Tag: prime minister modi

  • ನೆರೆ ಪರಿಹಾರಕ್ಕೆ ಒತ್ತಾಯಿಸಿ ಶೀಘ್ರವೇ ಜೆಡಿಎಸ್‍ನಿಂದ ಕೇಂದ್ರಕ್ಕೆ ನಿಯೋಗ: ಹೆಚ್‍ಡಿಡಿ

    ನೆರೆ ಪರಿಹಾರಕ್ಕೆ ಒತ್ತಾಯಿಸಿ ಶೀಘ್ರವೇ ಜೆಡಿಎಸ್‍ನಿಂದ ಕೇಂದ್ರಕ್ಕೆ ನಿಯೋಗ: ಹೆಚ್‍ಡಿಡಿ

    – ನಾನು ಹೋರಾಟ ಮಾಡೋದನ್ನು ಯಾರಿಂದ ಕಲಿಯಬೇಕಿಲ್ಲ

    ಬೆಂಗಳೂರು: ನೆರೆ ಪರಿಹಾರ ನೀಡುವಂತೆ ಒತ್ತಾಯಿಸಲು ಶೀಘ್ರವೇ ಜೆಡಿಎಸ್ ಪಕ್ಷದ ನಿಯೋಗದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.

    ಕೇಂದ್ರದಿಂದ ಅನುದಾನ ಬಿಡುಗಡೆ ಆಗದ ವಿಚಾರಕ್ಕೆ ಇಂದು ಜೆಪಿ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. ಶೀಘ್ರದಲ್ಲೇ ನಮ್ಮ ಪಕ್ಷದ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ ಮಾಡಿ ನೆರೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಅದರ ಮೇಲು ಅನುದಾನ ಬಾರದೇ ಹೋದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ನಾವು ಹೋರಾಟ ಮಾಡೋದ್ರಲ್ಲಿ ಹಿಂದೆ ಬಿಳುವುದಿಲ್ಲ. ಹೋರಾಟದ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ನನಗೆ ಇಲ್ಲ. ನಾನು ಹೋರಾಟ ಮಾಡೋದನ್ನು ಯಾರಿಂದ ಕಲಿಯಬೇಕಿಲ್ಲ. ಅನುದಾನಕ್ಕಾಗಿ ನಾನು ಪ್ರಧಾನಿಗೆ ಮೊದಲೇ ಪತ್ರ ಬರೆದಿದ್ದೆ. ಆದರೆ ಈವರೆಗೂ ಅ ಪತ್ರಕ್ಕೆ ಉತ್ತರ ಬಂದಿಲ್ಲ. ಪಾಪ ಬಿಜೆಪಿ ಅವರು ಕಾಶ್ಮೀರ, ಇನ್ನಿತರ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಕಾಗದ ನೋಡೋಕೆ ಅವರಿಗೆ ಟೈಂ ಇಲ್ಲ ಅನ್ನಿಸುತ್ತೆ ಎಂದು ಕೇಂದ್ರದ ನಾಯಕರಿಗೆ ಟಾಂಗ್ ನೀಡಿದರು.

    ನಾನು ಹೋರಾಟಕ್ಕೆ ನಿಂತರೆ ಯಾವುದೇ ದಾಕ್ಷಿಣ್ಯ ಇಲ್ಲ. ಎರಡು ಸರ್ಕಾರಗಳ ವಿರುದ್ಧ ಪಾದಯಾತ್ರೆ ಮಾಡಿ ಹೋರಾಟ ಮಾಡಿದ್ದೇನೆ. ನೈಸ್ ವಿರುದ್ಧ ಹೋರಾಟ ಮಾಡಿದ್ದೇನೆ. ಹೀಗೆ ಹೋರಾಟವೇ ನನ್ನ ಜೀವನದ ಮಜಲು ಎಂದು ಕೇಂದ್ರದ ವಿರುದ್ಧ ಹೋರಾಟದ ಎಚ್ಚರಿಕೆ ಕೊಟ್ಟರು. ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು ಪ್ರತಿಭಟನೆ ಮಾಡಲಿ ಸಂತೋಷ ಎಂದರು.

  • ಯಡಿಯೂರಪ್ಪ ವೀಕೆಸ್ಟ್ ಸಿಎಂ, ಮಂಡ್ಯ ಜಿಲ್ಲೆಯವರಾಗಿ ಗಡಸ್ಸು ಹೊಂದಿಲ್ಲ: ಸಿದ್ದರಾಮಯ್ಯ

    ಯಡಿಯೂರಪ್ಪ ವೀಕೆಸ್ಟ್ ಸಿಎಂ, ಮಂಡ್ಯ ಜಿಲ್ಲೆಯವರಾಗಿ ಗಡಸ್ಸು ಹೊಂದಿಲ್ಲ: ಸಿದ್ದರಾಮಯ್ಯ

    ಮಂಡ್ಯ: ಬಿಜೆಪಿ ನಾಯಕರು ಪುಕ್ಕಲರುಗಳು, ಅದರಲ್ಲೂ ಯಡಿಯೂರಪ್ಪ ವೀಕೆಸ್ಟ್ ಸಿಎಂ. ಮಂಡ್ಯ ಜಿಲ್ಲೆಯವರಾಗಿ ಗಡಸ್ಸು ಹೊಂದಿಲ್ಲ. ಅವರು ಹುಟ್ಟಿದ್ದು ಮಾತ್ರ ಮಂಡ್ಯದಲ್ಲಿ, ಬೆಳೆದಿದ್ದು ಬೇರೆ ಕಡೆ. ಆದ್ದರಿಂದ ಅವರಿಗೆ ಗತ್ತು ಅನ್ನೋದು ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ 25 ಜನ ಬಿಜೆಪಿ ಎಂಪಿಗಳು ಗೆದ್ದರೂ ಜವಾಬ್ದಾರಿ ಇಲ್ಲದಾಗೆ ನಡೆದು ಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಭೀಕರ ಬರಗಾಲದ ಜೊತೆ ಪ್ರವಾಹವೂ ಬಂದಿದೆ. ಇದರಿಂದ ಸುಮಾರು 6-7 ಲಕ್ಷ ಜನರು ಬೀದಿಪಾಲಾಗಿದ್ದಾರೆ. 2.5 ಲಕ್ಷ ಮನೆ ಬಿದ್ದಿವೆ. 25 ಲಕ್ಷದಷ್ಟು ಬೆಳೆ ಹಾನಿಯಾಗಿದೆ. ಹಿಂದೆ ಈ ರೀತಿಯ ಭೀಕರ ಪ್ರವಾಹವಾಗಿಲ್ಲ. ಆದರೆ ಇದ್ಯಾವುದು ನರೇಂದ್ರ ಮೋದಿಗೆ ಗೊತ್ತಿಲ್ಲವಾ? ಒಂದು ದಿನವೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ದೂರಿದರು.

    ಬಿಜೆಪಿ ನಾಯಕರು ಪುಕ್ಕಲರುಗಳು. ನನ್ನ ಪ್ರಕಾರ ಒಬ್ಬರಿಗೂ ಧೈರ್ಯವಿಲ್ಲ. ಹೀಗಾಗಿ ಈ ಬಗ್ಗೆ ಹೈಕಮಾಂಡ್ ಬಳಿ ಕೇಳುವ ಧೈರ್ಯ ಇಲ್ಲ. ದುರ್ಬಲ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪ. ಮಂಡ್ಯ ಜಿಲ್ಲೆಯವರಾಗಿ ಗಡಸ್ಸು ಹೊಂದಿಲ್ಲ. ಅವರು ಹುಟ್ಟಿದ್ದು ಮಾತ್ರ ಮಂಡ್ಯದಲ್ಲಿ, ಬೆಳೆದಿದ್ದು ಬೇರೆ ಕಡೆ. ಆದ್ದರಿಂದ ಅವರಿಗೆ ಗಡಸ್ಸು ಇಲ್ಲ ಎಂದು ಸಿಎಂ ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದರು.

    ಕರ್ನಾಟಕದಲ್ಲಿ ಪ್ರವಾಹ ಪ್ರಾರಂಭವಾಗಿ 45 ದಿನ ಆಗಿದೆ. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ನೆರವನ್ನು ಮೋದಿ ಸರ್ಕಾರ ನೀಡಿಲ್ಲ. ಯಡಿಯೂರಪ್ಪ ಸರ್ಕಾರ 38 ಸಾವಿರ ಕೋಟಿ ನೆರವು ಬೇಕೆಂದು ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ, ನೀವು ಹೆಚ್ಚಿನ ಹಣವನ್ನು ಕೇಳಿದ್ದೀರಿ. ಇದಕ್ಕೆ ಸ್ಪಷ್ಟನೆ ಕೊಡಿ ಎಂದು ಆ ಮನವಿಯನ್ನು ವಾಪಸ್ ಕಳುಹಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

  • ‘ನಿಮ್ಮ ಜೊತೆ ನಾವಿದ್ದೇವೆ’- ಡಿಕೆಶಿ ತಾಯಿಗೆ ಧೈರ್ಯ ತುಂಬಿದ ಎಚ್‍ಡಿಕೆ

    ‘ನಿಮ್ಮ ಜೊತೆ ನಾವಿದ್ದೇವೆ’- ಡಿಕೆಶಿ ತಾಯಿಗೆ ಧೈರ್ಯ ತುಂಬಿದ ಎಚ್‍ಡಿಕೆ

    ರಾಮನಗರ: ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಇಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಭೇಟಿ ನೀಡಿದ್ದರು. ಈ ವೇಳೆ ಮಗನ ಬಂಧನದ ನೋವಿನಲ್ಲಿರುವ ಡಿಕೆಶಿ ಅವರ ತಾಯಿ ಗೌರಮ್ಮ ಅವರಿಗೆ ಸಂತ್ವಾನ ಹೇಳಿದರು.

    ರಾಮನಗರದ ದೊಡ್ಡಲಹಳ್ಳಿ ನಿವಾಸಕ್ಕೆ ಭೇಟಿ ನೀಡಿದ್ದ ಎಚ್‍ಡಿಕೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಡಿಕೆಶಿ ಅವರ ತಾಯಿಯ ಆರ್ಶೀವಾದವನ್ನು ಪಡೆದರು. ಕುಮಾರಸ್ವಾಮಿ ಅವರ ಎದುರು ತಮ್ಮ ನೋವನ್ನು ಹಂಚಿಕೊಂಡ ಡಿಕೆಶಿ ಅವರ ತಾಯಿ ಅವರು ಕೈ ಮುಗಿದು ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಎಚ್‍ಡಿಕೆ ಅವರು ಧೈರ್ಯ ಹೇಳಿ, ನಿಮ್ಮೊಂದಿಗೆ ನಾವು ಇದ್ದೇವೆ ಎಂದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ ಅವರು, ಪ್ರಸ್ತುತ ಉಂಟಾಗಿರುವ ಸನ್ನಿವೇಶ ನಿನ್ನೆ, ಮೊನ್ನೆಯಿಂದ ಆರಂಭವಾಗಿಲ್ಲ. ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಪಕ್ಷದ ನಿಷ್ಠಾವಂತ ವ್ಯಕ್ತಿಯಾಗಿ ಶಾಸಕರನ್ನು ರಕ್ಷಣೆ ಮಾಡಿದ್ದರು. ಆ ವೇಳೆ ಡಿಕೆ ಶಿವಕುಮಾರ್ ಅವರಿಗೆ ಫೋನ್ ಕರೆ ಮಾಡಿದ್ದ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ ಅವರು ಪಕ್ಷದ ಕಾರ್ಯವನ್ನು ಮಾಡಿದ್ದರಿಂದ ಬಿಜೆಪಿಗೆ ರಾಜ್ಯಸಭೆಯ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಅದಕ್ಕಾಗಿಯೇ ಅವರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರದ ಅಡಿ ಇರುವ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡಿದ್ದಾರೆ ಎಂದರು.

    ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ ವಿಠಾಲ್ ಅವರು 2012 ಇಸವಿಯಲ್ಲೇ ಕೇಂದ್ರದಲ್ಲಿ ಇರುವ ಸರ್ಕಾರಗಳು ಯಾವ ರೀತಿ ಇಡಿ, ಸಿಬಿಐ ಸೇರಿದಂತೆ ಇತರೆ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಪುಸ್ತಕವನ್ನೇ ಬರೆದಿದ್ದಾರೆ. ಆದರೆ ಇದನ್ನೇ ಬಿಜೆಪಿ ಮುಂದುವರಿಸಿದರೆ ಅವರಿಗೂ ಇದೇ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

    ಆಪರೇಷನ್ ಕಮಲ: ಸಮ್ಮಿಶ್ರ ಸರ್ಕಾರದ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಅವರು ಏನು ಮಾಡಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಬಗ್ಗೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಆದರೆ ವಿಚಾರಣೆಗೆ ಸಹಕಾರ ನೀಡುತ್ತಿದ್ದರು ಕೂಡ, ಹಿರಿಯರಿಗೆ ಪೂಜೆ ಕೂಡ ಮಾಡಲು ಬಿಡದಂತೆ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳ ಕ್ರಮ ಸರಿಯಲ್ಲ. ಈಗಾಗಲೇ ಎಲ್ಲಾ ಮಾಹಿತಿ ಪಡೆದಿದ್ದರು ಕೂಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಬಿಜೆಪಿ ಅವರು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಎದುರಾಗಿದೆ. ನಾನು ಅಧಿಕಾರದಲ್ಲಿ ಇದ್ದ ವೇಳೆ ಆಡಿಯೋ ಪ್ರಕರಣದ ಬಗ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಏನಾದರೂ ಮಾಡಬಹುದಿತ್ತು. ಆದರೆ ನಾನು ಆ ರೀತಿ ಮಾಡಿಲ್ಲ ಎಂದರು.

    ನನ್ನ ವಿರುದ್ಧವೂ ಕೂಡ ಹಲವು ಮಾಧ್ಯಮಗಳು ವರದಿ ಮಾಡಿದೆ. ಆದರೆ ಈ ಬಗ್ಗೆ ಅವರಿಗೆ ಮಾಹಿತಿಯೇ ಇಲ್ಲ. ನಾನು ಶುದ್ಧವಾಗಿದ್ದು, ಐಎಂಎ ಪ್ರಕರಣದಲ್ಲಿ ನನ್ನ ಹೆಸರನ್ನು ತರುತ್ತಿದ್ದಾರೆ. ಆದರೆ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸಲು ನಮ್ಮ ಸರ್ಕಾರವೇ ಕಾರಣ. ಸದ್ಯ ನಾನು ಡಿಕೆಶಿ ಕುಟುಂಬ ಬೆಂಬಲಕ್ಕೆ ಇದ್ದು, ಕಾನೂನು ಹೋರಾಟಕ್ಕೂ ಬೇಗದ ಬೆಂಬಲ ನೀಡುತ್ತೇವೆ ಎಂದರು.

  • ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಕಾಂಗ್ರೆಸ್‍ನ ಶತ್ರುಘ್ನ ಸಿನ್ಹಾ

    ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಕಾಂಗ್ರೆಸ್‍ನ ಶತ್ರುಘ್ನ ಸಿನ್ಹಾ

    ನವದೆಹಲಿ: ಬಿಜೆಪಿಯಲ್ಲಿದ್ದಾಗ ಹಾಗೂ ಕಾಂಗ್ರೆಸ್ ಸೇರಿದ ನಂತರವೂ ಸಹ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಕಾಲ ಕಳೆಯುತ್ತಿದ್ದ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಅವರ ಮಾತು ಅತ್ಯಂತ ಧೈರ್ಯಶಾಲಿ, ಉತ್ತಮ ಸಂಶೋಧನೆ ಹೊಂದಿದ ಹಾಗೂ ಚಿಂತನೆಗೆ ಉತ್ತೇಜಿಸುವಂತಹ ಭಾಷಣವಾಗಿದೆ ಎಂದು ಹಾಡಿ ಹೊಗಳಿದ್ದಾರೆ. ಬಿಜೆಪಿಯಲ್ಲಿದ್ದ ಶತ್ರುಘ್ನ ಸಿನ್ಹಾ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಬಿಜೆಪಿಯನ್ನು ‘ಟು ಮ್ಯಾನ್ ಆರ್ಮಿ, ಒನ್ ಮ್ಯಾನ್ ಶೋ’ ಎಂದು ಸಿನ್ಹಾ ಟೀಕಿಸಿದ್ದರು. ಇದನ್ನು ಓದಿ: ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರು ಪೂರೈಕೆ: ಪ್ರಧಾನಿ ಮೋದಿ

    ಇಂದು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾನು ಟೀಕಿಸಲು ಕುಖ್ಯಾತಿ ಪಡೆದವನು. ಪ್ರಧಾನಿಗಳೇ ಆಗಸ್ಟ್ 15ರಂದು ನೀವು ಮಾಡಿದ ಭಾಷಣ ಅತ್ಯಂತ ಧೈರ್ಯಶಾಲಿ, ಉತ್ತಮ ಸಂಶೋಧನೆ ಮತ್ತು ಚಿಂತನೆಯನ್ನು ಪ್ರಚೋದಿಸುವುದಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ. ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಎಂದು ತಿಳಿಸಿದ್ದಾರೆ.

    ಪ್ರಧಾನಿ ಮೋದಿಯವರ ಭಾಷಣವನ್ನು ಹೊಗಳಿದ ಕಾಂಗ್ರೆಸ್ ನಾಯಕರ ಪೈಕಿ ಶತ್ರುಘ್ನ ಸಿನ್ಹಾ ಎರಡನೇಯವರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾಡಿದ್ದ ಭಾಷಣದಲ್ಲಿ ದೇಶದ ವಿವಿಧ ಸಮಸ್ಯೆ ಹಾಗೂ ಅವುಗಳಿಗೆ ಪರಿಹಾರಗಳ ಕುರಿತು ವಿವರಿಸಿದ್ದರು.

    ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಮೂರು ಅಂಶಗಳನ್ನು ಕಡ್ಡಾಯವಾಗಿ ಸ್ವಾಗತಿಸಲೇಬೇಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಟ್ವೀಟ್ ಮಾಡಿದ್ದರು.

    https://www.youtube.com/watch?v=3Dkd9kUA4z4

  • ‘ಭಾರತ ರಾಜಕೀಯದ ವೈಭವ ಅಧ್ಯಾಯವೊಂದರ ಅಂತ್ಯ’- ಸುಷ್ಮಾ ಅಗಲಿಕೆಗೆ ಮೋದಿ ಭಾವುಕ

    ‘ಭಾರತ ರಾಜಕೀಯದ ವೈಭವ ಅಧ್ಯಾಯವೊಂದರ ಅಂತ್ಯ’- ಸುಷ್ಮಾ ಅಗಲಿಕೆಗೆ ಮೋದಿ ಭಾವುಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದ್ಯೋಗಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಪ್ರಧಾನಿಗಳು ಸಂತಾಪ ಸೂಚಿಸಿ ಭಾವುಕ ಟ್ವೀಟ್ ಮಾಡಿದ್ದಾರೆ.

    ಭಾರತದ ರಾಜಕೀಯದ ವೈಭವಯುತ ಅಧ್ಯಾಯವೊಂದು ಅಂತ್ಯವಾಗಿದೆ ಎಂದು ಹೇಳಿರುವ ಪ್ರಧಾನಿ ಮೋದಿ ಅವರು, ತಮ್ಮ ಬದುಕನ್ನು ಸಾರ್ವಜನಿಕ ಜೀವನಕ್ಕಾಗಿಯೇ ಮುಡಿಪಾಗಿಟ್ಟ, ಬಡವರ ಸೇವೆ ಮಾಡಿದ ನಿಷ್ಠಾವಂತ ನಾಯಕಿ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ದೇಶವೇ ಕಣ್ಣೀರಿಡುತ್ತಿದೆ. ಸುಷ್ಮಾ ಅವರದ್ದು ಕೋಟಿ ಜನರಿಗೆ ಸ್ಫೂರ್ತಿ ನೀಡುವ ವ್ಯಕ್ತಿತ್ವ ಎಂದಿದ್ದಾರೆ.

    ಅಪ್ರತಿಮ ಸಂಸದೀಯ ಪಟುವಾಗಿದ್ದ ಸುಷ್ಮಾ ಅವರು, ಸರ್ಕಾರದ ಸಚಿವರಾಗಿ ಭಾರತದ ಸಂಬಂಧಗಳನ್ನು ಇತರೇ ದೇಶಗಳೊಂದಿಗೆ ಉತ್ತಮವಾಗಿಸಲು ಕಾರ್ಯನಿರ್ವಹಿಸಿದ್ದರು. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕ ನಷ್ಟವಾಗಿದೆ. ಅವರೊಂದಿಗೆ ಕಾರ್ಯನಿರ್ವಹಿಸಿದ್ದ 5 ವರ್ಷದ ಅವಧಿ ಸ್ಮರಣೀಯವಾಗಿದ್ದು, ಅವರು ಅನಾರೋಗ್ಯದಿಂದಿದ್ದರೂ ಕೂಡ, ತಮ್ಮ ಕಾರ್ಯವನ್ನು ದೇಶಕ್ಕಾಗಿ ಮಾಡುತ್ತಿದ್ದರು ಎಂದು ಪ್ರಧಾನಿ ಮೋದಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

    ರಾಹುಲ್ ಸಂತಾಪ: ಸುಷ್ಮಾ ಅವರ ನಿಧನದ ಬಗ್ಗೆ ಕೇಳಿ ನಾನು ಅಘಾತಕ್ಕೆ ಒಳಗಾದೆ. ಸುಷ್ಮಾ ಸ್ವರಾಜ್ ಅವರು ಸಾಧಾರಣ ರಾಜಕೀಯ ನಾಯಕತ್ವ, ಪ್ರಖರ ವಾಗ್ಮಿ, ಉತ್ತಮ ಸಂಸದೀಯ ಪಟುವಾಗಿದ್ದರು. ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

    ಎರಡೂ ದಶಕಗಳಿಗೂ ಹೆಚ್ಚು ಸಮಯ ರಾಜಕೀಯ ಜೀವನದಲ್ಲಿದ್ದ 67 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಅವರು, ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ರದ್ದುಗೊಳಿಸಿದ್ದ ಮೋದಿ ಸರ್ಕಾರದ ನಡೆಯನ್ನು ಶ್ಲಾಘಿಸಿ ತಮ್ಮ ಅಂತಿಮ ಟ್ವೀಟ್ ಮಾಡಿದ್ದರು. ಅಲ್ಲದೇ ಈ ದಿನಕ್ಕಾಗಿ ನಾನು ಜೀವಮಾನವಿಡೀ ಕಾದಿದ್ದೇ ಎಂದಿದ್ದರು. ಈ ಟ್ವೀಟ್ ಮಾಡಿದ್ದ ಕೆಲ ಗಂಟೆಗಳಲ್ಲೇ ಅವರು ನಿಧನರಾಗಿದ್ದರು.

  • 370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದಕ್ಕೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ‘ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ಸ್ಪಷ್ಟ ದಾಳಿ’ ಎಂದು ಕಿಡಿಕಾರಿದ್ದಾರೆ.

    ಜಮ್ಮು ಕಾಶ್ಮೀರವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದ ಸ್ಪಷ್ಟ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಅತ್ಯಂತ ಆಘಾತಕಾರಿ ಹಾಗೂ ನಿರಂಕುಶಾಧಿಕಾರತ್ವ. 370ನೇ ವಿಧಿ ಮತ್ತು 35ಎ ತನ್ನದೇ ಆದ ಮೂಲ ಹೊಂದಿವೆ. ಹೀಗಾಗಿ ಈ ಕುರಿತು ಯಾವುದೇ ಬದಲಾವಣೆ ತರಬೇಕಾದಲ್ಲಿ ಸಮಾಲೋಚನೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಕಳೆದ ವರ್ಷ ಮಕ್ಕಳ್ ನಿಧಿ ಮೈಯಂ ಪಕ್ಷ (ಎಂಎನ್‍ಎಂ) ಸ್ಥಾಪಿಸಿದ್ದ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

    ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮತಕ್ಕೆ ಹಾಕುವ ಮುನ್ನ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕಿತ್ತು. ಈ ಮೂಲಕ ಬಿಲ್ ಕುರಿತು ಪರಿಶೀಲನೆ ನಡೆಸಬೇಕಿತ್ತು. ಆದರೆ, ಬಲವಂತವಾಗಿ ವಿರೋಧ ಪಕ್ಷಗಳ ಬಾಯನ್ನು ಮುಚ್ಚಿಸಿ ಬಿಲ್ ಪಾಸ್ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಸರ್ಕಾರ ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನಿಕ ಸವಲತ್ತುನ್ನು ಹಿಂಪಡೆದಿದ್ದು, ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸ್ವಾಯತ್ತತೆಯನ್ನು ರದ್ದುಗೊಳಿಸಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ, ಆದೇಶ ಹೊರಡಿಸಿದೆ.

    ಜಮ್ಮು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಒಟ್ಟು ಗೂಡಿಸುವುದು ಹಾಗೂ ಭಯೋತ್ಪಾದನೆಯನ್ನು ಎದುರಿಸುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ತಿಳಿಸಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈ ನಿರ್ಧಾರ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಬಹುದೊಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರ ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

    370ನೇ ವಿಧಿಯನ್ನು ರದ್ದುಗೊಳಿಸುವುದಕ್ಕೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಅಶಾಂತಿ, ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಹೆಚ್ಚು ಸೈನಿಕರನ್ನು ಸ್ಥಳಾಂತರಿಸಿ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು. ಇದೇ ಧೈರ್ಯದಿಂದಲೇ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕುರಿತು ಘೋಷಿಸಿದರು.

    ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ನಂತರ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ‘ಭಾರತದ ಸಂಪೂರ್ಣ ಸಂವಿಧಾನ’ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದರು.

  • ಶ್ರಾವಣದ ಗಿಫ್ಟ್ – ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ

    ಶ್ರಾವಣದ ಗಿಫ್ಟ್ – ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ

    – ಸಿಎಂ ಬಿಎಸ್‍ವೈ ಆದೇಶ

    ಬೆಂಗಳೂರು: ರಾಜ್ಯದ ರೈತರಿಗೆ ಸಿಎಂ ಯಡಿಯೂರಪ್ಪ ಅವರು ಶ್ರಾವಣದ ಸಿಹಿ ಸುದ್ದಿ ಘೋಷಿಸಿದ್ದಾರೆ.

    ಶುಕ್ರವಾರ ನಡೆದ ಡಿಸಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್‍ವೈ ಅವರು, ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದಲೂ 4 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ಒಟ್ಟು 31 ಲಕ್ಷ ರೈತರಿಗೆ ಪರಿಹಾರ ಸಿಗಲಿದೆ ಎಂದಿದ್ದಾರೆ.

    ಮೊದಲ ಕಂತಿನ ಹಣವಾಗಿ 2 ಸಾವಿರ ರೂಪಾಯಿಯನ್ನು 15 ರಿಂದ 20 ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಹಿರಿಯ ಅಧಿಕಾರಿಗಳು, ಪ್ರಾದೇಶಿಕ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಈ ಕುರಿತು ಸೂಚನೆ ಕೊಟ್ಟಿದ್ದಾರೆ.

    ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಜಾರಿ ಮಾಡಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗಾಗಿ ರಾಜ್ಯ ಸರ್ಕಾರದಿಂದ 4 ಸಾವಿರ ನೀಡುವುದಾಗಿ ಫೋಷಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಕ್‍ಪುರ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ್ದರು.

    ಏನಿದು ಯೋಜನೆ?:
    ಈ ಬಾರಿಯ ಬಜೆಟಿನಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಿದೆ. ವರ್ಷಕ್ಕೆ 6 ಸಾವಿರ ರೂ. ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

    ಅರ್ಹತೆಗಳು ಏನು?
    2 ಹೆಕ್ಟೇರ್(4.94 ಎಕ್ರೆ) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭವನ್ನು ಪಡೆಯಬಹುದು. 2019 ಫೆ.1ರ ಒಳಗಡೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳಲ್ಲಿ ನೊಂದಣಿಯಾದ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ. ಸರ್ಕಾರಿ ಉದ್ಯೋಗಿಗಳ ಪೈಕಿ ಗ್ರೂಪ್ ಡಿ/ ಬಹು ಕಾರ್ಯ ನಿರ್ವಹಿಸುವ ಸರ್ಕಾರಿ ನೌಕಕರು/ ನಾಲ್ಕನೇಯ ವರ್ಗದ ಸಿಬ್ಬಂದಿ ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.

  • 2 ಹುಲಿಗಳಿದ್ದರೆ ಕರ್ನಾಟಕಕ್ಕೆ ಮತ್ತೆ ಸಿಗ್ತಿತ್ತು ಅಗ್ರ ಸ್ಥಾನ – ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ?

    2 ಹುಲಿಗಳಿದ್ದರೆ ಕರ್ನಾಟಕಕ್ಕೆ ಮತ್ತೆ ಸಿಗ್ತಿತ್ತು ಅಗ್ರ ಸ್ಥಾನ – ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ?

    – ದೇಶದಲ್ಲಿವೆ ಸುಮಾರು 3 ಸಾವಿರ ಹುಲಿಗಳು

    ನವದೆಹಲಿ: ದೇಶದಲ್ಲಿ ಒಟ್ಟು 2,967 ಹುಲಿಗಳಿದ್ದು, 2014ರ ಗಣತಿಗೆ ಹೋಲಿಸಿದರೆ, ಭಾರೀ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಿಂದ ಜಾರಿ ಎರಡನೇ ಸ್ಥಾನ ಪಡೆದಿದೆ.

    ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿರುವ ಹುಲಿಗಳ ಗಣತಿ ವರದಿಯನ್ನು ಬಿಡುಗಡೆಗೊಳಿಸಿದರು. ಪಟ್ಟಿಯಲ್ಲಿ ಮಧ್ಯಪ್ರದೇಶ 526 ಹುಲಿಗಳನ್ನು ಹೊಂದುವ ಮೂಲಕ ಅಗ್ರ ಸ್ಥಾನ ಪಡೆದಿದೆ. 524 ಹುಲಿಗಳನ್ನು ಹೊಂದುವ ಮೂಲಕ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಕರ್ನಾಟಕದಲ್ಲಿ 118 ಹುಲಿಗಳು ಹೆಚ್ಚಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

    ಉತ್ತರಾಖಂಡ್ 442 ಹುಲಿಗಳನ್ನು ಹೊಂದುವ ಮೂಲಕ ತೃತೀಯ ಸ್ಥಾನ ಪಡೆದಿದೆ. ಛತ್ತೀಸ್‍ಗಢ ಹಾಗೂ ಮಿಜೋರಾಂಗಳಲ್ಲಿ ಹುಲಿಗಳ ಸಂಖ್ಯೆ ಕುಸಿತ ಕಂಡಿದೆ. ಉಳಿದ ರಾಜ್ಯಗಳಲ್ಲಿ ಹುಲಿಗಳ ಪ್ರಮಾಣದಲ್ಲಿ ಗುಣಾತ್ಮಕ ಏರಿಕೆ ಕಂಡಿದೆ.

    ಹೆಚ್ಚು ವ್ಯಾಘ್ರಗಳನ್ನು ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಕಳೆದ ಬಾರಿ ಕರ್ನಾಟಕ 406 ಹುಲಿಗಳ ತಾಣವಾಗುವ ಮೂಲಕ ಅಗ್ರ ಸ್ಥಾನ ಪಡೆದಿತ್ತು. ಉತ್ತರಾಖಂಡ(340), ತಮಿಳುನಾಡು(229), ಮಧ್ಯ ಪ್ರದೇಶ(208), ಮಹಾರಾಷ್ಟ್ರ(190), ಮಧ್ಯ ಪ್ರದೇಶ(208) ಪಶ್ಚಿಮ ಬಂಗಾಳ (76) ಅನುಕ್ರಮವಾಗಿ ನಂತರ ಸ್ಥಾನ ಪಡೆದಿತ್ತು.

    2006 ರಿಂದ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು ನಾಲ್ಕನೇ ಸಮೀಕ್ಷೆಯಾಗಿದೆ. ಪ್ರಸಕ್ತ ಸಾಲಿನ ಸಮೀಕ್ಷೆಯನ್ನು ಸುಮಾರು 15 ತಿಂಗಳುಗಳ ಕಾಲ ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿನ 3,81,400 ಚ.ಕಿ.ಮೀ. ಜಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸುಮಾರು 26,760 ಕ್ಯಾಮರಾ ಬಳಸಿ ವನ್ಯಜೀವಿ ಅಧ್ಯಯನಕಾರರು 3.5 ಕೋಟಿ ಚಿತ್ರಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ತಯಾರಿಸಲಾಗಿದೆ. ಅಂದಾಜು ಶೇ.83 ರಷ್ಟು ಹುಲಿಗಳ ಸಂಖ್ಯೆಯನ್ನು ಚಿತ್ರಗಳ ಮೂಲಕ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

    2006ರ ವರದಿಯಲ್ಲಿ 1,441 ಹುಲಿಗಳಿದ್ದರೆ, 2010ರಲ್ಲಿ 1,706ಕ್ಕೆ ಏರಿಕೆಯಾಗಿತ್ತು. 2014ರ ವರದಿಯಲ್ಲಿ 2026 ಹುಲಿಗಳಿತ್ತು. ಕೆಲವು ಅಂಶಗಳು ವರದಿಯಲ್ಲಿ ಬಹಿರಂಗವಾಗಿದ್ದು, ಹುಲಿಗಳ ಸಂತತಿಗೆ ಭಾರತಕ್ಕಿಂತ ಉತ್ತಮ ವಾತಾವರಣ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ ಎಂದು ಅಖಿಲ ಭಾರತ ಹುಲಿ ಜನಗಣತಿ ವರದಿಯಲ್ಲಿ ತಿಳಿಸಲಾಗಿದೆ. 2022ಕ್ಕೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ಸೆಂಟ್ ಪಿಟರ್ಸ್‍ಬರ್ಗ್ ನಿರ್ಧರಿಸಿತ್ತು. ಆದರೆ, ಈ ಗುರಿಯನ್ನು ನಾಲ್ಕು ವರ್ಷಗಳಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ವರದಿ ಬಿಡುಗಡೆ ವೇಳೆ ತಿಳಿಸಿದ್ದಾರೆ.

    ಬಂಡೀಪುರ ಹುಲಿ ರಕ್ಷಿತಾರಣ್ಯ ಒಂದರಲ್ಲೇ ಕಳೆದ ಆರು ತಿಂಗಳಲ್ಲಿ ನಾಲ್ಕು ಹುಲಿಗಳು ಸಾವನ್ನಪ್ಪಿದ್ದು, ಬಂಡೀಪುರ ಅರಣ್ಯದಲ್ಲಿ ವೇಗವಾಗಿ ಬರುವ ವಾಹನಗಳಿಂದ ಹಾಗೂ ಅರಣ್ಯ ಸಮೀಪದ ಗ್ರಾಮಗಳ ಜನರು ಹುಲಿಗಳ ಹಾವಳಿಯಿಂದ ಬಚಾವಾಗಲು ಹುಲಿ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ದಾಖಲಾಗಿವೆ.

  • ಅಮೆರಿಕದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಮೋದಿ ಮಾತು

    ಅಮೆರಿಕದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಮೋದಿ ಮಾತು

    ಟೆಕ್ಸಾಸ್: ಅಮೆರಿಕದಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

    ಹೋಸ್ಟನ್‍ನ ಐತಿಹಾಸಿಕ ಎನ್‍ಆರ್‍ಜಿ ಕ್ರೀಡಾಂಗಣದಲ್ಲಿ ಸೆ.22 ರಂದು ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ‘ಹೌಡಿ ಮೋದಿ’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮವನ್ನು ಅಮೆರಿಕದ ಟೆಕ್ಸಾಸ್ ಇಂಡಿಯಾ ಫೋರಂ ಮತ್ತು ಇಂಡಿಯನ್ ಡೈಸ್ಪೋರಾ ಎಂಬ ಸಂಸ್ಥೆಗಳು ಹೋಸ್ಟ್ ಮಾಡುತ್ತಿವೆ.

    ಎನ್‍ಆರ್‍ಜಿ ಕ್ರೀಡಾಂಗಣದಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಉತ್ಸುಕರಾಗಿದ್ದೇವೆ. ಇದು ಭಾರತ-ಅಮೆರಿಕದ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ದೇಶದ ಸಂಸ್ಕೃತಿ ಹಾಗೂ ವೈವಿಧ್ಯತೆಯ ಪ್ರಾತಿನಿಧಿಕವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ‘ಹೌಡಿ ಮೋದಿ’ ಕಾರ್ಯಕ್ರಮ ಆಯೋಜನಾ ಸಮಿತಿಯ ಕನ್ವೀನರ್ ಜುಗಲ್ ಮಲಾನಿ ತಿಳಿಸಿದ್ದಾರೆ.

    ‘ಶೇರ್ಡ್ ಡ್ರೀಮ್ಸ್, ಬ್ರೈಟ್ ಫ್ಯೂಚರ್’ ಎಂಬ ಅಡಿ ಬರಹದೊಂದಿಗೆ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಮೆರಿಕ ಮತ್ತು ಭಾರತದ ಬೃಹತ್ ಪ್ರಜಾಪ್ರಭುತ್ವವನ್ನು ಒಗ್ಗೂಡಿಸುವ ಉದ್ದೇಶವನ್ನು ಕಾರ್ಯಕ್ರಮ ಪ್ರತಿಬಿಂಬಿಸಲಿದೆ ಎಂದು ಕಾರ್ಯಕ್ರಮದ ಆಯೋಜಕರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ದಿ ಟೆಕ್ಸಾಸ್ ಇಂಡಿಯಾ ಫೋರಂ(ಟಿಐಎಫ್) ಲಾಭಕ್ಕಾಗಿ ಇರುವ ಸಂಸ್ಥೆಯಲ್ಲ. ಇದು ಭಾರತಹಾಗೂ ಅಮೆರಿಕದ ಸಹಕಾರವನ್ನು ಪ್ರೋತ್ಸಾಹಿಸುವ ಸಂಸ್ಥೆಯಾಗಿದೆ. ಟಿಐಎಫ್ ಭಾರತ-ಅಮೆರಿಕದ ಸಂಘಟನೆ ಹಾಗೂ ಸಂಸ್ಥೆಗಳ ಜೊತೆಗೆ ಕಾರ್ಯನಿರ್ವಹಿಸಿ ನಮ್ಮ ಪ್ರಾದೇಶಿಕತೆಯನ್ನು ಉತ್ತೇಜಿಸುವುದು ಹಾಗೂ ಅವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

  • ಚುನಾವಣೆ ವೇಳೆ ಬಿಎಲ್ ಸಂತೋಷ್ ಹೇಳಿದ್ದ ಮಾತು ನಿಜವಾಯ್ತು

    ಚುನಾವಣೆ ವೇಳೆ ಬಿಎಲ್ ಸಂತೋಷ್ ಹೇಳಿದ್ದ ಮಾತು ನಿಜವಾಯ್ತು

    ಬೆಂಗಳೂರು: ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ನೀಡಿದ್ದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಾಗಲಕೋಟೆಯ ಜಮಖಂಡಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ ಎರಡು ಸರ್ಕಾರ ಬರಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದರೆ, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದಿದ್ದರು.

    ರಾಜ್ಯದಲ್ಲಿ 10 ರೂಪಾಯಿ ಹಾಕಿ 20 ರೂ. ಪಡೆಯುವ ಕಾಲ ಇದಾಗಿದ್ದು, ಯಾವಾಗಲೂ ಮತ ಹಾಕಿದರೆ ಒಂದು ಸರ್ಕಾರ ಬರುತಿತ್ತು. ಆದರೆ ಈ ಬಾರಿ ಒಂದು ಸೀರೆ ಕೊಂಡರೆ ಎರಡು ಖಚಿತ ಎಂಬಂತೆ ಎರಡು ಸರ್ಕಾರ ಬರಲಿದೆ ಎಂದಿದ್ದರು. ಅಲ್ಲದೇ ಈ ಮಾತನ್ನು ನಾನು ಮಾತ್ರ ಹೇಳುತ್ತಿಲ್ಲ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ವೀರಪ್ಪ ಮೊಯ್ಲಿ ಅವರು ಕೂಡ ಹೇಳಿದ್ದು, ಬಿಜೆಪಿ 20ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಮೈತ್ರಿ ಸರ್ಕಾರ ಬೀಳಲಿದೆ ಎಂಬುದಾಗಿ ಹೇಳಿದ್ದಾರೆ. ಈ ಮಾತನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹೇಳಬೇಕು. ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಭಾಷಣ ಮಾಡಿದ್ದರು.

    ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ವಿಶ್ವಾತ ಮತ ಸಾಬೀತು ಪಡಿಸಲು ವಿಫಲರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಬಿಎಸ್ ಯಡಿಯೂರಪ್ಪ ಅವರು ಸರ್ಕಾರ ರಚನೆ ಮಾಡಲು ಸಿದ್ಧತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಎಲ್ ಸಂತೋಷ್ ಅವರ ಅಂದು ಹೇಳಿದ ಮಾತು ನಿಜವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಮಲಾಲ್ ಅವರ ರಾಜೀನಾಮೆಯಿಂದ ತೆರವಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಕೆಲ ದಿನಗಳ ಹಿಂದೆ ನೇಮಿಸಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಎಲ್.ಸಂತೋಷ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ನೇಮಕವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದರು.

    ರಾಮಲಾಲ್ ಅಡಿಯಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಸತೀಶ್ ಈಗ ಅವರ ಸ್ಥಾನ ತುಂಬಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬಿಜೆಪಿ ಹೈಕಮಾಂಡ್ ಬಿ.ಎಲ್.ಸಂತೋಷ್ ಅವರಿಗೆ ಮಣೆ ಹಾಕಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಸಂಘಟಿಸುವ ಉದ್ದೇಶದಿಂದ ಬಿ.ಎಲ್.ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.