Tag: Preparedness

  • ಕೊರೊನಾ ಮೂರನೇ ಅಲೆ ತಡೆಗೆ ಅಗತ್ಯ ವೈದ್ಯಕೀಯ ಸೌಲಭ್ಯ: ಅಶೋಕ್

    ಕೊರೊನಾ ಮೂರನೇ ಅಲೆ ತಡೆಗೆ ಅಗತ್ಯ ವೈದ್ಯಕೀಯ ಸೌಲಭ್ಯ: ಅಶೋಕ್

    ಹಾಸನ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡುವ ಹಿನ್ನೆಲೆ ಅಗತ್ಯ ವೆಂಟಿಲೇಟರ್ ಸೌಲಭ್ಯದ ಬೆಡ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಹಳ್ಳಿಯ ಕಡೆ ಮಕ್ಕಳ ತಜ್ಞರ ನಡೆ ಎಂಬ ಯೋಜನೆ ಆರಂಭಿಸಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

    ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುವುದರಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಯೋಜನೆ ಮೂಲಕ ಮಕ್ಕಳಿಗೆ ಅರ್ಧ ಕೆ.ಜಿ. ಹಾಲಿನ ಪುಡಿ, 200 ಗ್ರಾಂ. ಬಾದಾಮಿ, ಮೊಟ್ಟೆ ಸೇರಿದಂತೆ ಮಲ್ಟಿವಿಟಮಿನ್ ಸಿರಪ್ ಮತ್ತು ಸಾಬೂನನ್ನು ನೀಡುವ ಯೋಜನೆ ಇದಾಗಿದ್ದು, ರಾಜ್ಯಾದ್ಯಂತ ಜಾರಿಗೆ ಬರಲಿದೆ. ಆರೋಗ್ಯ ರಕ್ಷಣೆಗೆ ಅಗತ್ಯ ಹಣಕಾಸು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

    ಕೊರೊನಾ ಮೂರನೇ ಅಲೆ ಕುರಿತು ಶಾಸಕರೆಲ್ಲರೂ ಸಲಹೆ ನೀಡಿದ್ದಾರೆ. ಮಕ್ಕಳ ತಜ್ಞರ ಕೊರತೆ ದೇಶದಲ್ಲೇ ಇದೆ. ಮುಂದಿನ 10 ದಿನದಲ್ಲಿ ಎಲ್ಲ ವೈದ್ಯರಿಗೆ ತರಬೇತಿ ನೀಡಿ, ಮಕ್ಕಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಅಗತ್ಯ ಮಾಹಿತಿ ನೀಡಲಾಗುವುದು. ಮಕ್ಕಳ ತಜ್ಞರನ್ನು ಕೂಡಲೇ ಒದಗಿಸಲಾಗದು, ಶಿಕ್ಷಣ ಪಡೆದು ಹೊರಬರಲು ಇನ್ನೂ 7 ವರ್ಷ ಬೇಕಿದೆ. ಆದ್ದರಿಂದ ಇರುವ ವೈದ್ಯರಿಗೆ ಮಕ್ಕಳ ಚಿಕಿತ್ಸೆ ಬಗ್ಗೆ ತರಬೇತಿ ನೀಡುವುದು ಒಂದೇ ಮಾರ್ಗ ಎಂದರು.

    ಮೂರನೇ ಅಲೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ, ಅಪೌಷ್ಟಿಕತೆಯ ಬಗ್ಗೆ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡಬೇಕಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯ ಪೌಷ್ಠಿಕಾಂಶದ ಆಹಾರ ನೀಡಬೇಕು ಎಂದು ಸೂಚನೆ ನೀಡಿದರು.

    ಬೇಲೂರು ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರ ಕೊರತೆಯಿದೆ. ಆದ್ದರಿಂದ ಅಗತ್ಯ ವೈದ್ಯರ ನೇಮಕಾತಿ ಮಾಡುವಂತೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಬೆಡ್ ಗಳನ್ನು ಒದಗಿಸುವಂತೆ ಶಾಸಕ ಲಿಂಗೇಶ್ ಒತ್ತಾಯಿಸಿದರು.

    ಅರಸೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರ ಕೊರತೆಯಿದೆ ಹಿಂದಿನ ಪಂಚಾಯಿತಿ ಸಭೆಯಲ್ಲಿ ವೈದ್ಯರ ಕೊರತೆ ಬಗ್ಗೆ ಗಮನಕ್ಕೆ ತರಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಕೋವಿಡ್ ಸಾವಿನ ಸಂಖ್ಯೆ ಕಡಿಮೆ ಮಾಡಲು ತಾಲೂಕಿನಲ್ಲಿ ಕೊರೊನಾದಿಂದ ಸಾವಿಗೀಡಾದವರ ಬಗ್ಗೆ ಅಗತ್ಯ ಮಾಹಿತಿ ಪಡೆಯಬೇಕು. ಯಾವ ಕಾರಣಕ್ಕೆ ಸಾವು ನಡೆದಿದೆ ಎಂದು ಮಾಹಿತಿ ಕಲೆಹಾಕೋದು ಸೂಕ್ತ. ಇದರಿಂದ ಅವರ ಕುಟುಂಬ ಸದಸ್ಯರಿಗೆ ಬೇರೆ ಯಾವ ಖಾಯಿಲೆ ಇದೆ ಹಾಗೂ ಕೊರೊನಾ ಸೋಂಕಿನಿಂದಲೇ ಸಾವಾಯಿತೆ ಎಂಬ ಮಾಹಿತಿ ಹಾಗೂ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದರು.

    ಶಾಸಕ ಬಾಲಕೃಷ್ಣ ಮಾತನಾಡಿ, ವೈದ್ಯರ ನಡೆ ಹಳ್ಳಿಯ ಕಡೆ ಪರಿಣಾಮಕಾರಿಯಾಗಿದೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ ಎಂಬ ಮಾಹಿತಿಯಂತೆ ಅಗತ್ಯ ಚಿಕಿತ್ಸೆಗೆ ಕ್ರಮ ಅವಶ್ಯವಿದೆ. ಹೋಬಳಿ ಕೇಂದ್ರದಲ್ಲಿ ಅಗತ್ಯ ಕೊರೊನಾ ಪರೀಕ್ಷಾ ಕೇಂದ್ರ ತೆರೆದರೆ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ ಎಂದರು.

    ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ, ಪಾಸಿಟಿವಿಟಿ ದರವೂ ಕಡೆಮೆಯಾಗಿದೆ. ಮೂರನೇ ಅಲೆ ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಾರ್ಯನಿರ್ವಹಣೆ ಮಾಡುವ ಅಗತ್ಯವಿದೆ. ನಮ್ಮ ಕ್ಷೇತ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 15 ಮಕ್ಕಳ ಬೆಡ್ ಅವಶ್ಯಕತೆ ಇದೆ, ತುರ್ತಾಗಿ ಬೇಕಿದೆ ಎಂದರು. ಈಗಾಗಲೇ 18 ವೆಂಟಿಲೇಟರ್ 2.32 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಗೆ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಅಶೋಕ್ ಉತ್ತರಿಸಿದರು.

    ಸಭೆಯಲ್ಲಿ ಡಿಸಿ ಗಿರೀಶ್, ಸಿಇಒ ಪರಮೇಶ್, ಎಸ್‍ಪಿ ಶ್ರೀನಿವಾಸ್ ಗೌಡ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಪ್ರೀತಮ್.ಜೆ.ಗೌಡ ಸೇರಿದಂತೆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ

    ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ

    ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಸಾವು-ನೋವು, ಕಷ್ಟ-ನಷ್ಟ ಸಂಭವಿಸಿತ್ತು. ಹೀಗಾಗಿ ಜಿಲ್ಲಾಡಳಿತ ಜಡಿ ಮಳೆಯ ಆರಂಭಕ್ಕೂ ಮುನ್ನವೇ ಮಳೆಗಾಲವನ್ನು ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಈಗಾಗಲೇ ಜಿಲ್ಲೆಯ ಆರೋಗ್ಯ, ಮೆಸ್ಕಾಂ, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕಳೆದ ಎರಡು ವರ್ಷದಂತೆ ಭಾರೀ ಮಳೆ ಸುರಿದರೆ ಯಾವ ರೀತಿ ವಿಪತ್ತು ನಿರ್ವಹಣೆ ಮಾಡಬೇಕೆಂದು ಸಿದ್ಧತೆ ನಡೆಸಿದೆ.

    ಜಿಲ್ಲಾಡಳಿತ ಈಗಾಗಲೇ ಪ್ರವಾಹ, ಬೆಟ್ಟಗುಡ್ಡ ಕುಸಿತ, ನೀರು ಕೊಚ್ಚಿ ಹೋಗುವ ಜಾಗ, ಲೋ ಲೈನ್ ಏರಿಯಾ, ಸಂಕಷ್ಟಕ್ಕೀಡಾಗುವ ಗ್ರಾಮಗಳು ಸೇರಿದಂತೆ ಸಮಸ್ಯೆಯಾಗುವ ಜಾಗವನ್ನು ಪಟ್ಟಿ ಮಾಡಿ, ವರುಣನ ಅಬ್ಬರವನ್ನು ಎದುರಿಸಲು ರೂಪುರೇಷೆಯನ್ನು ಸಿದ್ಧಪಡಿಸಿಕೊಂಡಿದೆ. ಅದೇ ರೀತಿ ಮಳೆ ವಿಪತ್ತನ್ನು ನಿರ್ವಹಿಸಲು ಭೂಕುಸಿತವಾಗುವ 108 ಗ್ರಾಮಗಳು ಹಾಗೂ ಪ್ರವಾಹ ಉಂಟಾಗಬಹುದಾದ 40 ಏರಿಯಾಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಜೊತೆಗೆ ಭಾರೀ ಮಳೆ ಸುರಿದರೆ ಬೆಟ್ಟ-ಗುಡ್ಡ ಕುಸಿಯುವ 58 ಪ್ರದೇಶಗಳನ್ನೂ ಪಟ್ಟಿ ಮಾಡಿದ್ದಾರೆ. ತಜ್ಞರು ಕೂಡ ಬೆಟ್ಟಗುಡ್ಡ ಕುಸಿಯೋ ಜಾಗ ಹಾಗೂ ಪ್ರವಾಹ ಬರಬಹುದಾದ ಜಾಗದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕಳೆದ ಎರಡು ವರ್ಷದ ಮಳೆಗಾಲದಲ್ಲಿ ಆದ ಸಮಸ್ಯೆ ಈ ಬಾರಿ ಆಗಬಾರದು ಎಂದು ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಜೊತೆ ಸ್ಥಳಿಯರು ಕೈಜೋಡಿಸಿದ್ದು, 463 ಸ್ವಯಂ ಸೇವಕರು, 290 ಹೋಮ್ ಗಾಡ್ರ್ಸ್, 70 ಈಜು ತಜ್ಞರು, 16 ಎನ್‍ಜಿಓ ತಂಡ, ಹೋಬಳಿ ಮಟ್ಟದಲ್ಲಿ ರಿಲೀಫ್ ಟೀಮ್, 62 ಸೇಫ್ ಸೆಂಟರ್ ಗಳು ಮಳೆ ಎದುರಿಸಲು ಸಜ್ಜಾಗಿವೆ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇರುವ ಹಿಟಾಚಿ, ಜೆಸಿಬಿ, ಟ್ರ್ಯಾಕ್ಟರ್, ಟ್ರಿಲ್ಲರ್, ಟಿಪ್ಪರ್ ಎಲ್ಲವುದರ ಮಾಹಿತಿಯನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಮಳೆ ಹೆಚ್ಚಾಗಿ ವಿಪತ್ತು ಉಂಟಾದರೆ ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣಾ ತಂಡವು ಎನ್‍ಡಿಆರ್‍ಎಫ್ ತಂಡದಿಂದ ತರಬೇತಿ ಪಡೆದಿದೆ. ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ತರಬೇತಿ ಪಡೆದ ಸ್ವಯಂ ಸೇವರು ಮಳೆ ವಿಪತ್ತನ್ನ ಎದುರಿಸಲು ರೆಡಿಯಾಗಿದ್ದಾರೆ.

    ಈ ವರ್ಷದ ಮುಂಗಾರು ಕೂಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಶಾದಾಯಕವಾಗಿ ಆರಂಭಗೊಂಡಿದ್ದು, ಜಿಲ್ಲೆಯ ಜನರಿಗೆ ಮಳೆಗಾಲದ ಮಳೆ ಬಗ್ಗೆ ಆತಂಕ ಉಂಟಾಗಿದೆ. ಆಕಾಶದಲ್ಲಿ ಮೋಡ ಕಡುಗಟ್ಟುತ್ತಿದ್ದರೆ, ಮಲೆನಾಡಿಗರ ಮನದಲ್ಲಿ ಭಯ ಹುಟ್ಟುತ್ತಿದೆ. ಕಳೆದ ಎರಡು ವರ್ಷಗಳ ಮಳೆ ಅಬ್ಬರ ಅರ್ಧ ಮಲೆನಾಡನ್ನು ಹಿಂಡಿ ಹಿಪ್ಪೆಮಾಡಿತ್ತು. ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿತ್ತು. ವರುಣನ ಅಬ್ಬರಕ್ಕೆ ಬೆಟ್ಟ-ಗುಡ್ಡಗಳೇ ಕಳಚಿ ಬಿದ್ದಿದ್ದವು. ಮನೆ-ಮಠಗಳು ಕೊಚ್ಚಿ ಹೋಗಿ, ಜೀವಗಳು ನೀರಲ್ಲಿ ತೇಲಿ ಹೋಗಿದ್ದವು. ನದಿಗಳು ಊರು, ಗದ್ದೆ, ತೋಟ ಯಾವುದನ್ನೂ ಲೆಕ್ಕಿಸದೆ ಮನಸೋ ಇಚ್ಛೆ ಹರಿದು ಪ್ರವಾಹದ ರೂಪ ತಾಳಿದ್ದನ್ನು ಮಲೆನಾಡಿಗರು ಮರೆತಿಲ್ಲ. ಹೀಗಾಗಿ ಎಚ್ಚರಿಕೆ ವಹಿಸಿದ್ದಾರೆ.

    ಈ ವರ್ಷದ ಆರಂಭದ ಮಳೆಯೂ ಪ್ರವಾಹದ ಮೂನ್ಸೂಚನೆ ನೀಡಿರುವುದು ಜಿಲ್ಲಾಡಳಿತ ಹಾಗೂ ಮಲೆನಾಡಿಗರಿಗೆ ಮತ್ತದೇ ಆತಂಕ ತಂದಿದೆ. ಈ ಬಾರಿ ಜಿಲ್ಲಾಡಳಿತ ವರುಣದೇವನಿಗೂ ಸೆಡ್ಡು ಹೊಡೆದು, ಹೈ ಅಲರ್ಟ್ ಘೋಷಿಸಿದೆ.

  • ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಮೈದಾನಕ್ಕೆ ಯಾವೆಲ್ಲ ವಸ್ತು ತರುವಂತಿಲ್ಲ?

    ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಮೈದಾನಕ್ಕೆ ಯಾವೆಲ್ಲ ವಸ್ತು ತರುವಂತಿಲ್ಲ?

    ಬೆಂಗಳೂರು: 72 ಸ್ವಾತಂತ್ರ್ಯ ದಿನಾಚರಣೆಗೆ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ.

    ಪೊಲೀಸ್ ಪಡೆ, ಹೊಂಗಾಡ್ರ್ಸ್, ಎನ್‍ಸಿಸಿ, ಶಾಲಾ ಮಕ್ಕಳು, ವಾದ್ಯಗೋಷ್ಠಿ ತಂಡ ಸೇರಿದಂತೆ ವಿವಿಧ ತಂಡಗಳು ಇಂದು ತಾಲೀಮು ನಡೆಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್, ಬೆಂಗಳೂರು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಜಂಟಿಯಾಗಿ ತಾಲೀಮು ಪರಿಶೀಲನೆ ನಡೆಸಿದರು.

    ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಮೈದಾನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಭದ್ರತೆಗಾಗಿ ಮೈದಾನದ ಸುತ್ತ 1,500 ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 9 ಡಿಸಿಪಿ, 16 ಎಸಿಪಿ, 47 ಪಿಐ, 102 ಪಿಎಸ್‍ಐ, 77 ಎಎಸ್‍ಐ, 540 ಪಿಸಿ, 75 ಮಹಿಳಾ ಸಿಬ್ಬಂದಿ, 114 ಮಪ್ತಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೈದಾನದ ಸುತ್ತ ಮುತ್ತ 56 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದರು.

    ಇಷ್ಟೇ ಅಲ್ಲದೇ 9 ಕೆಎಎಸ್‍ಆರ್‍ಪಿ ತುಕಡಿ, 5 ಸಿಎಆರ್ ತುಕಡಿ, 3 ಅಗ್ನಿಶಾಮಕ ವಾಹನ, 2 ಆಂಬುಲೆನ್ಸ್, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ-ಸ್ವಾಟ್, 1 ಆರ್ ಯಯವಿ ನಿಯೋಜನೆ, 4 ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ. ಮೈದಾನಕ್ಕೆ ಬರುವ ಸಾರ್ವಜನಿಕರು ಮೊಬೈಲ್, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್, ಶಸ್ತ್ರಾಸ್ತ್ರ, ಚಾಕು, ಚೂರಿ, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮದ್ಯದ ಬಾಟಲಿ, ಬಾವುಟ, ಪಟಾಕಿ, ಸ್ಫೋಟಕ ವಸ್ತು ತರುವಂತಿಲ್ಲ ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.

    ಆಗಸ್ಟ್ 15 ರಂದು ಹಸಿರು ಕರ್ನಾಟಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಸಾಂಕೇತಿಕವಾಗಿ ಗಿಡ ನೆಟ್ಟು ಮತ್ತು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರಿಗೆ ಗಿಡ ವಿತರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews