ನವದೆಹಲಿ: ಕರ್ನಾಟಕದಲ್ಲಿ 85 ಲಕ್ಷ ಜನ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಸಭೆಯ ಮಾತನಾಡಿದ ಅವರು, ಕರ್ನಾಟಕದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದೇನೆ. ಹೊಸ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ. ಈ ಬಗ್ಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳ ಬೆಂಬಲ ರಾಜ್ಯಕ್ಕೆ ಬೇಕು. ರಾಜ್ಯದಲ್ಲಿ 85 ಲಕ್ಷ ಮಂದಿ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಬರಗಾಲದ ಕಾರಣದಿಂದ ರೈತರು ಮತ್ತಷ್ಟು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ರಾಜ್ಯಗಳಿಗೆ ಕೇಂದ್ರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ನಾವು ಹಲವು ರಾಜಕೀಯ ಸಿದ್ಧಾಂತಗಳನ್ನು ಗೌರವಿಸುತ್ತೇವೆ ಎಂದು ಹೇಳಿದ ಎಚ್‍ಡಿಕೆ, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರಕಾರದ ಜೊತೆ ಕೈ ಜೋಡಿಸುತ್ತೇವೆ. ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ. ಕೃಷಿ ವಲಯದಲ್ಲಿ ದೇಶ ಸಮಸ್ಯೆ ಎದುರಿಸುತ್ತಿದ್ದು, ಹಳ್ಳಿಗಾಡಿನಲ್ಲಿ 70% ರಷ್ಟು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆ ರೈತರಿಗೆ ಲಾಭದಾಯಕ ಆದಾಯ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಋಣಭಾರ ಸರ್ಕಾರದ ಮೇಲಿದೆ. ಈ ಬಿಕ್ಕಟ್ಟು ನಿಭಾಯಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ರೈತರ ಋಣಭಾರ ತಗ್ಗಿಸಲು ಗಣನೀಯ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರಕ್ಕೆ ಪ್ರಯತ್ನಕ್ಕೆ ಕೇಂದ್ರ ಸಹಕಾರ ನೀಡಬೇಕು ಎಂದರು.
ಕಳೆದ 16 ವರ್ಷಗಳಲ್ಲಿ 13 ವರ್ಷ ಬರಗಾಲ ಎದುರಿಸಿದ್ದೇವೆ. ಪ್ರಾಕೃತಿಕ ವಿಕೋಪಗಳನ್ನು ಗಮನದಲ್ಲಿರಿಸಿ ನೀತಿ ರಚಿಸಬೇಕಿದೆ. ಜಲ ಸಂರಕ್ಷರಣೆ ಉತ್ತೇಜಿಸುವ ಕೆಲಸ ನೀತಿ ಆಯೋಗ ಮಾಡಬೇಕಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಕೆರೆ ಸಂಜೀವಿನಿ ಯೋಜನೆ ಹಮ್ಮಿಕೊಂಡಿದ್ದೇವೆ. ಜಲ ದಶಕ ಎಂದು ಪರಿಗಣಿಸಿ ಸಂರಕ್ಷಣೆಗೆ ಪಣತೊಡಬೇಕಿದೆ. ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೇವೆ. ಹಿಂದುಳಿದ ಜಿಲ್ಲೆಗಳಿಗೆ ನೂರು ಕೋಟಿ ಕೇಂದ್ರದ ಅನುದಾನ ಅಗತ್ಯವಿದ್ದು, ಎನ್‍ಡಿಆರ್ ಎಫ್ ಅನುದಾನದಲ್ಲಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬೇಕಿದೆ. ಪ್ರಾಕೃತಿಕ ವಿಕೋಪದಿಂದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ 70 ಸಾವಿರಕೋಟಿ ನಷ್ಟ ಉಂಟಾಗಿದ್ದು, ಇಪ್ಪತ್ತು ಸಾವಿರ ಕೋಟಿ ಪರಿಹಾರ ನೀಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಕೇವಲ 5 ಸಾವಿರ ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಲ್ಕನೇ ಬಾರಿಗೆ ನಡೆಯುತ್ತಿರುವ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸಚಿವರು ಮತ್ತು ತಜ್ಞರು ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿಯ ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು. ಅಲ್ಲದೇ ಕೇಂದ್ರ ಸರ್ಕಾರದ ಪ್ರಮುಖ ಮಹಾತ್ವಾಕಾಂಕ್ಷೆಯ ಯೋಜನೆಗಳಾದ ಆಯುಷ್ಮಾನ್ ಭಾರತ, ರಾಷ್ಟ್ರೀಯ ಪೋಷಕಾಂಶ ಅಭಿಯಾನ, ಇಂದ್ರಧನುಷ್‍ನಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದಿಂದ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಭಾಗಿದ್ದಾರೆ.
ಅರುಣ್ ಜೇಟ್ಲಿ ಹಿಂದೆ ಹೇಳಿದ್ದೇನು?
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಹಕಾರಿ ಬ್ಯಾಂಕಗಳಲ್ಲಿನ ಸಾಲಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕಗಳ ಸಾಲಮನ್ನಾ ಮಾಡಲು ಕೇಂದ್ರಕ್ಕೆ ಕೋರಿದ್ದರು. ಆದರೆ ಈ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯ ಸರ್ಕಾರಗಳ ಬೇಡಿಕೆಗೆ ಕುರಿತು ಪ್ರತಿಕ್ರಿಯೆ ನೀಡಿ, ಸಾಲಮನ್ನಾ ಮಾಡಬೇಕೋ? ಬೇಡವೋ ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಈ ವಿಚಾರವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ, ಇದನ್ನು ಬಿಟ್ಟು ಹೊಸದಾಗಿ ಏನು ಹೇಳುವುದಿಲ್ಲ ಎಂದು 2017 ಜೂನ್ ಮೂರನೇ ವಾರದಲ್ಲಿ ತಿಳಿಸಿದ್ದರು.
ಆರ್ ಬಿಐ ಏನು ಹೇಳುತ್ತೆ?
ರೈತರ ಸಾಲಮನ್ನಾ ಮಾಡಿದರೆ ಹಣಕಾಸು ಸ್ಥಿತಿ ಬಿಗಡಾಯಿಸಬಹುದು. ದೇಶದ ಆರ್ಥಿಕ ಸ್ಥಿತಿ ಕೈ ತಪ್ಪಿ ಹೋಗಬಹುದು. ಈ ಯೋಜನೆಗಳನ್ನು ಪ್ರಕಟಿಸುವ ಮೊದಲು 100 ಬಾರಿ ಯೋಚಿಸಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.
https://www.facebook.com/CMofKarnataka/photos/pcb.1711066348941822/1711061452275645/?type=3&theater
