Tag: President post

  • ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಗುಂಪುಗಳಿಂದ ಹೋರಾಟ

    ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಗುಂಪುಗಳಿಂದ ಹೋರಾಟ

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಗೆ ಜಾತಿಗಳ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ.

    ಬಾಲೇಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳಾ ಕೋಟಾ ಬಂದಿದ್ದು, ಅಧ್ಯಕ್ಷ ಖುರ್ಚಿಗಾಗಿ ಎರಡು ಸಮುದಾಯಗಳು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿವೆ.

    ಗ್ರಾಮದ ಘಂಟಿಚೋರ್ ಹಾಗೂ ದಲಿತ ಸಮುದಾಯದ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಘಂಟಿಚೋರ್ ಸಮುದಾಯದವರು ಪ್ರವರ್ಗ-1ಕ್ಕೆ ಒಳಪಡುತ್ತಾರೆ. ಆದರೆ ಎಸ್.ಸಿ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸರ್ಕಾರದ ಯೋಜನೆಗಳನ್ನುದುರುಪಯೋಗ ಪಡೆಸಿಕೊಳ್ಳುವ ಮೂಲಕ ನಿಜವಾದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದಲಿತ ಹೋರಾಟಗಾರರು ಆರೋಪಿಸಿದ್ದಾರೆ.

    ಘಂಟಿಚೋರರು ಎಸ್.ಸಿ ಹೌದೋ ಅಲ್ಲವೋ ಎಂಬುದರ ಬಗ್ಗೆ ಧಾರವಾಡ ಹೈ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈ ಪ್ರಕರಣ ಇತ್ಯರ್ಥ ಆಗುವ ವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಂದೂಡಬೇಕೆಂದು ದಲಿತರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

    ಘಂಟಿಚೋರರು ಎಸ್.ಸಿ ಎಂದು ಈ ಹಿಂದೆಯೇ ತಹಶೀಲ್ದಾರ್ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೂ ನೀವು ಎಸ್.ಸಿ ಅಲ್ಲ, ಪ್ರವರ್ಗ-1ಕ್ಕೆ ಒಳಪಡುತ್ತೀರಿ ಎಂದು ನಮಗೆ ಅವಮಾನ ಮಾಡುವ ಜೊತೆಗೆ ಜಾತಿ ನಿಂದನೆ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಹೋರಾಟಕ್ಕಿಳಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನ್ಯಾಯ ಕೊಡಿಸಬೇಕೆಂದು ಘಂಟಿಚೋರ್ ಸಮುದಾಯದವರೂ ಹೋರಾಟಕ್ಕೆ ಇಳಿದಿದ್ದಾರೆ. ಬಾಲೇಹೊಸೂರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಇಂದೇ ಕೊನೆಯ ದಿನವಾಗಿದ್ದು, ಈ ಬಗ್ಗೆ ಎರಡೂ ಸಮುದಾಯದವರು ಹೋರಾಟಕ್ಕಿಳಿದಿದ್ದಾರೆ. ಆಯ್ಕೆ ಪ್ರಕ್ರಿಯೆ ಮುಂದೂಡಬೇಕು ಇಲ್ಲವೇ, ತಹಶೀಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗೊಂದಲಕ್ಕೆ ಇತಿಶ್ರೀ ಹಾಡಬೇಕು ಎಂದು ಎರಡೂ ಕಡೆಯ ಹೋರಾಟಗಾರರು ಪಟ್ಟುಹಿಡಿದಿದ್ದಾರೆ.

  • ಅಧ್ಯಕ್ಷರ ಅವಧಿ ಮುಗಿದ ಮಾತ್ರಕ್ಕೆ ಕಾಂಗ್ರೆಸ್ ತಲೆ ಇಲ್ಲದ ಪಕ್ಷ ಎಂದಲ್ಲ: ಸಿಂಘ್ವಿ

    ಅಧ್ಯಕ್ಷರ ಅವಧಿ ಮುಗಿದ ಮಾತ್ರಕ್ಕೆ ಕಾಂಗ್ರೆಸ್ ತಲೆ ಇಲ್ಲದ ಪಕ್ಷ ಎಂದಲ್ಲ: ಸಿಂಘ್ವಿ

    – ಅವಧಿ ಮುಗಿದರೂ ಸೋನಿಯಾ ಗಾಂಧಿ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ
    – ರಾಹುಲ್ ಗಾಂಧಿ ಪರ ಪಕ್ಷದಲ್ಲಿ ಹೆಚ್ಚುತ್ತಿದೆ ಒಲವು
    – ಶೀಘ್ರ ಪೂರ್ಣ ಪ್ರಮಾಣದ ಅಧ್ಯಕ್ಷರ ನೇಮಿಸಿ ಎಂದ ಶಶಿ ತರೂರ್

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ರಾಹುಲ್ ಗಾಂಧಿಯವರೇ ನಿಭಾಯಿಸಬೇಕು ಎಂದು ಪಕ್ಷದಲ್ಲಿ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಪಕ್ಷದಿಂದ ಮತ್ತೊಂದು ಹೇಳಿಕೆ ಹೊರ ಬಿದ್ದಿದೆ.

    ಇಂದು ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ದೂರಷ್ಟಿಯ ಹಾಗೂ ಸೂಕ್ತ ಕಾರ್ಯವಿಧಾನ ಜಾರಿಗೆ ಬರುವವರೆಗೆ ಸೋನಿಯಾ ಗಾಂಧಿಯವರೇ ಮಧ್ಯಂತರ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸೋನಿಯಾ ಗಾಂಧಿಯವರ ಅವಧಿ ಆಗಸ್ಟ್ 10ರಂದು ಮುಕ್ತಾಯವಾಗಲಿದ್ದು, ಇದರರ್ಥ ಅಧ್ಯಕ್ಷ ಸ್ಥಾನ ಖಾಲಿಯಾಗಿದೆ ಎಂದಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಸ್ಪಷ್ಟಪಡಿಸಿದ್ದಾರೆ.

    ಸೋನಿಯಾ ಗಾಂಧಿ ಅವರು ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದ್ದು, ಆಗಸ್ಟ್ 10ಕ್ಕೆ ಪೂರ್ಣಗೊಳ್ಳುತ್ತದೆ. ಆದರೆ ಅಧ್ಯಕ್ಷರ ಆಯ್ಕೆ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು. ಮುಂದಿನ ದಿನಗಳಲ್ಲಿ ಇದೇ ನಿಯಮ ಅನುಸರಿಸಲಾಗುವುದು, ಇದೇ ವೇಳೆ ಫಲಿತಾಂಶ ಸಹ ಹೊರಬೀಳುತ್ತದೆ ಎಂದು ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ನಂತರ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ನಾಯಕರು ಎಷ್ಟೇ ಮನವೊಲಿಸಿದರು ಸಹ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಒಪ್ಪಿರಲಿಲ್ಲ. ಹೀಗಾಗಿ ಮಧ್ಯಂತರ ಅಧ್ಯಕ್ಷೆಯನ್ನಾಗಿ ಸೋನಿಯಾ ಗಾಂಧಿಯವರನ್ನು ಆಯ್ಕೆ ಮಾಡಲಾಗಿತ್ತು.

    ಪಕ್ಷದ ಸಂವಿಧಾನದಲ್ಲಿ ಬರೆದಿರುವ ಕಾರ್ಯವಿಧಾನವನ್ನು ಅನುಸರಿಸಲು ಕಾಂಗ್ರೆಸ್ ಬದ್ಧವಿದೆ. ಇದು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಈ ಕುರಿತು ಎಲ್ಲರಿಗೂ ತಿಳಿಸಲಾಗುವುದು. ಚುನಾವಣೆಗೆ ಸಂವಿಧಾನದಲ್ಲಿ ನಿಗದಿಪಡಿಸಿರುವ ಕಾರ್ಯವಿಧಾನವಿದೆ. ಇದು ಸಿಡಬ್ಲ್ಯುಸಿ ಮೂಲಕ ನಡೆಯುತ್ತದೆ ಎಂದು ಸಿಂಘ್ವಿ ತಿಳಿಸಿರುವುದಾಗಿ ವರದಿಯಾಗಿದೆ.

    ಆಗಸ್ಟ್ 10ರ ಮಧ್ಯರಾತ್ರಿಯಿಂದ ಕಾಂಗ್ರೆಸ್‍ಗೆ ತಲೆ ಇಲ್ಲ ಎಂದು ಯಾರಾದರು ಹೇಳಿದರೆ, ಅದು ಸಾಧ್ಯವೇ ಎಂದು ನಿಮಗೆ ನೀವೇ ಕೇಳಿಕೊಳ್ಳಿ. ಇದ್ದಕ್ಕಿದ್ದಂತೆ ಸ್ಥಾನ ಖಾಲಿಯಾದರೆ ಈ ರೀತಿಯಾಗಿ ಹೇಳುವುದು ನಮ್ಮ ಸಂವಿಧಾನದ ವ್ಯಾಖ್ಯಾನದಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಸೋಮವಾರ ಸೋನಿಯಾ ಗಾಂಧಿಯವರ ಅವಧಿ ಪೂರ್ಣಗೊಳ್ಳುತ್ತಿದ್ದು, ವರ್ಷದ ಬಳಿಕ ಮತ್ತೆ ಸ್ಥಾನ ಖಾಲಿಯಾಗುತ್ತಿದೆ. ಈ ಹಿನ್ನೆಲೆ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

    ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅಭಿಪ್ರಾಯ ತಿಳಿಸಿದ್ದು, ಕಾಂಗ್ರೆಸ್ ಗೊತ್ತುಗುರಿ ಇಲ್ಲದ ಪಕ್ಷ ಎಂಬ ಆರೋಪವನ್ನು ತೊಡೆದು ಹಾಕಲು ಪೂರ್ಣ ಪ್ರಮಾಣದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪಕ್ಷ ಚುರುಕುಗೊಳಿಸಬೇಕಿದೆ. ಪಕ್ಷವನ್ನು ಮತ್ತೆ ಮುಂದೆ ನಡೆಸಲು ರಾಹುಲ್ ಗಾಂಧಿಯವರಿಗೆ ಸಾಮರ್ಥ್ಯ ಹಾಗೂ ಯೋಗ್ಯತೆ ಇದೆ. ಅಲ್ಲದೆ ಸೋನಿಯಾ ಗಾಂಧಿಯವರೇ ಅನಿರ್ಧಿಷ್ಟಾವಧಿ ವರೆಗೆ ಮಧ್ಯಂತರ ಅಧ್ಯಕ್ಷ ಸ್ಥಾನದ ಹೊಣೆ ಹೊತ್ತುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗೆ ಸಂದೀಪ್ ದಿಕ್ಷೀತ್ ಸಹ ಈ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೋ ಅಥವಾ ನೇಮಿಸುತ್ತಾರೋ ಗೊತ್ತಿಲ್ಲ. ಸಿಡಬ್ಲ್ಯುಸಿ ನಾಯಕತ್ವದ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

  • ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಗೆ ಇಬ್ಬರು ಪ್ರತಿಷ್ಠಿತರ ನಡುವೆ ಶುರುವಾಗಿದೆ ಜಿದ್ದಾಜಿದ್ದಿ!

    ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಗೆ ಇಬ್ಬರು ಪ್ರತಿಷ್ಠಿತರ ನಡುವೆ ಶುರುವಾಗಿದೆ ಜಿದ್ದಾಜಿದ್ದಿ!

    -ವಿಜಯಾನಂದ ಕಾಶಪ್ಪನವರ್ ಪತ್ನಿ ವರ್ಸಸ್ ಹುಲ್ಲಪ್ಪ ಮೇಟಿ ಪುತ್ರಿ

    ಬಾಗಲಕೋಟೆ: ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ಕಾಂಗ್ರೆಸ್‍ನ ನಾಯಕರಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‍ನಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾಪಂಚಾಯಿತಿ ಅಧ್ಯಕ್ಷಗಿರಿಗಾಗಿ ಇಬ್ಬರು ಪ್ರತಿಷ್ಠಿತರ ನಡುವೆ ಕಾಳಗ ಶುರುವಾಗಿದ್ದು, ಕಾಂಗ್ರೆಸ್ಸಿಗರ ನಡೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಇರಿಸು-ಮುರಿಸು ಅನುಭವಿಸುವಂತಾಗಿದೆ.

    ಹಾಲಿ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಅವರನ್ನ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ಸಿಗರಿಂದಲೇ ಸ್ಕೆಚ್ ರೆಡಿಯಾಗಿದೆ. ಶತಾಯ ಗತಾಯ ಅಧಿಕಾರದ ಗದ್ದುಗೆ ಹೀಡಿಯಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಬಾಯಕ್ಕಾ ಮೇಟಿ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ವೀಣಾ ಕಾಶಪ್ಪನವರ್ ಅವರನ್ನ ಕೆಳಗಿಳಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಸದಸ್ಯರ ಜೊತೆ ಕೈ ಜೋಡಿಸಿ ಅಧ್ಯಕ್ಷಗಿರಿ ಪಟ್ಟ ಪಡೆಯುವುದಾಗಿ ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಬಾಯಕ್ಕಾ ಮೇಟಿ ಬಿಜೆಪಿಗರನ್ನ ತಮ್ಮ 9 ಜನ ಜಿಲ್ಲಾಪಂಚಾಯಿತಿ ಸದಸ್ಯರ ಜೊತೆ ಸಂಪರ್ಕಿಸಿದ್ದಾರೆ. ಮೇಟಿಯವರ ಪುತ್ರಿಯ ನಡೆ ಈಗ ಬಾದಾಮಿ ಶಾಸಕರು ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇರುಸು-ಮುರುಸು ಉಂಟು ಮಾಡಿದೆ. ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಒಟ್ಟು ಜಿಲ್ಲೆಯ 36 ಸ್ಥಾನಗಳಲ್ಲಿ ಕೇವಲ 17 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 18ರಲ್ಲಿ ಜಯಭೇರಿ ಬಾರಿಸಿತ್ತು. ಆದ್ರೆ ಕಾಂಗ್ರೆಸ್‍ನ ಒಬ್ಬರು ಪಕ್ಷೇತರರ ಬೆಂಬಲ ಪಡೆದು ಹಾಗೂ ಇನ್ನೊಬ್ಬ ಬಿಜೆಪಿ ಸದಸ್ಯರ ಗೈರು ಉಳಿಸುವುದರ ಮೂಲಕ ಅಧ್ಯಕ್ಷಗಿರಿ ಪಟ್ಟ ಗಿಟ್ಟಿಸಿಕೊಂಡಿದ್ದರು.

    ಜಿಲ್ಲಾ ಕಾಂಗ್ರೆಸ್‍ನಲ್ಲಿ ಈ ಬೆಳವಣಿಗೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದು, ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗಳಲ್ಲಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ವಿರುದ್ಧ ಕೆಲವು ಸದಸ್ಯರು ಹರಿಹಾಯುತ್ತ ಬಂದಿದ್ದಾರೆ. ಸಾಮಾನ್ಯ ಸಭೆಗಳು ಸರಿಯಾಗಿ ನಡೆದ ಉದಾಹರಣೆಗಳಿಲ್ಲ. ಅಧ್ಯಕ್ಷ ಪಟ್ಟಕ್ಕೆ ಕುಳಿತು ಎರಡೂವರೆ ವರ್ಷಗಳಾಗಿದ್ದು, ಹೀಗಾಗಿ ಮತ್ತೊಬ್ಬರಿಗೆ ಅವಕಾಶ ಕೊಡಿ ಎಂದು ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರಂತೆ. ಅಲ್ಲದೇ ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಬಾಗಲಕೋಟೆ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಲೋಕಸಭೆ ಟಿಕೆಟ್ ನೀಡಿ, ಅಧ್ಯಕ್ಷೆ ಸ್ಥಾನವನ್ನು ತ್ಯಜಿಸುತ್ತೇನೆ ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಕ್ಷದ ವರಿಷ್ಠರು ಏನೇ ತೀರ್ಮಾಣ ತೆಗೆದುಕೊಂಡರೂ ಬದ್ಧ ಎಂದು ಇಬ್ಬರು ನಾಯಕಿಯರು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಆಂತರಿಕ ಕಲಹ ಮಾತ್ರ ಶಮನಗೊಂಡಿಲ್ಲ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ ಎಂದು ಬಾಯಕ್ಕಾ ಮೇಟಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಅದೇನೆಯಾಗಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿ ಪಟ್ಟ ಕಾಂಗ್ರೆಸ್ ಪಾಳಯದಲ್ಲಿ ಬಹುದೊಡ್ಡ ಬಿರುಗಾಳಿ ಎಬ್ಬಿಸಿದೆ. ಲೋಕಸಭೆ ಚುನಾವಣೆ ಸಮೀಪವಿರುವಾಗ್ಲೇ ಈ ಬೆಳವಣಿಗೆ ವರಿಷ್ಠರ ತಲೆ ನೋವಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುರಸಭೆ ಅಧ್ಯಕ್ಷ ಗಾದಿಗಾಗಿ ಬಿಜೆಪಿ ಮುಖಂಡ ವಾಸು ಕೊಲೆ?

    ಪುರಸಭೆ ಅಧ್ಯಕ್ಷ ಗಾದಿಗಾಗಿ ಬಿಜೆಪಿ ಮುಖಂಡ ವಾಸು ಕೊಲೆ?

    ಬೆಂಗಳೂರು: ಎರಡು ದಿನಗಳ ಹಿಂದೆ ನಡೆದಿದ್ದ ಬೊಮ್ಮಸಂದ್ರ ಪುರಸಭೆ ಸದಸ್ಯ ಮತ್ತು ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ವಾಸು ಹತ್ಯೆಗೆ ಹೊಸ ತಿರುವು ಸಿಕ್ಕಿದೆ.

    ತನ್ನ ತಾಯಿ ಪುರಸಭೆ ಅಧ್ಯಕ್ಷರಾಗೋದಕ್ಕೆ ಶ್ರೀನಿವಾಸ್ ಪ್ರಸಾದ್ ಅಡ್ಡಿಯಾಗಿದ್ದಾರೆ ಅಂತಾ ಭಾವಿಸಿ ಬಾಡಿ ಬಿಲ್ಡರ್ ಮಂಜುನಾಥ್ ಅಲಿಯಾಸ್ ಬನಹಳ್ಳಿ ಮಂಜ ಕೊಲೆ ಮಾಡಿಸಿದ್ದಾನೆ ಅಂತಾ ಮೂಲಗಳು ತಿಳಿಸಿವೆ.

    ಅಧ್ಯಕ್ಷಗಾದಿಗಾಗಿ ಶ್ರೀನಿವಾಸ್ ಮತ್ತು ಮಂಜನ ತಾಯಿ ಸರೋಜಮ್ಮ ನಡುವೆ ತೀವ್ರ ಪೈಪೋಟಿಯಿತ್ತು. ವಾಸು ಅವರನ್ನ ಹತ್ಯೆಗೈದ್ರೆ ತನ್ನ ತಾಯಿಗೆ ಅಧಿಕಾರ ಸಲೀಸಾಗಿ ದಕ್ಕಲಿದೆ ಅಂತಾ ಭಾವಿಸಿ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಪುರಸಭೆ ಸದಸ್ಯೆ ಸರೋಜಮ್ಮ, ಮಧು, ನಾರಾಯಣಸ್ವಾಮಿ, ಮುರಳಿ, ಮಂಜುನಾಥ ಅನ್ನೋರನ್ನು ಅರೆಸ್ಟ್ ಮಾಡಲಾಗಿದೆ. ಬಾಡಿ ಬಿಲ್ಡರ್ ಮಂಜ ಸೇರಿದಂತೆ ಉಳಿದವರಿಗಾಗಿ ಹುಡುಕಾಟ ನಡೆದಿದೆ. ಕೊಲೆಯ ಹಿಂದೆ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ಕೈವಾಡವಿದೆ ಅಂತಾ ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

    ಮುಖಂಡನ ಹತ್ಯೆ ಖಂಡಿಸಿ ಬಿಜೆಪಿ ಇವತ್ತು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಬಿಜೆಪಿ ಆರೋಪಿಸಿದೆ.

    ಮಾರ್ಚ್ 14ರಂದು ನಗರದ ಬಿಟಿಎಲ್ ಕಾಲೇಜು ಮುಂಭಾಗದಲ್ಲಿ ಬಿಜೆಪಿ ಮುಖಂಡ ವಾಸು ಅವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.