Tag: prime minister modi

  • ಪ್ರಧಾನಿಯವರೇ ನಾವು ನಿಮ್ಮ ಜೊತೆಗಿದ್ದೇವೆ ಪಾಕಿಸ್ತಾವನ್ನು ಮುಗಿಸಿಬಿಡಿ: ವಿ.ಎಸ್ ಉಗ್ರಪ್ಪ

    ಪ್ರಧಾನಿಯವರೇ ನಾವು ನಿಮ್ಮ ಜೊತೆಗಿದ್ದೇವೆ ಪಾಕಿಸ್ತಾವನ್ನು ಮುಗಿಸಿಬಿಡಿ: ವಿ.ಎಸ್ ಉಗ್ರಪ್ಪ

    _ ಬಿಎಸ್‍ವೈ, ಸಿಟಿ ರವಿಗೆ ನಾಚಿಕೆ ಆಗಬೇಕು

    ತುಮಕೂರು: ಪಾಕಿಸ್ತಾನ ನಮ್ಮ ಶತ್ರುರಾಷ್ಟ್ರ ಅನ್ನೋದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಪ್ರಧಾನಿ ಮೋದಿಯವರು ನಮ್ಮೆಲ್ಲರ ಬೆಂಬಲ ಪಡೆದು ಪಾಕಿಸ್ತಾನವನ್ನು ಮುಗಿಸಿ ಬಿಡಲಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರಧಾನಿಯವರಿಗೆ ಬೆಂಬಲ ಸೂಚಿಸಿದ್ದಾರೆ.

    ಮೊದಲು ದೇಶ ಎಂಬ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆದರೆ ಬಿಜೆಪಿಯ ದ್ವಂದ್ವ ನಿಲುವಿನಿಂದ ದೇಶದ ರಕ್ಷಣೆ ವಿಚಾರ ಕಗ್ಗಂಟಾಗಿ ಉಳಿದಿದೆ. 1971 ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಚಿತ್ರಾನ್ನ ಮಾಡಿದ್ದರು. ವಾಜಪೇಯಿ, ಎಲ್.ಕೆ ಅಡ್ವಾಣಿಯವರ ಸಹಕಾರ ಪಡೆದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ ದಿಟ್ಟತನ ತೋರಿದ್ದರು. ಪ್ರಧಾನಿ ಮೋದಿಯವರೂ ಈಗ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದರಲ್ಲಿ ನಮ್ಮ ಅಭ್ಯಂತರ ಇಲ್ಲ. ನಾವೂ ಅವರಿಗೆ ಬೆಂಬಲ ನೀಡುತ್ತೇವೆ ಎಂದರು.

    ರಾಜ್ಯದ ಪ್ರವಾಸಿ ತಾಣಗಳಲ್ಲಿ ಜೂಜು ಕೇಂದ್ರವನ್ನು ಸ್ಥಾಪಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಉಗ್ರಪ್ಪ ಖಂಡಿಸಿದ್ದಾರೆ. ಇದು ಬಿಜೆಪಿಯ ರಾಷ್ಟ್ರ ಪ್ರೇಮ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ. ಈ ರೀತಿಯ ಜೂಜು ಕೇಂದ್ರವನ್ನು ತೆರೆಯಲು ಹೊರಟಿರುವ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸಿ.ಟಿ ರವಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

  • ಭಾರತಕ್ಕೆ ಟ್ರಂಪ್ ಭೇಟಿ – ಮೋದಿ ವಿರುದ್ಧ ಹೆಚ್‍ಡಿಕೆ ಆಕ್ರೋಶ

    ಭಾರತಕ್ಕೆ ಟ್ರಂಪ್ ಭೇಟಿ – ಮೋದಿ ವಿರುದ್ಧ ಹೆಚ್‍ಡಿಕೆ ಆಕ್ರೋಶ

    ಬೆಂಗಳೂರು: ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಯಾಗುವ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೊದಲಿಗೆ “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್ ನ ಸ್ಲಂಗಳು ಕಾಣದಂತೆ ಪ್ರಧಾನಿ ಮೋದಿ ಅವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ. ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ?” ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಫೆ.24, 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಟ್ರಂಪ್

    ಮತ್ತೊಂದು ಟ್ವೀಟ್ ಮಾಡಿ, “ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ?” ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಯಾಗುವ ವಿಚಾರಕ್ಕೆ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧ್ಯಕ್ಷ ಟ್ರಂಪ್?
    ಇದೇ 24 ಮತ್ತು 25ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಭಾರತಕ್ಕೆ ತೆರಳುತ್ತಾರೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಪ್ರವಾಸದಲ್ಲಿ ಟ್ರಂಪ್ ಮತ್ತು ಅವರ ಪತ್ನಿ ದೆಹಲಿ ಮತ್ತು ಅಹಮದಾಬಾದ್‍ಗೆ ಭೇಟಿ ನೀಡಲಿದ್ದಾರೆ. ಈ ಹಿಂದೆ ಬರಾಕ್ ಒಬಾಮ ಅವರು 2010 ಮತ್ತು 2015ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.

  • ‘ಇಷ್ಟವಿರುವ ಪಕ್ಷಕ್ಕೆ ಹೋಗಬಹುದು’- ಪವನ್ ವರ್ಮಾಗೆ ನಿತೀಶ್ ಕುಮಾರ್ ಟಾಂಗ್

    ‘ಇಷ್ಟವಿರುವ ಪಕ್ಷಕ್ಕೆ ಹೋಗಬಹುದು’- ಪವನ್ ವರ್ಮಾಗೆ ನಿತೀಶ್ ಕುಮಾರ್ ಟಾಂಗ್

    ಪಾಟ್ನಾ: ಜೆಡಿಯು ಹಿರಿಯ ನಾಯಕ ಪವನ್ ವರ್ಮಾ ಅವರ ಟ್ವೀಟ್‍ಗೆ ತಿರುಗೇಟು ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅವರು ಇಷ್ಟವಿರುವ ಪಕ್ಷಕ್ಕೆ ಹೋಗಬಹುದು, ಅವರಿಗೆ ಶುಭಾಶಯ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಜೆಪಿಯೊಂದಿಗೆ ಜೆಡಿಯು ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಪವನ್ ವರ್ಮಾ ಮಂಗಳವಾರ ಟ್ವೀಟ್ ಮಾಡಿದ್ದರು. ಸದ್ಯ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್ ಅವರು ತಿರುಗೇಟು ನೀಡಿ ಟಾಂಗ್ ನೀಡಿದ್ದಾರೆ.

    ನವದೆಹಲಿಯಲ್ಲಿ ಫೆ.8 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹಾಗೂ ಸಿಎಎ ವಿಚಾರವಾಗಿ ಹಿಂದೇಟು ಹಾಕುತ್ತಿದ್ದಾರೆ ಎಂದು ಪವನ್ ವರ್ಮಾ ಬಹಿರಂಗವಾಗಿಯೂ ಹೇಳಿಕೆ ನೀಡಿದ್ದರು. ಈ ಹೇಳಿಕೆ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿ, ಪಕ್ಷದ ವಿಚಾರಗಳ ಕುರಿತು ಬಹಿರಂಗ ಹೇಳಿಕೆ ನೀಡುವುದು ಉತ್ತಮವಲ್ಲ. ಅವರಿಗೆ ನನ್ನ ಮೇಲೆ ಗೌರವವಿಲ್ಲದಿದ್ದರೂ, ನನಗೆ ಅವರ ಮೇಲೆ ಗೌರವವಿದೆ. ಪಕ್ಷದ ಆಂತರಿಕ ಸಭೆಯಲ್ಲಿ ಅವರ ಅಸಮಾಧಾನಗಳ ಕುರಿತು ಚರ್ಚೆ ನಡೆಸಿಬೇಕು. ಒಂದೊಮ್ಮೆ ಪಕ್ಷಾಂತರ ಮಾಡಬೇಕೆಂಬ ಮನಸ್ಸಿದ್ದರೆ ಅವರು ಮಾಡಬಹುದು ಎಂದು ಪರೋಕ್ಷವಾಗಿ ಪವನ್ ಶರ್ಮಾ ಹೆಸರು ಪ್ರಸ್ತಾಪ ಮಾಡದೆ ತಿರುಗೇಟು ನೀಡಿದರು.

    ಪವನ್ ವರ್ಮಾ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದು, ಸದ್ಯ ಜೆಡಿಯು ಪಕ್ಷ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಸಿಎಂ ನಿತೀಶ್ ಕುಮಾರ್ ಅವರ ಹೇಳಿಕೆಗೆ ಸ್ವಾಗತ ಕೋರಿರುವ ಪವನ್ ವರ್ಮಾ, ತಮ್ಮ ಪತ್ರಕ್ಕೆ ಪ್ರತಿಕ್ರಿಯೆ ಬರುವವರೆಗೂ ಕಾಯ್ದು ಆ ಬಳಿಕ ತಮ್ಮ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದಿದ್ದಾರೆ.

    ಸಿಎಂ ನಿತೀಶ್ ಕುಮಾರ್ ಅವರಿಗೆ ಬರೆದಿದ್ದ ಪತ್ರದಲ್ಲಿ ಪವನ್ ವರ್ಮಾ, ನಿತೀಶ್ ಕುಮಾರ್ ಅವರಿಗೆ ಜೆಡಿಯು ಪಕ್ಷ ಆರ್ ಎಸ್‍ಎಸ್ ಸಿದ್ಧಾಂತಗಳನ್ನು ಹೊಂದಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಕ್ಷ ಹೇಗೆ ತನ್ನ ಸಿದ್ಧಾಂತಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಸ್ಪಷ್ಟನೆ ಕೇಳಿ ಸವಾಲು ಎಸೆದಿದ್ದರು. ಅಲ್ಲದೇ 2012ರಲ್ಲಿ ತಮ್ಮೊಂದಿಗೆ ಮಾತನಾಡುವ ವೇಳೆ ಮೋದಿ ಅವರ ರಾಜಕೀಯ ದೇಶಕ್ಕೆ ಏಕೆ? ಮಾರಕ ಎಂದು ನಿತೀಶ್ ವಿವರಿಸಿದ್ದನ್ನು ಪವನ್ ಶರ್ಮಾ ನೆನಪು ಮಾಡಿದ್ದರು.

     

  • ಕಾಂಗ್ರೆಸ್ ಬೊಬ್ಬೆ ಹಾಕುವ ಕೆಲಸ ಮಾಡ್ತಿದೆ: ಪ್ರಭು ಚವ್ಹಾಣ

    ಕಾಂಗ್ರೆಸ್ ಬೊಬ್ಬೆ ಹಾಕುವ ಕೆಲಸ ಮಾಡ್ತಿದೆ: ಪ್ರಭು ಚವ್ಹಾಣ

    ಯಾದಗಿರಿ: ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿಟ್ಟುಕೊಂಡು ಅವರ ಕೆಲಸ ಈಗ ಬೊಬ್ಬೆ ಹೊಡೆಯುವುದಾಗಿದೆ ಎಂದು ಯಾದಗಿರಿಯಲ್ಲಿ ಸಚಿವ ಪ್ರಭು ಚವ್ಹಾಣ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ನಗರದ ಪಿಯು ಕಾಲೇಜ್ ಮೈದಾನದಲ್ಲಿ ಬಿಜೆಪಿ ಪಕ್ಷ ಸಿಎಎ ಜನ ಜಾಗೃತಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವನ್ನು ಸಚಿವ ಪ್ರಭು ಚವ್ಹಾಣ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಕೆಲಸ ಬೊಬ್ಬೆ ಹಾಕುವುದಾಗಿದ್ದು, ಈಗ ಸಿಎಎ ಕಾಯ್ದೆ ಜಾರಿ ಮಾಡಿದ ನಂತರ ಬೊಬ್ಬೆ ಹಾಕುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಾತಾ ರಕ್ಷಣೆಗೋಸ್ಕರ ಸಿಎಎ ಕಾಯ್ದೆ ಜಾರಿಗೆ ತಂದಿದ್ದಾರೆ. ದೇಶದ ಜನ ಈ ಕಾಯ್ದೆ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

    ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದ ಸಚಿವ ಪ್ರಭು ಚವ್ಹಾಣ ಅವರು, ರಾಹುಲ್ ಗಾಂಧಿ ಅವರೇ 60 ವರ್ಷ ಏನು ಮಾಡಿದ್ರಿ, ಅಣ್ಣ ತಮ್ಮಂದರಿಗೆ ಜಗಳ ಮಾಡಿಸುವ ಜೊತೆಗೆ ಅನೇಕ ಉಲ್ಟಾ ಪಲ್ಟಾ ಕೆಲಸ ಮಾಡಿದ್ದೀರಿ. ನಿಮಗೆ ಮೋದಿ ಕಾರ್ಯದಿಂದ ಹೊಟ್ಟೆ ನೋವು ಕಾಣಿಸಿಕೊಂಡರೆ ಹಜ್ಮೋಲಾ (hajmola)  ಸೇವಿಸಬೇಕೆಂದು ಸಚಿವ ಪ್ರಭು ಚವ್ಹಾಣ ಅವರು ಟಾಂಗ್ ನೀಡಿದ್ದಾರೆ.

  • ಸಾಲು ಸಾಲು ಪ್ರತಿಭಟನೆ, ಬಂದೋಬಸ್ತಿಗೆ ಬೆಂಗ್ಳೂರು ಪೊಲೀಸರು ಹೈರಾಣ

    ಸಾಲು ಸಾಲು ಪ್ರತಿಭಟನೆ, ಬಂದೋಬಸ್ತಿಗೆ ಬೆಂಗ್ಳೂರು ಪೊಲೀಸರು ಹೈರಾಣ

    ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಗಳು ಹಾಗೂ ಬಂದೋಬಸ್ತ್ ಒತ್ತಡದಿಂದಾಗಿ ಬೆಂಗಳೂರು ಪೊಲೀಸರು ಹೈರಾಣಾಗಿದ್ದಾರೆ. ಕಳೆದ ಐದು ದಿನದಿಂದ ಹಗಲಿರುಳು ಕೆಲಸ ಮಾಡಿ ರೋಸಿ ಹೋಗಿದ್ದಾರೆ.

    ಡಿ.30 ರಿಂದ ಇಲ್ಲಿಯ ತನಕ ನಿರಂತರವಾಗಿ ಕೆಲಸ ಮಾಡುತ್ತಿರುವ ಪೊಲೀಸರು ದೈಹಿಕವಾಗಿ, ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದಾರೆ. ಡಿಸೆಂಬರ್ 30 ಮತ್ತು 31 ರಂದು ವರ್ಷದ ಅಂತಿಮ ದಿನದ ಸಂಭ್ರಮಕ್ಕೆ ನಗರದಾದ್ಯಂತ ಬಿಗಿ ಬಂದೋಬಸ್ತ್ ನೀಡುವ ಕಾರ್ಯದಲ್ಲಿ ತೊಡಗಿದ್ದರು. ಜನವರಿ 1 ರಿಂದ 3ರವರೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬೆಂಗಳೂರು ಭೇಟಿ ಇರುವುದರಿಂದ ಸೂಕ್ತ ಬಂದೋಬಸ್ತ್ ನೀಡುತ್ತಿದ್ದಾರೆ.

    ಇಂದಿನಿಂದ ನಗರದಲ್ಲಿ ಮತ್ತೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಪ್ರಾರಂಭವಾಗಿದೆ. ನಿನ್ನೆ ಸಂಜೆಯೇ ಫ್ರೀಡಂಪಾರ್ಕ್ ಗೆ ವಿವಿಧ ಜಿಲ್ಲೆಗಳಿಂದ ಆಶಾ ಕಾರ್ಯಕರ್ತರು ಆಗಮಿಸಿದ್ದು, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ನಗರದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯೂ ನಡೆಯುತ್ತಿರುವುದರಿಂದ ಬೆಂಗಳೂರಿನ ಪೊಲೀಸರು ಹೈರಾಣಗೊಂಡಿದ್ದಾರೆ.

  • ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ತುಮಕೂರು: ಪ್ರಧಾನಿ ಮೋದಿ ಕಲ್ಪತರುನಾಡು ತುಮಕೂರಿಗೆ ನಿನ್ನೆಯಷ್ಟೇ ಭೇಟಿ ನೀಡಿದ್ದರು. ಇದೇ ವೇಳೆ ಪ್ರಧಾನಿಗಳ ಜೊತೆಗಿದ್ದ ಫೋಟೋಗ್ರಾಫರ್ ಕೂಡ ಜಿಲ್ಲೆಯ ಪಾವಗಡ ತಾಲೂಕಿನವರು ಎಂಬ ವಿಚಾರ ಬಹಿರಂಗಗೊಂಡಿದೆ.

    ಪಾವಗಡ ತಾಲೂಕಿನ ಓಬಳಾಪುರ ಮೂಲದ ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪ್ರಧಾನಿ ಮೋದಿಯವರ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ಲೋಕನಾಥ್ ಅವರೇ ಛಾಯಾಗ್ರಾಹಕರಾಗಿದ್ದಾರೆ. ಪ್ರಧಾನಿ ಕಾರ್ಯಾಲಯದ ಪ್ರಸಾರ ಭಾರತಿ ಉದ್ಯೋಗಿ ಹಾಗೂ ಇಲಾಖೆಯ ಪ್ರಧಾನ ಫೋಟೋ ಹಾಗೂ ವೀಡಿಯೋಗ್ರಾಫರ್ ಎಂಬ ಮಾಹಿತಿ ತಿಳಿದು ಬಂದಿದೆ. ಯಡಲಮ್ ಕೃಷ್ಣಮೂರ್ತಿ ಅವರ ತಂದೆ ಹೆಸರಾಗಿದ್ದು, ತಮ್ಮ ಹೆಸರಿನ ಆರಂಭದಲ್ಲಿ ತಂದೆಯ ಹೆಸರು ಸೇರಿಸಿಕೊಂಡು ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಎಂದು ಗುರುತಿಸಿಕೊಂಡಿದ್ದಾರೆ.

    ಪಾವಗಡ ತಾಲೂಕಿನ ಓಬಳಾಪುರ ಇವರ ಮೂಲವಾಗಿದ್ದು, ತಂದೆ ಯಡಲಮ್ ಕೃಷ್ಣಮೂರ್ತಿ, ತಾಯಿಯ ಹೆಸರು ರತ್ನಮ್ಮ. ಓಬಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪಾವಗಡ ಪಟ್ಟಣದಲ್ಲಿ ಪ್ರೌಢ ಶಿಕ್ಷಣ ಪಡೆದ ಇವರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಲ್ಲಿ ಫೋಟೋಗ್ರಾಫಿ ಕಲಿತು ಪ್ರಸಾರ ಭಾರತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ತಮ್ಮ ತವರು ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಲೋಕನಾಥ್ ಅವರು, ಜ.2ರಂದು ತುಮಕೂರಿಗೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಕೊಡಗಿನ ಬಾಳಗೋಡು ಏಕಲವ್ಯ ಶಾಲೆಗೆ 5 ಕೋಟಿ: ಡಿ.ವಿ ಸದಾನಂದಗೌಡ

    ಕೊಡಗಿನ ಬಾಳಗೋಡು ಏಕಲವ್ಯ ಶಾಲೆಗೆ 5 ಕೋಟಿ: ಡಿ.ವಿ ಸದಾನಂದಗೌಡ

    – ಕೈ ಮಿತ್ರರಿಗೆ ಕೇಂದ್ರ ಸಚಿವ ವಿನಂತಿ

    ಮಡಿಕೇರಿ: ರಾಜ್ಯದಲ್ಲಿರುವ ಬುಡಕಟ್ಟು ಇಲಾಖೆ ವ್ಯಾಪ್ತಿಯ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ (ಇಎಂಆರ್‍ಎಸ್) ಕೇಂದ್ರ ಸರ್ಕಾರವು ಬರೋಬ್ಬರಿ 15 ಕೋಟಿ ಅನುದಾನ ಮಂಜೂರು ಮಾಡಿದೆ.

    ಡಿಸೆಂಬರ್ 31ರಂದು ಅನುದಾನ ಮಂಜೂರಾತಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಕೇಂದ್ರ ಸರ್ಕಾರದ ಬುಡಕಟ್ಟು ಇಲಾಖೆಯು ನಮ್ಮ ಬೆಳಗಾವಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ರೂ.15 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಸಮುದಾಯದ ಮಕ್ಕಳ ಏಳ್ಗೆಯತ್ತ ಮತ್ತೊಂದು ಪುಟ್ಟ ಹೆಜ್ಜೆ. ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಕೊಡಗು ಶಾಲೆಗಳಿಗೆ ತಲಾ 5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಬಾಳಗೋಡು ಶಾಲೆಗೂ 5 ಕೋಟಿ ಲಭಿಸಿದೆ. ಅಲ್ಲದೇ ಸದಾನಂದಗೌಡ ಅವರು ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಜಾರಿ ಮಾಡಿರುವ ಅನುದಾಗಳ ಬಗ್ಗೆ ತಿಳಿಸಿದ್ದಾರೆ.

    ‘ಮನ್ರೆಗಾ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಈವರೆಗೆ ಕೇಂದ್ರವು ಕರ್ನಾಟಕಕ್ಕೆ ಒಟ್ಟು 3995.43 ಕೋಟಿ ರೂ. ಹಾಗೂ ಈ ಹಿಂದಿನ ಬಾಕಿ 500 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಿದೆ. ಜಿ.ಎಸ್.ಟಿ.ಗೆ ಸಂಬಂಧಪಟ್ಟಂತೆ ಪ್ರಸಕ್ತ ಸಾಲಿನ ಇದುವರೆಗಿನ ಅವಧಿಯಲ್ಲಿ 12,483.73 ಕೋಟಿ ರೂ.ಗಳು ರಾಜ್ಯದ ಪಾಲು. ಇದು ನಿರಂತರ ಪ್ರಕ್ರಿಯೆಯಾಗಿದೆ.

    ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರವು 2019-20ರ ಸಾಲಿನಲ್ಲಿ ಈವರೆಗೆ ಕರ್ನಾಟಕ ರಾಜ್ಯಕ್ಕೆ 898.5 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಉತ್ತಮ ಸಮನ್ವಯ ಹೊಂದಿದೆ. ಶೈಕ್ಷಣಿಕ ಕ್ಷೇತ್ರದ ಅಮೂಲಾಗೃ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರವು 2019-20ರ ಆರ್ಥಿಕ ವರ್ಷದಲ್ಲಿ ಇಲ್ಲಿಯ ತನಕ ವಿವಿಧ ಯೋಜನೆಗಳಡಿಯಲ್ಲಿ ಕರ್ನಾಟಕಕ್ಕೆ 41,889.75 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅನುದಾನ ಬಿಡುಗಡೆಗೆ ಪ್ರತಿಷ್ಠಾಪಿತ ಮಾರ್ಗಸೂಚಿಗಳಿವೆ. ಯಾವ ರಾಜ್ಯಗಳಿಗೂ ತಾರತಮ್ಯ ಎಸಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಟೀಕೆ ಮಾಡುವ ಮುನ್ನ ಅಂಕಿ-ಅಂಶ, ಸಂತ್ಯಾಂಶ ಏನೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಜನರಲ್ಲಿ ತಪ್ಪುಗ್ರಹಿಕೆ ಉಂಟುಮಾಡಲು ಪ್ರಯತ್ನಸಬೇಡಿ ಎಂದು ಕಾಂಗ್ರೆಸ್ ಮಿತ್ರರಿಗೆ ವಿನಂತಿ ಮಾಡಿಕೊಂಡಿದ್ದಾರೆ.

  • ವರಕವಿ ದ.ರಾ.ಬೇಂದ್ರೆ ಪ್ರಶಸ್ತಿ ಮೊತ್ತ ಕಡಿತ – ಸಾಹಿತಿಗಳ ಆಕ್ರೋಶ

    ವರಕವಿ ದ.ರಾ.ಬೇಂದ್ರೆ ಪ್ರಶಸ್ತಿ ಮೊತ್ತ ಕಡಿತ – ಸಾಹಿತಿಗಳ ಆಕ್ರೋಶ

    ಧಾರವಾಡ: ವರಕವಿ ದ.ರಾ. ಬೇಂದ್ರೆ ಅವರನ್ನು ಯುಗದ ಕವಿ, ಜಗದ ಕವಿ ಎಂದು ಕರೆಯಲಾಗುತ್ತೆ. ಇದೇ ಕಾರಣಕ್ಕೆ ಬೇಂದ್ರೆಯವರ ಕವನಗಳು ದೇಶದ ಪ್ರಧಾನಿಯ ನಾಲಿಗೆಯ ಮೇಲೂ ನಲಿದಾಡಿದೆ. ಆದರೆ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯ ಮೊತ್ತವನ್ನು ಕಡಿತ ಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.

    ಈ ಹಿಂದೆ ಬೇಂದ್ರೆ ಅವರ ಪ್ರಶಸ್ತಿಗೆ 1 ಲಕ್ಷ ರೂ. ಇದ್ದ ಮೊತ್ತವನ್ನು ಏಕಾಏಕಿಯಾಗಿ 10 ಸಾವಿರಕ್ಕೆ ಇಳಿಸಲಾಗಿದೆ. ಸರ್ಕಾರದ ನಡೆ ಸಾಹಿತ್ಯ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

    ಕುವೆಂಪು ಮತ್ತು ಬೇಂದ್ರೆ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಆದರೆ ಈಗಿನ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ವರ್ತನೆ ತೋರುತ್ತಿದ್ದು, ಇದರ ಪರಿಣಾಮ ಧಾರವಾಡದ ಸಾಧನಕೆರೆಯಲ್ಲಿರುವ ದ.ರಾ.ಬೇಂದ್ರೆ ಭವನಕ್ಕೆ ಸುಣ್ಣ ಬಳಿಯೋಕು ಹಣ ಇಲ್ಲದಂತಾಗಿದೆ.

    ಇದೇ ಜ.31ಕ್ಕೆ ಬೇಂದ್ರೆಯವರ ಜನ್ಮದಿನ ಇದೆ. ಈ ವೇಳೆಗಾಗಲೇ 31ರಂದು ಬೇಂದ್ರೆಯವರ ಹೆಸರಿನಲ್ಲಿ ನೀಡಲಾಗುವ ‘ಅಂಬಿಕಾತನಯದತ್ತ ಪ್ರಶಸ್ತಿ’ ಪ್ರಕಟಿಸಬೇಕಾಗಿತ್ತು. ಆದರೆ ಪ್ರಶಸ್ತಿಯ ಮೊತ್ತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಡಿಮೆ ಮಾಡಿದ್ದು, ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅವರು ಪ್ರಶಸ್ತಿ ಪ್ರಕಟಿಸುವ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ. ಮೇಲಾಗಿ ಈ ಟ್ರಸ್ಟಿಗೆ ನೀಡುತ್ತಿದ್ದ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನವನ್ನು 4 ಲಕ್ಷ ರೂಪಾಯಿಗೆ ಇಳಿಸಿದ್ದಾರೆ.

    ಇಷ್ಟು ದಿನ 10 ಲಕ್ ರೂ. ಹಾಗೂ ಪ್ರಶಸ್ತಿ ಕೊಟ್ಟು, ಈಗ 10 ಸಾವಿರ ರೂಪಾಯಿ ಎಂದಾಕ್ಷಣ ನಮಗೆ ಆಘಾತವಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ಡಿ.ಎಂ.ಹಿರೇಮಠ ಅವರು ಹೇಳಿದ್ದು, ಬೇಂದ್ರೆಯವರು ವಾಸವಿದ್ದ ಸಾಧನಕೆರೆ ಮನೆಯೇ ಈಗ ಮ್ಯೂಸಿಯಂ ಆಗಿದೆ. ಪಕ್ಕದಲ್ಲಿರೋ ಬೇಂದ್ರೆ ಭವನದಲ್ಲಿ ಸಾಹಿತ್ಯ ಭಂಡಾರ, ಗ್ರಂಥಾಲಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಇದೆಲ್ಲ ನಡೆಯೋದಕ್ಕೆ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದು, ಆ ಸಿಬ್ಬಂದಿ ವೇತನ, ಖರ್ಚು ವೆಚ್ಚ ಸೇರಿ ವರ್ಷಕ್ಕೆ ಆರೂವರೆ ಲಕ್ಷ ಆಗುತ್ತೆ. ಆದರೆ ಈಗ ಸರ್ಕಾರ ವರ್ಷಕ್ಕೆ 4 ಲಕ್ಷ ಮಾತ್ರ ನಿಡುತ್ತೇವೆ ಎಂದು ಹೇಳಿದೆ. ಟ್ರಸ್ಟ್‍ಗೆ ಉಳಿದ ಹಣ ಎಲ್ಲಿಂದ ತರೋದು ಎಂದು ಚಿಂತೆಯಾಗಿದೆ.

    ಬೇಂದ್ರೆಯವರ ಶ್ರಾವಣ ಕವನ ಹಾಗೂ ಕುರುಡು ಕಾಂಚಾಣ ಕುಣಿಯುತ್ತಲಿತ್ತು ಎಂಬ ಕಾವ್ಯವನ್ನೂ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಈ ಹಿಂದೆ ವಾಚಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೇಂದ್ರೆ ನಿವಾಸಕ್ಕೂ ಭೇಟಿ ನೀಡಿದ್ರು. ಆದರೆ ಈಗ ಅವರದೇ ಪಕ್ಷದ ಸರ್ಕಾರವೇ ಈ ರೀತಿ ಮಾಡುವ ಮೂಲಕ ಬೇಂದ್ರೆಯವರ ವ್ಯಕ್ತಿತ್ವಕ್ಕೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ರಾಜಕುಮಾರ ಮಡಿವಾಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವರ್ಷದಿಂದ ವರ್ಷಕ್ಕೆ ಸಾಹಿತ್ಯ ಪ್ರಶಸ್ತಿಗಳ ಮೊತ್ತ ಹೆಚ್ಚಿಸುವ ಮೂಲಕ ಆಯಾ ಸಾಹಿತಿ ಘನತೆಗೆ ಗೌರವ ದೊರಕಿಸಿಕೊಡುವ ಕಾರ್ಯ ಇಲ್ಲಿಯವರೆಗೆ ನಡೆಯುತ್ತ ಬಂದಿತ್ತು. ಈಗ ಇರುವ ಮೊತ್ತವನ್ನೇ ಗಣನಿಯವಾಗಿ ಇಳಿಸುವ ಮೂಲಕ ಸಾಹಿತ್ಯಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂಬ ವರ್ತನೆಯನ್ನು ಸರ್ಕಾರ ತೋರುತ್ತಿದೆ. ಇದಕ್ಕೆ ಈಗ ಸರ್ಕಾರ ಏನು ಉತ್ತರ ಕೊಡುತ್ತೆ ಎಂಬುವುದು ಸಾಹಿತಿಗಳ ಪ್ರಶ್ನೆಯಾಗಿದೆ.

  • ಮಮತಾ ಬ್ಯಾನರ್ಜಿಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ: ಪಿ.ರಾಜೀವ್

    ಮಮತಾ ಬ್ಯಾನರ್ಜಿಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ: ಪಿ.ರಾಜೀವ್

    ಕಲಬುರಗಿ: ಮಂಗಳೂರು ಗಲಭೆಯಲ್ಲಿ ಮೃತರಾವರಿಗೆ ಪಶ್ಚಿಮ ಬಂಗಾಳ ಸರ್ಕಾರ ಪರಿಹಾರ ಹಣ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಮತಾ ಬ್ಯಾನರ್ಜಿ ಒಂದು ರಾಜ್ಯದ ಸಿಎಂ ಆಗಿದ್ದು, ಅವರು ಮೊದಲು 1955ರ ನಿಯಮಗಳನ್ನು ಓದಿಕೊಳ್ಳಲಿ. ಈ ಕಾಯ್ದೆಯನ್ನು ಅವರು ಓದಿದ್ದಾರಾ? ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಪೌರತ್ವ ಕಾಯ್ದೆಯ ಬಗ್ಗೆ ತಪ್ಪು ತಿಳುವಳಿಕೆ ನೀಡಿ ಅಲ್ಪಸಂಖ್ಯಾತರನ್ನು ಉದ್ವೇಗ ಆಗುವಂತೆ ಮಾಡಿ ಜನರಲ್ಲಿ ಜಗಳ ಹಚ್ಚುತ್ತಿದ್ದಾರೆ. ಆ ಮೂಲಕ ಅದರಲ್ಲಿ ನೀವು ಚಳಿ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದೀರೆ ಎಂದು ಆರೋಪಿಸಿದರು.

    ಮಮತಾ ಅಕ್ಕ ಕಲ್ಲು ಹೊಡೆಯುವರಿಗೆ ಬೆಂಕಿ ಹಚ್ಚುವರಿಗೆ ಮಾತ್ರ ನೋಡಬೇಡಿ. ದೇಶದ ಗಡಿಯಲ್ಲಿ ಸಾವನ್ನಪ್ಪುವವರನ್ನು ಪ್ರವಾಹ ಸಂತ್ರಸ್ತರನ್ನು ನೋಡಿ. ಪಶ್ಚಿಮ ಬಂಗಾಳದಲ್ಲಿ ರಸ್ತೆ ಬದಿ ಇರುವ ಜನ ಚಿಂದಿ ಆಯುವಂತಹ ಜನರನ್ನು ಮೊದಲು ನೋಡಿ ಎಂದರು. ದೇಶದ ಬುದ್ಧಿಜೀವಿಗಳು ಕಾನೂನನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅಂಥವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ. ಎನ್‍ಆರ್ ಸಿ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ, ಎನ್‍ಆರ್ ಸಿ ವಿವಾದ ಹುಟ್ಟಿಹಾಕಿದ್ದೆ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.

    ಮೋದಿ ನೇತೃತ್ವದಲ್ಲಿ ಮಾತ್ರ ಭಾರತ ದೇಶ ಬದಲಾವಣೆ ಕಾಣಲು ಸಾಧ್ಯ. ಅಮಾಯಕರನ್ನು ಎತ್ತಿಕಟ್ಟುವ ಕೆಟ್ಟ ಪರಂಪರೆಗೆ ಕಾಂಗ್ರೆಸ್ ಪಕ್ಷ ಕೈ ಹಾಕಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮಾನವೀಯತೆಯ ತಿದ್ದುಪಡಿ ಕಾಯ್ದೆಯಾಗಿದೆ. ಈ ಕಾಯ್ದೆಯಿಂದ ಭಾರತದ ಯಾವೊಬ್ಬರಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಬೆತ್ತಲೆಗೊಳಿಸುವ ಮೋದಿ ಪ್ರಯತ್ನಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕಿದೆ.

    ತೊಂದರೆಗೀಡಾದ ಅಲ್ಪಸಂಖ್ಯಾಂತರಿಗೆ ಮಾತ್ರ ಪೌರತ್ವ ಕಾಯ್ದೆ ಅನ್ವಯಿಸುತ್ತದೆ. ಪಾಕಿಸ್ತಾನದಲ್ಲಿ ತೊಂದರೆಗೆ ಒಳಗಾಗಿರುವ ಮುಸ್ಲಿಮರಿಗೆ ರಕ್ಷಣೆ ನೀಡುವುದು ಪೌರತ್ವ ಕಾಯ್ದೆಯ ಉದ್ದೇಶ. ಆದರೆ ದೇಶದ ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷ ಎತ್ತಿಕಟ್ಟುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮೊದಲು ಸಂವಿಧಾನದ ಕಲಂ 6 ರಿಂದ 12 ವರೆಗೆ ಮೊದಲು ಓದಲಿ. ದೇಶ ಕಟ್ಟುತ್ತಿರುವ ಮೋದಿಗೆ ಅಡ್ಡಗಾಲಗಿ ಕಾಂಗ್ರೆಸ್ ಪಕ್ಷ ದೇಶದ ಜನರನ್ನು ದಾರಿತಪ್ಪಿಸಿ ಅಧೋಗತಿಗೆ ಕೊಂಡ್ಯೋಯುತ್ತಿದೆ. ಪ್ರತಿಭಟನೆಗೆ ಇಳಿಯುವ ಮುಂಚೆ ಸಂವಿಧಾನದಲ್ಲಿರುವ ನಾಲ್ಕು ಸಾಲುಗಳನ್ನು ಓದಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.