Tag: Price drop

  • ಚಿತ್ರದುರ್ಗ | ಬೆಲೆ ಕುಸಿತ – ಕಟಾವು ಮಾಡದೇ ಹೊಲದಲ್ಲೇ ಟೊಮೆಟೊ ಬಿಟ್ಟ ರೈತರು

    ಚಿತ್ರದುರ್ಗ | ಬೆಲೆ ಕುಸಿತ – ಕಟಾವು ಮಾಡದೇ ಹೊಲದಲ್ಲೇ ಟೊಮೆಟೊ ಬಿಟ್ಟ ರೈತರು

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಟೊಮೆಟೊದಿಂದ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮೆಟೊ ಬೆಲೆ ಕುಸಿತದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಲೆ ಕುಸಿತದಿಂದ ಕಂಗಾಲಾದ ರೈತರು ಟೊಮೆಟೊ (Tomato) ಬೆಳೆಯನ್ನು ಕಟಾವು ಮಾಡದೇ ಹೊಲದಲ್ಲೇ ಬಿಟ್ಟಿದ್ದಾರೆ.

    ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ ಗ್ರಾಮದ ರೈತರು ಯಾವುದೇ ಬೆಳೆ ಬೆಳೆದರೂ ಒಂದಲ್ಲ, ಒಂದು ರೀತಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಈ ಬಾರಿ ಟೊಮೆಟೊ ಬೆಳೆದು ಅಪಾರ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದರೂ ಕೂಡ ಟೊಮೆಟೊ ಬೆಲೆ ಕುಸಿತದಿಂದಾಗಿ ಮತ್ತೆ ಅನ್ನದಾತರು ಸಾಲ ಶೂಲಕ್ಕೆ ಸಿಲುಕುವಂತಾಗಿದೆ. 25 ಕೆ.ಜಿಯ ಟೊಮೆಟೊ ಬಾಕ್ಸ್‌ಗೆ ಕೇವಲ 20 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಸಾಗಾಣೆ ವೆಚ್ಚ ಹಾಗೂ ಕೂಲಿಯ ಹಣವೂ ರೈತರ ಕೈಗೆ ಸಿಗುತ್ತಿಲ್ಲ. ಹೀಗಾಗಿ ಟೊಮೆಟೊವನ್ನು ಕಟಾವು ಮಾಡದೇ ಗಿಡದಲ್ಲೇ ಬಿಟ್ಟು ರೈತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

    ಅಪಾರ ಬೆಳೆ ಬೆಳೆದು, ಉತ್ತಮ ಇಳುವರಿ ಬಂದರೂ ಕೂಡ ತಕ್ಕ ಬೆಲೆ ಸಿಗಲಾರದೇ ಕೋಟೆನಾಡಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಇವರತ್ತ ಸುಳಿದಿಲ್ಲ. ರೈತರ ಸಂಕಷ್ಟ ಆಲಿಸಿಲ್ಲವೆಂದು ರೈತರು ಅಸಮಾಧಾನ ಹೊರಹಾಕಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

  • ಶೀಘ್ರ ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಒಲವು ತೋರಿದ ಕೇಂದ್ರ

    ಶೀಘ್ರ ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಒಲವು ತೋರಿದ ಕೇಂದ್ರ

    ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ (Crude Oil) ಬೆಲೆ ಭಾರೀ ಇಳಿಕೆ (Price Drop) ಕಂಡಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆಯನ್ನು ಇಳಿಸುವ ಬಗ್ಗೆ ದೊಡ್ಡ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

    2022ರಲ್ಲಿ ಕಚ್ಚಾತೈಲದ ಬೆಲೆ ಭಾರೀ ಏರಿಕೆಯಾಗಿದ್ದಾಗ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂ. ಹಾಗೂ ಡೀಸೆಲ್‌ಗೆ 35 ರೂ. ವರೆಗೂ ಭಾರೀ ನಷ್ಟ ಅನುಭವಿಸುತ್ತಿತ್ತು. ಆದರೆ ಬಳಿಕ ದರದಲ್ಲಿ ಭಾರೀ ಇಳಿಕೆಯಾಗಿದ್ದು, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 7-10 ರೂ. ಹಾಗೂ ಡೀಸೆಲ್‌ಗೆ 3-4 ರೂ. ಲಾಭ ಮಾಡಿಕೊಳ್ಳುತ್ತಿದೆ. ಕಳೆದ 3 ತಿಂಗಳಲ್ಲಿ ಸುಮಾರು 28,000 ಕೋಟಿ ರೂ.ಯಷ್ಟು ಲಾಭ ಮಾಡಿಕೊಂಡಿದೆ. ಇದನ್ನೂ ಓದಿ: ಶಿವರಾಜ್‌ಸಿಂಗ್‌ ರಾಜ್ಯ ರಾಜಕೀಯ ಅಂತ್ಯ – ಲೋಕಸಭೆಗೆ ಸ್ಪರ್ಧೆ?

     

    ಇತ್ತ ಲೋಕಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭ ತೈಲ ಬೆಲೆ ಇಳಿಕೆ ಮಾಡಿದರೆ ಹಣದುಬ್ಬರವನ್ನೂ ಹತೋಟಿಗೆ ತರಬಹುದು. ಹೀಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಶೀಘ್ರವೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಸಲು ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯ ಸಭೆಯಲ್ಲೂ J&K ಮೀಸಲಾತಿ, ಮರುಸಂಘಟನೆ ಮಸೂದೆಗಳು ಪಾಸ್‌

  • ನೆಟ್‌ಫ್ಲಿಕ್ಸ್ ಪ್ಲ್ಯಾನ್‌ಗಳು ಅಗ್ಗ – ಹಿಂದೆ ಎಷ್ಟಿತ್ತು? ಈಗ ಎಷ್ಟು ಇಳಿಕೆಯಾಗಿದೆ?

    ನವದೆಹಲಿ: ಭಾರತೀಯ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿ. ದೇಶದಲ್ಲಿ ತನ್ನ ಬಳಕೆದಾರರನ್ನು ಹೆಚ್ಚಿಸುವ ಉದ್ದೇಶದಿಂದ ನೆಟ್‌ಫ್ಲಿಕ್ಸ್ ತನ್ನ ಪ್ಲ್ಯಾನ್‌ಗಳ ಬೆಲೆಯನ್ನು ಇಳಿಸಿದೆ.

    2016ರಲ್ಲಿ ಸೇವೆಯನ್ನು ನೀಡಲು ಪ್ರಾರಂಭಿಸಿದ ನೆಟ್‌ಫ್ಲಿಕ್ಸ್ ಇದೇ ಮೊದಲ ಬಾರಿಗೆ ತನ್ನ ಪ್ಲ್ಯಾನ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ಟೆಲಿಕಾಂ ಕಂಪನಿಗಳು ತನ್ನ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬೆಲೆಯನ್ನು ಹೆಚ್ಚಿಸಿರುವ ಸಮಯದಲ್ಲಿ ನೆಟ್‌ಫ್ಲಿಕ್ಸ್ ಬೆಲೆಯನ್ನು ಕಡಿಮೆ ಮಾಡುತ್ತಿರುವುದು ಬಳಕೆದಾರರಿಗೆ ಖರ್ಚನ್ನು ಸರಿದೂಗಿಸಲು ಸಹಕಾರಿಯಾಗಿದೆ.

    ಅಮೆಜಾನ್ ಪ್ರೈಮ್ ತನ್ನ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದ ಬೆನ್ನಲ್ಲೇ ನೆಟ್‌ಫ್ಲಿಕ್ಸ್ನ ಈ ಮುನ್ನಡೆ ಬಳಕೆದಾರರಿಗೆ ಖುಷಿಯ ವಿಚಾರ. ಮುಖ್ಯವಾಗಿ ಮೊಬೈಲ್ ಪ್ಲ್ಯಾನ್‌ಗಳ ಬೆಲೆಯನ್ನು 199 ರೂ. ಯಿಂದ 149 ರೂ.ಗೆ ಇಳಿಸಿದೆ. ಈ ಪ್ಲ್ಯಾನ್‌ ನಿಂದ ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ 480 ಪಿ ಕ್ವಾಲಿಟಿಯ ವೀಡಿಯೋಗಳನ್ನು ವೀಕ್ಷಿಸಬಹುದು. ಇದನ್ನೂ ಓದಿ: ಅರ್ಜುನ್ ಸರ್ಜಾಗೆ ಕೊರೊನಾ ಪಾಸಿಟಿವ್

    ನೆಟ್‌ಫ್ಲಿಕ್ಸ್ನ ಬೇಸಿಕ್ ಯೋಜನೆ ಒಂದು ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್, ಟಿವಿ ಸ್ಕ್ರೀನ್‌ಗಳಲ್ಲಿ ಒಂದೇ ಸಮಯದಲ್ಲಿ ವೀಕ್ಷಿಸಬಹುದು. ಇದನ್ನು ಕೂಡಾ 480 ಪಿ ಯಲ್ಲಿ ವೀಕ್ಷಣೆಗೆ ಅವಕಾಶವಿದ್ದು, ಅದರೆ ಬೆಲೆ 199 ರೂ.ಗೆ ಇಳಿಕೆಯಾಗಿದೆ. ಈ ಯೋಜನೆ ಮೊದಲಿಗೆ 499 ರೂ. ಇತ್ತು.

    ಬಳಕೆದಾರರಿಗೆ ಹೈ ಡೆಫಿನಿಷನ್ ವೀಡಿಯೋಗಳನ್ನು ನೋಡಲು ಸ್ಟಾಂಡರ್ಡ್ ಕ್ವಾಲಿಟಿಯ ಆಯ್ಕೆ ಇದೆ. ಇದು 649 ರೂ. ಯಿಂದ 499 ರೂ.ಗೆ ಇಳಿದಿದೆ. ಈ ಯೋಜನೆ ಬಳಕೆದಾರರಿಗೆ ಒಂದೇ ಸಮಯದಲ್ಲಿ ಎರಡು ಭಿನ್ನ ಸಾಧನಗಳಲ್ಲಿ ವೀಡಿಯೋ ವೀಕ್ಷಿಸಲು ಅವಕಾಶ ನೀಡುತ್ತದೆ.

    ಪ್ರೀಮಿಯಂ ಪ್ಲ್ಯಾನ್‌ಗೆ ಬಂದರೆ 799 ರೂ. ಇದ್ದ ದರ 649 ರೂ.ಗೆ ಇಳಿಸಲಾಗಿದೆ. ಇದರಲ್ಲಿ ಬಳಕೆದಾರರು 4ಕೆ ಪ್ಲಸ್ ಹೆಚ್‌ಡಿಆರ್‌ನಲ್ಲಿ ವೀಡಿಯೋ ವೀಕ್ಷಿಸಬಹುದು. ಇದರೊಂದಿಗೆ ಒಂದೇ ಬಾರಿಗೆ ನಾಲ್ಕು ಸಾಧನಗಳಲ್ಲಿ ವೀಡಿಯೋ ವೀಕ್ಷಣೆಗೆ ಇದು ಅವಕಾಶ ನೀಡುತ್ತದೆ. ಇದನ್ನೂ ಓದಿ: ಸಾಹುಕಾರನಿಗೆ ಸವಾಲು ಹಾಕಿ ಎರಡನೇ ಬಾರಿ ಗೆದ್ದ ಹೆಬ್ಬಾಳ್ಕರ್‌

    ಹೀಗೆ ನೆಟ್‌ಫ್ಲಿಕ್ಸ್ ಜನರನ್ನು ಆಕರ್ಷಿಸಲು ಈ ರೀತಿಯ ಯೋಜನೆ ತಂದಿದೆ. ಕುತೂಹಲಕಾರಿ ವಿಷಯವೆಂದರೆ ಅಮೆಜಾನ್ ಪ್ರೈಮ್ ತನ್ನ ಬೆಲೆಯನ್ನು ಏರಿಕೆ ಮಾಡಿರುವುದರಿಂದ ಅದರ ಬಳಕೆದಾರರು ನೆಟ್‌ಫ್ಲಿಕ್ಸ್ ಕಡೆ ವಾಲುವ ಸಾಧ್ಯತೆ ಇದೆ.

  • ಕೊರೊನಾ ವೈರಸ್ ಎಫೆಕ್ಟ್, ರೇಷ್ಮೆ ಗೂಡಿನ ಬೆಲೆ ಇಳಿತ, ಕಂಗಾಲಾದ ರೈತರು

    ಕೊರೊನಾ ವೈರಸ್ ಎಫೆಕ್ಟ್, ರೇಷ್ಮೆ ಗೂಡಿನ ಬೆಲೆ ಇಳಿತ, ಕಂಗಾಲಾದ ರೈತರು

    ರಾಮನಗರ: ಮಹಾಮಾರಿ ಕೊರೊನಾ ವೈರೆಸ್ ಎಫೆಕ್ಟ್ ಇದೀಗ ಸದ್ದಿಲ್ಲದೇ ರೇಷ್ಮೆ ಬೆಳೆ ಮೇಲೆ ಪರಿಣಾಮ ಬೀರಿದೆ. ಒಂದೆಡೆ ರೈತರು ರೇಷ್ಮೆಗೂಡಿನ ಬೆಲೆ ಕುಸಿತಕ್ಕೆ ಕಂಗಾಲಾಗಿದರೆ ರೀಲರ್ಸ್ ಗಳು ತಮ್ಮ ಕಚ್ಚಾ ರೇಷ್ಮೆ ಸೇಲ್ ಆಗುತ್ತಿಲ್ಲ ಅಂತ ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ರೇಷ್ಮೆಗೂಡು ಟನ್‍ಗಟ್ಟಲೇ ದಿನನಿತ್ಯ ಬರುತ್ತಿದ್ದು ಅಲ್ಪ ಹಣದಲ್ಲೇ ಪೆಚ್ಚು ಮೋರೆ ಹಾಕಿಕೊಂಡು ರೈತರು ಮನೆಗೆ ತೆರಳುವಂತಾಗಿದೆ.

    ಕೊರೊನಾ ರಾಜ್ಯಕ್ಕೆ ಕಾಲಿಡುವ ಮುನ್ನ ಸಾಕಷ್ಟು ಖುಷಿಯಲ್ಲಿ ಮಾರುಕಟ್ಟೆಗೆ ಬಂದು ರೇಷ್ಮೆಗೂಡು ಮಾರಾಟ ಮಾಡಿ ಹೋಗುತ್ತಿದ್ದ ರೈತರಿಗೆ ಇದೀಗ ಏಕಾಏಕಿ ಸಿಡಿಲು ಬಡಿದದಂತಾಗಿದೆ. ಕೊರೊನಾ ಎಫೆಕ್ಟ್‍ನಿಂದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದ್ದು ರೈತರು ಪರದಾಡುವಂತಾಗಿದೆ.

    ಕೊರೊನಾ ಮಹಾಮಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೇಷ್ಮೆ ಮಾರುಕಟ್ಟೆಗಳು ಸಹ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ರೈತರು ರಾಮನಗರದ ರೇಷ್ಮೆ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಸಹ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಕುಸಿಯುವಂತಾಗಿದೆ.

    ಅದರಲ್ಲೂ ರೀಲರ್ಸ್ ಗಳು ತಮ್ಮಲ್ಲಿನ ಕಚ್ಚಾ ರೇಷ್ಮೆಯೇ ಮಾರಾಟವಾಗುತ್ತಿಲ್ಲ. ಈ ರೇಷ್ಮೆ ತೆಗೆದುಕೊಂಡು ಏನ್ ಮಾಡೋದು ಎಂದು ವಾರದಲ್ಲಿ 2 ದಿನಗಳು ಮಾತ್ರವೇ ರೇಷ್ಮೆಗೂಡು ಖರೀದಿಗೆ ಮುಂದಾಗಿದ್ದಾರೆ. ಇನ್ನುಳಿದ ದಿನಗಳಲ್ಲಿ ಸುಮ್ಮನೆ ಕುಳಿತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.

    ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಡುವ ಮುನ್ನ ರೇಷ್ಮೆ ಬೆಳೆಗೆ ಉತ್ತಮವಾದ ಬೆಲೆಯಿತ್ತು. ಪ್ರತಿನಿತ್ಯ ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ಗಳು ಸಹ ಪೈಪೋಟಿ ನಡೆಸಿ ರೇಷ್ಮೆಗೂಡು ಖರೀದಿಯ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ಕಾಲಿಡುತ್ತಿದ್ದಂತೆ ರೇಷ್ಮೆಗೂಡಿನ ಬೆಲೆ ಸಹ ಕುಸಿತ ಕಂಡಿದೆ.

    ಕಳೆದ 15 ದಿನಗಳ ಹಿಂದೆ ಪ್ರತಿನಿತ್ಯ 32ರಿಂದ 35 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಇದೀಗ ಪ್ರತಿನಿತ್ಯ ಮಾರುಕಟ್ಟೆಗೆ 45ರಿಂದ 50 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೇ ರೇಷ್ಮೆ ಮಾರುಕಟ್ಟೆಯಲ್ಲಿ 400 ಲಾಟ್‍ಗಳಷ್ಟಿದ್ದ ಗೂಡು 670 ಲಾಟ್‍ಗೆ ಏರಿಕೆಯಾಗಿದೆ. ಇದರಿಂದಾಗಿ ಹಳದಿ ಗೂಡಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 280 ರೂಪಾಯಿಗೆ ಇಳಿದರೆ, ಬಿಳಿ ರೇಷ್ಮೆಗೂಡು 270 ರೂಪಾಯಿಗಳಷ್ಟಿದೆ. ಆದರೆ ಹಿಂದಿನ ದರದಲ್ಲಿ ಬರೋಬ್ಬರಿ 100 ರೂಪಾಯಿಗಳಷ್ಟು ಇಳಿಕೆಯಾಗಿರುವುದು ರೈತರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದೆ.

    ಈ ಎಲ್ಲ ಬೆಳವಣಿಗೆಯಿಂದ ರೀಲರ್ಸ್ ಗಳು ಹಾಗೂ ರೈತರು ಸಹ ಪರದಾಡುವಂತಾಗಿದೆ. ಪ್ರತಿ ವರ್ಷವೂ ಈ ಸಮಯಕ್ಕೆ ರೇಷ್ಮೆಗೂಡಿನ ಬೆಲೆ ಏರಿಕೆಯಾಗುತ್ತಿತ್ತು. ಇದೀಗ ಕೊರೊನಾ ಎಫೆಕ್ಟ್ ರೇಷ್ಮೆ ಬೆಳೆಗಾರರಿಗೆ ಕೈ ಕೊಡುವಂತೆ ಮಾಡಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.