Tag: prime minister modi

  • ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ- ಬಿಜೆಪಿ ವಿರುದ್ಧ ಹೋರಾಟದ ಬಗ್ಗೆ ಚರ್ಚೆ

    ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ- ಬಿಜೆಪಿ ವಿರುದ್ಧ ಹೋರಾಟದ ಬಗ್ಗೆ ಚರ್ಚೆ

    ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೂ ಕೆಲವು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಚುನಾವಣಾ ಕಸರತ್ತು ಆರಂಭಿಸಿದೆ.

    ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮರ ಸಾರಲು ಸಿದ್ಧತೆ ನಡೆಸಿರುವ ಕಾಂಗ್ರೆಸ್, ಇಂದು ಎರಡನೇ ಕಾರ್ಯಕಾರಣಿ ಸಮಿತಿ ಸಭೆ ನಡೆಸಲಿದೆ. ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಎಲ್ಲ ಸದಸ್ಯರು ಭಾಗಿಯಾಗಲಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆಯ ನೇತೃತ್ವ ವಹಿಸಿಕೊಳ್ಳಲಿದ್ದು, ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಒಟ್ಟು 51 ಜನ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ದೇಶದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರವಾಗಿ ಚರ್ಚೆ ನಡೆಯಲಿದೆ.

    ಸಭೆಯ ಮುಖ್ಯ ವಿಷಯವಾಗಿ ರಾಷ್ಟ್ರೀಯ ಪೌರತ್ವ ನೊಂದಣಿ ವಿಷಯ ಪರಿಗಣಿಸಿದ್ದು, ಇದರ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುವ ರೂಪುರೇಷೆಗಳ ಬಗ್ಗೆ ಚರ್ಚೆ ಆಗಲಿದೆ. ಈಗಾಗಲೇ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿದ್ದು, ಅವರೊಂದಿಗೆ ಕಾಂಗ್ರೆಸ್ ಒಟ್ಟಾಗಿ ಹೋರಾಟ ನಡೆಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಜೊತೆಗೆ ಲೋಕಸಭೆಗೆ ಮುನ್ನ ಎದುರಾಗುವ ರಾಜಸ್ಥಾನ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ಚುನಾವಣೆ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ.

    ಚುನಾವಣೆ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸುವುದು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಸೇರಿದಂತೆ ಎನ್ ಆರ್ ಸಿ ಮುಂದಿಟ್ಟುಕೊಂಡು ಬಿಜೆಪಿ ಬಗ್ಗು ಬಡೆಯಲು ಕಾಂಗ್ರೆಸ್ ಪ್ಲಾನ್ ರೂಪಿಸಲಿದೆ. ರಾಜ್ಯದಲ್ಲಿ ಸ್ಥಳೀಯ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಕೆ.ವೇಣುಗೋಪಾಲ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ.

    ಈಗಾಗಲೇ ಲೋಕಸಭೆ ಮೈತ್ರಿ ವಿಚಾರವಾಗಿ ಸಾಕಷ್ಟು ಗೊಂದಲ ಹಾಗೂ ಸ್ವಪಕ್ಷೀಯರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಇದೇ ತಿಂಗಳ 13ಕ್ಕೆ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬೀದರ್ ನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶಿ ನಾಯಕರಿಗೆ ಆಹ್ವಾನವಿಲ್ಲ

    ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶಿ ನಾಯಕರಿಗೆ ಆಹ್ವಾನವಿಲ್ಲ

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ಕೆ ಮೋದಿ ಸೇರಿದಂತೆ ಯಾವುದೇ ಅಂತರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಿಲ್ಲ ಎಂದು ತೆಹ್ರಿಕ್- ಇ-ಇನ್ಸಾಫ್ (ಪಿಟಿಐ) ಪಕ್ಷ ಸ್ಪಷ್ಟಪಡಿಸಿದೆ.

    ಕಳೆದ ಕೆಲ ದಿನಗಳ ಹಿಂದೆ ಭಾರತ ಪ್ರಧಾನಿ ಮೋದಿ ಸೇರಿದಂತೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರಿ ಸಂಘದ (ಸಾರ್ಕ್) ರಾಷ್ಟ್ರಗಳ ಎಲ್ಲಾ ನಾಯಕರಿಗೆ ಆಗಸ್ಟ್ 11 ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ ಸದ್ಯ ಈ ವರದಿಯನ್ನು ತಿರಸ್ಕರಿಸಲಾಗಿದ್ದು, ಭದ್ರತೆಯ ಕಾರಣದಿಂದ ಯಾವುದೇ ನಾಯಕರಿಗೆ ಆಹ್ವಾನ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

    ಇಮ್ರಾನ್ ಖಾನ್ ಮುಂದಾಳತ್ವದ ತೆಹ್ರಿಕ್- ಇ-ಇನ್ಸಾಫ್ ಪಕ್ಷದ ವಕ್ತಾರರು ಭಾರತದ ಕಪಿಲ್ ದೇವ್, ನಟ ಅಮೀರ್ ಖಾನ್, ಸುನೀಲ್ ಗವಾಸ್ಕರ್ ಸೇರಿದಂತೆ ನವಜೋತ್ ಸಿಂಗ್ ಸಿದ್ದು ಅವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಸದ್ಯ ಪಿಟಿಐ ಹಿರಿಯಾ ನಾಯಕ ಫೈಸಲ್ ಜಾವೇದ್ ನಾವು ಯಾವುದೇ ಸ್ಟಾರ್ ಅಥವಾ ರಾಜಕೀಯ ನಾಯಕರಿಗೆ ಆಹ್ವಾನ ನೀಡಿಲ್ಲ. ಸಮಾರಂಭದಲ್ಲಿ ಕೇವಲ ದೇಶದ ನಾಯಕರಷ್ಟೇ ಭಾಗವಹಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಹಿಂದೆ ಪಿಟಿಐ ವಕ್ತಾರರೊಬ್ಬರು ವಿದೇಶಿ ನಾಯಕರು ಸೇರಿದಂತೆ ಕೆಲ ಸ್ಟಾರ್ ಗಳಿಗೆ ಆಹ್ವಾನ ನೀಡಿದ್ದಾಗಿ ಹೇಳಿದ್ದರು.

    ಬಹುದೊಡ್ಡ ಸಮಾರಂಭ ಮಾಡುವುದರಿಂದ ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ. ಅದ್ದರಿಂದ ಸರಳ ಸಮಾರಂಭ ಮಾಡುತ್ತೇವೆ ಎಂದು ಪಿಟಿಐ ಮುಖಂಡರೊಬ್ಬರು ಹೇಳಿದ್ದಾರೆ. ಈ ಹಿಂದೆ ಚುನಾವಣೆ ಸಮಯದಲ್ಲಿ ಇಮ್ರಾನ್ ಖಾನ್ ಅನಗತ್ಯ ದುಂದುವೆಚ್ಚ ಮಾಡುವುದಿಲ್ಲ. ಅಲ್ಲದೇ ಪ್ರಧಾನಿ ನಿವಾಸವನ್ನು ಬಳಕೆ ಮಾಡುವುದಿಲ್ಲ ಎಂದು ಭಾಷಣವೊಂದರಲ್ಲಿ ತಿಳಿಸಿದ್ದರು.

    ಇಮ್ರಾನ್ ರ ಈ ಹೇಳಿಕೆಯನ್ನು ಅಲ್ಲಗೆಳೆದಿರುವ ಪಾಕ್ ಮಾಧ್ಯಮಗಳು ಪ್ರಧಾನಿ ನಿವಾಸಿದಲ್ಲಿ ಸರಿಯಾದ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ಮಾಡಿದೆ. ಅಲ್ಲದೇ ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರಿಗೆ ಆಹ್ವಾನ ನೀಡದಿರಲು ಭದ್ರತೆಯ ಕೊರತೆಯೇ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಜುಲೈ 25ರಂದು ನಡೆದ ಪಾಕಿಸ್ತಾನ ನಡೆದ ಸಂಸತ್ ಚುನಾವಣೆಯಲ್ಲಿ ಪಿಟಿಐ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ವೇಳೆ ನರೇಂದ್ರ ಮೋದಿ, ಇಮ್ರಾನ್ ಖಾನ್‍ಗೆ ಫೋನ್ ಕರೆ ಮಾಡಿ ವಿಜಯೋತ್ಸವದ ಶುಭಾಶಯ ತಿಳಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ ಇಮ್ರಾನ್ ಖಾನ್ ಅವರು, ದ್ವಿಪಕ್ಷೀಯ ನಿಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿ, ಹೊಸ ಅಧ್ಯಾಯ ಬರೆಯಬೇಕು ಎಂದು ಹೇಳಿದ್ದರು.

    2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಆಹ್ವಾನಿಸಿದ್ದರು.

  • ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ – ಬಿಜೆಪಿ ಸಂಸದ

    ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ – ಬಿಜೆಪಿ ಸಂಸದ

    ದಾವಣಗೆರೆ: ಮಾಜಿ ಪ್ರಧಾನಿ ವಾಜಪೇಯಿ ಅವರು ಹಲವು ಅಭಿವೃದ್ಧಿಪರ ಕಾರ್ಯಗಳನ್ನು ಕೈಗೊಂಡರು ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿತು. ಸದ್ಯ ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ ಎಂದು ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಹೇಳಿದ್ದಾರೆ.

     

    ನಗರದ ಜಿಎಂಐಟಿ ಕಾಲೇಜ್ ನಲ್ಲಿ ನಡೆದ ರಾಜ್ಯ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರು ದೇಶದ ಜನತೆಗೆ ಸರ್ವ ಶಿಕ್ಷಣ ಅಭಿಯಾನ, ಗ್ರಾಮ ಸಡಕ್ ಯೋಜನೆಯಂತಹ ಅನೇಕ ಉತ್ತಮ ಯೋಜನೆಗಳನ್ನು ನೀಡಿದ್ದರು. ಆದರೆ ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿತು. ಸದ್ಯ ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಗೂ ಬರಲಿದೆ ಎಂದರು.

    ಮೋದಿ ಅವರು ದಿನದ 15 ಗಂಟೆ ಕಾರ್ಯನಿರ್ವಹಿಸುತ್ತಾರೆ. ಇದುವರೆಗೂ ಒಂದು ರಜೆಯನ್ನು ತೆಗೆದುಕೊಂಡಿಲ್ಲ. ಪ್ರಧಾನಿಗಳು ಘೋಷಣೆ ಮಾಡಿದ ಎಲ್ಲಾ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ. ಅಂತಹ ನಾಯಕರು ನಮಗೇ ಸಿಕ್ಕಿದ್ದಾರೆ. ಆದರೆ ಮೋದಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಇನ್ನು ಮಾಹಿತಿ ತಲುಪಿಲ್ಲ. ಈಗಲೂ ಮೋದಿ ಅವರು ಮಾಡಿದ ಕಾರ್ಯಗಳ ಬಗ್ಗೆ ಜನತೆ ಮಾಹಿತಿ ನೀಡದಿದ್ದರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಯವರಿಗೂ ಆಗಲಿದೆ. ಅದ್ದರಿಂದ ಮೋದಿ ಸರ್ಕಾರದ ಸಾಧನೆ ಬಗ್ಗೆ ಜನತೆಗೆ ತಿಳಿಸಿ ಎಂದು ಸಲಹೆ ನೀಡಿದರು.

  • ಹುಬ್ಬಳ್ಳಿ ಶನಿದೇವಾಲಯಕ್ಕೆ ಪ್ರಧಾನಿ ಮೋದಿ ಸಹೋದರ ಭೇಟಿ

    ಹುಬ್ಬಳ್ಳಿ ಶನಿದೇವಾಲಯಕ್ಕೆ ಪ್ರಧಾನಿ ಮೋದಿ ಸಹೋದರ ಭೇಟಿ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಪ್ರಮೋದ್ ಮೋದಿ ಅವರು ವಾಣಿಜ್ಯ ನಗರಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ನಗರದ ಶನಿ ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆದಿದ್ದಾರೆ.

    ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪ್ರಮೋದ್ ಮೋದಿ, ಕರ್ನಾಟಕದ ಜನರು ಗುಜರಾತ್ ಜನರಿಗಿಂತ ಹೆಚ್ಚು ಪ್ರೀತಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಇಲ್ಲಿ ಆಗಮಿಸಿದ್ದೇನೆ. ಇಲ್ಲಿನ ಜನರ ಆತ್ಮೀಯತೆ ಅದ್ಭುತ. ಈ ಹಿಂದೆ ಚುನಾವಣೆಯಲ್ಲೂ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತ ನೀಡಿದ್ದಾರೆ. ಇಲ್ಲಿಗೆ ಭೇಟಿ ನೀಡಿಲು ಬಹಳ ಸಂತಸವಾಗುತ್ತದೆ ಎಂದರು.

    ಇದೇ ವೇಳೆ ಚಂದ್ರಗ್ರಹಣ ದಿನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೂ ನನಗೂ ಸಂಬಂಧವಿಲ್ಲ. ಹುಬ್ಬಳ್ಳಿಗೆ ಭೇಟಿ ನೀಡಿದ್ದ ಕಾರಣ ದೇವಾಲಯಕ್ಕೂ ಭೇಟಿ ನೀಡಿದ್ದೇನೆ ಎಂದರು.

    ಧಾರವಾಡದ ಗಾಣಿಗಾರ ಸಮಾವೇಶದಲ್ಲಿ ಭಾಗಿಯಾಗಲು ಪ್ರಮೋದ್ ಮೋದಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಶನಿದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಪ್ರಮೋದ್ ಅವರಿಗೆ ಸನ್ಮಾನ ಮಾಡಿ ಸ್ವಾಗತಿಸಿದರು. ಸನ್ಮಾನ ಸ್ವೀಕರಿಸಿ ಅಲ್ಲಿಂದ ಧಾರವಾಡಕ್ಕೆ ತೆರಳಿದರು.

    ಗ್ರಹಣದ ಸಂಬಂಧ ದೇವಾಲಯಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. ತಮ್ಮ ವಿಶೇಷ ಆಹ್ವಾನದ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿದ್ದರು ಅಷ್ಟೇ. ಭೇಟಿ ವೇಳೆ ದೇವಾಲಯದ ವಿಶೇಷತೆಗಳ ಕುರಿತು ಮಾಹಿತಿ ಕೇಳಿ ಪಡೆದರು ಅಂತ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

  • ನನ್ನನ್ನು ಕಂಡ್ರೆ ಬಿಜೆಪಿಯವರು ಓಡಿ ಹೋಗ್ತಿದ್ದಾರೆ- ರಾಹುಲ್ ಗಾಂಧಿ

    ನನ್ನನ್ನು ಕಂಡ್ರೆ ಬಿಜೆಪಿಯವರು ಓಡಿ ಹೋಗ್ತಿದ್ದಾರೆ- ರಾಹುಲ್ ಗಾಂಧಿ

    ನವದೆಹಲಿ: ನನ್ನನ್ನು ಕಂಡರೆ ಎಲ್ಲಿ ಅಪ್ಪಿಕೊಳ್ಳುತ್ತಾರೋ ಅಂತಾ ಬಿಜೆಪಿಯವರು ದೂರ ಸರಿಯುತ್ತಿದ್ದಾರೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದಾರೆ.

    ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಅಪ್ಪಿಕೊಂಡ ವಿಚಾರದ ಬಗ್ಗೆ ಈಗಲೂ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ಇದೀಗ ಮೋದಿ ಆಲಿಂಗನವನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ.

    ಕರಣ್ ಥಾಪರ್ ಅವರ ಡೆವಿಲ್ಸ್ ಅಡ್ವೋಕೇಟ್ ಅನ್ ಟೋಲ್ಡ್ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿಯೇ ಉಪಸ್ಥಿತರಿದ್ದ ಅಡ್ವಾಣಿ ಅವರನ್ನು ಉದ್ದೇಶಿಸಿ ರಾಜಕೀಯವಾಗಿ ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ಹಾಗಂತ ದ್ವೇಷ ಸಾಧಿಸಲ್ಲ. ಅವರನ್ನ ಅಪ್ಪಿಕೊಂಡು ಪ್ರೀತಿ ತೋರುತ್ತೇನೆ ಅಂತ ಹೇಳುವ ಮೂಲಕ ತಾನು ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡ ವಿಚಾರವನ್ನು ಸಮರ್ಥಿಸಿಕೊಂಡರು.

    ಇದೇ ವೇಳೆ ನಾನು ಮೋದಿಯವರನ್ನು ಅಪ್ಪಿಕೊಂಡ ಬಳಿಕ ಇದೀಗ ಬಿಜೆಪಿಯವರು ನನ್ನ ಕಂಡ್ರೆ ಎಲ್ಲಿ ಅಪ್ಪಿಕೊಳ್ಳುತ್ತಾನೋ ಅಂತ ದೂರ ಸರಿಯುತ್ತಾರೆ ಅಂತ ರಾಹುಲ್ ತಮಾಷೆಯ ಮಾತುಗಳನ್ನಾಡಿದ್ರು.

    ಕಳೆದ ಶುಕ್ರವಾರ ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರನ್ನು ಸೋಲಿಸಲು ನಿಮ್ಮ ಪಕ್ಷದಲ್ಲಿಯೇ ಷಡ್ಯಂತ್ರ ರಚಿತವಾಗಿದೆ. ಬಿಜೆಪಿ, ಆರ್ ಎಸ್‍ಎಸ್ ಗಳಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ನನಗೆ ಹಿಂದೂಸ್ತಾನ್, ಭಾರತ, ಹಿಂದೂ, ನನ್ನ ಧರ್ಮದ ಬಗ್ಗೆ ಹೇಳಿಕೊಟ್ಟಿದ್ದೀರಿ. ನಾನು ಈ ವಿಷಯಕ್ಕಾಗಿ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳುತ್ತಾ ನೇರವಾಗಿ ಮೋದಿಯವರ ಬಳಿ ತೆರಳಿ ಅಪ್ಪಿಕೊಂಡು ಕೈ ಕುಲುಕಿ ಬರುವ ಮೂಲಕ ಲೋಕಸಭೆಯಲ್ಲಿ ಅಚ್ಚರಿ ಮೂಡಿಸಿದ್ದರು.

  • ಜುಲೈ 29ರ ಚಿಕ್ಕೋಡಿಯ ಮೋದಿ ಸಮಾವೇಶ ಮುಂದೂಡಿಕೆ

    ಜುಲೈ 29ರ ಚಿಕ್ಕೋಡಿಯ ಮೋದಿ ಸಮಾವೇಶ ಮುಂದೂಡಿಕೆ

    ಚಿಕ್ಕೋಡಿ: ಜಿಲ್ಲೆಯಲ್ಲಿ ಇದೇ ಜುಲೈ 29ರಂದು ನಡೆಯಬೇಕಿದ್ದ ಸಮಾವೇಶವನ್ನು ಮುಂದೂಡಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಾರೆ ಎಂದು ಹೇಳಲಾಗಿದ್ದು, ಇದೀಗ ಅವರು ರಾಜ್ಯ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

    ಮಳೆ, ನೆರೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸ್ಪಷ್ಟಪಡಿಸಿದ್ದಾರೆ.

    ಜುಲೈ 29ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಿಕ್ಕೋಡಿಗೆ ಆಗಮಿಸಿ, ರೈತರ ಬೆಳೆಗೆ ಪ್ರೋತ್ಸಾಹ ಧನ ಘೋಷಣೆಯ ಹಿನ್ನೆಯಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದರು. ವಿಧಾನ ಸಭೆ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಪ್ರಚಾರ ಕಾರ್ಯಕ್ರಮ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ರೈತರ ಸಮಾವೇಶ ಚಿಕ್ಕೋಡಿಯಲ್ಲಿ ಮಾಡಲು ಪ್ರಧಾನಿ ನಿರ್ಧಾರ ಮಾಡಿದ್ದರು. ಆದ್ರೀಗ ದಿಢೀರ್ ರಾಜ್ಯ ಪ್ರವಾಸ ರದ್ದು ಮಾಡಿದ್ದಾರೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ರೈತರ 50 ಬೃಹತ್ ರ‍್ಯಾಲಿಗಳನ್ನು ನಡೆಸಲು ಮುಂದಾಗುತ್ತಿದ್ದಾರೆ ಎಂದು ವರದಿಯಾಗಿತ್ತು.

  • ಮೆಚ್ಯೂರಿಟಿ, ಜವಾಬ್ದಾರಿ ಇಲ್ಲದ ನಾಯಕರು ಹೇಗೆ ವರ್ತಿಸ್ತಾರೆ ಎಂಬುದಕ್ಕೆ ರಾಹುಲ್ ನಿದರ್ಶನ: ಯಡಿಯೂರಪ್ಪ

    ಮೆಚ್ಯೂರಿಟಿ, ಜವಾಬ್ದಾರಿ ಇಲ್ಲದ ನಾಯಕರು ಹೇಗೆ ವರ್ತಿಸ್ತಾರೆ ಎಂಬುದಕ್ಕೆ ರಾಹುಲ್ ನಿದರ್ಶನ: ಯಡಿಯೂರಪ್ಪ

    ಶಿವಮೊಗ್ಗ: ಸಂಸತ್ತಿನಲ್ಲಿ ಅವಿಶ್ವಾಸ ಮಂಡನೆ ವೇಳೆ ಮೋದಿ ತಬ್ಬಿಕೊಂಡ ರಾಹುಲ್ ಗಾಂಧಿ ವರ್ತನೆಯನ್ನು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಖಂಡಿಸಿದ್ದಾರೆ.

    ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಆ ಸ್ಥಾನಕ್ಕೆ ಶೋಭೆತರುವುದಿಲ್ಲ. ಮೆಚ್ಯೂರಿಟಿ ಇಲ್ಲದ, ಜವಾಬ್ದಾರಿ ಇಲ್ಲದ ನಾಯಕರು ಹೇಗೆ ವರ್ತನೆ ಮಾಡುತ್ತಾರೆ ಎಂಬುದಕ್ಕೆ ರಾಹುಲ್ ಗಾಂಧಿ ನಡೆ ಒಂದು ನಿದರ್ಶನ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾತನ್ನು ಮುಗಿಸದೆ ಪ್ರಧಾನಿಯನ್ನು ತಬ್ಬಿಕೊಂಡು ಆಸನಕ್ಕೆ ಮರಳಿ ಕಣ್ ಹೊಡೆಯುವುದು ಅಸಭ್ಯ ವರ್ತನೆ ಎಂದರು.

    ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದರು. ಆದರೆ ತಮ್ಮ ಭಾಷಣ ಮುಗಿದ ಬಳಿಕ ರಾಹುಲ್ ನೇರ ಪ್ರಧಾನಿಗಳ ಬಳಿಗೆ ತೆರಳಿ ಅಪ್ಪಿಕೊಂಡಿದ್ದರು. ಈ ನಡೆಯ ಕುರಿತು ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಸಚಿವ ಅನಂತ್ ಕುಮಾರ್ ಸೇರಿದಂತೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ರಾಹುಲ್ ಅಪ್ಪುಗೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.

  • 50 ರಿಂದ 100 ಕೋಟಿ ಕೊಟ್ಟು ಕರ್ನಾಟಕದಲ್ಲಿ ನಮ್ಮ ಶಾಸಕರ ಖರೀದಿಗೆ ಯತ್ನಿಸಿದ್ರಿ – ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ಖರ್ಗೆ ಕಿಡಿ

    50 ರಿಂದ 100 ಕೋಟಿ ಕೊಟ್ಟು ಕರ್ನಾಟಕದಲ್ಲಿ ನಮ್ಮ ಶಾಸಕರ ಖರೀದಿಗೆ ಯತ್ನಿಸಿದ್ರಿ – ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ಖರ್ಗೆ ಕಿಡಿ

    ನವದೆಹಲಿ: ಕರ್ನಾಟಕ ವಿಧಾನಸಭೆ ಬಳಿಕ ಬಹುಮತ ಸಾಬೀತು ಪಡಿಸಲು ಬಿಜೆಪಿಯವರು ಶಾಸಕರ ಖರೀದಿಗೆ ಮುಂದಾಗಿದ್ದರು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

    ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ವೇಳೆ ಮಾತನಾಡಿದ ಅವರು, ಬಿಜೆಪಿ ನಾಯಕರು ದೂರವಾಣಿ ಕರೆ ಮಾಡಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದರು. ನಮ್ಮ ಹತ್ತಿರ ಅವರು ನಡೆಸಿದ ಸಂಭಾಷಣೆಯ ಧ್ವನಿಯ ಮುದ್ರಣವಿದೆ ಎಂದು ದೂರಿದರು. ಆದರೆ ಈ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ನಿಮ್ಮ ಸಮಯ ಮುಗಿದಿದೆ. ನೀವು ಹೊರಗೆ ಈ ಆರೋಪ ಮಾಡಿ, ಲೋಕಸಭೆಯಲ್ಲಿ ಆರೋಪ ಸಲ್ಲದು ಎಂದು ಸೂಚಿಸಿದ್ದರು. ಆದರೆ ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಹಿಂದಿನ ಸಾಲಿನಲ್ಲಿ ಕುಳಿತಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಖರ್ಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿ, ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ಹೀಗಾಗಿ ಆರೋಪ ಮಾಡುತ್ತಿದ್ದೇವೆ ಎಂದು ಗರಂ ಆದರು.

    ಕಾಂಗ್ರೆಸ್ ರಾಷ್ಟ್ರದ ಬಹು ದೊಡ್ಡ ಪಕ್ಷ. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಉಳಿದ ಪಕ್ಷಗಳಿಗೆ 30 ನಿಮಿಷ ಕಾಲಾವಕಾಶ ನೀಡಿದ್ದು, ಕಾಂಗ್ರೆಸ್ ಪಕ್ಷಕ್ಕೂ ಅಷ್ಟೇ ಸಮಯ ನಿಗಧಿಯಾಗಿದೆ. ಹೀಗಾಗಿ 130 ಕೋಟಿ ಜನರಿಗೆ ಬಿಜೆಪಿಯ ಭ್ರಷ್ಟಾಚಾರ ಸಾಬೀತು ಪಡಿಸಲು ಇಷ್ಟು ಸಮಯ ಸಾಲುವುದಿಲ್ಲ ಎಂದು ಹೇಳಿದರು.

    ತಮ್ಮ ಭಾಷಣದ ವೇಳೆ ಬಿಜೆಪಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ಮಾಡಲು ಹಲವು ಕ್ರಮಗಳನ್ನು ಎದುರಿಸಿದೆ ಎಂದು ಆರೋಪಿಸಿದರು. ಅಲ್ಲದೇ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು ಬಿಜೆಪಿ ಮರೆತಿದೆ ಎಂದು ತಮ್ಮ ಮಾತಿನ ಮೂಲಕ ತಿವಿದರು.

    ನಮ್ಮ ಆಡಳಿತ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಬಗೆ ಹರಿಸಲು ಹಲವು ಯೋಜನೆಗಳನ್ನು ಜಾರಿ ಮಾಡಲಾಗಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ರೈತರ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಹೆಚ್ಚಳವಾಗಿದೆ. ಆದರೆ ಅವರು ಅಂದಾನಿ, ಅಂಬಾನಿ ಬಗ್ಗೆ ಮಾತನಾಡುತ್ತಿದ್ದು, ರೈತರ ಪರ ಮಾತನಾಡಿಲ್ಲ. ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿ ಅವರು ಅಂಗೀಕರಿಸಿಲ್ಲ ಎಂದು ಆರೋಪಿಸಿದರು.

  • ಮತ್ತೊಮ್ಮೆ ಮೋದಿ ವಿಶೇಷ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜನ ಖರ್ಗೆ

    ಮತ್ತೊಮ್ಮೆ ಮೋದಿ ವಿಶೇಷ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜನ ಖರ್ಗೆ

    ನವದೆಹಲಿ: ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಪಾಲ ರಚನೆಯ ಚರ್ಚೆ ಕುರಿತ ಸಭೆಗೆ ಪ್ರಧಾನಿ ಮೋದಿ ಆಹ್ವಾನವನ್ನು ತಿರಸ್ಕರಿಸಿದ್ದು, ಸಭೆಗೆ ಗೈರು ಹಾಜರಾಗುವ ಕುರಿತು ಪತ್ರ ಬರೆದಿದ್ದಾರೆ.

    ತಮ್ಮ ಗೈರು ಹಾಜರಿಗೆ ಕಾರಣವನ್ನು ತಿಳಿಸಿರುವ ಖರ್ಗೆ ಪೂರ್ಣ ಪ್ರಮಾಣದಲ್ಲಿ ಲೋಕಪಾಲ ಆಯ್ಕೆ ಸಮಿತಿ ನೇಮಕವಾಗುವರೆಗೂ, ಕಾಂಗ್ರೆಸ್ ವಿರೋಧಿ ಪಕ್ಷವಾಗಿ ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ತಮಗೆ ನೀಡಿದ ವಿಶೇಷ ಆಹ್ವಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮಗೆ ವಿಶೇಷ ಆಹ್ವಾನಿತ ಎಂಬ ಮನ್ನಣೆ ಬೇಡ, ಅತಿ ದೊಡ್ಡ ವಿರೋಧಿ ಪಕ್ಷದ ನಾಯಕನಿಗೆ ಸಮಿತಿಯಲ್ಲಿ ಸ್ಥಾನ ನೀಡಬೇಕು. ವಿಶೇಷ ಆಹ್ವಾನದ ಮೇರೆಗೆ ಯಾವುದೇ ಅಧಿಕಾರವಿರುವುದಿಲ್ಲ. 2013 ರ ಲೋಕಪಾಲ ಕಾಯ್ದೆಯ ಸಮಿತಿ ರಚನೆಯಾಗಬೇಕು ಎಂದು ತಿಳಿಸಿದ್ದಾರೆ.

    ಒಂದೊಮ್ಮೆ ಸರ್ಕಾರಕ್ಕೆ ಲೋಕಪಾಲ ರಚನೆ ಕುರಿತು ನಿಜವಾದ ಇಚ್ಛಾಶಕ್ತಿ ಹೊಂದಿದ್ದರೆ, ವಿರೋಧ ಪಕ್ಷದ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿದಲ್ಲಿದ್ದು, ಲೋಕಪಾಲ ರಚನೆ ಮಾಡುವ ಯಾವುದೇ ಆಸಕ್ತಿಯನ್ನು ಬಿಜೆಪಿ ಹೊಂದಿಲ್ಲ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ನೇತೃತ್ವದ ಸಭೆ ಗುರುವಾರ ನಿಗದಿಯಾಗಿತ್ತು. ಈ ಹಿಂದೆಯೂ ಇದೇ ಕಾರಣ ನೀಡಿ ಮಾರ್ಚ್ 1 ಹಾಗೂ ಏಪ್ರಿಲ್ 10 ರಂದು ನಿಗದಿಯಾಗಿದ್ದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು.

  • ಅವಿಶ್ವಾಸ ಮಂಡನೆ ವಿರುದ್ಧ ಶಿವಸೇನೆ ಮತ – ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ

    ಅವಿಶ್ವಾಸ ಮಂಡನೆ ವಿರುದ್ಧ ಶಿವಸೇನೆ ಮತ – ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ

    ನವದೆಹಲಿ: ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಂಡಸಲಿಚ್ಚಿಸಿರುವ ಅವಿಶ್ವಾಸ ಮಂಡನೆ ವಿರುದ್ಧ ಮತ ನೀಡಿ, ಬಿಜೆಪಿಗೆ ಬೆಂಬಲ ನೀಡಲು ಶಿವಸೇನೆ ಮುಂದಾಗಿದೆ.

    ಶಿವಸೇನೆ ಪಕ್ಷ ತನ್ನ ಸಂಸದರಿಗೆ ಈ ಕುರಿತು ವಿಪ್ ಜಾರಿ ಮಾಡಿದ್ದು, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಲು ಸೂಚಿಸಿದೆ.

    ಇದಕ್ಕೂ ಮುನ್ನ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಬೆಂಬಲ ನೀಡಲು ಮನವಿ ಮಾಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು, ಇದರ ಬೆನ್ನಲ್ಲೇ ಸದ್ಯ ಶಿವಸೇನೆ ವಿಪ್ ಜಾರಿ ಮಾಡಿದೆ.

    ಶಿವಸೇನೆ ಪಕ್ಷದ ನಿರ್ಣಯಕ್ಕೂ ಮುನ್ನ ತಮಿಳುನಾಡು ಸಿಎಂ ಕೆ ಪಳಣಿಸ್ವಾಮಿ ಅವರು ಎಐಎಂಡಿಕೆ ಪಕ್ಷ ಅವಿಶ್ವಾಸ ನಿರ್ಣಯ ವಿರುದ್ಧ ಮತ ಚಲಾಯಿಸುವುದಾಗಿ ಪರೋಕ್ಷವಾಗಿ ತಿಳಿಸಿದ್ದರು.

    ಅಂದಹಾಗೇ ತೆಲುಗುದೇಶಂ ಪಕ್ಷವೂ ಆಂಧ್ರ ಪ್ರದೇಶದ ವಿಶೇಷ ಸ್ಥಾನಮಾನ ಆಗ್ರಹಿಸಿ ಸಂಸತ್ ನಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕಲ್ಪಿಸಿವಂತೆ ಮನವಿ ಮಾಡಿತ್ತು. ಇದರಂತೆ ಮನ್ಸೂನ್ ಅಧಿವೇಶನದ ಮೊದಲ ದಿನವಾದ ಬುಧವಾರದಂದು ಸ್ಪೀಕರ್ ಸುಮಿತ್ರಾ ಮಹಾಜನ್ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಶುಕ್ರವಾರ ಅವಕಾಶ ನೀಡಿದ್ದರು.

    ಈ ಹಿಂದೆ ಹಲವು ಬಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ 2019ರ ಲೋಕಸಭಾ ಚುನಾವಣೆಯ ವೇಳೆ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅಲ್ಲದೇ ಮಹಾರಾಷ್ಟ್ರ ಚುನಾವಣೆಯ ವೇಳೆಯೂ ಏಕಾಂಗಿಯಾಗಿ ಸ್ಪರ್ಧೆ ಮಾಡುವ ನಿರ್ಣಯವನ್ನು ಶಿವಸೇನೆ ಪಕ್ಷ ಘೋಷಿಸಿತ್ತು.