರಸ್ತಾಪಿಸದೇ ತಿರುಗೇಟು ನೀಡಿದರು.

    ರಾಜ್ಯದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಯವರು ಮನೆಮನೆಗೆ ಹೋಗುತ್ತಿದ್ದಾರೆ. ನಾವು ಕೂಡ ಮನೆಮನೆಗೆ ಹೋಗ್ತಿದ್ದೇವೆ. ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ರಾಜ್ಯದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅಷ್ಟೇ ಅಲ್ಲದೇ ಅವರ ಕಾರ್ಯಕರ್ತರನ್ನ ಹುರಿದುಂಬಿಸುತ್ತಾರೆ. ಆದರೆ ರಾಜ್ಯದ ಜನ ಅವರನ್ನು ಒಪ್ಪುವುದಿಲ್ಲ ಎಂದರು.

    ರಾಜ್ಯದ ಜನ ನೆಹರು, ಇಂದಿರಾ ತತ್ವದ ಮೇಲೆ ನಿಂತಿದ್ದಾರೆ. ಪ್ರಜಾಪ್ರಭುತ್ವ ಉಳಿಸಿದ್ದು ಕಾಂಗ್ರೆಸ್. ಒಬ್ಬ ಚಾಯ್ ವಾಲಾ ಪ್ರಧಾನಿಯಾಗಲು ಸಂವಿಧಾನ ಕಾರಣ. ಆದರೆ ಆರ್‍ಎಸ್‍ಎಸ್ ಅಂಬೇಡ್ಕರ್ ಭಾವಚಿತ್ರ ಹಾಕಿಲ್ಲ. ಕಾಂಗ್ರೆಸ್ ಮುಖಂಡರಲ್ಲೇ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ. ಅಂಬೇಡ್ಕರ್ ರನ್ನು ವೋಟಿಗಾಗಿ ಬಿಜೆಪಿ ನೆನೆಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

    ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನಸ್ತೋಮ ಬಂದಿದೆ. ಜನಸ್ತೋಮದ ನೋಡಿದರೆ ಮುಂದಿನ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಗೆಲುವು ಖಚಿತ. ಬಿಜೆಪಿಯವರು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ನಮ್ಮವರೂ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ತಲುಪಿಸುತ್ತಿದ್ದಾರೆ. ಬಿಜೆಪಿಯವರು ಕರ್ನಾಟಕ ಮುಕ್ತ ಕಾಂಗ್ರೆಸ್ ಮಾಡುತ್ತೇವೆ ಎನ್ನುತ್ತಾರೆ ಆದರೆ ಬಿಜೆಪಿಯವರ ತತ್ವ, ನೀತಿಗಳನ್ನು ರಾಜ್ಯದ ಜನತೆ ಒಪ್ಪಲ್ಲ ಎಂದರು.

     

  • ತನ್ನ ವಿರುದ್ಧ ಟೀಕೆಗಳಿಗೆ ಕೊನೆಗೂ ಮೌನ ಮುರಿದ ರಮ್ಯಾ

    ತನ್ನ ವಿರುದ್ಧ ಟೀಕೆಗಳಿಗೆ ಕೊನೆಗೂ ಮೌನ ಮುರಿದ ರಮ್ಯಾ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಭಾಷಣ ವಿರುದ್ಧ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ತಮ್ಮ ವಿರುದ್ಧದ ಟೀಕೆಗಳ ವಿರುದ್ಧ ಮೌನ ಮುರಿದಿದ್ದಾರೆ.

    ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣಗಳ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅವರು ತಮ್ಮ ವಿರುದ್ಧದ ಟೀಕೆ ಬಗ್ಗೆ ಸ್ಪಷ್ಟನೆ ನೀಡಿದರು. ಪ್ರಧಾನಿ ಮೋದಿ ಕುರಿತದ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದ ಪಾಟ್ ಪದದ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮೋದಿ ಹೇಳಿರುವ ಅರ್ಥದಲ್ಲಿಯೇ ಪೊಟ್ಯಾಟೋ, ಆನಿಯನ್, ಟೊಮೆಟೊ ಅರ್ಥವನ್ನೇ ಹೇಳಿದ್ದೇನೆ. ಅಕ್ಷರಗಳನ್ನು ಉಲ್ಟಾ ಬರೆದಿದ್ದೇನೆ ಎಂದು ತಿಳಿಸಿದರು.

    ಇದೇ ವೇಳೆ ಫೇಕ್ ಅಕೌಂಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಆ ರೀತಿ ಪಾಠ ಮಾಡಿಲ್ಲ. ಆದರೆ ಪಕ್ಷಕ್ಕೆ ಒಂದು, ವೈಯಕ್ತಿಕ ವಿಚಾರಕ್ಕೆ ಒಂದು ಅಕೌಂಟ್ ಇಟ್ಟುಕೊಳ್ಳಿ ಎಂದು ಹೇಳಿದ್ದೇನೆ. ಆದರೆ ನಾನು ಮಲ್ಟಿಪಲ್ ಅಕೌಂಟ್ ಬಗ್ಗೆ ಹೇಳಿದ್ದೆ. ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಎಂದು ನಾನು ಎಂದು ಹೇಳಿಲ್ಲ. ಮಲ್ಟಿಪಲ್ ಅಕೌಂಟ್ ಮತ್ತು ನಕಲಿ ಅಕೌಂಟ್ ವ್ಯತ್ಯಾಸವಿದೆ ಎಂದು ಸ್ಪಷ್ಟನೆ ನೀಡಿದರು.  ಇದನ್ನೂ ಓದಿ: ರಮ್ಯಾ ಒಬ್ಬಳು ವಯ್ಯಾರಿ, ನಟನೆ ಮಾಡೋದಷ್ಟೆ ಅವಳ ಕೆಲಸ : ಸೊಗಡು ಶಿವಣ್ಣ

    ನಟ ಜಗ್ಗೇಶ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು ನಾನೇನು ಮಾತನಾಡಲ್ಲ ಎಂದರು.  ಇದನ್ನೂ ಓದಿ: ರಮ್ಯಾ ವಿರುದ್ಧ ಸೈಬರ್ ಕ್ರೈಂಗೆ ದೂರು

  • ಮೋದಿ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿದರ ಹಿಂದಿದೆ ರಾಹುಲ್ ವಿನೂತನ ತಂತ್ರ!

    ಮೋದಿ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿದರ ಹಿಂದಿದೆ ರಾಹುಲ್ ವಿನೂತನ ತಂತ್ರ!

    ನವದೆಹಲಿ: ಸಂಸತ್ ನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ಕಾಂಗ್ರೆಸ್ ನಾಯಕರು ಅಡ್ಡಿಪಡಿಸಿ ಘೋಷಣೆ ಕೂಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಪ್ರಧಾನಿ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಕುರಿತಗಾಗಿ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾವಹಿಸಿ ಮಾತನಾಡುತ್ತಿದ್ದರು. ಈ ವೇಳೆ ಪ್ರಧಾನಿಗಳ ಭಾಷಣಕ್ಕೆ ಅಡ್ಡಿ ಪಡಿಸಲು ರಾಹುಲ್ ಗಾಂಧಿ ಅವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದರು `ಗೆರಿಲ್ಲಾ ಶೈಲಿ’ಯನ್ನು ಬಳಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಮೂಲಗಳ ಪ್ರಕಾರ ಕಾಂಗ್ರೆಸ್ ಸಂಸದರಿಗೆ ಬುಧವಾರ ಮಾಧ್ಯಹ್ನ 12 ಗಂಟೆ ವೇಳೆಗೆ ಸದನದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿತ್ತು. ಈ ಗೆರಿಲ್ಲಾ ತಂತ್ರಕ್ಕೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ತಂತ್ರಕ್ಕೆ ಸ್ವಲ್ಪ ಹಿಂಜರಿದಿದ್ದರು. ಆದರೆ ರಾಹುಲ್ ಈ ಕ್ರಮಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದರು. ಇದರ ಉಸ್ತುವಾರಿಯನ್ನು ಕಾಂಗ್ರೆಸ್ ನ ಜ್ಯೋತಿ ಅದಿತ್ಯ ಸಿಂಧಿಯಾ ಅವರಿಗೆ ನೀಡಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಹೊರಡಿಸಲಾಗಿದ್ದ ಪ್ಲೇ ಕಾರ್ಡ್‍ಗಳನ್ನು ಹಿಡಿದು ಘೋಷಣೆ ಕೂಗಿದ್ದರು. ಈ ವೇಳೆ ಯುಪಿಎ ಬೆಂಬಲಿತ ಪಕ್ಷಗಳ ಸದಸ್ಯರ ಸಹಕಾರವನ್ನು ಕಾಂಗ್ರೆಸ್ ಕೇಳಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.

    ಘೋಷಣೆ ಕೂಗುವ ವೇಳೆ ಯಾವ ರೀತಿಯ ಘೋಷಣೆ ಕೂಗಬೇಕು ಎಂಬುದನ್ನು ರಾಹುಲ್ ಸೂಚಿಸಿದ್ದರು. ಈ ವೇಳೆ ವೈಯಕ್ತಿಕ ಅಂಶಗಳಿಗೆ ಅವಕಾಶವನ್ನು ನೀಡದೆ ವಿಷಯಾಧಾರಿತವಾದ ಘೋಷಣೆಗಳನ್ನು ಕೂಗಲು ತಿಳಿಸಿದ್ದರು ಎಂದು ಕಾಂಗ್ರೆಸ್ ಸಂಸದ ರಂಜಿತ್ ರಂಜನ್ ಅವರು ಹೇಳಿದ್ದಾರೆ.

    ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಂತೆ “ಬಂದ್ ಕರೋ.. ಬಂದ್ ಕರೋ, ನಾಟಕ್ ಬಂದ್ ಕರೋ” ಎಂದು ಕೂಗುವ ಮೂಲಕ ಮೋದಿ ಭಾಷಣಕ್ಕೆ ಕೈ ಸಂಸದರು ನಿರಂತರ ಅಡ್ಡಿಪಡಿಸುತ್ತಿದ್ದರು. ವಿಪಕ್ಷಗಳ ವಿರೋಧದ ನಡುವೆಯೂ ಮೋದಿ ಏರುಧ್ವನಿಯಲ್ಲಿ ಮಾತನಾಡಿ ತಮ್ಮ ಭಾಷಣವನ್ನು ಪೂರ್ಣಗೊಳಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಅಂದ್ರೆ ವಿಭಜನೆ – ಲೋಕಸಭೆಯಲ್ಲಿ ಸಿಎಂ ಸಿದ್ದು ವಿರುದ್ಧ ಮೋದಿ ವಾಗ್ದಾಳಿ

    ರೇಣುಕಾಗೆ ಟಾಂಗ್: ರಾಜ್ಯ ಸಭೆಯಲ್ಲಿ ಮೋದಿ ಭಾಷಣಕ್ಕೆ ತೀವ್ರ ರೀತಿಯಲ್ಲಿ ಅಡ್ಡಿ ಪಡಿಸಲು ನಿರ್ಧರಿಸಿದ್ದ ಕಾಂಗ್ರೆಸ್ ನಾಯಕರು ಗದ್ದಲವನ್ನು ನಿರ್ಮಿಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿಚಿತ್ರವಾಗಿ ನಗುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಮೋದಿ ಅವರು ತಮ್ಮ ಭಾಷಣದಲ್ಲಿ 1998 ರಲ್ಲಿ ಅಂದಿನ ಗೃಹಸಚಿವರಾಗಿದ್ದ ಎಲ್ ಕೆ ಅಡ್ವಾನಿ ಅವರು ಸಾರ್ವಜನಿಕ ಗುರುತಿನ ಚೀಟಿಯ (ಆಧಾರ್) ಪರಿಕಲ್ಪನೆ ನೀಡಿದ್ದರು ಎಂಬುದನ್ನು ಉಲ್ಲೇಖಿಸಿದರು. ಈ ಮಾತು ಕೇಳುತ್ತಿದಂತೆ ರೇಣಿಕಾ ಚೌಧರಿ ಅವರು ಜೋರಾಗಿ ನಗಲು ಆರಂಭಿಸಿದರು. ಇದನ್ನು ಕಂಡು ಕಸಿವಿಸಿಗೊಂಡ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಏನಾದರೂ ಸಮಸ್ಯೆ ಇದ್ದರೆ ವೈದ್ಯರ ನೆರವು ಪಡೆಯಲು ಸೂಚಿಸಿದ್ದರು. ಈ ವೇಳೆ ಸಭಾಪತಿಗಳನ್ನು ಮಧ್ಯದಲ್ಲೇ ತಡೆದ ಪ್ರಧಾನಿ ಮೋದಿ ಅವರು, ರೇಣುಕಾ ಚೌಧರಿ ಅವರಿಗೆ ಏನನ್ನೂ ಹೇಳಬೇಡಿ. ರಾಮಾಯಣ ಧಾರಾವಾಹಿ ನೋಡುತ್ತಿದ್ದ ಕಾಲದ ನಂತರ ಮೊದಲ ಬಾರಿಗೆ ಇಂಥ ನಗುವನ್ನು ನೋಡುವ ಅವಕಾಶ ಲಭಿಸಿದೆ ಎಂದು ವ್ಯಂಗ್ಯವಾಡಿದ್ದರು. ಮೋದಿ ಮಾತು ಕೇಳಿ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಕುಟ್ಟಿ ನಕ್ಕಿದ್ದರು. ಮೋದಿ ಅವರ ಈ ಮಾತು ಸದನದಲ್ಲಿದ್ದ ವಿರೋಧಿ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿತ್ತು.

    ನಂತರ ಪ್ರಧಾನಿಗಳ ಈ ಹೇಳಿಕೆ ಮಹಿಳೆಯರಿಗೆ ಮಾಡಿದ ಅವಮಾನ. ಇಂತಹ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರೇಣುಕಾ ಚೌಧರಿ ಕಿಡಿಕಾರಿದ್ದರು.    ಇದನ್ನೂ ಓದಿ : ಪ್ರಧಾನಿ ಮೋದಿ ಭಾಷಣಕ್ಕೆ ಸಚಿವೆ ಉಮಾಶ್ರೀ ಆಕ್ಷೇಪ !

    https://www.youtube.com/watch?v=97AkLw8FYpk

  • ಪ್ರಧಾನಿ ಮೋದಿ ಭಾಷಣಕ್ಕೆ ಸಚಿವೆ ಉಮಾಶ್ರೀ ಆಕ್ಷೇಪ !

    ಪ್ರಧಾನಿ ಮೋದಿ ಭಾಷಣಕ್ಕೆ ಸಚಿವೆ ಉಮಾಶ್ರೀ ಆಕ್ಷೇಪ !

    ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಪ್ರಧಾನಿ ಮೋದಿ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ವಿರೋಧ ಪಕ್ಷದವರು. ಅವರು ನಮ್ಮನ್ನು ಹೊಗಳಲಿ ಎಂದು ನಾವು ಬಯಸುವುದಿಲ್ಲ. ಆದರೆ ಶೇ.10 ಸರ್ಕಾರ ಎಂದು ಯಾವುದೇ ದಾಖಲೆಗಳು ಇಲ್ಲದ ಮಾತನಾಡಿದ್ದಾರೆ. ಇದು ಪ್ರಧಾನಿ ಆದವರಿಗೆ ಶೋಭೆಯಲ್ಲ. ನಮ್ಮ ಸರ್ಕಾರವನ್ನು ನಂಗನಾಚ್ ಸರ್ಕಾರ ಎನ್ನುವ ಮೂಲಕ ಕಳಪೆ ಪದ ಬಳಕೆ ಮಾಡಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ಹೇಳಿದ್ರು.

    ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ತೇರದಾಳ ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧೆ. ಕ್ಷೇತ್ರ ಬದಲಾವಣೆಗೆ ಕಾರಣಗಳಿಲ್ಲ ಎಂದು ಉಮಾಶ್ರೀ ಪ್ರತಿಕ್ರಿಯೆ ನೀಡಿದ್ರು.

    ನಾಟಕ ಅಕಾಡೆಮಿ ಲೋಗೋ ಬದಲಾವಣೆ ಮಾಡುವುದಿಲ್ಲ. ಪ್ರಶಸ್ತಿ ಫಲಕದಲ್ಲಿ ಮಾತ್ರ ಬದಲಾವಣೆ ಆಗಿದೆ ಎಂದು ಸಚಿವೆ ತಿಳಿಸಿದ್ರು.

  • ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ನವದೆಹಲಿ: ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾವನ್ನು ಮಾರಾಟ ಮಾಡಿ ಮೋದಿ ಹೇಳಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

    ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ನಿರುದ್ಯೋಗಿಯಾಗಿ ಇರುವುದಕ್ಕಿಂತ ಕಾರ್ಮಿಕನಾಗಿ ಅಥವಾ ಪಕೋಡಾ ವ್ಯಾಪಾರಿ ಆಗುವುದು ಉತ್ತಮ. ಪಕೋಡಾ ಮಾರಾಟ ಮಾಡಲು ಯಾವುದೇ ಮುಜುಗರ ಪಡಬೇಕಿಲ್ಲ ಎಂದರು.

    ದೇಶದ ಯುವ ಜನತೆಗೆ ಹೊಸ ಉದ್ಯೋಗ ಸೃಷ್ಟಿ ಮಾಡಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಹಿಂದಿನ ಹಲವು ಸರ್ಕಾರಗಳು ಬಡತನ ನಿರ್ಮೂಲನೆ ಎಂಬ ಘೋಷಣೆಗಳನ್ನು ಇಟ್ಟು ಅಧಿಕಾರ ವಹಿಸಿಕೊಂಡರೂ ಯಶಸ್ವಿಯಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಜಾರಿಗೆ ಬರುತ್ತಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ನಮ್ಮ ಸರ್ಕಾರ ಜಾಗೃತವಾಗಿದೆ. ಆದರೆ ಒಮ್ಮಿದೊಮ್ಮೆಗೆ ಬದಲಾವಣೆ ಮಾಡಲು ಸಾಧ್ಯವೇ? ವಿರೋಧಿಗಳ ಟೀಕೆಗಳನ್ನು ಕೇಳಲು ನಮಗೆ ಸಂತಸವಾಗುತ್ತಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.

    ಕಾಂಗ್ರೆಸ್ 60 ವಷಗಳ ಅಧಿಕಾರ ಅವಧಿಯಲ್ಲಿ ಉದ್ಯೋಗ ಸೃಷ್ಟಿಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಾವು ಈಗಾಗಲೇ ಉದ್ಯೋಗ ಸೃಷ್ಟಿಯ ಬಗ್ಗೆ ಕಾರ್ಯಪ್ರವೃತ್ತವಾಗಿದ್ದೇವೆ. ಸರ್ಕಾರದ ಸ್ಮಾರ್ಟ್ ಆಫ್ ಇಂಡಿಯಾ, ಮುದ್ರಾ ಯೋಜನಾ ಮುಂತಾದ ಯೋಜನೆಗಳು ಪ್ರಗತಿಯಲ್ಲಿದೆ ಎಂದರು.

    2014 ರಲ್ಲಿ ದೇಶದ ಜನರು ಶಕ್ತಿಶಾಲಿ ಸರ್ಕಾರಕ್ಕೆ ಮತ ಹಾಕುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿ ಅಭಿವೃದ್ಧಿ, ಶಾಂತಿಯನ್ನು ಬಯಸಿದ್ದಾರೆ. ಸರ್ಕಾರ ರಚನೆ ಮಾಡಲು ಸಂಪೂರ್ಣ ಬಹುಮತವಿದ್ದರೂ ಬಿಜೆಪಿ ಎನ್‍ಡಿಎ ಒಕ್ಕೂಟದ ಮಿತ್ರ ಪಕ್ಷಗಳ ಮೂಲಕ ಸರ್ಕಾರ ರಚನೆ ಮಾಡಿದೆ ಎಂದರು.

    ಅಮಿತ್ ಶಾ ಮೊದಲ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದ್ದು, ಟ್ವಿಟ್ಟರ್ ನಲ್ಲಿ ಭಾರತದಲ್ಲಿ #ShahSpeaksInRajyaSabha ಹ್ಯಾಶ್ ಟ್ಯಾಗ್ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿತ್ತು.

    ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಪಕೋಡಾ ಮಾರಾಟ ಮಾಡುವುದು ಒಂದು ಸ್ವಯಂ ಉದ್ಯೋಗವಾಗಿದ್ದು, ಪಕೋಡಾ ಮಾರಾಟ ಮಾಡುವ ವ್ಯಕ್ತಿ ಪ್ರತಿದಿನ ಸಂಜೆ 200 ರೂ. ಗಳಿಸುತ್ತಾರೆ ಎಂದಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಿತ್ತು.

    ಬೆಂಗಳೂರಿನ ಆರಮನೆ ಮೈಧಾನದಲ್ಲಿ ಭಾನುವಾರ ನಡೆದ ಪರಿವರ್ತನಾ ಯಾತ್ರೆ ವೇಳೆಯು ಪ್ರಧಾನಿಗಳ ವಿರುದ್ಧ ಪ್ರತಿಭಟನೆ ನಡೆಸಿತ್ತು. ವಿಶ್ವವಿದ್ಯಾಲಯ ಘಟಿಕೋತ್ಸವದ ದಿನ ವಿದ್ಯಾರ್ಥಿಗಳು ಧರಿಸುವ ಗೌನ್ ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಪಕೋಡಾ ಮಾರಾಟ ಮಾಡಿ ಪ್ರತಿಭಟನೆ ನಡೆಸಿದ್ದರು.

  • ರಮ್ಯಾ ಹೆಸರಲ್ಲೇ ರಮ್ ಇದೆ, ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ: ಶಿಲ್ಪಾ ಗಣೇಶ್

    ರಮ್ಯಾ ಹೆಸರಲ್ಲೇ ರಮ್ ಇದೆ, ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ: ಶಿಲ್ಪಾ ಗಣೇಶ್

    ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ನಟಿ ರಮ್ಯಾ ವಿರುದ್ಧ ನಟ ಗಣೇಶ್ ಪತ್ನಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಗರಂ ಆಗಿದ್ದು, “ರಮ್ಯಾ ಹೆಸರಲ್ಲೇ ರಮ್ ಇದೆ. ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ” ಎಂದು ಟ್ವೀಟ್ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾ ವಿರುದ್ಧ ಶಿಲ್ಪಾ ಗಣೇಶ್, “ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

    ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟ್ಯೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್ ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ.  ಇದನ್ನು ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ

    ಪದಪುಂಜ ಬಿಡಿಸೋದು ಬಿಟ್ಟರೆ ಪ್ರಧಾನಿ ರೈತರ ಬಗ್ಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರೆ, ಮೋದಿ ಸರ್ಕಾರ ಮಾಡಿರೋ ಸಾಲ ಮನ್ನಾ ಸೊನ್ನೆ ಎಂದು ರಮ್ಯಾ ತಿರುಗೇಟು ನೀಡಿದ್ದರು.  ಇದನ್ನು ಓದಿ: 2013ರ ಟ್ವೀಟ್ ಎತ್ತಿ ಮೋದಿ ವಿರುದ್ಧ ರಮ್ಯಾ ವಾಗ್ದಾಳಿ

    ಪ್ರಧಾನಿ ಮೋದಿ ಅವರ ಟಾಪ್ (T-O-P)  ಕುರಿತು ಟ್ವೀಟ್ ಮಾಡಿರುವ ರಮ್ಯಾ ಅವರು, ನೀವು `P-O-T’ ನಲ್ಲಿದ್ದಾಗ ಹಾಗೇ ಆಗುತ್ತದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು. ಇದನ್ನು ಓದಿ: ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

  • ಬೆಂಗ್ಳೂರಿನಲ್ಲಿ ಮತ್ತೆ ಮೋದಿಯಿಂದ `ಪ್ರಾಮೀಸ್ ಟೂತ್ ಪೇಸ್ಟ್’ ಮಾರಾಟ: ಪ್ರಕಾಶ್ ರೈ

    ಬೆಂಗ್ಳೂರಿನಲ್ಲಿ ಮತ್ತೆ ಮೋದಿಯಿಂದ `ಪ್ರಾಮೀಸ್ ಟೂತ್ ಪೇಸ್ಟ್’ ಮಾರಾಟ: ಪ್ರಕಾಶ್ ರೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‍ಡಿಎ ಸರ್ಕಾರದ ವಿರುದ್ಧ ನಟ ಪ್ರಕಾಶ್ ರೈ ಮತ್ತೊಮ್ಮೆ ಟ್ವೀಟ್ ಮಾಡಿದ್ದು, ಮೋದಿ ಅವರು ಭಾನುವಾರ ಪರಿವರ್ತನಾ ಯಾತ್ರೆಯಲ್ಲಿ ಮಾಡಿದ ಭಾಷಣವನ್ನು ಟೀಕಿಸಿ ವ್ಯಂಗ್ಯವಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು 2014 ರ ಚುನಾವಣೆಯಲ್ಲಿ ದೇಶದ ಜನರಿಗೆ `ಪ್ರಾಮಿಸ್ ಟೂತ್‍ಪೇಸ್ಟ್’ ಮಾರಾಟ ಮಾಡಿದ್ದರು, ಆದರೆ ಅದು ಹಲ್ಲು ಉಜ್ಜಲು ಮರೆತು ಹೋಗಿದೆ. ಅಲ್ಲದೇ ರೈತರ ಹಾಗೂ ನಿರುದ್ಯೋಗಿ ಯುವ ಜನರ ಮುಖದಲ್ಲಿ ನಗು ತರಲು ವಿಫಲವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಜನರಿಗೆ ಮತ್ತೆ ಆಶ್ವಾಸನೆಗಳನ್ನು ನೀಡುವ ಮೂಲಕ ಮತ್ತೆ ಪ್ರಾಮಿಸ್ ಟೂತ್‍ಪೇಸ್ಟ್ ಮಾರಾಟ ಮಾಡುತ್ತಿದ್ದಾರೆ. ಇದು ಜನರ ಮುಖದಲ್ಲಿ ನಗು ಮೂಡಿಸುತ್ತದಾ ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಮೋದಿ ರ‍್ಯಾಲಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಲಾಭ

    ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತಿದ್ದರೆ, ಕರ್ನಾಟಕ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ರಾಜ್ಯದಲ್ಲಿ ರಾಜಕೀಯ ಕೊಲೆಗಳ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ ಬಿಜೆಪಿಗೆ ಮತ ಹಾಕುವ ಮೂಲಕ ಬಿಎಸ್ ಯಡಿಯೂರಪ್ಪ ಮುಂದಾಳತ್ವದಲ್ಲಿ ರಾಜ್ಯವನ್ನು ಅಭಿವೃದ್ಧಿಯ ಪರ ಸಾಗಬೇಕಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

    ಈ ಹಿಂದೆಯೂ ನಟ ಪ್ರಕಾಶ್ ರೈ ತಾನು ಮೋದಿ, ಅಮೀತ್ ಶಾ ಮತ್ತು ಅನಂತ್‍ಕುಮಾರ್ ಹೆಗ್ಡೆ ವಿರೋಧಿ. ನನ್ನ ಪ್ರಕಾರ ಇವರು ಹಿಂದೂಗಳಲ್ಲ ಎಂದು ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ