Tag: prime minister modi

  • ವಾರಣಾಸಿಯಲ್ಲಿ ಮೋದಿ ರೋಡ್ ಶೋ – 1.5 ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್

    ವಾರಣಾಸಿಯಲ್ಲಿ ಮೋದಿ ರೋಡ್ ಶೋ – 1.5 ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್

    ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆದಿದ್ದ ಕಾಶಿ ರಸ್ತೆಯನ್ನು ಬರೋಬ್ಬರಿ ಒಂದೂವರೆ ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್ ಮಾಡಲಾಗಿದೆ.

    ದೇಗುಲ ನಗರಿಯ ಶೇ.30ರಷ್ಟು ಮಂದಿಗೆ ಕುಡಿಯಲು ನೀರಿಲ್ಲ. ಆದರೆ ಮೋದಿ ಬರುತ್ತಾರೆ ಎಂದು ಕುಡಿಯುವ ನೀರು ಬಿಟ್ಟು ಕಾಶಿ ರಸ್ತೆಯ ಸ್ವಚ್ಛತೆಯನ್ನು ಮಾಡಲಾಗಿದೆ. ವಾರಣಾಸಿ ಮುನ್ಸಿಪಲ್ ಕಾರ್ಪೋರೇಷನ್ 400 ಸಿಬ್ಬಂದಿಯಿಂದ ರೋಡ್ ಕ್ಲೀನ್ ಮಾಡಿಸಲಾಗಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

    ಪ್ರಧಾನಿ ಮೋದಿ ಕ್ಷೇತ್ರ ಕಾಶಿಯಲ್ಲಿ ಇದುವರೆಗೆ ಶೇ.70ರಷ್ಟು ಮನೆಗಳಿಗೆ ಮಾತ್ರ ಪೈಪ್‍ಲೈನ್ ಆಗಿದೆ. ಇನ್ನೂ ಶೇಕಡಾ 30ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವಿಲ್ಲ. ಆದರೂ ಈ ರೀತಿ ಕುಡಿಯುವ ನೀರನ್ನು ರಸ್ತೆಯ ಸ್ವಚ್ಛತೆಗಾಗಿ ಬಳಸಿಕೊಂಡಿರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ.

    ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ರಸ್ತೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಕುಡಿಯುವ ನೀರಿನಲ್ಲಿ ಕ್ಲೀನ್ ಮಾಡಲಾಗಿದೆ. ಅಷ್ಟೇ ಅಲ್ಲದೇ ರಸ್ತೆಯ ಪಕ್ಕದಲ್ಲಿದ್ದ ಗೋಡೆಯನ್ನು ಸಹ ಕುಡಿಯುವ ನೀರಿನಿಂದ ಸ್ವಚ್ಛ ಮಾಡಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನವನ್ನು ವಾರಣಾಸಿಯಿಂದ ಪ್ರಾರಂಭಿಸಿದ್ದರು. ಹೀಗಾಗಿ ಪ್ರಧಾನಿ ಮೋದಿ ಬರುವ ದಾರಿ ಕಸದಿಂದ ಕೊಳಕಾಗಿದ್ದರೆ ಅದನ್ನು ನೋಡಿ ಮೋದಿ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಈ ರೀತಿ ಕುಡಿಯುವ ನೀರನ್ನು ರಸ್ತೆ ಸ್ವಚ್ಛತೆಗಾಗಿ ವ್ಯರ್ಥ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

  • ಖಾತೆಗೆ 15 ಲಕ್ಷ ರೂ. ಬಂತೇ – ದಿಗ್ವಿಜಯ್ ಪ್ರಶ್ನೆಗೆ ವೇದಿಕೆಯಲ್ಲೇ ಉತ್ತರ ಕೊಟ್ಟ ಯುವಕ

    ಖಾತೆಗೆ 15 ಲಕ್ಷ ರೂ. ಬಂತೇ – ದಿಗ್ವಿಜಯ್ ಪ್ರಶ್ನೆಗೆ ವೇದಿಕೆಯಲ್ಲೇ ಉತ್ತರ ಕೊಟ್ಟ ಯುವಕ

    ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪಕ್ಷಗಳ ನಡುವಿನ ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದ್ದು, ಇಂದು ಕೂಡ ಕಾಂಗ್ರೆಸ್ ಹಿರಿಯ ನಾಯಕ, ಭೋಪಾಲ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಭೋಪಾಲ್ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು ಇಂದು ಕಾರ್ಯಕತರ ಸಮಾವೇಶದಲ್ಲಿ ಮಾತನಾಡಿ,”ಪ್ರಧಾನಿ ಮೋದಿ ನಿಮ್ಮ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು 5 ವರ್ಷ ಕಳೆದಿದ್ದು, 15 ಲಕ್ಷ ರೂ. ಬಂದಿದ್ಯಾ?” ಎಂದು ಪ್ರಶ್ನಿಸಿದ್ದರು.

    ಈ ವೇಳೆ,”ಯುವಕನೊಬ್ಬ ನನ್ನ ಖಾತೆಗೆ ಬಂದಿದೆ” ಎಂದು ಕೈ ಮೇಲೆತ್ತಿ ಉತ್ತರ ನೀಡಿದ್ದ. ಇದನ್ನು ಕಂಡ ದಿಗ್ವಿಜಯ್ ಸಿಂಗ್ ಆಶ್ಚರ್ಯಗೊಂಡು,”ಹೌದೇ? ಬಂದಿದ್ದರೆ ಜನರಿಗೆ ತಿಳಿಸು ಬಾ” ಎಂದು ವೇದಿಕೆಗೆ ಯುವಕನನ್ನು ಕರೆದಿದ್ದಾರೆ.

    ವೇದಿಕೆಗೆ ತೆರಳಿದ ಯುವಕ,”ನನ್ನ ಖಾತೆಗೆ 15 ಲಕ್ಷ ರೂ. ಬಂದಿದೆ. ಪ್ರಧಾನಿ ಮೋದಿ ಅವರು ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸುವ ಮೂಲಕ ಉಗ್ರರನ್ನು ನಾಶ ಮಾಡಿ 15 ಲಕ್ಷ ರೂ. ಹಾಕಿದ್ದಾರೆ” ಎಂದು ಭಾಷಣ ಮಾಡಿದ್ದಾನೆ.

    ಯುವಕನ ಉತ್ತರದಿಂದ ಸಿಡಿಮಿಡಿಗೊಂಡ ದಿಗ್ವಿಜಯ್ ಸಿಂಗ್ ತಕ್ಷಣ ಆತನನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ. 15 ಲಕ್ಷ ರೂ. ಬಂತೇ ಎಂದಷ್ಟೇ ನಾನು ಕೇಳಿದ್ದೇ ಎಂದು ಕೋಪದಿಂದಲೇ ನಂತರ ಭಾಷಣ ಮುಂದುವರಿಸಿದರು.

  • ಸಂವಿಧಾನ ಬದಲಾಯಿಸಲು ಮುಂದಾದ್ರೆ ರಕ್ತಪಾತವಾಗುತ್ತೆ: ಸಿದ್ದರಾಮಯ್ಯ ಎಚ್ಚರಿಕೆ

    ಸಂವಿಧಾನ ಬದಲಾಯಿಸಲು ಮುಂದಾದ್ರೆ ರಕ್ತಪಾತವಾಗುತ್ತೆ: ಸಿದ್ದರಾಮಯ್ಯ ಎಚ್ಚರಿಕೆ

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ಏನಾದ್ರೂ ಸಂವಿಧಾನ ಬದಲಾವಣೆ ಮಾಡಲು ಮುಂದಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ. ಆ ರಕ್ತಪಾತದ ನೇತೃತ್ವವನ್ನು ನಾನು ವಹಿಸುತ್ತೇನೆಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ ಆಯೋಜಿಸಿದ್ದ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆಂದರೆ ಏನ್ ಹುಡುಗಾಟ ಆಡ್ತಿರಾ? ಸಂವಿಧಾನ ಈ ದೇಶದ ಧರ್ಮಶಾಸ್ತ್ರ. ನಮಗೆ ಭಗವದ್ಗೀತೆ ಮುಸ್ಲಿಂರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇದೆ. ಆದರೆ ಈ ದೇಶದ ಎಲ್ಲ ಜನರಿಗೆ ಸಂವಿಧಾನವೇ ಕುರಾನ್, ಬೈಬಲ್, ಭಗವದ್ಗೀತೆ ಎಂದರು.

    ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ, ರೈತರಿಗೆ ಬಿಜೆಪಿಯವರು ವಿರುದ್ಧವಾಗಿದ್ದಾರೆ. ಅದಕ್ಕೆ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆಂದು ಎಂದು ಆರೋಪಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೋದಿ ಸೋಲಬೇಕು. ಒಂದೊಮ್ಮೆ ಮತ್ತೆ ಗೆದ್ದರೆ ಹಿಟ್ಲರ್ ರೀತಿ ಸಾರ್ವಧಿಕಾರಿ ಆಗುತ್ತಾರೆ. ಮೋದಿ ಅವರನ್ನು ಸೋಲಿಸಿ, ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಕರೆ ನೀಡಿದರು.

    ಮಾಧ್ಯಮಗಳೊಂದಿಗೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮೋದಿ ಸೋಲಿನ ಭಯದಿಂದ ಅತಾಶರಾಗಿದ್ದು, ಇದರಿಂದಲೇ ಜೆಡಿಎಸ್, ಕಾಂಗ್ರೆಸ್ ಮುಖಂಡರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದರೆ ಇದು ಅವರಿಗೆ ತಿರುಗುಬಾಣ ಆಗಲಿದೆ ಎಂದರು.

  • ಕರ್ನಾಟಕ ಸಿಎಂ ಪ್ರತಿನಿತ್ಯ ಅಳ್ತಾರೆ: ಸುಷ್ಮಾ ಸ್ವರಾಜ್

    ಕರ್ನಾಟಕ ಸಿಎಂ ಪ್ರತಿನಿತ್ಯ ಅಳ್ತಾರೆ: ಸುಷ್ಮಾ ಸ್ವರಾಜ್

    ಹುಬ್ಬಳ್ಳಿ: ಬಹುಮತದ ಸರ್ಕಾರವಿದ್ದರೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಬಹುಮತದ ಸರ್ಕಾರ ಇಲ್ಲದಿದ್ದರೆ ಏನಾಗುತ್ತೆ ಅಂತಾ ರಾಜ್ಯದ ಮೈತ್ರಿ ಸರ್ಕಾರ ನೋಡಿದರೆ ಗೊತ್ತಾಗುತ್ತೆ. 37 ಶಾಸಕರು ಹೊಂದಿದ್ದವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ. ಆದರೆ ಪ್ರತಿ ದಿನ ಸಿಎಂ ಕುರ್ಚಿ ಎಳೆದಾಡುತ್ತಾರೆ. ಪರಿಣಾಮ ಇಲ್ಲಿನ ಮುಖ್ಯಮಂತ್ರಿಗಳು ಪ್ರತಿದಿನ ಅಳುತ್ತಾರೆ, ದೂರುತ್ತಾರೆ. ಆ ಬಳಿಕ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಅವರನ್ನೇ ಅಪ್ಪಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವ್ಯಂಗ್ಯ ಮಾಡಿದರು.

    ನಗರದಲ್ಲಿ ನಡೆದ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಜ್ ಯಾತ್ರೆಗೆ ಪ್ರತಿವರ್ಷ ತೆರಳುತ್ತಿದ್ದ ಮುಸ್ಲಿಮರ ಸಂಖ್ಯೆಯನ್ನು ಐವತ್ತು ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರು ಪುರುಷರ ಜೊತೆಗೆ ಹಜ್‍ಗೆ ತೆರಳಬೇಕು ಎನ್ನುವ ನಿರ್ಬಂಧವನ್ನು ಸಡಿಲಿಸಲಾಗಿದೆ. ಈ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಮೋದಿಯವರ ಸರ್ಕಾರ ಕೆಲಸ ಮಾಡಿದೆ. ಪೂರ್ಣ ಬಹುಮತದ ಕಾರಣ ಮೋದಿ ಸರ್ಕಾರ ಇಷ್ಟೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.

    ಆಡಳಿತ ಪಕ್ಷ ಸ್ಥಿರವಾಗಿ ಇಲ್ಲದಿದ್ದರೆ ಏನೆಲ್ಲಾ ಆಗಲಿದೆ ಎಂಬುವುದಕ್ಕೆ ರಾಜ್ಯ ಮೈತ್ರಿ ಸರ್ಕಾರವನ್ನು ನೋಡಿದ್ದು, ದೇಶದ ಸುರಕ್ಷರತೆಗೆ, ಸುಸ್ಥಿರತೆ ಹಾಗೂ ಅಭಿವೃದ್ಧಿಗೆ ಮತ ನೀಡಿ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮನವಿ ಮಾಡಿದ್ದಾರೆ.

    ದೇಶದ ಸುರಕ್ಷತೆಗೆ, ಸುಸ್ಥಿರತೆಗೆ, ಅಭಿವೃದ್ಧಿಗೆ ಈ ಬಾರಿ ಮತಹಾಕಿ. ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಸದ್ಯ ಸುರಕ್ಷಿತವಾಗಿದೆ. ಎಲ್ಲರೂ ಕಮಲದ ಗುರುತಿಗೆ ಮತಹಾಕಿ ಪೇಡೆ ತಿನ್ನಿರಿ ಎಂದು ಕರೆ ನೀಡಿದರು.

  • ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ವಿಚಾರಕ್ಕೆ ಕೈ ಹಾಕಿಲ್ಲ: ಸಚಿವ ಡಿಕೆಶಿ

    ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ವಿಚಾರಕ್ಕೆ ಕೈ ಹಾಕಿಲ್ಲ: ಸಚಿವ ಡಿಕೆಶಿ

    ಶಿವಮೊಗ್ಗ: ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿಗಳು ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಸರ್ಕಾರ ಇಬ್ಬರು ಸಚಿವರು ಕಿತ್ತಾಡುತ್ತಿದ್ದಾರೆ. ಅಲ್ಲದೇ ಸಿಎಂ ಎಚ್‍ಡಿಕೆ ಹಾಗೂ ರೇವಣ್ಣ ಬಗ್ಗೆ ಮಾತನಾಡಿದ್ದಾರೆ. ಆದರೆ ದೊಡ್ಡ ಸ್ಥಾನದಲ್ಲಿ ಇದ್ದುಕೊಂಡು ಸಣ್ಣ ಸಣ್ಣ ವಿಚಾರಗಳನ್ನು ಪ್ರಸ್ತಾವನೆ ಮಾಡಿದ್ದು ಸರಿಯಲ್ಲ. ಅದ್ದರಿಂದ ನಾನು ಅವರಿಗೆ ನೇರವಾಗಿ ಹೇಳುತ್ತಿದ್ದು, ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ವಿಚಾರಕ್ಕೆ ಕೈ ಹಾಕಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮದ ವಿಚಾರ ಕೇವಲ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿಯದ್ದು ಮಾತ್ರ ಅಲ್ಲ. ಇದು ಅಂದು ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದು, ಅವತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮನಮೋಹನ್ ಸಿಂಗ್ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದನ್ನು ಅವರಿಬ್ಬರು ಮುಂದುವರಿಸಿದ್ದರು. ಆದರೆ ಆ ಪತ್ರಕ್ಕೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಸಹಿ ಹಾಕಿದ್ದಾರೆ. ನಾನು ಕ್ಯಾಬಿನೆಟ್ ನಲ್ಲಿ ಸಮ್ಮತಿ ಸೂಚಿಸಿದ್ದೆ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಪ್ಪಿಗೆ ಸೂಚಿಸಿದ್ದೆ. ಇದರಿಂದ ನನಗೆ ವೈಯುಕ್ತಿಕವಾಗಿ ಹಿನ್ನಡೆ ಆಯ್ತು, ಮಾಡಬಾರದಿತ್ತು ಎಂದು ಹೇಳಿದ್ದು ನಿಜ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಬೇರೆ ಯಾರು ಏನ್ ಬೇಕಾದ್ರೂ ಅಂದುಕೊಳ್ಳಲಿ ಬಿಡಿ ಎಂದರು.

    ಧರ್ಮ, ಜಾತಿಯ ವಿಚಾರವನ್ನೇ ಮೋದಿ ರಾಜಕೀಯಕ್ಕೆ ಬಳಸಿಕೊಂಡಿದ್ದು ತಪ್ಪು. ಆದರೆ ಬಡ ರೈತರ ಸಮಸ್ಯೆ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಪರಿಹಾರ ಕೊಡಲು ಮನಸ್ಸಿಲ್ಲ. ನಮ್ಮ ಪಕ್ಷದ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರು ದೇಶಕ್ಕಾಗಿ ತ್ಯಾಗ ಮಾಡಲಿಲ್ಲವಾ? ಈಗ ರಾಜಕೀಯಕ್ಕಾಗಿ ಸೈನಿಕರನ್ನು ಬಳಸಿಕೊಳುತ್ತೀರಾ? ಗುಪ್ತಚರ ವರದಿ ವಿಫಲತೆಯನ್ನು ಮರೆಮಾಚಿ ಪುಲ್ವಾಮಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದರು.

    ಕೇಂದ್ರ ಸರ್ಕಾರದಿಂದ ಎಲ್ಲಾ ಇಲಾಖೆಗಳನ್ನು ಮಿಸ್ ಯೂಸ್ ಮಾಡಲಾಗಿದೆ. ಸಿಎಜಿ ರಿಪೋರ್ಟ್ ಏನಾಯ್ತು? ರಾಜಕೀಯಕ್ಕೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿರಲ್ಲ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಎಸೆದರು. ಇದೇ ವೇಳೆ ಈಶ್ವರಪ್ಪ ಅವರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಈಶ್ವರಪ್ಪ ಮೆಂಟಲ್ ಕೇಸ್. ಅವರ ಪಾರ್ಟಿ ಅವರೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.

  • ದೇಶದ್ರೋಹಿಗಳ ಪರ ಕಾಂಗ್ರೆಸ್ ನಿಂತಿದೆ: ಮೋದಿ

    ದೇಶದ್ರೋಹಿಗಳ ಪರ ಕಾಂಗ್ರೆಸ್ ನಿಂತಿದೆ: ಮೋದಿ

    ಚಿಕ್ಕೋಡಿ/ಬೆಳಗಾವಿ: ಮೋದಿ ಅಲೆ ಹೇಗಿರುತ್ತೆ ಎಂಬುದನ್ನು ಚಿಕ್ಕೋಡಿಯಲ್ಲಿ ಬಂದು ನೋಡಬೇಕು. ದೆಹಲಿಯ ಎಸಿ ಕೊಠಡಿಯಲ್ಲಿ ಕುಳಿತು ಸೋಲಿಸಲು ಪ್ರಯತ್ನಿಸುತ್ತಿರುವ ನಾಯಕರೇ ಹೊರಗೆ ಬಂದು ನೋಡಿ. ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿಯ ನಾಯಕರ ಬಗ್ಗೆ ಮತ ಕೇಳಲು ಬಂದಿದ್ದೆ. ಇಂದು ನನಗಾಗಿ ಮತ ಕೇಳಲು ದೇಶಾದ್ಯಂತ ಸಂಚರಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

    ಚಿಕ್ಕೋಡಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ನಮ್ಮ ಅಭಿವೃದ್ಧಿಯ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜೋಡಿಗೆ ಕೇವಲ ಮತಗಳು ಮಾತ್ರ ಕಾಣುತ್ತವೆ. ಒಬ್ಬೊಬ್ಬರ ನಡುವೆ ಹೊಂದಾಣಿಕೆ ಇಲ್ಲ. ಮೋದಿಗೆ ಬೈಯೋದು, ಕುಟುಂಬ ರಾಜಕಾರಣ, ಉಗ್ರವಾದ ಮತ್ತು ಭ್ರಷ್ಟಾಚಾರ ಮಾಡುವುದು ಎರಡು ಪಕ್ಷಗಳ ಕೆಲಸವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸೈನಿಕರ ಬಗ್ಗೆ ಅವಮಾನಿಸುವಂತಹ ಹೇಳಿಕೆಯನ್ನು ನೀಡುತ್ತಾರೆ. ಇವರಿಗೆ ಎಂದೂ ದೇಶದ ಅಭಿವೃದ್ಧಿ ಮುಖ್ಯವಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಅಧಿಕಾರಕ್ಕೆ ಬಂದರೆ ಸೈನಿಕರ ಹಕ್ಕುಗಳನ್ನು ಹಿಂಪಡೆಯುತ್ತವೆ ಎಂದು ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದೆ. ದೇಶದ್ರೋಹದ ಪರವಾಗಿ ಕೆಲಸ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಪಿಎಂ ಕಿಸಾನ್ ಯೋಜನೆ ಲಾಭವನ್ನು ಕರ್ನಾಟಕ ಸರ್ಕಾರ, ಹೆಚ್ಚು ರೈತರ ಹೆಸರನ್ನು ನೀಡಿಲ್ಲ ಎಂದು ಆರೋಪಿಸಿತ್ತು. ಮೇ 23ರ ಬಳಿಕ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯ ಬಳಿಕ ಎಲ್ಲ ರೈತರ ಖಾತೆಗೆ ಹಣ ಹಾಕಲಾಗುವುದು. ಈ ಯೋಜನೆಯ ಲಾಭ ಮುಂದಿನ ದಿನಗಳಲ್ಲಿ ಎಲ್ಲ ರೈತರಿಗೆ ಸಿಗಲಿದೆ. ಸರ್ಕಾರ ಸುಭದ್ರವಾಗಿದ್ದರೆ, ದೇಶ ಭದ್ರವಾಗಿರುತ್ತದೆ. ಸರ್ಕಾರ ಸುಭದ್ರವಾಗಿಸಲು ಚೌಕಿದಾರ ಬೇಕು. ನನ್ನಂತೆ ದೇಶದ ಎಲ್ಲರೂ ಚೌಕಿದಾರ ಎಂದರು.

    ಕಾಂಗ್ರೆಸ್ ಬಂದ್ರೆ ಮತ್ತೆ ಬೆಲೆ ಹೆಚ್ಚಳ ಮಾಡುತ್ತದೆ. ಒಂದು ವೇಳೆ ಇವರು ಅಧಿಕಾರಕ್ಕೆ ಬಂದರೆ ಬೆಲೆ ಹೆಚ್ಚಳ, ವಂಶವಾದ, ದಲ್ಲಾಳಿಗಳ ಅಭಿವೃದ್ಧಿ ಮಾತ್ರ ಆಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕಮಲದ ಗುರುತಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

    ಎಂದಿನಂತೆ ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸಿದರು. ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಪರ ಪ್ರಧಾನಿ ಮೋದಿಯವರು ಮತಯಾಚಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ತಾರಾ ಅನುರಾಧ ಪ್ರಧಾನಿಗಳಿಗೆ ಕೊಡುಗೆಯನ್ನು ನೀಡಿ ಕಾಲಿಗೆ ನಮಸ್ಕರಿಸಿದರು.

    ಬಾಗಲಕೋಟೆಯಲ್ಲಿ ಮಾತನಾಡಿದ್ದ ಮೋದಿ, ರಾಜ್ಯ ಸರ್ಕಾರವನ್ನು ದುರ್ಬಲ ಮತ್ತು ಸಿಎಂ ಕಣ್ಣೀರು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು. ಅಂತೆಯೇ ಲಿಂಗಾಯತ ಧರ್ಮ ವಿಚಾರವನ್ನು ಪ್ರಸ್ತಾಪಿಸಿ, ಸಚಿವರ ಹೆಸರು ಹೇಳದೇ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಕಾಲೆಳೆದಿದ್ದರು.

  • ಕನ್ನಡದಲ್ಲೇ ಭಾಷಣ ಆರಂಭಿಸಿ ಮೋದಿಗೆ ಸವಾಲು ಎಸೆದ ಚಂದ್ರಬಾಬು ನಾಯ್ಡು

    ಕನ್ನಡದಲ್ಲೇ ಭಾಷಣ ಆರಂಭಿಸಿ ಮೋದಿಗೆ ಸವಾಲು ಎಸೆದ ಚಂದ್ರಬಾಬು ನಾಯ್ಡು

    – ಮೋದಿ ಗೆಲುವು ಪಡೆದರೆ ಮತ್ತೆ ಚುನಾವಣೆ ನಡೆಯಲ್ಲ
    – ಕೇಂದ್ರ ಸಂಸ್ಥೆಗಳ ದುರುಪಯೋಗ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ ಮಂಡ್ಯ ಕ್ಷೇತ್ರದಲ್ಲಿ ಇಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ನಿಖಿಲ್ ಪರ ಮತಯಾಚನೆ ಮಾಡಿದರು. ಈ ವೇಳೆ ಕನ್ನಡಲ್ಲೇ ಭಾಷಣ ಆರಂಭಿಸಿ ನೆರೆದಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

    ಲೊಕಸಭಾ ಚುನಾವಣೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರು ಸೋಲುವುದು ಖಚಿತವಾಗಿದ್ದು, ಗುಜರಾತ್‍ಗೆ ಮರಳಿ ಹಿಂದಿರುಗಲಿದ್ದಾರೆ. ದಕ್ಷಿಣ ಭಾರತ ಜನತೆಗೆ ದೇವೇಗೌಡರು ಹಿರಿಯರಾಗಿದ್ದು, ಅವರೊಂದಿಗೆ ಕೆಲಸ ಮಾಡಲು 1995ರಲ್ಲಿ ನನಗೆ ಅವಕಾಶ ಲಭಿಸಿತ್ತು. ಆ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಅವರು ದೇಶಕ್ಕಾಗಿ ಪ್ರಧಾನಿಯಾದರು. ಅಂದು ಕೂಡ ಬಿಜೆಪಿ ಅಧಿಕಾರಕ್ಕೆ ಬರದಂತೆ ಮಾಡಲು ದೇವೇಗೌಡ ಅವರಿಗೆ ಅವಕಾಶ ನೀಡಲಾಯಿತು ಎಂದು ತಿಳಿಸಿದರು.

    ಮಣ್ಣಿನ ಮಗ ಆಗಿರುವ ದೇವೇಗೌಡರು ಸತತ 24 ಗಂಟೆ ರೈತರ ಅಭಿವೃದ್ಧಿಗಾಗಿ ಕೆಲಸ ಮಾಡಲು ಚಿಂತನೆ ನಡೆಸುತ್ತಾರೆ. ಅವರ ನಾಯಕತ್ವದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟ. ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಮೋದಿ ಮನೆಗೆ ಹೋಗಬೇಕು. ನೋಟು ನಿಷೇಧ ಮಾಡಿ ದೇಶದ ಆರ್ಥಿಕ ಪರಿಸ್ಥಿತಿ ಪೆಟ್ಟು ಕೊಟ್ಟಿದ್ದಾರೆ. ನಿರುದ್ಯೋಗ, ಕೃಷಿ ವಲಯದಲ್ಲಿ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ 2 ಸಾವಿರ ನೋಟು ಜಾರಿ ಮಾಡಿ ಭ್ರಷ್ಟಾಚಾರವನ್ನು ಹೆಚ್ಚು ಮಾಡಿದ್ದಾರೆ. ಮೋದಿ, ಅಮಿತ್ ಶಾ ದೇಶದ ಅತಿದೊಡ್ಡ ಭ್ರಷ್ಟರಾಗಿದ್ದು, ಅವರಿಗೆ ವಿರೋಧಿಗಳ ವಿರುದ್ಧ ಆರೋಪ ಮಾಡುವೆ ಕೆಲಸ ಆಗಿದೆ ಎಂದರು.

    ದೇಶದ ರಕ್ಷಣೆಯಲ್ಲೂ ರಾಜಿ ಮಾಡಿ ರಫೇಲ್ ಹಗರಣ ಮಾಡಿದ್ದಾರೆ. ಕೇಂದ್ರ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ, ಆಂಧ್ರ, ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಐಟಿ, ಇಡಿ ದಾಳಿ ನಡೆಸಲಾಗಿದೆ. ಚುನಾವಣಾ ಆಯೋಗ ಕೂಡ ಕೇಂದ್ರ ಸರ್ಕಾರ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿದ್ದು, ನಾವು ಇವಿಎಂ ವಿರುದ್ಧ ಹೋರಾಟ ನಡೆಸಿದ್ದೇವೆ. ನಿನ್ನೆ ಕೂಡ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಮನವಿ ಮಾಡಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಶೇ. 50 ರಷ್ಟು ಇವಿಎಂಗಳನ್ನು ತಾಳೆ ನೋಡಿ ಪರೀಕ್ಷೆ ಮಾಡಲು ಮನವಿ ಮಾಡುತ್ತೇವೆ. ಈ ಬಗ್ಗೆ ನೀವು ಬೆಂಬಲ ನೀಡಬೇಕು ಎಂದರು.

    ಇದೇ ವೇಳೆ ಮೋದಿ ಅವರಿಗೆ ಉತ್ತರ ನೀಡುವಂತೆ ಕೆಲ ಸವಾಲುಗಳನ್ನು ಎಸೆದ ಅವರು, ದೇಶದಲ್ಲಿ 40 ವರ್ಷದಲ್ಲಿ ಮೊದಲ ಬಾರಿಗೆ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು ಇದಕ್ಕೆ ನಿಮ್ಮ ಉತ್ತರ ಏನು? ದೇಶದಲ್ಲಿ ವಾಯಮಾಲಿನ್ಯ ಹೆಚ್ಚಾಗಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಗುಂಪು ಗಲಭೆಗಳು ಹೆಚ್ಚಾಗಿದ್ದು, ಭಾರತ ರೂಪಾಯಿ ಬೆಲೆ ಕೂಡ ನಷ್ಟಕ್ಕೆ ಕಾರಣವಾಗಿದೆ. ಪರಿಸರ ರಕ್ಷಣೆಯಲ್ಲೂ ದೇಶ ಹಿಂದುಳಿದಿದೆ. ಈ ಎಲ್ಲಾ ಅಂಶಗಳು ನನ್ನ ಆರೋಪಗಳಲ್ಲ ಕೆಲ ವರದಿಗಳ ಅಂಕಿ ಅಂಶಗಳು. ಇದುವರೆಗೂ ಒಂದು ಪತ್ರಿಕಾಗೋಷ್ಠಿ ನಡೆಸಿದ ನೀವು ಈ ಬಗ್ಗೆ ಉತ್ತರಿಸಿ ಎಂದು ಸವಾಲು ಎಸೆದರು.

    ಕುಮಾರಸ್ವಾಮಿ ಅವರು ವಿಷನ್ ಇರುವ ನಾಯಕರಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ದೇಶಕ್ಕೆ ಯುವ ನಾಯಕರ ಅಗತ್ಯ ಇದ್ದು, ನಿಖಿಲ್ ವಿರುದ್ಧ ನಿಂತಿರುವ ಅಭ್ಯರ್ಥಿಗೆ ಹಿಂಬಾಗಿಲಿನಿಂದ ಬಿಜೆಪಿ ಬೆಂಬಲ ನೀಡಿದೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಚಿಂತನೆ ಮಾಡಿ ಮತ ನೀಡಬೇಕು. 2019ರ ಚುನಾವಣೆ ಬಹುಮುಖ್ಯವಾಗಿದ್ದು ಈ ಬಾರಿ ಮೋದಿ ಸೋಲದಿದ್ದರೆ ಮುಂದಿನ ಬಾರಿ ಚುನಾವಣೆಯೇ ನಡೆಸಲು ಅವರು ಅವಕಾಶ ನೀಡಲ್ಲ. ಸದ್ಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕ, ಆಂಧ್ರಕ್ಕೆ ಸೇರಿದಂತೆ ದಕ್ಷಿಣದ ರಾಜ್ಯಗಳು ಸೇರಿ ಹಲವು ರಾಜ್ಯಗಳಿಗೆ ಮೋದಿ ಕೊಡುಗೆ ನೀಡಿಲ್ಲ. ಆದ್ದರಿಂದ ಈ ಬಾರಿ ಮೋದಿರನ್ನು ಸೋಲಿಸಿ ಎಂದು ಕರೆ ನೀಡಿದರು.

    ವಿವಿ ಪ್ಯಾಟ್ ನಲ್ಲಿ ಮತ ಹಾಕಿದರೆ 7 ಸೆಕೆಂಡಿನಲ್ಲಿ ಮತಗಳು ಬದಲಾಗುತ್ತೆ. ಈ ಬಗ್ಗೆ ನಮಗೆ ಅನುಮಾನ ಇದ್ದು, ಇದನ್ನು ಪ್ರಶ್ನೆ ಮಾಡಿದರೆ ನಮ್ಮನ್ನು ದೇಶ ದ್ರೋಹಿಗಳು ಎನ್ನುತ್ತಾರೆ. ಪಾಕ್ ಪ್ರಧಾನಿ, ಮೋದಿ ಇಬ್ಬರು ಒಂದೇ. ದೇಶಕ್ಕೆ ಮೋದಿ ಮೋಸ ಮಾಡಿದ್ದಾರೆ. ಆದ್ದರಿಂದ ನಾನು ಅಮರಾವತಿಯಿಂದ ಬಂದು ಮನವಿ ಮಾಡುತ್ತಿದ್ದು, ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿ ಎಂದರು.

  • ಈಗಿನ ಯುವಕರು ಮೋದಿ, ಮೋದಿ ಅಂತಾರೆ – ನಾನು ನೋಡದ ಮೋದಿನಾ: ಎಚ್‍ಡಿಡಿ ಗುಡುಗು

    ಈಗಿನ ಯುವಕರು ಮೋದಿ, ಮೋದಿ ಅಂತಾರೆ – ನಾನು ನೋಡದ ಮೋದಿನಾ: ಎಚ್‍ಡಿಡಿ ಗುಡುಗು

    ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲ ದಿನಗಳು ಬಾಕಿ ಇದ್ದು, ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ಹೆಚ್ಚಿಸಿದೆ. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಈಗಿನ ಯುವಕರು ಮೋದಿ, ಮೋದಿ ಅಂತಿದ್ದಾರೆ. ಆದರೆ ನಾನು ನೋಡದ ಮೋದಿನಾ ಎಂದು ಹೇಳಿ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ನಾನು ಪಾರ್ಲಿಮೆಂಟ್ ಹೋಗೋದು ಸತ್ಯ. ಮೋದಿ ಅವರನ್ನು ಎದುರಿಸುವ ಕಿಚ್ಚು ಈ ರೈತನ ಮಗನಿಗೆ ಇದೆ. ಸ್ವರ್ಗವನ್ನ ಈ ದೇಶಕ್ಕೆ ತರುತ್ತೇನೆ ಎಂದ ಆ ಮನುಷ್ಯ ರೈತರಿಗೆ ಏನು ಮಾಡಿದ್ದಾರೆ. ಮೋದಿ ಸೈನಿಕರಿಗೆ ಶೂ, ಬಟ್ಟೆ ಜಾಕೆಟ್ ಇರಲ್ಲಿಲ್ಲ ನಾವು ಕೊಟ್ಟೆವು ಅಂತಿದ್ದಾರೆ. ವಾಜಪೇಯಿ ಇದ್ದಾಗ ಕಾರ್ಗಿಲ್ ಯುದ್ದ ಮಾಡುವಾಗ ನಮ್ಮ ಸೈನಿಕರಿಗೆ ಏನು ಇರಲಿಲ್ವಾ ಎಂದು ಪ್ರಶ್ನೆ ಮಾಡಿ, ಸೈನಿಕರಿಗೆ ನಾವೇ ಎಲ್ಲವನ್ನು ನೀಡಿದ್ದೇವೆ ಎನ್ನುವವರಿಗೆ ನಾಚಿಕೆ ಆಗಬೇಕು ಎಂದರು.

    ಯುವಕರು ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದು ಮೋಸ ಹೋಗಬಾರದು. ನಾವೇ ಯುದ್ಧ ಮಾಡಿದ್ದು ಎಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಬೊಬ್ಬೆ ಹಾಕುತ್ತಿದ್ದಾರೆ. ಏನು ಇವರೊಬ್ಬರೇ ಯುದ್ಧ ಮಾಡಿದರಾ ಎಂದು ಪ್ರಶ್ನಿಸಿದರು. ಅಲ್ಲದೇ ಈ ಹಿಂದೆ ಹಿಂದೆ ಕಾಂಗ್ರೆಸ್ ಬೇರೆ ಪಕ್ಷಗಳು ಇದ್ದಾಗಲೂ ದೇಶದಲ್ಲಿ ಯುದ್ಧ ನಡೆದಿದೆ. ಇದು ಸೈನ್ಯದ ಶಕ್ತಿ ಹಾಗೂ ಸಾಮಥ್ರ್ಯ ಆಗಿದ್ದು, ಇದರಿಂದ ರೈತರ ಮಕ್ಕಳು ಮೋಸ ಹೋಗಬಾರದು. ಈ ದೇಶ ಆಳುವ ಶಕ್ತಿ ನಮಗೆ ಅಥವಾ ಸಿದ್ದರಾಮಯ್ಯ ರಂತಹ ನಾಯಕರಿಗೆ ಇಲ್ವಾ ಎಂದರು.

    ಏನೋ ದೊಡ್ಡದಾಗಿ ಕಡಿದು ಕಟ್ಟೆ ಹಾಕಿದ್ದೇನೆಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಮೋದಿ-ಮೋದಿ ಅಂತರೆ ಎಂದು ದೇವೇಗೌಡರು ತಲೆ ಚಚ್ಚಿಕೊಂಡರು. ನಾಲ್ಕು ವರ್ಷದ ಹಿಂದ ರಾಹುಲ್ ಏನೂ ಪ್ರಯೋಜನವಿಲ್ಲ ಎಂದು ಬಿಂಬಿಸಿದ್ದಾರೆ. ಆತ ಇಂದು ರಫೆಲ್‍ನಲ್ಲಿ 30 ಸಾವಿರ ಕೋಟಿ ಅಕ್ರಮ ಮಾಡಿದ್ದಾರೆ ಎಂದು ಸವಾಲು ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಮನುಷ್ಯ ಪಾರ್ಲಿಮೆಂಟ್ ಒಳಗೆ ಬರಲಿಲ್ಲ ಎಂದು ವ್ಯಂಗ್ಯವಾಡಿದರು.

  • ಸುಮಲತಾಗೆ ಹೆಚ್ಚಿನ ಭದ್ರತೆ ನೀಡಿ – ಚುನಾವಣಾ ಆಯೋಗದಿಂದ ಪತ್ರ

    ಸುಮಲತಾಗೆ ಹೆಚ್ಚಿನ ಭದ್ರತೆ ನೀಡಿ – ಚುನಾವಣಾ ಆಯೋಗದಿಂದ ಪತ್ರ

    ಬೆಂಗಳೂರು: ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ಅವರಿಗೆ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ರಾಜ್ಯ ಚುನಾವಣಾ ಆಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

    ಚುನಾವಣೆಯ ಪ್ರಚಾರ ವೇಳೆಯಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ ನಾವು ಜವಾಬ್ದಾರರಲ್ಲ ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, ಸಿಎಂ ಅವರ ಹೇಳಿಕೆಯಿಂದ ನನಗೆ ಭಯವಾಗುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಈ ಕುರಿತು ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.

    ಇದರ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಹೆಚ್ಚಿನ ಭದ್ರತೆ ನೀಡಿ, ಅವರ ಸುರಕ್ಷತೆಗೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಆಯೋಗದ ಕಚೇರಿಯಿಂದ ಪತ್ರ ಬರೆಯಲಾಗಿದೆ. ಅಲ್ಲದೇ 24 ಗಂಟೆಗಳ ಅವಧಿಯಲ್ಲಿ ಈ ಬಗ್ಗೆ ಎಲ್ಲಾ ಸೂಕ್ತ ಕ್ರಮ ಕೈಗೊಂಡು ನಮಗೆ ತಿಳಿಸಿ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದನ್ನು ಓದಿ: ಸುಮಲತಾಗೆ CRPF ಅಷ್ಟೇ ಯಾಕೆ ಅಮೆರಿಕದ ಅಧ್ಯಕ್ಷರನ್ನೂ ಸಂಪರ್ಕ ಮಾಡ್ಲಿ- ಸಿಎಂ ಲೇವಡಿ

    ಇಂದು ಸುಮಲತಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಕುಮಾರಸ್ವಾಮಿ ಅವರು, ಸಿಆರ್ ಪಿಎಫ್ ಒಂದೇ ಅಲ್ಲ. ಬೇಕಿದ್ದರೆ ಅಮೆರಿಕ ಅಧ್ಯಕ್ಷರಿಗೆ ಹೇಳಿ ಅಲ್ಲಿಯ ಕಮಾಂಡೋ ಗಳನ್ನು ಕೂಡ ಮೋದಿ ಅವರು ಏರ್ಪಾಡು ಮಾಡಿ ಕಳುಹಿಸಿ ಕೊಡುವುದು ಸೂಕ್ತ ಎಂದು ಸಿಎಂ ಎಚ್‍ಡಿಕೆ ಲೇವಡಿ ಮಾಡಿದ್ದರು. ಅಲ್ಲದೇ ಸಚಿವ ಡಿಸಿ ತಮ್ಮಣ್ಣ ಪ್ರತಿಕ್ರಿಯೆ ನೀಡಿ ನಮ್ಮ ಪಕ್ಷದಲ್ಲಿ ಭಯೋತ್ಪಾದಕರು ಇಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ. ಮಂಡ್ಯದಲ್ಲಿ ವಾತಾವರಣ ಉತ್ತಮವಾಗಿದೆ ಎಂದಿದ್ದರು.

  • ಸುಮಲತಾ ಗೆಲುವು ಖಚಿತವಾದ ನಂತ್ರ ಮನಬಂದಂತೆ ಸಿಎಂ ವರ್ತನೆ: ಬಿಎಸ್‍ವೈ

    ಸುಮಲತಾ ಗೆಲುವು ಖಚಿತವಾದ ನಂತ್ರ ಮನಬಂದಂತೆ ಸಿಎಂ ವರ್ತನೆ: ಬಿಎಸ್‍ವೈ

    ಕೊಪ್ಪಳ: ಮಂಡ್ಯದಲ್ಲಿ ಸುಮಲತಾ ಗೆಲ್ಲುವುದು ಖಚಿತವಾದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮನಬಂದಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಕೊಪ್ಪಳದ ಖಾಸಗಿ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, 2014ಕ್ಕೆ ಹೋಲಿಕೆ ಮಾಡಿದರೆ ಬಿಜೆಪಿಗೆ ಈಗ ಒಳ್ಳೆಯ ವಾತಾವರಣವಿದೆ. ಸುಮಲತಾ ಗೆಲ್ಲುವುದು ಖಚಿತವಾದ ನಂತರ ಸಿಎಂ ಕುಮಾರಸ್ವಾಮಿ ಮನಬಂದಂತೆ ಮಾತಾಡುತ್ತಿದ್ದಾರೆ. ನಮ್ಮ ವೀರ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇನ್ನೂ ರೇವಣ್ಣ ಅವರು ಮೋದಿ ಮತ್ತೆ ಪ್ರಧಾನಿ ಆದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ರೀತಿಯ ಹಗುರವಾಗಿ ಮಾತನಾಡುವ ಮೂಲಕ ವಾತಾವರಣ ನಮ್ಮ ಪರ ಇಲ್ಲ ಅಂತ ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

    ಈಗಾಗಲೇ ಜನತೆ ತೀರ್ಮಾನ ಮಾಡಿದ್ದಾರೆ. ಈ ಬಾರಿಯೂ ಮೋದಿ ಅವರು ಗೆದ್ದು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತವಾಗಿದೆ. ಇನ್ನೂ ಕೇಂದ್ರ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯ, ಹಿಂದಿನ ಬಿಜೆಪಿ ಸರ್ಕಾರದ ಸಾಧನೆ ನಮ್ಮ ಗೆಲುವಿಗೆ ಸಾಧನೆಯಾಗಿದೆ. ಯುವಕರು ಸಹಾ ತುಂಬಾ ಉತ್ಸುಕದಿಂದ ಮೋದಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ನಮಗೆ ದೊಡ್ಡ ಶಕ್ತಿಯಾಗಿದೆ ಎಂದರು.

    ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್‍ರ ಲಿಂಗಾಯತರ ಪ್ರತ್ಯೇಕ ಧರ್ಮದ ಪರ ವಿರೋಧ ಮಾತು ಅವರಿಗೆ ಬಿಟ್ಟಿದ್ದು. ಅವರು ಮಾಡುತ್ತಿರುವುದು ತಂತ್ರವೋ – ಕುತಂತ್ರವೋ ನನಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.

    ಸುಮಲತಾ ಮಾಯಾಂಗನೆ ಎಂಬ ಸಂಸದ ಶಿವರಾಮೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಸೋಲುವ ಭೀತಿಯಿಂದ ಹೀಗೆಲ್ಲ ಮಾತಾಡುತ್ತಿದ್ದಾರೆ. ಸಂಸದ ಶಿವರಾಮೇಗೌಡ ಹಗುರವಾಗಿ ಮಾತನಾಡುವುದಕ್ಕೆ ಹೆಸರಾಗಿದ್ದಾರೆ. ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತವಾಗಿದೆ. ಹಾಗಾಗಿ ಎಲ್ಲರೂ ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.