Tag: press conference

  • ಪತ್ರಿಕಾಗೋಷ್ಠಿ ವೇಳೆ ಮಹಿಳೆಯ ಕನ್ನೆಗೆ ಬಾರಿಸಿದ ಪೊಲೀಸ್- ತನಿಖೆಗೆ ಆದೇಶ

    ಪತ್ರಿಕಾಗೋಷ್ಠಿ ವೇಳೆ ಮಹಿಳೆಯ ಕನ್ನೆಗೆ ಬಾರಿಸಿದ ಪೊಲೀಸ್- ತನಿಖೆಗೆ ಆದೇಶ

    ಹೈದರಾಬಾದ್: ಪತ್ರಿಕಾ ಗೋಷ್ಠಿ ವೇಳೆ ಸಹಾಯಕ ಪೊಲೀಸ್ ಆಯುಕ್ತರೊಬ್ಬರು ಮಹಿಳೆಯ ಕೆನ್ನೆಗೆ ಬಾರಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    ಬೇಗಂಪೇಟ್ ಸಹಾಯಕ ಪೊಲೀಸ್ ಆಯುಕ್ತರಾದ ಎಸ್ ರಂಗ ರಾವ್ ಪದ್ಮಾ ಎಂಬ ಆರೋಪಿ ಮಹಿಳೆಯ ಕಪಾಳಕ್ಕೆ ಹೊಡೆದಿದ್ದಾರೆ. ಈಕೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆಂದು ಪತ್ರಿಕಾ ಗೋಷ್ಠಿ ವೇಳೆ ಪೊಲೀಸರು ಹೇಳಿದ್ದರು. ಈ ವೇಳೆ ಮಹಿಳೆ ತಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಾದಿಸಿದ್ದಳು.

     

    ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ತನಿಖೆ ನಡೆಸಲಾಗ್ತಿದೆ ಎಂದು ಉತ್ತರ ವಲಯ ಉಪ ಪೊಲೀಸ್ ಆಯುಕ್ತರಾದ ಬಿ. ಸುಮತಿ ಹೇಳಿದ್ದಾರೆ. ಎಸಿಪಿ ವಿರುದ್ಧ ತನಿಖೆ ಆರಂಭವಾಗಿದೆ. ಅವರಿಂದ ವಿವರಣೆ ಕೇಳಿದ್ದೇವೆ. ಅದರ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಸುಮತಿ ತಿಳಿಸಿದ್ದಾರೆ.

    ಪದ್ಮಾ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ. ಆಕೆ ಹಾಗೂ ಇನ್ನೂ ಮೂವರು ಮಹಿಳೆಯರು ಜನರ ಗಮನ ಬೇರೆಡೆ ಸೆಳೆದು ಹಲವು ಅಪರಾಧಗಳನ್ನ ಎಸಗಿದ್ದಾರೆ. ನಾಲ್ವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಕರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಆರೋಪ ಹೊತ್ತಿರುವ ಎಸಿಪಿ ಅವರನ್ನ ಸಂಪರ್ಕಿಸಿದಾಗ, ಮಹಿಳೆ ಪೊಲೀಸರ ಮೇಲೆಯೇ ಆರೋಪಗಳನ್ನ ಮಾಡ್ತಿದ್ದರಿಂದ ಪತ್ರಿಕಾ ಗೋಷ್ಠಿಯಿಂದ ಹೊರಹೋಗುವಂತೆ ನಾನು ಮಹಿಳೆಯನ್ನ ತಳ್ಳಿದೆ ಎಷ್ಟೇ ಎಂದು ಹೇಳಿದ್ದಾರೆ.

  • ಬುರ್ಕಾ V/S ಕೇಸರಿ ಶಾಲು: ಕ್ಯಾಂಪಸ್‍ನಲ್ಲಿ ಸಂಘಟನೆಗಳಿಂದ ಸುದ್ದಿಗೋಷ್ಠಿ

    ಶಿವಮೊಗ್ಗ: ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಗಾದೆಯಂತೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ವಸ್ತ್ರ ಸಂಹಿತೆ- ಬುರ್ಕಾ ವಿವಾದ ಕ್ಯಾಂಪಸ್‍ನಿಂದ ಹೊರ ಬಂದಿದ್ದು, ದಿನದಿನಕ್ಕೂ ನಾನಾ ರೂಪು ಪಡೆಯುತ್ತಿದೆ. ವಿವಿ ಆಡಳಿತ ಮಂಡಳಿ ಪರಿಸ್ಥಿತಿಯನ್ನು ಗೊಂದಲಕಾರಿ ಮಾಡಿ ಈಗ ಮೌನದ ಮೊರೆಹೋಗಿದೆ. ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪಸ್ ವಿಷಯವಾಗಿ ಪತ್ರಿಕಾಗೋಷ್ಠಿ ಮಾಡಿ ಆರೋಪ- ಪ್ರತ್ಯಾರೋಪ ಮಾಡಿದರೂ ತುಟಿ ಪಿಟಿಕ್ ಎನ್ನದ ಮೌನದಲ್ಲಿ ವಿವಿ ಆಡಳಿತ ಮಂಡಳಿ ಇದೆ.

    ಎಟಿಎನ್‍ಸಿಸಿ, ಬಾಪೂಜಿ ಕಾಲೇಜು, ಎಸ್‍ಆರ್‍ಎನ್‍ಎಂ ಕಾಲೇಜುಗಳಲ್ಲಿ ಬುರ್ಕಾ ಅಥವಾ ಕೇಸರಿ ಶಾಲಿನ ವಿವಾದ, ಆಕ್ಷೇಪಗಳು ತಣ್ಣಗಾಗಿವೆ. ಪರಿಸ್ಥಿತಿ ತಿಳಿಯಾಗುತ್ತಿದೆ ಎಂದು ಭಾವಿಸುವಷ್ಟರಲ್ಲೆ ಕೆಲ ಸಂಘಟನೆಗಳು ವಿದ್ಯಾರ್ಥಿಗಳ ಪರ- ವಿರೋಧ ವಕಾಲತ್ತು ವಹಿಸತೊಡಗಿವೆ.

    ಸಹ್ಯಾದ್ರಿ ಕಾಲೇಜಿನಲ್ಲಿ ಇಂದೂ ಕೂಡಾ ಪೊಲೀಸರ ಬಿಗಿ ಭದ್ರತೆಯಲ್ಲಿ ತರಗತಿಗಳು ನಡೆದವು. ಬುರ್ಕಾ ಧರಿಸಿದ್ದ ವಿದ್ಯಾರ್ಥಿಗಳು ಹಾಗೂ ಕೇಸರಿ ಶಾಲು, ಶರ್ಟ್ ತೊಟ್ಟ ವಿದ್ಯಾರ್ಥಿಗಳೂ ಕಂಡು ಬಂದರು. ಕ್ಯಾಂಪಸ್‍ನಲ್ಲಿ ಕೇಸರಿ ತೊಟ್ಟು ಅಡ್ಡಾಡುತ್ತಿದ್ದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಪ್ರೊ.ಗೌಡರ ಶಿವಣ್ಣವರೇ ಏಕಾಂಗಿಯಾಗಿ ಗದರಿಸಿ, ತರಗತಿಗೆ ಹೋಗುವಂತೆ ತಾಕೀತು ಮಾಡುತ್ತಿದ್ದರು. ಇವರ ಬೆಂಬಲಕ್ಕೆ ಕಾಲೇಜಿನ ಒಬ್ಬನೇ ಒಬ್ಬ ಉಪನ್ಯಾಸಕ ಬರಲಿಲ್ಲ.

    ಈ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆದಿದೆ. ಪೊಲೀಸರು ಈ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಕೆಲ ವಿದ್ಯಾರ್ಥಿನಿಯರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಮಾಡಿದರು. ಕ್ಯಾಂಪಸ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನಮಗೆ ಕಾಲೇಜಿಗೆ ಹೋಗಲು ಆತಂಕವಾಗುತ್ತಿದೆ ಎಂದರು. ಬುರ್ಕಾ ಧರಿಸಿ ಬರುವುದು ನಮ್ಮ ಹಕ್ಕು. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಬುರ್ಕಾ ಧರಿಸಿದ ಕಾರಣಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.

    ಕ್ಯಾಂಪಸ್ ಫ್ರಂಟ್ ಇಂಡಿಯಾ ಸಂಘಟನೆ ಆರೋಪಗಳಿಗೆ ಪ್ರತಿಯಾಗಿ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‍ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿದ್ಯಾರ್ಥಿನಿಯರು ತರಗತಿಯೊಳಗೂ ಬುರ್ಕಾ ಧರಿಸಿ ಬರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು. ಕ್ಯಾಂಪಸ್‍ನಲ್ಲಿ ಒಂದು ಶಿಸ್ತು ಕಾಪಾಡಲು ವಸ್ತ್ರಸಂಹಿತೆ ಅಗತ್ಯವಿದೆ. ನಾವು ಯಾರ ಮೇಲೂ ಹಲ್ಲೆ, ದೌರ್ಜನ್ಯ ಮಾಡಿಲ್ಲ. ಮಾಡಿದ್ದು ದೃಢಪಟ್ಟರೆ ಯಾವುದೇ ಶಿಕ್ಷೆಗೂ ನಾವು ಸಿದ್ದ ಎಂದು ತಿಳಿಸಿದರು.

    ಈ ವಿವಾದ ಆರಂಭಗೊಂಡಿದ್ದೇ ಕುವೆಂಪು ವಿವಿ ಹೊಣೆಗೇಡಿತನದಿಂದ. ಆದರೆ, ಯಾವುದೇ ಸಂದರ್ಭದಲ್ಲೂ ಪರಿಸ್ಥಿತಿ ಕೈಮೀರದಂತೆ ಪೊಲೀಸರು ಎಚ್ಚರಿಕೆ ಹಾಗೂ ಸಮಾಧಾನದ ಹೆಜ್ಜೆ ಇಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಕೆಲ ಸಂಘಟನೆಗಳ ಜೊತೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದ್ದಾರೆ. ಹೀಗೆ ತಮ್ಮ ವಿದ್ಯಾರ್ಥಿಗಳೇ ಹೀಗೆ ಹೊರಗೆ ಪತ್ರಿಕಾಗೋಷ್ಠಿ ನಡೆಸಿದರೂ ತುಟಿಪಿಟಕ್ ಎನ್ನದೆ ಕುವೆಂಪು ವಿವಿ ಆಡಳಿತ ಮಂಡಳಿ ಮಹಾಮೌನ ತಾಳಿದೆ.