Tag: prime minister modi

  • ಸಂಸತ್ ಕಲಾಪಕ್ಕೆ ಗೈರಾದವರ ವಿರುದ್ಧ ಮೋದಿ ಕೆಂಡಾಮಂಡಲ, ಪಟ್ಟಿ ನೀಡುವಂತೆ ಸೂಚನೆ

    ಸಂಸತ್ ಕಲಾಪಕ್ಕೆ ಗೈರಾದವರ ವಿರುದ್ಧ ಮೋದಿ ಕೆಂಡಾಮಂಡಲ, ಪಟ್ಟಿ ನೀಡುವಂತೆ ಸೂಚನೆ

    ನವದೆಹಲಿ: ಸಂಸತ್ ಕಲಾಪಕ್ಕೆ ಗೈರಾದ ಸಚಿವರು ಹಾಗೂ ಸಂಸದ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದು, ಸಂಸತ್ ಕಲಾಪಕ್ಕೆ ಗೈರಾದವರ ಪಟ್ಟಿಯನ್ನು ಸಂಜೆಯೊಳಗೆ ನೀಡುವಂತೆ ಸೂಚಿಸಿದ್ದಾರೆ.

    ಬಿಜೆಪಿ ಸಂಸದೀಯ ಪಕ್ಷದ ವಾರದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಸಂಸತ್‍ಗೆ ಹಾಜರಾಗಿಯೂ ಕಲಾಪಕ್ಕೆ ಗೈರಾದವರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಸೂಚಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಈ ಹಿಂದೆಯೇ ತಮ್ಮ ಸಂಸದರಿಗೆ ಈ ಕುರಿತು ಸಲಹೆ ನೀಡಿದ್ದರು. ಇದೀಗ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿಯೂ ಸಹ ಎಚ್ಚರಿಕೆ ನೀಡಿದ್ದು, ರಾಜಕಾರಣವನ್ನು ಮೀರಿ ಕೆಲಸ ಮಾಡುವ ಕುರಿತು ಸಲಹೆ ನೀಡಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

    ನೀರಿನ ಸಮಸ್ಯೆ ಒತ್ತು ನೀಡಿ, ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ. ನಿಮ್ಮ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ, ಪ್ರತಿ ದಿನ ನಿಮ್ಮ ಕಚೇರಿಯಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಿ ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

    ಸಂಸದರು ಕಡ್ಡಾಯವಾಗಿ ನಿಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಕೆಲವು ವಿಶಿಷ್ಟ ಕೆಲಸಗಳನ್ನು ಮಾಡಬೇಕು. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕುಟುಕಿದ್ದಾರೆ.

    ಕ್ಷಯ ಮತ್ತು ಕುಷ್ಠರೋಗವನ್ನು ತಡೆಗಟ್ಟಲು ಮಿಷನ್ ಮೋಡ್‍ನಲ್ಲಿ ಸಂಸದರು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಈ ಹಿಂದೆಯೂ ಸಹ ಪ್ರಧಾನಿ ಮೋದಿ ಅವರು ಸಂಸತ್ ಕಲಾಪಕ್ಕೆ ಗೈರಾಗುವ ಸಂಸದರನ್ನು ತರಾಟೆ ತೆಗೆದುಕೊಂಡಿದ್ದರು. ಆದರೂ ಸಂಸದರು ಕಲಾಪಕ್ಕೆ ಗೈರಾಗಿದ್ದಾರೆ. ಹೀಗಾಗಿ ಮೋದಿ ಗೈರಾದವರ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.

    ಇತ್ತೀಚೆಗೆ ಅಧಿಕಾರಿ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರ ಗೂಂಡಾ ವರ್ತನೆಯನ್ನು ಉದಾಹರಣೆಯಾಗಿ ನೀಡಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಯಾವ ರೀತಿಯ ವರ್ತನೆ, ಭಾಷೆಯ ಬಳಕೆ ಎಂಥಹದ್ದು, ಜನಪ್ರತಿನಿಧಿಗಳಾದವರು ಹೇಗಿರಬೇಕು ಎಂದು ಸಂಸದರಿಗೆ ಮೋದಿ ಕ್ಲಾಸ್ ತೆಗೆದುಕೊಂಡಿದ್ದರು. ಇಂತಹವರನ್ನು ಯಾವುದೇ ಮುಲಾಜಿಲ್ಲದೆ, ಯಾವ ನಾಯಕರ ಮಗನೆಂದೂ ನೋಡದೆ ಪಕ್ಷದಿಂದ ಹೊರಗೆ ಹಾಕಿ ಎಂದು ಗುಡುಗಿದ್ದರು.

  • ಸೋಲು, ಗೆಲುವು ಜೀವನದ ಒಂದು ಭಾಗ – ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಸಂದೇಶ

    ಸೋಲು, ಗೆಲುವು ಜೀವನದ ಒಂದು ಭಾಗ – ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಸಂದೇಶ

    ನವದೆಹಲಿ: 2019ರ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿರುವ ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ರವಾನಿಸಿದ್ದಾರೆ. ಸೋಲು ಗೆಲುವು ಜೀವನದ ಒಂದು ಭಾಗ ಎಂದು ಹೇಳಿಸುವ ಪ್ರಧಾನಿಗಳು ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಆಟಗಾರರ ಕಠಿಣ ಶ್ರಮವನ್ನು ಪ್ರಶಂಸಿರುವ ಮೋದಿ ಅವರು, ಇಂದಿನ ಪಂದ್ಯದಲ್ಲಿ ಬೇಸರದ ಫಲಿತಾಂಶ ಲಭಿಸಿದೆ. ಆದರೆ ಪಂದ್ಯದ ಅಂತಿಮ ಕ್ಷಣದವರೆಗೂ ಆಟಗಾರರು ತೋರಿದ ಹೋರಾಟ ಸ್ಫೂರ್ತಿ ನೀಡುತ್ತದೆ. ಇಡೀ ಟೂರ್ನಿಯಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹೆಮ್ಮೆ ಎನಿಸಿದೆ. ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಶುಭವಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

    ಇತ್ತ ನಾಯಕ ವಿರಾಟ್ ಕೊಹ್ಲಿ ಅವರು ಕೂಡ ಟ್ವೀಟ್ ಮಾಡಿದ್ದು, ತಂಡಕ್ಕೆ ಬೆಂಬಲ ನೀಡಿದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಗೆಲುವು ಪಡೆಯಲು ಸಂಪೂರ್ಣ ಪ್ರಯತ್ನ ಹಾಕಿದ್ದು, ಫಲಿತಾಂಶದಿಂದ ನಿಮ್ಮಂತೆಯೇ ನಾವೆಲ್ಲರೂ ನಿರಾಸೆಗೊಂಡಿದ್ದೇವೆ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 45 ನಿಮಿಷಗಳ ಕೆಟ್ಟ ಪ್ರದರ್ಶನಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂತು ಎಂದಿದ್ದಾರೆ. ಅಲ್ಲದೇ ನ್ಯೂಜಿಲೆಂಡ್ ಆಟಗಾರರು ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.

  • ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಬಜೆಟ್ ಹೈಲೈಟ್ಸ್ ಏನು?
    * ಸಂಶೋಧನೆ ಮತ್ತ ಅವಿಷ್ಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ.
    * ದೇಶದಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ನಿಧಿ ಬಿಡುಗಡೆ.
    * ಪ್ರತ್ಯೇಕ ಸಂಶೋಧನೆಗೆ ಸಂಬಂಧಪಟ್ಟ ಸಚಿವಾಲಯದಿಂದ ಪ್ರೋತ್ಸಾಹ ಧನ.

    * 2019-20 ಆರ್ಥಿಕ ವರ್ಷದಲ್ಲಿ ವಿಶ್ವದರ್ಜೆಯ ಸಂಸ್ಥೆಗಳಿಗಾಗಿ 400 ಕೋಟಿ ರೂ. ಅನುದಾನ.
    * ಭಾರತದಲ್ಲಿ ಶಿಕ್ಷಣ (Study in India) ಎನ್ನುವಂತೆ ವಿದೇಶಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ದೇಶಕ್ಕೆ ಕರೆತರುವುದು, ಕಾನೂನುಗಳ ಸರಳೀಕರಣ

    * ಖೇಲೋ ಇಂಡಿಯಾ ಸ್ಕೀಮ್ ಗೆ ಆರ್ಥಿಕ ನೆರವು ನೀಡುವುದು.
    * ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ, ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಯುವ ಆಟಗಾರರನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು.
    * ಯುವಕರ ವಿದ್ಯಾರ್ಹತೆ, ಕೌಶಲ್ಯ, ಸಾಮಥ್ರ್ಯಕ್ಕನುಗುಣವಾಗಿ ಸಂಬಂಧಿಸಿದ ವಲಯಗಳಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ಉದ್ಯೋಗಿಗಳನ್ನಾಗಿ ಬದಲಿಸುವುದು. ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿಯೇ ತರಬೇತಿ ಸೌಲಭ್ಯ ಕಲ್ಪಿಸುವುದು. AI, IoT, Big Data, 3D Printing, Virtual Reality and Robotics ಸಂಬಂಧಿಸಿದ ವಿಷಯಗಳಲ್ಲಿ ತರಬೇತಿ ಸಿಗಲಿದೆ.

    * ಕೆಳಮಟ್ಟದಲ್ಲಿರುವ ಕಾರ್ಮಿಕ ವಲಯವನ್ನು ಮೇಲ್ದರ್ಜೆಗೆ ತರುವುದು.
    * ಸ್ಟಾರ್ಟ್‍ಅಪ್ ಯೋಜನೆಗಳ ಮಾಹಿತಿಗಾಗಿ ಡಿಡಿ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮಗಳ ಪ್ರಸಾರ.
    *2020-25ರರೆಗೆ ಸ್ಟ್ಯಾಂಡ್-ಅಪ್ ಇಂಡಿಯಾ ಸ್ಕೀಮ್ ಇರಲಿದೆ. ಈ ಯೋಜನೆಯ ಫಲಾನುಭವಿಗಳಿಗೆ ಬೇಡಿಕೆಗೆ ಅನುಗುಣವಾಗಿ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ.

     

  • ಕೇಂದ್ರ ಬಜೆಟ್ – ಯಾವುದು ಏರಿಕೆ? ಯಾವುದು ಇಳಿಕೆ?

    ಕೇಂದ್ರ ಬಜೆಟ್ – ಯಾವುದು ಏರಿಕೆ? ಯಾವುದು ಇಳಿಕೆ?

    ಬೆಂಗಳೂರು: ನರೇಂದ್ರ ಮೋದಿ 2.0 ಸರ್ಕಾರದ ಬಹು ನಿರೀಕ್ಷೆಯ ಬಜೆಟ್ ಮಂಡನೆಯಾಗಿದ್ದು ಯಾವ ವಸ್ತುಗಳ ಬೆಲೆ ಏರಿಕೆ ಮತ್ತು ಇಳಿಕೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.

    ಯಾವುದು ದುಬಾರಿ?
    ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಮೂಲ ಸೌಕರ್ಯ ಸೆಸ್ ಅಡಿಯಲ್ಲಿ ಒಂದು ರೂ. ಸೆಸ್ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್‍ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಶೇ.2.5 ರಷ್ಟು ಸುಂಕ ಹೆಚ್ಚಳ: ಸ್ಟೇನ್ ಲೇಸ್ ಸ್ಟೀಲ್, ವೈರ್, ಗೋಡಂಬಿ ದುಬಾರಿ, ತಾಳೆ ಎಣ್ಣೆ, ಇಂಡಸ್ಟ್ರಿಯಲ್ ಆ್ಯಸಿಡ್, ಬೆಳ್ಳಿ ಆಭರಣಗಳು, ಬೆಳ್ಳಿ ಬಿಸ್ಕತ್, ಎಂಜಿನ್ ಕಂಬಸ್ಟನ್ ಫಿಲ್ಟರ್‍ಗಳ ಮೇಲಿನ ಸುಂಕ ಹೆಚ್ಚಾಗಿದೆ.

    ಶೇ. 5 ರಷ್ಟು ಸುಂಕ ಹೆಚ್ಚಳ: ವಾಹನಗಳ ವೈಪರ್, ಪ್ಲಾಸ್ಟಿಕ್, ಸೀಲಿಂಗ್ ಕವರ್, ಫ್ಲೋರ್ ಕವರ್, ಪ್ಲಾಸ್ಟಿಕ್, ರಬ್ಬರ್, ಪೀಠೋಪಕರಣ, ಬಾಗಿಲು, ಆಟೋಮೊಬೈಲ್ಸ್ ಲೋಹಗಳು, ಸೆರಾಮಿಕ್ ಟೈಲ್ಸ್, ಆಟೋಫ್ರಿಕ್ಶನ್ ಮೆಟಿರಿಯಲ್, ಗ್ಲಾಸ್, ವಾಹನಗಳ ಲಾಕ್, ಫೈಬರ್, ದ್ವಿಚಕ್ರ ವಾಹನಗಳ ಸಿಗ್ನಲಿಂಗ್ ಮೇಲೆ ಶೇ.5 ರಷ್ಟು ಸುಂಕ ಹೆಚ್ಚಳವಾಗಿದೆ.

    ಉಳಿದಂತೆ ಸ್ಟೋನ್ ಕ್ರಷರ್, ಗೋಡಂಬಿ, ತಾಳೆ ಎಣ್ಣೆ ಮೇಲೆ ಶೇ.7.5 ರಷ್ಟು ಸುಂಕ ಏರಿಕೆ ಮಾಡಲಾಗಿದೆ. ನ್ಯೂಸ್ ಪ್ರಿಂಟ್, ಮುದ್ರಣ ಕಾಗದಗಳ ಮೇಲಿನ ಸುಂಕ ಶೇ.10 ರಷ್ಟು ಹೆಚ್ಚಳವಾಗಿದೆ.

    ಸಿಸಿಟಿವಿ, ಚಾರ್ಜರ್, ಅಡಾಪ್ಟರ್, ಡಿವಿಆರ್, ಐಪಿ ಕ್ಯಾಮೆರಾ ಮೇಲೆ ಶೇ. 15 ರಷ್ಟು ಸುಂಕ ಏರಿಕೆ ಮಾಡಿದ್ದರೆ, ಸ್ಪೀಕರ್ ಮೇಲೆ ಶೇ.8 ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ.

    ಚಿನ್ನದ ಅಭರಣಗಳ ಮೇಲಿನ ಆಮದು ಸುಂಕವನ್ನು ಶೇ. 10 ರಿಂದ ಶೇ. 12.5 ಕ್ಕೆ ಹೆಚ್ಚಳ ಮಾಡಲಾಗಿದೆ. ವಾಟರ್ ಬ್ಲಾಕಿಂಗ್ ಟೇಪ್ಸ್, ಮಾರ್ಬಲ್ ಸ್ಲ್ಯಾಬ್ಸ್ ಮೇಲೆ ಶೇ.20 ರಷ್ಟು ಆಮದು ಸುಂಕವನ್ನು ಹೆಚ್ಚಳ ಮಾಡಲಾಗಿದೆ.

    ಯಾವುದು ಅಗ್ಗ?
    ಪಾಮ್ ಆಯಿಲ್, ಫ್ಯಾಟಿ ಆಯಿಲ್, ಇಥಲಿನ್, ಕೋಬಾಲ್ಟ್, ಡಯಾಲಿಸಿಸ್ ಯಂತ್ರ ಮತ್ತು ಪರಿಕರಗಳು, ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು, ಚರ್ಮೋತ್ಪನ್ನ.

  • ಮೋದಿ 2 ಸರ್ಕಾರದ ಬಜೆಟ್ – ದೇಶದ ಜನತೆಗೆ ಸಿಹಿಯೋ? ಕಹಿಯೋ?

    ಮೋದಿ 2 ಸರ್ಕಾರದ ಬಜೆಟ್ – ದೇಶದ ಜನತೆಗೆ ಸಿಹಿಯೋ? ಕಹಿಯೋ?

    ಬೆಂಗಳೂರು: ಪ್ರಚಂಡ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಬಜೆಟ್ ಶುಕ್ರವಾರ ಮಂಡನೆಯಾಗುತ್ತಿದೆ. ಆರ್ಥಿಕ ಸಚಿವೆಯಾಗಿ ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು, ವಿತ್ತೀಯ ಕೊರತೆ ನೀಗಿಸಿ, ಆರ್ಥಿಕ ಸಂಪನ್ಮೂಲದ ಕ್ರೋಢೀಕರಣ, ಉದ್ಯೋಗ ಸೃಷ್ಟಿಯೇ ಬಜೆಟ್ ಸವಾಲಾಗಿದೆ.

    ಈ ಬಾರಿಯ ಬಜೆಟ್ ಮೇಲೆ ಶತಕೋಟಿ ಭಾರತೀಯರ ನಿರೀಕ್ಷೆ ಹೆಚ್ಚಿದ್ದು, ಅದರಲ್ಲೂ, ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿರು ಕಾರಣ ಮಧ್ಯಮ ವರ್ಗ ಹಾಗೂ ಮಹಿಳೆಯರ ನಿರೀಕ್ಷೆ ಜಾಸ್ತಿ ಇದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ.

    ಬಜೆಟ್ ಏನೆಲ್ಲಾ ಇರಲಿದೆ?
    ನಿರ್ಮಲಾ ಸೀತಾರಾಮನ್ ಅವರ ಬಜೆಟ್‍ನಲ್ಲಿ ಬಹಳಷ್ಟು ನಿರೀಕ್ಷೆಗಳಿದ್ದು, ಪ್ರಮುಖವಾಗಿ ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ ಪತ್ರ’ದ ಈಡೇರಿಕೆಗೆ ಆದ್ಯತೆ ನೀಡುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ ಭದ್ರತೆಗಾಗಿ ಸೇನಾಪಡೆಗಳ ಆಧುನೀಕರಣ, ಬಲವರ್ಧನೆಗೆ ಹೆಚ್ಚಿನ ಆದ್ಯತೆ ಇದೆ. 45 ವರ್ಷಗಳಲ್ಲೇ ಹೆಚ್ಚಾಗಿರುವ ನಿರುದ್ಯೋಗ, ಬಡತನಕ್ಕೆ ಪರಿಹಾರ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಅನುದಾನ ಘೋಷಣೆ ಆಗುವ ನಿರೀಕ್ಷೆ ಇದೆ.

    ರೈತರಿಗೆ ನೆರವು ನೀಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲದೊಂದಿಗೆ ಸುಸ್ಥಿರ ನೀರಾವರಿ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತಂದು ಕ್ಷೇತ್ರಕ್ಕೆ ನೀಡುತ್ತಿದ್ದ, ಅನುದಾನದಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಮೋದಿ ಸರ್ಕಾರದ ಬಹು ನಿರೀಕ್ಷಿತ ಆಯುಷ್ಮಾನ್ ಭಾರತ್ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಿನ ಸೌಲಭ್ಯ ನೀಡುವ ಅವಕಾಶವಿದೆ. ಗ್ರಾಮೀಣ ಭಾಗದಲ್ಲಿ ಖಾಸಗಿ ಮತ್ತು ಸರ್ಕಾರದಿಂದ ಹೆಚ್ಚು ಹೂಡಿಕೆಗೆ ಅವಕಾಶ, ಡಿಜಿಟಲ್ ಬ್ಯಾಂಕಿಂಗ್‍ಗೆ ಮತ್ತಷ್ಟು ಒತ್ತು, ನವೋದ್ಯಮಗಳಿಗೆ ಇನ್ನಷ್ಟು ತೆರಿಗೆ ವಿನಾಯ್ತಿ, ಪ್ರೋತ್ಸಾಹ, ಬಂಡವಾಳ ಹೂಡಿಕೆ ಹಾಗೂ ಆದಾಯ ತೆರಿಗೆ ವಿನಾಯ್ತಿ ಮಿತಿ 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

    ಕನ್ನಡಿಗರ ಬೇಡಿಕೆಗಳೇನು?
    ತಮಿಳುನಾಡಿನಲ್ಲಿ ಹುಟ್ಟಿ, ಆಂಧ್ರ ಪ್ರದೇಶದ ಸೊಸೆಯಾಗಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಬಗ್ಗೆ ದಕ್ಷಿಣ ಭಾರತೀಯರು ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಅದರಲ್ಲೂ, ಕರ್ನಾಟಕದ್ದು ನಿರೀಕ್ಷೆಯೂ ದೊಡ್ಡದಿದೆ. ರಾಜ್ಯದ ರೈತರು ಗುಳೆ ಹೋಗುವುದನ್ನು ತಪ್ಪಿಸಲು ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂದು ಕನ್ನಡಿಗರ ಪ್ರಮುಖ ಬೇಡಿಕೆ ಆಗಿದೆ. ಅಲ್ಲದೇ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಬಜೆಟ್‍ನಲ್ಲಿ ಸಮಗ್ರ ನೀತಿ, ಬರಕ್ಕೆ ತುತ್ತಾಗುತ್ತಿರುವ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕೊಯ್ಲು ಯೋಜನೆ ಸೇರಿದಂತೆ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜನೆ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಒತ್ತು ನೀಡುವ ನಿರೀಕ್ಷೆ ಇದೆ.

    ಚಿಕ್ಕಮಗಳೂರು-ಶಿವಮೊಗ್ಗದ ಆರ್ಥಿಕ ಬೆನ್ನೆಲುಬಾದ ಕಾಫಿ-ಅಡಕೆ ಬೆಳೆಗೆ ಪೂರಕ ಯೋಜನೆ ರೂಪಿಸುವುದು, ಕಾಳುಮೆಣಸು ಬೆಳೆಯುವ ಪ್ರದೇಶಗಳಿಗೆ ಪೂರಕವಾಗುವಂತೆ ಪೆಪ್ಪರ್ ಪಾರ್ಕ್ ಸ್ಥಾಪನೆ. ಜವಳಿ ಕ್ಷೇತ್ರಗಳ ಉತ್ತೇಜನಕ್ಕೆ ಪ್ರದೇಶವಾರು ಜವಳಿ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳುವುದು. ತುಮಕೂರಿನ ತಿಪಟೂರಿನಲ್ಲಿ ಜಾಗತಿಕ ಮಟ್ಟದ `ಕೊಬ್ಬರಿ ಸಂಶೋಧನಾ ಕೇಂದ್ರ’ ಸ್ಥಾಪನೆ ಹಾಗೂ ತುಮಕೂರು ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ, ಮುಂಬೈ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಸೇರಿದಂತೆ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಉತ್ಪಾದನೆಗೆ ಉತ್ತೇಜನ ನೀಡುವುದು ಪ್ರಮುಖ ಬೇಡಿಕೆಗಳಿವೆ.

    ಕೇಂದ್ರ ರೈಲ್ವೆ ಬಜೆಟ್ ಮೇಲೂ ಹೆಚ್ಚಿನ ನಿರೀಕ್ಷೆ ಇದ್ದು, ರೈಲ್ವೆಯಲ್ಲಿ ರಾಜ್ಯದ ಬೇಡಿಕೆಗಳೆಂದರೆ, ಹೊಸ ಮಾರ್ಗ, ಜೋಡಿ ಮಾರ್ಗ, ವಿದ್ಯುದ್ದೀಕರಣ, ಹೊಸ ರೈಲು, ಬೆಂಗಳೂರು ಉಪನಗರ ರೈಲು ಯೋಜನೆ, ನಿಲ್ದಾಣಗಳ ಅಭಿವೃದ್ಧಿಯ ಅಗತ್ಯವಿದೆ. ರಾಯದುರ್ಗ- ತುಮಕೂರು, ಬಾಗಲಕೋಟೆ-ಕುಡಚಿ, ಗದಗ- ವಾಡಿ ಕಾಮಗಾರಿ ಹಾಗೂ ಮುನಿರಾಬಾದ್- ರಾಯಚೂರು ರೈಲ್ವೆ ಮಾರ್ಗಗಳ ಕಾಮಗಾರಿ, ಧಾರವಾಡದಿಂದ ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆ ಪ್ರಮುಖ ಬೇಡಿಕೆಗಳಾಗಿವೆ. ಅಲ್ಲದೇ ಹುಬ್ಬಳ್ಳಿಯಿಂದ ಹೈ-ಕರ್ನಾಟಕದ ಮೂಲಕ ದೆಹಲಿಗೆ ರಾಜಧಾನಿ ಎಕ್ಸ್‍ಪ್ರೆಸ್ ರೈಲು ಹಾಗೂ ಹುಬ್ಬಳ್ಳಿಯಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಬೇಡಿಕೆಯೂ ಇದೆ.

  • ಬಿಜೆಪಿ ನಾಯಕರಿಗೆ ಮೋದಿಯಿಂದ ಶಿಸ್ತಿನ ಪಾಠ

    ಬಿಜೆಪಿ ನಾಯಕರಿಗೆ ಮೋದಿಯಿಂದ ಶಿಸ್ತಿನ ಪಾಠ

    ನವದೆಹಲಿ: ಶಾಸಕ ಆಕಾಶ್ ವಿಜಯ್‍ವರ್ಗಿಯಾ ಪ್ರಕರಣ ಬಿಜೆಪಿ ಇರಿಸುಮುರಿಸು ತಂದಿಟ್ಟ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರಿಗೆ ಶಿಸ್ತಿನ ಪಾಠ ಹೇಳಿಕೊಟ್ಟಿದ್ದಾರೆ.

    ಮೋದಿ ಅವರು ಬೆಳಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ 45 ಸಂಸದರೊಂದಿಗೆ ಸಭೆ ನಡೆಸಿದ್ದು, ವರ್ತನೆ ಹಾಗೂ ಶಿಸ್ತಿನ ಕುರಿತು ಪಾಠ ಮಾಡಿದ್ದಾರೆ.

    ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯಾ ಪುತ್ರ ಹಾಗೂ ಶಾಸಕ ಆಕಾಶ್ ವಿಜಯ್‍ವರ್ಗಿಯಾ ವರ್ತನೆ ಹಾಗೂ ಅಧಿಕಾರಿಗಳ ವಿರುದ್ಧ ಅವರು ನಡೆದುಕೊಂಡ ರೀತಿಯನ್ನು ಪ್ರಸ್ತಾಪಿಸಿ ಮಾತು ಆರಂಭಿಸಿದ್ದಾರೆ. ಈ ವೇಳೆ ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕರಾಗಿರುವ ಆಕಾಶ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ಪ್ರಧಾನಿ ಮೋದಿ, ಯಾವ ನಾಯಕನ ಮಗನಾಗಿದ್ದರೂ ಸರಿ ದುರ್ವರ್ತನೆ ತೋರಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನಾವು ಸಂಸದರನ್ನು ಕಳೆದುಕೊಂಡರು ಸರಿ. ಇನ್ನು ಮುಂದೆ ಈ ರೀತಿಯ ದುರ್ವರ್ತನೆ ನಡೆಯುವುದನ್ನು ತಡೆಯಬೇಕಿದೆ ಎಂದು ಎಚ್ಚರಿಸಿದ್ದರು.

    ಅದು ಯಾರೇ ಆಗಿರಲಿ, ಯಾರ ಮಗನೇ ಆಗಿರಲಿ ದುರಹಂಕಾರ, ದುರ್ವತೆಯನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದೋರ್‍ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.

    ಆಕಾಶ್ ವಿಜಯ್‍ವರ್ಗಿಯಾ ಅವರು ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡುವ ವೇಳೆ ನಿವೇದನ್, ಆವೇದನ್, ದನಾದನ್ ಎಂದು ಹೇಳಿದ್ದು, ಇದು ಯಾವ ರೀತಿಯ ಭಾಷೆ ಎಂದು ಮೋದಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ಮಾಡಿದ ವಿಡಿಯೊ ವೈರಲ್ ಆಗುತ್ತಿದ್ದಂತೆ, ಇಂದೋರ್ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆಕಾಶ್, ನಮ್ಮದು ಆವೇದನ್, ನಿವೇದನ್ ನಂತರ ದನಾದನ್ ಇದು ನಮ್ಮ ಕಾರ್ಯವೈಖರಿ ಎಂದು ಹೇಳಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.

    ಅಂದು ನಡೆದಿದ್ದು ಏನು?
    ಇಂದೋರ್ ನಗರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಇಂದು ಅಧಿಕಾರಿಗಳು ತೆರವುಗೊಳಿಸುತ್ತಿದ್ದರು. ಆದರೆ ಶಾಸಕರು ತಮ್ಮ ಬೆಂಬಲಿಗನ ಕಟ್ಟಡ ತೆರವುಗೊಳಿಸದಂತೆ ಸೂಚನೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಕಟ್ಟಡ ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರು ಅಧಿಕಾರಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದಿದ್ದರು. ಅಷ್ಟೇ ಅಲ್ಲದೆ ಶಾಸಕರ ಬೆಂಬಲಿಗರು ಅಧಿಕಾರಿಯ ಅಂಗಿ ಹಿಡಿದು ಎಳೆದಾಡಿದ್ದರು. ಘಟನೆಯಿಂದ ತಕ್ಷಣವೇ ಜಾಗೃತಗೊಂಡ ಪೊಲೀಸರು ಅಧಿಕಾರಿಯನ್ನು ರಕ್ಷಿಸಿದ್ದರು.

  • ಯಾರ ಮಗ ಆಗಿದ್ದರೂ ಸರಿ ಪಕ್ಷದಿಂದ ಹೊರಗೆ ಹಾಕಿ: ಮೋದಿ ಕೆಂಡಾಮಂಡಲ

    ಯಾರ ಮಗ ಆಗಿದ್ದರೂ ಸರಿ ಪಕ್ಷದಿಂದ ಹೊರಗೆ ಹಾಕಿ: ಮೋದಿ ಕೆಂಡಾಮಂಡಲ

    ನವದೆಹಲಿ: ಇತ್ತೀಚೆಗೆ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಅವಮಾನಿಸಿದ್ದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯಾ ಅವರ ಮಗ ಹಾಗೂ ಶಾಸಕ ಆಕಾಶ್ ವಿಜಯ್‍ವರ್ಗಿಯಾ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದು, ಯಾರ ಮಗ ಆಗಿದ್ದರೂ ಸರಿ, ಪಕ್ಷದಿಂದ ಹೊರ ಹಾಕಿ ಎಂದು ಕಿಡಿಕಾರಿದ್ದಾರೆ.

    ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಈ ವಿಷಯದ ಕುರಿತು ಕೆಂಡಾಮಂಡಲರಾಗಿದ್ದು, ಈ ರೀತಿ ದುರ್ವರ್ತನೆ ತೋರುವ ನಾಯಕರನ್ನು ಮುಲಾಜಿಲ್ಲದೆ, ಯಾವ ನಾಯಕರ ಮಗನೆಂದೂ ನೋಡದೆ ಪಕ್ಷದಿಂದ ಹೊರ ಹಾಕಿ ಎಂದು ಗುಡುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಷ್ಟಕ್ಕೆ ಸುಮ್ಮನಾಗದ ಪ್ರಧಾನಿ ಮೋದಿ, ಆಕಾಶ್ ವಿಜಯ್‍ವರ್ಗಿಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರನ್ನು ಸ್ವಾಗತಿಸಿದವರನ್ನೂ ಪಕ್ಷದಿಂದ ಹೊರಗಡೆ ಹಾಕಿ ಎಂದು ಕಿಡಿ ಕಾರಿದ್ದಾರೆ.

    ಸಭೆಯ ಬಳಿಕ ರಾಜೀವ್ ಪ್ರತಾಪ್ ರೂಡಿಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಅವರು ಈ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ. ಪಕ್ಷದ ಹೆಸರನ್ನು ಹೇಳಿಕೊಂಡು ಅಸಭ್ಯ ವರ್ತನೆ ನಡೆಸಲು ಯಾರಿಗೂ ಅವಕಾಶವಿಲ್ಲ. ಈ ರೀತಿ ವರ್ತನೆ ತೋರಿದ ಯಾರನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಕಠಿಣ ಪದಗಳಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.

    ಶಾಸಕ ಆಕಾಶ್ ವಿಜಯ್‍ವರ್ಗಿಯಾ ಕಳೆದ ವಾರ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಅವಮಾನಿಸಿದ್ದರು. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಆಕಾಶ್ ವಿಜಯ್‍ವರ್ಗಿಯಾ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಇಂದೋರ್‍ನಲ್ಲಿ ನಡೆದ ಈ ಘಟನೆಯ ವಿಡಿಯೊ ವೈರಲ್ ಆಗಿತ್ತು. ಅಲ್ಲದೆ, ವಿಪರೀತ ಚರ್ಚೆಗೆ ಗ್ರಾಸವಾಗಿತ್ತು. ಶಾಸಕ ಆಕಾಶ್ ಹಾಗೂ ಆತನ ಬೆಂಬಲಿಗರು ಪೊಲೀಸರು ಹಾಗೂ ಟಿವಿ ವಾಹಿನಿ ಸಿಬ್ಬಂದಿಯ ಎದುರೇ ಸರ್ಕಾರಿ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್ ಹಿಡಿದು ಬೆನ್ನಟ್ಟಿದ್ದರು. ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

    ಅಂದು ನಡೆದಿದ್ದು ಏನು?
    ಇಂದೋರ್ ನಗರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಇಂದು ಅಧಿಕಾರಿಗಳು ತೆರವುಗೊಳಿಸುತ್ತಿದ್ದರು. ಆದರೆ ಶಾಸಕರು ತಮ್ಮ ಬೆಂಬಲಿಗನ ಕಟ್ಟಡ ತೆರವುಗೊಳಿಸದಂತೆ ಸೂಚನೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಕಟ್ಟಡ ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರು ಅಧಿಕಾರಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದಿದ್ದರು. ಅಷ್ಟೇ ಅಲ್ಲದೆ ಶಾಸಕರ ಬೆಂಬಲಿಗರು ಅಧಿಕಾರಿಯ ಅಂಗಿ ಹಿಡಿದು ಎಳೆದಾಡಿದ್ದರು. ಘಟನೆಯಿಂದ ತಕ್ಷಣವೇ ಜಾಗೃತಗೊಂಡ ಪೊಲೀಸರು ಅಧಿಕಾರಿಯನ್ನು ರಕ್ಷಿಸಿದ್ದರು.

  • ಕೇದಾರನಾಥದಲ್ಲಿ ಧ್ಯಾನ ಮಾಡಿದ್ದು ರಾಜಕೀಯ ಲಾಭಕ್ಕಲ್ಲ- ಮೋದಿ

    ಕೇದಾರನಾಥದಲ್ಲಿ ಧ್ಯಾನ ಮಾಡಿದ್ದು ರಾಜಕೀಯ ಲಾಭಕ್ಕಲ್ಲ- ಮೋದಿ

    – ಮನ್ ಕೀ ಬಾತ್‍ನಲ್ಲಿ ಪ್ರಧಾನಿ ಸ್ಪಷ್ಟನೆ

    ನವದೆಹಲಿ: ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ದಿಢೀರನೇ ಕೇದಾರನಾಥಕ್ಕೆ ತೆರಳಿ ಒಂದು ದಿನ ಧ್ಯಾನಕ್ಕೆ ಕುಳಿತರು. ಈ ವೇಳೆ ವಿರೋಧ ಪಕ್ಷಗಳು ಹಾಗೂ ಇತರರು ರಾಜಕೀಯ ಲಾಭಕ್ಕಾಗಿ ಧ್ಯಾನ ಮಾಡುತ್ತಿದ್ದು, ಇದೆಲ್ಲ ಡೋಂಗಿ ಎಂದೆಲ್ಲ ಟೀಕಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಸರ್ಕಾರದ ರಚನೆಯಾದ ನಂತರ ಇಂದು ತಮ್ಮ ಮೊದಲ ‘ಮನ್ ಕೀ ಬಾತ್’ನಲ್ಲಿ ಉತ್ತರಿಸಿದ್ದಾರೆ.

    ಲೋಕಸಭಾ ಚುನಾವಣೆಯ ನಂತರ ಕೇದಾರನಾಥಕ್ಕೆ ಪ್ರವಾಸ ಮಾಡಿ ಧ್ಯಾನಕ್ಕೆ ಕುಳಿತಿದ್ದು, ರಾಜಕೀಯ ಲಾಭಕ್ಕಾಗಿ ಅಲ್ಲ. ಬದಲಿಗೆ ಅದು ನನ್ನ ಅಂತರಂಗವನ್ನು ಅರಿಯಲು ದೊರೆತ ಒಂದು ಅವಕಾಶ ಎಂದು ವಿವಾದದ ಕುರಿತು ಸ್ಪಷ್ಟಪಡಿಸಿದ್ದಾರೆ.

    ಹಲವರು ಇದನ್ನು ರಾಜಕೀಯದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ನನಗಿದು ನನ್ನ ಅಂತರಂಗವನ್ನರಿಯಲು ದೊರೆತ ಅವಕಾಶ. ಅಲ್ಲದೆ, ಕೊನೆಯ ಬಾರಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮಾಡಿದ್ದರ ಬೇಸರವನ್ನು ಹಾಗೂ ಆ ಸ್ಥಾನವನ್ನು ಕೇದಾರನಾಥ ಪ್ರವಾಸ ತುಂಬಿತು ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ.

    ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದು ಹಾಗೂ ಪುಸ್ತಕ ಓದುವುದರ ಕುರಿತು ಕೇಳುಗರಿಗೆ ನೆನಪಿದ್ದಾರೆ. ಇದೇ ವೇಳೆ ತಮ್ಮ ‘ಕೇದಾರನಾಥ ಪ್ರವಾಸ’ ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಹಿಂದಿನ ಸರ್ಕಾರದ ಅವಧಿಯಲ್ಲಿ(ಫೆಬ್ರವರಿ) ನಡೆದ ಕೊನೆಯ ‘ಮನ್ ಕೀ ಬಾತ್’ನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.

    ಮತದಾನದ ನಂತರ ‘ಮನ್ ಕೀ ಬಾತ್’ಗೆ ಹಿಂದಿರುಗುವುದಾಗಿ ನೀಡಿದ್ದ ನನ್ನ ಭರವಸೆಗೆ ರಾಜಕೀಯದ ಅರ್ಥ ನೀಡಿ ಟೀಕಿಸಿದ್ದರು. ಅಲ್ಲದೆ, ‘ಅತಿಯಾದ ಆತ್ಮ ವಿಶ್ವಾಸ’ ಎಂದು ಅಲ್ಲಗಳೆದಿದ್ದರು. ಆದರೆ, ನಿಮ್ಮ ವಿಶ್ವಾಸದಿಂದ ನಾನು ಮರಳಿ ಬರಲು ನೆರವಾಯಿತು. ನೀವು ಆಹ್ವಾನಿಸದ ಹೊರತು ನನ್ನೊಬ್ಬನಿಂದಲೇ ಮರಳಿ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

    ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ಮತದಾನದ ಮಹತ್ವವನ್ನು ವಿವರಿಸುವಾಗ ತುರ್ತು ಪರಿಸ್ಥಿತಿಯ ಉದಾಹರಣೆ ನೀಡಿದ್ದು, 1977ರಲ್ಲಿ ಹೇರಿದ ತುರ್ತು ಪರಿಸ್ಥಿತಿ ವೇಳೆ ಮೂಲಭೂತ ಹಕ್ಕುಗಳನ್ನು ಹೇಗೆ ಕಸಿದುಕೊಂಡಿದ್ದರು ಎಂದು ವಿವರಿಸಿದರು. ಅಲ್ಲದೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು ಎಂದು ಮೋದಿ ವಿವರಿಸಿದ್ದಾರೆ.

    ಪ್ರಜಾಪ್ರಭುತ್ವವೆಂದರೆ ಪ್ರತಿಯೊಬ್ಬ ಮತದಾರನಿಗೂ ಗೌರವ ಸಲ್ಲಿಸುವುದು. ಲೋಕಸಭಾ ಚುನಾವಣೆ ಮುಗಿಯುವ ಹೊತ್ತಿನಲ್ಲಿ ದೂರದ ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಒಂಟಿ ಮಹಿಳೆಗೆ ಮತಗಟ್ಟೆ ಸ್ಥಾಪಿಸಲು ಚುನಾವಣಾಧಿಕಾರಿಗಳು ಎರಡು ದಿನಗಳ ಕಾಲ ಪ್ರಯಾಣಿಸಿ, ಹೇಗೆ ಕಷ್ಟಪಟ್ಟರು ಎಂಬುದನ್ನು ಇದೇ ವೇಳೆ ವಿವರಿಸಿದರು.

    ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಸಂತಸವಾಗಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಇದೇ ವೇಳೆ ಯುವಕರಿಗೆ ಹಾಗೂ ಕೇಳುಗರಿಗೆ ಕರೆ ನೀಡಿದರು. ಇತ್ತೀಚೆಗೆ ಪ್ರೇಮ್‍ಚಂದ್ ಅವರ ಜನಪ್ರಿಯ ಕಥೆಗಳ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಈ ಪುಸ್ತಕ ಓದುತ್ತಿದ್ದಾಗ ಯುವಕನಾಗಿದ್ದಾಗ ನಾನು ಅನುಭವಿಸಿದ ಸಾಮಾಜಿಕ ಸವಾಲುಗಳು ನೆನಪಾದವು ಎಂದು ತಿಳಿಸಿದರು.

    ತಿಂಗಳುಗಳ ನಂತರ ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹೊಸ ಸರ್ಕಾರ ರಚನೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ‘ಮನ್ ಕೀ ಬಾತ್’ ಇದಾಗಿದೆ.

  • ಮೋದಿಗೆ ಭರ್ಜರಿ ಗೆಲುವು – ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್

    ಮೋದಿಗೆ ಭರ್ಜರಿ ಗೆಲುವು – ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್

    ಒಸಾಕಾ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಲ್ಲಿ ಅದ್ಭುತ ಕೆಲಸ ಮಾಡಿದ್ದೀರಿ ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.

    ಜಿ-20 ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರು ಕಾರ್ಯಸೂಚಿ ರೂಪಿಸುವುದಕ್ಕೂ ಮೊದಲು ಭೇಟಿಯಾಗಿ ಮಾಧ್ಯಮದವರ ಮುಂದೆ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಮಾತನಾಡಿದ ಟ್ರಂಪ್, ಆಡಳೀತಾರೂಢ ಸರ್ಕಾರದ ಗೆಲುವು ತುಂಬಾ ದೊಡ್ಡದು ಎಂದು ಬಣ್ಣಿಸಿದ್ದಾರೆ. ಶೇ.72ರಷ್ಟನ್ನು ಮಾತ್ರ ನಾನು ತಿಳಿದಿದ್ದೇನೆ. ಆದರೆ, ಯುನೈಟೈಡ್ ಸ್ಟೇಟ್ಸ್(ಯುಎಸ್)ನಲ್ಲಿ ಇದನ್ನು ಅಭೂತಪೂರ್ವ ಗೆಲುವು ಎಂದು ಬಣ್ಣಿಸಲಾಗಿದೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆಯ ಗೆಲುವು ಪ್ರಧಾನಿ ಮೋದಿ ಅವರ ಬಣಗಳನ್ನು ಒಗ್ಗೂಡಿಸುವ ತಂತ್ರಕ್ಕೆ ಸಂದ ಜಯ. ನಾನು ಕಂಡಂತೆ ನೀವು ಅನೇಕ ಬಣಗಳನ್ನು ಹೊಂದಿದ್ದೀರಿ. ಮೊದಲ ಅಧಿಕಾರಾವಧಿಯಲ್ಲಿ ಅವರು ಪರಸ್ಪರ ಕಿತ್ತಾಡುತ್ತಿದ್ದರು. ಆದರೆ ಇದೀಗ ಎಲ್ಲರೂ ಜೊತೆಯಾಗಿದ್ದಾರೆ. ಅವರನ್ನು ಒಟ್ಟಾಗಿ ತರುವಲ್ಲಿ ಶ್ರಮಿಸಿದ್ದೀರಿ. ಇದು ನಿಮಗೆ ಹಾಗೂ ನಿಮ್ಮ ಸಾಮಥ್ರ್ಯಕ್ಕೆ ಸಂದ ಅದ್ಭುತ ಗೌರವ ಎಂದು ಟ್ರಂಪ್ ಬಣ್ಣಿಸಿದ್ದಾರೆ.

    ಭಾರತ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಹಕಾರವನ್ನು ನೋಡಿದಾಗ ಉಭಯ ದೇಶಗಳು ‘ಉತ್ತಮ ಸ್ನೇಹ’ ಹೊಂದಿದ್ದು, ಎರಡೂ ದೇಶಗಳು ಎಂದೂ ಇಷ್ಟು ಹತ್ತಿರವಾಗಿರಲಿಲ್ಲ. ವ್ಯಾಪಾರದಲ್ಲಿಯೂ ಸಹ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದ್ದು, ಈ ಕುರಿತು ಇಂದು ಚರ್ಚಿಸಬೇಕಿದೆ. ವಿಶೇಷವಾಗಿ ಎರಡೂ ದೇಶಗಳ ನಡುವಿನ ಸುಂಕದ ಕುರಿತು ಮಾತನಾಡಬೇಕಿದೆ ಎಂದು ತಿಳಿಸಿದರು.

    ಪ್ರತಿಯಾಗಿ ಪ್ರಧಾನಿ ಮೋದಿ ಶುಭಾಶಯ ಕೋರಿದ್ದು, ಟ್ರಂಪ್ ಅವರ ಅಭಿನಂದನೆಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಇದೇ ವಾರದಲ್ಲಿ ಭಾರತದ ಪ್ರವಾಸದಲ್ಲಿದ್ದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರ ಹೃದಯ ಮುಟ್ಟುವ ಸಾಲುಗಳ ಪತ್ರದ ಕುರಿತು ಸಹ ಧನ್ಯವಾದ ತಿಳಿಸಿದರು.

    ಪರಸ್ಪರ ಸ್ನೇಹ ವಿನಿಮಯದ ನಂತರ ಮಾತನಾಡಿದ ಟ್ರಂಪ್, ದೊಡ್ಡ ವಿಷಯವನ್ನು ಘೋಷಿಸುವುದು ಬಾಕಿ ಇದೆ. ಬಹುದೊಡ್ಡ ವ್ಯಾಪಾರ, ವ್ಯವಹಾರ ಹಾಗೂ ಉತ್ಪಾದನೆ ನಿಯಮಗಳ ಕುರಿತು ಭಾರತದೊಂದಿಗೆ ಹಂಚಿಕೊಳ್ಳಬೇಕಿದೆ ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ 542 ಲೋಕಸಭಾ ಸ್ಥಾನಗಳ ಪೈಕಿ ಎನ್‍ಡಿಎ ಒಟ್ಟು 353 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 303 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಈ ಮೂಲಕ ಎನ್‍ಡಿಎ ಗೆಲುವಿನ ಪ್ರಮಾಣ ಶೇ.65ರಷ್ಟಾಗಿದೆ.

  • ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ಸಂಸದರು

    ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ಸಂಸದರು

    ನವದೆಹಲಿ: 17ನೇ ಲೋಕಸಭೆಯ ಮೊಟ್ಟ ಮೊದಲ ಅಧಿವೇಶನ ಆರಂಭವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಆಗಿರುವ 542 ಮಂದಿ ಸದಸ್ಯರು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಕರ್ನಾಟಕದಿಂದ ಆಯ್ಕೆ ಆಗಿರುವ ಸಂಸದರಾದ ಸದಾನಂದ ಗೌಡ, ಸುರೇಶ್ ಅಂಗಡಿ ಅವರು ಕನ್ನಡದಲ್ಲೇ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ವೇಳೆ ಇತರೇ ಸಂಸದರು ಮೇಜು ಕುಟ್ಟಿ ಸ್ವಾಗತ ಮಾಡಿದರು.

    ಕಳೆದ ಲೋಕಸಭೆಯಲ್ಲಿ ಅನಂತ್ ಕುಮಾರ್ ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನೇ ಸದಾನಂದ ಗೌಡರಿಗೆ ನೀಡಲಾಗಿದೆ. ಇಂದು ಡಿವಿಎಸ್ ಅವರು 4ನೇಯವರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ 12ನೇಯವರಾಗಿ ಸಂಸರಾದ ಪ್ರಹ್ಲಾದ್ ಜೋಶಿ ಅವರು ಕೂಡ ಕನ್ನಡಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.

    ಲೋಕಸಭೆಯಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮಧ್ಯಪ್ರದೇಶದ ಸಾಗರ್ ಕ್ಷೇತ್ರದ ಸಂಸದ ವೀರೇಂದ್ರ ಕುಮಾರ್ ಹಂಗಾಮಿ ಸ್ಪೀಕರ್ ಆಗಿದ್ದು ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ಮೋದಿ ಬಳಿಕ ರಾಜ್‍ನಾಥ್ ಸಿಂಗ್, ನಿತಿನ್ ಗಡ್ಕರಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

    542 ಸಂಸದರಲ್ಲಿ 267 ಮಂದಿ ಲೋಕಸಭೆಗೆ ಹೊಸ ಸದಸ್ಯರಾಗಿದ್ದು, ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿ 303 ಸದಸ್ಯ ಬಲದ ಪ್ರಚಂಡ ಬಹುಮತ ಹೊಂದಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಲೋಕಸಭೆಯಲ್ಲಿ ಯಾವುದೇ ಅಧಿಕೃತ ವಿಪಕ್ಷವಿಲ್ಲ. ಕಾಂಗ್ರೆಸ್ 52 ಸಂಸದರನ್ನು ಹೊಂದಿದ್ದರೂ ಅಧಿಕೃತ ವಿಪಕ್ಷ ಸ್ಥಾನಕ್ಕೆ 55 ಸ್ಥಾನಗಳು ಅಗತ್ಯವಿದೆ. ಉಳಿದಂತೆ ಡಿಎಂಕೆ -23, ಟಿಎಂಸಿ -22, ಜೆಡಿಯು – 16, ಬಿಎಸ್‍ಪಿ -10, ವೈಎಸ್‍ಆರ್‍ಪಿ -22, ಶಿವಸೇನೆ -18, ಬಿಜೆಡಿ – 12, ಟಿಆರ್‍ಎಸ್ -9, ಎಲ್‍ಜೆಪಿ – 6 ಸಂಸದರನ್ನು ಹೊಂದಿದೆ. ಪಕ್ಷೇತರ ಸಂಸದೆಯಾಗಿ ಆಯ್ಕೆ ಇತಿಹಾಸ ನಿರ್ಮಿಸಿರುವ ಮಂಡ್ಯ ಸಂಸದೆ ಸುಮಲತಾ ನಾಳೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.