ಲಕ್ನೋ: ತ್ರಿವಳಿ ತಲಾಖ್ ನಿಷೇಧಿಸಿ ಎಂದು ಉತ್ತರ ಪ್ರದೇಶದ ಮೂರು ತಿಂಗಳ ಗರ್ಭಿಣಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ತ್ರಿವಳಿ ತಲಾಖ್ ನಿಷೇಧಿಸಲು ನೀವು ಮುಂದಾಗಿದ್ದಕ್ಕೆ ನಾನು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತವನ್ನು ಹಾಕಿದ್ದೇನೆ. ಹೀಗಾಗಿ ತ್ರಿವಳಿ ತಲಾಖ್ ನಿಷೇಧಿಸಿ ಎಂದು ತ್ರಿವಳಿ ತಲಾಖ್ ಸಂತ್ರಸ್ತೆ ಎರಡು ಹೆಣ್ಣುಮಕ್ಕಳ ತಾಯಿ ಆಗಿರುವ ಶಗುಫ್ತಾ ಮೋದಿಗೆ ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದಾರೆ.
ಶಹನ್ ಪುರ ನಿವಾಸಿ ಶಗುಫ್ತಾ ಮತ್ತು ಶಂಶದ್ ನಡುವೆ 5 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗು ಹೆಣ್ಣಾಗಲಿದೆ ಎಂದು ತಿಳಿದು ಪತಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ. ಆದರೆ ಶಗುಫ್ತಾ ಪತಿಯ ಮಾತನ್ನು ವಿರೋಧಿಸಿದ್ದಾರೆ. ಇದಕ್ಕೆ ಸಿಟ್ಟಾದ ಶಂಶದ್ ತನ್ನ ಸಹೋದರರ ಜೊತೆಗೂಡಿ ಮನಬಂದಂತೆ ಥಳಿಸಿದ್ದಾನೆ. ಮಗುವನ್ನು ಭ್ರೂಣದಲ್ಲಿ ಹತ್ಯೆ ಮಾಡಲು ಹೊಟ್ಟೆಗೆ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಮೂರು ಬಾರಿ ತಲಾಖ್ ಹೇಳಿ ಈಗ ಮನೆಯಿಂದ ಹೊರಗೆ ಹಾಕಿದ್ದಾನೆ.
ಈ ಸಂಬಂಧ ಶಂಶದ್ ಮತ್ತು ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 315ರ ಅಡಿ(ಭ್ರೂಣ ಹತ್ಯೆ) ಮಾರ್ಚ್ 24ರಂದು ಪ್ರಕರಣ ದಾಖಲಾಗಿದೆ.
ಜೀವಂತವಾಗಿ ಜನಿಸುವುದನ್ನು ತಡೆಯುವ ಉದ್ದೇಶ ಅಥವಾ ಹುಟ್ಟಿನ ನಂತರ ಮಗುವಿನ ಸಾವಿಗೆ ಕಾರಣವಾಗುವ ಈ ಆರೋಪ ಸಾಬೀತಾದರೆ ಐಪಿಸಿಯ ಸೆಕ್ಷನ್ 315ರ ಅನ್ವಯ 10 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.