Tag: prime minister modi

  • ಎಚ್‍ಡಿಕೆ ಸಿಕ್ಕಿ ಹಾಕಿಸೋದೋ ಸಿದ್ದರಾಮಯ್ಯ ಪ್ಲಾನ್: ಆರ್. ಅಶೋಕ್ ಆರೋಪ

    ಎಚ್‍ಡಿಕೆ ಸಿಕ್ಕಿ ಹಾಕಿಸೋದೋ ಸಿದ್ದರಾಮಯ್ಯ ಪ್ಲಾನ್: ಆರ್. ಅಶೋಕ್ ಆರೋಪ

    ಕಲಬುರಗಿ: ಆಪರೇಷನ್ ಆಡಿಯೋ ತನಿಖೆಯನ್ನು ಎಸ್‍ಐಟಿಗೆ ತನಿಖೆ ವಹಿಸುವುದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿದ್ದು, ಅವರೇ ದೋಸ್ತಿ ಸರ್ಕಾರದ ವಿಲನ್ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರು ದೊಡ್ಡ ವಿಲನ್. ಆಪರೇಷನ್ ಆಡಿಯೋ ಎಸ್‍ಐಟಿ ತನಿಖೆ ವಹಿಸುವುದರ ಹಿಂದೆ ಸಿದ್ದರಾಮಯ್ಯ ಅವರು ಇದ್ದಾರೆ. ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಸಿಲುಕಿಸುವುದೇ ಪ್ಲಾನ್ ಆಗಿದೆ ಎಂದು ಆರೋಪಿಸಿದರು.

    ಸರ್ಕಾರವನ್ನು ಉರುಳಿಸಲು ಸಿದ್ದರಾಮಯ್ಯ ಅವರು ಪ್ರಯತ್ನಿಸುತ್ತಿದ್ದಾರೆ. ಅವರು ಕೀ ಕೊಟ್ಟ ವೇಳೆ ಬೆಂಬಲಿಗ ಶಾಸಕರು ಮುಂಬೈ ಸೇರಿದಂತೆ ವಿವಿಧೆಡೆ ಓಡಿ ಹೋಗುತ್ತಾರೆ. ಸಿದ್ದರಾಮಯ್ಯ ಹೇಳಿದ ಕೂಡಲೇ ಎಲ್ಲವೂ ಸರಿಯಾಗುತ್ತದೆ. ಮತ್ತೆ ಅವರೇ ಸರ್ಕಾರ ಉರುಳಿಸಲು ಕಾರಣರಾಗಿದ್ದಾರೆ. ನಮ್ಮ ಮೇಲೆ ಕಾರಣವಿಲ್ಲದೇ ಆರೋಪ ಮಾಡಿದ್ದಾರೆ ಎಂದರು.

    ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಪ್ರಧಾನಿ ಮೋದಿ ಅವರು ಕಲಬುರಗಿಯಲ್ಲಿ ಸಮಾವೇಶಕ್ಕೆ ಆಗಮಿಸುತ್ತಾರೆ. ಈ ತಯಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಮಾರ್ಚ್ 01 ರಂದು ಕಾರ್ಯಕ್ರಮ ನಡೆಯುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯ ವಿವಿಧ ಪ್ರದೇಶಗಳಲ್ಲೂ ಕೂಡ ಸಮಾವೇಶ ನಡೆಯುತ್ತದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಂದೇ ಭಾರತ್ ರೈಲ್ವೇ ಸೇವೆ ಆರಂಭ – 2 ವಾರದ ಟಿಕೆಟ್ ಬುಕ್

    ವಂದೇ ಭಾರತ್ ರೈಲ್ವೇ ಸೇವೆ ಆರಂಭ – 2 ವಾರದ ಟಿಕೆಟ್ ಬುಕ್

    ನವದೆಹಲಿ: ಭಾರತದ ಮೊದಲ ಸೆಮಿ ಹೈ ಸ್ಪೀಡ್ ರೈಲು ಎಂಬ ಹೆಗ್ಗಳಿಕೆ ಗಳಿಸಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ತನ್ನ ಮೊದಲ ಸಂಚಾರವನ್ನು ಆರಂಭಿಸಿದೆ.

    ನವದೆಹಲಿಯಿಂದ ವಾರಣಾಸಿಗೆ ಮೊದಲ ಪ್ರಯಾಣ ಬೆಳೆಸಿದ ರೈಲಿನ ಮೊದಲ 2 ವಾರದ ಎಲ್ಲಾ ಟಿಕೆಟ್ ಕೂಡ ಬುಕಿಂಗ್ ಪೂರ್ಣಗೊಂಡಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಇಂದು ಬೆಳ್ಗಗೆ ತಮ್ಮ ಟ್ವಿಟ್ಟರ್ ನಲ್ಲಿ ರೈಲು ನಿಲ್ದಾಣದಿಂದ ಹೊರಟಿರುವ ವಿಡಿಯೋವನ್ನು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಹಿಂದೆ ರೈಲಿಗೆ ಚಾಲನೆ ನೀಡಿದ್ದರು. ಇಂದಿನಿಂದ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಿದೆ. ಮೋದಿ ಅವರು ಚಾಲನೆ ನೀಡಿದ ಬಳಿಕ ರೈಲಿನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ತೊಂದರೆ ದೇಶದ್ಯಾಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ಬಳಿಕ ರೈಲಿನಲ್ಲಿ ಉಂಟಾದ ಸಮಸ್ಯೆಯನ್ನು ಪರಿಶೀಲಿಸಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

    ದೆಹಲಿಯಿಂದ ವಾರಣಾಸಿ ನಡುವೆ ಸಂಚರಿಸುವ ರೈಲಿಗೆ ಮೊದಲು ಟ್ರೈನ್ 18 ಎಂದು ಹೆಸರಿಸಲಾಗಿತ್ತು. ಆ ಬಳಿಕ ವಂದೇ ಭಾರತ್ ಎಂದು ಬದಲಿಸಲಾಯಿತು. ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುವ ರೈಲು 16 ಬೋಗಿಗಳನ್ನು ಹೊಂದಿದ್ದು, 97 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ರೈಲಿನಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ವೈಪೈ ಸಂಪರ್ಕ, ಹವಾ ನಿಯಂತ್ರಣ, ಜಿಪಿಎಸ್, ಸ್ಪರ್ಶ ರಹಿತ ವ್ಯಾಕ್ಯುಮ್ ಶೌಚಾಲಯ ಸೌಲಭ್ಯಗಳನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ಟ್ವೀಟ್‍ನಿಂದ ಪ್ರೀತಿ ಶುರು – ಭಾರತೀಯ ವರನನ್ನು ವರಿಸಿದ ಶ್ರೀಲಂಕಾ ವಧು

    ಪ್ರಧಾನಿ ಮೋದಿ ಟ್ವೀಟ್‍ನಿಂದ ಪ್ರೀತಿ ಶುರು – ಭಾರತೀಯ ವರನನ್ನು ವರಿಸಿದ ಶ್ರೀಲಂಕಾ ವಧು

    ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ನಿಂದಾಗಿ ಪ್ರೇಮಾಂಕರುವಾಗಿ ಭಾರತ ಮತ್ತು ಶ್ರೀಲಂಕಾದ ಜೋಡಿಯೊಂದು ಸಪ್ತಪದಿ ತುಳಿದಿದೆ.

    ಶ್ರೀಲಂಕಾ ಯುವತಿ ಹಂಸಿನಿ ಎದಿರೀಸಿಂಘೆ(25) ಪಂಜಾಬ್ ನ ಕುಚೋರ್ದ್ ಗ್ರಾಮದ ನಿವಾಸಿ ಗೋವಿಂದ್ ಮಹೇಶ್ವರಿ(26) ಫೆಬ್ರವರಿ 10 ರಂದು ಮದುವೆಯಾಗಿದ್ದಾರೆ. ಮಧ್ಯ ಪ್ರದೇಶದ ಮಂದಸೋರ್ ನಲ್ಲಿ ಈ ವಿಶೇಷ ಮದುವೆ ನಡೆದಿದೆ.

    ಪ್ರೀತಿ ಹುಟ್ಟಿದ್ದು ಹೇಗೆ?
    ಪ್ರಧಾನಿ ಮೋದಿ ಅವರು 2015ರಲ್ಲಿ ಒಂದು ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಗೋವಿಂದ್ ಲೈಕ್ ಮಾಡಿದ್ದರು. ಇದೇ ಟ್ವೀಟ್ ಅನ್ನು ಹಂಸಿನಿ ಸಹ ಲೈಕ್ ಮಾಡಿದ್ದಾರೆ. ಬಳಿಕ ಗೋವಿಂದ್ ಹಂಸಿನಿಯನ್ನು ಟ್ವೀಟ್ ಮೂಲಕ ಹಿಂಬಾಲಿಸಿದ್ದು, ಅಂದಿನಿಂದಲೂ ಅವರಿಬ್ಬರು ಸ್ನೇಹಿತರಾದರು. ದಿನಕಳೆದಂತೆ ಪರಸ್ಪರ ಪ್ರೀತಿಸುತ್ತಿದ್ದು, ಎರಡು ವರ್ಷಗಳ ಕಾಲ ಮೆಸೇಜ್ ಮತ್ತು ವಿಡಿಯೋ ಮೂಲಕ ಇಬ್ಬರು ಸಂವಹನ ಮಾಡುತ್ತಿದ್ದರು. ಕೊನೆಗೆ ಈ ಜೋಡಿ 2017ರಲ್ಲಿ ಪರಸ್ಪರ ಭೇಟಿಯಾಗಿದ್ದರು.

    ಹಂಸಿನಿ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಯಲು ಫಿಸಿಯೋಥೆರಪಿ ಅಧ್ಯಯನ ಮಾಡಲು ಭಾರತಕ್ಕೆ ಬಂದಿದ್ದರು. ಇತ್ತ ಗೋವಿಂದ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. ಇಬ್ಬರು ತಮ್ಮ ತಮ್ಮ ಕುಟುಂಬಕ್ಕೆ ಪ್ರೀತಿಯ ವಿಚಾರವನ್ನು ತಿಳಿಸಿದ್ದರು. ಕುಟುಂಬದವರು ಸಮ್ಮತಿ ಸೂಚಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    “ನನ್ನ ಮಗಳು ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬಂದಿದ್ದಳು. ಬಳಿಕ ಭಾರತೀಯ ಹುಡುಗನನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದು ಇಬ್ಬರನ್ನು ಶ್ರೀಲಂಕಾಕ್ಕೆ ಕರೆದುಕೊಂಡು ಬಂದೆವು. ಹುಡುಗ ಕೆಲವು ತಿಂಗಳು ಕಾಲ ನಮ್ಮ ಜೊತೆಯೇ ಇದ್ದರು. ದಿನಕಳೆದಂತೆ ಅವರನ್ನು ಇಷ್ಟಪಡಲು ಆರಂಭಿಸಿದ್ದೆವು. ನಂತರ ಅವರಿಬ್ಬರ ಪ್ರೀತಿಗೆ ಒಪ್ಪಿಗೆ ನೀಡಿದೆವು. ಭಾರತೀಯ ಹುಡುಗನನ್ನು ನಮ್ಮ ಮಗಳು ಆಯ್ಕೆ ಮಾಡಿಕೊಂಡಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ಹಂಸಿನಿ ಅವರ ತಂದೆ ಹೇಳಿದ್ದಾರೆ.

    “ನಾವಿಬ್ಬರು ವಿಭಿನ್ನ ಸಂಸ್ಕೃತಿಗಳಿಗೆ ಸೇರಿದವರಾಗಿದ್ದೆವು. ಆದರೆ ನಾವು ಪರಸ್ಪರ ಪ್ರೀತಿಸುತ್ತೇವೆ. ಹೀಗಾಗಿ ನಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದೇವೆ ಎಂದು ಹಂಸಿನಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟ್ರೆಂಡ್ ಆಯ್ತು ಮೋದಿ ಫೋಟೋವಿರೋ ಸೀರೆ

    ಟ್ರೆಂಡ್ ಆಯ್ತು ಮೋದಿ ಫೋಟೋವಿರೋ ಸೀರೆ

    ಬೆಂಗಳೂರು: ಸಾಮಾನ್ಯವಾಗಿ ಸೀರೆಗಳಲ್ಲಿ ಹೂವುಗಳು, ಪ್ರಾಣಿ, ಪಕ್ಷಿಗಳ ಚಿತ್ರವಿರುತ್ತವೆ. ಅಷ್ಟೇ ಅಲ್ಲದೇ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಫೋಟೋವನ್ನು ತಮ್ಮ ಶರ್ಟ್ ನಲ್ಲಿ ಹಾಕಿಸಿಕೊಳ್ಳುತ್ತಾರೆ. ಆದರೆ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋವಿರುವ ಸೀರೆ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ.

    ಪ್ರಧಾನಿ ಮೋದಿ ಅವರಿಗೆ ಅಪಾರ ಅಭಿಮಾನಿಗಳು, ಬೆಂಬಲಿಗರು ಇದ್ದಾರೆ. ಆದ್ದರಿಂದ ಈಗ ಪ್ರಧಾನಿ ಮೋದಿ ಅವರು ಟ್ರೆಂಡ್ ಸೀರೆಗೂ ಎಂಟ್ರಿ ಕೊಟ್ಟಿದ್ದಾರೆ. ಸಿಲ್ಕ್ ಕಾಟನ್, ಕ್ರೇಮ್ ಸಿಲ್ಕ್, ಹಾರ್ಟ್ ಸಿಲ್ಕ್ ರೀತಿ ಮೋದಿ ಭಾವಚಿತ್ರವುಳ್ಳ ಸಿಲ್ಕ್ ಸೀರೆ ಕೂಡ ಮಾರುಕಟ್ಟೆಗೆ ಕಾಲಿಟ್ಟಿದೆ.

    ಪ್ರಧಾನಿ ಮೋದಿ ಫೋಟೋ ಪ್ರಿಂಟ್ ಇರುವ ಸೀರೆ ಈಗ ಮಾರುಕಟ್ಡೆಗೆ ಲಗ್ಗೆ ಇಟ್ಟಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಅಲ್ಲದೇ ಈ ಸೀರೆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಕಲರ್ ಫುಲ್ ಸೀರೆಗಳ ಮೇಲೆ ಮೋದಿ ಫೋಟೋ ಮಾರುಕಟ್ಟೆಯಲ್ಲಿ ಬಿಸಿ ಬಿಸಿ ಬ್ಯುಸಿನೆಸ್‍ಗೆ ಕಾರಣವಾಗಿದೆ. ವ್ಯಾಪಾರಿಗಳಂತೂ ಫುಲ್ ಖುಷ್ ಆಗಿ ಬಿಸಿನೆಸ್ ಭರಾಟೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬಿಜೆಪಿಯವರೆಲ್ಲ ಈ ಸೀರೆಗಳ ಖರೀದಿಗೆ ಮುಗಿ ಬೀಳಬಹುದು ಎಂಬ ಲೆಕ್ಕಚಾರವೂ ಜೋರಾಗಿದೆ.

    ಮೊದಲಿಗೆ ಹೂಗಳು, ಬಳಿಕ ಮೋದಿಯ ಫೋಟೋ, ಮೋದಿಯವರು ಚಲಾವಣೆಗೆ ತಂದಿರುವ 500 ರೂ. ಮತ್ತು 2000 ರೂ. ನೋಟುಗಳ ಫೋಟೋ ಕೊನೆಯಲ್ಲಿ ಮತ್ತೆ ಮೋದಿ ಭಾವಚಿತ್ರ, ಹೂವುಗಳ ಫೋಟೋ ಪ್ರಿಂಟ್ ಆಗಿದೆ. ಇನ್ನೂ ಬೇರೆ ಡಿಸೈನ್ ನೋಡಿದರೆ, ಮೋದಿ ಫೋಟೋ ಒಂದನ್ನೇ ಸೀರೆಯುದ್ದಕ್ಕೂ ಹೂಗಳ ಜೊತೆ ಪ್ರಿಂಟ್ ಮಾಡಲಾಗಿದೆ. ಮೋದಿ ಜೊತೆ ನದಿ, ಕಾಡು, ಗಿಡ, ಮರ ಹಾಗೂ ಸ್ವಚ್ಛಭಾರತ ಸಂಕೇತದ ಮೋದಿ ಕನ್ನಡಕವನ್ನು ಕೂಡ ಸೀರೆಯಲ್ಲಿ ಪ್ರಿಂಟ್ ಮಾಡಲಾಗಿದೆ. ಒಟ್ಟಿನಲ್ಲಿ ಒಂದೊಂದು ಸೀರೆಯಲ್ಲೂ ಮೋದಿಯ ಫೋಟೋಗಳನ್ನು ಬೇರೆ ಬೇರೆ ರೀತಿಯಲ್ಲಿ ಡಿಸೈನ್ ಮಾಡಲಾಗಿದ್ದು, ಈ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಕುಮಾರಸ್ವಾಮಿ ಪಂಚಿಂಗ್ ಬ್ಯಾಗ್: ಮೋದಿ ವ್ಯಂಗ್ಯ

    ಸಿಎಂ ಕುಮಾರಸ್ವಾಮಿ ಪಂಚಿಂಗ್ ಬ್ಯಾಗ್: ಮೋದಿ ವ್ಯಂಗ್ಯ

    -ಸಾಲಮನ್ನಾ ಮಾಡ್ತೀವಿ ಅಂತಾ ಸುಳ್ಳು ಹೇಳ್ತಾರೆ

    ಬೆಂಗಳೂರು: ಹುಬ್ಬಳ್ಳಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರ್ಕಾರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

    ಚುನಾವಣೆಗೆ ಮುನ್ನ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಾರೆ. ಅಧಿಕಾರಕ್ಕೆ ಬಂದಾಗ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ದುರ್ಬಲ ಸರ್ಕಾರವನ್ನು ಕೇಂದ್ರದಲ್ಲಿ ಜಾರಿಗೊಳಿಸುವ ಪ್ರಯತ್ನವನ್ನ ಕೆಲವರು ಮಾಡುತ್ತಿದ್ದಾರೆ. ರಾಜ್ಯದ ದೋಸ್ತಿ ಸರ್ಕಾರದಲ್ಲಿ ಹಕ್ಕಿಗಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಯಾಕಾದ್ರೂ ಸಿಎಂ ಆಗಿದ್ದೇನೆ ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದಾರೆಂದು ಎಂದು ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

    ಪಂಚಿಂಗ್ ಬ್ಯಾಗ್:
    ರಾಜ್ಯ ಸರ್ಕಾರದ ನೇತಾರ ಯಾರು ಎಂಬುವುದು ಜನರಿಗೆ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಕಿರುಕುಳದಿಂದ ಕುಮಾರಸ್ವಾಮಿ ಪಂಚಿಂಗ್ ಬ್ಯಾಗ್ ಆಗಿದ್ದಾರೆಂದು ವ್ಯಂಗ್ಯ ಮಾತುಗಳಿಂದ ಸಮ್ಮಿಶ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಮಹಾಘಟ್‍ಬಂಧನ್ ಮೂಲಕ ರಾಜ್ಯದಲ್ಲಿ ನೀವು ಕಾಣುತ್ತಿರುವ ದುರ್ಬಲ ಸರ್ಕಾರವನ್ನು ಕೇಂದ್ರದಲ್ಲಿ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ನಿಮ್ಮ ಒಂದು ಮತ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ನಮ್ಮ ಸರ್ಕಾರ ಬಂದ ಮೇಲೆ ದೊಡ್ಡ ದೊಡ್ಡ ವ್ಯಕ್ತಿಗಳು ವಿಚಾರಣೆಗೆ ಹಾಜರಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಬರ್ಟ್ ವಾದ್ರಾ ಪ್ರಕರಣದ ಮೂಲಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ನಮ್ಮ ಸರ್ಕಾರದ 55 ತಿಂಗಳಲ್ಲಿ 15 ಲಕ್ಷಗಳಷ್ಟು ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಕೆಳ ವರ್ಗದ ಜನತೆಗೆ ಮಾತ್ರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಮಧ್ಯಮ ವರ್ಗದ ಜನತೆಗಾಗಿ ಮನೆಗಳನ್ನು ನೀಡುತ್ತಿದ್ದೇವೆ. ಮಧ್ಯಮ ವರ್ಗದ ಜನರಿಗಾಗಿ ವಿಶೇಷ ತೆರಿಗೆ ರಿಯಾಯ್ತಿಗಳನ್ನು ಬಜೆಟ್ ನಲ್ಲಿ ನೀಡಲಾಗಿದೆ. ಈ ಹಿಂದೆ 40 ವರ್ಷದಲ್ಲಿ ಕೇವಲ 8 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

     

  • ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ

    ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ

    -ಕನ್ನಡ ನಾಡಿನ ಗಣ್ಯರನ್ನು ನೆನೆದ ಮೋದಿ

    ಹುಬ್ಬಳ್ಳಿ: ನೀವೆಲ್ಲರೂ ಎರಡ್ಮೂರು ಗಂಟೆಯೇ ಮೊದಲೇ ಬಂದು ಕುಳಿತಿದ್ದೀರಿ ಎಂದು ಗೊತ್ತಾಯ್ತು. ಮೊದಲಿಗೆ ಮೈದಾನವನ್ನು ಇಷ್ಟೆ ಅಂತಾ ನಿಗದಿ ಮಾಡಲಾಗಿತ್ತು. ಊಹಿಸಿದಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನೀವೆಲ್ಲ ಬಂದಿರೋದು ನನ್ನ ಉತ್ಸಾಹವನ್ನು ಹೆಚ್ಚು ಮಾಡಿದೆ. ಇದು ತಿರಂಗದ ಭೂಮಿಯಾಗಿದ್ದು, ವೀರಯೋಧರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದಾಗಿದೆ.ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದ.ರಾ.ಬೇಂದ್ರೆ, ಗಂಗೂಬಾಯಿ ಹಾನಗಲ್ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಪರಿಚಿತರು. ಇವರೆಲ್ಲರಿಗೂ ನನ್ನ ನಮನಗಳು ಎಂದು ಮಾತು ಆರಂಭಿಸಿದರು.

    ಇದೇ ವೇಳೆ ಇತ್ತೀಚೆಗೆ ಶಿವೈಕ್ಯರಾದ ಸಿದ್ದಗಂಗಾ ಶ್ರೀಗಳನ್ನು ನೆನೆದು ತಮ್ಮ ನಮನ ಸಲ್ಲಿಸಿದರು. ಕೇಂದ್ರ ಸಚಿವರಾಗಿದ್ದ ಕರ್ನಾಟಕದ ಮುತ್ಸದಿ ನಾಯಕ ದಿ. ಅನಂತಕುಮಾರ್ ಅವರನ್ನು ನೆನಪು ಮಾಡಿಕೊಂಡರು. ಇತ್ತೀಚೆಗೆ ಉದ್ಘಾಟಿಸಿರುವ 5 ಸಾವಿರ ಕೋಟಿಯ ಯೋಜನೆಗಳು ಎಲ್ಲವು ನಿಮಗಾಗಿ ಮತ್ತು ದೇಶದ ಅಭಿವೃದ್ಧಿಗಾಗಿ ಮಾಡಲಾಗುತ್ತಿದೆ.

    ನಮ್ಮ ಸರ್ಕಾರದ 55 ತಿಂಗಳಲ್ಲಿ 15 ಲಕ್ಷಗಳಷ್ಟು ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಕೆಳ ವರ್ಗದ ಜನತೆಗೆ ಮಾತ್ರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಮಧ್ಯಮ ವರ್ಗದ ಜನತೆಗಾಗಿ ಮನೆಗಳನ್ನು ನೀಡುತ್ತಿದ್ದೇವೆ. ಮಧ್ಯಮ ವರ್ಗದ ಜನರಿಗಾಗಿ ವಿಶೇಷ ತೆರಿಗೆ ರಿಯಾಯ್ತಿಗಳನ್ನು ಬಜೆಟ್ ನಲ್ಲಿ ನೀಡಲಾಗಿದೆ. ಈ ಹಿಂದೆ 40 ವರ್ಷದಲ್ಲಿ ಕೇವಲ 8 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೀರೋ ಯಾರೆಂದು ಗೊತ್ತಿಲ್ಲದ ಸಿನಿಮಾದಲ್ಲಿ ಬಿಎಸ್‍ವೈ ವಿಲನ್: ಮುರಳೀಧರ್ ರಾವ್

    ಹೀರೋ ಯಾರೆಂದು ಗೊತ್ತಿಲ್ಲದ ಸಿನಿಮಾದಲ್ಲಿ ಬಿಎಸ್‍ವೈ ವಿಲನ್: ಮುರಳೀಧರ್ ರಾವ್

    ಹುಬ್ಬಳ್ಳಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಜನರಿಗೆ ಸಿನಿಮಾ ತೋರಿಸುತ್ತಿದ್ದು, ಆ ಸಿನಿಮಾದಲ್ಲಿ ಯಾರು ಹೀರೋ ಎಂಬುದು ಅವರಿಗೆ ಗೊತ್ತಿಲ್ಲ. ಆದರೆ ಸಿನಿಮಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರನ್ನು ವಿಲನ್ ಆಗಿ ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ವರಿಷ್ಠ ಮುರಳೀಧರ್ ರಾವ್ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶ ಉದ್ದೇಶಿಸಿದ ಮಾತನಾಡಿದ ಅವರು, ರಾಜ್ಯದಲ್ಲಿ ಮಾಡಿಕೊಂಡಿರುವ ಬಂಧನ್ ಹೆಚ್ಚು ಕಾಲ ಉಳಿಯುವುದಿಲ್ಲ. ಇನ್ನು ದೇಶದಲ್ಲಿ ನಿರ್ಮಾಣ ಆಗಿರುವ ಘಟಬಂಧನ್ ಉಳಿಯುತ್ತಾ? 2014ರ ಪಕ್ಷ ಗೆದ್ದಿರುವ ಒಂದು ಸ್ಥಾನವೂ ಕಡಿಮೆ ಆಗದೆ, ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಅಲ್ಲದೇ ದೇಶದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆದರೆ ರಾಹುಲ್ ಇದಕ್ಕೆಲ್ಲಾ ಅಡ್ಡಗಾಲು ಹಾಕುತ್ತಿದ್ದಾರೆ. ದೇಶದ ಅಲ್ಪ ಸಂಖ್ಯಾತರ ಅಭಿವೃದ್ಧಿ ಆಗುವುದು ಕಾಂಗ್ರೆಸ್‍ಗೆ ಬೇಡವಾಗಿದ್ದು, ಮತಗಳು ಮಾತ್ರ ಬೇಕು. ರಾಜ್ಯದಲ್ಲಿ ಜನರ ಆಶೀರ್ವಾದ ಇಲ್ಲದೇ ಇದ್ದರೂ ಕೂಡ ಅಧಿಕಾರಕ್ಕಾಗಿ ಮೈತ್ರಿ ನಡೆಸಿದ್ದಾರೆ. ಆದರೆ ಬಿಜೆಪಿ ದೂರ ಇಡಲು ಮೈತ್ರಿ ಮಾಡಿಕೊಂಡಿದ್ದಾಗಿ ಸುಳ್ಳು ಹೇಳುತ್ತಾರೆ ಟೀಕೆ ಮಾಡಿದರು.

    ಇದೇ ವೇಳೆ ರಾಜ್ಯ ಸರ್ಕಾರ ಜನರಿಗೆ ದಿನಕ್ಕೊಂದು ಜಗಳ ನಡೆಸುವ ಮೂಲಕ ದಿನಕ್ಕೊಂದು ಸಿನಿಮಾ ತೋರಿಸುತ್ತಿದೆ. ಆದರೆ ಇದಕ್ಕೆಲ್ಲಾ ಕಾರಣ ಬಿಎಸ್‍ವೈ ಕಾರಣ ಎಂದೇ ಹೇಳುತ್ತಿದ್ದಾರೆ. ಹೋಟೆಲ್ ನಲ್ಲಿ ಶಾಸಕರು ಬಡಿದಾಡಿಕೊಂಡರು ಕೂಡ ಅವರೇ ಕಾರಣ ಎನ್ನುತ್ತಾರೆ. ಭ್ರಷ್ಟಚಾರದಲ್ಲಿ ತೊಡಗಿರುವ ಸರ್ಕಾರ ಬಿಎಸ್‍ವೈ ಅವರ ಮೇಲೆ ಏಕೆ ಆರೋಪ ಮಾಡುತ್ತಾರೆ ಎಂದು ಆರ್ಥ ಆಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೇ ದೇಶದಲ್ಲಿ ಮೋದಿ ಅವರ ಕಾರ್ಯಗಳು ಜನರಿಗೆ ಇಷ್ಟವಾಗಿದ್ದು, ಇದಕ್ಕೆ ಇಲ್ಲಿ ಹಾಜರಾಗಿರುವ ಲಕ್ಷ ಲಕ್ಷ ಜನರೇ ಕಾರಣ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರ್‌ಜಿವಿ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾಗೆ ಮೋದಿ ಪ್ರಚಾರ!

    ಆರ್‌ಜಿವಿ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾಗೆ ಮೋದಿ ಪ್ರಚಾರ!

    ಹೈದರಾಬಾದ್: ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದಂತೆ ಟಾಲಿವುಡ್‍ನಲ್ಲಿ ಹಲವು ನಾಯಕರ ಆತ್ಮಚರಿತ್ರೆಗಳ ಸಿನಿಮಾಗಳು ತೆರೆಕಾಣುತ್ತಿದೆ. ಇದರಲ್ಲಿ ಭಾರೀ ವಿವಾದ ಸೃಷ್ಟಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾ ಕೂಡ ಒಂದಾಗಿದೆ.

    ಇದೇ ವೇಳೆಯಲ್ಲಿ ನಿರ್ದೇಶಕ ಆರ್ ಜಿವಿ ತಮ್ಮ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿಯೇ ಪ್ರಚಾರ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.

    ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು. ಇದೇ ವಿಡಿಯೋವನ್ನು ಆರ್ ಜಿವಿ ಟ್ವೀಟ್ ಮಾಡಿದ್ದು, ಇದರಲ್ಲಿ ಪ್ರಧಾನಿ ಮೋದಿ ಅವರು ಸಿಎಂ ಚಂದ್ರಬಾಬು ನಾಯ್ಡುರನ್ನು ಮೋಸಗಾರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಂದಹಾಗೇ ಆರ್ ಜಿವಿ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾದಲ್ಲಿ ಚಂದ್ರಬಾಬು ನಾಯ್ಡು ಅವರ ಮತ್ತೊಂದು ಮುಖ ಆವರಣಗೊಳ್ಳಲಿದೆ. ಅವರು ತಮ್ಮ ಮಾವನಾದ ಮಾಜಿ ಸಿಎಂ ರಾಮರಾವ್ ಅವರಿಗೆ ಮಾಡಿದ ಮೋಸದ ಕುರಿತು ಅಂಶಗಳನ್ನು ರಿವೀಲ್ ಮಾಡಲಾಗುತ್ತದೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇದರಂತೆ ಮೋದಿ ಅವರ ಭಾಷಣದ ತುಣುಕನ್ನು ಕೂಡ ನಿರ್ದೇಶಕರು ಸಮಯ ಪ್ರಜ್ಞೆ ತೋರಿ ಸಿನಿಮಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

    ಆರ್ ಜಿವಿ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾ ರಾಮರಾಮ್ ಅವರು ಲಕ್ಷ್ಮಿಸ್ ರನ್ನು 2ನೇ ವಿವಾಹ ಆದ ಬಳಿಕ ನಡೆದ ಘಟನೆಗಳ ಬಗ್ಗೆ ಸಿನಿಮಾ ಮಾಡಲಾಗಿದ ಎಂದು ನಿರ್ದೇಶಕ ಹೇಳಿದ್ದು, ಈಗಾಗಲೇ ಸಿನಿಮಾ ವಿರುದ್ಧ ಆಂದ್ರ ಪ್ರದೇಶದ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ತಾಕತ್ ಪಾಕ್‍ಗೆ ಗೊತ್ತಾಗಿದೆ – ಮತ್ತೆ ಪ್ರಧಾನಿ ಆಗಬೇಕೆಂಬುದು ನನ್ನ ಆಸೆ: ಎಸ್‍ಎಂ ಕೃಷ್ಣ

    ಮೋದಿ ತಾಕತ್ ಪಾಕ್‍ಗೆ ಗೊತ್ತಾಗಿದೆ – ಮತ್ತೆ ಪ್ರಧಾನಿ ಆಗಬೇಕೆಂಬುದು ನನ್ನ ಆಸೆ: ಎಸ್‍ಎಂ ಕೃಷ್ಣ

    -ಕಾಂಗ್ರೆಸ್ ಪಕ್ಷದಲ್ಲಿದ್ದ ನನ್ನ ಬೆಂಬಲಿಗರೆಲ್ಲರೂ ಬಿಜೆಪಿಗೆ ಬರಬೇಕು

    ಮಂಡ್ಯ: ಲೋಕಸಭಾ ಚುನಾವಣೆಗೆ ರಾಜ್ಯದ ಕೆಲ ಭಾಗಗಳಲ್ಲಿ ನಾನು ಪಕ್ಷದ ಪರ ಪ್ರಚಾರಕ್ಕೆ ಹೋಗಲಿದ್ದು, ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಎನ್ನುವುದು ನನ್ನ ಆಸೆ ಎಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಹೇಳಿದ್ದಾರೆ.

    ಮಂಡ್ಯದಲ್ಲಿ ನಡೆದ ಪಕ್ಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದಿಂದ ಯಾವ ಅಧಿಕಾರವನ್ನು ಅಪೇಕ್ಷೆ ಮಾಡುವುದಿಲ್ಲ. ಲೋಕಸಭೆ ಚುನಾವಣೆ ದೇಶದಲ್ಲಿ ಅತ್ಯಂತ ಮಹತ್ವವಾದಗಿದ್ದು, ನಮ್ಮ ಗಮನವೆಲ್ಲ ಲೋಕಸಭೆ ಚುನಾವಣೆಗೆ ಕೇಂದ್ರಿಕೃತವಾಗಿದೆ. ಬಿಜೆಪಿಗೆ ಈ ಬಾರಿ ಕ್ಷೇತ್ರದಲ್ಲಿ ದೊಡ್ಡ ಬೆಂಬಲ ಸಿಗುವ ನಿರೀಕ್ಷೆ ಇದ್ದು, ಭಾರತ ದೇಶ ಇಂದು ನಿರ್ಣಾಯಕ ಘಟ್ಟ ಮುಟ್ಟುತ್ತಿದೆ. 2014ರಲ್ಲಿ ಭಾರತದಲ್ಲಿ ದೊಡ್ಡ ಕ್ರಾಂತಿ ನಡೆಯಿತು. ಆ ಕ್ರಾಂತಿಯ ಹರಿಕಾರ ನರೇಂದ್ರ ಮೋದಿ ಆಗಿದ್ದು, ಇದರ ಫಲವಾಗಿ ದೇಶಕ್ಕೆ ಉತ್ತಮ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಮೋದಿ ಅವರ ಈ ಯೋಜನೆಗಳು ಸಹಾಯಕ ಆಗಿದೆಯಾ ಎಂಬ ಬಗ್ಗೆ ಗುಣಾತ್ಮಕ ಚಿಂತನೆ ನಡೆಯಬೇಕು ಎಂದರು.

    ಭಾರತ ರಕ್ಷಣೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಬೆಳೆವಣಿಗೆ ಆಗುತ್ತಿದ್ದು, ಮೋದಿ ತಾಕತ್ತು ಪಾಕಿಸ್ತಾನಕ್ಕೆ ಗೊತ್ತು. ಸದ್ಯ ಪಾಕಿಸ್ತಾನ ಅನಾಯಕತ್ವದ ಹಾದಿ ಹಿಡಿದಿದ್ದು, ಭಾರತ ಆರ್ಥಿಕವಾಗಿ ಬೆಳೆಯುತ್ತಿದೆ. ಅದಕ್ಕೆ ಪ್ರಧಾನಿಗಳಾಗಿರುವ ಮೋದಿ ಕಾರಣ. ಆದ್ದರಿಂದ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು. ಇದೇ ವೇಳೆ ಮೋದಿ ವಿರೋಧಿಗಳು ಇದ್ದು, ಅವರನ್ನು ಸರ್ವಾಧಿಕಾರಿ ಎಂದು ಗುಜರಾತ್ ಘಟನೆಗಳನ್ನು ತೆಗೆದು ಟೀಕಿಸುತ್ತಾರೆ. ಆದರೆ ಮೋದಿ ಗಟ್ಟಿ ಮನುಷ್ಯ, ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ಕಾಂಗ್ರೆಸ್ ಕೊಡದ ಗೌರವವನ್ನ ಅವರು ಕೊಟ್ಟಿದ್ದಾರೆ. ಪಟೇಲರ ಆಡಳಿತ ದೇಶಕ್ಕೆ ಸಿಗದಿದ್ದರೆ ಭಾರತ ಛಿದ್ರವಾಗುತ್ತಿತ್ತು. ಈಗ ಮೋದಿ ಮತ್ತೆ 5 ವರ್ಷ ದೇಶವನ್ನು ಮುಂದುವರಿಸಬೇಕಾದ ಅಗತ್ಯತೆ ಇದೆ ಎಂದರು.

    ರಾಹುಲ್ ವಿರುದ್ಧ ವಾಗ್ದಾಳಿ: 2004 ರಿಂದ 2014 ರವರೆಗೂ ಇದ್ದ ಕಾಂಗ್ರೆಸ್ ಮುಂದಾಳತ್ವದ ಯುಪಿಎ ಸರ್ಕಾರದಲ್ಲಿ ನಾನು ವಿದೇಶಾಂಗ ಸಚಿವನಾಗಿದ್ದೆ. ಆಗ ನಡೆದ ಒಳ್ಳೆಯ ಹಾಗೂ ಕೆಟ್ಟ ಬೆಳವಣಿಗೆಯಲ್ಲಿ ನಾನು ಸಹ ಭಾಗಿ ಆಗಿದೆ. ಆಗಿನ ಪ್ರಧಾನಿಗಳಾದ ಮನಮೋಹನ್ ಸಿಂಗ್ ಅವರಿಗೆ ಸರ್ಕಾರ ಮೇಲೆ ಹಿಡಿತ ಇರಲಿಲ್ಲ. ಕೆಲವೊಂದು ವಿಚಾರಗಳು ಪ್ರಧಾನಿಗಳ ಗಮನಕ್ಕೆ ಬರದೆ ಆಗುತ್ತಿದ್ದವು. ಆದ್ದರಿಂದಲೇ ದೊಡ್ಡ ದೊಡ್ಡ ಹಗರಣ ನಡೆಯಿತು. ಮೋದಿ ಸರ್ಕಾರದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ. ಅದೇ ದೇಶಕ್ಕೆ ಮೋದಿ ಕೊಟ್ಟ ದೊಡ್ಡ ಕೊಡುಗೆ. ಆದರೆ ನಾನು ಸಚಿವನಾಗಿದ್ದಾಗ 80 ವರ್ಷ ವಯಸ್ಸಿನವರು ಸಚಿವರಾಗಬಾರದು ಎಂದರು. ನಾನು ರಾಜೀನಾಮೆ ಕೊಟ್ಟು ಹೊರ ಬಂದೆ ಎಂದರು.

    ರಾಷ್ಟ್ರದ, ಪಾರ್ಲಿಮೆಂಟಿನ ಜವಾಬ್ದಾರನಲ್ಲದ ರಾಹುಲ್ ಸರ್ಕಾರದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಅದೇ ತೀರ್ಮಾನ ಅಂತಿಮವಾಗಿ ಚಲಾವಣೆಗೆ ಬರುತ್ತಿದ್ದವು. ಪ್ರಧಾನ ಕಾರ್ಯದರ್ಶಿ ಸಹ ಆಗದ ರಾಹುಲ್ ಗಾಂಧಿ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ನಾನು ಮುಖ್ಯಮಂತ್ರಿ ಆಗಿದ್ದಾಗ ವಾಜಪೇಯಿಯವರು ಪ್ರಧಾನಿ ಆಗಿದ್ದರು. ಆಗ ಅವರು ನನ್ನ ಪಾಲಿಗೆ ಧರ್ಮರಾಯನ ರೀತಿಯಾಗಿ ಈ ದೇಶವನ್ನು ಅಟಲ್‍ಬಿಹಾರಿ ವಾಜಪೇಯಿ ಆಳಿದರು ಎಂದು ತಿಳಿಸಿದರು.

    ಸ್ಪರ್ಧೆ ಮಾಡಲ್ಲ: ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಂಡ್ಯ ಕ್ಷೇತ್ರದಲ್ಲಿ ನನ್ನ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಇಂದು ಕಾರ್ಯಕರ್ತರೊಂದಿಗೆ ಕರೆದಿರುವ ಸಭೆ ಯಶಸ್ವಿ ಆಗುವ ವಿಶ್ವಾಸವಿದೆ. ನನ್ನ ಜೊತೆ ಕಾಂಗ್ರೆಸ್‍ನಲ್ಲಿದ್ದವರು ಬಿಜೆಪಿಗೆ ಬರಬೇಕು ಎಂಬುವುದು ನನ್ನ ಆಸೆ. ನಿರಂತರವಾಗಿ ಈ ಬಗ್ಗೆ ಬೆಂಬಲಿಗರ ಜೊತೆ ಮಾತನಾಡುತ್ತಿದ್ದೇನೆ ಎಂದರು. ಅಲ್ಲದೇ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೋಸ್ತಿ ಸರ್ಕಾರ ಉರುಳಿಸಲು ಮೋದಿ, ಅಮಿತ್ ಶಾ ಶತಪ್ರಯತ್ನ – ಏಕವಚನದಲ್ಲೇ ಪ್ರಧಾನಿ ವಿರುದ್ಧ ಖರ್ಗೆ ಕಿಡಿ

    ದೋಸ್ತಿ ಸರ್ಕಾರ ಉರುಳಿಸಲು ಮೋದಿ, ಅಮಿತ್ ಶಾ ಶತಪ್ರಯತ್ನ – ಏಕವಚನದಲ್ಲೇ ಪ್ರಧಾನಿ ವಿರುದ್ಧ ಖರ್ಗೆ ಕಿಡಿ

    ಕಲಬುರಗಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರಿಂದ ಹಿಡಿದು ಎಲ್ಲ ಬಿಜೆಪಿ ನಾಯಕರು ಶತಪ್ರಯತ್ನ ನಡೆಸಿದ್ದಾರೆ ಎಂದು ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರವನ್ನು ಈ ರೀತಿ ಉರುಳಿಸಲು ಪ್ರಯತ್ನ ನಡೆಸುವುದು ಸ್ವಾಗತರ್ಹವಲ್ಲ. ಇದೇ ರೀತಿ ಈ ಹಿಂದೆ ಮಣಿಪುರ ಹಾಗೂ ಉತ್ತರಖಂಡ ಸರ್ಕಾರವೂ ಮಾಡಿತ್ತು. ಮತ್ತೆ ಅದೇ ಮಾದರಿಯಲ್ಲಿ ಇಲ್ಲಿ ಕೂಡ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಆದರೆ ಇದು ಅವರಿಗೆ ಫಲಪ್ರದ ನೀಡುವುದಿಲ್ಲ ಎಂದು ಕಿಡಿಕಾರಿದರು.

    ಆಪರೇಷನ್ ಕಮಲ ನಡೆಯುತ್ತಿರುವ ಬಗ್ಗೆ ಸಾಕ್ಷಿ ಇರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎಸಿಬಿ ಗಂಭೀರವಾಗಿ ಪರಿಗಣಿಸಬೇಕು. ಆಗ ಮುಂದಿನ ಅವಧಿಯಲ್ಲಿ ಇಂತಹ ಕೆಲಸಕ್ಕೆ ಕೈ ಹಾಕಲು ಆಗುವುದಿಲ್ಲ ಎಂದರು. ಅಲ್ಲದೇ ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಪಕ್ಷದಿಂದ ನಾಲ್ಕು ಶಾಸಕರು ಹೋಗಿರಬಹುದು ಅಷ್ಟೇ, ಇನ್ನುಳಿದ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಶಾಸಕ ಉಮೇಶ್ ಜಾಧವ್ ಸ್ಪರ್ಧೆ ಹಿನ್ನಲೆ ಕುರಿತು ಪ್ರತಿಕ್ರಿಯೆ ನೀಡಿ, ಜಾಧವ್ ಅವರು ಸ್ಪರ್ಧೆ ಮಾಡುವುದಾದರೆ ಮಾಡಲಿ, ಅದಕ್ಕೆ ನಮ್ಮ ಸ್ವಾಗತ ಇದೆ. ಈ ಮೂಲಕವಾದರೂ ಕಲಬುರಗಿ ಜನರತ್ತ ನೋಡುವಂತಾಗಬಹುದು ಎಂದು ವ್ಯಂಗ್ಯವಾಗಿ ಕುಟುಕಿದರು.

    ಪ್ರಧಾನಿ ವಿರುದ್ಧ ಏಕವಚನ ಪ್ರಯೋಗ: ಕೇಂದ್ರ ಸರ್ಕಾರದ ಹಗರಣದ ಬಗ್ಗೆ ಸದನದಲ್ಲಿ ಗಮನ ಸೆಳೆಯಲು, ನಾನು ಬಸವಣ್ಣ ನವರ ವಚನವನ್ನು ಪ್ರಸ್ತಾಪಿಸಿದ್ದೇನೆ. 16ನೇ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಇದೇ ಮೊದಲ ಬಾರಿಗೆ ವಚನಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಿಲ್ಲ. ಈ ಹಿಂದೆಯೂ ಕೂಡ ರೈಲ್ವೇ ಬಜೆಟ್ ಮಂಡಿಸುವ ವೇಳೆ ವಚನಗಳನ್ನು ಪ್ರಸ್ತಾಪ ಮಾಡಿದ್ದೆ ಎಂದರು.

    ಮೋದಿ ತಮ್ಮ ಪ್ರತಿ ಭಾಷಣದಲ್ಲೂ ‘ಸತ್ತರ್ ಸಾಲ್ ಕ್ಯಾ ಕಿಯಾ ಅಂತಾ’ ಪ್ರಶ್ನೆ ಮಾಡುತ್ತಿದ್ದಾರೆ. ನಮಗೆ ಬೈಯ್ಯುವ ಭರಾಟೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ಅವರನ್ನು ಬೈಯುತ್ತಿದ್ದಾನೆ. ಈ ಮೂಲಕ ಜನರು, ಯುವಕರ ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ನನ್ನ ಭಾಷಣದಲ್ಲಿ ಕಳಬೇಡ, ಕೊಲಬೇಡ ಎಂಬ ವಚನ ಹೇಳಿ ಪ್ರಧಾನಿ ಮೋದಿಗೆ ಹೇಳಿದೆ, ಆದರೆ ಇವೆಲ್ಲಾ ಗುಣಗಳು ಅವನಲ್ಲಿವೆ ಎಂದು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ಖರ್ಗೆ ವಾಗ್ದಾಳಿ ನಡೆಸಿದರು. ಅಲ್ಲದೇ 1977 ರಲ್ಲಿ ಇಂಧಿರಾ ಗಾಂಧಿ ಅವರ ತುರ್ತು ಪರಿಸ್ಥಿತಿಯನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ನೀವು ಈಗಲೂ ಕೂಡ ಆದನ್ನೇ ಹೇಳಿ ಚುನಾವಣೆಗೆ ಹೋಗುತ್ತಿದ್ದೀರಿ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv