Tag: price decrease

  • ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗ ಭಾರೀ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ 1 ಕೆ.ಜಿ ಈರುಳ್ಳಿ 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

    ರೈತರ ಎರಡನೇ ಬೆಳೆ ಮಾರುಕಟ್ಟೆಗೆ ಬಂದಿರುವುದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ನಮ್ಮ ದೇಶದ ಈರುಳ್ಳಿ ರಫ್ತನ್ನು ಬ್ಯಾನ್ ಮಾಡಿರುವುದರಿಂದ ರೈತರಿಗೆ ಅನಾನುಕೂಲವಾಗಿದೆ. ಸದ್ಯಕ್ಕೆ ಈಗ ಮಹಾರಾಷ್ಟ್ರ ರಾಜ್ಯದ ಸೋಲಾಪುರ, ನಾಸಿಕ್, ಅಹ್ಮದ್‍ನಗರ್ ಹಾಗೂ ರಾಜ್ಯದ ಬಿಜಾಪುರದಿಂದ ಈರುಳ್ಳಿಯ ಎರಡನೇ ಬೆಳೆ ಬರುತ್ತಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

    ಕೇಂದ್ರ ಸರ್ಕಾರ ರೈತರಿಗಾಗುವ ನಷ್ಟ ತಡೆಯಲು ರಫ್ತು ಆರಂಭಿಸಿದರೆ ಒಳಿತಾಗುತ್ತೆ. ಹೀಗಾಗಿ ರಫ್ತನ್ನು ಕೂಡಲೇ ಆರಂಭಿಸಬೇಕಿದೆ ಎಂದು ರೈತರು ಒತ್ತಾಯಿಸುತ್ತಿದ್ದಾರೆ.

    ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 20 ರಿಂದ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ನಷ್ಟವಾಗುತ್ತಿದೆ. ಸಾರಿಗೆ ವೆಚ್ಚ, ಕೂಲಿ ವೆಚ್ಚಗಳು ಹೆಚ್ಚಾಗಿರುವುದರಿಂದ ರೈತರಿಗೆ ಈರುಳ್ಳಿ ಬೆಲೆ ಇಳಿದಿರೋದು ನಷ್ಟ ಉಂಟುಮಾಡುತ್ತಿದೆ. ರಫ್ತು ಆರಂಭಿಸುವುದರಿಂದ 1 ಕೆ.ಜಿ ಈರುಳ್ಳಿಗೆ 40-50 ರೂಪಾಯಿಗೆ ಬಂದರೆ ರೈತರಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಚಾರಗಳು ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

  • ಸೌತೆಕಾಯಿ ಬೆಲೆ ಭಾರೀ ಕುಸಿತ – ಸಂಕಷ್ಟಕ್ಕೆ ಸಿಲುಕಿದ ರೈತರು

    ಸೌತೆಕಾಯಿ ಬೆಲೆ ಭಾರೀ ಕುಸಿತ – ಸಂಕಷ್ಟಕ್ಕೆ ಸಿಲುಕಿದ ರೈತರು

    ಮೈಸೂರು: ಜಿಲ್ಲೆಯ ಮಾರುಕಟ್ಟೆಯಲ್ಲಿ ಸೌತೆಕಾಯಿ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು ರೈತರು ಕಂಗಾಲಾಗಿದ್ದಾರೆ.

    ನೆರೆ ಪ್ರವಾಹದಿಂದ ಮೊದಲೇ ತತ್ತರಿಸಿ ಹೋಗಿದ್ದ ರೈತರಿಗೆ ಈಗ ಸೌತೆಕಾಯಿ ಬೆಲೆ ದಿಢೀರನೆ ಭಾರೀ ಇಳಿಕೆ ಕಂಡಿರೋದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚಳಿಗಾಲದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿದಷ್ಟು ಸೌತೆಕಾಯಿ ಬೆಲೆ ಕುಸಿದಿದೆ. ಒಂದು ತಿಂಗಳ ಹಿಂದೆ 15 ರಿಂದ 20 ರೂಪಾಯಿ ಕೆಜಿ ಇದ್ದ ಸೌತೆಕಾಯಿ ಈಗ 2 ರಿಂದ ಮೂರು ರೂಪಾಯಿಗೆ ಇಳಿದಿದೆ. ಇದರಿಂದ ರೈತರಿಗೆ ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ.

    ಬಂಡವಾಳ ಇರಲಿ ಹೊಲದಿಂದ ಮಾರುಕಟ್ಟೆಗೆ ಸೌತೆಕಾಯಿ ಸಾಗಿಸಿದ ವಾಹನ ಬಾಡಿಗೆ ಹಣವೂ ಇದರಿಂದ ಸಿಗುತ್ತಿಲ್ಲ. ಸೌತೆಕಾಯಿಗೆ ಕನಿಷ್ಟ ಕೆಜಿಗೆ 10 ರೂಪಾಯಿ ಸಿಗದಿದ್ದರೆ ಹಾಕಿದ ಬಂಡವಾಳ ವಾಪಾಸ್ ಬರಲ್ಲ. ರೈತರು ಒಂದು ಎಕ್ರೆಯಲ್ಲಿ ಸೌತೆಕಾಯಿ ಬೆಳೆಯಲು ಕನಿಷ್ಟ 50 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಇದರಿಂದ ಎಕ್ರೆಗೆ ಕನಿಷ್ಟ 10 ಸಾವಿರ ಕೆಜಿ ಇಳುವರಿ ಬರುತ್ತೆ. ಆದರೆ ಸೌತೆಕಾಯಿ ಬೆಲೆ ಈ ಮಟ್ಟದಲ್ಲಿ ಕುಸಿದ ಕಾರಣ ರೈತರು ಕಷ್ಟಕ್ಕೆ ಸಿಲುಕಿದ್ದಾರೆ.

  • 9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    ನವದೆಹಲಿ: ಬಡ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಹಾಯವಾಗಲೆಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ(ಎನ್‍ಪಿಪಿಎ) 9 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು 87%ದಷ್ಟು ಇಳಿಕೆ ಮಾಡಿದೆ.

    ಈ ಒಂಬತ್ತು ಔಷಧಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಕಿಮೊಥೆರಪಿ ಚುಚ್ಚುಮದ್ದುಗಳು ಒಳಗೊಂಡಿದೆ. ಪರಿಷ್ಕೃತ ಆದೇಶದ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಬಳಸಲಾಗುವ ಪೆಮ್ಸೆಸೆಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ 500 ಮಿ.ಗ್ರಾಂ ಇಂಜೆಕ್ಷನ್ ಬೆಲೆ 22,000 ರೂ.ಗಳಿಂದ 2,800 ರೂ.ಗೆ ಇಳಿದಿದೆ. ಹಾಗೆಯೇ 100 ಮಿ.ಗ್ರಾಂ ಡೋಸ್ ಇದೇ ಇಂಜೆಕ್ಷನ್ ಬೆಲೆ 7,700 ರೂ.ಗಳಿಂದ 800 ರೂಪಾಯಿಗೆ ಇಳಿದಿದೆ.

    ಅದೇ ರೀತಿ, ಎಪಿಕ್ಲೋರ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎಪಿರುಬಿಸಿನ್ 10 ಮಿ.ಗ್ರಾಂ ಡೋಸ್ ಇಂಜೆಕ್ಷನ್‍ಗೆ 561 ರೂ.ಗಳಿಂದ 276.8 ರೂಪಾಯಿಗೆ ಇಳಿದಿದೆ. ಅದೇ ಇಂಜೆಕ್ಷನ್‍ನ 50 ಮಿ.ಗ್ರಾಂ ಡೋಸ್ ಬೆಲೆ 2,662 ರೂ.ಗಳಿಂದ 960 ರೂ. ಆಗಿದೆ.

    ಎರ್ಲೋಟಾಜ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎರ್ಲೋಟಿನಿಬ್ 100 ಮಿ.ಗ್ರಾಂ 10 ಮಾತ್ರೆಗಳುಳ್ಳ ಪ್ಯಾಕ್‍ಗೆ 6,600 ರೂ.ಗಳಿಂದ 1,840 ರೂ.ಗೆ ಬಂದಿದೆ. ಹಾಗೆಯೇ 150 ಮಿ.ಗ್ರಾಂನ 10 ಮಾತ್ರೆಗಳುಳ್ಳ ಒಂದು ಪ್ಯಾಕ್ ಬೆಲೆ 8,800 ರೂ.ಗಳಿಂದ 2,400 ರೂ.ಗೆ ಇಳಿಕೆಯಾಗಿದೆ.

    ಲಾನೋಲಿಮಸ್ ಹೆಸರಿನಲ್ಲಿ ಮಾರಾಟವಾಗುವ ಎವೆರೋಲಿಮಸ್‍ನ ಬೆಲೆ 0.25 ಮಿ.ಗ್ರಾಂ ಮತ್ತು 0.5 ಮಿ.ಗ್ರಾಂನ ಡೋಸ್‍ಗೆ 1,452 ರೂ., 726 ಹಾಗೂ 739 ರೂ.ಗಳಿಂದ 406 ರೂ.ಗೆ ಇಳಿಕೆಯಾಗಿದೆ.

    ಈ ಬಗ್ಗೆ ಆರೋಗ್ಯ ಉದ್ಯಮದ ವಕ್ತಾರರು ಪ್ರತಿಕ್ರಿಯಿಸಿ, ಔಷಧಿಗಳ ಬೆಲೆ ಕಡಿಮೆ ಮಾಡುವ ಹಿನ್ನೆಲೆ ಔಷಧಿಯ ಗುಣಮಟ್ಟ ಹಾಗೂ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

    ಎನ್‍ಪಿಪಿಎ ದೇಶದಲ್ಲಿ ಔಷಧಿ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಯೂನಿಯನ್ ಸಚಿವಾಲಯವಾದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆಯ ಅಡಿಯಲ್ಲಿ ಬರುವ ಸ್ವತಂತ್ರ ಸಂಸ್ಥೆಯಾಗಿದೆ. ಮಾರ್ಚ್ ನಂತರ ಎರಡನೇ ಭಾರಿ ಎನ್‍ಪಿಪಿಎ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿತಗೊಳಿಸಿದೆ.