Tag: price hike

  • ಸಂಕ್ರಾಂತಿ ಬಳಿಕ ಗ್ರಾಹಕರ ಕೈ ಸುಡಲಿದೆ ಹಾಲು – 5 ರೂ. ದರ ಹೆಚ್ಚಳ ಆಗುತ್ತಾ?

    ಸಂಕ್ರಾಂತಿ ಬಳಿಕ ಗ್ರಾಹಕರ ಕೈ ಸುಡಲಿದೆ ಹಾಲು – 5 ರೂ. ದರ ಹೆಚ್ಚಳ ಆಗುತ್ತಾ?

    – ಹೆಚ್ಚುವರಿ 50 ಎಂಎಲ್ ಹಾಲು ಕಡಿತ

    ಬೆಂಗಳೂರು: ಹಾಲಿನ (Milk) ದರ ಏರಿಕೆಗೆ ಪ್ರಸ್ತಾವನೆ ಬಂದಿದ್ದು, ಸಂಕ್ರಾಂತಿ ಹಬ್ಬದ ಬಳಿಕ ಹಾಲಿನ ದರದ ಪರಿಷ್ಕರಣೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕೆಎಂಎಫ್ (KMF) ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬುಧವಾರ ನಡೆದ ಹಾಲಿನ ಒಕ್ಕೂಟದ ಸಬೆಯಲ್ಲಿ 5 ರೂ. ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಇನ್ನೂ ನಂದಿನಿ ಹಾಲಿನಲ್ಲಿ 50 ಎಂಎಲ್ ಹೆಚ್ಚುವರಿ ನೀಡಿ, 2 ರೂ. ಹೆಚ್ಚಳ ಮಾಡಲಾಗಿತ್ತು. ಈ ಹೆಚ್ಚುವರಿ ಹಾಲು ವಾಪಸ್‍ಗೆ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸದ್ಯ ನಂದಿನಿ ವಿವಿಧ ಹಾಲಿನ ದರಗಳ ಮಾಹಿತಿ

    50 ಎಂಎಲ್ ಹಾಲು ಕಡಿತಕ್ಕೆ ಕಾರಣವೇನು?
    ಐದು ವರ್ಷದಲ್ಲಿ ಏಕಾಏಕಿ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಹೀಗಾಗಿ ಕೆಎಂಎಫ್ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ 2 ರೂ. ಹೆಚ್ಚು ಮಾಡಿತ್ತು. ಆದರೆ ಈಗ ಹಾಲಿನ ಉತ್ಪಾದನೆ ಯಥಾಸ್ಥಿತಿಗೆ ಬಂದಿದೆ. ಹೀಗಾಗಿ ಹೆಚ್ಚುವರಿ ಹಾಲು 50 ಎಂಎಲ್‍ನ್ನು ಕಡಿತ ಮಾಡಿ ಈ ಹಿಂದಿನಂತೆ ಸರಬರಾಜು ಮಾಡಲು ನಿರ್ಧಾರ ಮಾಡಲಾಗಿದೆ.

    ಇಡ್ಲಿ ದೋಸೆ ಹಿಟ್ಟು: ಇಂದಿನಿಂದ ಇಡೀ ಬೆಂಗಳೂರು ನಗರದಲ್ಲಿ ಇಡ್ಲಿ ದೋಸೆ ಹಿಟ್ಟು ನೀಡಿದ್ದೇವೆ. ಖಾಸಗಿಯವರು ದೋಸೆ ಹಿಟ್ಟು/ಇಡ್ಲಿ ಹಿಟ್ಟು ಎಷ್ಟು ಮಾರ್ಕೆಟಿಂಗ್ ಮಾಡ್ತಾರೋ ಅದರ 20% ನಷ್ಟು ನಾವು ನೀಡುತ್ತೇವೆ. ಅಂದರೆ 5 ಸಾವಿರ ಮೆಟ್ರಿಕ್ ಟನ್ ನೀಡಲಿದ್ದೇವೆ. 15-20% ನಷ್ಟು ಸದ್ಯಕ್ಕೆ ನೀಡಲಿದ್ದೇವೆ. ಈಗ ಖಾಸಗಿಯವರು 30 ಸಾವಿರ ಮೆಟ್ರಿಕ್ ಟನ್ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.‌

    ಎಲ್ಲರಿಗೂ ಪ್ರೋಟಿನ್ ಬೇಕು. ಹೀಗಾಗಿ ಗುಣಮಟ್ಟದ ಹಿಟ್ಟು ನೀಡುತ್ತೇವೆ. ಇದು ನಂದಿನಿ, ಪಾರ್ಲರ್ ಆನ್‍ಲೈನ್‍ನಲ್ಲಿಯೂ ಸಿಗಲಿದೆ. ಬೆಂಗಳೂರಿನಲ್ಲಿ ಆರಂಭಿಕ ದಿನದಲ್ಲಿ ಮಾರ್ಕೆಟಿಂಗ್ ಮಾಡುತ್ತೇವೆ. ಶೀಘ್ರದಲ್ಲೇ ಬೇರೆ ಕಡೆಯೂ ಆರಂಭಿಸಲಿದ್ದೇವೆ ಎಂದು ಮಾಹಿತಿ ನಿಡಿದ್ದಾರೆ.

  • ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

    ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

    – ಬೆಳ್ಳುಳಿಗೆ 600 ರೂ., ನುಗ್ಗೆಕಾಯಿ ಕೆಜಿಗೆ 500 ರೂ.!

    ಬೆಂಗಳೂರು: ಫೆಂಗಲ್ ಚಂಡಮಾರುತದಿಂದಾಗಿ ವಿಪರೀತ ಮಳೆಯಾದ ಪರಿಣಾಮ ತರಕಾರಿಗಳ ಬೆಲೆ ಗಗನಕ್ಕೇರಿದೆ.

    ಕರ್ನಾಟಕ ಸೇರಿದಂತೆ ತಮಿಳುನಾಡು, ಚೆನ್ನೈನಲ್ಲಿ ಭಾರೀ ಮಳೆಯಾದ ಹಿನ್ನೆಲೆ ಬೆಳೆ ಹಾನಿಯಾಗುವುದರ ಜೊತೆಗೆ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ತರಕಾರಿ ಬೆಲೆ ಹೆಚ್ಚಾಗಿದೆ.ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ದಂಪತಿ

    ಬೆಳ್ಳುಳ್ಳಿ ಕೆ.ಜಿಗೆ 600 ರೂ. ಗಡಿ ದಾಟಿದ್ದು, ನುಗ್ಗೆಕಾಯಿ ಕೆ.ಜಿಗೆ 500ರೂ. ತಲುಪಿದೆ. ಒಂದು ಪೀಸ್ ನುಗ್ಗೆಕಾಯಿ 60ರೂ. ಆಗಿದೆ. ಈರುಳ್ಳಿ ಸೆಂಚುರಿಯಾದರೆ, ಟೊಮೆಟೋ ಅರ್ಧ ಸೆಂಚುರಿ ಬಾರಿಸಿದೆ. ಒಟ್ಟಾರೆ ತರಕಾರಿ ದರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.

    ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಗಳಲ್ಲಿ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗದ ಕಾರಣ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.

    ಬೆಂಗಳೂರಿನಲ್ಲಿ ತರಕಾರಿ ಬೆಲೆ ಎಷ್ಟಿದೆ?
    ಟೊಮೆಟೊ – ಕೆ.ಜಿಗೆ 60-70ರೂ.
    ಬೆಳ್ಳುಳ್ಳಿ – ಕೆ.ಜಿಗೆ 550-600ರೂ.
    ಈರುಳ್ಳಿ – ಕೆ.ಜಿಗೆ 70-80.ರೂ.
    ನುಗ್ಗೆಕಾಯಿ – ಕೆ.ಜಿಗೆ 500ರೂ.
    ಬಟಾಣಿ- ಕೆ.ಜಿಗೆ 180-200 ರೂ.
    ಮೆಣಸಿನಕಾಯಿ – ಕೆ.ಜಿಗೆ 40-50 ರೂ.
    ಆಲೂಗಡ್ಡೆ- ಕೆ.ಜಿಗೆ 35-40 ರೂ.
    ಬೀನ್ಸ್- ಕೆ.ಜಿಗೆ 60 ರೂ.
    ಕ್ಯಾರೆಟ್- ಕೆ.ಜಿಗೆ 60-80ರೂ.
    ಗ್ರೀನ್ ಕ್ಯಾಪ್ಸಿಕಂ – ಕೆ.ಜಿಗೆ 50ರೂ.
    ಯೆಲ್ಲೋ, ರೆಡ್ ಕ್ಯಾಪ್ಸಿಕಂ – ಕೆ.ಜಿಗೆ 150-180ರೂ.
    ಬಿಟ್ ರೋಟ್- ಕೆ.ಜಿಗೆ 60ರೂ.ಇದನ್ನೂ ಓದಿ:ಕಡ್ಲೆಪುರಿಗಿಂತಲೂ ಕಡೆಯಾಯ್ತು ಮೈಸೂರಿನ ಸೈಟ್‌ಗಳು – ಕೇವಲ 3 ಸಾವಿರಕ್ಕೆ 60*40 ಸೈಟ್ ಬರೆದುಕೊಟ್ಟ ಮುಡಾ

  • ಗ್ಯಾರಂಟಿ ಎಫೆಕ್ಟ್‌-  ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ದರ ಏರಿಕೆ ಬಿಸಿ

    ಗ್ಯಾರಂಟಿ ಎಫೆಕ್ಟ್‌- ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ದರ ಏರಿಕೆ ಬಿಸಿ

    ಬೆಂಗಳೂರು: ಸರ್ಕಾರಿ ಆಸ್ಪತ್ರೆಯ (Govt Hospitals) ರೋಗಿಗಳಿಗೆ ದರ ಏರಿಕೆ ಬಿಸಿ ತಟ್ಟಿದೆ. ಉಚಿತ ಚಿಕಿತ್ಸೆ ಕೊಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ (Medical Service) ದರ ಹೆಚ್ಚಳ ಆಗಿದೆ.

    ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಆಗಿದೆ. ಸರ್ಕಾರಿ ಸೇವೆಗಳ ದರ 10 ರಿಂದ 20% ದರ ಏರಿಕೆ ಆಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ದರ ಏರಿಕೆ ಆಗಿರುವ ಬಗ್ಗೆ ನೋಟಿಸ್ ಹಾಕಿದ್ದಾರೆ. ಆಸ್ಪತ್ರೆಯ ಹೊರ ರೋಗಿ ವಿಭಾಗಗಳ ಮುಂದೆ ದರ ಏರಿಕೆ ಆಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. ರಾಜ್ಯದ ಅತಿದೊಡ್ಡ ಆಸ್ಪತ್ರೆ ವಿಕ್ಟೋರಿಯಾದಲ್ಲಿ ದರ ಏರಿಕೆ ಆಗಿರೋದನ್ನು ಕಂಡು ರೋಗಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ: ಶರಣ ಪ್ರಕಾಶ್‌ ಪಾಟೀಲ್‌

     

    ಯಾವ ಸೇವೆಯ ದರ ಎಷ್ಟು ಹೆಚ್ಚಳ?
    *ಓಪಿಡಿ ರಿಜಿಸ್ಟ್ರೇಷನ್ ಬುಕ್
    ಹಿಂದಿನ ದರ – 10 ರೂ.
    ಈಗಿನ ದರ – 20 ರೂ.
    ಹೆಚ್ಚಳ – 10 ರೂ.

    *ಒಳರೋಗಿ ಅಡ್ಮಿಷನ್
    ಹಿಂದಿನ ದರ – 25 ರೂ.
    ಈಗಿನ ದರ – 50 ರೂ.
    ಹೆಚ್ಚಳ – 25 ರೂ.

    *ರಕ್ತ ಪರೀಕ್ಷೆ
    ಹಿಂದಿನ ದರ – 70 ರೂ.
    ಈಗಿನ ದರ – 120 ರೂ.
    ಹೆಚ್ಚಳ – 50 ರೂ.

    *ವಾರ್ಡ್ ಚಾರ್ಜಸ್
    ಹಿಂದಿನ ದರ – 25 ರೂ.
    ಈಗಿನ ದರ – 50 ರೂ.
    ಹೆಚ್ಚಳ – 25 ರೂ.

    *ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ದರ
    ಹಿಂದಿನ ದರ – 10 ರೂ.
    ಈಗಿನ ದರ – 50 ರೂ.
    ಹೆಚ್ಚಳ – 40 ರೂ.

  • ಮಳೆ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ – ಗ್ರಾಹಕರು ಹೈರಾಣು, ಯಾವ ತರಕಾರಿಗೆ ಎಷ್ಟು ಬೆಲೆ?

    ಮಳೆ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ – ಗ್ರಾಹಕರು ಹೈರಾಣು, ಯಾವ ತರಕಾರಿಗೆ ಎಷ್ಟು ಬೆಲೆ?

    – 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಮಳೆ (Rain) ಬೆನ್ನಲ್ಲೇ ತರಕಾರಿ ಬೆಲೆ (Vegetable Price) ಏರಿಕೆಯಾಗಿದೆ. ಹಿಂಗಾರು ಮಳೆ ಎಫೆಕ್ಟ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ.

    ದೀಪಾವಳಿ (Deepavali) ಹಬ್ಬ ಸಮೀಪಿಸುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆ ಹಾಗೂ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ನಷ್ಟವಾದ ಹಿನ್ನೆಲೆ 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: Public TV Impact | ಕಲಬುರಗಿ ಸೆಂಟ್ರಲ್‌ ಜೈಲ್‌ನ ಇಬ್ಬರು ಅಧಿಕಾರಿಗಳು ಅಮಾನತು

    ದೈನಂದಿನ ಅಡುಗೆಗೆ ಬೇಕಾದ ಈರುಳ್ಳಿ, ಆಲುಗೆಡ್ಡೆ, ಟೊಮಾಟೊ ದರಗಳ ಏರಿಕೆಯಿಂದ ಗ್ರಾಹಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಳ್ಳುಳ್ಳಿ ಕೆಜಿಯೊಂದಕ್ಕೆ 320 ರೂ. ಇಂದ 440 ರೂ. ದರ ಏರಿಕೆ ಆಗಿದ್ದು, ಈರುಳ್ಳಿ ದರ 80ರ ಆಸುಪಾಸಿನಲ್ಲಿದೆ. ತರಕಾರಿ ದರ ಇನ್ನೂ ಹೆಚ್ಚುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ. ಇದನ್ನೂ ಓದಿ: ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

     ಯಾವ ತರಕಾರಿ ದರ ಎಷ್ಟಿತ್ತು? ಎಷ್ಟಾಗಿದೆ?
    ದಪ್ಪ ಈರುಳ್ಳಿ: 58 – 79 ರೂ.
    ಸಾಂಬಾರ್ ಈರುಳ್ಳಿ: 60 – 85 ರೂ.
    ಟೊಮಾಟೊ: 60- 85 ರೂ.
    ಹಸಿ ಮೆಣಸಿನಕಾಯಿ: 50 – 70 ರೂ.
    ಬೀಟ್‌ರೂಟ್: 45 – 60 ರೂ.
    ಆಲುಗೆಡ್ಡೆ: 50 – 70 ರೂ.
    ಕ್ಯಾಪ್ಸಿಕಮ್: 50 – 65 ರೂ.
    ಹಾಗಲಕಾಯಿ: 45- 65 ರೂ.
    ಬೀನ್ಸ್: 60 – 80 ರೂ.
    ಡಬಲ್ ಬೀನ್ಸ್: 65 – 90 ರೂ.
    ಕ್ಯಾಬೇಜ್: 35- 50 ರೂ.
    ಸೌತೆಕಾಯಿ: 45 – 55 ರೂ.
    ಬದನೆಕಾಯಿ: 40 – 55 ರೂ.
    ಸುವರ್ಣಗೆಡ್ಡೆ: 50 – 70 ರೂ.
    ಶುಂಠಿ: 75- 100 ರೂ.
    ಬೆಂಡೆಕಾಯಿ: 35- 50 ರೂ.
    ಕ್ಯಾರೆಟ್: 50- 65 ರೂ.

  • ಶತಕದಂಚಿನಲ್ಲಿ ಟೊಮೆಟೊ  ದರ – ವರ್ಷದಲ್ಲಿ 2ನೇ ಬಾರಿಗೆ 100 ರೂ. ಸನಿಹಕ್ಕೆ ‘ಕೆಂಪಣ್ಣ’

    ಶತಕದಂಚಿನಲ್ಲಿ ಟೊಮೆಟೊ  ದರ – ವರ್ಷದಲ್ಲಿ 2ನೇ ಬಾರಿಗೆ 100 ರೂ. ಸನಿಹಕ್ಕೆ ‘ಕೆಂಪಣ್ಣ’

    ಬೆಂಗಳೂರು: ಕಳೆದ ಕೆಲ ದಿನಗಳಿಂದ ದಿನಬೆಳಗಾದರೆ ಒಂದಲ್ಲ ಒಂದು ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಅಗತ್ಯ ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ದರ ಗಗನ ಸಖಿಯಾಗಿದ್ದು, ಈ ಸಾಲಿಗೆ ಟೊಮೆಟೊ (Tomato) ಕೂಡ ಸೇರ್ಪಡೆಯಾಗಿದೆ.

    ಕಳೆದ ಕೆಲ ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ದರ ಕೇಳಿದ್ರೆನೆ ಜನ ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಬೆಳ್ಳುಳ್ಳಿ ಕೆಜಿಗೆ 400 ರೂ. ದಾಟಿದ್ರೆ ಈರುಳ್ಳಿ 100 ರೂ. ಸನಿಹಕ್ಕೆ ಬಂದಿದೆ. ಈ ನಡುವೆ ಟೊಮೆಟೊ ಕೂಡ ಇದೇ ಸಾಲಿಗೆ ಸೇರಿದ್ದು. ಟೊಮೆಟೊ ದರ 100 ರೂ. ದರ ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೇಲ್‌ ಯುದ್ಧಕ್ಕೆ ಬೆಚ್ಚಿದ ಜನ – 2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ

    ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಮಳೆ ಅಭಾವ ಮತ್ತು ರೋಗದ ಕಾರಣ ಭಾರೀ ಪ್ರಮಾಣದಲ್ಲಿ ಟೊಮೆಟೊ ಇಳುವರಿ ಕಡಿಮೆಯಾಗಿತ್ತು. ಪರಿಣಾಮ ಟೊಮೆಟೊ ದರ 100 ರೂ. ದಾಟಿತ್ತು. ಆ ಬಳಿಕ ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣ ಆಗಿ ದಿಢೀರ್ ದರ ಏರಿಕೆಯಾಗಿದ್ದು, ಟೊಮೆಟೊ ಕೊಳ್ಳೋಕು ಹಿಂದೂಮುಂದು ನೋಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ (Bengaluru) ಸರಬರಾಜು ಆಗುತ್ತಿದ್ದ ಟೊಮೆಟೊದಲ್ಲಿ ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನ ಕೆಲ ಭಾಗಗಳಿಂದ ಮಾತ್ರ ಟೊಮೆಟೊ ಬರುತ್ತಿದ್ದು, ಸಂಪೂರ್ಣ ಪೂರೈಕೆ ಆಗುತ್ತಿಲ್ಲ. ಹೀಗಾಗಿ ದರ ಏರಿಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಈಗಲೂ ಸಮಯವಿದೆ ಹಿಂದೆ ಸರಿದುಬಿಡಿ – ಲೆಬನಾನ್‌ಗೆ ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    ಟೊಮೆಟೊ ದರ ಏರಿಕೆಯಾಗಲು ಕಾರಣಗಳೇನು?
    – ಅತಿವೃಷ್ಟಿಯಿಂದ ಅನೇಕ ಕಡೆ ಬೆಳೆ ನಾಶದಿಂದ ಸರಬರಾಜು ಇಳಿಕೆ
    – ಪೂರೈಕೆಗಿಂತ ಎರಡು ಪಟ್ಟು ಬೇಡಿಕೆ ಇರುವುದು
    – ಕೋಲಾರ ಜಿಲ್ಲೆಯಿಂದಲೇ ಹೆಚ್ಚು ಪೂರೈಕೆ ಆಗುತ್ತಿದ್ದು, ಪೂರೈಕೆ ಇಳಿಕೆಯಾಗಿರೋದು.
    – ಇಳುವರಿ ಕುಸಿತದ ಪರಿಣಾಮ ನೆಲಕಚ್ಚಿದ ಟೊಮೆಟೊ ಬೆಳೆ
    – ರೋಗ ಬಾಧೆ, ಕಳಪೆ ಸಸಿಗಳಿಂದಾಗಿ ಹಲವೆಡೆ ಟೊಮೆಟೊ ಇಳುವರಿಯಲ್ಲಿ ಕುಸಿತ
    – ಸಾಲು, ಸಾಲು ಹಬ್ಬಗಳ ಹಿನ್ನೆಲೆ ಹೊರ ರಾಜ್ಯಗಳಿಂದಲೂ ಟೊಮೆಟೊಗೆ ಭಾರೀ ಬೇಡಿಕೆ
    – ಹೀಗಾಗಿ ಹೊರ ರಾಜ್ಯಗಳ ಬೇಡಿಕೆಯಿಂದ ಅಲ್ಲಿಗೂ ಪೂರೈಕೆಯಾಗುತ್ತಿರೋ ಕಾರಣ ಟೊಮೆಟೊ ದುಬಾರಿ
    – ತಮಿಳುನಾಡು, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಿಂದ ನಮ್ಮ ರಾಜ್ಯದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿ ಅಲ್ಲಿಗೂ ಪೂರೈಕೆಯಾಗಿ ದರ ಏರಿಕೆಯಾಗಿದೆ. ಇದನ್ನೂ ಓದಿ: ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ

    ಹೊರ ರಾಜ್ಯಗಳು ಕೂಡ ಹೆಚ್ಚಾಗಿ ರಾಜ್ಯದ ಟೊಮೆಟೊ ಮೇಲೆ ಅವಲಂಬನೆ ಕಾರಣ ಅನೇಕ ಗಡಿ ಜಿಲ್ಲೆಗಳು ಹೊರ ರಾಜ್ಯಗಳಿಗೆ ಹೆಚ್ಚಾಗಿ ಪೂರೈಕೆ ಮಾಡುತ್ತಿವೆ. ಇದು ಕೂಡ ದರ ಏರಿಕೆಗೆ ಕಾರಣ ಆಗುತ್ತಿದೆ. ಸದ್ಯ ಇದೇ ಪರಿಸ್ಥಿತಿ ಇನ್ನೂ ಒಂದೆರೆಡು ವಾರ ಮುಂದುವರಿಯುವ ಸಾಧ್ಯತೆ ಇದೆ. ಹೊಸ ಬೆಳೆ ಬಂದು ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗಬೇಕಿದೆ. ಮಳೆ ಕಡಿಮೆಯಾದರೆ ಮುಂದಿನ ಒಂದೆರೆಡು ವಾರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂತಿದ್ದಾರೆ. ಇದನ್ನೂ ಓದಿ: ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಹಬ್ಬದ ನಡುವೆಯೇ ದರ ಏರಿಕೆ ಜನರನ್ನ ಹೈರಾಣಾಗಿಸುತ್ತಿದೆ ಅನ್ನೋ ಬೇಸರ ಒಂದು ಕಡೆಯಾದರೆ, ಮತ್ತೊಂದೆಡೆ ಈಗಾಗಲಾದರು ಬೆಳೆದ ಬೆಳೆಗೆ ರೈತ ಸ್ವಲ್ಪ ಲಾಭ ಕಾಣುವ ಸಮಯ ಬಂತಲ್ಲ ಅನ್ನೋದೇ ನೆಮ್ಮದಿ ವಿಚಾರ. ಇದನ್ನೂ ಓದಿ: ನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!

  • ಈರುಳ್ಳಿ, ಬೆಳ್ಳುಳ್ಳಿ ಆಯ್ತು – ಈಗ ದಿಢೀರ್‌ ಟೊಮೆಟೊ ದರ ಭಾರೀ ಏರಿಕೆ

    ಈರುಳ್ಳಿ, ಬೆಳ್ಳುಳ್ಳಿ ಆಯ್ತು – ಈಗ ದಿಢೀರ್‌ ಟೊಮೆಟೊ ದರ ಭಾರೀ ಏರಿಕೆ

    ಬೆಂಗಳೂರು: ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬಳಿಕ ಟೊಮೆಟೊ ದರ ಏರಿಕೆಯಾಗಿದೆ.

    ಕಳೆದ ಒಂದು ವಾರದ ಹಿಂದೆ ಕೆಜಿಗೆ 40 ರೂ. ಇದ್ದ ದರ ಈಗ ಎರಡು ಪಟ್ಟು ಹೆಚ್ಚಳವಾಗಿದೆ. ಶುಕ್ರವಾರದಿಂದ ಕೆಜಿಗೆ 80 ರೂ. ದರದಲ್ಲಿ ಟೊಮೆಟೊ (Tomato) ಮಾರಾಟವಾಗುತ್ತಿದೆ.

    ಅಕಾಲಿಕ ಮಳೆ‌ಯಿಂದ (Rain) ಟೊಮೆಟೊ ಇಳುವರಿ ಕುಸಿತಗೊಂಡಿದೆ. ಇದರ ಜೊತೆ ಈಗ ನವರಾತ್ರಿ ಹಬ್ಬ ಆರಂಭಗೊಂಡಿದೆ. ಬೇಡಿಕೆ ಜಾಸ್ತಿ ಇದೆ. ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್‌ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಭಾರೀ ಮಳೆ – ನೂರಾರು ಗಣಿ ಲಾರಿಗಳು ಜಲಾವೃತ

    ಈಗಾಗಲೇ ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ದರ 70 ರೂ. ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ (Dasara Festival) ಸಮಯದಲ್ಲಿ ಜನರ ಜೇಬು ಮತ್ತಷ್ಟು ಖಾಲಿಯಾಗಲಿದೆ.

     

  • ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ

    ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ

    ನವದೆಹಲಿ/ಬೆಂಗಳೂರು: ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ವಾಣಿಜ್ಯ ಸಿಲಿಂಡರ್ (Commercial Cylinder) ಬಳಕೆದಾರರ ಜೇಬು ಮತ್ತೆ ಭಾರವಾಗಲಿದೆ. ಕಾರಣ ಮತ್ತೆ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದು, ತಿಂಗಳ ಮೊದಲ ದಿನವೇ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿತಾಗಿದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.

    ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.5 ರೂ. ಏರಿಕೆಯಾಗಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಐಓಸಿಎಲ್ ವೆಬ್‌ಸೈಟ್ ಪ್ರಕಾರ, 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ನ ಹೊಸ ಬೆಲೆಗಳು ಇಂದಿನಿಂದ ಅನ್ವಯವಾಗಲಿವೆ. ಆದರೆ ಬೆಲೆಗಳು ನಗರದಿಂದ ನಗರಕ್ಕೆ ವ್ಯತ್ಯಾಸವಾಗಿರುತ್ತವೆ. ದೆಹಲಿಯಿಂದ ಮುಂಬೈನವರೆಗೂ ಬೆಲೆಗಳು ಭಿನ್ನವಾಗಿರುತ್ತವೆ. ಮುಂಬೈನಲ್ಲಿ 1,644 ರೂ. ಇದ್ದ 19 ಕೆಜಿ ಸಿಲಿಂಡರ್ ಬೆಲೆ ಇದೀಗ 1,692.50 ರೂ. ಆಗಿದೆ. ಸೆಪ್ಟೆಂಬರ್‌ನಲ್ಲಿ 39 ರೂ.ಗಳಷ್ಟು ಏರಿಕೆಯಾಗಿತ್ತು. ಇದನ್ನೂ ಓದಿ: ಮಾಜಿ ಸಚಿವ ವಿಕೆ ಸಿಂಗ್ ವಿರುದ್ಧ ಮಾನಹಾನಿ ಪೋಸ್ಟ್ – ಯೂಟ್ಯೂಬರ್ ಅರೆಸ್ಟ್

    ಕೋಲ್ಕತ್ತಾದಲ್ಲಿ ಇದರ ಬೆಲೆ 1,802.50 ರೂ.ನಿಂದ 1,850.50 ರೂ.ಆಗಿದೆ. ಚೆನ್ನೈನಲ್ಲಿ 1,855 ರೂ.ಯಿದ್ದ 19 ಕೆಜಿ ಸಿಲಿಂಡರ್ ಬೆಲೆ 1,903 ರೂ. ಆಗಿದೆ. ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 48 ರೂ. ಏರಿಕೆಯಾಗಿದೆ. ಸದ್ಯ 19 ಕೆಜಿ ಸಿಲಿಂಡರ್ ಬೆಲೆ 1,818 ರೂ. ಆಗಿದೆ. ಇದನ್ನೂ ಓದಿ: 14 ಸೈಟ್‌ ಕೇಸ್‌ಗಿಂತಲೂ ಇದು ದೊಡ್ಡ ಪ್ರಕರಣ – ಹಳೆಯ ಡಿನೋಟಿಫಿಕೇಶನ್‌ ಕೆದಕಿ ಸಿಎಂಗೆ ಹೆಚ್‌ಡಿಕೆ ಗುದ್ದು

    2024ರ ಜುಲೈ ನಂತರ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈನಲ್ಲಿ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಬೆಲೆಗಳನ್ನು ಕೊಂಚ ಇಳಿಕೆ ಮಾಡಿಕೊಂಡಿದ್ದವು. ದೇಶದ ರಾಜಧಾನಿ ದೆಹಲಿಯಲ್ಲಿ 30 ರೂ.ವರೆಗೂ ಇಳಿಕೆಯಾಗಿತ್ತು. ಆದರೆ ಆಗಸ್ಟ್‌ನಲ್ಲಿ 8.50 ರೂ. ಏರಿಕೆಯಾಗಿತ್ತು. ನಂತರ ಇದೀಗ ಮೂರು ತಿಂಗಳು ಸೇರಿ ಒಟ್ಟು 39 ರೂ. ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಸೈಟ್ ವಾಪಸ್ ಕೊಟ್ಟು ಸಿಎಂ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ : ಬೊಮ್ಮಾಯಿ

  • ಬಜೆಟ್ 2024 – ಯಾವೆಲ್ಲ ವಸ್ತುಗಳ ಬೆಲೆ ಏರಿಕೆ? ಯಾವುದರ ಬೆಲೆ ಇಳಿಕೆ?

    ಬಜೆಟ್ 2024 – ಯಾವೆಲ್ಲ ವಸ್ತುಗಳ ಬೆಲೆ ಏರಿಕೆ? ಯಾವುದರ ಬೆಲೆ ಇಳಿಕೆ?

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತವಾಗಿ 7ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಇದು ಮೊದಲನೇ ಬಜೆಟ್ ಆಗಿದ್ದು, ಇಂದಿನ ಬಜೆಟ್‍ನಲ್ಲಿ ಯಾವುದರ ಬೆಲೆ ಕಡಿಮೆಯಾಗಿದೆ? ಯಾವುದರ ಬೆಲೆ ಏರಿಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.

    ಯಾವೆಲ್ಲ ವಸ್ತುಗಳ ಬೆಲೆ ಅಗ್ಗ?
    ಇಂದಿನ ಬಜೆಟ್‍ನಲ್ಲಿ (Union Budget 2024) ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು 6%ಗೆ ಇಳಿಸಲಾಗಿದೆ. ಇದರಿಂದ (Gold Price) ಚಿನ್ನ ಅಗ್ಗವಾಗಲಿದೆ. ಅಲ್ಲದೇ ಪ್ಲಾಟಿನಂ ಮೇಲಿನ ಕಸ್ಟಮ್ ಸುಂಕವನ್ನು 6.4%ಕ್ಕೆ ಇಳಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಕೇಂದ್ರದಿಂದ ಈ ನಿರ್ಧಾರ ಜಾರಿಯಾದ ನಂತರ ಚಿನ್ನ, ಬೆಳ್ಳಿ, ಪ್ಲಾಟಿನಂ ಬೆಲೆಯಲ್ಲಿ ಇಳಿಕೆಯಾಗಲಿದೆ.

    ಮೊಬೈಲ್ ಫೋನ್-ಚಾರ್ಜರ್ ಅಗ್ಗ: ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು 15%ರಷ್ಟು ಕಡಿಮೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ, ಈಗ ಮೊಬೈಲ್ ಫೋನ್‍ಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

    ಅಗ್ಗದ ಲಿಥಿಯಂ ಬ್ಯಾಟರಿಗಳಿಂದಾಗಿ ಇವಿಗಳಿಗೆ ಉತ್ತೇಜನ ಸಿಗಲಿದೆ. ಅಲ್ಲದೇ ಸೌರ ಫಲಕಗಳು ಮತ್ತು ಲಿಥಿಯಂ ಬ್ಯಾಟರಿಗಳ ದರ ಇಳಿಯಲಿದೆ.

    ಇ-ಕಾಮರ್ಸ್ ಕಂಪನಿಗಳಿಗೆ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗಿದೆ ಅಂದರೆ ಟಿಡಿಎಸ್ ದರವನ್ನು 1% ರಿಂದ 0.1%ಕ್ಕೆ ಇಳಿಸಲಾಗಿದೆ.

    ಕ್ಯಾನ್ಸರ್ ಔಷಧಿ ಬೆಲೆ ಇಳಿಕೆ
    ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲ್ಪಡುವ ಮೂರು ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಎಕ್ಸ್-ರೇ ಟ್ಯೂಬ್‍ಗಳು ಮತ್ತು ಎಕ್ಸ್-ರೇ ಯಂತ್ರಗಳಲ್ಲಿ ಬಳಸುವ ಫ್ಲಾಟ್ ಪ್ಯಾನೆಲ್ ಡಿಟೆಕ್ಟರ್‍ಗಳ ಮೇಲಿನ ಮೂಲ ಕಸ್ಟಮ್ ಸುಂಕದಲ್ಲಿ ಬದಲಾವಣೆ ಮಾಡಲಾಗಿದೆ. ಘೋಷಣೆ ಜಾರಿಯಾದ ನಂತರ ಅವುಗಳ ಬೆಲೆಯೂ ಕಡಿಮೆಯಾಗಲಿದೆ. ಇದಲ್ಲದೆ, ಫೆರೋನಿಕಲ್ ಮತ್ತು ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಸರ್ಕಾರ ತೆಗೆದುಹಾಕಿದೆ.

    ಯಾವ ವಸ್ತುಗಳು ದುಬಾರಿ?
    ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ ಸುಂಕವನ್ನು 10% ರಿಂದ 25%ಕ್ಕೆ ಹೆಚ್ಚಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ. ಜೊತೆಗೆ ವಿದೇಶದಿಂದ ಆಮದು ಮಾಡುವ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು 10% ನಿಂದ 15% ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಆಮದು ಮಾಡಿಕೊಳ್ಳುವ ಬಟ್ಟೆಯ ದರ ಸಹ ಏರಿಕೆಯಾಗಲಿದೆ.

  • ಬೆಲೆ ಏರಿಕೆ ಕೊಡುಗೆ, ಹಣದುಬ್ಬರ ಏರಿಕೆ – ಇದು ಕಾಂಗ್ರೆಸ್ ಗ್ಯಾರಂಟಿ ಎಂದ ಅಶ್ವಥ್ ನಾರಾಯಣ್

    ಬೆಲೆ ಏರಿಕೆ ಕೊಡುಗೆ, ಹಣದುಬ್ಬರ ಏರಿಕೆ – ಇದು ಕಾಂಗ್ರೆಸ್ ಗ್ಯಾರಂಟಿ ಎಂದ ಅಶ್ವಥ್ ನಾರಾಯಣ್

    ಬೆಂಗಳೂರು: ರಾಜ್ಯದ ಕಾಂಗ್ರೆಸ್ (Congress) ಪಕ್ಷ, ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಲೆ ಏರಿಕೆಯ (Price Hike) ಕೊಡುಗೆಯನ್ನು ವರ್ಷದುದ್ದಕ್ಕೂ ಜನರಿಗೆ ನೀಡಿದೆ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ (CN Ashwath Narayan) ಕಿಡಿಕಾರಿದ್ದಾರೆ.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜನರ ರಕ್ತ ಹೀರುವುದು, ಬೆಲೆ ಏರಿಕೆಯ ಬರೆ ಎಳೆಯುವುದೇ ಈ ಸರ್ಕಾರದ ಸಾಧನೆ ಎಂದು ಟೀಕಿಸಿದರು. ಬೆಲೆ ಏರಿಕೆ ಮತ್ತು ಹಣದುಬ್ಬರದ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಸಿಎಂ ಭೇಟಿಯಾಗಿ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೋಷಕರು ಮನವಿ

    ಹೈನುಗಾರರಿಗೆ ಹಾಲಿನ ಸಬ್ಸಿಡಿ ನೀಡಿಲ್ಲ. ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಬೇಕಾದ ಹಣ ನೀಡುತ್ತಿಲ್ಲ. ಬರ ನಿರ್ವಹಣೆಯಲ್ಲಿ ಸರ್ಕಾರ ತನ್ನ ಪಾಲಿನ ಹಣವನ್ನೂ ನೀಡಿಲ್ಲ. ರೈತರ ಮೇಲೆ ಬಿತ್ತನೆ ಬೀಜದ ದರದಿಂದ ಆರಂಭಿಸಿ ವಿದ್ಯುತ್ತಿನವರೆಗೆ, ನೀರಿನ ದರವನ್ನೂ ಹೆಚ್ಚಿಸಿಕೊಂಡು ಬರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಗೂ ಮೊದಲು ಚನ್ನಪಟ್ಟಣ ನೋಡಿದವನು ನಾನು: ಡಿಕೆಶಿ

    ಅರ್ಧ ಲೀಟರ್ ಹಾಲಿಗೂ 2 ರೂ., ಒಂದು ಲೀಟರ್ ಹಾಲಿಗೂ 2 ರೂ. ದರ ಏರಿಸಿದೆ. ಇದು ಬಡವರಿಗೆ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನವಿರೋಧಿ, ಇದು ಅಭಿವೃದ್ಧಿ ಶೂನ್ಯ ಸರ್ಕಾರ. ಬಿಜೆಪಿ ಈ ಬೆಲೆ ಹೆಚ್ಚಳವನ್ನು ತೀವ್ರವಾಗಿ ಖಂಡಿಸುತ್ತದೆ. ಕೆಎಂಎಫ್, ಸರ್ಕಾರದ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು. ಜನರು ನಿಮಗೆ ಆಶೀರ್ವಾದ ಮಾಡಿದ್ದಾರೆ. ಜನರಿಗೆ ಕಿರುಕುಳ, ಹಿಂಸೆ ಕೊಡುವುದು ಸಲ್ಲದು. ತೆರಿಗೆಯ ಬರೆ ಎಳೆಯಬೇಡಿ. ಅಧಿಕಾರವನ್ನು ಪ್ರಾಮಾಣಿಕವಾಗಿ, ಜನಪರ ಆಡಳಿತ ಕೊಡಬೇಕು ಎಂದು ಆಗ್ರಹಿಸಿದರು. ಅದರ ಬದಲು, ವಾಲ್ಮೀಕಿ ನಿಗಮ ಸೇರಿ, ಎಲ್ಲ ಇಲಾಖೆಗಳಲ್ಲಿ ಲೂಟಿ ನಡೆದಿದೆ ಎಂದು ಹೇಳಿದರು. ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ: ಚಲುವರಾಯಸ್ವಾಮಿ

  • ನಂದಿನಿ ಹಾಲಿನ ದರ ಹೆಚ್ಚಳ – ಕಾಫಿ, ಟೀ ಬೆಲೆ ಏರಿಕೆ ಬಗ್ಗೆ ಹೋಟೆಲ್‌ ಮಾಲೀಕರ ಸಂಘ ಹೇಳಿದ್ದೇನು?

    ನಂದಿನಿ ಹಾಲಿನ ದರ ಹೆಚ್ಚಳ – ಕಾಫಿ, ಟೀ ಬೆಲೆ ಏರಿಕೆ ಬಗ್ಗೆ ಹೋಟೆಲ್‌ ಮಾಲೀಕರ ಸಂಘ ಹೇಳಿದ್ದೇನು?

    ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (KMF) ನಂದಿನಿ ಹಾಲಿನ ದರ ಹೆಚ್ಚಿಸಿದ್ದು, ಗ್ರಾಹಕರಿಗೆ ಶಾಕ್‌ ನೀಡಿದೆ. ಪ್ರತಿ ಲೀಟರ್‌ ಪ್ಯಾಕೆಟ್‌ ಹಾಲಿನ ದರವನ್ನು 2 ರೂ. ನಷ್ಟು ಹೆಚ್ಚಿದೆ. ಇನ್ನೂ ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ (Bengaluru Hotel Owners Association) ಅಧ್ಯಕ್ಷ ಪಿ.ಸಿ ರಾವ್ ಮಾತನಾಡಿದ್ದಾರೆ.

    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ಕಾಫಿ ಪುಡಿ, ಟೀ ಪುಡಿ ದರ ಬೆಲೆ ಜಾಸ್ತಿ ಇದೆ. ಈಗ ಹಾಲಿನ ಬೆಲೆಯೂ ಜಾಸ್ತಿಯಾಗಿದೆ. ಆದ್ದರಿಂದ ಹೋಟೆಲ್‌ ಮಾಲೀಕರು ಕಾಫಿ, ಟೀ ಬೆಲೆ ಹೆಚ್ಚಿಸುವುದು (Coffee, Tea Hike) ಅನಿವಾರ್ಯ ಎನ್ನುತ್ತಿದ್ದಾರೆ. ಕಾಫಿ, ಟೀ ಬೆಲೆ 10 ರೂ. ಇದ್ದರೆ, 12 ರೂ.ಗಳಿಗೆ ಹೆಚ್ಚಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸಂಘ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಬೆಲೆ ಏರಿಕೆ ಮಾಡುವುದು ಹೋಟೆಲ್ ಮಾಲೀಕರ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಪಿ.ಸಿ ರಾವ್‌ ಪ್ರತಿಕ್ರಿಯಿಸಿದ್ದಾರೆ.

    ಕಬಾಬ್‌ಗೆ ಕೃತಕ ಬಣ್ಣ ನಿಷೇಧ ಸ್ವಾಗತಾರ್ಹ:
    ಇನ್ನೂ ಕಾಟನ್‌ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಬಳಿಕ ಕಬಾಬ್‌ ಪದಾರ್ಥಗಳಿಗೆ ಕೃತಕ ಬಣ್ಣ ಬಳಕೆ ನಿಷೇಧಿಸಿರುವ ಆರೋಗ್ಯ ಇಲಾಖೆ ನಿರ್ಧಾರವನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಹೋಟೆಲ್ ಮಾಲೀಕರೂ ಇದನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಘ ಹೇಳಿದೆ.

    ಹಾಲಿನ ದರ ಯಾವುದಕ್ಕೆ ಎಷ್ಟು ಹೆಚ್ಚಳ:
    ಸದ್ಯ ಕೆಎಂಎಫ್‌ ಪ್ರತಿ ಲೀಟರ್‌ ಪ್ಯಾಕೆಟ್‌ ಹಾಲಿನ ದರ ಹೆಚ್ಚಿಸಿದ್ದು, ಇದರೊಂದಿಗೆ ಪ್ಯಾಕೆಟ್‌ ಹಾಲಿನ ಪ್ರಮಾಣವನ್ನು 50 ಎಂಎಲ್‌ ಹೆಚ್ಚುವರಿ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ. ಪರಿಷ್ಕೃತ ದರ ಜೂನ್‌ 26ರಿಂದಲೇ ಜಾರಿಯಾಗಲಿದೆ.

    ಯಾವುದಕ್ಕೆ ಎಷ್ಟು ದರ ಹೆಚ್ಚಳ?
    ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 44 ರೂ.

    ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 45 ರೂ.

    ಹೋಮೋಜಿನೈಸ್ಡ್‌ ಹಸುವಿನ ಹಾಲು
    550 ಎಂಎಲ್‌ – 26 ರೂ.
    1050 ಎಂಎಲ್‌ – 48 ರೂ.

    ಸ್ಪೆಷಲ್‌ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಸಮೃದ್ಧಿ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 53 ರೂ.

    ಹೋಮೋಜಿನೈಸ್ಡ್‌ ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 51 ರೂ.

    ಸತೃಪ್ತಿ ಹಾಲು
    550 ಎಂಎಲ್‌ – 30 ರೂ.
    1050 ಎಂಎಲ್‌ – 57 ರೂ.

    ಶುಭಂ ಗೋಲ್ಡ್‌ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 51 ರೂ.

    ಡಬಲ್‌ ಟೋನ್ಡ್‌ ಹಾಲು
    550 ಎಂಎಲ್‌ – 23 ರೂ.
    1050 ಎಂಎಲ್‌ – 43 ರೂ.