Tag: prime minister modi

  • ಇಂಧನ ಬೆಲೆ ಏರಿಕೆ – ಸೈಕಲ್ ತುಳಿದು ಕೋಲಾರದಲ್ಲಿ ರಾಗಾ ಪ್ರತಿಭಟನೆ

    ಇಂಧನ ಬೆಲೆ ಏರಿಕೆ – ಸೈಕಲ್ ತುಳಿದು ಕೋಲಾರದಲ್ಲಿ ರಾಗಾ ಪ್ರತಿಭಟನೆ

    ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಇಂಧನ ಬೆಲೆ ಏರಿಕೆ ಕುರಿತು ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು.

    ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೋಲಾರದ ಮಾಲೂರಿನಲ್ಲಿ ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು. ಸಾವಿರಾರು ಕಾರ್ಯಕರ್ತರ ನಡುವೆ ಸೈಕಲ್ ತುಳಿದ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಅನುಸರಣೆ ಮಾಡುತ್ತಿದೆ. ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಬಾರಿ ಪ್ರಮಾಣದ ಆದಾಯ ಗಳಿಸುತ್ತಿರುವ ಕೇಂದ್ರ ಸರ್ಕಾರ ಈ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿ, ನಿಮಗೇ ಸಾಧ್ಯವಿದ್ದರೆ ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಎಂದು ಸವಾಲು ಎಸೆದರು.

    ಬಳಿಕ ರೋಡ್ ಶೋ ವೇಳೆ ಸಿಲಿಂಡರ್ ಹಿಡಿದು ಕೇಂದ್ರ ವಿರುದ್ಧ ಪ್ರತಿಭಟನೆ ಮಾಡಿದರು. ಈ ವೇಳೆ ಎತ್ತಿನ ಗಾಡಿ ಮೇಲೆ ನಿಂತು ಭಾಷಣ ಮಾಡಿದ ಅವರು, ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮಂದುವರೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಆದ್ರೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅರೋಪಿಸುತ್ತೀರಾ ಸದ್ಯ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರಿದೆ. ಇದನ್ನೂ ಜಿಎಸ್‍ಟಿ ವ್ಯಾಪ್ತಿಗೆ ಏಕೆ ಒಳಪಡಿಸಿಲ್ಲ. ಈ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

    ಬಡವರಿಗಾಗಿ ಬಿಜೆಪಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಲ್ಲ. ರೈತರ ಸಾಲ ನನ್ನ ಮಾಡಿಲ್ಲ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿದೆ ಆದರೆ ಕೇಂದ್ರದಲ್ಲಿ ಯಾಕೆ ಸಾಲ ಮನ್ನಾ ಮಾಡಿಲ್ಲ. ಲೋಕಸಭೆ ಚುನಾವಣೆಗೆ ಒಂದು ವರ್ಷ ಉಳಿದಿದೆ. 2019 ರಲ್ಲಿ ನಮ್ಮ ಸರ್ಕಾರ ಬಂದಾಗ ಸಾಲ ಮನ್ನಾ ಮಾಡುತ್ತೇವೆ ಎಂದರು.

    ಗುಜರಾತ್ ನಲ್ಲಿ ನರೇಂದ್ರ ಮೋದಿ ಎಲ್ಲಾ ಸಂಸ್ಥೆಗಳನ್ನ ಖಾಸಗೀಕರಣ ಮಾಡಿದ್ದಾರೆ. ರಾಜ್ಯದಲ್ಲಿ ಉಚಿತ ಅಕ್ಕಿ, ಶಿಕ್ಷಣ, ಇಂದಿರಾ ಕ್ಯಾಂಟೀನ್ ಮೂಲಕ ಊಟ ನೀಡುತ್ತಿದ್ದೇವೆ. ಮೋದಿಯವರೆ ಯಾವುದಾದರೂ ಒಂದು ಬಡವರ ಪರವಾದ ಕಾರ್ಯಕ್ರಮ ಹೇಳಿ. ರಾಜ್ಯದ ಬಿಜೆಪಿ ನಾಯಕ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದವರು. ಯಾವ ಆಧಾರದ ಮೇಲೆ ಅವರನ್ನು ಮುಖ್ಯಮಂತ್ರಿ ಅಭಯರ್ಥಿಯನ್ನಾಗಿ ಘೋಷಣೆ ಮಾಡಿದ್ದೀರಿ. ದೇಶದಲ್ಲಿ ಆರ್‍ಎಸ್‍ಎಸ್ ಮತ್ತು ಮಹಾತ್ಮಗಾಂಧಿ ಆದರ್ಶಗಳ ನಡುವೆ ಇಂದು ಸಂಘರ್ಷ ನಡೆಯುತ್ತಿದೆ ಎಂದು ಆರೋಪಿಸಿದರು.

  • ಕೂಡಲ ಸಂಗಮ, ಕುಂಡಾಲಾ ಸಂಗಮವಲ್ಲ: ಮೋದಿಗೆ ಸಿಎಂ ಕನ್ನಡ ಕ್ಲಾಸ್- ವಿಡಿಯೋ

    ಕೂಡಲ ಸಂಗಮ, ಕುಂಡಾಲಾ ಸಂಗಮವಲ್ಲ: ಮೋದಿಗೆ ಸಿಎಂ ಕನ್ನಡ ಕ್ಲಾಸ್- ವಿಡಿಯೋ

    ಬೆಂಗಳೂರು: ಪ್ರಧಾನಿ ಮೋದಿಯವರು ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ತಮ್ಮ ಭಾಷಣದ ಆರಂಭದಲ್ಲಿ ಕನ್ನಡ ಮಾತಾಡುತ್ತಾರೆ. ಮೋದಿಯವರ ಕನ್ನಡ ಮಾತನಾಡುವುದನ್ನೇ ಎನ್‍ಕ್ಯಾಶ್ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಕಾಲೆಳೆದಿದ್ದಾರೆ.

    ಕೂಡಲ ಸಂಗಮ ಪದದ ಉಚ್ಚಾರಣೆಯನ್ನು ತಪ್ಪಾಗಿ ಉಚ್ಛರಿಸಿದಕ್ಕೆ ಸಿಎಂ ಸಿದ್ದರಾಮಯ್ಯ ನೇರವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೂಡಲ ಸಂಗಮವನ್ನು ಕುಂಡಾಲಾ ಸಂಗಮ ಎಂದು ಬಸವಣ್ಣ ಮತ್ತು ಲಿಂಗಾಯತರಿಗೆ ಅಪಮಾನ ಮಾಡಿದ ಮೋದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಈ ಬಗ್ಗೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. “ಶ್ರೀ ನರೇಂದ್ರ ಮೋದಿ ಅವರೆ, ಇದು ಕೂಡಲ ಸಂಗಮ, ಕುಂಡಲ ಸಂಗಮವಲ್ಲ. ಕನ್ನಡ ಪದವನ್ನು ತಪ್ಪಾಗಿ ಉಚ್ಚರಿಸುವುದು ದೊಡ್ಡ ತಪ್ಪು. ಕನ್ನಡಿಗರು ಉದಾತ್ತ ಮನಸ್ಸಿನವರು. ಅವರು ನಿಮ್ಮನ್ನು ಕ್ಷಮಿಸುತ್ತಿದ್ದಾರೆ. ಆದರೆ ನೀವು ಕನ್ನಡಿಗರ ಮನಸ್ಸನ್ನು ಹೊಂದಿಲ್ಲ ಎಂದು ವಿಷಾದಿಸುತ್ತೇನೆ. ಇತರರ ಭಾಷಣ ಮಾಡುವಾಗ ನೀವು ನಗುವುದು” ಎಂದು ಟ್ವೀಟ್ ಮಾಡಿದ್ದಾರೆ.

  • ಪ್ರಧಾನಿ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟ್ ಹಾಕ್ತೀನಿ- ಚಂದ್ರಕಾಂತ ಮೆಹರವಾಡಿ

    ಪ್ರಧಾನಿ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟ್ ಹಾಕ್ತೀನಿ- ಚಂದ್ರಕಾಂತ ಮೆಹರವಾಡಿ

    ಹುಬ್ಬಳ್ಳಿ: ನಾನು ಈ ಬಾರಿ ವೋಟು ಹಾಕೋದು ಬೇಡ ಅಂತ ತೀರ್ಮಾನ ಮಾಡಿದ್ದೆ, ಆದರೆ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟು ಹಾಕ್ತೀನಿ ಎಂದು ಚಂದ್ರಕಾಂತ ಮೆಹರವಾಡಿ ಹೇಳಿದ್ದಾರೆ.

    ಭಾನುವಾರ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಕಾಂತ ಮೆಹರವಾಡಿ ಹೆಸರನ್ನ ಪ್ರಸ್ತಾಪಿಸಿ, ಹುಬ್ಬಳ್ಳಿಗೂ ನನಗೂ ಅವಿನಾಭಾವ ಸಂಬಂಧ ಇದೆ ಅಂತ ಹೇಳಿದ್ದರು. ಗುಜರಾತ್ ಸಿಎಂ ಆಗಿದ್ದಾಗ ಚಂದ್ರಕಾಂತ ನನ್ನನ್ನು ಭೇಟಿಯಾಗಿದ್ದರು. ಅವರ ಪತ್ನಿ ಗರ್ಭಿಣಿ ಕಷ್ಟದಲ್ಲಿದ್ದಾರೆ ಅಂತ ತಿಳಿದು ಸಹಾಯ ಮಾಡಿದೆ. ಇದೀಗ ಆ ಕುಟುಂಬ ನೆಮ್ಮದಿಯಿಂದ ಜೀವನ ಮಾಡುತ್ತಿದೆ ಎಂದು ಪ್ರಸ್ತಾಪ ಮಾಡಿದ್ದರು.

    ಈ ಬಗ್ಗೆ ಚಂದ್ರಕಾಂತ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮೋದಿಯನ್ನು ಹೊಗಳಿ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನನಗೆ ಸ್ವಂತ ಮನೆ ಇಲ್ಲ, ಸ್ವಂತ ಟೈಲರಿಂಗ್ ಮಷಿನ್ ಕೂಡ ಇಲ್ಲ. ಇಲ್ಲಿನ ಜನಪ್ರತಿನಿಧಿಗಳು ಬರೀ ಸುಳ್ಳು ಭರವಸೆ ಕೊಟ್ಟರು ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

    ಯಾರು ಈ ಚಂದ್ರಕಾಂತ್ ಮೆಹರವಾಡಿ?
    ಚಂದ್ರಕಾಂತ್ ಮೆಹರವಾಡಿ ಹುಬ್ಬಳ್ಳಿಯ. ನೇಕಾರ ನಗರ ನಿವಾಸಿ. 20 ವರ್ಷ ಹಿಂದೆ ದುಡಿಮೆಗಾಗಿ ಪತ್ನಿ ಶೋಭಾ ಜೊತೆ ಗುಜರಾತ್ ಗೆ ಹೋಗಿದ್ದರು. ಗರ್ಭಿಣಿಯಾಗಿದ್ದ ಶೋಭಾ ಅವರನ್ನ ಆಸ್ಪತ್ರೆಗೆ ದಾಖಲಿಸಿದಾಗ ಹೆಣ್ಣು ಮಗು ಜನನವಾಯಿತು.

    ಆಗ ಆಸ್ಪತ್ರೆ ಬಿಲ್ ಕಟ್ಟುವಷ್ಟು ಹಣ ಚಂದ್ರಕಾಂತ್ ಅವರ ಬಳಿ ಇರಲಿಲ್ಲ. ಆಗ ಸೆಕ್ಯೂರಿಟಿ ಸೂಚನೆ ಮೇರೆಗೆ ಮೋದಿ ಅವರ ಮನೆಗೆ ಚಂದ್ರಕಾಂತ್ ಹೋದಾಗ ಗುಜರಾತ್ ಸಿಎಂ ಆಗಿದ್ದ ಮೋದಿ ಮನೆಯಲ್ಲಿದ್ದರು. ಮೋದಿ ಬಳಿ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟ ಚಂದ್ರಕಾಂತ್ ಅವರಿಗೆ ಒಂದು ಪತ್ರವನ್ನ ಮೋದಿ ನೀಡುತ್ತಾರೆ. ಆ ಪತ್ರದ ಸಹಾಯದಿಂದ ಉಚಿತವಾಗಿ ಆಸ್ಪತ್ರೆಯ ಎಲ್ಲಾ ಸೌಲಭ್ಯ ಸಿಕ್ಕಿತ್ತು.

  • ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೋದಿ ಮಹದಾಯಿ ಹೇಳಿಕೆ ನೀಡಿದ್ದಾರೆ: ಸಿಎಂ ತಿರುಗೇಟು

    ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೋದಿ ಮಹದಾಯಿ ಹೇಳಿಕೆ ನೀಡಿದ್ದಾರೆ: ಸಿಎಂ ತಿರುಗೇಟು

    ಬಾಗಲಕೋಟೆ: ಇಂದು ಗದಗನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡ್ತಿದೆ ಅಂತಾ ಆರೋಪಿಸಿದ್ದರು. ಪಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ಕೊಡ್ತಿದ್ದಾರೆ ಅಂತಾ ತಿರುಗೇಟು ನೀಡಿದ್ರು.

    ಜಿಲ್ಲೆಯ ಬಾದಾಮಿ ತಾಲೂಕಿನ ನಂದಕೇಶ್ವರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಿಗೆ ಮಹದಾಯಿ ನದಿ ಜೋಡಣೆ ಸಮಸ್ಯೆಯನ್ನ ಬಗೆಹರಿಸುವ ಮನಸ್ಸಿಲ್ಲ. ಈ ದೇಶದ ಪ್ರಧಾನಿ ಯಾರು? ರೈತರ ಹೋರಾಟ ನಡೆಯುತ್ತಿರುವುದು ನಾಲ್ಕು ವರ್ಷಗಳಿಂದ. ಆದರೆ ಈ ಸಮಸ್ಯೆ ಬಗೆಹರಿಸುವಲ್ಲಿ ಮೋದಿ ವಿಫಲರಾಗಿ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ. ಜನರು ಅವರಿಗೆ ಬಯ್ಯುತ್ತಿದ್ದರು. ಆದ್ದರಿಂದ ಮೋದಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಮೋದಿಯವರು ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶ ವಹಿಸದೇ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ ಎಂದು ಮಹಾದಾಯಿ ನದಿ ಜೋಡಣೆ ವಿಚಾರವಾಗಿ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೀನಿ. ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯದ ಸಿಎಂಗಳ ಜೊತೆ ಮಾತನಾಡಿದೆ. ಅವರಿದ್ದಲ್ಲೇ ಹೋಗಿ ಮಾತನಾಡಲು ಸಿದ್ದವಾಗಿದ್ದೆ. ಈ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಪ್ರಧಾನಿ ಮೋದಿಗಿತ್ತು. ನಾನು ಸಾಕಷ್ಟು ಬಾರಿ ಪ್ರಧಾನಿಗೂ ಪತ್ರ ಬರೆದಿದ್ದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಅಲ್ಲದೆ ಕೇಂದ್ರದಲ್ಲೂ ಅವರ ಸರ್ಕಾರ ಇತ್ತು. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಪ್ರಧಾನಿ ಮೋದಿ ಈ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡಲಿಲ್ಲ ಎಂದ್ರು.

  • ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ನವದೆಹಲಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಆರಂಭಿಸಿದ ಬಳಿಕ ತನಗೆ ಬಾಲಿವುಡ್ ನಲ್ಲಿ ಯಾವುದೇ ಸಿನಿಮಾ ಆಫರ್ ಬಂದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆಯಲ್ಲಿ ಈ ಕುರಿತು ಮಾತನಾಡಿದ ರೈ, ಕಳೆದ ಆಕ್ಟೋಬರ್ ತಿಂಗಳಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಯರ್ತರ ವಿರುದ್ಧ ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದೆ. ಬಳಿಕ ಹಿಂದಿ ಚಿತ್ರೋದ್ಯಮ ತನ್ನನ್ನು ಸೈಡ್ ಲೈನ್ ಮಾಡಿದೆ ಎಂದು ಹೇಳಿದರು.

    ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಪ್ರಚಾರ ನಡೆಸುತ್ತಿರುವ ಪ್ರಕಾಶ್ ರೈ, ತನಗೆ ದಕ್ಷಿಣ ಚಿತ್ರ ರಂಗದಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಬಾಲಿವುಡ್ ಈ ನಡೆಯಿಂದ ತನಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಏಕೆಂದರೆ ತನ್ನ ಬಳಿ ಸಾಕಷ್ಟು ಹಣ ಇದೆ ಎಂದು ತಿಳಿಸಿದ್ದಾರೆ.

    ಗೌರಿ ಲಂಕೇಶ್ ಅವರ ಹತ್ಯೆ ತನಗೆ ತುಂಬಾ ಗೊಂದಲ ಉಂಟು ಮಾಡಿತು. ಆಕೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಆದರೆ ಆಕೆಯ ಹತ್ಯೆ ಬಳಿಕ ನಿಶಬ್ಧ ಮೂಡಿತ್ತು. ಬಳಿಕ ತಾನು ಪ್ರಶ್ನೆ ಮಾಡಲು ಆರಂಭಸಿದೆ. ತಾನು ಮಾಡುವ ಕಾರ್ಯವನ್ನು ಬಿಜೆಪಿ ತಡೆಯಲು ಮುಂದಾಗಿದೆ ಎಂದು ಆರೋಪಿಸಿದರು.

    ಇದೇ ವೇಳೆ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ಮಾಡಿರುವ ಪ್ರಕಾಶ್ ರೈ, ದೇಶಕ್ಕೆ ಅಮಿತ್ ಶಾ ಅವರ ಕೊಡುಗೆ ಏನು? ನಾಯಕರಾಗಿ ಅವರ ಸಾಧನೆ ಏನು? ದೇಶದ ಅಭಿವೃದ್ಧಿ ಬಗ್ಗೆ ಅವರು ಯಾವ ಯೋಜನೆಗಳನ್ನು ರೂಪಿಸಿದ್ದಾರೆ. ಯಾವ ಆಧಾರದ ಮೇಲೆ ಅವರನ್ನು ಚಾಣಕ್ಯ ಎಂದು ಕರೆಯಲಾಗುತ್ತದೆ ಅಂತಾ ಪ್ರಶ್ನಿಸಿದರು.

  • ಮೋದಿಯವರು ಹೇಳಿದಂತೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ: ಕುಮಾರಸ್ವಾಮಿ

    ಮೋದಿಯವರು ಹೇಳಿದಂತೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ: ಕುಮಾರಸ್ವಾಮಿ

    ವಿಜಯಪುರ: ಬಳ್ಳಾರಿ ರೆಡ್ಡಿ ಬ್ರದರ್ಸ್ ಗಳ ಬಗ್ಗೆ ಸಮರ್ಥನೆ ಮಾಡಿಕೊಂಡ ಪ್ರಧಾನಿ ಮೋದಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜೆಡಿಎಸ್ ಸಮಾವೇಶದ ಬಳಿಕ ಮಾತನಾಡಿದ ಹೆಚ್‍ಡಿಕೆ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ನಡೆದ ಕಳ್ಳ ಸಾಗಾಣಿಕೆ ಹಾಗೂ ಅಲ್ಲಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವರ ನೈತಿಕತೆ ಉಳಿಸಿಕೊಂಡಿಲ್ಲವೆಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ. ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ, ಪಾದಯಾತ್ರೆ ಹೆಸರಲ್ಲಿ ಅಧಿಕಾರ ಪಡೆದಿದ್ದಾರೆ. ಆದರೆ ಬಳ್ಳಾರಿ ಜನರನ್ನು ಬಡತನದಲ್ಲಿ ಇಟ್ಟಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವಾಗಿ ಯಾರ ಮೇಲೆ ಕ್ರಮಕೈಗೊಂಡಿದೆ ತೋರಿಸಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಈ ಸಲ ಕಪ್ ನಮ್ದೆ, ಸಮ್ಮಿಶ್ರ ಸರ್ಕಾರ ಇಲ್ಲ: ಎಚ್‍ಡಿಕೆ

    ಪ್ರಧಾನಿ ಮೋದಿ ಅವರು ಹೇಳಿದ ಹಾಗೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ. ನಾಳೆ ಬಿಜೆಪಿಗೆ ಹೋದರೂ ಆಶ್ಚರ್ಯ ಪಡುವ ಹಾಗಿಲ್ಲ ಎಂದಿದ್ದಾರೆ. ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಬಂದರೆ. ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ 50-60 ಜನ ಶಾಸಕರ ಜೊತೆ ಬಿಜೆಪಿ ಬಾಗಿಲು ತಟ್ಟಿದರೂ ಆಶ್ಚರ್ಯಪಡುವ ಹಾಗಿಲ್ಲವೆಂದು ಸಿದ್ದು ವಿರುದ್ಧ ಹೆಚ್‍ಡಿಕೆ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

  • ಮೋದಿಗೆ ರಾಜ್ ಆತ್ಮ ಚರಿತ್ರೆಯನ್ನು ನೀಡಿದ ಪುನೀತ್ ದಂಪತಿ

    ಮೋದಿಗೆ ರಾಜ್ ಆತ್ಮ ಚರಿತ್ರೆಯನ್ನು ನೀಡಿದ ಪುನೀತ್ ದಂಪತಿ

    ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಇಂದು ನಗರದ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪುನೀತ್ ರಾಜ್‍ಕುಮಾರ್ ದಂಪತಿ ಸ್ವಾಗತಿಸಿದರು.

    ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಪುನೀತ್ ರಾಜ್‍ಕುಮಾರ್ ದಂಪತಿ ಸ್ವಾಗತ ಕೋರಿಸಿ ಡಾ.ರಾಜಕುಮಾರ್ ಆತ್ಮಚರಿತ್ರೆಯನ್ನು ಕಾಣಿಕೆಯಾಗಿ ನೀಡಿದರು.

    ಪಕ್ಷದ ಪರ ಮೇ 1 ರಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಪ್ರಧಾನಿ ಮೋದಿ ಅವರು ಇಂದು ಕಲಬುರುಗಿ ಹಾಗೂ ಬಳ್ಳಾರಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಬಳಿಕ ಸಂಜೆ ವೇಳೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು.

    ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭ ಮಾಡಿದ ಮೋದಿ, ನಾಡಪ್ರಭು ಕೆಂಪೇಗೌಡ, ಡಾ. ರಾಜಕುಮಾರ್, ಸಿವಿ ರಾಮನ್, ವಿಶ್ವೇಶ್ವರಯ್ಯನವರ ನೆನೆದು ಹೊಗಳಿದ್ದರು. ಅಲ್ಲದೇ ಕ್ರೀಡಾರಂಗದಲ್ಲಿ ದೇಶಕ್ಕೆ ಕೀರ್ತಿ ತಂದ ಬೆಂಗಳೂರಿನ ಕ್ರೀಡಾಪಟುಗಳಿಗೆ ನನ್ನ ನಮನಗಳು ಎಂದು ಹೇಳಿ ಭಾಷಣ ಆರಂಭಿಸಿದರು.

  • ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ ಯಾಕೆ: ಬಿಜೆಪಿ ನಾಯಕರಿಂದ ಭಿನ್ನ ಹೇಳಿಕೆ

    ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ ಯಾಕೆ: ಬಿಜೆಪಿ ನಾಯಕರಿಂದ ಭಿನ್ನ ಹೇಳಿಕೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಬುಧವಾರ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆ ಎಂದು ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡದೇ ಹೋಗಿದ್ದು ಯಾಕೆ ಎನ್ನುವ ಚರ್ಚೆ ಈಗ ಆರಂಭವಾಗಿದ್ದು ಬಿಜೆಪಿ ನಾಯಕರು ಈ ಪ್ರಶ್ನೆಗೆ ಒಂದೊಂದು ಉತ್ತರ ನೀಡಿದ್ದಾರೆ.

    ಜೀವ ಭಯ: ಕೃಷ್ಣ ಮಠದಲ್ಲಿ ಮೋದಿ ಜೀ ಅವರಿಗೆ ಜೀವ ಭಯ ಇತ್ತು. ಹೀಗಾಗಿ ಭೇಟಿ ನೀಡಿಲ್ಲ ಎಂದು ಸಂಸದೆ ಶೋಭಾ ಕರಾಂದ್ಲಜೆ ತಿಳಿಸಿದ್ದಾರೆ.

    ನೀತಿ ಸಂಹಿತೆ: ಮಾಜಿ ಸಿಎಂ, ಕೇಂದ್ರ ಸಚಿವ ಸದಾನಂದ ಗೌಡರು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ಮಠಕ್ಕೆ ಭೇಟಿ ನೀಡದೆ ಅರ್ಧಗಂಟೆ ಚರ್ಚೆ ಆಗಿದೆ. ಇನ್ನು ಭೇಟಿ ನೀಡಿದ್ದರೆ 1 ಗಂಟೆ ಚರ್ಚೆ ಆಗುತ್ತಿತ್ತು. ನಾವು ನೀತಿ ಸಂಹಿತೆ ಪಾಲನೆ ಮಾಡುವವರು, ಕಾಂಗ್ರೆಸ್‍ನವರು ಉಲ್ಲಂಘನೆ ಮಾಡುವವರು ಎಂದು ಆರೋಪಿಸಿದ್ದಾರೆ.

    ಭದ್ರತೆ ಸಮಸ್ಯೆ ಇಲ್ಲ: ಪ್ರಧಾನಿ ಮೋದಿ ಕೃಷ್ಣ ಮಠಕ್ಕೆ ಭೇಟಿ ರದ್ದು ಮಾಡಿರುವ ಕುರಿತು ಸ್ಪಷ್ಟನೆ ನೀಡಿರುವ ಮಠದ ವಕ್ತಾರರು ಇಲ್ಲಿ ಯಾವುದೇ ಭದ್ರತೆಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಪ್ರಧಾನಿಗಳ ಭೇಟಿ ಕಾರ್ಯಕ್ರಮ ಕುರಿತು ಮಾತನಾಡಿದ್ದ ಪೇಜಾವರ ಶ್ರೀಗಳು, ಈ ಹಿಂದೆ ಪ್ರಧಾನಿಗಳಿಗೆ ಉಡುಪಿಗೆ ಬಂದಾಗ ಮಠಕ್ಕೆ ಬರಬೇಕೆಂದು ಪತ್ರ ಬರೆದಿದ್ದೆ. ಸದ್ಯ ಈ ಪತ್ರಕ್ಕೆ ಮೋದಿಯವರ ಆಪ್ತ ಕಾರ್ಯದರ್ಶಿಯವರು ನಮ್ಮ ಕಾರ್ಯದರ್ಶಿಗೆ ಕರೆ ಮಾಡಿ, ರಾಜಕೀಯ ಸಮಾವೇಶದ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ತಿಳಿಸಿದ್ದಾಗಿ ಹೇಳಿದ್ದಾರೆ. ಆದ್ರೆ ಮುಂದೊಂದು ದಿನ ಧಾರ್ಮಿಕ ಕಾರ್ಯಕ್ರಮವನ್ನೇ ನಿಗದಿಪಡಿಸಿದರೆ ಪ್ರಧಾನಿ ಆಗಮಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ ಎಂದು ಶ್ರೀ ಗಳು ಹೇಳಿದರು.

    ಪ್ರಧಾನಿಗಳು ಮಠಕ್ಕೆ ಭೇಟಿ ನೀಡಲಿಲ್ಲ ಎಂಬುವುದರ ಬಗ್ಗೆ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಜನರ ಸಮಸ್ಯೆ ಪರಿಹಾರ ಆಗದಿದ್ದಾರೆ ಬೇಸರ ಉಂಟಾಗುತ್ತದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

  • ನೀವು ನಿಜಕ್ಕೂ ಕನ್ನಡಿಗರಾ – ಸಿದ್ದರಾಮಯ್ಯರಿಂದ ಮೋದಿಗೆ ಐದು ಸವಾಲು

    ನೀವು ನಿಜಕ್ಕೂ ಕನ್ನಡಿಗರಾ – ಸಿದ್ದರಾಮಯ್ಯರಿಂದ ಮೋದಿಗೆ ಐದು ಸವಾಲು

    ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಸವಾಲ್ ಹಾಕಿದ್ದಾರೆ.

    `ನೀವು ಕನ್ನಡಿಗರಾ’ ಎಂದು ಪ್ರಶ್ನಿಸಿದ ಸಿಎಂ, ಪ್ರಧಾನಿ ಮೋದಿಗೆ ನೀವು ಕನ್ನಡಿಗರಾದರೆ ಈ ಐದು ಕೆಲಸ ಮಾಡಿ ತೋರಿಸಿ ಅಂತ ಸವಾಲೊಡ್ಡಿದ್ದಾರೆ.

    ಸವಾಲ್‍ಗಳೇನು?:
    1. ನಾಡಭಾಷೆ, ನಾಡಧ್ವಜ, ನಾಡಗೀತೆ ಒಪ್ಪಿಕೊಳ್ಳಿ. ನಾಡಧ್ವಜಕ್ಕೆ ಅಂಗೀಕಾರ ನೀಡಿ.
    2. ಹಿಂದಿ ಹೇರಿಕೆ ಕೈ ಬಿಡಿ, ಕನ್ನಡಕ್ಕೆ ಪ್ರಾಮುಖ್ಯತೆ ಕೊಡಿ.
    3. ಮಹದಾಯಿ ಸಮಸ್ಯೆ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆಯಿರಿ.
    4. ರಾಷ್ಟ್ರೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಿ.
    5. ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್‍ಗೆ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ?

    ಪ್ರಶ್ನೆ:
    1 ಕನ್ನಡಿಗನಾಗುವುದೆಂದರೆ…
    ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು ಗೌರವಿಸುವುದು. ಒಬ್ಬನೇ ಒಬ್ಬ ಮುಸ್ಲಿಮ್, ಕ್ರಿಶ್ಚಿಯನ್‍ಗೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ? ಎಂದು ಮೊದಲನೇ ಸವಾಲ್ ಹಾಕಿದ್ದಾರೆ.

    2. ಕನ್ನಡಿಗನಾಗುವುದೆಂದರೆ….
    ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ. ರಾಷ್ಟ್ರೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಕನ್ನಡಿಗರಾಗುವಿರಾ?

    3. ಕನ್ನಡಿಗನಾಗುವುದೆಂದರೆ…
    ನೆಲ,ಜಲ,ಭಾಷೆಯ ರಕ್ಷಣೆಗೆ ಬದ್ಧವಾಗಿರುವುದು. ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುವಿರಾ?

    4. ಕನ್ನಡಿಗನಾಗುವುದೆಂದರೆ…
    ಬಲತ್ಕಾರದ ಹಿಂದಿ ಹೇರಿಕೆಯನ್ನು ಕೈಬಿಡುವುದು, ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು. ಕನ್ನಡಿಗರಾಗಲು ಸಿದ್ಧರಿದ್ದೀರಾ?

    5. ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ. ಕನ್ನಡಿಗನಾಗುವುದೆಂದರೆ….
    ನಾಡಭಾಷೆ, ನಾಡಗೀತೆ, ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ, ನಿಜವಾದ ಕನ್ನಡಿಗರಾಗುವಿರಾ? ಎಂದು ಐದು ಸವಾಲ್ ಹಾಕಿದ್ದು, ಪ್ರಶ್ನೆ ಮಾಡಿದ್ದಾರೆ.

    ಈ ರೀತಿ ಸವಾಲ್ ಹಾಕಿ, ಪ್ರಶ್ನಿಸಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರತೀ ಟ್ವೀಟ್ ನಲ್ಲೂ #AnswerMadiModi ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

  • ನಾಳೆ ಪ್ರಧಾನಿ ಮೋದಿ ಉಡುಪಿಗೆ- ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

    ನಾಳೆ ಪ್ರಧಾನಿ ಮೋದಿ ಉಡುಪಿಗೆ- ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

    ಉಡುಪಿ: ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಮಂಗಳವಾರ ಉಡುಪಿಗೆ ಆಗಮಿಸುತ್ತಿದ್ದು, ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

    ನಾಳೆ ಮಧ್ಯಾಹ್ನ 2.45 ಕ್ಕೆ ಮೋದಿ ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ ಸಂಜೆ 4.30 ರ ವರೆಗೆ ನಗರಕ್ಕೆ ವಾಹನ ಪ್ರವೇಶ ನಿಷೇಧ ಮಾಡಲಾಗಿದೆ. ಎಂಜಿಎಂ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯಲಿರುವ ಕಾರಣ ಕರಾವಳಿ ಜಂಕ್ಷನ್ ನಿಂದ ಇಂದ್ರಾಣಿ ಜಂಕ್ಷನ್ ವರೆಗೆ ಪೊಲೀಸರು ನೋ ವೆಹಿಕಲ್ ಝೋನ್ ನಿರ್ಮಾಣ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆ ಆಗದಿರಲು ನಗರದ ಹೊರ ವಲಯದ ಮೂಲಕ ಬದಲಿ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

    ಸಮಾವೇಶದಲ್ಲಿ 60 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಸಮಾವೇಶದಲ್ಲಿ ಉಡುಪಿ, ಉತ್ತರಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಎಂಜಿಎಂ ಮೈದಾನ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಉಡುಪಿ ಎಸ್ ಪಿ ಲಕ್ಷ್ಮಣ ಬ. ನಿಂಬರ್ಗಿ ಪ್ರಧಾನಿ ಮೋದಿ ಆಗಮನದಿಂದ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ನಗರದಲ್ಲಿ ಮತ್ತು ಪ್ರಧಾನಿ ಸಂಚರಿಸುವ ರಸ್ತೆಗಳ ಇಕ್ಕೆಲದ ಯಾವುದೇ ಅಂಗಡಿಗಳನ್ನು ಮುಚ್ಚಿಸುವುದಿಲ್ಲ. ಸಾರ್ವಜನಿಕ ಸಭೆಯಲ್ಲಿ ಮಾತ್ರ ಮಾಧ್ಯಮಗಳು ಪಾಲ್ಗೊಳ್ಳಬಹುದು ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.

    ಇನ್ನು ನಗರದಲ್ಲಿ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಪ್ರವೇಶಿಸುವ ಮಾರ್ಗವನ್ನು ಬದಲಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿಗೆ ಬರುವ ಮತ್ತು ಕುಂದಾಪುರದಿಂದ ಉಡುಪಿಗೆ ಬರುವ ರಸ್ತೆಗಳಿಗೆ ಬದಲಿ ಮಾರ್ಗ ವ್ಯವಸ್ಥೆಗೊಳಲಾಗಿದೆ. ಜಿಲ್ಲೆಗೆ ಬರುವ ಹೊಸಬರಿಗೆ ಬದಲಿ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಜಿಲ್ಲೆಯ ಸುಮಾರು ಒಂದು ಸಾವಿರ ಪೊಲೀಸರು ಪ್ರಧಾನಿಗಳ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ ತೊಡಗಲಿದ್ದಾರೆ. ಎಸ್ ಪಿ ಜಿ, ಬಿಎಸ್ ಎಫ್ ಅಧಿಕಾರಿಗಳು ಗಸ್ತು ಶುರು ಮಾಡಿದ್ದಾರೆ ಎಂದು ವಿವರಿಸಿದರು.