Tag: prime minister modi

  • ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡಲು ಚಿಂತನೆ: ರಾಹುಲ್ ಗಾಂಧಿ

    ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡಲು ಚಿಂತನೆ: ರಾಹುಲ್ ಗಾಂಧಿ

    ಬೆಂಗಳೂರು: ಸಿಲಿಕಾನ್ ಸಿಟಿಯನ್ನು ದೇಶದ ಎರಡನೇ ರಾಜಧಾನಿಯಾಗಿ ಮಾಡುವ ಕುರಿತು ಚರ್ಚೆ ನಡೆಸಿ, ಬಳಿಕ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಚಿಂತನೆ ನಡೆಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಜ್ಯದ ಉದ್ಯಮಿಯೊಬ್ಬರು ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಕರ್ನಾಟಕ ರಾಜ್ಯದ ಬಜೆಟ್‍ನಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲು ಅವಕಾಶ ಇದೆ. ಆದರೆ ಈ ಕುರಿತು ಚರ್ಚೆ ನಡೆಸಿ ಸಾಧ್ಯವಾದರೆ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ತಿಳಿಸಿದರು.

    ಈ ವೇಳೆ ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರದ ಬುಲೆಟ್ ರೈಲು ಯೋಜನೆ ವಿಫಲವಾಗಿದೆ. ಈ ಯೋಜನೆಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಆದರೆ ಹಣವನ್ನು ರೈಲ್ವೇ ಇಲಾಖೆ ಸುಧಾರಣೆಗೆ ಬಳಸಬಹುದಿತ್ತು. ಯಾವುದೇ ಯೋಜನೆಗಳನ್ನು ರೂಪಿಸುವಾಗ ಇಂಥ ಲೋಪಗಳಾಗಬಾರದು. ಆದರೆ ನಾನು ಕೇಂದ್ರದ ಬುಲೆಟ್ ರೈಲು ಯೋಜನೆ ವಿರುದ್ಧ ಇಲ್ಲ. ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ಬುಲೆಟ್ ರೈಲು ಯೋಜನೆ ಜಾರಿಗೊಳಿಸಬೇಕಿತ್ತು. ಆದರೆ ಈ ಯೋಜನೆ ಕ್ರಮಬದ್ಧವಾಗಿಲ್ಲ. ಸದ್ಯ ಬುಲೆಟ್ ರೈಲು ಒಂದು ಶೋ ಪೀಸ್ ಥರ ಆಗಿದೆ ಎಂದರು.

    ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರಗಳ ಆದ್ಯತೆ ಆಗಬೇಕಿದೆ. ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯೂ ಮುಖ್ಯವಾಗುತ್ತದೆ. ಚೀನಾ ಜಗತ್ತಿನಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮುಂದೆ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಸೃಷ್ಟಿಗೆ ಒತ್ತು ಕೊಟ್ಟಿದೆ ಎಂದರು.

    ಇದೇ ವೇಳೆ ಪೆಟ್ರೋಲ್, ಡೀಸೆಲ್ ಮೇಲೆ ಜಿಎಸ್‍ಟಿ ತೆರಿಗೆ ಕುರಿತ ಪ್ರಶ್ನೆಗೆ ಉತ್ತರಿಸಿ ಜಿಎಸ್‍ಟಿ `ಒಂದು ಗಬ್ಬರ್ ಸಿಂಗ್ ತೆರಿಗೆ’ ಎಂದು ಮತ್ತೊಮ್ಮೆ ಹೇಳಿದರು. ತಾವು ಅಧಿಕಾರಕ್ಕೆ ಬಂದರೆ ಜಿಎಸ್‍ಟಿ ತೆರಿಗೆ ವಿಧಾನವನ್ನು ಸರಳೀಕರಣಗೊಳಿಸುತ್ತೇವೆ. ಸದ್ಯ ಜಗತ್ತಿನ ಸಂಕೀರ್ಣ ತೆರಿಗೆಗಳಲ್ಲಿ ಜಿಎಸ್‍ಟಿ ಒಂದಾಗಿದೆ. ಜಿಎಎಸ್‍ಟಿಯಲ್ಲಿ ಐದು ಹಂತಗಳ ತೆರಿಗೆ ಇದೆ. ಇಂಥ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿದೆ. ನಾವು ಒಂದೇ ಹಂತದ ತೆರಿಗೆ ಒಳಗೊಂಡ ಜಿಎಎಸ್‍ಟಿ ಸೇವೆ ಜಾರಿಗೆ ಮಾಡುತ್ತೇವೆ. ಇದರಲ್ಲಿ ಪೆಟ್ರೋಲ್, ಡೀಸೆಲ್ ಸಹ ಸೇರಿರುತ್ತದೆ ಎಂದು ವಿವರಿಸಿದರು.

    ಇದೇ ವೇಳೆ ನನ್ನನ್ನು ಸರ್ ಎಂದು ಕರೆಯಬೇಡಿ ಎಂದು ಮನವಿ ಮಾಡಿ ರಾಹುಲ್ ಎಂದಷ್ಟೇ ಕರೆಯಿರಿ ಎಂದು ಉದ್ಯಮಿಗಳಿಗೆ ಮನವಿ ಮಾಡಿದರು. ಅಲ್ಲದೇ ಸಂವಾದ ಆರಂಭವಾಗುವ ಮುನ್ನವೇ ತಾನು ರಾಷ್ಟ್ರದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ:  ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ಉದ್ಯಮಿಗಳ ಸಂವಾದದಲ್ಲಿ ರೈತರ ಬಗ್ಗೆ ಪ್ರಶ್ನಿಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಪರ ವ್ಯವಸ್ಥೆ ಜಾರಿಗೆ ಆಗ್ರಹ ಮಾಡಿದರು. ಈ ಕುರಿತು ಉತ್ತರಿಸಿದ ರಾಹುಲ್ ಕೃಷಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಗೆ ತರಬೇಕಿದೆ. ಈ ಕುರಿತು ಇನ್ನಷ್ಟು ಸುಧಾರಣೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ತರುತ್ತಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗಳ ವ್ಯವಸ್ಥೆ ಮೂಲಸೌಕರ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದನ್ನೂ ಓದಿ : ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

    ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್, ಸಂಸದ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಹಾಜರಿದ್ದರು.

     

  • ಮೋದಿ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ: ಜಿಗ್ನೇಶ್ ಮೇವಾನಿ

    ಮೋದಿ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ: ಜಿಗ್ನೇಶ್ ಮೇವಾನಿ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ ಎಂದು ಗುಜರಾತ್ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಏರ್ಪಡಿಸಿದ್ದ ಸಂವಿಧಾನ ಉಳಿವಿಗಾಗಿ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 2 ಕೋಟಿ ಉದ್ಯೋಗ ಸೃಷ್ಟಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿ ಎಂದು ಕರೆ ನೀಡಿದ್ದಾರೆ. ಈ ವೇಳೆ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ ಎಂದು ಹೇಳಿದರು.

    ಇದೇ ವೇಳೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಖೇದಕರ ಎಂದು ಹೇಳಿದ ಅವರು, ಅಟ್ರಾಸಿಟಿ ಅನ್ನು ನಾಶಮಾಡುವ ಹುನ್ನಾರ ನಡೆಯುತ್ತಿದೆ. ತೀರ್ಪಿನ ಹಿಂದೆ ಕಾಣದ ಶಕ್ತಿಗಳ ಕೈವಾಡ ಇರಬಹುದು ಎಂದು ಆರೋಪಿಸಿದರು.

    ಗುಜರಾತನ್ನು ಮಾದರಿ ರಾಜ್ಯ ಎಂದು ಹೇಳುತ್ತಾರೆ. ಆದರೆ ಅಲ್ಲಿನ ದಲಿತರ, ಆದಿವಾಸಿಗಳ, ಕಾರ್ಮಿಕರ, ರೈತರ ಪರಿಸ್ಥಿತಿ ಕಷ್ಟಕಾರವಾಗಿದೆ. ಸುಪ್ರೀಂಕೋರ್ಟ್ ಬಗ್ಗೆ ಬಿಜೆಪಿ ನಾಯಕರು ಒಂದೇ ಒಂದು ಹೇಳಿಕೆ ನೀಡಿಲ್ಲ. ನ್ಯಾಯಮೂರ್ತಿ ಲೋಯಾ ಅವರ ಹತ್ಯೆಯ ಬಗ್ಗೆ ಯಾರೂ ಮಾತಾಡಿಲ್ಲ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಫ್ಯಾಸಿಸ್ಟ್ ಶಕ್ತಿ ಬಿಜೆಪಿಯನ್ನ ಸೋಲಿಸ ಬೇಕಿದೆ. ಅಲ್ಲದೇ ದೇಶದಲ್ಲಿ ಇವಿಎಂ ಗೊಂದಲವಿದೆ. ನನ್ನ ಆಯ್ಕೆ ಬ್ಯಾಲೆಟ್ ಪೇಪರ್ ಎಂದು ಹೇಳಿದರು.

    ತಮ್ಮ ಭಾಷಣದ ಉದಕ್ಕೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೇವಾನಿ, ಈ ದೇಶದ ಯುವಕರನ್ನ ಮೋದಿ ಸರ್ಕಾರ ನಿರುದ್ಯೋಗಿಗಳನ್ನಾಗಿ ಮಾಡಿದೆ. ಕರ್ನಾಟಕದ ಯುವಕರಿಗೆ ಕಿವಿಮಾತು ಹೇಳುತ್ತೇನೆ. ಮೋದಿಯವರು ಚುನಾವಣೆಗೆ ಬಂದಾಗ ಕೇಳಬೇಕು ನಿಮ್ಮ ಎರಡು ಕೋಟಿ ಉದ್ಯೋಗ ಎಲ್ಲಿದೆ. ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೇ ಇದ್ದರೆ ಹಿಮಾಲಯದ ರಾಮಮಂದಿರದಲ್ಲಿ ಗಂಟೆ ಬಾರಿಸಲು ಹೋಗಲು ಹೇಳಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸ ಬೇಕಿದ ಎಂದು ಕರೆ ನೀಡಿದರು.

  • ಪ್ರಧಾನಿ ಮೋದಿಯವರಿಗೆ ರಕ್ತದಲ್ಲೇ 6 ಪುಟ ಪತ್ರ ಬರೆದ ಯುವಕ!

    ಪ್ರಧಾನಿ ಮೋದಿಯವರಿಗೆ ರಕ್ತದಲ್ಲೇ 6 ಪುಟ ಪತ್ರ ಬರೆದ ಯುವಕ!

    ವಿಜಯಪುರ: ತಮ್ಮ ಪಟ್ಟಣಕ್ಕೆ ಸರ್ಕಾರಿ ಪ್ರೌಢಶಾಲೆ ಬೇಕು ಎಂದು ತನ್ನದೇ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಕನೊಬ್ಬ ಪತ್ರ ಬರೆದಿದ್ದಾನೆ.

    ವಿಜಯರಂಜನ ಜೋಶಿ ತನ್ನ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಯುವಕ. ಈತ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ನಿವಾಸಿಯಾಗಿದ್ದು, 10-15 ಸಾವಿರ ಜನಸಂಖ್ಯೆ ಇರುವ ನಾಲತವಾಡ ಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆ, ಕಾಲೇಜುಗಳು ಯಾವುದೂ ಇಲ್ಲ. ಆದ್ದರಿಂದ ಶಾಲೆ ನಿರ್ಮಿಸಬೇಕೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾನೆ.

    ಜೋಶಿ ನಾಲತವಾಡದಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು ನಿರ್ಮಿಸುವಂತೆ ಶಿಕ್ಷಣ ಇಲಾಖೆಗೆ, ಶಿಕ್ಷಣ ಸಚಿವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈಗ ರಾಜ್ಯ ಸರ್ಕಾರ ಸತ್ತು ಶವವಾಗಿದೆ ಎಂದು ಪ್ರಧಾನಿಗೆ ಪತ್ರ ಬರೆಯುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.

    ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ವರ್ಷಗಳಿಂದ ಸರ್ಕಾರಿ ಶಾಲಾ-ಕಾಲೇಜುಗಳ ಸಂಖ್ಯೆ ಕಡಿಮೆ ಇವೆ. ಹತ್ತಾರು ಹಳ್ಳಿಗಳಿಂದ ದೂರ ಹೋಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತರ ಕರ್ನಾಕಟಲ್ಲಿ ಬರಗಾಲ, ಬಡತನ ಇರುವುದರಿಂದ ಖಾಸಗಿ ಶಾಲೆಯಲ್ಲಿ ಕಲಿಸುವಷ್ಟು ಶ್ರೀಮಂತರಲ್ಲ ಇಲ್ಲಿನ ಜನರು. ಸರ್ಕಾರಿ ಶಾಲೆ ಇಲ್ಲದೆ, ಶಿಕ್ಷಣ ಸಿಗದ ಕಾರಣ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದೆ. ಇದರಿಂದ ನನಗೆ ತುಂಬ ನೋವಾಗಿದೆ, ನೀವಾದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತೀರಿ ಎಂಬ ನಂಬಿಕೆ ಮೇಲೆ ಪತ್ರ ಬರೆದಿದ್ದೇನೆ ಎಂದು ಯುವಕ ಪತ್ರದಲ್ಲಿ ತಿಳಿಸಿದ್ದಾನೆ.

  • ಸಿದ್ದರಾಮಯ್ಯ ಉಚಿತ ಅಕ್ಕಿ ನೀಡಿದ್ರು, ಬಿಎಸ್‍ವೈ ಏನು ಮಾಡಿದ್ದಾರೆ : ರಾಹುಲ್ ಗಾಂಧಿ

    ಸಿದ್ದರಾಮಯ್ಯ ಉಚಿತ ಅಕ್ಕಿ ನೀಡಿದ್ರು, ಬಿಎಸ್‍ವೈ ಏನು ಮಾಡಿದ್ದಾರೆ : ರಾಹುಲ್ ಗಾಂಧಿ

    ತುಮಕೂರು: ರಾಜ್ಯದ ಜನರ ಹಸಿವನ್ನು ನೀಗಿಸಲು ಸಿದ್ದರಾಮಯ್ಯ ಅವರು ಉಚಿತ ಅಕ್ಕಿ ನೀಡಿದ್ದಾರೆ. ಆದರೆ ಬಿಎಸ್‍ವೈ ಅಧಿಕಾರ ಅವಧಿಯಲ್ಲಿದ್ದಾಗ ಏನು ಮಾಡಿದ್ದರು ಎಂದು ಪ್ರಶ್ನಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ನಗರದ ಟೌನ್ ಹಾಲ್‍ನಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿಯವರಿಂದ ಯಾರ ಖಾತೆಗಾದರೂ 15 ಲಕ್ಷ ರೂ. ಪಾವತಿ ಆಗಿದ್ಯಾ ಎಂದು ಕರ್ನಾಟಕದ ಯುವಕರು ಉತ್ತರಿಸಬೇಕು ಎಂದರು. ಅಷ್ಟೇ ಅಲ್ಲದೇ ಹಣಕಾಸು ಸಚಿವ ಅರುಣ್ ಜೇಟ್ಲಿ ನೀರವ್ ಮೋದಿಯ ವಕೀಲರು ಎಂದು ಹೇಳಿ ವಾಗ್ದಾಳಿ ನಡೆಸಿದರು.

    ಇದಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟ ರಾಹುಲ್ ಗಾಂಧಿ ಶ್ರೀ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ರಾಹುಲ್ ಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದರು. ಈ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಠಕ್ಕೆ ಭೇಟಿ ನೀಡಿದ್ದ ಸಮಯದ ಫೋಟೋಗಳನ್ನು ಕಿರಿಯ ಶ್ರೀಗಳು ರಾಹುಲ್ ಅವರಿಗೆ ತೋರಿಸಿದರು. ಶ್ರೀಗಳ ಜೊತೆ ಸುಮಾರು 15 ನಿಮಿಷ ಕಾಲ ಕಳೆದ ರಾಹುಲ್ ಮಠದಲ್ಲಿ ತಯಾರಿಸಿದ ಚಪಾತಿ ಸಾಗು, ಅನ್ನ ಸಾಂಬಾರ್, ಪಾಯಸ ಹಾಗೂ ಪರಂಗಿ ಹಣ್ಣು ಸೇವಿಸಿದರು.

    ರಾಹುಲ್ ಬಳಿಕ ಕುಣಿಗಲ್ ಪಟ್ಟಣದಲ್ಲಿ ಮಾತನಾಡಿ ಜೆಡಿಎಸ್ ಬಿಜೆಪಿ `ಬಿ’ ಟೀಮ್ ಎಂದು ಪುನರುಚ್ಚರಿಸಿದರು. ನುಡಿದಂತೆ ನಡೆ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ ಮೋದಿ ನುಡಿದಂತೆ ನಡೆಯುತ್ತಿಲ್ಲ ಎಂದು ಕನ್ನಡದಲ್ಲೇ ಭಾಷಣ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ನಾವು ಕರ್ನಾಟಕದಲ್ಲಿ ಗೆಲ್ಲುತ್ತೇವೆ. ಇದು ನಿಮ್ಮ ಸರ್ಕಾರ. ಯುವಕರಿಗಾಗಿ, ಮಹಿಳೆಯರಿಗಾಗಿ ಹಾಗೂ ರೈತರಿಗಾಗಿ ಕಾರ್ಯಮಾಡುತ್ತೇವೆ ಎಂದರು. ಈ ಮಧ್ಯೆ ಹೆಬ್ಬೂರಿನಲ್ಲಿ ಅಭಿಮಾನಿಗಳು ಇಂದಿರಾಗಾಂಧಿ ಫೋಟೋ ಕೊಟ್ಟು ಅಭಿಮಾನ ಮೆರೆದರು.

  • 111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

    111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

    ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ(ಅನ್ನ, ಅಕ್ಷರ, ಜ್ಞಾನ)ದಾಸೋಹಿ, ಕಲಿಯುಗದ ಚೈತನ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು 111ನೇ ವರ್ಷಕ್ಕೆ ಕಾಲಿಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕನ್ನಡದಲ್ಲೇ ಶುಭಕೋರಿದ್ದಾರೆ.

    `ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸುದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ತಮ್ಮ ಸಾನ್ನಿಧ್ಯದಿಂದ ಭಕ್ತರನ್ನು ಅನುಗ್ರಹಿಸುತ್ತಾ, ಸಮಾಜಕ್ಕೆ ಅವರ ಮಾರ್ಗದರ್ಶನ ನಿರಂತರವಾಗಿರಲಿ ಅಂತ ಪ್ರಧಾನಿಯವರು ಶುಭಾಶಯ ತಿಳಿಸಿದ್ದಾರೆ.

    ತುಮಕೂರಿನ ಶ್ರೀ ಸಿದ್ದಗಂಗಾ ಮಠ ಭಾರತ ದೇಶದ ಹಿರಿಮೆಯಾಗಿದೆ. ಸಮಾಜಕ್ಕೆ ಶಕ್ತಿ ತುಂಬುತ್ತಾ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠ ಮುಂಚೂಣಿಯಲ್ಲಿದೆ. ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿರುವುದು ನನ್ನ ಸೌಭಾಗ್ಯ ಎಂದು ನಾನು ಭಾವಿಸಿದ್ದೇನೆ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದಂದು ಇಡೀ ದೇಶವೇ ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದೆ. ದೇಶದ ಅತ್ಯಂತ ವಂದನೀಯ ಮತ್ತು ಪೂಜನೀಯ ಗುರುಗಳಲ್ಲಿ ಪೂಜ್ಯ ಶ್ರೀಗಳು ಒಬ್ಬರಾಗಿದ್ದಾರೆ. ಅವರ ಅತ್ಯುತ್ತಮ ಸೇವಾಕಾರ್ಯಗಳು ತಲೆಮಾರುಗಳನ್ನು ತಲುಪಿದೆ ” ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೂಡ ಸ್ವಾಮೀಜಿಯವರಿಗೆ ವಿಶ್ ಮಾಡಿದ್ದು, `ನಡೆದಾಡುವ ದೇವರು, ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳಿಗೆ 111ನೇ ಜನ್ಮದಿನದಂದು ನಾಡಿನ ಜನತೆಯ ಪರವಾಗಿ ಪ್ರಣಾಮಗಳು. ಅವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯ, ಶ್ರೀಗಳಿಗೆ ದೀರ್ಘಾಯುಷ್ಯ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

     

  • ಮೋದಿ ಆ್ಯಪ್ ನಿಂದ ಅಮೆರಿಕ ಕಂಪನಿಗಳಿಗೆ ಮಾಹಿತಿ ಸೋರಿಕೆ: ರಾಹುಲ್ ಗಾಂಧಿ

    ಮೋದಿ ಆ್ಯಪ್ ನಿಂದ ಅಮೆರಿಕ ಕಂಪನಿಗಳಿಗೆ ಮಾಹಿತಿ ಸೋರಿಕೆ: ರಾಹುಲ್ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆ್ಯಪ್ ನಿಂದ ಮಾಹಿತಿ ಸೋರಿಕೆ ಆಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಮಾಹಿತಿ ಸೋರಿಕೆ ಕುರಿತು ಕೇಂಬ್ರಿಡ್ಜ್ ಅನಾಲಿಟಿಕಾ ವಿಶ್ಲೇಷಣಾ ವರದಿಯನ್ನು ಆಧಾರಿಸಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವಿಟ್ ನಲ್ಲಿ ಮೋದಿ ಆ್ಯಪ್ ಮೂಲಕ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಅಮೆರಿಕನ್ ಕಂಪೆನಿಗಳಿಗೆ ನೀಡಲಾಗಿದೆ ಎಂದು ದೂರಿದ್ದಾರೆ.

    ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ನನ್ನ ಹೆಸರು ನರೇಂದ್ರ ಮೋದಿ, ನಾನು ಭಾರತದ ಪ್ರಧಾನ ಮಂತ್ರಿಯಾಗಿದ್ದೇನೆ. ಈಗ ನೀವು ನನ್ನ ಅಧಿಕೃತ ಆ್ಯಪ್ ಗೆ ಸೈನ್ ಅಪ್ ಆದರೆ ನಿಮ್ಮೆಲ್ಲಾ ಮಾಹಿತಿಯನ್ನು ನಾನು ನನ್ನ ಮಿತ್ರನ ಅಗಿರುವ ಅಮೆರಿಕ ಕಂಪೆನಿಗೆ ನೀಡುತ್ತೇನೆ” ಎಂದು ಬರೆದು ಕೊಂಡಿದ್ದಾರೆ.

    ತಮ್ಮ ಟ್ವೀಟ್‍ನಲ್ಲಿ ಪ್ರಮುಖ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಹುಲ್, ಇಂತಹ ಮುಖ್ಯ ಸುದ್ದಿಗಳನ್ನು ಸುಡುತ್ತಿರುವ ನಿಮಗೆ ಧನ್ಯವಾದ ಎಂದು ತಿಳಿಸಿದ್ದಾರೆ.

    ರಾಹುಲ್ ತಮ್ಮ ಟ್ವೀಟ್ ನೊಂದಿಗೆ ಮಾಧ್ಯಮವೊಂದರ ವರದಿಯನ್ನು ಲಿಂಕ್ ಮಾಡಿದ್ದಾರೆ. ಈ ವರದಿಯಲ್ಲಿ ಮೋದಿ ಆ್ಯಪ್ ಬಳಕೆ ಮಾಡುವ ಎಲ್ಲರ ಹೆಸರು, ಫೋಟೋ, ಇ-ಮೇಲ್‍ಗಳ ಮಾಹಿತಿ ಮೂರನೇ ವ್ಯಕ್ತಿಗೆ ನೀಡಲಾಗುತ್ತದೆ ಎಂದು ಆರೋಪಿಸಲಾಗಿದೆ.

    ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೇಂಬ್ರಿಡ್ಜ್ ವಿಶ್ಲೇಷಣಾ ವರದಿ ಕುರಿತು ಆರೋಪ ಹಾಗೂ ಪ್ರತ್ಯಾರೋಪಗಳು ನಡೆಯುತ್ತಿದ್ದು, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂಬ್ರಿಡ್ಜ್ ವಿಶ್ಲೇಷಣಾ ವರದಿ ಸಹಾಯ ಪಡೆದಿತ್ತು ಎಂದು ಬಿಜೆಪಿ ಆರೋಪಿಸಿದೆ.

    ರಾಹುಲ್ ಗಾಂಧಿ ಶನಿವಾರ ಟ್ವಿಟ್ಟರ್ ನಲ್ಲಿ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರ ವಿರುದ್ಧ ಟ್ವೀಟ್ ವಾರ್ ನಡೆಸಿದ್ದರು. ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣ ಕುರಿತು ಪ್ರಸ್ತಾಪಿಸಿದ್ದ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚು ಬಾಕಿ ಉಳಿಯಲು ನ್ಯಾಯಾಧೀಶರ ಕೊರತೆ ಕಾರಣ ಎಂದು ತಿಳಿಸಿದ್ದರು.

    ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರವಿ ಶಂಕರ್ ಪ್ರಸಾದ್ ಅವರು ದೇಶದ ನ್ಯಾಯಾಂಗ ವ್ಯವಸ್ಥೆ ಈ ಸ್ಥಿತಿಯನ್ನು ಎದುರಿಸಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ತಿರುಗೇಟು ನೀಡಿದ್ದರು.

  • ಅಮಿತ್ ಷಾ, ಮೋದಿ ನೂರು ಬಾರಿ ಬರಲಿ, ಮುಂದಿನ ಬಾರಿ ಅಧಿಕಾರಕ್ಕೆ ಬರೋರು ನಾವೇ: ಸಿಎಂ

    ಅಮಿತ್ ಷಾ, ಮೋದಿ ನೂರು ಬಾರಿ ಬರಲಿ, ಮುಂದಿನ ಬಾರಿ ಅಧಿಕಾರಕ್ಕೆ ಬರೋರು ನಾವೇ: ಸಿಎಂ

    ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೂರು ಬಾರಿ ಬರಲಿ ಅಥವಾ ಪ್ರಧಾನಿ ಮೋದಿ ನೂರು ಬಾರಿ ಬರಲಿ, ಮುಂದಿನ ಬಾರಿ ಅಧಿಕಾರಕ್ಕೆ ಬರೋರು ನಾವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಮಾತನಾನಾಡಿದ ಅವರು, ಮಾಜಿ ಸಚಿವ ಎಂ.ಸಿ.ನಾಣಯ್ಯ ಇಂದು ಕಾಂಗ್ರೆಸ್ ಸೇರಲಿದ್ದಾರೆ. ಇದರಿಂದ ನಮ್ಮ ಪಕ್ಷದ ಬಲ ಇನ್ನಷ್ಟು ಹೆಚ್ಚಲಿದೆ. ಶನಿವಾರ ಚಾಮರಾಜನಗರದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪಕ್ಷ ಸೇರಿದ್ದಾರೆ ಎಂದು ಹೇಳಿದ್ರು.

    ಕರಾವಳಿಯನ್ನು ಕೋಮುವಾದದ ಕೇಂದ್ರ ಮಾಡಲು ಹೊರಟಿದ್ದರು. ಅಲ್ಲಿಯೂ ನಮ್ಮ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿದೆ. ಕಳಂಕಿತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ರೆ ಜನಕ್ಕೆ ಅರ್ಥ ಆಗಲ್ವ ಅಂತ ಪ್ರಶ್ನಿಸಿದ್ದಾರೆ.

    ಅಥಣಿಯಿಂದ ಹಿಡಿದು ಚಾಮರಾಜನಗರ, ಮಂಡ್ಯವರೆಗೆ ಎಲ್ಲ ಕಡೆಯೂ ನಮಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನ ನಮ್ಮ ಪರವಾಗಿದ್ದಾರೆ ಅನ್ನೋದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ. ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಜನ ನಮ್ಮ ಪರವಾಗಿದ್ದಾರೆ ಎಂದೇ ವರದಿಗಳು ಹೇಳುತ್ತಿವೆ. ಗುಪ್ತಚರ ಮಾಹಿತಿಯೂ ಅದನ್ನೇ ಹೇಳಿದೆ. ಇದರಲ್ಲಿ ವಿಶೇಷ ಏನಿದೆ ಜನ ಕೆಲಸ ಮಾಡುವವರಿಗೆ ಬೆಂಬಲ ನೀಡುತ್ತಾರೆ ಅಂತ ಅವರು ವಿಶ್ವಾಸ ವ್ಯಕ್ತಪಡಿಸಿದ್ರು.

    ಶಾಸಕರಿಗೆ ಸಿಎಂ ಸಂತಾಪ: ಬೇಲೂರು ಶಾಸಕ ರುದ್ರೇಶ್ ಗೌಡ ಸಜ್ಜನ ರಾಜಕಾರಣಿ. ಯಾವತ್ತೂ ಜೋರಾಗಿ ಮಾತನಾಡಿದವರಲ್ಲ. ಆದ್ರೆ ಜನರ ಕೆಲಸಕ್ಕಾಗಿ ಸದಾ ಹಂಬಲಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ರಾಜ್ಯಸಭಾ ಚುನಾವಣಾ ವೇಳೆ ಅನಾರೋಗ್ಯ ಉಂಟಾದಾಗ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅವರು ಕೋಮದಲ್ಲಿದ್ದ ಕಾರಣ ಮಾತನಾಡಿಸಲು ಸಾಧ್ಯವಾಗಲಿಲ್ಲ. ಅವರ ಅಗಲಿಕೆ ಪಕ್ಷಕ್ಕೆ ನಷ್ಟವಾಗಿದೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇದೇ ವೇಳೆ ಶಾಸಕರಿಗೆ ಸಂತಾಪ ಸೂಚಿಸಿದ್ರು.

  • ನಿನ್ನೆ ಪ್ರಧಾನಿ ಮೋದಿ, ಇಂದು ಸಿಎಂ ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ರಿಲೀಸ್

    ನಿನ್ನೆ ಪ್ರಧಾನಿ ಮೋದಿ, ಇಂದು ಸಿಎಂ ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ರಿಲೀಸ್

    ಮಂಡ್ಯ: ಮಾಜಿ ಸಂಸದೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡಿದ್ದರ ಬಗ್ಗೆ ಮಂಡ್ಯ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಮ್ಯಾ ಮಾರ್ಕ್ಸ್ ಕಾರ್ಡ್ ಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ.

    ಕಳೆದ ದಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಒಂದು ರಿಪೋರ್ಟ್ ಕಾರ್ಡ್ ಕೊಟ್ಟಿತ್ತು. ಅದನ್ನು ಮಾಜಿ ಸಂಸದೆ ರಮ್ಯಾ ಶಾಲೆಯಲ್ಲಿ ಸಿಗೋ ಮಾರ್ಕ್ಸ್ ಕಾರ್ಡ್ ನಂತೆ ಮಾಡಿ ಅದರಲ್ಲಿ ವಿಷಯ, ರಿಮಾರ್ಕ್ ಮತ್ತು ದರ್ಜೆ ಅಂತ ರಿಪೋರ್ಟ್ ಕಾರ್ಡ್ ನಲ್ಲಿ ನಮೂದಿಸಿದ್ದರು. ಇದೀಗ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮಾರ್ಕ್ಸ್  ಕಾರ್ಡ್ ತಯಾರಿಸಿದ್ದು, ಬ್ಯಾನರ್ ಹಾಕಿದ್ದಾರೆ. ಇದನ್ನು ಓದಿ: ಕಾಣೆಯಾಗಿದ್ದ ಮೋದಿ ಮಾರ್ಕ್ಸ್ ಕಾರ್ಡ್ ರಮ್ಯಾಗೆ ಸಿಕ್ತಂತೆ!

    ವಿದ್ಯಾರ್ಥಿ ಹೆಸರು – ಸಿದ್ದರಾಮಯ್ಯ
    ಟರ್ಮ್ – 2013 ರಿಂದ
    ರೋಲ್ ನಂಬರ್ – 419
    ಬ್ಲಡ್ ಗ್ರೂಪ್ – ಖಾನ್ ಗ್ರೇಸ್

    ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ – ಡಿ ಗ್ರೇಡ್
    ರಕ್ಷಣಾ ಪರೀಕ್ಷೆಯಲ್ಲಿ – ಸಿ ಗ್ರೇಡ್
    ಆರೋಗ್ಯ ಪರೀಕ್ಷೆಯಲ್ಲಿ – ಸಿ ಗ್ರೇಡ್
    ಆರ್ಥಿಕ ಪರೀಕ್ಷೆಯಲ್ಲಿ – ಎಫ್ ಗ್ರೇಡ್

    ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ – ಸಿ ಗ್ರೇಡ್
    ಸ್ಟೋರಿ ಟೆಲ್ಲಿಂಗ್‍ನಲ್ಲಿ – ಎ + +
    ಫೈನಲ್ ಗ್ರೇಡ್ – ಡಿ

    ಈ ರೀತಿ ಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ಅನ್ನು ಬಿಜೆಪಿ ಮುಖಂಡರಾದ ಮಂಜುನಾಥ್, ಶಿವಕುಮಾರ್ ಆರಾಧ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಾಕ್ಸ್ ಕಾರ್ಡ್ ಬ್ಯಾನರ್ ಮಾಡಿಸಿ ಮಂಡ್ಯದಲ್ಲಿ ಹಾಕಿದ್ದಾರೆ. ರಮ್ಯಾ ಅವರೇ ಮೋದಿ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಮುಖ್ಯಮಂತ್ರಿ ಆಡಳಿತ ನೋಡಿಕೊಳ್ಳಿ. ಮಂಡ್ಯಕ್ಕೆ ಬಾರದ ನಿಮಗೆ ಪ್ರಧಾನಿ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಹಂದಿಯ ಮುಖದಂತೆ ಮೋದಿ ಚಿತ್ರಣ – ವಾಟ್ಸಪ್ ಗ್ರೂಪ್ ವಿರುದ್ಧ ದೂರು ದಾಖಲು

    ಹಂದಿಯ ಮುಖದಂತೆ ಮೋದಿ ಚಿತ್ರಣ – ವಾಟ್ಸಪ್ ಗ್ರೂಪ್ ವಿರುದ್ಧ ದೂರು ದಾಖಲು

    ಮಂಗಳೂರು: ಪ್ರಧಾನಿ ಮೋದಿ ಭಾವಚಿತ್ರವನ್ನು ವಿರೂಪಗೊಳಿಸಿ ವಾಟ್ಸಪ್ ಗ್ರೂಪ್ ಗೆ ಹಾಕಿದ್ದು, ಈಗ ವಾಟ್ಸಪ್ ಗ್ರೂಪ್ ವಿರುದ್ಧ ದೂರು ದಾಖಲಾಗಿದೆ.

    ಫ್ರೆಂಡ್ಸ್ ಪಡುಬೆಟ್ಟು ಎಂಬ ಗ್ರೂಪ್ ನಲ್ಲಿ ಪ್ರಧಾನಿ ಮೋದಿ ಅವರ ಮುಖವನ್ನು ಹಂದಿಯ ಮುಖದಂತೆ ಚಿತ್ರಿಸಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೂಪ್ ಅಡ್ಮಿನ್ ಹಾಗೂ ಓರ್ವ ಸದಸ್ಯನ ವಿರುದ್ಧ ದೂರು ದಾಖಲಾಗಿದೆ.

    ನೆಲ್ಯಾಡಿಯ ಪ್ರಕಾಶ್ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು.

    ದೂರಿನಲ್ಲಿ ಏನಿದೆ?: ಫ್ರೆಂಡ್ಸ್ ಪಡುಬೆಟ್ಟು ವಾಟ್ಸಪ್ ಗ್ರೂಪ್ ನ ಅಡ್ಮಿನ್ ಮತ್ತು ಗ್ರೂಪ್ ನ ಸದಸ್ಯನೊಬ್ಬ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ತಿರುಚಿ ಹಂದಿಯ ಮುಖದಂತೆ ಬದಲಾಯಿಸಿ ವಾಟ್ಸಪ್ ಗ್ರೂಪಿನಲ್ಲಿ ದಿನಾಂಕ 20ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಹಾಕಿದ್ದಾರೆ. ಇದರಿಂದ ನಮ್ಮ ಪ್ರಧಾನಿಯ ಘನತೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಈ ಬಗ್ಗೆ ಈ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ನಾರಾಯಣ ಗುರು, ಬಸವಣ್ಣನ ವಚನ ಜಪಿಸಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಉಡುಪಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯದ ಮೂರನೇ ಜನಾಶೀರ್ವಾದ ಯಾತ್ರೆಯಲ್ಲಿ ನಾರಾಯಣ ಗುರುಗಳು ಮತ್ತು ಬಸವಣ್ಣನ ಜಪ ಮಾಡಿದ್ದಾರೆ. ಇಬ್ಬರ ಜೀವನವನ್ನು ಉದಾಹರಣೆಯಾಗಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕರಾವಳಿ ನಾರಾಯಣ ಗುರುಗಳ ಕರ್ಮಭೂಮಿ. ನಾವೆಲ್ಲರೂ ಒಂದೇ ಎಂಬುವುದು ಗುರುಗಳ ಮಂತ್ರ. ನಾರಾಯಣ ಗುರುಗಳ ತತ್ವ ಆದರ್ಶವನ್ನು ಕಾಂಗ್ರೆಸ್ ಮಾತ್ರ ಪಾಲಿಸುತ್ತಿದೆ. ಬಿಜೆಪಿ ಜಾತಿ, ಧರ್ಮಗಳ ನಡುವೆ ಕೋಮು ಭಾವನೆ ಸೃಷ್ಟಿಸುತ್ತದೆ, ಬಿಜೆಪಿಗೆ ಜನರ ನೆಮ್ಮದಿ ಬೇಡ ಎಂದರು. ಅಲ್ಲದೇ ಬಸವಣ್ಣ ನವರ ವಚನವನ್ನು ಮತ್ತೊಮ್ಮೆ ತಮ್ಮ ಭಾಷಣದ ಉದ್ದಕ್ಕೂ ಉಲ್ಲೇಖಿಸಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ಉಡುಪಿ ನಾಲ್ಕು ಬ್ಯಾಂಕ್ ಗಳ ಜನಕ. ಕಾಂಗ್ರೆಸ್ ಸರ್ಕಾರ ದೇಶಾದ್ಯಾಂತ ಬ್ಯಾಂಕ್‍ಗಳನ್ನು ವಿಸ್ತರಿಸಿತು. ಆದರೆ ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾಂಕ್ ವ್ಯವಸ್ಥೆ ಯನ್ನು ಕುಲಗೆಡಿಸಿದೆ. ಬಂಡವಾಳ ಶಾಹಿಗಳ 2.50 ಲಕ್ಷ ಕೋಟಿ ರೂ. ಹಣ ಮನ್ನಾ ಮಾಡಿದ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡುವ ಮನಸ್ಸು ಇಲ್ಲ. ಮೋದಿ ಬಸವಣ್ಣನವರನ್ನು ಹೊಗಳುತ್ತಾರೆ. ಆದರೆ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು, ಈಗ 10 ರೂ. ಹಾಕಿ ನುಡಿದಂತೆ ನಡೆಯಿರಿ ಎಂದು ಕಿಡಿಕಾರಿದರು.

    ದೇಶದ ಅಭಿವೃದ್ಧಿಗೆ 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಗೆ ಅವಮಾನ ಮಾಡಿದರೆ ಅದು ದೇಶಕ್ಕೆ ಮಾಡುವ ಅವಮಾನ. ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿ. ಬಿಜೆಪಿಯ ಈ ಹೇಳಿಕೆ ಹಿರಿಯರಿಗೆ ಮಾಡಿದ ಅವಮಾನ. ಮೋದಿ ಅವರು ದೇಶದ ಹಿರಿಯರಿಗೆ ಗೌರವ ಕೊಡುವವರಲ್ಲ. ಕಾಂಗ್ರೆಸ್ 70 ವರ್ಷದಿಂದ ಏನೂ ಮಾಡಿಲ್ಲ ಎನ್ನುವ ಮೋದಿ ಅವರು ದೇಶ ವಿದೇಶದಲ್ಲಿ ಓಡಾಡುತ್ತಾರೆ. 70 ವರ್ಷದಲ್ಲಿ ಜನ ದೇಶದಲ್ಲಿ ಬದುಕಲೇ ಇಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೇ ದೇಶದ ಪ್ರಗತಿ ಒಬ್ಬರಿಂದ ಅಸಾಧ್ಯ, ಎಲ್ಲವೂ ಜೊತೆಯಾಗಿ ಸಾಗಿದರೆ ಮಾತ್ರ ದೇಶಾಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ಮೋದಿಗೆ ಕುಟುಕಿದರು.