Tag: prime minister modi

  • ಸಾಲಮನ್ನಾ ಲಾಲಿಪಪ್ ಎಂಬ ಪ್ರಧಾನಿ ಹೇಳಿಕೆಗೆ ಎಚ್‍ಡಿಕೆ ತಿರುಗೇಟು

    ಸಾಲಮನ್ನಾ ಲಾಲಿಪಪ್ ಎಂಬ ಪ್ರಧಾನಿ ಹೇಳಿಕೆಗೆ ಎಚ್‍ಡಿಕೆ ತಿರುಗೇಟು

    ಬೆಂಗಳೂರು: ಮುಂದಿನ ಬಜೆಟ್ ನಲ್ಲಿ ರೈತರ ಬೆಳೆ ಸಾಲಮನ್ನಾ ಘೋಷಣೆಯ 46 ಸಾವಿರ ಕೋಟಿ ರೂ. ಗಳನ್ನು ಒಂದು ಕಂತಿನಲ್ಲಿ ಮನ್ನಾ ಮಾಡಲಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

    ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸಾಲಮನ್ನಾ ಲಾಲಿಪಪ್ ಎಂಬ ಪ್ರಧಾನಿ ಮಾತಿಗೆ ತಿರುಗೇಟು ನೀಡಿದರು. ಫೆಬ್ರವರಿ 8 ರಂದು ಬಜೆಟ್ ಮಂಡಿಸಲಿದ್ದು ರೈತರ ಸಂಪೂರ್ಣ ಸಾಲಮನ್ನಾ ಒಂದೇ ಕಂತಿನಲ್ಲಿ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದರು.

    ದೇಶದ ಪ್ರಧಾನಿಗಳಿರುವ ಮೋದಿ ಅವರಿಗೆ ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುತ್ತದೆ. ಆದರೆ ಪ್ರಧಾನಿ ಸ್ಥಾನದಲ್ಲಿ ಕುಳಿತ ಅವರು ಆ ಸ್ಥಾನಕ್ಕೆ ಗೌರವ ನೀಡಿ ರೈತರ ಸಾಲಮನ್ನಾ ಬಗ್ಗೆ ಮಾತನಾಡಬೇಕು. ಆದರೆ ಸಾಲಮನ್ನಾ ಕುರಿತು ಲಘುವಾಗಿ ಮಾತನಾಡಿದ್ದಾರೆ. ಇದು ಆ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಕಿಡಿಕಾರಿದರು.

    ಇದೇ ವೇಳೆ ಲೋಕಸಭೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಗೆಲ್ಲಿಸುವಂತೆ ಮನವಿ ಮಾಡಿದ ಸಿಎಂ ಕುಮಾರಸ್ವಾಮಿ, ಲೋಕಸಭೆಯಲ್ಲಿ ಜೆಡಿಎಸ್‍ಗೆ 10-12 ಸೀಟು ಗೆಲ್ಲಿಸಿಕೊಟ್ಟರೆ ಮೋದಿ ದೇವೇಗೌಡರ ಮನೆ ಬಾಗಿಲಿಗೆ ಬರುತ್ತಾರೆ. ದೆಹಲಿ ನಾಯಕರು ಕರ್ನಾಟಕದ ಬಾಗಿಲಿಗೆ ಬರುತ್ತಾರೆ. ಹೀಗಾಗಿ ಪಕ್ಷದ ಎಲ್ಲಾ ನಾಯಕರು, ಮುಖಂಡರು ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

    ಸಿಎಂ ಹುದ್ದೆ ನನಗೆ ದೇವರು ಕೊಟ್ಟ ಅಧಿಕಾರ ಎಂದು ಮತ್ತೊಮ್ಮೆ ಹೇಳಿದ ಸಿಎಂ, ಕಾಂಗ್ರೆಸ್ ಅವರಿಗೆ ಆ ದೇವರೇ ಮನಸ್ಸು ಕೊಟ್ಟು ನನಗೆ ಅಧಿಕಾರ ಕೊಡಿಸಿದ್ದಾನೆ. ಯಾರು ಏನೇ ಹೇಳಿದರು ಇದು ದೈವ ಶಕ್ತಿಯ ಅಧಿಕಾರವಾಗಿದೆ. ಬಿಜೆಪಿ ನಾಯಕರು ಸರ್ಕಾರ ಬಿದ್ದು ಹೋಗುತ್ತೆ ಎಂದು ಹೇಳುತ್ತಾರೆ. ಶಾಸಕ ಉಮೇಶ್ ಕತ್ತಿ ಸರ್ಕಾರ ಹೋಗುತ್ತೆ ಅಂದರು. ಹೀಗಾಗಿ ಪಾಪ ಅವರಿಗೆ ಅನುಕೂಲ ಆಗಲಿ ಎಂದು ನಾನು ವಿದೇಶಕ್ಕೆ ಹೋಗಿದ್ದೆ. ಆದರೆ ಏನು ಆಗಿಲ್ಲ. ದೇವರು ನಮ್ಮ ಜೊತೆ ಇದ್ದಾನೆ. ಮನುಷ್ಯ ಊಹಿಸುವುದು ಒಂದು. ಆದರೆ ದೈವದ ಇಚ್ಚೆ ಇನ್ನೊಂದು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ವಿರುದ್ಧ ಪತ್ರ ಚಳುವಳಿ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

    ಪ್ರಧಾನಿ ಮೋದಿ ವಿರುದ್ಧ ಪತ್ರ ಚಳುವಳಿ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

    ಬೆಳಗಾವಿ: ರಾಮ ಮಂದಿರ ನಿರ್ಮಾಣ ಸುಗ್ರೀವಾಜ್ಞೆ ಕುರಿತು ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆಯನ್ನು ವಿರೋಧಿಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದು, ಚುನಾವಣೆ ದಿನಾಂಕ ಘೋಷನೆಗೂ ಮುನ್ನ ಸುಗ್ರೀವಾಜ್ಞೆ ಜಾರಿ ಮಾಡದಿದ್ದರೆ ಪತ್ರ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುತಾಲಿಕ್, ಅಯೋಧ್ಯೆ ರಾಮಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ ಎಂಬ ಪ್ರಧಾನಿಗಳ ಹೇಳಿಕೆಯನ್ನು ನಾನು ಒಪ್ಪೋದಿಲ್ಲ. ಶ್ರೀ ರಾಮ ಸೇನೆ ಈ ಹೇಳಿಕೆಯನ್ನ ವಿರೋಧಿಸುತ್ತದೆ. ಶ್ರೀ ರಾಮ ಜನ್ಮ ಸ್ಥಳದಲ್ಲಿ ಮೋದಿ ಮಂದಿರ ನಿರ್ಮಾಣ ಮಾಡುತ್ತಾರೆ ಎನ್ನುವುದು ಹಿಂದೂಗಳ ಇಚ್ಛೆ ಆಗಿತ್ತು. ಆದರೆ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಮಾಡುವುದಿಲ್ಲ ಎನ್ನುವ ಮೋದಿ ಅವರ ಹೇಳಿಕೆ ಸರಿಯಲ್ಲ ಎಂದರು.

    ಸುಪ್ರೀಂ ಕೋರ್ಟ್ ಈ ಬಗ್ಗೆ ಹೇಳುವುದಾದರೆ ಆಂದೋಲನ ಏಕೆ ಮಾಡಬೇಕಿತ್ತು. ರಾಮಮಂದಿರ ಆಂದೋಲನದಿಂದ ಬಿಜೆಪಿ ಪಕ್ಷ ಹಾಗೂ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂಬುವುದನ್ನು ಮರೆತಂತೆ ಇದೆ. ಅಧಿಕಾರಕ್ಕೆ ಬಂದ ಬಳಿಕ ರಾಮ ಮಂದಿರ ನಿರ್ಮಾಣ ಮಾಡುವ ವಿಶ್ವಾಸ ಇತ್ತು. ಆದರೆ ಅವರ ಈ ನಿರ್ಧಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ತಿಳಿಸಿದರು.

    2019ರ ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆ ಬಿಜೆಪಿ ಪಕ್ಷಕ್ಕೆ ಬಹಳ ಹೊಡೆತ ಬೀಳಲಿದೆ ಎಂದು ಭವಿಷ್ಯ ನುಡಿದ ಮುತಾಲಿಕ್, ರಾಮ ಮಂದಿರ ನಿರ್ಮಾಣ ವಿಳಂಬಕ್ಕೆ ಕಾಂಗ್ರೆಸ್ ಪಕ್ಷದ ವಕೀಲರು ಕಾರಣ ಎಂಬ ಸಬೂಬು ಹೇಳುವುದು ಬೇಡ. ಬೇರೆ ಅವರ ಮೇಲೆ ಆಪಾದನೆ ಮಾಡಿ ಮೋದಿ ಅವರು ತಪ್ಪಿಸಿಕೊಳ್ಳಬಾರದು. ಲೋಕಸಭಾ ಚುನಾವಣೆಗೆ ದಿನಾಂಕ ಸೂಚಿಸಿವ ಮುನ್ನ ಕೇಂದ್ರ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ತಂದು ಮಂದಿರ ನಿರ್ಮಾಣ ಮಾಡುವಂತೆ ಆಗ್ರಹ ಮಾಡುತ್ತೇವೆ. ಇಲ್ಲವಾದಲ್ಲಿ ಮೋದಿ ಅವರ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಪತ್ರ ಚಳುವಳಿ ಆರಂಭಿಸುತ್ತೇವೆ. ಒಂದು ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ಪ್ರಧಾನಿ ಮೋದಿ ಅವರ ಮನೆ ಬಾಗಿಲಿಗೆ ಬೀಳುವಂತೆ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮಮಂದಿರ ಸುಗ್ರೀವಾಜ್ಞೆಯ ಪ್ರಧಾನಿಗಳ ಹೇಳಿಕೆಗೆ ನಮ್ಮ ಸ್ವಾಗತವಿದೆ: ಪೇಜಾವರ ಶ್ರೀ

    ರಾಮಮಂದಿರ ಸುಗ್ರೀವಾಜ್ಞೆಯ ಪ್ರಧಾನಿಗಳ ಹೇಳಿಕೆಗೆ ನಮ್ಮ ಸ್ವಾಗತವಿದೆ: ಪೇಜಾವರ ಶ್ರೀ

    ಬೆಂಗಳೂರು: ಅಯೋಧ್ಯೆ ರಾಮಮಂದಿರ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ನಮ್ಮ ಸ್ವಾಗತವಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕಾನೂನು ಮೀರಿ ಯಾವುದನ್ನು ಮಾಡಬಾರದು. ಈ ಬಗ್ಗೆ ಮೋದಿ ಅವರ ಹೇಳಿಕೆಯ ಬಗ್ಗೆ ನಮ್ಮ ಸ್ವಾಗತ ಇದೆ. ಆದರೆ ಮಂದಿರದ ನಿರ್ಮಾಣದ ಬಗ್ಗೆ ಕಾನೂನು ತಜ್ಞರು ಸಲಹೆ ಪಡೆದು ಸುಗ್ರೀವಾಜ್ಞೆ ಹೊರಡಿಸಬಹುದು. ಈ ಕುರಿತು ನಮ್ಮ ಹಂತದಲ್ಲಿ ಮತ್ತೆ ಕಾನೂನು ತಜ್ಞರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಕಾನೂನನ್ನೂ ಮೀರಿ ಯಾವುದೂ ಮಾಡಬಾರದು ಎಂಬ ಕಾರಣಕ್ಕೆ ಪ್ರಧಾನಿಗಳು ಈ ರೀತಿ ಹೇಳಿರಬಹುದು ಎಂದರು.

    ಮೋದಿ ಅವರು ಸಂವಿಧಾನದ ಒಳಗೆ ನಿರ್ಧಾರ ಮಾಡುವುದು ಎಂದು ಹೇಳಿದ್ದಾರೆ. ಆದ್ದರಿಂದ ನಾನು ರಾಮಮಂದಿರ ಬಗ್ಗೆ ಕಾನೂನು ತಜ್ಞರು ಹಾಗೂ ಸಂಘಟನೆಗಳೊಂದಿಗೆ ಬಗ್ಗೆ ಚರ್ಚೆ ನಡೆಸುತ್ತೇನೆ. ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧವಲ್ಲ ಎಂಬ ಅಭಿಪ್ರಾಯ ಇದೆ. ಈ ತಿಂಗಳ ಕೊನೆಗೆ ಕುಂಭಮೇಳ ನಡೆಯಲಿದ್ದು, ಇಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ಈ ಬಳಿಕವೇ ನನ್ನ ಖಚಿತ ಅಭಿಪ್ರಾಯವೂ ತಿಳಿಸುತ್ತೇನೆ ಎಂದರು.

    ಮೋದಿ ಹೇಳಿದ್ದೇನು?
    ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ನೀಡಿದ ಬಳಿಕ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ನ್ಯಾಯಾಲಯದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವಿಳಂಬವಾಗಲು ಕಾಂಗ್ರೆಸ್ ವಕೀಲರು ಕಾರಣ. ರಾಮಮಂದಿರ ಬಿಜೆಪಿ ಭಾವಾತ್ಮಕ ವಿಚಾರವಾಗಿದ್ದು ಅದನ್ನು ನಾವು ನಿರ್ಲಕ್ಷ್ಯ ವಹಿಸಿಲ್ಲ. ರಾಮಮಂದಿರವನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ನಾವು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವಷ್ಟೇ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು ಹೊರಡಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಕೆದಾಟಿಗಾಗಿ ಸಂಸದ ಒಗ್ಗಟ್ಟು ಪ್ರದರ್ಶನ – ನೀರಾವರಿ, ಬರ ನಿರ್ವಹಣೆ ನೆರವಿಗೆ ಪ್ರಧಾನಿ ಜೊತೆ ಸಿಎಂ ಎಚ್‍ಡಿಕೆ ಚರ್ಚೆ

    ಮೇಕೆದಾಟಿಗಾಗಿ ಸಂಸದ ಒಗ್ಗಟ್ಟು ಪ್ರದರ್ಶನ – ನೀರಾವರಿ, ಬರ ನಿರ್ವಹಣೆ ನೆರವಿಗೆ ಪ್ರಧಾನಿ ಜೊತೆ ಸಿಎಂ ಎಚ್‍ಡಿಕೆ ಚರ್ಚೆ

    ನವದೆಹಲಿ: ಮೇಕೆದಾಟು ವಿಚಾರವಾಗಿ ರಾಜ್ಯದ ಸಂಸದರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮೇಕೆದಾಟು ಯೋಜನೆಗೆ ವಿರೋಧಿಸುತ್ತಿರುವ ತಮಿಳುನಾಡು ನಡೆಯನ್ನು ಖಂಡಿಸಿದ್ದಾರೆ. ತಮಿಳುನಾಡು ಒತ್ತಡಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಮೂಲಕ ಒತ್ತಾಯಿಸಿದ್ದಾರೆ.

    ಇತ್ತ ಸಿಎಂ ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ಧಿ ಕುರಿತು ಪ್ರಧಾನಿ ಮೋದಿ ಮತ್ತು ಕೇಂದ್ರದ ಸಚಿವರ ಜೊತೆ ಗಹನ ಚರ್ಚೆ ನಡೆಸಿದ್ದಾರೆ. ಪ್ರಧಾನಿಗಳ ಭೇಟಿ ಬಳಿಕ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದ ಹಲವಾರು ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಮುಂದಿದ್ದು, ಅವುಗಳ ಒಪ್ಪಿಗೆ ಪಡೆಯಲು ದೆಹಲಿಗೆ ಬಂದಿದ್ದೆ. ಇದರ ಭಾಗವಾಗಿ ಸಚಿವರಾದ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುರೇಶ್ ಪ್ರಭು, ಪಿಯೂಷ್ ಗೋಯಲ್ ಭೇಟಿಯಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು ತಿಳಿಸಿದರು.

    ಪ್ರಮುಖವಾಗಿ ರಾಜ್ಯದ ಮಹತ್ವದ ಯೋಜನೆಯಾದ ಮೇಕೆದಾಟು ಡಿಪಿಆರ್ ಗೆ ಅನುಮತಿ ನೀಡಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದ ತಿಳಿಸಿದ್ದು, ಮಹದಾಯಿ ನ್ಯಾಯಾಧೀಕರಣ ತೀರ್ಪು ಅನುಷ್ಠಾನದ ಕಾನೂನು ತೊಡಕಿನ ಚರ್ಚೆ ನಡೆಸಲಾಯಿತು. ರಾಷ್ಟ್ರೀಯ ಯೋಜನೆಯನ್ನಾಗಿ ಕೃಷ್ಣಾ ಮೇಲ್ದಂಡೆ ಘೋಷಿಸಿ, ಬೃಹತ್ ಯೋಜನೆ ರಾಜ್ಯವೊಂದೇ ಏಕಾಂಗಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು. ಅಲ್ಲದೇ ರಾಜ್ಯದಲ್ಲಿ ತೀವ್ರವಾಗಿರುವ ಬರ ಪರಿಸ್ಥಿತಿಯಿಂದ ಸುಮಾರು 20 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಹಾಗೂ ನರೇಗಾ ಯೋಜನೆಯಡಿ ಬಾಕಿ ಇರುವ 935 ಕೋಟಿ ರೂ. ಬಾಕಿ ಬಿಡುಗಡೆಗೆ ಮನವಿ ಮಾಡಿದರು.

    ಇದಕ್ಕೂ ಮುನ್ನ ವಿತ್ತ ಸಚಿವ ಜೇಟ್ಲಿ ಅವರನ್ನು ಭೇಟಿಯಾಗಿ, ಜಿಎಸ್‍ಟಿ ಬಗ್ಗೆ ಚರ್ಚಿಸಿದರು. ಜಿಎಸ್‍ಟಿ ಜಾರಿಯಿಂದ ರಾಜ್ಯಕ್ಕೆ ಆಗುತ್ತಿರುವ ಕೊರತೆ ಬಗ್ಗೆ ಕಳವಳ ತೋಡಿಕೊಂಡಿದ್ದು, ಜಿಎಸ್‍ಟಿ ಅನುಷ್ಠಾನದಲ್ಲಿ ಪರೋಕ್ಷ ತೆರಿಗೆ ಸಂಗ್ರಹಣೆಯಾಗುತ್ತಿಲ್ಲ. ತೆರಿಗೆ ಸಂಗ್ರಹದಲ್ಲಿ ಶೇ.20 ರಷ್ಟು ಕೊರತೆಯಾಗಿದೆ. ಇದರಿಂದ ರಾಜ್ಯದ ಯೋಜನೆಗಳಿಗೆ ಹಣವೂ ಕೊರತೆ ಇದೆ. ಆದ್ದರಿಂದ ಜಿಎಸ್‍ಟಿ ಪರಿಹಾರದ ಅನುದಾನದ ನೆರವನ್ನು 2022 ರಿಂದ 2025 ಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ರಾಯಚೂರಿನ ಆರ್‍ಟಿಪಿಎಸ್, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರ ಹಾಗೂ ಯರಮರಸ್ ವಿದ್ಯುತ್ ಸ್ಥಾವರಗಳಿಗೆ ಶೀಘ್ರ ಕಲ್ಲಿದ್ದಲು ಘಟಕ ಹಂಚಿಕೆಗೆ ಮನವಿ ಮಾಡಿದ್ದು, ಬೀದರ್‍ನಿಂದ ನಾಂದೇಡ್‍ಗೆ ರೈಲ್ವೆ ಸಂಪರ್ಕ ಮತ್ತು ಬೆಂಗಳೂರಿನ ಸಬ್ ಅರ್ಬನ್ ರೈಲ್ವೇ ಯೋಜನೆಗೆ ಬಜೆಟ್‍ನಲ್ಲಿ ಪೂರ್ಣ ಅನುದಾನ ನೀಡುವಂತೆ ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಬ್ಬಳ್ಳಿ, ಧಾರವಾಡ ನಡುವೆ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

    ಹುಬ್ಬಳ್ಳಿ, ಧಾರವಾಡ ನಡುವೆ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

    – ಸಿಎಂ ಎಚ್‍ಡಿಕೆ ಭೇಟಿಗೆ ಪ್ರಧಾನಿ ಮೋದಿ ಒಪ್ಪಿಗೆ

    ನವದೆಹಲಿ: ಹುಬ್ಬಳ್ಳಿ, ಧಾರವಾಡ ಅವಳಿ ನಗರಗಳ ನಡುವೆ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿ ಒಪ್ಪಿಗೆ ಸೂಚಿಸಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ.

    ನವದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ರಾಜ್ಯದ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದರು. ಸಚಿವರ ಭೇಟಿ ವೇಳೆ ಕರ್ನಾಟಕ, ಗೋವಾ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಎ ಪ್ರಸ್ತುತ ಎರಡು ಪಥಗಳದ್ದಾಗಿದ್ದು, ಇದರ ಅಗಲೀಕರಣಕ್ಕಾಗಿ ಮುಂದಿನ 18 ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳಸಬಹುದಾದ ಪರ್ಯಾಯ ಸಂಪರ್ಕ ಮಾರ್ಗಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಪ್ರಸ್ತಾಪ ಮಾಡಲಾಯಿತು. ಬೇಲೂರು ಹಾಸನ ನಡುವೆ ರಾಷ್ಟ್ರೀಯ ಹೆದ್ದಾರಿ 373ರ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.

    ಇದೇ ವೇಳೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಬೇಲೂರು – ಹಾಸನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಮನವಿ ಮಾಡಿದರು. ಅಲ್ಲದೇ ಹಾಸನ- ಹೊಳೆನರಸೀಪುರ ಚತುಷ್ಪಥ ರಸ್ತೆ, ಚನ್ನರಾಯಪಟ್ಟಣ- ಹೊಳೆ ನರಸೀಪುರ – ಅರಕಲಗೂಡು – ಕೊಡ್ಲಿಪೇಟೆ- ಮಡಿಕೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸುವ ಬಗ್ಗೆಯೂ ಭೇಟಿ ವೇಳೆ ಚರ್ಚಿಸಲಾಯಿತು.

    ಉಳಿದಂತೆ ಕಲ್ಲಿದ್ದಲು ಪೂರೈಕೆ ವಿಚಾರವಾಗಿ ನಾಳೆ ಬೆಳಗ್ಗೆ ಪಿಯೂಶ್ ಗೋಯಲ್ ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಮಧ್ಯಾಹ್ನ 1 ಗಂಟೆಗೆ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಲಿರುವ ಸಿಎಂ, ಸಂಜೆ 5 ಗಂಟೆಗೆ ವೇಳೆಗೆ ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿಗಾಗಿ ಶಾಸಕ ಸಿ.ಟಿ ರವಿಯಿಂದ ಭಿಕ್ಷಾಟನೆ

    ಪ್ರಧಾನಿ ಮೋದಿಗಾಗಿ ಶಾಸಕ ಸಿ.ಟಿ ರವಿಯಿಂದ ಭಿಕ್ಷಾಟನೆ

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಶಾಸಕ ಸಿ.ಟಿ.ರವಿ ದತ್ತಾತ್ರೇಯ ಸ್ವಾಮಿಯ ಬಳಿ ಹರಕೆ ಕಟ್ಟಿಕೊಂಡಿದ್ದು, ಅವರಿಗಾಗಿ ಭಿಕ್ಷಾಟನೆ ಮಾಡಿದ್ದಾರೆ.

    ದತ್ತಜಯಂತಿಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಶಾಸಕ ಸಿ.ಟಿ ರವಿ ದತ್ತಾತ್ರೇಯ ಸ್ವಾಮಿ ಭಜನೆ ಮೂಲಕ ಭಿಕ್ಷಾಟನೆ ಮಾಡಿದ್ದಾರೆ. ಶಾಸಕ ಸಿ.ಟಿ.ರವಿ ಹಾಗೂ ದತ್ತ ಮಾಲಾಧಾರಿಗಳು ನಗರದ ನಾರಾಯಣಪುರದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದ್ದಾರೆ. ಪಡಿ ಸಂಗ್ರಹಕ್ಕೆ ಆಗಮಿಸಿದ ದತ್ತಭಕ್ತರಿಗೆ ಅಕ್ಕಿ, ಬೆಲ್ಲ, ವೀಳ್ಯದೆಲೆಯನ್ನು ಜನರು ನೀಡಿದ್ದಾರೆ.

    ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಪ್ರಧಾನಿ ಮೋದಿ ಅವರ ನೇತೃತ್ವ ಭಾರತಕ್ಕೆ ಅವಶ್ಯಕತೆ ಇದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದ ಭವಿಷ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಹೀಗಾಗಿ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ನಾನು ಹರಕೆ ಕಟ್ಟಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ದೇಶಕ್ಕೆ ಸ್ವಾರ್ಥ ರಹಿತ ರಾಜಕಾರಣದ ಅವಶ್ಯವಿದೆ. ನರೇಂದ್ರ ಮೋದಿ ಅವರು ನಿಸ್ವಾರ್ಥ ಅಧಿಕಾರಿಯಾಗಿ ಸ್ವಾರ್ಥ ರಹಿತ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಧಾನಿ ಆದ ನಂತರ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ಆ ಗೌರವ ಉಳಿಯಲು ಮತ್ತು ದೇಶದ ಪ್ರಗತಿಗೆ ಮೋದಿ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದೇವೆ ಎಂದು ಹೇಳಿದರು.

    ಶನಿವಾರ ಅಂದರೆ ನಾಳೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ಭಕ್ತರು ತೆರಳಲಿದ್ದಾರೆ. ಶೋಭಾಯಾತ್ರೆ ಹಾಗೂ ದತ್ತಜಯಂತಿಯಲ್ಲಿ ಭಾಗವಹಿಸುವಂತೆ ಜನರಲ್ಲಿ ಮಾಲಾಧಾರಿಗಳು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರದಿಂದ ಬಿಗ್ ಶಾಕ್

    ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರದಿಂದ ಬಿಗ್ ಶಾಕ್

    ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಬಳಿಕ ರೈತರ ಬೇಡಿಕೆಗೆ ಮಣಿದು ಕೇಂದ್ರ ಸರ್ಕಾರ ಸಾಲಮನ್ನಾ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮೋದಿ ಸರ್ಕಾರ ನಿರಾಸೆ ಮಾಡಿದೆ. ಯಾವುದೇ ಕಾರಣಕ್ಕೂ ರೈತ ಸಾಲಮನ್ನಾ ಮಾಡಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಲಿಖಿತ ಹೇಳಿಕೆ ನೀಡಿದ್ದಾರೆ.

    ಲೋಕಸಭಾ ಸದನದಲ್ಲಿ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ, ಸರ್ಕಾರ ರೈತರ ಆದಾಯ ಹೆಚ್ಚಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದ್ದರಿಂದ ರೈತರ ಸಾಲಮನ್ನಾ ಮಾಡುವುದು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಇದರಿಂದ ಬ್ಯಾಂಕ್‍ಗಳ ಮೇಲಿನ ಹೊರೆಯೂ ಹೆಚ್ಚಾಗುತ್ತದೆ. ಹೀಗಾಗಿ ರೈತರ ಸಾಲಮನ್ನಾ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಶಿವಸೇನೆಯ ಭವನ ಗವಾಲಿ ಪಾಟೀಲ್ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ರೈತರ ಸಾಲಮನ್ನಾ ಮಾಡಿದರೆ ಅವರು ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾರೆ. ಮತ್ತೆ ಮತ್ತೆ ಸಾಲಮನ್ನಾ ಮಾಡಲು ಬೇಡಿಕೆ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬೇಡಿಕೆಯನ್ನು ತಿರಸ್ಕರಿಸುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಇದರಿಂದಾಗಿ ಬ್ಯಾಂಕ್ ಮೇಲಿನ ಒತ್ತಡ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

    ಪಂಚರಾಜ್ಯ ಚುನಾವಣೆ ಬಳಿಕ ಕೇಂದ್ರ ಸರ್ಕಾರ ಸಾಲಮನ್ನಾ ಮಾಡುತ್ತೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು, ಆದರೆ ಲೋಕಸಭಾ ಅಧಿವೇಶನದಲ್ಲೇ ಲಿಖಿತ ಹೇಳಿಕೆ ನೀಡಲಾಗಿದೆ. ಸದನದಲ್ಲಿ ಸ್ಪಷ್ಟ ಹೇಳಿಕೆ ನೀಡಿರುವ ಸರ್ಕಾರ ನಡೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೇಂದ್ರದಿಂದ ಸಾಲಮನ್ನಾ ನಿರೀಕ್ಷೆ ಹೊಂದಿರುವುದು ಬೇಡ ಎಂಬ ಸಂದೇಶವನ್ನು ರೈತರಿಗೆ ರವಾನೆ ಮಾಡಿದೆ.

    ಇತ್ತ ರಾಜ್ಯ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಸಾಲಮನ್ನಾ ಯೋಜನೆ ಪ್ರಸ್ತಾಪ ಮಾಡಿ, ನಮ್ಮ ದಾರಿಗೆ ಬರಬೇಕು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ಜಾತಕದಲ್ಲಿ ಕಂಟಕ- ಫೆಬ್ರವರಿ ನಂತರ ಬುಧಬುಕ್ತಿಗೆ ಮುಕ್ತಿ: ಜ್ಯೋತಿಷಿ ಅಮ್ಮಣ್ಣಾಯ

    ಪ್ರಧಾನಿ ಮೋದಿ ಜಾತಕದಲ್ಲಿ ಕಂಟಕ- ಫೆಬ್ರವರಿ ನಂತರ ಬುಧಬುಕ್ತಿಗೆ ಮುಕ್ತಿ: ಜ್ಯೋತಿಷಿ ಅಮ್ಮಣ್ಣಾಯ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಕಂಟಕ ಇರುವುದರಿಂದ ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕೆಲವು ಆರೋಪಗಳು ಬರುತ್ತಿದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ಉಡುಪಿಯ ಕಾಪುವಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಕಾಶ್ ಅಮ್ಮಣ್ಣಾಯ, ಮೋದಿ ಜಾತಕದಲ್ಲಿ ಬುಧಭುಕ್ತಿ ಇದೆ. ಬುಧಭುಕ್ತಿ ವಿಮೋಚನೆಯಾದ ನಂತರ ಮತ್ತೆ ಜಾತಕದಲ್ಲಿ ಒಳ್ಳೇ ದಿನಗಳು ಇದೆ ಎಂದು ಹೇಳಿದರು. ಪ್ರಧಾನಿ ಮೋದಿ ನೇತೃತ್ವದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮಿತ್ರಕೂಟಕ್ಕೆ 280 ಸೀಟುಗಳು ಬರಲಿದೆ. ಹೆಚ್ಚು ಮಿತ್ರಪಕ್ಷಗಳು ಜೊತೆಯಾದರೆ ಸೀಟುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು.

    ಜಾತ್ರೆಯ ಬಲೂನು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೋದಿಯ ಗರ್ವಭಂಗ ಅಂತ ಬೀಗುತ್ತಿರುವವರು ಜಾತ್ರೆಯ ಬಲೂನುಗಳು ಎಂದು ವಿಪಕ್ಷಗಳನ್ನು ಬಣ್ಣಿಸಿದ್ದಾರೆ. ಮೋದಿ ಫುಟ್ಬಾಲ್ ಇದ್ದಂತೆ. ಚೌಕಟ್ಟಿನೊಳಗೆ ಫುಟ್ ಬಾಲ್ ಓಡಾಡುತ್ತದೆ. ಎಲ್ಲೆಲ್ಲೋ ಹಾರಿ ಹೋಗಲ್ಲ. ಬಲೂನು ಊದಿಕೊಂಡು ಆಗಸದಲ್ಲಿ ಹಾರಾಟ ಮಾಡಿ ಕೆಲವೇ ಕ್ಷಣಗಳಲ್ಲಿ ಒಡೆದುಹೋಗುತ್ತದೆ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಜಾತಕದಲ್ಲಿ ಬುಧಭುಕ್ತಿ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿಗೆ ಕೊಂಚ ಹಿನ್ನಡೆಯಾಗುತ್ತದೆ. ಫೆಬ್ರವರಿ ನಂತರ ಕೇತುಭುಕ್ತಿ ಆಗಮನವಾಗಿ ಪ್ರಧಾನಿ ಮೋದಿಗೆ ಬರುವ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ ಎಂದು ಹೇಳಿದರು. ಪಂಚ ರಾಜ್ಯಗಖ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅವಕಾಶ ಇತ್ತು. ಆದ್ರೆ ರಾಜಕೀಯ ನಾಟಕದಲ್ಲಿ ಕೊನೆ ಕ್ಷಣದ ಬದಲಾವಣೆಯಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ-ಟೀಕೆಗಳಿಗೆ ರಮ್ಯಾ ಪ್ರತ್ಯುತ್ತರ

    ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ-ಟೀಕೆಗಳಿಗೆ ರಮ್ಯಾ ಪ್ರತ್ಯುತ್ತರ

    ಬೆಂಗಳೂರು: ಮಂಡ್ಯ ಮಾಜಿ ಸಂಸದೆ, ನಟಿ ರಮ್ಯಾ ತಮ್ಮ ಮೇಲಿನ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದು, ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಸರ್ಧಾರ್ ಪ್ರತಿಮೆಯ ಕೆಳಗೆ ನಿಂತಿದ್ದ ಫೋಟೋ ಟ್ವೀಟ್ ಮಾಡಿ ಹಕ್ಕಿಯ ಹಿಕ್ಕೆ ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಆದರೆ ತಮ್ಮ ವರ್ತನೆಯನ್ನು ಮತ್ತೆ ಪುನಾರವರ್ತನೆ ಮಾಡಿರುವ ರಮ್ಯಾ, ತಮ್ಮ ವಿರುದ್ಧ ಟೀಕೆ ಮಾಡಿದವರ ಹಾಗೂ ಕೆಲವರು ಕೆಳ ಮಟ್ಟದ ಪದ ಪ್ರಯೋಗ ಮಾಡಿದ್ದಾರೆ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಅಂತ ಹೇಳಿದ್ದಾರೆ.ಇದನ್ನೂ ಓದಿ: ಪಕ್ಷಿ ಹಿಕ್ಕೆ ಹಾಕಿದೆ ಎಂದು ಪ್ರಧಾನಿಯನ್ನು ಕಿಚಾಯಿಸಿ ಮತ್ತೆ ಟ್ರೋಲ್ ಆದ ರಮ್ಯಾ

    ತಮ್ಮ ಇನ್‍ ಸ್ಟಾಗ್ರಾಮ್‍ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿರುವ ರಮ್ಯಾ, ತಾವು ಚಿಕಿತ್ಸೆ ಪಡೆದ ಬಳಿಕ ಸದ್ಯ ಆರೋಗ್ಯವಾಗಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಇದರೊಂದಿಗೆ ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಸ್ಟೇಟಸನ್ನು ಅಪ್ಲೋಡ್ ಮಾಡಿ ಎಲ್ಲರ ಟೀಕೆಗೆ ತಿರುಗೇಟು ನೀಡಿದ್ದಾರೆ.

    ನಟ ಅಂಬಿರೀಶ್ ಅವರ ಅಂತಿಮ ದರ್ಶನಕ್ಕೂ ಆಗಮಿಸದ ರಮ್ಯಾ ಅವರ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಹಿಂದೆ ಕ್ಷೇತ್ರದಲ್ಲಿ ಮತದಾನ ಮಾಡಲು ಕೂಡ ಮನವಿ ಮಾಡಿದ್ದರು. ಆದರೆ ಅಭಿಮಾನಿಗಳ ಯಾವುದೇ ಮಾತಿಗೂ ಪ್ರತಿಕ್ರಿಯೆ ನೀಡದ ರಮ್ಯಾ, ಚುನಾವಣೆಯ ಸೋಲಿನ ಬಳಿಕ ಕ್ಷೇತ್ರ ಜನತೆಯನ್ನು ಮರೆತಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದರು.

    https://twitter.com/divyaspandana/status/1057842482975817728

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018 ರಲ್ಲಿ ಜನ ಅತಿಹೆಚ್ಚು ಚರ್ಚೆಯಾದ ನಾಯಕರಲ್ಲಿ ಮೋದಿ ನಂ.1, ರಾಹುಲ್ ನಂ.2!

    2018 ರಲ್ಲಿ ಜನ ಅತಿಹೆಚ್ಚು ಚರ್ಚೆಯಾದ ನಾಯಕರಲ್ಲಿ ಮೋದಿ ನಂ.1, ರಾಹುಲ್ ನಂ.2!

    ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅಭಿಪ್ರಾಯ ವ್ಯಕ್ತಪಡಿಸಲು ಜನರು ಬಳಸುತ್ತಿರುವ ಪ್ರಮುಖ ವೇದಿಕೆ ಆಗಿದ್ದು, ಟ್ವಿಟ್ಟರ್ 2018 ರಲ್ಲಿ ಅತಿ ಹೆಚ್ಚು ಮಂದಿ ಯಾರ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ರಿವೀಲ್ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 2ನೇ ಸ್ಥಾನದಲ್ಲಿದ್ದಾರೆ.

    ಈ ವರ್ಷದಲ್ಲಿ ಪ್ರಮುಖವಾಗಿ #MeToo, #Sarkar, #IPL, #KarnatakaElections, #DeepVeerWedding ಕೂಡ ಪ್ರಮುಖವಾಗಿ ಹೆಚ್ಚು ಚರ್ಚೆಯಾದ ವಿಷಯಗಳಾಗಿದ್ದು, ಉಳಿದಂತೆ ಟ್ವಿಟ್ಟರ್ 2018ರಲ್ಲಿ ಯಾರ ಟ್ವೀಟ್ ಗಳು ಹೆಚ್ಚು ಚರ್ಚೆಗೊಳಗಾಗಿವೆ ಎಂಬುದನ್ನು ಆಧರಿಸಿ ಟಾಪ್ 10 ಪಟ್ಟಿ ಬಿಡುಗಡೆ ಮಾಡಲಾಗಿದೆ.

    ಟ್ವಿಟ್ಟರ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೋದಿ, ರಾಹುಲ್ ಗಾಂಧಿ ನಂತರದ ಸ್ಥಾನವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, 4ನೇ ಸ್ಥಾನವನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ 5ನೇ ಸ್ಥಾನವನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪಡೆದಿದ್ದಾರೆ. ಉಳಿದಂತೆ ತೆಲುಗು ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್, ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ತಮಿಳು ನಟ ವಿಜಯ್, ತೆಲುಗು ನಟ ಮಹೇಶ್ ಬಾಬು ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕ್ರಮವಾಗಿ 5 ರಿಂದ 10ನೇ ಸ್ಥಾನದಲ್ಲಿದ್ದಾರೆ.

    ವರ್ಷಾಂತ್ಯವಾಗುತ್ತಿದ್ದಂತೆ ಟ್ವಿಟ್ಟರ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿವಿಧ ಕ್ಷೇತ್ರಗಳಾದ ಟಿವಿ, ರಾಜಕೀಯ, ಕ್ರೀಡೆ, ಮನರಂಜನೆ, ಸಂಗೀತ ಹಾಗೂ ಸಾಮಾಜಿಕ ಚಳುವಳಿಗಳಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳನ್ನು ಪರಿಗಣಿಸಲಾಗಿದೆ. ಈ ವಿಶೇಷ ಮಾಹಿತಿಯನ್ನು ನೀಡಿರುವ ಟ್ವಿಟ್ಟರ್ #ThisHappened ಎಂಬ ಟ್ಯಾಗ್ ಬಳಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv