Tag: priests

  • ಅರ್ಚಕರಿಗೆ ಕೊರೊನಾ – ಶ್ರೀಭೋಗನಂದೀಶ್ವರ ದೇವಾಲಯ ಬಂದ್

    ಅರ್ಚಕರಿಗೆ ಕೊರೊನಾ – ಶ್ರೀಭೋಗನಂದೀಶ್ವರ ದೇವಾಲಯ ಬಂದ್

    ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇವಾಲಯದ ಅರ್ಚಕರಿಗೆ ಕೊರೊನಾ ಸೋಂಕು ದೃಢವಾಗಿದ್ದು, ದೇವಾಲಯವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

    ದೇವಾಲಯದಲ್ಲಿನ ಇಬ್ಬರು ಅರ್ಚಕರಿಗೆ ಕೊರೊನಾ ಸೋಂಕು ದೃಢವಾಗಿದ್ದು, ದೇವಾಲಯವನ್ನು ಇಂದಿನಿಂದ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅರ್ಚಕರಿಗೆ ಕೊರೊನಾ ಸೋಂಕು ಹಿನ್ನೆಲೆ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ದೇವಾಲಯದ ಪ್ರಮಖ ಗೇಟ್‍ನ್ನು ಸಂಪೂರ್ಣ ಮುಚ್ಚಿ ಟೇಪ್ ಮಾಡಲಾಗಿದೆ. ಇಂದು ಸಹ ಜಿಲ್ಲೆಯಲ್ಲಿ 102 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,526 ಕ್ಕೆ ಏರಿಕೆಯಾಗಿದೆ. ಇದುವರೆಗೂ 3624 ಮಂದಿ ಗುಣಮುಖರಾಗಿದ್ದು, ಸದ್ಯ 836 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೊರೊನಾದಿಂದ ಇದುವರೆಗೂ 65 ಮಂದಿ ಸಾವನ್ನಪ್ಪಿದ್ದಾರೆ.

  • ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಧಾರ್ಮಿಕ ಕ್ಷೇತ್ರದ ಉಳಿವಿಗೆ ಮುಂದಾಗಬೇಕು: ನಾರಾಯಣ ಆಚಾರ್

    ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಧಾರ್ಮಿಕ ಕ್ಷೇತ್ರದ ಉಳಿವಿಗೆ ಮುಂದಾಗಬೇಕು: ನಾರಾಯಣ ಆಚಾರ್

    ಮಡಿಕೇರಿ: ತಲಕಾವೇರಿ ದೇವಾಲಯಕ್ಕೆ ದಾರಿಗೆ ಬೆಟ್ಟವನ್ನು ಅಗೆದದ್ದು, ಇಲ್ಲಿನ ಮಣ್ಣಿನಲ್ಲಿ ಒಸರುತ್ತಿರುವ ಜಲ ಹಾಗೂ ಜೇಡಿ ಮಣ್ಣಿನಂತಹ ಮಣ್ಣಿರುವುದೇ ಇಲ್ಲಿ ಗುಡ್ಡ ಕುಸಿತಕ್ಕೆ ಕಾರಣ ಎಂದು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಗುಡ್ಡ ಕುಸಿತದಿಂದ ತಲಕಾವೇರಿಯಲ್ಲಿ ದುರ್ಘಟನೆ ನಡೆದಿದ್ದು, ಇಲ್ಲಿನ ಸ್ಥಿತಿ-ಗತಿಗಳ ಬಗ್ಗೆ 2019ರಲ್ಲೇ ಕಣ್ಮರೆ ಆಗಿರುವವರಲ್ಲಿ ಒಬ್ಬರಾದ ಅರ್ಚಕ ನಾರಾಯಣ ಆಚಾರ್ ಮಾತನಾಡಿದ್ದರು. ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಆತಂಕಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಆಚಾರ್, ಇಲ್ಲಿನ ಮಣ್ಣಿನಲ್ಲಿ ಒಸರುತ್ತಿರುವ ಜಲ ಹಾಗೂ ಜೇಡಿ ಮಣ್ಣಿನಂತಹ ಮಣ್ಣು ಇರುವುದೇ ಇಲ್ಲಿ ಗುಡ್ಡ ಕುಸಿತಕ್ಕೆ ಕಾರಣ ಎಂದು ಹೇಳಿದ್ದರು.

    ಜೊತೆಗೆ ಈ ಬಗ್ಗೆ ಜಿಲ್ಲಾಡಳಿತ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪವಿತ್ರ ಧಾರ್ಮಿಕ ಕ್ಷೇತ್ರದ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದರು. ಕೊಡಗಿನಲ್ಲಿ ಕಳೆದ ಐದು ದಿನದಿಂದ ತುಂಬ ಮಳೆ ಆಗುತ್ತಿದ್ದು, ಗುಡ್ಡಗಳ ಕುಸಿಯುತ್ತಿವೆ. ಗುಡ್ಡ ಕುಸಿತದಿಂದ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಮನೆ ಸಂಪೂರ್ಣ ಮುಚ್ಚಿಹೋಗಿದ್ದು, ಆರ್ಚಕರು ಸೇರಿ ಐವರು ಮಂದಿ ಕಣ್ಮರೆಯಾಗಿದ್ದಾರೆ.

  • ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಕೊರೊನಾಗೆ ಬಲಿ

    ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಕೊರೊನಾಗೆ ಬಲಿ

    ಹೈದರಾಬಾದ್: ದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಶ್ರೀನಿವಾಸ ದೀಕ್ಷಿತಲು ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    73 ವರ್ಷದ ದೀಕ್ಷಿತಲು ಅವರನ್ನು ಅನಾರೋಗ್ಯದ ಸಮಸ್ಯೆಯಿಂದ ಗುರುವಾರ ತಿರುಪತಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.19ರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದೀಕ್ಷಿತಲು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿ ಪಾಸಿಟಿವ್ ಎಂದು ದೃಢಪಟ್ಟಿತ್ತು.

    ಕೊರೊನಾ ಆತಂಕದ ನಡುವೆಯೂ ತಿರುಮಲ ತಿರುಪತಿಯಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದುವರೆಗೂ 140 ಮಂದಿ ಟಿಟಿಡಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಉಳಿದಂತೆ ಲಡ್ಡು ಮಾಡುವ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಮಂದಿ ಸಹಾಯಕ ಅರ್ಚಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 140 ಮಂದಿ ಸೋಂಕಿತರಲ್ಲಿ ಇದುವರೆಗೂ ಕೊರೊನಾಗೆ ಚಿಕಿತ್ಸೆ ಪಡೆದುಕೊಂಡು 70 ಮಂದಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಟಿಟಿಡಿ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಮುಂದುವರಿಸಿದ್ದು, ಪ್ರತಿದಿನ ಸುಮಾರು 12 ಸಾವಿರ ಮಂದಿ ದೇವರ ದರ್ಶನ ಪಡೆಯುತ್ತಿದ್ದಾರೆ. ಉಳಿದಂತೆ ಸಾವಿಗೂ ಮುನ್ನ ಸಾಮಾಜಿಕ ಜಾಲತಾಣದ ಮೂಲಕ ಆಂಧ್ರ ಪ್ರದೇಶ ಸಿಎಂ ಜಗನ ಮೋಹನ್ ರೆಡ್ಡಿ ಅವರನ್ನು ಪ್ರಶ್ನಿಸಿದ್ದ ಅರ್ಚಕರು, ತಿರುಮಲದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚಳ ಕುರಿತು ಪ್ರಶ್ನಿಸಿ ದೇವರ ದರ್ಶನ ಬಂದ್ ಮಾಡಬೇಕು ಎಂದು ಹೇಳಿದ್ದರು. ಅಲ್ಲದೇ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದರು.

  • ಜೂನ್ 21ರಂದು ಚೂಡಾಮಣಿ ಸೂರ್ಯಗ್ರಹಣ

    ಜೂನ್ 21ರಂದು ಚೂಡಾಮಣಿ ಸೂರ್ಯಗ್ರಹಣ

    – ಗ್ರಹಣದ ನಂತರ ದೇವರ ದರ್ಶನ

    ಬೆಂಗಳೂರು: ಸೌರಮಂಡಲದಲ್ಲಿ ಇದೇ ಭಾನುವಾರ ಆಗಸದಲ್ಲಿ ಮತ್ತೊಂದು ಗ್ರಹಣ ನಡೆಯಲಿದೆ. ಕೊರೊನಾ ಸಮಯದಲ್ಲಿ ನಡೆಯುತ್ತಿರುವ ಗ್ರಹಣದಿಂದಾಗಿ ಸಾಕಷ್ಟು ರಾಶಿಗಳ ಮೇಲೆ ಕೆಟ್ಟ ಫಲಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.

    ಮುಂದಿನ ಭಾನುವಾರ ಅಂದರೆ ಜೂನ್ 21ರಂದು ಸೂರ್ಯಗ್ರಹಣ ನಡೆಯಲಿದೆ. ಬೆಳಗ್ಗೆ 10.13ರಿಂದ ಮಧ್ಯಾಹ್ನ 1.32ರವರೆಗೆ ಸೂರ್ಯಗ್ರಹಣ ಸಂಭವಿಸಲಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಚೂಡಾಮಣಿ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಈ ಚೂಡಾಮಣಿ ಸೂರ್ಯಗ್ರಹಣದ ವೇಳೆ ಮನೆಯಿಂದ ಹೊರಬರಬಾರದು. ಮನೆಯಲ್ಲೇ ಇದ್ದು, ದೇವರ ಜಪ-ತಪ ಮಾಡಿ ಗ್ರಹಣ ಮೋಕ್ಷಕಾಲದ ಬಳಿಕ ಶುಚಿರ್ಭೂತರಾಗಿ ದೇವಾಲಯದಲ್ಲಿ ದೇವರ ದರ್ಶನ ಮಾಡೋದು ಪದ್ಧತಿ ಆಗಿದೆ.

    ಕೊರೊನಾ ವೈರಸ್ ಸಂದರ್ಭದಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಜನದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲೂ ಗ್ರಹಣದ ಸಮಯ ಮುಗಿದ ಮೇಲೆ ದೇವಾಲಯಕ್ಕೆ ಬರುವ ಭಕ್ತರು ಹಚ್ಚಾಗುವ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೇವಾಲಯದಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸಲು ಮುಂದಾಗಿರುವ ದೇವಾಲಯದ ಆಡಳಿತ ಮಂಡಳಿಗಳು ಅಭಿಷೇಕಕ್ಕೆ ಅವಕಾಶ ನೀಡಿಲ್ಲ. ಆದರೆ ಗ್ರಹಣದ ದಿನ ನವಗ್ರಹ ಪ್ರದಕ್ಷಿಣೆಗೆ ಅವಕಾಶವಿದ್ದು, 1 ಬಾರಿಗೆ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕಾಡುಮಲ್ಲೇಶ್ವರ ದೇವಾಲಯದ ಅರ್ಚಕರಾದ ಗಂಗಾಧರ್ ದೀಕ್ಷಿತ್ ಹೇಳಿದ್ದಾರೆ.

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣ ಮಿಥುನ, ಸಿಂಹ ರಾಶಿ ಹಾಗೂ ಮೃಗಶಿರ ನಕ್ಷತ್ರದವರ ಮೇಲೆ ಕೆಟ್ಟ ಪರಿಣಾಮ ಆಗಲಿದೆ. ದೇವಸ್ಥಾನಗಳಿಗೆ ಬರುವ ಭಕ್ತರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಬಾರದು. ಹಿರಿಯರು, ಮಕ್ಕಳು ದೇವಾಲಯಕ್ಕೆ ಬರುವ ಬದಲು ಮನೆಯಲ್ಲೇ ದೇವರ ಪೂಜೆ ಮಾಡಿದರೆ ಉತ್ತಮ ಎಂದು ಗಾಳಿ ಆಂಜನೇಯ ದೇವಸ್ಥಾನದ ಅರ್ಚಕರಾದ ಡಾ.ಶ್ರೀನಿವಾಸ್ ಭಟ್ಟಾಚಾರ್ಯ ತಿಳಿಸಿದರು.

  • ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    – ಆಹಾರ ಕಿಟ್‍ಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

    ರಾಯಚೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಯಚೂರಿನ ಬಹಳಷ್ಟು ದೇವಾಲಯಗಳ ಅರ್ಚಕರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರ ಕಾಣಿಕೆಯಿಂದ ಬದುಕುತ್ತಿದ್ದ ಅರ್ಚಕರ ಕುಟುಂಬಗಳು ಈಗ ಕಷ್ಟವನ್ನು ಎದುರಿಸುತ್ತಿವೆ.

    ಹೀಗಾಗಿ ಮುಜರಾಯಿ ಇಲಾಖೆ ಆಯುಕ್ತರು ಸೂಚಿಸಿದಂತೆ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಅರ್ಚಕರು ಮನವಿ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಮುಜರಾಯಿ ಇಲಾಖೆ ಆಯುಕ್ತರು ಆಹಾರ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದು ಇದುವರೆಗೂ ಕಿಟ್ ವಿತರಿಸಿಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ.

    ಕಾಣಿಕೆ ತಟ್ಟೆಯಲ್ಲಿ ಬೀಳುವ ಕಾಣಿಕೆಯಿಂದ ಜೀವನ ನಡೆಯುತ್ತಿತ್ತು. ಆದರೆ ಈಗ ದೇವಾಲಯಗಳಿಗೆ ಬೀಗ ಹಾಕಿರುವುದರಿಂದ ಮದುವೆಗಳಿಲ್ಲ, ವಿಶೇಷ ಪೂಜೆಗಳಿಲ್ಲ, ಭಕ್ತರಿಲ್ಲ ಹೀಗಾಗಿ ಕಾಣಿಕೆ ತಟ್ಟೆಯ ಕಾಣಿಕೆಯೂ ನಮಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಸಿ ವರ್ಗದ ದೇವಾಲಯಗಳ ಅರ್ಚಕರ ಸ್ಥಿತಿಯಂತೂ ತುಂಬಾ ಕಷ್ಟದಾಯಕವಾಗಿದೆ. ಸರ್ಕಾರ ದೇವಾಲಯಗಳನ್ನೇ ನಂಬಿ ಬದುಕುತ್ತಿರುವ ನಮಗೆ ಸಹಾಯಧನ ನೀಡಬೇಕು. ಕಿಟ್ ವಿತರಿಸಬೇಕು ಅಂತ ಅರ್ಚಕರು ಒತ್ತಾಯಿಸಿದ್ದಾರೆ.

  • ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್: ಕೋಟ ಶ್ರೀನಿವಾಸ ಪೂಜಾರಿ

    ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಕೊರೊನಾ ಲಾಕ್‍ಡೌನ್ ಬಿಸಿ ಎಲ್ಲಾ ಕ್ಷೇತ್ರಕ್ಕೆ ತಟ್ಟಿದೆ. ಅದರಲ್ಲೂ ತಟ್ಟೆ ಕಾಣಿಕೆ ನಂಬಿರುವ ಹಳ್ಳಿಯ ದೇವಸ್ಥಾನದ ಅರ್ಚಕರ ಸ್ಥಿತಿ ಕೇಳೋದೇ ಬೇಡ. ರಾಜ್ಯದ ಮುಜರಾಯಿ ಇಲಾಖೆ ಇದೀಗ ರಾಜ್ಯದ ದೇವಸ್ಥಾನಗಳ ಅರ್ಚಕರು ಸಂಕಷ್ಟಕ್ಕೆ ಪರಿಹಾರ ಕೊಡಲು ಮುಂದಾಗಿದೆ.

    ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಸಾವಿರ ಅರ್ಚಕರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ದಿನಸಿ ಕಿಟ್ ವಿತರಿಸಲಾಗುವುದು ಎಂದರು.

    ಅರ್ಚಕರಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಹಣಕಾಸಿನ ವ್ಯವಸ್ಥೆ ಮಾಡಲು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಡುವೆ ರಾಜ್ಯದ 210 ಎ ದರ್ಜೆ ದೇವಸ್ಥಾನಗಳಲ್ಲಿ ಏಳು ಲಕ್ಷ ಜನರಿಗೆ ನಿತ್ಯ ಊಟ ವಿತರಿಸಲಾಗುತ್ತಿದೆ. ದಕ್ಷಿಣ ಕನ್ನಡದ ಕದ್ರಿ ದೇವಸ್ಥಾನದಲ್ಲಿ 12 ಸಾವಿರ ಊಟದ ವ್ಯವಸ್ಥೆ ಪ್ರತಿದಿನ ನಡೆಯುತ್ತಿದೆ. ಕೊರೊನಾ ನಿಯಂತ್ರಿಸಲು ಎಲ್ಲರೂ ಒಟ್ಟಾಗಿ ಒಂದಾಗಿ ಕೆಲಸ ಮಾಡಬೇಕು ಎಂದರು.

    ದೇವಸ್ಥಾನಗಳು ಆಯಾ ವ್ಯಾಪ್ತಿಯ ಬಡ ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದರು. ಕೊರೊನಾ ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿರುವ ನಿತ್ಯ ಪೂಜೆ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಹೇಳಿದರು.

  • ರಕ್ತದಾನ ಮಾಡಿ ಮಾನವೀಯತೆ ಮೆರೆದ ಪುರೋಹಿತರು

    ರಕ್ತದಾನ ಮಾಡಿ ಮಾನವೀಯತೆ ಮೆರೆದ ಪುರೋಹಿತರು

    – 35 ರಿಂದ 45 ಪುರೋಹಿತರು, ಕುಟುಂಬದವರಿಂದ ರಕ್ತದಾನ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್‍ನಿಂದ ಜನರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ರೋಗಿಗಳಿಗೆ ರಕ್ತದಾನ ಮಾಡುವವರ ಕೊರತೆ ಸಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಪ್ರಾರ್ಥನೆ, ಆರಾಧನೆ, ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿದ್ದ ಪುರೋಹಿತರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಶೇಖರಣೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಇರುವ ರೋಗಿಗಳಿಗೆ ರಕ್ತ ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಕೊರೊನಾ ಸಮಸ್ಯೆ ಹೊರತುಪಡಿಸಿ, ಇತರೆ ರೋಗಿಗಳಿಗೆ ರಕ್ತದ ತುರ್ತು ಅವಶ್ಯಕತೆ ಎದ್ದು ಕಾಣುತ್ತಿದ್ದು, ಈ ಕಷ್ಟವನ್ನು ಮನಗಂಡ ಪುರೋಹಿತ ಯುವ ಪರಿಷತ್ ಸದಸ್ಯರು ರಕ್ತದಾನ ಮಾಡಿದ್ದಾರೆ.

    ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸುಮಾರು 35 ರಿಂದ 45 ಪುರೋಹಿತರು ಹಾಗೂ ಅವರ ಕುಟುಂಬ ವರ್ಗದವರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ದಿನೇ ದಿನೇ ಕೊರೊನಾ ದೇಶದಲ್ಲಿ ವ್ಯಾಪಿಸುತ್ತಿದೆ. ಇದರಿಂದ ರಕ್ತದಾನ ಮಾಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ಆದರೆ ಅಗತ್ಯವಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರೂ ರಕ್ತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಅರ್ಚಕರಿಗೆ ಲಾಠಿ ಏಟು – ಪೇದೆಯನ್ನು ಅಮಾನತುಗೊಳಿಸಿದ ಎಸ್‍ಪಿ

    ಅರ್ಚಕರಿಗೆ ಲಾಠಿ ಏಟು – ಪೇದೆಯನ್ನು ಅಮಾನತುಗೊಳಿಸಿದ ಎಸ್‍ಪಿ

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಅರ್ಚಕರಿಗೆ ಲಾಠಿ ಏಟು ಕೊಟ್ಟ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‍ಪಿ ಆದೇಶ ಹೊರಡಿಸಿದ್ದಾರೆ.

    ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಶಂಕರ್ ಸಂಸಿಯನ್ನು ಎಸ್‍ಪಿ ಎಂ. ಲಕ್ಷ್ಮೀ ಪ್ರಸಾದ್ ಅವರು ಅಮಾನತುಗೊಳಿಸಿದ್ದಾರೆ. ಮೇಲ್ನೋಟಕ್ಕೆ ದುರ್ವರ್ತನೆ ಕಂಡುಬಂದ ಹಿನ್ನೆಲೆಯಲ್ಲಿ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆದಿ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಮೇಲೆ ಶಂಕರ್ ಲಾಠಿ ಬೀಸಿದ್ದರು. ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿವುದಾಗಿ ದೇವಾಲದ ಕೀಯನ್ನು ತೋರಿಸಿದರೂ ಥಳಿಸಿದ್ದರು. ಇದರಿಂದ ಕೋಪಗೊಂಡ ಅರ್ಚಕ ವರ್ಗ ಎಸ್‍ಪಿ ಸಹಿತ ಐಜಿಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೇದೆ ಶಂಕರ್ ಅವರನ್ನು ಅಮಾನತುಗೊಳಿಸಲಾಗಿದೆ.

  • ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಕೋಲಾರ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕೋಲಾರ ವರದರಾಜ ಸ್ವಾಮಿ ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ಹಲವೆಡೆ ಬಡವರಿಗೆ ದಿನ ನಿತ್ಯದ ಸಾಮಗ್ರಿಗಳನ್ನು ವಿತರಣೆ ಮಾಡಿದರು.

    ನಿತ್ಯ ಕೂಲಿ ಮಾಡಿ ಬದುಕುತ್ತಿದ್ದ ಜನರಿಗೆ ಲಾಕ್‍ಡೌನ್ ಹಿನ್ನೆಲೆ ನಿತ್ಯದ ಬದುಕು ಕಷ್ಟವಾಗಿದೆ. ಹೀಗಾಗಿ ಸುಮಾರು ನೂರು ಜನರಿಗೆ ಅರ್ಚಕರುಗಳು ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ತರಕಾರಿ ಸೇರಿದಂತೆ ನಿತ್ಯದ ವಸ್ತುಗಳನ್ನ ಬ್ಯಾಗ್‍ನಲ್ಲಿ ಸಂಗ್ರಹಿಸಿ, ಕೋಲಾರ ನಗರದ ವಿನೋಭ ನಗರದ ದಲಿತ ಕಾಲೋನಿಗಳಲ್ಲಿ ಹಂಚಿಕೆ ಮಾಡಿದರು.

    ಇದೇ ವೇಳೆ ಮುಂದಿನ ದಿನಗಳಲ್ಲಿ ಸರಿ ಸುಮಾರು 1,000 ಕುಟುಂಬಗಳಿಗೆ ಹೀಗೆ ದವಸ ದಾನ್ಯಗಳನ್ನು ವಿತರಣೆ ಮಾಡುವುದಾಗಿ ಹೇಳಿದರು. ಜಾತಿ-ಭೇದ ಮರೆತು ಹಸಿದವರಿಗೆ ಅನ್ನ ಕೊಡುವ ಕೆಲಸ ಮಾಡಲಾಗುತ್ತಿದೆ ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟ ಪಡಿಸಿದರು.

  • ಕೊರೊನಾ ಎಫೆಕ್ಟ್- ವಿಶ್ವನಾಥನಿಗೆ ಮಾಸ್ಕ್ ಹಾಕಿದ ಅರ್ಚಕರು

    ಕೊರೊನಾ ಎಫೆಕ್ಟ್- ವಿಶ್ವನಾಥನಿಗೆ ಮಾಸ್ಕ್ ಹಾಕಿದ ಅರ್ಚಕರು

    – ಭಕ್ತರಲ್ಲಿ ಜಾಗೃತಿ ಮೂಡಿಸಲು ಕ್ರಮ
    – ಮೂರ್ತಿ ಸ್ಪರ್ಶಿಸದಂತೆ ಭಕ್ತರಿಗೆ ಸೂಚನೆ

    ವಾರಾಣಸಿ: ಭಾರತಕ್ಕೆ ಕೊರೊನಾ ವೈರಸ್ ಒಕ್ಕರಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸರ್ಕಾರ ಸಲಹೆ ನೀಡುತ್ತಿದೆ. ಇದರ ಬೆನ್ನಲ್ಲೇ ವಾರಾಣಸಿಯಲ್ಲಿ ದೇವಸ್ಥಾನದ ಅರ್ಚಕರು ಶಿವಲಿಂಗಕ್ಕೆ ಮಾಸ್ಕ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.

    ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶ್ವನಾಥನಿಗೆ ಅಲ್ಲಿನ ಅರ್ಚಕರು ಮಾಸ್ಕ್ ಹಾಕಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಮೂರ್ತಿಯನ್ನು ಸ್ಪರ್ಶಿಸದಂತೆ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜ್ವರ, ಕೆಮ್ಮು ಇದ್ರೆ ತಿರುಪತಿಗೆ ಬರಲೇ ಬೇಡಿ- ಟಿಟಿಡಿ

    ದೇಶಾದ್ಯಂತ ಕೊರೊನಾ ವೈರಸ್ ಹರಡಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವನಾಥನಿಗೆ ಮಾಸ್ಕ್ ಹಾಕಿದ್ದೇವೆ. ಇದರಲ್ಲಿ ವಿಶೇಷವೇನಿಲ್ಲ ಚಳಿಗಾಲವಿದ್ದಾಗ ಹೇಗೆ ಬಟ್ಟೆ ಹಾಕುತ್ತೇವೆ, ಬಿಸಿಲಿನ ಸಂದರ್ಭದಲ್ಲಿ ಹೇಗೆ ಫ್ಯಾನ್, ಎಸಿ ಹಾಕುತ್ತೇವೋ ಹಾಗೇ ಇದೀಗ ವಿಶ್ವನಾಥನ ಮೂರ್ತಿಗೆ ಮಾಸ್ಕ್ ಹಾಕಿದ್ದೇವೆ ಅಷ್ಟೆ ಎಂದು ದೇವಸ್ಥಾನದ ಅರ್ಚಕ ಕೃಷ್ಣ ಆನಂದ್ ಪಾಂಡೆ ತಿಳಿಸಿದ್ದಾರೆ.

    ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಯಾವುದೇ ಕಾರಣಕ್ಕೂ ಮೂರ್ತಿಯನ್ನು ಸ್ಪರ್ಶಿಸಿ ನಮಸ್ಕರಿಸದಂತೆ ಭಕ್ತರಲ್ಲಿ ತಿಳಿಸಿದ್ದೇವೆ. ಯಾರೋ ಒಬ್ಬರು ಕೊರೊನಾ ಇರುವ ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ, ಅದನ್ನು ಮತ್ತೊಬ್ಬರು ಮುಟ್ಟಿದರೆ ಅವರಿಗೂ ಹರಡುತ್ತದೆ. ಹೀಗಾಗಿ ಮೂರ್ತಿಯನ್ನು ಸ್ಪರ್ಶಿಸದಂತೆ ಮನವಿ ಮಾಡಿದ್ದೇವೆ ಎಂದು ಪಾಂಡೆ ವಿವರಿಸಿದ್ದಾರೆ.

    ಅಲ್ಲದೆ ಈ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಇಲ್ಲಿನ ಅರ್ಚಕರು ಮಾಸ್ಕ್ ಧರಿಸಿಯೇ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ದೇವಸ್ಥಾನಕ್ಕೆ ಬರುತ್ತಿದ್ದಾರೆ.